ಬುಲ್ಸ್, ಬೇರ್ಸ್ ಮತ್ತು ವಲ್ಚರ್ಸ್: ಹೂಡಿಕೆಗೆ ಇರಲಿ ಎಚ್ಚರ
Team Udayavani, Oct 9, 2017, 12:53 PM IST
ಷೇರು ಮಾರುಕಟ್ಟೆ ಅಂದರೆ, ಬುಲ್ಸ್, ಬೇರ್ಸ್ ಮತ್ತು ವಲ್ಚರ್. “ಗೂಳಿಗಳು’ಮತ್ತು “ಕರಡಿಗಳು! ಇಲ್ಲಿ ಯಾವುದೂ ನಿಶ್ಚಿತವಲ್ಲ. ಇಲ್ಲಿ ಗೂಳಿಗಳ ಹಾಗೂ ಕರಡಿಗಳ ಕಾಳಗ. ಮಧ್ಯದಲ್ಲಿ ನಾವುಗಳು ಹಣ ಹೂಡಿ ಅದೃಷ್ಟ ಪರೀಕ್ಷೆ ಮಾಡುತ್ತೇವೆ. ಒಮ್ಮೊಮ್ಮೆ ಗೂಳಿಗಳದ್ದು ಮೇಲುಗೈ ಆದರೆ ಇನ್ನು ಒಮ್ಮೊಮ್ಮೆ ಕರಡಿಗಳದ್ದು. ಒಂದು ರೀತಿಯ ಹಾವು-ಏಣಿ ಆಟದಂತೆ ಷೇರುಗಳು ಮೇಲೆ-ಕೆಳಗೆ ಹೋಗುತ್ತವೆ.
ಏನಿದು ಬುಲ್ಸ್ ಮತ್ತು ಬೇರ್ಸ್?
ಗೂಳಿಗಳು ಮತ್ತು ಕರಡಿಗಳು ಫೈಟ್ ಮಾಡುವುದನ್ನು ಯಾವತ್ತಾದರೂ ನೋಡಿದ್ದೀರಾ? ಇಲ್ಲವೇ? ಪರವಾಗಿಲ್ಲ ಬಿಡಿ. ನಾನೂ ನೋಡಿಲ್ಲ. ಆದರೆ ಬಲ್ಲಿದರು ಹೇಳುತ್ತಾರೆ, ಗೂಳಿಗಳು ತಮ್ಮ ತಲೆಯನ್ನು ಕೆಳಗಿಂದ ಮೇಲಕ್ಕೆ ಬೀಸುತ್ತಾ ಜಗಳವಾಡುತ್ತವಾದರೆ ಕರಡಿಗಳು ಮೇಲಿನಿಂದ ಕೆಳಕ್ಕೆ ಅಪ್ಪಳಿಸುತ್ತಾ ಜಗಳಕಾಯುತ್ತವೆ. ಇದು ಅವುಗಳು ಜಗಳಾಡುವ ವೈಖರಿ ಅಥವ ಫೈಟಿಂಗ್ ಸ್ಟೈಲ್. ಅದೇ ರೀತಿ ಷೇರು ಮಾರುಕಟ್ಟೆಯಲ್ಲಿ ಕೆಲವರು ಷೇರು ಬೆಲೆಗಳನ್ನು ರೋಷಾವೇಶದಿಂದ ಕೆಳಗಿಂದ ಮೇಲಕ್ಕೆತ್ತುತ್ತಾ ಹೋಗುತ್ತಾರೆ. ಸತತವಾಗಿ ಬೃಹತøಮಾಣದಲ್ಲಿ ಒಂದು ಕಂಪೆನಿಯ ಷೇರನ್ನು ಖರೀದಿಸುತ್ತಾ ಹೋದರೆ ಆ ಷೇರಿನ ಬೆಲೆ ಗಗನಕ್ಕೇರುತ್ತದೆ. ಅವರಿಗೆ ಬುಲ್ಸ್ ಅಥವಾ ಗೂಳಿಗಳೆಂದು ಕರೆಯುತ್ತಾರೆ. ಇನ್ನು ಕೆಲವರು ಷೇರು ಬೆಲೆಗಳನ್ನು ಕೆಳಕ್ಕೆ ದಬ್ಬುತ್ತಾ ಹೋಗುತ್ತಾರೆ. ಸತತವಾಗಿ ಬೃಹತøಮಾಣದಲ್ಲಿ ಒಂದು ಕಂಪೆನಿಯ ಷೇರನ್ನು ಮಾರುತ್ತಾ ಹೋದರೆ ಆ ಷೇರಿನ ಬೆಲೆ ನೆಲಕ್ಕಚ್ಚುತ್ತದೆ. ಅವರು ಬೇರ್ಸ್ ಅಥವ ಕರಡಿಗಳು. ಒಂದು ಮಾರುಕಟ್ಟೆ ಬುಲ್ಗಳ ಹಿಡಿತದಲ್ಲಿ ಮೇಲೇರುತ್ತಾ ಹೋಗುವಾಗ ಬುಲ್ಲಿಶ್ ಮಾರ್ಕೆಟ್ ಎಂದೂ ಬೇರ್ಸ್‌ಗಳ ಹಿಡಿತದಲ್ಲಿ ಕುಸಿಯುತ್ತಾ ಹೋಗುವಾಗ ಬೇರಿಶ್ಮಾರ್ಕೆಟ್ ಎಂದೂ ಕರೆಯುತ್ತಾರೆ. ಇವೆಲ್ಲಾ ಮಾರುಕಟ್ಟೆಯ ಬೇಡಿಕೆ ಮತ್ತು ಪೂರೈಕೆಯ ತಣ್ತೀಗಳನ್ನು ಹೊಂದಿಕೊಂಡು ನಡೆಯುತ್ತವೆ.
ಇವೆರಡರ ದೈನಂದಿನ ಕಾಳಗದ ಫಲ ಷೇರು ಬೆಲೆಯಲ್ಲಿ ಪ್ರತಿಫಲಿಸುತ್ತದೆ. ಬೆಲೆಗಳು ಏರಿಳಿಯುತ್ತದೆ. ಬ್ಯಾಂಕು ಬಡ್ಡಿದರದಲ್ಲಿದ್ದಂತೆ ಇಲ್ಲಿ ಪ್ರತಿಫಲ ಗ್ಯಾರಂಟಿ ಇಲ್ಲ. ಲಾಭವೂ ಆಗಬಹುದು, ನಷ್ಟವೂ ಆಗಬಹುದು. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಎಂದರೆ, ಜಾಸ್ತಿ ರಿಸ್ಕ್, ಅನಿಶ್ಚಿತ ರಿಟರ್ನ್! ಯಾವ ಕಂಪೆನಿಯ ಷೇರು ಕೂಡ ಯಾವುದೇ ರೀತಿಯ ಭದ್ರತೆಯನ್ನು ನಿಮಗೆ ಒದಗಿಸುವುದಿಲ್ಲ. ಗ್ರಾರಂಟಿ ಪ್ರತಿಫಲದ ಪ್ರಶ್ನೆಯೇ ಇಲ್ಲ. ಎಲ್ಲವೂ ಕಂಪೆನಿಯ ಸಾಧನೆ ಮತ್ತು ಮಾರುಕಟ್ಟೆಯ ನಡೆಯನ್ನು ಹೊಂದಿ ಏರಿಳಿಯುತ್ತದೆ.
ಷೇರು ಎಂಬುದು ಒಂದು ಕಂಪೆನಿಯ ಮೂಲ ಬಂಡವಾಳ. ಸಾವಿರಾರು ಅಥವಾ ಲಕ್ಷಾಂತರ ಜನರ ದುಡ್ಡನ್ನುಒಟ್ಟಾಗಿಸಿ ಷೇರು ನಿಧಿಯನ್ನು ಸ್ಥಾಪಿಸಿ ಒಂದು ಪಬ್ಲಿಕ್ ಲಿಮಿಟೆಡ್ ಕಂಪೆನಿಯನ್ನು ಹುಟ್ಟುಹಾಕಲಾಗುತ್ತದೆ. ಕಂಪೆನಿಗೆ ಲಾಭವಾದರೆ ಆ ಲಾಭಕ್ಕೆ ಎಲ್ಲ ಷೇರುದಾರರು ಅವರವರ ಷೇರು ಸಂಖ್ಯೆಯ ಅನುಪಾತದಲ್ಲಿ ಸಮಾನ ಪಾಲುದಾರರು. ಹಾಗಾಗಿ ಪ್ರತಿಫಲವು ಕಂಪೆನಿಯ ಸಾಧನೆಯನ್ನು ಅವಲಂಬಿಸಿದೆ. ಆದರೆ ಒಂದು ವೇಳೆ ಕಂಪೆನಿಯಲ್ಲಿ ನಷ್ಟವುಂಟಾದರೆ ಅದನ್ನು ಕೂಡ ಸಮಪಾಲಾಗಿ ಹಂಚುತ್ತಾರೆಯೇ ಎಂಬ ಪ್ರಶ್ನೆಯನ್ನು ನೀವೀಗ ಕೇಳಬಹುದು. ಇಲ್ಲ. ಹಾಗಾಗುವುದಿಲ್ಲ. ಒಂದು ಲಿಮಿಟೆಡ್ ಕಂಪೆನಿಯ ನಷ್ಟವು ಅದರಲ್ಲಿ ಷೇರುದಾರರು ಹೂಡಿದ ದುಡ್ಡಿಗೆ ಮಾತ್ರ ಸೀಮಿತವಾಗಿರುತ್ತದೆ. ಅದರಿಂದ ಜಾಸ್ತಿ ನಷ್ಟವಿದ್ದಲ್ಲಿ ನಿಮ್ಮ ಮನೆ ಮಠ ಮಾರುವ ಪರಿಸ್ಥಿತಿಬರುವುದಿಲ್ಲ. ಗರಿಷ್ಠವೆಂದರೆ ನೀವು ಹಾಕಿದ ದುಡ್ಡು ಸಂಪೂರ್ಣವಾಗಿ ಕೈಬಿಡುತ್ತದೆ ಅಷ್ಟೇ. ಇದು ಒಂದು ಲಿಮಿಟೆಡ್ ಕಂಪೆನಿಯ ಹೆಚ್ಚುಗಾರಿಗೆ. ಕಂಪೆನಿ ಹೆಸರಿನೊಂದಿಗೆ ಇರುವ ಲಿಮಿಟೆಡ್ ಪದದ ಅರ್ಥ ಇದುವೇ.
ಇನ್ನು ಉಳಿದಂತೆ ಈ ಷೇರುಗಳಿಗೆ ಮಾರುಕಟ್ಟೆಯೆಂಬುದೊಂದಿದೆ. ಆ ಮಾರುಕಟ್ಟೆಯಲ್ಲಿ ಷೇರುಗಳು ಮಾರಾಟವಾಗುತ್ತವೆ. ಮಾರಾಟ ಮಾಡುವವರು ತಮ್ಮ ಷೇರನ್ನು ಈ ಮಾರುಕಟ್ಟೆಯಲ್ಲಿ ಮಾರಿ ಕೈತೊಳೆದುಕೊಳ್ಳಬಹುದು. ಕಂಪೆನಿಯು ನಿರಂತರವಾದ ಕಾರಣ ಷೇರುದಾರರು ಅದರಿಂದ ಹೊರಬರಬೇಕಾದರೆ ಇನ್ನೊಬ್ಬರಿಗೆ ಷೇರನ್ನು ಮಾರಿ ಹೊರ ಬರಬೇಕಾಗುತ್ತದೆ. ಆ ಕಾರಣಕ್ಕಾಗಿಯೇ ಒಂದು ಷೇರು ಮಾರುಕಟ್ಟೆ ಇದೆ. ಅದರಲ್ಲಿ ಷೇರುಗಳು ಏರಿಳಿಯುತ್ತವೆ. ಅದರಲ್ಲಿ ಬುಲ್ಸ್ ಮತ್ತು ಬೇರ್ಸ್‌ಗಳಿರುತ್ತವೆ. ಆದರಿಲ್ಲಿ ಬುಲ್ಸ್ ಮತ್ತು ಬೇರ್ಸ್‌ಗಳ ನಡುವೆ ಈ ವಲ್ಚರ್ಸ್ ಎಲ್ಲಿಂದ ಬಂದವು? ಅವುಗಳಿಗೂ ಮಾರುಕಟ್ಟೆಗೂ ಏನು ಸಂಬಂಧ? ಅದು ತಿಳಿಯಬೇಕಾದರೆ ಮೊದಲು ಈ ಕತೆ ಕೇಳಿ. . .
ಅಕ್ಟೋಬರ್ ತಿಂಗಳು ದೀಪಾವಳಿ ಸಮಯ ನಿಮಗೊಂದು ಎಸ್ಸೆಮ್ಮೆಸ್ ಬರುತ್ತದೆ. “ಆಪ್ತಮಿತ್ರ ಫೈನಾನ್ಶಿಯಲ್ ಸರ್ವೀಸಸ್’ ಎಂಬ ಸಂಸ್ಥೆಯಿಂದ, “ಇನ್ಫೋಸಿಸ್ ಮೇಲೆ ಹೋಗುತ್ತದೆ. ಹೂಡಿಕೆ ಮಾಡಿ’ ಎಂದು “ಹಬ್ಬದ ಸಮಯದಲ್ಲಿ ಪ್ರತಿ ವರ್ಷ ಮಾರುಕಟ್ಟೆ ಮೇಲೆಯೇ ಹೋಗುತ್ತದೆ. ಅದು ಯಾರಿಗೆ ತಾನೇ ಗೊತ್ತಿಲ್ಲ ಎಂದು ನೀವು ಅದನ್ನು ಅಸಡ್ಡೆ ಮಾಡುತ್ತೀರಿ. ಮುಂದಿನ ವಾರ ಪುನಃ ಆಪ್ತಮಿತ್ರನ ಎಸ್ಸೆಮ್ಮೆಸ್. “ಕಳೆದ ಬಾರಿ ಹೇಳಿದಂತೆ ಇನ್ಫೋಸಿಸ್ ಮೇಲೆ ಹೋಗಿದೆ. ಈ ಬಾರಿ ಬಜಾಜ್ ಆಟೋ ಖರೀದಿಸಿ, ಮೇಲೆ ಹೋಗುತ್ತದೆ’ ನಿಮಗೆ ಸ್ವಲ್ಪ ಕುತೂಹಲ ಹುಟ್ಟುತ್ತದೆ. ಆದ್ರೂ ಬಜಾಜ್ ಆಟೋ ಕೊಳ್ಳಲು ಹೋಗುವುದಿಲ್ಲ. ಪರಿಚಯ-ಅರ್ಥವಿಲ್ಲದ ಜನರ ಸಲಹೆಯನ್ನು ಹೇಗೆ ನಂಬುವುದು? ಮಾರ್ಕೆಟ್ ಕೆಳಗೆ ಹೋದರೆ ಅವರೇನು ನಮ್ಮ ನಷ್ಟ ಭರಿಸುತ್ತಾರೆಯೇ?’
ಮುಂದಿನ ವಾರ ಪುನಃ ಆಪ್ತಮಿತ್ರನ ಎಸ್ಸೆಮ್ಮೆಸ್. “ಬಜಾಜ್ ಆಟೊ ಮೇಲೆ ಹೋಯಿತು. ಈ ಬಾರಿ ಕೊಳ್ಳಿರಿ, “ಹಿಂದುಸ್ಥಾನ್ ಲೀವರ್. 100% ಗ್ಯಾರಂಟಿ.’ ನಿಮ್ಮ ಆಸಕ್ತಿ ಗರಿಗೆದರುತ್ತದೆ. ಈವಾಗ ಆಪ್ತಮಿತ್ರ ಮತ್ತು ಆತನ ಕಿವಿಮಾತಿಗೆ ಕಿವಿಗೊಡಲು ಆರಂಭಿಸುತ್ತೀರಿ.
ಹೀಗೆ ನಾಲ್ಕೈದು ವಾರಗಳಲ್ಲಿ ನಿಮಗೆ ಆಪ್ತಮಿತ್ರನ ಮೇಲೆ ಪ್ರೀತಿ ಬೆಳೆಯಲು ಆರಂಭಿಸುತ್ತದೆ. ಆತ ಹೇಳಿದ್ದು ಪ್ರತಿ ಬಾರಿಯೂ ಸರಿಯಾಗುತ್ತದೆ. ಒಮ್ಮೆಯೂ ತಪ್ಪಾಗಲಿಲ್ಲ. ಆಹಾ! ಇದು ಪೂರ್ವಜನ್ಮದ ಪುಣ್ಯವೇ ಸರಿ. ಆತನ ಜಾಹೀರಾತಿನ ಪ್ರಕಾರ 5,000 ರೂ. ಚಂದಾಕಟ್ಟಿ ಅನ್‌ಲಿಮಿಟೆಡ್ ಎಸ್ಸೆಮ್ಮೆಸ್ ಪ್ಲಾನ್‌ಗೆ ಸದಸ್ಯರೂ ಆಗುತ್ತೀರಿ. ಅಷ್ಟೇ ಅಲ್ಲ. ಷೇರು ಹುಚ್ಚಿರುವ ನಿಮ್ಮ ಬಂಧುಗಳೆಲ್ಲರನ್ನೂ “ನಾನು ಗ್ಯಾರಂಟಿ’ ಅಂತ ಎದೆ ತಟ್ಟಿಹೇಳಿ ಸದಸ್ಯರನ್ನಾಗಲು ಒತ್ತಾಯಿಸುತ್ತೀರಿ.
ಒಂದೆರಡು ವಾರಗಳಲ್ಲಿ ಆಪ್ತಮಿತ್ರನ ಸಲಹೆಗಳು ತಮ್ಮ ಜಾದೂವನ್ನು ಕಳೆದುಕೊಳ್ಳಲು ಆರಂಭಿಸುತ್ತವೆ. ಯಾಕೋ ಏನೋ ಆತನ ಎಸ್ಸೆಮ್ಮೆಸ್ ಸಲಹೆ ಮೇರೆಗೆ ಬಾಚಿ ಬಾಚಿ ಹಾಕಿದ ದುಡ್ಡೆಲ್ಲ ಗೋವಿಂದ! ಕೆಲವು ಲಕ್ಷಗಳ ನಷ್ಟ!! ಏನಾಯಿತೆಂದು ಗೊತ್ತಾಗದೆ ಮಂಡೆಬಿಸಿಯಾಗಿ, “ಮೈಹುಷಾರಿಲ್ಲ’ ಅಂತ ಸಿಕ್ ಲೀವ್ ಹಾಕುತ್ತೀರಿ. ನಿಮ್ಮ ಶಿಫಾರಸಿಗೆ ಸದಸ್ಯರಾಗಿ ಒಂದೆರಡು ಲಕ್ಷ ಕೈತೊಳೆದು ಕೊಂಡ ನಿಮ್ಮ ಮಾಜಿ-ಸ್ನೇಹಿತರು ನಿಮ್ಮನ್ನು ಹುಡುಕುತ್ತಿರುವಷ್ಟರಲ್ಲಿ ನೀವು “ಏನೋ ಎದೆ ನೋವು’ ಎಂದು ಆಸ್ಪತ್ರೆಗಳನ್ನೂ, ಲ್ಯಾಬ್‌ಗಳನ್ನೂ ಎಡತಾಕುತ್ತೀರಿ.
ಈ ಕತೆಯಲ್ಲಿ ನಡೆದದ್ದಾದರೂ ಏನು?
ನಡೆದದ್ದು ಇದು: “ಆಪ್ತಮಿತ್ರ’ ಎಂಬ ಹೆಸರಿಟ್ಟುಕೊಂಡ ಒಬ್ಬ ಮಹಾಧೂರ್ತ ಸುಲಭ ಮಾರ್ಗದಲ್ಲಿ ದುಡ್ಡು ಮಾಡುವ ಒಂದು ಭಾರೀ ಯೋಜನೆಗೆ ಸ್ಕೆಚ್ ಹಾಕುತ್ತಾನೆ. ಮೊತ್ತಮೊದಲು, ಷೇರು ಹುಚ್ಚು ಸಕತ್ತಾಗಿಯೇ ಹಿಡಿದಿರುವ ಒಂದು 10000 ಮಂದಿಯ ಮೊಬೈಲ್ ನಂಬರ್‌ಗಳನ್ನು ಸಂಗ್ರಹಿಸುತ್ತಾನೆ. ಅದರಲ್ಲಿ 5000 ಮಂದಿಗೆ, ಇನ್ಫೋಸಿಸ್ ಮೇಲೆ ಹೋಗುತ್ತದೆ ಎಂದೂ, ಇನ್ನೈದು ಸಾವಿರ ಮಂದಿಗೆ ಇನ್ಫೋಸಿಸ್ ಕೆಳಗೆ ಹೋಗುತ್ತದೆ ಎಂದೂ ಎಸ್ಸೆಮ್ಮೆಸ್ ಮಾಡುತ್ತಾನೆ. ಆ ವಾರ ಇನ್ಫೋಸಿಸ್ ಮೆಲೆಯೋ ಕೆಳಗೋ ಒಂದು ಕಡೆ ಖಂಡಿತ ಹೋಗುತ್ತದೆ. ಆಮೇಲೆ, ಯಾವ ಗುಂಪಿಗೆ ಕಳಿಸಿದ ಎಸ್ಸೆಮ್ಮೆಸ್ ಸತ್ಯವಾಗಿದೆ ಎಂದು ನೋಡಿಕೊಂಡು, ಆ ಗುಂಪಿನ 2,500 ಜನರಿಗೆ ಬಜಾಜ್ ಆಟೋ ಮೇಲೆಹೋಗುತ್ತದೆ ಎಂದೂ ಇನ್ನುಳಿದ 2,500 ಜನರಿಗೆ ಬಜಾಜ್ ಆಟೋ ಕೆಳಗೆ ಹೋಗುತ್ತದೆ ಎಂದೂ ಮೆಸೇಜು ಮಾಡುತ್ತಾನೆ. ವಾರ ಕಳೆದ ಬಳಿಕ, ಸತ್ಯವಾದಂತಹ ಮೆಸೇಜು ಹೋದ 2,500 ಜನರಲ್ಲಿ 1,250 ಮಂದಿಗೆ ಹಿಂದುಸ್ತಾನ್ ಲೀವರ್ ಮೇಲೆ ಎಂದೂ ಇನ್ನುಳಿದ 1,250 ಮಂದಿಗೆ ಕೆಳಗೆ ಎಂದೂ.. ಗೊತ್ತಾಯ್ತಲ್ಲ? ಇನ್ನೂಹೆಚ್ಚು ಹೇಳುವ ಅಗತ್ಯವೇ ಇಲ್ಲ!
ಇದು ನಸೀಮ್ ನಿಕೊಲಸ್ ತಲೆಬ್ ಬರೆದ ಫೂಲ್ಡ್ ಬೈ ರಾಂಡಮ್ನೆಸ್ ಪುಸ್ತಕದಲ್ಲಿ ಬರುವ ಒಂದು ಉದಾಹರಣೆ. ತಲೆಬ್ ಓರ್ವ ಮ್ಯಾನೇಜರ್ ಆಗಿದ್ದು ಅಮೆರಿಕ ಷೇರು ಪೇಟೆಯ ಒಳಹೊರಗನ್ನು ಚೆನ್ನಾಗಿ ಬಲ್ಲವನಾಗಿದ್ದ. ಈವರೆಗೆ 3 ಪುಸ್ತಕಗಳನ್ನುಬರೆದ ಆತನ ಸಿದ್ಧಾಂತ ಏನೆಂದರೆ. ಜೀವನದಲ್ಲಿ ಯಾವುದಕ್ಕೂ ಒಂದು ಸಿದ್ಧ ಕಾರ್ಯವೈಖರಿ ಅಥವಾ ಪ್ಯಾಟರ್ನ್ ಎಂಬುದು ಇರುವುದಿಲ್ಲ. ಎಲ್ಲವೂ ತನ್ನಷ್ಟಕ್ಕೇ ಆಕಸ್ಮಿಕವಾಗಿ ಆಗುತ್ತಿರುತ್ತದೆ. ನೀವು ಸಾವಿರಾರು ಬಿಳಿಹಂಸಗಳನ್ನೇ ನೋಡಿದ್ದರೂ ಮುಂದೆ ನೀವು ನೋಡಲಿರುವ ಹಂಸ ಬಿಳಿಯೇ ಆಗಿರಬೇಕೆಂದೇನೂ ಇಲ್ಲ. ಅದು ಕರಿಯೂ ಆಗಿರಬಹುದು. 17ನೇ ಶತಮಾನದಲ್ಲಿ ಬಿಳಿ ಹಂಸ ಮಾತ್ರ ನೋಡಿ ಗೊತ್ತಿದ್ದ ಯುರೋಪಿಯನ್ನರು ಆಸ್ಟ್ರೇಲಿಯ ಖಂಡಕ್ಕೆ ಬಂದಾಗ ಕರಿಹಂಸಗಳನ್ನು ಕಂಡು ದಂಗಾಗಿದ್ದರು. ಅದರಿಂದಾಗಿಯೇ ಕರಿ ಹಂಸ ಸಿದ್ಧಾಂತ ಹುಟ್ಟಿತು. ಅಂದರೆ, ಲಾಗಾಯ್ತಿನಿಂದ ಕಂಡು ಬರುವಂತಹ ಒಂದು ಕ್ರಮಬದ್ಧವಾದ ಕಾರ್ಯವೈಖರಿ, ಇನ್ನು ಮುಂದೆಯೂ ಹಾಗೆಯೇ ನಡೆದುಕೊಂಡು ಹೋಗುತ್ತದೆ ಎಂದು ಹೇಳುವಂತಿಲ್ಲ.
ಒಂದು ಬದಿಯಲ್ಲಿ ಈ ರೀತಿ ಯಾವುದೇ ಪಾಟರ್ನ್ಸ್ ಇಲ್ಲದೆ, ಇದ್ದಕ್ಕಿದ್ದಂತೆ, ರ್‍ಯಾಂಡಮ್ ಆಗಿ ನಡೆಯುವ ವಿಶ್ವ ಇದ್ದರೆ, ಇನ್ನೊಂದೆಡೆ ಎಲ್ಲದರಲ್ಲೂ ಒಂದು ಪಾಟರ್ನ್ ಅನ್ನು ಕಂಡುಕೊಂಡು ಆ ಮೂಲಕ ಮುಂದೆ ಏನಾಗುತ್ತದೆ ಎಂದು ಲೆಕ್ಕಹಾಕಲು ಪ್ರಯತ್ನಿಸುವ ಮಾನವನಿದ್ದಾನೆ. ಅಲ್ಲದೆ ಇವೆರಡರ ನಡುವೆ ಆಪ್ತಮಿತ್ರನಂತಹ ಸಮಯ ಸಾಧಕ ವಲ್ಚರ್ಸ್ ಇದ್ದಾರೆ. ನಮ್ಮ ಷೇರು ಮಾರುಕಟ್ಟೆ ಎಂಬ ಕ್ಯಾಸಿನೋ ಇದಕ್ಕೆ ಹೊರತೇನೂ ಅಲ್ಲ! ಅದಕ್ಕೇ ನಾನು ಹೇಳಿದ್ದು ಬುಲ್ಸ್, ಬೇರ್ಸ್ ಮತ್ತು ವಲ್ಚರ್ಸ್ ಎಂದು. ಬಿವೇರ್!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.