ಹಿರಿಯ ನಾಗರಿಕರ ಕರ ಮತ್ತು ಹೂಡಿಕಾ ವಿಶೇಷ
Team Udayavani, Sep 11, 2017, 8:50 AM IST
ಕಳೆದ ವಾರದ ಕಾಸು ಕುಡಿಕೆಯಲ್ಲಿ ಊರವರ ಉಸಾಬರಿ ನಮಗೆ ಯಾಕೆ, ನಮಗೆ ನಮ್ಮದು ನೋಡಿಕೊಂಡರೆ ಸಾಲದೇ? ಈ ಗುರುಗುಂಟಿರಾಯರ ಚಹ ಪಾನದ ಕಾನೀಷ್ಮಾರಿ ನಮಗ್ಯಾಕೆ? ಎಂದು ಬರೆದದ್ದು ಅವರಿಗೆ ಅತೀವ ವೇದನೆ ಕೊಟ್ಟಿದೆಯಂತೆ. ರಾಯರ ಮಗರಾಯನೇ ಮೊನ್ನೆಯ ದಿನ ಮಣಿಪಾಲದ ಒಂದು ವಿವಾಹ ಸಮಾರಂಭದಲ್ಲಿ ಸಿಕ್ಕಿ ನನಗೆ ಇದನ್ನು ತಿಳಿಸಿದ್ದರು. ಅದನ್ನು ಓದಿದ ಅನಂತರ ರಾಯರು ಅತೀವ ದುಃಖದಲ್ಲಿ ಮುಳುಗಿದ್ದು ಯಾವಾಗ ನೋಡಿದರೂ ಉತ್ಸಾಹಹೀನರಾಗಿ ಗಡ್ಡಬಿಟ್ಟುಕೊಂಡು ಈಸೀ ಚೇರಿನಲ್ಲಿ ಚಿಂತಿಸುತ್ತಾ ಕುಳಿತಿರುತ್ತಾರಂತೆ. ಖುದ್ ಮಗರಾಯನೇ ಹೇಳಿದ ಮೇಲೆ ವಿಷಯ ಸತ್ಯವೇ ಇರಬೇಕು, ಆದರೆ ರಾಯರಿಗೆ ಅಷ್ಟು ಬೇಸರಗುವಂಥದ್ದು ನಾನೇನು ಹೇಳಿದ್ದೆ? ನಮಗೆ ನಮ್ಮ ನಮ್ಮ ಹೂಡಿಕೆಯ ವಿಚಾರದಲ್ಲಿ ಆಳವಾಗಿ ಗಮನ ಹರಿಸಬೇಕು ಎಂಬ ಅರ್ಥದಲ್ಲಿ ಆ ರೀತಿ ಹೇಳಿದೆನೇ ಹೊರತು ರಾಯರನ್ನು ಡೌನ್ ಮಾಡುವ ಉದ್ಧೇಶ ಖಂಡಿತಾ ಇರಲಿಲ್ಲ. ಆದರೆ ಅದ್ಯಾಕೋ ರಾಯರಿಗೆ ಆ ಮಾತು ಮನಸ್ಸಿಗೆ ಘನವಾಗಿ ನಾಟಿದ್ದು ಕಳೆದ ಕೆಲ ದಿನಗಳಿಂದ ತಾವು ಕೂಡ ಊರವರ ಉಸಾಬರಿ ಬಿಟ್ಟು ತಮ್ಮ ಹೂಡಿಕೆಯ ವಿಚಾರವಾಗಿ ಮಾತ್ರವೇ ಯೋಚನೆ ಹರಿ ಬಿಟ್ಟಿದ್ದಾರಂತೆ. ಮೊಳೆರಾಯರು ತಮ್ಮನ್ನು “ಊರವರ ಉಸಾಬರಿ’ ಎಂಬ ಒಂದೇ ಒಂದು ಸಿಂಗಲ್ ಕಮೆಂಟ್ ಹೊಡೆದು ಹೊರಗಿಟ್ಟ ಮೇಲೆ ತಾವ್ಯಾಕೆ ಅವರ ಒಟ್ಟೆಕುಡಿಕೆಯಲ್ಲಿ ಭಾಗವಹಿಸಬೇಕು ಎನ್ನುವ ನೋವಿನಲ್ಲಿ ಮರುಗುತ್ತಲೇ ಅವರಿಗೆ ಸಂಬಂಧ ಪಟ್ಟ ಹಿರಿಯ ನಾಗರಿಕರ ಹೂಡಿಕೆಯ ಬಗ್ಗೆ ಅಧ್ಯಯನಕ್ಕೆ ಇಳಿದಿ¨ªಾರಂತೆ. ಛೇ! ಎಡವಟ್ಟಾಯಿತು. ಇದಕ್ಕೆ ಏನಾದಾರೂ ಮಾಡಲೇಬೇಕು.
ಅದಿರಲಿ, ಸದ್ಯಕ್ಕ ಇಲ್ಲಿದೆ ನೋಡಿ, ರಾಯರು ತಯಾರಿಸಿದ ಹಿರಿಯ ನಾಗರಿಕರಿಗೆ ಅನ್ವಯವಾಗುವಂತಹ ಆದಾಯ ಕರ ಮತ್ತು ಹೂಡಿಕಾ ವಿಶೇಷಗಳ ಪಟ್ಟಿ:
1 ಹೆಚ್ಚುವರಿ 0.5%:
ಬ್ಯಾಂಕಿನ ಎಫ್ಡಿ ಮೇಲಿನ ಬಡ್ಡಿ ದರಗಳಲ್ಲಿ ಹಿರಿಯ ನಾಗರಿಕರಿಗೆ ಸರಿ ಸುಮಾರು 0.5% ಜಾಸ್ತಿ ಬಡ್ಡಿ ದರ ನೀಡುವುದು ವಾಡಿಕೆ. ಡೆಪಾಸಿಟ್ ಮಾಡುವಾಗ 60 ತುಂಬಿದ ಹಿರಿಯ ನಾಗರಿಕರು ತಮ್ಮ ವಯಸ್ಸಿನ ಪುರಾವೆಯನ್ನು ಒದಗಿಸಿ ಈ ಹೆಚ್ಚುವರಿ ಬಡ್ಡಿಯ ಸೌಲಭ್ಯವನ್ನು ಪಡೆಯಬಹುದು. ಎಫ್ಡಿ ಮೇಲಿನ ಬಡ್ಡಿಯ ಮೇಲೆ ಆದಾಯ ತೆರಿಗೆ ಇರುತ್ತದೆ. ಹಲವರು ಹಿರಿಯ ನಾಗರಿಕರಿಗೆ ಬರುವ ಬಡ್ಡಿಯ ಮೇಲೆ ಆದಾಯ ಕರ ಇಲ್ಲವೆಂಬ ತಪ್ಪು ಅಭಿಪ್ರಾಯ ಹೊಂದಿರುತ್ತಾರೆ. ಅದು ಸರಿಯಲ್ಲ. ಎಫ್ಡಿಗಳ ಮೇಲಿನ ಪ್ರತಿಯೊಂದು ಪೈಸೆ ಬಡ್ಡಿಯೂ ಕರಾರ್ಹವಾಗಿರುತ್ತದೆ.
2 ಹೆಚ್ಚುವರಿ ಕರ ವಿನಾಯಿತಿ ಮಿತಿ:
ಒಬ್ಟಾತ ವ್ಯಕ್ತಿಗೆ ರೂ 2.5 ಲಕ್ಷ ರೂ. ಆದಾಯ ಮಿತಿಯವರೆಗೆ ಯಾವುದೇ ಆದಾಯ ತೆರಿಗೆ ಇರುವುದಿಲ್ಲ. ಇದು ಆದಾಯ ತೆರಿಗೆಯಲ್ಲಿ ಇರುವ ಬೇಸಿಕ್ ವಿನಾಯಿತಿ ಮಿತಿ. ಆದರೆ 60 ವರ್ಷ ದಾಟಿದ ಹಿರಿಯ ನಾಗರಿಕರಿಗೆ ಬೇಸಿಕ್ ವಿನಾಯಿತಿ ಮಿತಿ ರೂ 3 ಲಕ್ಷಕ್ಕೆ ಏರಿಸಲಾಗಿದೆ. ಅಂತೆಯೇ 80 ವರ್ಷ ಮೀರಿದ ಅತಿ ಹಿರಿಯ ನಾಗರಿಕರಿಗೆ ಈ ಹೆಚ್ಚುವರಿ ಮಿತಿ ರೂ 5 ಲಕ್ಷ. ಪಕ್ಕದ ಟೇಬಲ್ ನಲ್ಲಿ ಈ ಹೆಚ್ಚಿನ ವಿವರಗಳನ್ನು ನೀಡಲಾಗಿದೆ. ಗಮನಿಸಿ.
ಆದಾಯ ಮಿತಿ (ರೂ. ಲಕ್ಷ) ಕರ ದರ
ಸಾಮಾನ್ಯರಿಗೆ ಹಿರಿಯರಿಗೆ ಅತಿಹಿರಿಯರಿಗೆ
0 2.5 0 3.0 0 5.0 0%
2.5 5.0 3.0 5.0 – 10%
5.0 10.0 5.0 10.0 5.0 10.0 20%
10.0 10.0 10.0 30%
+ ಕರದ ಮೇಲೆ ಎಜುಕೇಶನ್ ಸೆಸ್ 3%
3 ಟಿಡಿಎಸ್‌ನಲ್ಲಿ ವಿನಾಯಿತಿ:
ಒಬ್ಟಾತ ಬ್ಯಾಂಕಿನಲ್ಲಿ ಇಟ್ಟ ಎಫ್ಡಿ/ಆರ್‌ಡಿಗಳ ಬಡ್ಡಿ ವಾರ್ಷಿಕ ರೂ. 10,000 ದಾಟಿದರೆ ಕಾನೂನು ಪ್ರಕಾರ ಬ್ಯಾಂಕು ಅಂಥವರ ಪೂರ್ತಿ ಬಡ್ಡಿಯ ಮೇಲೆ 10% ಟಿಡಿಎಸ್ ಕಡಿತ ಮಾಡಬೇಕಾಗುತ್ತದೆ. ಕಂಪೆನಿ ಠೇವಣಿಗಳ ಮೇಲೆ ಬಡ್ಡಿ ರೂ 5,000 ಮೀರಿದರೆ ಈ ಟಿಡಿಎಸ್ ಕಾನೂನು ಅನ್ವಯವಾಗುತ್ತದೆ. ಆದರೆ ಈ ಕಡಿತದಿಂದ ಕೆಲವರಿಗೆ ವಿನಾಯಿತಿಯೂ ಸಿಗುತ್ತದೆ. ಆದರೆ ಈ ವಿನಾಯಿತಿ ಎಲ್ಲರಿಗೂ ಸಿಗುವ ವಿನಾಯಿತಿಯಲ್ಲ. ಯಾವ ಹಿರಿಯ ನಾಗರಿಕರಿಗೆ ಕರಾರ್ಹ ಆದಾಯ ಇಲ್ಲವೊ ಅಂತವರು ಮಾತ್ರ ಫಾರ್ಮ್ 15ಎ ಸಲ್ಲಿಸಿ ಟಿಡಿಎಸ್‌ನಿಂದ ವಿನಾಯಿತಿ ಪಡೆಯಬಹುದು. ಕರಾರ್ಹ ಆದಾಯವಿದ್ದುಕೊಂಡು ಈ ಫಾರ್ಮನ್ನು ಸುಖಾಸುಮ್ಮನೆ ಭರ್ತಿ ಮಾಡುವುದು ಅಪರಾಧ, ನೆನಪಿರಲಿ. ಅಲ್ಲದೆ, ಈ ಫಾರ್ಮನ್ನು ಹಿರಿಯ ನಾಗರಿಕರು ಪ್ರತಿ ವರ್ಷವೂ ಪ್ರತ್ಯೇಕವಾಗಿ ಸಲ್ಲಿಸತಕ್ಕದ್ದು.
4 ಆರೋಗ್ಯ ವಿಮೆಗೆ ಹೆಚ್ಚುವರಿ ವಿನಾಯಿತಿ:
ಆರೋಗ್ಯ ವಿಮೆಗಾಗಿ ಪಾವತಿ ಮಾಡಿದ ಪ್ರೀಮಿಯಂ ಮೊತ್ತದ ಮೇಲೆ ಕರವಿನಾಯಿತಿ ದೊರಕುತ್ತದೆ ಎನ್ನುವುದು ಸರಿ ಸುಮಾರು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಏನು? ಎಷ್ಟು? ಎನ್ನುವುದರ ಬಗ್ಗೆ ಸ್ಪಷ್ಟತೆ ಕಮ್ಮಿ ಇರಬಹುದು. ಸೆಕ್ಷನ್ 80ಡಿ (ಸ್ವಂತ, ಕುಟುಂಬ, ಹೆತ್ತವರ ಮೆಡಿಕಲ್ ಇನ್ಶೂರೆನ್ಸ್ ಪ್ರೀಮಿಯಂಗಾಗಿ) ಪ್ರಕಾರ, ಸ್ವಂತ/ಕುಟುಂಬ ಮಿತಿ ರೂ 25000, ಹಾಗೂ ಹೆತ್ತವರಿಗೆ ಪ್ರತ್ಯೇಕ ಮಿತಿ ರೂ 25000. ಈ ಮಿತಿ ಹಿರಿಯ ನಾಗರಿಕರಿಗೆ ಮಿತಿ ರೂ 30000 ಆಗಿದೆ. ಈ ಮಿತಿಯು ವಾರ್ಷಿಕ ಸ್ವಾಸ್ಥ್ಯ ತಪಾಸಣೆಗಾಗಿ ರೂ 5,000ದ ಒಳಮಿತಿಯನ್ನೂ ಹೊಂದಿರುತ್ತದೆ. ಆರೋಗ್ಯ ವಿಮೆ ಇಲ್ಲದ 80 ಮೀರಿದ ಹಿರಿಯ ನಾಗರಿಕರು ಈ ಮಿತಿಯನ್ನು ವೈದ್ಯಕೀಯ ವೆಚ್ಚಕ್ಕೆ ಉಪಯೋಗಿಸಬಹುದು.
5 ಹಿರಿಯ ನಾಗರಿಕರಿಗಾಗಿ ವಿಶೇಷ ಯೋಜನೆ, ಎಸ್.ಸಿ.ಎಸ್.ಎಸ್:
ಎಸ್.ಸಿ.ಎಸ್.ಎಸ್ ಅಥವಾ ಸೀನಿಯರ್ ಸಿಟಿಜನ್ ಸೇವಿಂಗ್ಸ್ ಸ್ಕೀಂ, ಈ ಯೋಜನೆಯಲ್ಲಿ ಹೂಡುವಿಕೆ ಮಾಡಲು ಕನಿಷ್ಠ ವಯೋಮಾನ 60 ಆಗಿರಬೇಕು. 60 ದಾಟಿದ ಎಲ್ಲ ನಾಗರಿಕರಿಗೂ ಇದರಲ್ಲಿ ತೊಡಗಿಸಿಕೊಳ್ಳುವ ಅರ್ಹತೆ ಬರುತ್ತದೆ. ಆದರೆ 55 ವರ್ಷ ದಾಟಿದ್ದು ಸ್ವಯಂ ನಿವೃತ್ತಿ (ವಿಆìಎಸ್) ಪಡೆದಿರುವ ನಾಗರಿಕರೂ ಕೂಡ ಕೈಗೆ ಬಂದ ನಿವೃತ್ತಿ ಮೊತ್ತವನ್ನು ಅ ಮಿತಿಯೊಳಗೆ ಇದರಲ್ಲಿ ಹೂಡಬಹುದು. ಅಂತಹ ಮೊತ್ತ ಕೈಸೇರಿದ 1 ತಿಂಗಳ ಒಳಗಾಗಿ ಹೂಡಿಕೆ ನಡೆಯಬೇಕು ಮತ್ತು ವಿಆರ್‌ಎಸ್ ಬಗ್ಗೆ ಪುರಾವೆಯನ್ನು ಒದಗಿಸಬೇಕು.
ಒಬ್ಟಾತ ಒಂದೇ ಖಾತೆಯನ್ನು ತೆರೆಯಬಹುದು ಅಥವಾ ತನ್ನ ಪತ್ನಿ/ಪತಿಯೊಡನೆ ಜಂಟಿಯಾಗಿ ಇನ್ನೊಂದು ಖಾತೆಯನ್ನೂ ತೆರೆಯಬಹುದು. ಜಂಟಿ ಖಾತೆಯ ಸಂದರ್ಭಗಳಲ್ಲಿ ಎರಡನೆಯ ಹೂಡಿಕೆದಾರರ ವಯಸ್ಸು ಮುಖ್ಯವಲ್ಲ. ಮೊದಲು ಈ ಯೋಜನೆ ಕೇವಲ ಪೋಸ್ಟಾಫೀಸಿನಲ್ಲಿ ಮಾತ್ರ ಲಭ್ಯವಿತ್ತು. ಆದರೆ ಈಗ ಇದನ್ನು ಸ್ಟೇಟ್ ಬ್ಯಾಂಕ್, ಕಾರ್ಪೋರೇಶನ್ ಬ್ಯಾಂಕ್, ಕೆನರಾ ಬ್ಯಾಂಕ್, ಯೂನಿಯನ್ ಬ್ಯಾಂಕ್, ಪಂಜಾಬ್ ನ್ಯಾಶನಲ್ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ವಿಜಯ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಇತ್ಯಾದಿ ಬ್ಯಾಂಕುಗಳಲ್ಲಿ ಕೂಡ ತೆರೆಯುವ ಅವಕಾಶವನ್ನು ಕಲ್ಪಿಸಲಾಗಿದೆ.
ಸೀನಿಯರ್ ಸಿಟಿಜೆನ್ ಸೇವಿಂಗ್ಸ್ ಸ್ಕೀಂನಲ್ಲಿ ಗರಿಷ್ಠ 15 ಲಕ್ಷ ರುಪಾಯಿಗಳಷ್ಟು ಮಾತ್ರ ಒಬ್ಟಾತನಿಗೆ ವೈಯಕ್ತಿಕ ಅಥವಾ ಜಂಟಿ ಖಾತೆಯಲ್ಲಿ ಒಟ್ಟಾಗಿ ಹೂಡಲು ಅನುಮತಿ ಇದೆ. ಜಂಟಿ ಖಾತೆಯ ಸಂದರ್ಭದಲ್ಲಿ ಹೂಡಿಕೆಯನ್ನು ಸಂಪೂರ್ಣವಾಗಿ ಮೊದಲನೆಯ ಹೂಡಿಕೆದಾರರೇ ಮಾಡಿ¨ªಾರೆ ಎಂದು ಭಾವಿಸಲಾಗುತ್ತದೆ. ಈ ಯೋಜನೆ 5 ವರ್ಷ ಅವಧಿ ಉಳ್ಳದ್ದು ಆಗಿರುತ್ತದೆ. 5 ವರ್ಷಗಳ ಅಂತ್ಯದಲ್ಲಿ ಖಾತೆ ಮೆಚೂÂರ್ ಆಗುತ್ತದೆ. ಆವಾಗ ಬೇಕೆಂದರೆ 3 ವರ್ಷಗಳ ಅವಧಿಗೆ ಅದೇ ಖಾತೆಯನ್ನು ಮುಂದುವರಿಸುವ ಅವಕಾಶವಿದೆ. ಅಥವಾ ಆ ಖಾತೆಯನ್ನು ಮುಚ್ಚಿ ಇನ್ನೊಂದು ಹೊಸ ಖಾತೆಯನ್ನು 5 ವರ್ಷಗಳ ಮಟ್ಟಿಗೆ ತೆರೆಯಬಹುದು.
ಖಾತೆ 5 ವರ್ಷದ್ದೆಂದು ಹೇಳಿದರೂ 1 ವರ್ಷದ ಬಳಿಕ ಖಾತೆಯನ್ನು ಮುಚ್ಚಿ ದುಡ್ಡನ್ನು ಹಿಂಪಡೆಯಬಹುದು. ಆದರೆ ಇದಕ್ಕೆ ಪೆನಾಲ್ಟಿ ಅಥವಾ ತಪ್ಪು ದಂಡ ಬೀಳುತ್ತದೆ. ಎರಡು ವರ್ಷಗಳ ಒಳಗಾಗಿ ಖಾತೆಯನ್ನು ಮುಚ್ಚಿದರೆ 1.5% ತಪ್ಪುದಂಡ ಹಾಗೂ ಎರಡು ವರ್ಷಗಳ ಬಳಿಕ ಖಾತೆಯನ್ನು ಮುಚ್ಚಿದರೆ 1% ತಪ್ಪು ದಂಡವೂ ಬೀಳುತ್ತದೆ. 5 ವರ್ಷಗಳ ಬಳಿಕದ 3 ವರ್ಷಗಳ ಊರ್ಜಿತ ಅವಧಿಯಲ್ಲಿ ತಪ್ಪುದಂಡ ಇರುವುದಿಲ್ಲ.
ಎಸ್ಸಿಎಸ್‌ಎಸ್ ಸ್ಕೀಮಿನ ಬಡ್ಡಿ ದರ ಈ ಜುಲೈ 1, 2017ರ ಅನಂತರ ವಾರ್ಷಿಕ 8.3% ಆಗಿದೆ. ಸಧ್ಯದ ಪರಿಸ್ಥಿತಿಯಲ್ಲಿ ಇದನ್ನು ಒಂದು ಉತ್ತಮ ಬಡ್ಡಿದರವೆಂದು ಪರಿಗಣಿಸಬಹುದು. ಸರಕಾರದ ಸ್ಮಾಲ್ ಸೇವಿಂಗ್ಸ್ ವಿಭಾಗದಲ್ಲಿ ಬರುವ ಈ ಯೋಜನೆಯ ಬಡ್ಡಿದರ ಈ ವರ್ಗದ ಇತರ ಯೋಜನೆಗಳಂತೆಯೇ ಪ್ರತಿ ತ್ತೈಮಾಸಿಕ ಬದಲಾಗುತ್ತದೆ. ಬ್ಯಾಂಕು ಬಡ್ಡಿದರಗಳು ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ 8.3% ಚೆನ್ನಾಗಿದೆ. ಬಡ್ಡಿದರ ಸರಕಾರದ 5 ವರ್ಷದ ಬಾಂಡುಗಳ ಮೇಲಿನ ಬಡ್ಡಿದರಗಳಿಂದ 1% ಜಾಸ್ತಿ ಇರುತ್ತದೆ. ಪ್ರತಿ ಬಾರಿಯೂ ಬಡ್ಡಿದರ ಈ ಫಾರ್ಮುಲಾ ಪ್ರಕಾರ ನಿಗದಿಯಾಗುತ್ತದೆ.
ಬಡ್ಡಿದರದ ಬದಲಾವಣೆಯ ಬಗ್ಗೆ ಒಂದು ಮಾತು ಸ್ಪಷ್ಟವಾಗಿ ತಿಳಿದಿರಬೇಕು. ಎಸ್ಸಿಎಸ್‌ಎಸ್ ಯೋಜನೆ 5 ವರ್ಷದ ಒಂದು ಕರಾರು. ಹೂಡಿಕೆಯಾದಾಗಿನ ಬಡ್ಡಿ ದರವೇ ಮುಂದಿನ 5 ವರ್ಷಗಳಿಗೂ ಅನ್ವಯವಾಗುತ್ತದೆ. ಆ ಬಳಿಕ ಉಂಟಾಗುವ ಬಡ್ಡಿದರದ ಇಳಿಕೆ ಅಥವಾ ಏರಿಕೆ ಹೊಸ ಹೂಡಿಕೆಗಳಿಗೆ ಅನ್ವಯವಾಗುತ್ತದೆಯೇ ಹೊರತು ಹಳೆಯ ಹೂಡಿಕೆಗಳಿಗಲ್ಲ. ಇದು ಮುಖ್ಯವಾದ ಮಾತು. ಆದರೆ ಪಿಪಿಎಫ್ ಖಾತೆಯಲ್ಲಿ ಈ ರೀತಿಯಿಲ್ಲ. ಪಿಪಿಎಫ್ ಖಾತೆಯಲ್ಲಿ ವಾರ್ಷಿಕವಾಗಿ ಅನ್ವಯವಾಗುವ ಬಡ್ಡಿದರವನ್ನು ಚಾಲ್ತಿಯಲ್ಲಿರುವ ಎಲ್ಲ ಖಾತೆಗಳ ಮೇಲೂ ಆ ವರ್ಷದ ಮಟ್ಟಿಗೆ ಹಾಕಲಾಗುತ್ತದೆ.
ಈ ಯೋಜನೆಯಲ್ಲಿ ಬಡ್ಡಿ ಪಾವತಿಯನ್ನು ಪ್ರತಿ ತ್ತೈಮಾಸಿಕದಲ್ಲಿ ಒಂದು ಬಾರಿ ಮಾಡಲಾಗುವುದು. ಅಂದರೆ ಪ್ರತಿ ಜನವರಿ, ಎಪ್ರಿಲ…, ಜುಲೈ ಹಾಗೂ ಅಕ್ಟೋಬರ್ ಒಂದನೇ ತಾರೀಕಿನಂದು ಬಡ್ಡಿ ಪಾವತಿ ನಡೆಯುತ್ತದೆ. ರೂ 15 ಲಕ್ಷದ ಒಂದು ಖಾತೆಯಿದ್ದಲ್ಲಿ ಪ್ರತಿ ತ್ತೈಮಾಸಿಕದಂದು ರೂ. 31,125 ನಿಮ್ಮ ಖಾತೆಗೆ ಪಾವತಿಯಾಗುತ್ತದೆ. ಈ ಸ್ಕೀಮಿನಲ್ಲಿ ಬಡ್ಡಿ ಪಾವತಿ ಕಡ್ಡಾಯವಾಗಿ ನಡೆಯುತ್ತದೆ ಹಾಗೂ ಮೆಚ್ಯೂರಿಟಿಯವರೆಗೆ ಬಡ್ಡಿಯನ್ನು ಪೇರಿಸುತ್ತಾ ಹೋಗುವ ಚಕ್ರ ಬಡ್ಡಿ ಸೌಲಭ್ಯವಿಲ್ಲ. ಹಾಗಾಗಿ ಈ ಯೋಜನೆ ಅಗಾಗ್ಗೆ ದುಡ್ಡು ಅವಶ್ಯಕತೆ ಇರುವ ನಾಗರಿಕರಿಗೆ ಹೆಚ್ಚು ಸಹಕಾರಿ.
ಈ ಯೋಜನೆಯ ಮೇಲಿನ ಆದಾಯಕರ ಸೌಲಭ್ಯವನ್ನು ಎರಡು ಮಜಲುಗಳಲ್ಲಿ ನೋಡಬಹುದು. ಮೊತ್ತಮೊದಲನೆಯದಾಗಿ ಈ ಯೋಜನೆಯಲ್ಲಿ ಮಾಡಿದ ಹೂಡಿಕೆ ಸೆಕ್ಷನ್ 80ಸಿ ಅಡಿಯಲ್ಲಿ ಕರವಿನಾಯಿತಿಗೆ ಅರ್ಹವಾಗಿರುತ್ತದೆ. ವಾರ್ಷಿಕ ರೂ 1.5 ಲಕ್ಷದ ವರೆಗಿನ ಪಿಪಿಎಫ್, ಎಲ್‌ಐಸಿ, ಎನ್‌ಎಸ್‌ಸಿ, ಇಎಲ್‌ಎಸ್‌ಎಸ್, ಗೃಹಸಾಲದ ಅಸಲು ಪಾವತಿ, ಮಕ್ಕಳ ಟ್ಯೂಶನ್ ಫೀ, ಮನೆಯ ರಿಜಿಸ್ಟ್ರೇಶನ್ ಫೀ, 5 ವರ್ಷದ ನಮೂದಿತ ಎಫಿx ಇತ್ಯಾದಿ ಹಲವು ಹೂಡಿಕೆಗಳ ಜತೆಗೆ ಸೀನಿಯರ್ ಸಿಟಿಜೆನ್ ಸೇವಿಂಗ್ಸ್ ಸ್ಕೀಮ್ ಕೂಡ ಕರವಿನಾಯಿತಿಗೆ ಸೇರಿದೆ. ಆದರೆ, ಈ ಯೋಜನೆಯ ಹೂಡಿಕೆಯಿಂದ ಕೈಸೇರುವ ಬಡ್ಡಿಯ ಮೇಲೆ ಯಾವ ಕರವಿನಾಯಿತಿಯೂ ಇರುವುದಿಲ್ಲ. ಒಂದೊಂದು ಪೈಸೆಯೂ ನಿಮ್ಮ ಆದಾಯಕ್ಕೆ ಪರಿಗಣಿಸಲ್ಪಡುತ್ತದೆ. ಈ ಬಡ್ಡಿ ಆದಾಯವನ್ನು ನಿಮ್ಮ ಇತರ ಆದಾಯದೊಡನೆ ಸೇರಿಸಿ ನಿಮ್ಮ ನಿಮ್ಮ ಆದಾಯದ ಸ್ಲಾಬ್ ಅನುಸಾರ ತೆರಿಗೆ ಕಟ್ಟಬೇಕು. ಇದರ ಮೇಲಿನ ಬಡ್ಡಿ ಕೇವಲ ಕರಾರ್ಹ ಮಾತ್ರವೇ ಅಲ್ಲ, ಅದರ ಮೇಲೆ ಮೇಲ್ಕಾಣಿಸಿದ ವಿವರದಂತೆ ಟಿಡಿಎಸ್ ಕೂಡ ಇರುತ್ತದೆ.
ಜಯದೇವ ಪ್ರಸಾದ ಮೊಳೆಯಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.