ಜುಲೈ 31ರೊಳಗೆ ಪಾನ್-ಆಧಾರ್ ವಿವಾಹ ಕಡ್ಡಾಯ
Team Udayavani, Apr 17, 2017, 10:54 AM IST
ಒಬ್ಬ ವ್ಯಕ್ತಿ ಒಂದರಿಂದ ಜಾಸ್ತಿ ಪಾನ್‌ಕಾರ್ಡನ್ನು ಪಡೆದಿದ್ದು, ಬೇರೆ ಬೇರೆ ನಂಬರುಗಳನ್ನು ಸಂದರ್ಭಾನುಸಾರ ಬೇರೆ ಬೇರೆ ವ್ಯವಹಾರಗಳಿಗೆ ನಮೂದಿಸಿ ಕರ ಕಳ್ಳತನ ಮಾಡುವುದನ್ನು ತಡೆಗಟ್ಟುವುದು ಹೇಗೆ? ಇದನ್ನು ತಡೆಯಲಿ ಕ್ಕಾಗಿಯೇ ಆಧಾರ್ ಮತ್ತು ಪಾನ್ ಲಿಂಕ್ ಮಾಡಿಕೊಳ್ಳುವುದನ್ನು ಸರಕಾರ ಕಡ್ಡಾಯ ಮಾಡುತ್ತಿದೆ.
ತೆರಿಗೆ ಪಾವತಿಯಲ್ಲಿ ಯಾವುದೇ ಕಳ್ಳತನವಿಲ್ಲದೆ ಕಟ್ಟಬೇಕಾದ ತೆರಿಗೆಯನ್ನು ಜನಸಾಮಾನ್ಯರಿಂದ ಕಟ್ಟಿಸಿಕೊಳ್ಳುವ ನಿಟ್ಟಿನಲ್ಲಿ ಸರಕಾರವು ಕಳೆದ ಕೆಲವು ವರ್ಷಗಳಿಂದ ಬಹಳಷ್ಟು ಕೆಲಸ ಮಾಡುತ್ತಿದೆ. ಮುಂದೆ ಹೋದಂತೆ ಅದು ಇನ್ನಷ್ಟು ಕಠಿಣವಾಗುತ್ತಾ ಹೋಗುವುದರಲ್ಲಿ ಸಂಶಯವಿಲ್ಲ.
ಈ ನಿಟ್ಟಿನಲ್ಲಿ ಪಾನ್ ಕಾರ್ಡ್ ಕಡ್ಡಾಯವಾಗಿ ಜಮಾನವೇ ಆಗಿದೆ. ಕರ ಕಟ್ಟುವವರು, ರಿಟರ್ನ್ ಫೈಲಿಂಗ್ ಮಾಡುವವರು ಹಾಗೂ ನಿರ್ದಿಷ್ಟ ಮೊತ್ತಕ್ಕಿಂತ ಜಾಸ್ತಿ ವ್ಯವಹಾರ ನಡೆಸುವವರು ತಮ್ಮ ಪಾನ್ ನಂಬರನ್ನು ಕಡ್ಡಾಯವಾಗಿ ನಮೂದಿಸಬೇಕು ಎನ್ನುವುದು ಈಗ ಹಳೆಯ ಮಾತು. ಪಾನ್ ನಂಬರ್ ಮೂಲಕ ಓರ್ವ ವ್ಯಕ್ತಿಯ ಎಲ್ಲ ವ್ಯವಹಾರಗಳನ್ನು ಒಂದೆಡೆ ನೋಡಬಹುದಾಗಿದ್ದು, ಕರ ಪಾವತಿ ಸಂಪೂರ್ಣವಾಗಿ ನಡೆದಿದೆಯೇ ಇಲ್ಲವೇ ಎನ್ನುವುದನ್ನು ಪರಿಶೀಲಿಸಲು ಕರ ಇಲಾಖೆಗೆ ಅನುಕೂಲವಾಗುತ್ತದೆ.
ಆದರೆ ಒಂದೇ ವ್ಯಕ್ತಿ ಒಂದರಿಂದ ಜಾಸ್ತಿ ಪಾನ್ ಕಾರ್ಡನ್ನು ಪಡೆದಿದ್ದು, ಬೇರೆ ಬೇರೆ ನಂಬರುಗಳನ್ನು ಸಂದರ್ಭಾನುಸಾರ ಬೇರೆ ಬೇರೆ ವ್ಯವಹಾರಗಳಿಗೆ ನಮೂದಿಸಿ ಕರ ಕಳ್ಳತನ ಮಾಡುವುದನ್ನು ತಡೆಗಟ್ಟುವುದು ಹೇಗೆ? ಒಂದು ವ್ಯಕ್ತಿ ಒಂದೇ ಪಾನ್ ಕಾರ್ಡ್ ಹೊಂದಿರಬೇಕು ಎನ್ನುವ ಕಾನೂನು ಇದೆಯಾದರೂ ಒಬ್ಟಾತ ಹಲವಾರು ಕಾರ್ಡುಗಳನ್ನು ಹೊಂದಿರುವುದನ್ನು ತಡೆಗಟ್ಟುವುದು ಹೇಗೆ? ಉದಾಹರಣೆಗಾಗಿ, JAYADEVA PRASAD, JAYADEVA PRASAD M, JAYADEV PRASAD MOLEYAR, JP MOLEYAR, JAYADEVA PM ಇತ್ಯಾದಿ ಅಲ್ಪಸ್ವಲ್ಪ ವ್ಯತ್ಯಾಸಗಳುಳ್ಳ ಹೆಸರುಗಳಲ್ಲಿ ಪಾನ್ ಕಾರ್ಡ್ ಮಾಡಿಸಿಕೊಳ್ಳುವುದು ಕಷ್ಟಕರವೇನಲ್ಲ. ಸಾಮಾನ್ಯವಾಗಿ ನಮ್ಮೆಲ್ಲರಿಗೂ ಒಂದೊಂದು ದಾಖಲೆಯಲ್ಲಿ ಒಂದೊಂದು ರೀತಿಯಲ್ಲಿ ಹೆಸರು ದಾಖಲಾಗಿರುತ್ತದೆ. ಅವನ್ನು ಗುರುತು-ವಿಳಾಸ ಆಧಾರವಾಗಿಸಿ ಹಲವು ಪಾನ್ ಕಾರ್ಡುಗಳನ್ನು ಸುಲಭವಾಗಿ ಮಾಡಿಸಿಕೊಳ್ಳಬಹುದು. ಅದು ಬಿಟ್ಟು ಮೋಸದ ಉದ್ದೇಶ ಉಳ್ಳವರಿಗೆ ಸಂಪೂರ್ಣ ಬೇರೆಯೇ ಹೆಸರಿನಲ್ಲೂ ಕಾರ್ಡ್ ಮಾಡಿಸಿಕೊಳ್ಳುವುದು ಅಸಾಧ್ಯವೇನಲ್ಲ. ಹೀಗೆ ಒಂದೇ ವ್ಯಕ್ತಿ ಒಂದರಿಂದ ಜಾಸ್ತಿ ಪಾನ್ ಕಾರ್ಡ್ ಹೊಂದಿದ್ದು, ಆದಾಯವನ್ನು ವಿವಿಧ ಹೆಸರುಗಳಲ್ಲಿ ಹಂಚಿ ಕರ ಇಲಾಖೆಯ ಕಣ್ಣಿಗೆ ಮಣ್ಣು ಹಾಕುವುದನ್ನು ತಡೆಯುವುದು ಹೇಗೆ ಎನ್ನುವುದು ನಮ್ಮ ಅತ್ಯಂತ ಲೇಟೆÓr… ತಾಜಾ ಖಬರ್.
ಆಧಾರ್ ಲಿಂಕ್
UIDAI ವತಿಯಿಂದ ನೀಡಲಾಗುವ ಆಧಾರ್ ಕಾರ್ಡ್ ಮಾತ್ರ ಒಬ್ಬ ವ್ಯಕ್ತಿಗೆ ಒಂದೇ ಒಂದು ಸಿಗಬಲ್ಲದು. ಒಬ್ಬ ವ್ಯಕ್ತಿಗೆ ಒಂದರಿಂದ ಜಾಸ್ತಿ ಆಧಾರ ಕಾರ್ಡ್ ಸಿಗುವುದು ತಾಂತ್ರಿಕವಾಗಿ ಅಸಾಧ್ಯ. ಇದಕ್ಕೆ ಕಾರಣವೆಂದರೆ ಆಧಾರ್ ಕಾರ್ಡ್ ಮಾಡಿಸಿಕೊಳ್ಳುವಾಗ ಅರ್ಜಿದಾರನ ಹತ್ತೂ ಬೆರಳುಗಳ ಅಚ್ಚು ಹಾಗೂ ಕಣ್ಣುಗಳ ಅಕ್ಷಿಪಟಲಗಳ ಭಾವ ಚಿತ್ರವನ್ನು ಸೆರೆ ಹಿಡಿಯಲಾಗುತ್ತದೆ. ವಿಜ್ಞಾನದ ಪ್ರಕಾರ ಯಾವುದೇ ವ್ಯಕ್ತಿಯ ಬೆರಳಚ್ಚುಗಳು ಹಾಗೂ ಅಕ್ಷಿಪಟಲಗಳು ಇನ್ನೊಬ್ಬ ವ್ಯಕ್ತಿಯೊಂದಿಗೆ ಹೋಲುವುದು ಅಸಾಧ್ಯ. ಹಾಗಾಗಿ ಒಬ್ಬ ವ್ಯಕ್ತಿ ಒಂದೇ ಒಂದು ಆಧಾರ್ ಕಾರ್ಡ್ ಮಾತ್ರ ಹೊಂದುವುದು ಸಾಧ್ಯ. ಆದಕ್ಕಾಗಿಯೇ ಆಧಾರ್ ಕಾರ್ಡನ್ನು ಯುನೀಕ್ ಅಥವಾ ವಿಶಿಷ್ಟ ಗುರುತಿನ ಚೀಟಿ ಎಂದು ಕರೆಯುತ್ತಾರೆ. ಇಂತಹ ಆಧಾರ್ ಕಾರ್ಡ್ ಇಂದು ಸಾಮಾನ್ಯವಾಗಿ ಎಲ್ಲ ರೀತಿಯ ಸೇವೆಗಳಲ್ಲೂ ಕಡ್ಡಾಯವಾಗಿ ಉಪಯೋಗಿಸಲ್ಪಡುತ್ತದೆ ಎನ್ನುವುದು ಎಲ್ಲರಿಗೂ ಅರಿವಾಗಿರುವ ವಿಚಾರ. ಇದೀಗ ಪಾನ್ ಕಾರ್ಡನ್ನು ಆಧಾರ್ ಜತೆ ಜೋಡಣೆ ಮಾಡುವುದರಿಂದ ಒಬ್ಬ ವ್ಯಕ್ತಿ ಒಂದೇ ಪಾನ್ ನಂಬರ್ ಹೊಂದಿರುವಂತೆ ನೋಡಿಕೊಳ್ಳುವುದು ಸಾಧ್ಯವಾಗುತ್ತಿದೆ.
ಇದೇ ಜುಲೈ 31ರ ಒಳಗಾಗಿ ಪಾನ್‌ಕಾರ್ಡ್ ಹೊಂದಿರುವ ಪ್ರತಿಯೊಬ್ಬ ವ್ಯಕ್ತಿಯೂ ಅದನ್ನು ತನ್ನ ಆಧಾರ್ ನಂಬರಿಗೆ ಲಿಂಕ್ ಮಾಡುವುದು ಅಥವಾ ಜೋಡಿಸಿಕೊಳ್ಳುವುದು ಕಡ್ಡಾಯ. ಇದು ವಿತ್ತ ಮಂತ್ರಿಗಳು 2017ರ ಬಜೆಟ್ಟಿನಲ್ಲಿ ಘೋಷಣೆ ಮಾಡಿದ ಹೊಸ ಪ್ರಸ್ತಾಪ. ಆ ದಿನಾಂಕದೊಳಗೆ ಈ ಜೋಡಣೆ ಕಾರ್ಯ ನಡಸದೇ ಇದ್ದಲ್ಲಿ ನಿಮ್ಮ ಪಾನ್ ಕಾರ್ಡಿಗೆ ಬೆಲೆ ಇರುವುದಿಲ್ಲ. ಅದು ಇದ್ದರೂ ಇಲ್ಲದಿದ್ದಂತೆ. ಒಂದು ರೀತಿಯ “ಇನ್ವಾಲಿಡ್’ ಅಥವಾ ಅಸಿಂಧು ಸ್ಥಿತಿಯಲ್ಲಿ ಇರುತ್ತದೆ. ಪಾನ್ ಕಾರ್ಡ್ ಇಲ್ಲದವರಿಗೆ ಅನ್ವಯವಾಗುವ ಎಲ್ಲ ಕಾನೂನುಗಳೂ ನಿಮಗೆ ಅನ್ವಯವಾಗತೊಡಗುತ್ತದೆ. ಅಂದರೆ ಪಾನ್ ನಂಬರ್ ಬೇಡುವ ವ್ಯವಹಾರಗಳಾವುದನ್ನೂ ನೀವು ಮಾಡಲಾರಿರಿ. ಬ್ಯಾಂಕಿನವರು 10% ಟಿಡಿಎಸ್ ಕಡಿತ ಮಾಡುವಲ್ಲಿ 20% ಕಡಿತ ಮಾಡುವರು ಇತ್ಯಾದಿ. ಈ ಕೊನೆಯ ದಿನಾಂಕವು ಬಳಿಕ ಮುಂದೂಡಲ್ಪಡಬಹುದು ಎನ್ನುವುದು ಬೇರೆ ವಿಚಾರ. ಆದರೆ ಸದ್ಯದ ಸೂಚನೆಯ ಪ್ರಕಾರ ನೀವು-ನಾವುಗಳೆಲ್ಲರೂ ಜುಲೈ 31ರ ಒಳಗಾಗಿ ನಮ್ಮ ಪಾನ್ ನಂಬರ್ ಮತ್ತು ಆಧಾರ್ ಕಾರ್ಡಿಗೆ ವಿವಾಹ ಮಾಡಿಬಿಡಲೇಬೇಕು.
ಜೋಡಣೆ ಹೇಗೆ?
ಮೊತ್ತಮೊದಲನೆಯದಾಗಿ ನೀವು ನಿಮ್ಮ ಆದಾಯ ತೆರಿಗೆ ಜಾಲತಾಣದಲ್ಲಿರುವ ನಿಮ್ಮ ವೈಯಕ್ತಿಕ ಖಾತೆಗೆ ಹೋಗಬೇಕು. ಇದು ತೆರಿಗೆ ಇಲಾಖೆಯ www.incometaxindiaefiling.gov.in ಎಂಬ ಜಾಲತಾಣದಲ್ಲಿ ಇರುತ್ತದೆ. ಆನ್-ಲೈನ್ ರಿಟರ್ನ್ ಫೈಲಿಂಗ್ ಮಾಡುವವರದ್ದು ಖಾತೆ ಈಗಾಗಲೇ ತೆರೆದಿರುತ್ತದೆ, ಖಾತೆಯನ್ನು ನಿಮ್ಮ ಪಾನ್ ನಂಬರ್, ಜನ್ಮ ದಿನಾಂಕ ಹಾಗೂ ಪಾಸ್ ವರ್ಡ್ ನಮೂದಿಸಿ ಲಾಗ್-ಇನ್ ಆಗಬೇಕು (ಖಾತೆ ಇಲ್ಲದವರು ಮೊತ್ತಮೊದಲು ರಿಜಿಸ್ಟರ್ ಆಗಿ ಖಾತೆ ತೆರೆಸಿಕೊಳ್ಳಬೇಕು).
ಖಾತೆಯನ್ನು ಪ್ರವೇಶಿಸುತ್ತಿದ್ದಂತೆಯೇ ಎದುರು ಕಾಣಿಸುವ ಪ್ರೊಫೈಲ್ ಸೆಟ್ಟಿಂಗ… ಗುಂಡಿಯನ್ನು ಒತ್ತಿದಾಗ ಒಂದು ಮೆನು ಬರುತ್ತದೆ. ಆ ಮೆನುವಿನಲ್ಲಿ ಕಟ್ಟಕಡೆಯ ಆಯ್ಕೆ “ಲಿಂಕ್ ಆಧಾರ್’ ಎಂಬುದು. ಅದನ್ನು ಕ್ಲಿಕ್ ಮಾಡಿದಾಗ ಇನ್ನೊಂದು ಕಿಟಕಿ ತೆರೆದುಕೊಳ್ಳುತ್ತದೆ. ಈ ಭಾಗದಲ್ಲಿ ನಿಮ್ಮ ಹೆಸರು, ಜನ್ಮ ದಿನಾಂಕ ಹಾಗೂ ಲಿಂಗದ ವಿವರ ಸ್ವಯಂ ಕಾಣಿಸಿಕೊಳ್ಳುತ್ತದೆ. ಅವುಗಳ ಕೆಳಗೆ ಬಿಟ್ಟ ಸ್ಥಳಗಳಲ್ಲಿ ನಿಮ್ಮ ಆಧಾರ್ ನಂಬರ್ ಹಾಗೂ ಅಲ್ಲೇ ಕಾಣಿಸುವ ಕಾಪಾ ಕೋಡ್‌ಗಳನ್ನು ತುಂಬಬೇಕು. ಅವುಗಳನ್ನು ತುಂಬಿ “ಲಿಂಕ್ ಆಧಾರ್’ ಎನ್ನುವ ಗುಂಡಿಯನ್ನು ಕ್ಲಿಕ್ ಮಾಡಿದರೆ ನಿಮ್ಮ ಕೆಲಸ ಮುಗಿದಂತೆಯೇ. ಅತಿ ಸುಲಭದಲ್ಲಿ ನಿಮ್ಮ ಪಾನ್ ಕಾರ್ಡ್ ಮತ್ತು ಆಧಾರ್ ನಂಬರ್ ಲಿಂಕ್ ಆಗಿಬಿಡುತ್ತದೆ. ಹೀಗೆ ಅತಿ ಸರಳವಾಗಿ ಈ ಒಂದು ವಿವಾಹ ಸಮಾರಂಭವನ್ನು ಆದಷ್ಟು ಬೇಗನೆ ನೆರವೇರಿಸಿಬಿಡಿ. ಶುಭಸ್ಯ ಶೀಘ್ರಂ! happy married life!
ಸಮಸ್ಯೆಗಳು
ಇದೊಂದು ರೀತಿಯ ಅರೇಂಜ್ ಮ್ಯಾರೇಜ್; ಇದರಲ್ಲಿ ಸಮಸ್ಯೆಗಳು ಇಲ್ಲದಿಲ್ಲ. ಆಧಾರ ಮತ್ತು ಪಾನ್ ಲಿಂಕ್ ಮಾಡಲು ಹೊರಟ ಬಹುತೇಕ ಮಂದಿಗೆ ಎರಡು ಮೆಸೇಜ್ ಬರುತ್ತವೆ. ಅವು ಲಿಂಕ್ ಆಗುವುದಿಲ್ಲ. ಇದಕ್ಕೆ ಮುಖ್ಯ ಕಾರಣವೆಂದರೆ ನಿಮ್ಮ ಹೆಸರು, ಜನ್ಮ ದಿನಾಂಕ ಅಥವಾ ಲಿಂಗ ಈ ಎರಡು ಕಾರ್ಡುಗಳಲ್ಲಿ ಬೇರೆ ಬೇರೆಯಾಗಿರುವುದು. ಹೆಚ್ಚಾಗಿ ಇದು ಹೆಸರಿನದ್ದೇ ಹಾವಳಿ. ಹಲವರಿಗೆ ಇನಿಶಿಯಲ್ ಒಂದೆಡೆಯಾದರೆ ಪೂರ್ಣ ರೂಪ ಇನ್ನೊಂದೆಡೆ. ಸರ್ ನೇಮ್ ಮತ್ತು ಫ… ನೇಮ್ ಅದಲು ಬದಲಾಗಿರುವುದು ಇತ್ಯಾದಿ ಸಮಸ್ಯೆಗಳು ಸರ್ವೇ ಸಾಮಾನ್ಯ. ಒಂದೆಡೆ JAYADEVA PRASAD M ಎಂದಿದ್ದರೆ ಇನ್ನೊಂದೆಡೆ JAYADEVA PRASAD MOLEYAR ಎಂದಿದ್ದರೆ ಈ ಲಿಂಕ್ ಅಸಾಧ್ಯ. ಹಲವಾರು ಜನರು ಇಂತಹ ಸಮಸ್ಯೆಯ ಸುಳಿಯಲ್ಲಿ ಸಿಕ್ಕು ಹಾಕಿಕೊಂಡಿದ್ದಾರೆ.
ಪರಿಹಾರ
ಇದಕ್ಕೆ ಇರುವ ಒಂದು ಪರಿಹಾರವೇನೆಂದರೆ ನೀವು ಆಧಾರ್ ಕಾರ್ಡಿನಲ್ಲಿ ನಿಮ್ಮ ಹೆಸರನ್ನು ಪಾನ್ ಕಾರ್ಡಿನಲ್ಲಿ ಇದ್ದಂತೆಯೇ ಬದಲಾಯಿಸಿಕೊಳ್ಳುವುದು. ಆ ಬಳಿಕ ಅವೆರಡು ಕಾರ್ಡುಗಳು ಸುಲಭದಲ್ಲಿ ಲಿಂಕ್ ಆಗುತ್ತವೆ.
ಆಧಾರ್ ಕಾರ್ಡಿನಲ್ಲಿ ಹೆಸರು ಬದಲಾಯಿಸಿಕೊಳ್ಳಲು ಆಧಾರ್ ಕಾರ್ಡಿನ ಸೇವಾ ಕೇಂದ್ರಕ್ಕೆ ಭೇಟಿ ನೀಡಬೇಕು ಅಥವಾ ಅದರ ಜಾಲತಾಣವಾದ www.uidai.gov.in ಎಂಬಲ್ಲಿಗೆ ಹೋಗಬೇಕು. ಆಧಾರ್ ಜಾಲತಾಣದ ಮುಖಪುಟದಲ್ಲಿಯೇ ‘pdate aadhaar details’ ಎಂಬ ಗುಂಡಿ ಇದೆ. ಅದನ್ನು ಒತ್ತಿದರೆ ಬಾಕಿ ಹೆಜ್ಜೆಗಳು ಸ್ವಯಂ ತೆರೆದುಕೊಳ್ಳುತ್ತವೆ.
ನಿಮ್ಮ ಆಧಾರ ಸಂಖ್ಯೆ ನಮೂದಿಸಿ send OTP ಗುಂಡಿ ಒತ್ತಿದರೆ ನಿಮ್ಮ ರಿಜಿಸ್ಟರ್ಡ್ ಮೊಬೈಲ್ ಫೋನಿಗೆ ಒಂದು One Time Password ಬರುತ್ತದೆ. ಅದನ್ನು ನಮೂದಿಸಿ ಮುಂದುವರಿಯಬೇಕು. ಮುಂದಕ್ಕೆ ನಿಮಗೆ ಬೇಕಾದ ಬದಲಾವಣೆಯನ್ನು ನಮೂದಿಸಬೇಕು ಹಾಗೂ ಹೊಸ ಬದಲಾವಣೆಗೆ ಪೂರಕವಾದ ಪಾನ್ ಕಾರ್ಡ್ ಪ್ರತಿಯೊಂದಕ್ಕೆ ಸಹಿ ಹಾಕಿ ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಬೇಕು. ಬಳಿಕ ಈ ಸೇವೆಯನ್ನು ಯಾವ ಏಜೆನ್ಸಿ ಮಾಡಬೇಕೆನ್ನುವ ಆಯ್ಕೆ ನಮೂದಿಸಬೇಕು. ನಿಮ್ಮ ಕೋರಿಕೆ ಸ್ವೀಕೃತವಾಗಿ ನಿಮಗೆ ಒಂದು URN number ಕಾಣಿಸುತ್ತದೆ. ಅದು ಎಸ್ಸೆಮ್ಮೆಸ್ ಮೂಲಕವೂ ಬರುತ್ತದೆ. ಸುಮಾರು 15 ದಿನಗಳಲ್ಲಿ ನಿಮ್ಮ ಹೆಸರು ಬದಲಾವಣೆ ನಡೆಯುತ್ತದೆ. ಈ ಬಗ್ಗೆ ನಿಮಗೆ ಎಸ್ಸೆಮ್ಮೆಸ್ ಅಥವಾ ಇ-ಮೈಲ್ ಸೂಚನೆ ಬರಬಹುದು. ಯಾವುದಕ್ಕೂ ಬದಲಾವಣೆಯ ಬಗ್ಗೆ ಆಗಾಗ್ಗೆ ಜಾಲತಾಣದಲ್ಲಿ URN number ಬಳಸಿ ಸ್ಟೇಟಸ್ ಚೆಕ್ ಮಾಡಿಕೊಂಡು ಇರುವುದು ಒಳ್ಳೆಯದು.
ಹೊಸ ಪರಿಹಾರ
ಇದೀಗ ಒಂದೆರಡು ದಿನಗಳ ಹಿಂದೆ ಬಂದ ತಾಜಾ ಸುದ್ದಿಯ ಅನುಸಾರ ಹೆಸರು ಹೊಂದಾಣಿಕೆಯಾಗದ ಕೇಸುಗಳಿಗೆ ಆಧಾರ್ ಬದಲಾವಣೆಯಿಲ್ಲದೆಯೇ ಒಟಿಪಿ ಆಧಾರಿತ ಸರಳೀಕೃತ ಜೋಡಣಾ ಪದ್ಧತಿಯನ್ನು ತೆರಿಗೆ ಇಲಾಖೆ ತನ್ನದೇ ಜಾಲತಾಣದಲ್ಲಿ ತೆರೆದಿಡಲಿದೆ. ಇದು ಜನಸಾಮಾನ್ಯರಿಗೆ ಸುಲಭವಾಗಲಿದೆ. ಅದಿನ್ನೂ ಅನುಷ್ಠಾನಕ್ಕೆ ಬರಲಿಲ್ಲವಾದ ಕಾರಣ ಹೆಸರಿನಲ್ಲಿ ಯಾವುದೇ ಸಮಸ್ಯೆ ಇಲ್ಲದೆ ಸುಲಭವಾಗಿ ಜೋಡಣೆ ಸಾಧ್ಯವಾಗುವವರು ಜೋಡಣೆ ಮಾಡಿಕೊಳ್ಳುವುದು ಒಳ್ಳೆಯದು. ಹೆಸರಿನ ಸಮಸ್ಯೆ ಇರುವವರು ಕೆಲದಿನ ಸುಲಭ “ವಿವಾಹ’ ಪರಿಹಾರಕ್ಕಾಗಿ ಕಾದು ನೋಡುವುದು ಒಳಿತು.
ಜಯದೇವ ಪ್ರಸಾದ ಮೊಳೆಯಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.