ಬಜೆಟ್ 2019 – ಆದಾಯವನ್ನು 5 ಲಕ್ಷದೊಳಗಿಡುವ ಹೂಡಿಕೆಗಳು
Team Udayavani, Feb 18, 2019, 1:00 AM IST
ಕಳೆದ ವಾರದ ಆಂಕಣದಲ್ಲಿ 87ಎ ರಿಯಾಯಿತಿ ಮತ್ತು ಅದರ ಮಹತ್ವದ ಬಗ್ಗೆ ವಿವರಿಸಲಾಗಿದೆ. ಅದು ರೂ. 5 ಲಕ್ಷದ ಒಳಗಿನ “ಕರಾರ್ಹ ಆದಾಯ’ ಇರುವವರಿಗೆ ಮಾತ್ರ ಲಭ್ಯವಾದ ಕಾರಣ ಸ್ವಾಭಾವಿಕವಾಗಿಯೇ ಎಲ್ಲರ ಗಮನವೂ ತಮ್ಮ ಕರಾರ್ಹ ಆದಾಯವನ್ನು ರೂ. 5 ಲಕ್ಷದ ಒಳಕ್ಕೆ ಇಳಿಸುವಲ್ಲಿ ಇರುತ್ತದೆ. ಹೇಗಾದರೂ ಮಾಡಿ ಕರಾರ್ಹ ಆದಾಯವನ್ನು ರೂ. 5 ಲಕ್ಷಕ್ಕಿಂತ ಕಡಿಮೆ ಮಾಡಲು ಈ ಕೆಳಗಿನ ಹೂಡಿಕೆ/ವೆಚ್ಚಗಳನ್ನು ಬಳಸಿಕೊಳ್ಳಬಹುದು.
1. ಸ್ಟಾಂಡರ್ಡ್ ಡಿಡಕ್ಷನ್
ಸಂಬಳ ಪಡೆಯುವ ಉದ್ಯೋಗಿಗಳು ಹಾಗೂ ಪೆನ್ಶನ್ ಪಡೆಯುವ ನಿವೃತ್ತರು ತಮ್ಮ ಸಂಬಳ ಅಥವಾ ಪೆನ್ಶನ್ ಮೊತ್ತದಿಂದ ರೂ. 50,000ವನ್ನು ನೇರವಾಗಿ ಸ್ಟಾಂಡರ್ಡ್ ಡಿಡಕ್ಷನ್ ಹೆಸರಿನಲ್ಲಿ ಕಳೆಯಬಹುದಾಗಿದೆ.
2. ಗೃಹ ಸಾಲದ ಮೇಲಿನ ಬಡ್ಡಿ (ಸೆಕ್ಷನ್ 24)
ನೀವು ಗೃಹ ಸಾಲದ ಬಡ್ಡಿ ಪಾವತಿಸುವವರಾಗಿದ್ದಲ್ಲಿ ವಾರ್ಷಿಕ ರೂ. 2 ಲಕ್ಷದವರೆಗೆ ಸ್ವಂತ ವಾಸದ 2 ಮನೆಗಳ ಮೇಲೆ ಹಾಗೂ ಬಾಡಿಗೆ ನೀಡಿರುವ ಮನೆಯ ಮೇಲೆ ಪ್ರತ್ಯೇಕವಾಗಿ ಇನ್ನೂ 2 ಲಕ್ಷದ ಮಿತಿಯಲ್ಲಿ ಮರುಪಾವತಿಸಿದ ಗೃಹಸಾಲದ ಬಡ್ಡಿಯನ್ನು Income from House propertyಅಡಿಯಲ್ಲಿ ಕಳೆಯಬಹುದಾಗಿದೆ. ಮನೆಯನ್ನು ಬಾಡಿಗೆಗೆ ಕೊಟ್ಟಿದ್ದರೆ ಆ ಆದಾಯ ತೋರಿಸಿ ಹೌಸ್ ಟ್ಯಾಕ್ಸ್ ಹಾಗೂ ಮತ್ತು ಬಾಡಿಗೆಯ ಶೇ.30 ನಿರ್ವಹಣಾ ವೆಚ್ಚಗಳನ್ನೂ ಕಳೆಯಬಹುದು.
(ಇದಲ್ಲದೆ, ಸೆಕ್ಷನ್ 80ಇಇ ಅನುಸಾರ ತಮ್ಮ ಪ್ರಥಮ ಮನೆಗಾಗಿ ಹಿಂದೊಮ್ಮೆ 2016-17 ಅವಧಿಯಲ್ಲಿ ಸಾಲ ಮಾಡಿದ್ದಲ್ಲಿ ಅದರ ಬಡ್ಡಿಯ ಮರುಪಾವತಿಗಾಗಿ ವಾರ್ಷಿಕ ರೂ. 50,000 ವರೆಗೆ ಹೆಚ್ಚುವರಿ ವಿನಾಯಿತಿ ನೀಡಲಾಗುತ್ತದೆ. ಮನೆಯ ಒಟ್ಟು ವೆಚ್ಚ ರೂ. 50 ಲಕ್ಷ ಮಿತಿಯೊಳಗೆ ಹಾಗೂ ಸಾಲದ ಒಟ್ಟು ಮೊತ್ತ ರೂ. 35 ಲಕ್ಷದ ಮಿತಿಯೊಳಗೆ ಇದ್ದಿರಬೇಕು. ಈ ಸೌಲಭ್ಯ ಎಪ್ರಿಲ್ 1, 2017 ಬಳಿಕ ಮಾಡಿದ ಗೃಹ ಸಾಲಕ್ಕೆ ಲಭ್ಯವಿಲ್ಲ.)
3. ಎನ್.ಪಿ.ಎಸ್./ಅಟಲ್ ಪೆನ್ಶನ್ (ಸೆಕ್ಷನ್ 80 ಸಿಸಿಡಿ(1ಬಿ)
ಎನ್.ಪಿ.ಎಸ್ ದೇಣಿಗೆಯು ಎರಡು ಬೇರೆ ಬೇರೆ ಸೆಕ್ಷನ್‌ಗಳ ಅಡಿಯಲ್ಲಿ ಬರುತ್ತದೆ. ಮೂಲತಃ ಎನ್.ಪಿ.ಎಸ್. ದೇಣಿಗೆ ಸೆಕ್ಷನ್ 80ಸಿ ಸರಣಿಯಲ್ಲಿ ಅಡಿಯಲ್ಲಿ ಪಿಪಿಎಫ್, ಎನ್.ಎಸ್.ಸಿ, ಇ.ಎಲ….ಎಸ್.ಎಸ್, ವಿಮೆ ಇತ್ಯಾದಿ ಇತರ ಹೂಡಿಕೆಗಳ ಜೊತೆಗೆ 80 ಸಿಸಿಡಿ(1) ಅಡಿಯಲ್ಲಿ ಬರುತ್ತದೆ . ಅದನ್ನು ಆಮೇಲೆ ನೋಡೋಣ ಆದರೆ, ಇತ್ತೀಚೆಗೆ ಅದನ್ನು ಇನ್ನೊಂದು ಸೆಕ್ಷನ್ 80 ಸಿಸಿಡಿ (1ಬಿ) ಅಡಿಯಲ್ಲಿ ಹೆಚ್ಚುವರಿ ದೇಣಿಗೆಯಾಗಿ ರೂ. 50,000 ಮಿತಿಯಲ್ಲಿ ಕೂಡಾ ಸೇರಿಸಲಾಗಿದೆ. ಆ ಹೂಡಿಕೆಗೆ ಪ್ರತ್ಯೇಕವಾದ ಕರ ವಿನಾಯಿತಿ ಲಭ್ಯ. ಹಾಗಾಗಿ ಮೊತ್ತ ಮೊದಲು ಎನ್.ಪಿ.ಎಸ್. ಹೂಡಿಕೆಯನ್ನು 80 ಸಿಸಿಡಿ (1ಬಿ) ಅಡಿಯಲ್ಲಿಯೇ ತೆಗೆದುಕೊಳ್ಳೋಣ. ಉಳಿದ ಮೊತ್ತವನ್ನು ಅಗತ್ಯ ಬಂದಲ್ಲಿ 80ಸಿಸಿಡಿ(1) ಅಡಿಯಲ್ಲಿ ತೆಗೆದುಕೊಳ್ಳಬಹುದು. (ಮೂರನೆಯದಾಗಿ, ಎನ್.ಪಿ.ಎಸ್. ಖಾತೆಯಲ್ಲಿ ಕಂಪೆನಿಯು ಮಾಡಿದ ದೇಣಿಗೆಯು 80ಸಿಸಿಡಿ(2) ಸೆಕ್ಷನ್ನಿನಲ್ಲಿ ಬರುತ್ತದೆ. ಅದನ್ನು ಉದ್ಯೋಗಿಗಳು ತಮ್ಮ ಲೆಕ್ಕದಲ್ಲಿ ಮುಟ್ಟುವಂತಿಲ್ಲ. ಅದು ಪ್ರತ್ಯೇಕ.)
4. ಮೆಡಿಕಲ್ ಇನ್ಶೂರೆನ್ಸ್ (ಸೆಕ್ಷನ್ 80ಡಿ)
ಇದು ಆರೋಗ್ಯ ವಿಮೆಯ ಪ್ರೀಮಿಯಂ ಮೇಲೆ ಸಿಗುವ ತೆರಿಗೆ ರಿಯಾಯಿತಿ. ಸ್ವಂತ ಹಾಗೂ ಕುಟುಂಬದವರ ವಿಮೆಯ ಮೇಲೆ ರೂ. 25,000 ಹಾಗೂ ಹೆತ್ತವರ ವಿಮೆಯ ಮೇಲೆ ಇನ್ನೊಂದು ರೂ. 25000 ವರೆಗೆ ಕಟ್ಟಿದ ಪ್ರೀಮಿಯಂ ಮೇಲೆ ರಿಯಾಯಿತಿ ಲಭ್ಯವಿದೆ. ವಿಮಾ ಪ್ರೀಮಿಯಂಗಾಗಿ ಈ ಸೆಕ್ಷನ್ ಇದ್ದರೂ ಕೂಡಾ ವಾರ್ಷಿಕ ಸ್ವಾಸ್ಥ್ಯ ತಪಾಸಣೆಗಾಗಿ ರೂ. 5,000 ದ ಒಳಮಿತಿಯನ್ನು ಇದು ಹೊಂದಿರುತ್ತದೆ. 60 ದಾಟಿದ ಹಿರಿಯ ನಾಗರಿಕರಿಗೆ ಒಟ್ಟು ಮಿತಿ ರೂ. 50,000 ಆಗಿದೆ. 60 ವರ್ಷ ದಾಟಿದ ಹಿರಿಯ ನಾಗರಿಕರು ವಿಮಾ ಪ್ರೀಮಿಯಂ ಕಟ್ಟದೆ ಇದ್ದಲ್ಲಿ ಅವರ ಮಿತಿಯನ್ನು ಸಂಪೂರ್ಣ ವಾಗಿ ತಮ್ಮ ವೈದ್ಯಕೀಯ ವೆಚ್ಚಕ್ಕಾಗಿ ಉಪಯೋಗಿಸಬಹುದು.
5. ಅವಲಂಬಿತರ ಅಂಗವೈಕಲ್ಯ (ಸೆಕ್ಷನ್ 80 ಡಿಡಿ)
ಅವಲಂಬಿತರ ಅಂಗವೈಕಲ್ಯದ ವೈದ್ಯಕೀಯ (ನರ್ಸಿಂಗ್ ಸಹಿತ) ತರಬೇತಿ ಮತ್ತು ಪುನರ್ವಸತಿಗಾಗಿ ಅಥವಾ ಪಾಲನೆಗಾಗಿ ಕರವಿನಾಯಿತಿ ಸೌಲಭ್ಯ ನೀಡಲಾಗುತ್ತದೆ. ಶೇ.40-ಶೇ.80 ಅಂಗವೈಕಲ್ಯ ಇದ್ದರೆ ವಾರ್ಷಿಕ ಮಿತಿ ರೂ. 75,000 ಹಾಗೂ ಶೇ.80ಮೀರಿದ ತೀವ್ರವಾದ ಅಂಗವೈಕಲ್ಯವಿದ್ದರೆ ಈ ಮಿತಿ ರೂ. 1,25,000 ಆಗಿರುತ್ತದೆ.
6. ಗಂಭೀರ ಖಾಯಿಲೆಗಳ ಚಿಕಿತ್ಸೆ (ಸೆಕ್ಷನ್ 80ಡಿಡಿಬಿ)
ಸ್ವಂತ ಹಾಗೂ ಅವಲಂಬಿತರ ಕ್ಯಾನ್ಸರ್, ನ್ಯುರೋ, ಏಡ್ಸ್, ಥಲಸೇಮಿಯ, ರೀನಲ…, ಹೀಮೋಫಿಲಿಯಾ ಇತ್ಯಾದಿ ಕೆಲ ಗಂಭೀರ ಖಾಯಿಲೆಗಳ ಚಿಕಿತ್ಸೆಗಾಗಿ ಈ ಮಿತಿಯನ್ನು ಬಳಸಬಹುದು. ಮಿತಿ ರೂ. 40,000. ಆದರೆ, 60 ದಾಟಿದ ವರಿಷ್ಠರಿಗೆ ಈ ಮಿತಿ ರೂ. 1,00,000.
7. ವಿದ್ಯಾ ಸಾಲದ ಬಡ್ಡಿ (ಸೆಕ್ಷನ್ 80 ಇ)
ಸ್ವಂತ ಹಾಗೂ ಕುಟುಂಬದವರ ಉನ್ನತ ವ್ಯಾಸಂಗಕ್ಕಾಗಿ ಪಡೆದ ವಿದ್ಯಾ ಸಾಲದ ಬಡ್ಡಿ ಯಾವುದೇ ಮಿತಿಯಿಲ್ಲದೆ 8 ವರ್ಷಗಳವರೆಗೆ ತೆರಿಗೆ ವಿನಾಯಿತಿಗೆ ಅರ್ಹತೆ ಪಡೆದಿರುತ್ತದೆ. ವಿದ್ಯಾ ಸಾಲದ ಅಸಲಿನ ಮರು ಪಾವತಿಗೆ ಕರ ವಿನಾಯಿತಿ ಇಲ್ಲ.
8. ಡೊನೇಶನ್ (ಸೆಕ್ಷನ್ 80 ಜಿ)
ನಿಗದಿತ ಸಂಸ್ಥೆಗಳಿಗೆ ನೀಡಿದ ದಾನದ ಶೇ.50 ಅಥವಾ ಶೇ.100 ಸರಕಾರ ನಿಗದಿಪಡಿಸಿದಂತೆ, ಸಂಬಳದ ಶೇ.10 ಮೀರದಂತೆ; ನಿಮ್ಮ ಆದಾಯದಿಂದ ನೇರವಾಗಿ ಕಳೆಯಬಹುದಾಗಿದೆ.
9. ಬಾಡಿಗೆ ರಿಯಾಯಿತಿ (ಸೆಕ್ಷನ್ 80 ಜಿಜಿ)
ಸಂಬಳ ಮೂಲಕ ಎಚ್‌ಆರ್‌ಎ ಪಡೆಯದ ಹಾಗೂ ಸ್ವಂತ ಮನೆಯಿಲ್ಲದೆ ವಾಸ್ತವದಲ್ಲಿ ಬಾಡಿಗೆ ಮನೆಯಲ್ಲಿದ್ದು ಬಾಡಿಗೆ ನೀಡುತ್ತಿರುವವರಿಗೆ ಗರಿಷ್ಠ ವಾರ್ಷಿಕ ರೂ. 60,000 ವರೆಗೆ ವಿನಾಯಿತಿ ಸಿಗುತ್ತದೆ. ಇದಕ್ಕೆ ಕೆಲವು ನಿಯಮಗಳು ಅನ್ವಯಿಸುತ್ತದೆ.
10.ಸ್ವಂತ ಅಂಗವೈಕಲ್ಯ (ಸೆಕ್ಷನ್ 80 ಯು)
ಸ್ವಂತ ಅಂಗವೈಕಲ್ಯದ ಚಿಕಿತ್ಸೆಗಾಗಿ ರೂ.75,000 ಮತ್ತು ಗಂಭೀರ ಊನಕ್ಕೆ ರೂ. 1,25,000 ವಾರ್ಷಿಕ ರಿಯಾಯಿತಿ ಲಭ್ಯವಿದೆ.
ಮೇಲ್ಕಾಣಿಸಿದ ರಿಯಾಯಿತಿಗಳನ್ನು ಒಂದೊಂದಾಗಿ ಪರಿಗಣಿಸಬೇಕು. ಅದಾದ ಮೇಲೆ, ಪ್ರತ್ಯೇಕವಾಗಿ ಈ ಕೆಳಗಿನ ಸೆಕ್ಷನ್ 80ಸಿ ಸರಣಿಯ ಅಡಿಯಲ್ಲಿ ಮಾಡಿದ ಹೂಡಿಕೆಗಳಿಗೆ ಒಟ್ಟಾರೆ ಮೊತ್ತ ರೂ. 1.5 ಲಕ್ಷದವರೆಗೆ ಕರ ವಿನಾಯಿತಿಯನ್ನು ನೀಡಲಾಗಿದೆ. ಇವುಗಳಲ್ಲಿ ಹೂಡಿದ ಮೊತ್ತವನ್ನು ಈ ವರ್ಷದ ಆದಾಯದಿಂದ ನೇರವಾಗಿ ಕಳೆಯಬಹುದು.
11.ಸೆಕ್ಷನ್ 80 ಸಿ/ಸಿಸಿಸಿ/ಸಿಸಿಡಿ
ಸೆಕ್ಷನ್ 80ರ ಈ 3 ಉಪಸೆಕ್ಷನ್ ಅಡಿಯಲ್ಲಿ ಈ ಕೆಳಗಿನ ಹೂಡಿಕೆ/ಪಾವತಿಗಳು ಬರುತ್ತವೆ. (ಒಟ್ಟು ಮಿತಿ ರೂ. 1.5 ಲಕ್ಷ) ಎಂಪ್ಲಾಯೀಸ್ ಫ್ರಾವಿಡೆಂಟ್ ಫಂಡ್ (ಇಪಿಎಸ್) – ನಿಮ್ಮ ದೇಣಿಗೆಯಲ್ಲದೆ ಸ್ವಂತ ಇಚ್ಚೆಯಿಂದ ವಾಲಂಟರಿಯಾಗಿ ಪಿಎಫ್ಗೆ ನೀಡಿದ್ದು ಸಹಿತ: (ಕಂಪೆನಿಯ ದೇಣಿಗೆಯನ್ನು ನೀವು ನಿಮ್ಮ ಈ ಕರ ಲೆಕ್ಕಕ್ಕೆ ತೆಗೆದುಕೊಳ್ಳುವಂತಿಲ್ಲ. ಅದು ಪ್ರತ್ಯೇಕ)
– ಸ್ವಂತ, ಸೌ³ಸ್, ಮಕ್ಕಳ ಜೀವ ವಿಮೆ/ಯುಲಿಪ್‌ನ ವಾರ್ಷಿಕ ಪ್ರೀಮಿಯಂ -ವಿಮಾ ಮೊತ್ತದ ಶೇ.10 ಮಿತಿಯೊಳಗೆ, ಪ್ರತಿ ಪಾಲಿಸಿಗೆ. ಸರಿ ಸುಮಾರು ಜೀವ ವಿಮೆ ಎಲ್ಲರಲ್ಲೂ ಇದ್ದೇ ಇರುತ್ತದೆ. ಕರ ವಿನಾಯಿತಿಗೆ ಅರ್ಹವಾದ ಆ ಪ್ರೀಮಿಯಂ ಮೊತ್ತವನ್ನು ಮೊದಲು ತೆಗೆದುಕೊಳ್ಳಿ.
– ಗರಿಷ್ಟ ಎರಡು ಮಕ್ಕಳ ಪರವಾಗಿ ಪಾವತಿಸಿದ ನರ್ಸರಿ/ಶಾಲಾ ಟ್ಯೂಶನ್ ಫೀ. (ಬಿಲ್ಡಿಂಗ್ ಫಂಡ್, ಡೊನೇಶನ್ ಇತ್ಯಾದಿ ಆಗಲ್ಲ; ಟ್ಯೂಶನ್ ಫೀ ಮಾತ್ರ)
– ಗೃಹಸಾಲದ ಮರುಪಾವತಿಯಲ್ಲಿ (ಇಎಮ…ಐ) ಅಸಲು ಭಾಗ (ಬಡ್ಡಿ ಅಲ್ಲದೆ)
– ಈ ವಿತ್ತ ವರ್ಷದಲ್ಲಿ ಮನೆ ಖರೀದಿಸಿದ್ದರೆ ಆ ಮನೆ ಖರೀದಿಯ ರಿಜಿಸ್ಟ್ರೇಶನ್, ಸ್ಟಾಂಪ್‌ಡ್ನೂಟಿ ವೆಚ್ಚಗಳು.
– ಸಾರ್ವಜನಿಕವಾಗಿ ಮಾಡಿದ 15 ವರ್ಷದ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ದೇಣಿಗೆ
– ಅಂಚೆ ಕಚೇರಿಯ ಎನ್.ಎಸ್.ಸಿ. ಮತ್ತದರ ಬಡ್ಡಿಯ ಮರುಹೂಡಿಕೆ: ಈ ಯೋಜನೆಯ ಮೇಲಿನ ಬಡ್ಡಿಯನ್ನೂ ಕೂಡಾ ಮರು ಹೂಡಿಕೆ ಎಂದು ಪರಿಗಣಿಸಿ ಅದರ ಮೇಲೂ ಕರ ವಿನಾಯಿತಿ ಸೌಲಭ್ಯವಿದೆ.
– ಇಕ್ವಿಟಿ ಲಿಂಕ್ಡ್ ಸೇವಿಂಗ್ಸ್ ಸ್ಕೀಮ್ (ಇ.ಎಲ….ಎಸ್.ಎಸ್.) ನಾಮಾಂಕಿತ ಮ್ಯೂಚುವಲ್ ಫಂಡ್. ಇಲ್ಲಿ ಯಾವುದೇ ಈಕ್ವಿಟಿ ಫಂಡುಗಳು ಬರುವುದಿಲ್ಲ. ಇವುಗಳು ಇ.ಎಲ….ಎಸ್.ಎಸ್. ಅಥವಾ ಟ್ಯಾಕ್ಸ್ ಸೇವರ್ ಎಂಬ ನಿರ್ದಿಷ್ಟ ಲೇಬಲ್‌ಗಳೊಂದಿಗೆ ಬಿಡುಗಡೆಯಾಗುತ್ತವೆ.
– ಮ್ಯೂಚುವಲ್ ಫಂಡ್‌ಗಳ ಯುನಿಟ್ ಲಿಂಕ್ಡ್ ಪೆನ್ಶನ್ ಪ್ಲಾನ್‌ಗಳು (UTI-RBP, Franklin Templeton-TIPP and Reliance Retirement Fund)
– ಐದು ವರ್ಷಾವಧಿಯ ಬ್ಯಾಂಕು/ಪೋಸ್ಟಾಫೀಸಿನ ಕರನೋಂದಾಯಿತ ಎಫ್.ಡಿ: ಇಲ್ಲೂ ಕೂಡಾ 80ಸಿ ಸೆಕ್ಷನ್ ನ್ವಯ, ಕರ ಉಳಿತಾಯಕ್ಕೆ ಎನ್ನುವ ಲೇಬಲ್ ಅಗತ್ಯ. ಇವುಗಳ ಮೇಲೆ 5 ವರ್ಷಗಳ ಲಾಕ್-ಇನ್ ಇರುತ್ತದೆ.
– ಅಂಚೆ ಕಚೇರಿಯ 5 ವರ್ಷದ ಸೀನಯರ್ ಸಿಟಿಜನ್ ಸೇವಿಂಗ್ ಸ್ಕೀಂ (ಎಸ್.ಸಿ.ಎಸ್.ಎಸ್.) ನಲ್ಲಿ ಮಾಡಿದ ಹೂಡಿಕೆ.
– ಸುಕನ್ಯಾ ಸಮೃದ್ಧಿ ಯೋಜನೆ: ಕೇವಲ ಹತ್ತು ವರ್ಷ ಮೀರದ ಹೆಣ್ಮಕ್ಕಳಿಗಾಗಿ ಮಾತ್ರ ಮೀಸಲಾಗಿರುವ ಈ ಯೋಜನೆಯಲ್ಲಿ ಮಾಡಿದ ಹೂಡಿಕೆ.
– ಎಲ್ಲೆ„ಸಿ ಮತ್ತಿತರ ಜೀವ ವಿಮಾ ಕಂಪೆನಿಗಳು ನೀಡುವ ಪೆನ್ಶನ್ ಪ್ಲಾನುಗಳು (ಸೆಕ್ಷನ್ 80ಸಿಸಿಸಿ)
– ನ್ಯಾಶನಲ್ ಪೆನ್ಶನ್ ಸ್ಕೀಂ (ಎನ್.ಪಿ.ಎಸ್.)/ಅಟಲ್ ಪೆನ್ಶನ್ (ಸೆಕ್ಷನ್ 80ಸಿಸಿಡಿ): ಮೇಲ್ಕಾಣಿಸಿದಂತೆ ಈ ಯೋಜನೆಯ ದೇಣಿಗೆ 2 ಸೆಕ್ಷನ್ನುಗಳಲ್ಲಿ ಬರುತ್ತವೆ -80ಸಿಸಿಡಿ(1) ಮತ್ತು 80ಸಿಸಿಡಿ(1ಬಿ). ಮೊದಲೇ ಹೇಳಿದಂತೆ, ನಿಮಗೆ ಬೇಕಾದಂತೆ ಬೇಕಾದ ಸೆಕ್ಷನ್ನಿನಲ್ಲಿ ರಿಯಾಯಿತಿ ಪಡಕೊಳ್ಳಬಹುದು. ಇದರಲ್ಲಿ ಲಾಭವನ್ನು ಮೊತ್ತ ಮೊದಲು 80ಸಿಸಿಡಿ(1ಬಿ) ಅಡಿಯಲ್ಲಿಯೇ ತೆಗೆದುಕೊಳ್ಳುವುದು ಉತ್ತಮ. ಅದರಡಿಯಲ್ಲಿ ಬೇರೆ ಆಯ್ಕೆಗಳಿಲ್ಲ.
80ಸಿಸಿಡಿ(1) ಸೆಕ್ಷನ್ ಉಳಿದ 80ಸಿ ಸೆಕ್ಷನ್ ಜೊತೆಯಲ್ಲಿ ಬರುವ ಕಾರಣ ಅಲ್ಲಿ ಇತರ ಆಯ್ಕೆಗಳಿವೆ. ಹಾಗಾಗಿ 80ಸಿಸಿಡಿ(1ಬಿ) ಮಿತಿ ಮೀರಿದರೆ ಉಳಿದ ಮೊತ್ತವನ್ನು ಇಲ್ಲಿ 80ಸಿಸಿಡಿ(1) ಅಡಿಯಲ್ಲಿ ತೆಗೆದುಕೊಳ್ಳಬಹುದು.
12. ಎಸ್.ಬಿ/ಎಫ್.ಡಿ./ಆರ್.ಡಿ. ಬಡ್ಡಿಗೆ ಕರವಿನಾಯಿತಿ (ಸೆಕ್ಷನ್ 80 ಟಿಟಿಎ/ಟಿಟಿಬಿ):
ಸೆಕ್ಷನ್ 80ಟಿಟಿಎ ಅನುಸಾರ ಬ್ಯಾಂಕ್ ಮತ್ತು ಅಂಚೆ ಕಚೇರಿಗಳಲ್ಲಿ ಕೇವಲ ಎಸಿº ಖಾತೆಯಲ್ಲಿ ಬರುವ ಬಡ್ಡಿಗೆ ರೂ. 10,000ದ ವರೆಗೆ ಕರ ವಿನಾಯಿತಿ ಇದೆ.
ಅಲ್ಲದೆ, ಕೇವಲ ಹಿರಿಯ ನಾಗರಿಕರಿಗೆ ಮಾತ್ರವೇ (ಎಲ್ಲರಿಗೂ ಅಲ್ಲ) ಅನ್ವಯಿಸುವಂತೆ ಒಂದು ಹೊಸ ಸೆಕ್ಷನ್ 80ಟಿಟಿಬಿ ಅನುಸಾರ ರೂ. 50,000ದವರೆಗೆ ಬ್ಯಾಂಕ್ ಬಡ್ಡಿಯ ಮೇಲೆ ಕರ ವಿನಾಯಿತಿ ನೀಡಲಾಗಿದೆ. (ಹಿರಿಯ ನಾಗರಿಕರಿಗೆ 80ಟಿಟಿಎ ಅನ್ವಯವಾಗುವುದಿಲ್ಲ). ಈ ರೂ. 50,000ದಲ್ಲಿ ಬ್ಯಾಂಕು ಪೋಸ್ಟಾಫೀಸುಗಳ ಎಸ್.ಬಿ. ಬಡ್ಡಿಯ ಜೊತೆಗೆ ಎಫಿx ಮತ್ತು ಆರ್.ಡಿ.ಗಳ ಬಡ್ಡಿಯನ್ನೂ ಇದೀಗ ಸೇರಿಸಬಹುದಾಗಿದೆ. (ಹೌದು, ಪೆನ್ಶನ್ ಆದಾಯ ಇರುವ ಹಿರಿಯ ನಾಗರಿಕರು ಬಡ್ಡಿಯ ಮೇಲೆ ಈ 50,000 ಹಾಗೂ ಪೆನ್ಶನ್ ಮೇಲೆ ಸ್ಟಾಂಡರ್ಡ್ ಡಿಡಕ್ಷನ್‌ನ ಆ 50,000 – ಎರಡನ್ನೂ ಪಡೆಯಬಹುದು. ಸಂಶಯವೇ ಬೇಡ)
ಈ ರೀತಿ ವಿವಿಧ ಹೂಡಿಕೆಗಳಲ್ಲಿ ತೊಡಗಿಸಿಕೊಂಡು ನಿಮ್ಮ ಕರಾರ್ಹ ಆದಾಯ ರೂ. 5 ಲಕ್ಷದ ಒಳಗೆ ಬರುವಂತೆ ನೋಡಿಕೊಂಡು ಕರ ಮುಕ್ತ ಜೀವನ ನಡೆಸಬಹುದು.
– ಜಯದೇವ ಪ್ರಸಾದ ಮೊಳೆಯಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lokayukta: ಖಜಾನೆ ಇಲಾಖೆ ಉಪನಿರ್ದೇಶಕ, ಸಹಾಯಕ ಲೋಕಾಯುಕ್ತ ಬಲೆಗೆ
ಗಂಭೀರ್ ಅವರ ಯಾತನೆಯ ತರಬೇತಿ ಶೈಲಿ ಭಾರತಕ್ಕೆ ಹೊಂದಲ್ಲ: ಟಿಮ್ ಪೇನ್
Udupi: ಕಸ್ತೂರಿ ರಂಗನ್ ವರದಿ ಬಗ್ಗೆ ಯಾರೂ ಆತಂಕಪಡಬೇಕಿಲ್ಲ: ಕೋಟ ಶ್ರೀನಿವಾಸ ಪೂಜಾರಿ
Congress ಗ್ಯಾರಂಟಿ ಸುಳ್ಳು ಎಂದು ಸಾಬೀತು ಮಾಡಿ: ಮೋದಿಗೆ ಸಿದ್ದರಾಮಯ್ಯ ಸವಾಲು
BJP; ಈ ವಾರವೇ ವಕ್ಫ್ ಹೋರಾಟ: ಅಧಿವೇಶನಕ್ಕೂ ಬಿಸಿ…ಹೇಗಿರಲಿದೆ ಪ್ರತಿಭಟನೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.