ಕ್ಯಾಪಿಟಲ್ ಗೈನ್ಸ್ ಟ್ಯಾಕ್ಸ್ – ಈ ವರ್ಷದ ಪರಿಷ್ಕೃತ ಮಾಹಿತಿ
Team Udayavani, Dec 10, 2018, 6:00 AM IST
ಆದಾಯ ತೆರಿಗೆಯ ಕಾನೂನಿನ ಪ್ರಕಾರ ಕ್ಯಾಪಿಟಲ್ ಅಥವಾ ಮೂಲಧನ ಎಂದರೆ ಭೂಮಿ, ಮನೆ, ಕಟ್ಟಡ, ಚಿನ್ನ, ಶೇರು, ಮ್ಯೂಚುವಲ್ ಫಂಡ್, ಬಾಂಡ್ ಇತ್ಯಾದಿ ಆಸ್ತಿಗಳು. ಅಂತಹ ಆಸ್ತಿಗಳಿಂದ ಆಗಾಗ್ಗೆ ನಮ್ಮ ಕೈಗೆ ಬರುವ ಬರುವ ಬಾಡಿಗೆ, ಡಿವಿಡೆಂಡ್ ಇತ್ಯಾದಿಗಳು ಆದಾಯ ಕರದ ಭಾಷೆಯಲ್ಲಿ “ಇತರ ಆದಾಯ’ ಆಗುತ್ತದೆ. ಬಾಡಿಗೆ ಆದಾಯದಿಂದ ಅನ್ವಯ ರಿಯಾಯಿತಿಗಳನ್ನು ಕಳೆದು ಸಾಮಾನ್ಯ ರೀತಿಯಲ್ಲಿ ಸಂಬಳ, ಬಿಸಿನೆಸ್ ಇತ್ಯಾದಿ ಆದಾಯಗಳೊಂದಿಗೆ ಜೊತೆಗೂಡಿಸಿ ತೆರಿಗೆ ಕಟ್ಟಬೇಕು.
ಶೇರು, ಮ್ಯೂಚುವಲ್ ಫಂಡುಗಳ ಡಿವಿಡೆಂಡ್ ಆದಾಯ ಪಡೆದವರ ಕೈಯಲ್ಲಿ ಕರಮುಕ್ತ; ಆದರೆ ಅದಕ್ಕೆ ಕಂಪೆನಿ ಅಥವಾ ಮ್ಯೂಚುವಲ್ ಫಂಡುಗಳೇ ಮೂಲದಲ್ಲಿ ಡಿವಿಡೆಂಟ್ ಡಿಸ್ಟ್ರಿಬ್ಯೂಶನ್ ಟ್ಯಾಕ್ (ಡಿಡಿಟಿ) ಕಟ್ಟಿರುತ್ತಾರೆ. ಇಕ್ವಿಟಿ ಮೇಲೆ ಮತ್ತು ಕನಿಷ್ಠ ಶೇ.65 ಈಕ್ವಿಟಿ ಇರುವ ಈಕ್ವಿಟಿ ಪ್ರಾಧಾನ್ಯ ಫಂಡುಗಳ(Equity Oriented Funds or EOF) ಮೇಲೆ ಶೇ. 10 ಡಿಡಿಟಿ ಮತ್ತು ಶೇ.12 ಸರ್ಚಾರ್ಜ್ ಮತ್ತು ಶೇ.4 ಎಜುಕೇಶನ್ ಸೆಸ್ (ಒಟ್ಟು ಶೇ.11.648 ಇರುತ್ತದೆ). ಡೆಟ್ ಮತ್ತು ಇತರ ಶೇ.65ಕ್ಕಿಂತ ಕಡಿಮೆ ಈಕ್ವಿಟಿಯ ಫಂಡುಗಳ ಮೇಲೆ ಶೇ. 25 ಡಿಡಿಟಿ, ಶೇ.12 ಸರ್ಚಾರ್ಜ್ ಮತ್ತು ಶೇ. 4 ಎಜುಕೇಶನ್ ಸೆಸ್ (ಒಟ್ಟು ಶೇ. 29.12 ಇರುತ್ತದೆ). ಈ ರೀತಿ ಕ್ಯಾಪಿಟಲ್ ಆಸ್ತಿ ಮೇಲೆ ಬರುವ ಆದಾಯದ ಮೇಲೆ ಕರ ಕಾನೂನು ಅನ್ವಯವಾಗುತ್ತದೆ.
ಇವಿಷ್ಟು ಕ್ಯಾಪಿಟಲ್ ಆಸ್ತಿಗಳ ಮೇಲಿನಿಂದ ವರ್ಷ ವರ್ಷ ಬರುವ ಆದಾಯದ ಮಾತಾಯ್ತು. ಆದರೆ ಅದೇ ಭೂಮಿ, ಚಿನ್ನ, ಶೇರು, ಮ್ಯೂಚುವಲ್ ಫಂಡ್ ಇತ್ಯಾದಿ ಕ್ಯಾಪಿಟಲ್ ಆಸ್ತಿಯನ್ನು ಕೊನೆಗೊಮ್ಮೆ ಮಾರಿಬಿಟ್ಟಾಗ ಬರುವ ಮೂಲ ವೆಚ್ಚ ಹಾಗೂ ಅಭಿವೃದ್ಧಿ ವೆಚ್ಚವನ್ನು ಕಳೆದು ಬರುವ ಲಾಭವನ್ನು ಕ್ಯಾಪಿಟಲ್ ಗೈನ್ಸ್ (ಕ್ಯಾಪಿಟಲ್ ಗಳಿಕೆ) ಅನ್ನುತ್ತಾರೆ. ಕರ ಲೆಕ್ಕಾಚಾರದ ದೃಷ್ಟಿಯಿಂದ ಈ ಕ್ಯಾಪಿಟಲ್ ಗಳಿಕೆಯನ್ನು ಬೇರೆ ಆದಾಯಗಳ ರೀತಿಯಲ್ಲಿ ಲೆಕ್ಕ ಹಾಕುವುದಿಲ್ಲ. ಅದಕ್ಕೆ ಅದರದ್ದೇ ಪ್ರತ್ಯೇಕವಾದ ವಿಶೇಷ ಲೆಕ್ಕಾಚಾರವಿದೆ.
ಕ್ಯಾಪಿಟಲ್ ಗಳಿಕೆಯನ್ನು ದೀರ್ಘಕಾಲಿಕ (Long term Capital Gains) ಹಾಗೂ ಅಲ್ಪ ಕಾಲಿಕ (Short Term Capital gains) ಎಂಬ ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ. ಅಷ್ಟೇ ಅಲ್ಲದೆ ಯಾವ ನಮೂನೆಯ ಕ್ಯಾಪಿಟಲ್ ಎನ್ನುವುದರ ಮೇಲೆ ಭೌತಿಕ ಮತ್ತು ವಿತ್ತೀಯ ಎಂಬ ಇನ್ನೆರಡು ವಿಭಾಗಗಳಾಗಿ ವಿಂಗಡಿಸಲಾಗಿದೆ. ವಿತ್ತೀಯದ ಒಳಗೂ ಈಕ್ವಿಟಿ ಮತ್ತು ಈಕ್ವಿಟಿಯೇತರ ಹಾಗೂ ಇಕ್ವಿಟಿಯ ಒಳಗೆ ಎಸ್.ಟಿ.ಟಿ. ಕರ (Securities Transaction Tax) ತೆತ್ತ ಹಾಗೂ ತೆರದ – ಹೀಗೆ ಇನ್ನೆರಡು ಕೆಟಗರಿಯನುಸಾರ ಕ್ಯಾಪಿಟಲ್ ಗೈನ್ಸ್ ಟ್ಯಾಕ್ಸ್ ಬೇರೆ ಬೇರೆ ದರಗಳಲ್ಲಿ ವಿಧಿಸಲ್ಪಡುತ್ತದೆ. (ಟೇಬಲ್ ನೋಡಿ)
ಕ್ಯಾಪಿಟಲ್ ಗೈನ್ಸ್ ಲೆಕ್ಕ ಹೇಗೆ?
ಮೂಲಧನದಲ್ಲಿ ವೃದ್ಧಿ ಅಂದ ಮೇಲೆ ಕ್ಯಾಪಿಟಲ್ ಗೈನ್ಸ್ ಆದಾಯಕ್ಕೆ ಮಾರಾಟದ ಬೆಲೆ ಕಳೆ ಮೂಲ ಹೂಡಿಕೆ ಎಂಬ ಸರಳ ಸಮೀಕರಣ ಬಳಸಬಹುದು.
ಕ್ಯಾಪಿಟಲ್ ಗೈನ್ಸ್= ಮಾರಾಟ ಬೆಲೆ – (ಮೂಲ ವೆಚ್ಚ+ಅಭಿವೃದ್ಧಿ ವೆಚ್ಚ)
ಅಲ್ಪಕಾಲಿಕ ಕ್ಯಾಪಿಟಲ್ ಗೈನ್ಸ್ ಲೆಕ್ಕಾಚಾರ ಈ ರೀತಿಯೇ ಹಾಕಲಾಗುತ್ತದೆ.
ಆದರೆ ಕ್ಯಾಪಿಟಲ್ ಗೈನ್ಸ್ ಕೇವಲ ಹಣದುಬ್ಬರದಿಂದಲೂ ಉಂಟಾಗಬಹುದಲ್ಲವೇ? ಅದರ ಮೇಲೂ ಕರ ವಿಧಿಸುವುದು ಸಾಧುವೇ ಎಂಬ ಪ್ರಶ್ನೆ ಬರುತ್ತದೆ.
ಹಾಗಾಗಿ ದೀರ್ಘಕಾಲಿಕ ಕ್ಯಾಪಿಟಲ್ ಗೈನ್ಸ್ ಲೆಕ್ಕ ಹಾಕುವಲ್ಲಿ ಸರಕಾರ ಹಣದುಬ್ಬರದ ಪಾಲಿಸಿ ವೃದ್ಧಿಯನ್ನು ಹೊರತಾಗಿಸಿ ಉಳಿದ ನೈಜವಾದ ಧನವೃದ್ಧಿಯ ಮೇಲೆ ಮಾತ್ರ ಕರ ಬೀಳುವಂತೆ ಅನುಕೂಲ ಮಾಡಿಕೊಟ್ಟಿದೆ. ಹಣದುಬ್ಬರದ ಭಾಗವನ್ನು ಹೊರತಾಗಿಸಲು ಹಣದುಬ್ಬರ ಆಧಾರಿತ ಇಂಡೆಕ್ಸೇಶನ್ ಬಳಸಬೇಕು.
ಇಂಡೆಕ್ಸೇಶನ್
ಟೇಬಲ್‌ನಲ್ಲಿ ಕಾಣಿಸಿದಂತೆ ಕೆಲವೆಡೆ ಕರ ಲೆಕ್ಕ ಹಾಕುವಾಗ ಇಂಡೆಕ್ಸೇಶನ್ ಸೌಲಭ್ಯ ಇದೆ. ಈ ಇಂಡೆಕ್ಸೇಶನ್ ಪದ್ಧತಿಯಲ್ಲಿ ಪ್ರತಿ ವರ್ಷವೂ ಬೆಲೆಯೇರಿಕೆ ಸೂಚ್ಯಂಕಾಧಾರಿತ ಇಂಡೆಕ್ಸ್ ಸಂಖ್ಯೆಯನ್ನು (CII= Cost Inflation Index)) ಸರಕಾರ ಘೋಷಿಸುತ್ತದೆ. ಆ ಸಂಖ್ಯೆಯಿಂದ ಆ ಆಸ್ತಿಯ ಖರೀದಿ ಮತ್ತು ಅಭಿವೃದ್ಧಿ ವೆಚ್ಚವನ್ನು ಗುಣಾಕಾರ ಮೂಲಕ ಹೆಚ್ಚಿಸಿಕೊಂಡ ಮೇಲೆಯೇ ಮಾರಾಟ ಬೆಲೆಯಿಂದ ಕಳೆದು ಕ್ಯಾಪಿಟಲ್ ಗಳಿಕೆಯನ್ನು ಲೆಕ್ಕ ಹಾಕಬೇಕು. ಈ ರೀತಿ ಬೆಲೆಯೇರಿಕೆಯ ಅಂಶವನ್ನು ತೆಗೆದುಹಾಕಿ ಶುದ್ಧ ಲಾಭಕ್ಕೆ ಮಾತ್ರ ಕರ ನೀಡಿದಂತಾಗುತ್ತದೆ.
ಉದಾ: 1990ರಲ್ಲಿ (ವರ್ಷದ ಇಂಡೆಕ್ಸ್ 172) ರೂ. 100 ಕೊಟ್ಟು ಖರೀದಿಸಿ ಅಭಿವೃದ್ಧಿ ಪಡಿಸಿದ ಆಸ್ತಿಯನ್ನು 2010ರಲ್ಲಿ (ವರ್ಷದ ಇಂಡೆಕ್ಸ್ 632) ರೂ. 400ಕ್ಕೆ ಮಾರಿದರೆ ಸರಳವಾಗಿ ರೂ. 300 (ಅಂದರೆ 400-100) ಕ್ಯಾಪಿಟಲ್ ಗೈನ್ಸ್. ಆದರೆ ಇಂಡೆಕ್ಸೇಶನ್ ಪ್ರಕಾರ 400- (100×632/172) = ರೂ. 33 ಮಾತ್ರ ಕ್ಯಾಪಿಟಲ್ ಗೈನ್ಸ್.
Set-off ಮತ್ತು ನಷ್ಟದ Carry Forward
ಅಲ್ಪಕಾಲಿಕ ಕ್ಯಾಪಿಟಲ್ ನಷ್ಟವನ್ನು ಅಲ್ಪ ಅಥವಾ ದೀರ್ಘಕಾಲಿಕ ಕ್ಯಾಪಿಟಲ್ ಲಾಭದೊಡನೆ ಸೆಟ್-ಆಫ್ ಅಥವಾ ವಿಲೀನಗೊಳಿಸಬಹುದಾಗಿದೆ. ಆದರೆ ದೀರ್ಘಕಾಲಿಕ ನಷ್ಟವನ್ನು ಮಾತ್ರ ಇನ್ನೊಂದು ದೀರ್ಘಕಾಲಿಕ ಲಾಭದೊಡನೆ ಮಾತ್ರ ಸೆಟ್-ಆಫ್ ಮಾಡಬಹುದಾಗಿದೆ. ಅಲ್ಲದೆ ಯಾವುದೇ ಕ್ಯಾಪಿಟಲ್ ಗೈನ್ ನಷ್ಟವನ್ನು ಇತರ ಯಾವುದೇ ಆದಾಯದ ಕೆಟಗರಿಯೊಂದಿಗೆ ಸೆಟ್‌ಆಫ್ ಮಾಡಲು ಬರುವುದಿಲ್ಲ. ಒಂದು ವರ್ಷದಲ್ಲಿ ಸೆಟ್-ಆಫ್ ಆಗದ ನಷ್ಟವನ್ನು 8 ವರ್ಷಗಳವರೆಗೆ ಪೇರಿಸಿಗೊಂಡು ಹೋಗಿ (Carry forward)) ಮುಂದಿನ ವರ್ಷಗಳಲ್ಲಿ ಬರುವ ಕ್ಯಾಪಿಟಲ್ ಲಾಭದೊಂದಿಗೆ ಮೇಲೆ ಹೇಳಿದಂತೆ ಸೆಟ್ ಆಫ್ ಮಾಡಬಹುದಾಗಿದೆ.
ಕಾಪಿಟಲ್ ಗೈನ್ಸ್ ತೆರಿಗೆ ವಿನಾಯಿತಿ
1. ಒಂದು ಮನೆಯ ಮಾರಾಟದಿಂದ ದೀರ್ಘಕಾಲಿಕ ಕ್ಯಾಪಿಟಲ್ ಗಳಿಕೆ (3 ವರ್ಷ ಮೀರಿ) ಉಂಟಾದರೆ ಅಂತಹ ಗಳಿಕೆಯನ್ನು ಇನ್ನೊಂದು ಹೊಸ ಮನೆಗೆ ಮಾರಾಟದ 1 ವರ್ಷ ಮೊದಲು ಖರೀದಿಗಾಗಿ, 2 ವರ್ಷಗಳ ಒಳಗೆ ಖರೀದಿಗಾಗಿ ಅಥವ 3 ವರ್ಷಗಳ ಒಳಗೆ ನಿರ್ಮಾಣಕ್ಕಾಗಿ ಖರ್ಚು ಮಾಡಿದಲ್ಲಿ ಕ್ಯಾಪಿಟಲ್ ಗಳಿಕೆ ತೆರಿಗೆಯಿಂದ ಸಂಪೂರ್ಣ ವಿನಾಯಿತಿ ಸಿಗುತ್ತದೆ. ಭಾಗಶಃ ಖರ್ಚುಮಾಡಿದರೆ ಅಷ್ಟೇ ಭಾಗದ (Pro rata) ವಿನಾಯತಿ ಸಿಗುತ್ತದೆ. ಖರೀದಿ ಮಾಡುವವರೆಗೆ ದುಡ್ಡನ್ನು “ಕ್ಯಾಪಿಟಲ್ ಗೈನ್ಸ್ ಎಕೌಂಟ್ ಸ್ಕೀಂ’ (CGAS) ನಲ್ಲಿ ಇಡಬೇಕು.
2. ಒಂದಕ್ಕಿಂತ ಜಾಸ್ತಿ ಮನೆ ಇಲ್ಲದವರು ಮನೆಯೇತರ ಬೇರೆ ಯಾವುದಾದರೂ ಕ್ಯಾಪಿಟಲ್ ಆಸ್ತಿಯನ್ನು ಮಾರಾಟ ಮಾಡಿ ಕ್ಯಾಪಿಟಲ್ ಗೈನ್ಸ್ ಪಡೆದರೆ ಅಂತಹ ಇಡೀ ಮಾರಾಟದ ಮೊತ್ತವನ್ನು (ಬರೇ ಗೈನ್ಸ್ ಮಾತ್ರವಲ್ಲ) ಮೇಲೆ ಹೇಳಿದ ಕಾಲಘಟ್ಟಾನುಸಾರ ಒಂದು ಮನೆಗಾಗಿ ಖರ್ಚು ಮಾಡಿದರೆ ಅಂತಹ ಗಳಿಕೆಯೂ ಸಂಪೂರ್ಣ ಕರಮುಕ್ತ. ಅಂತಹ ಹೊಸ ಮನೆಯನ್ನು 3 ವರ್ಷಗಳ ಕಾಲಕ್ಕೆ ಮಾರಬಾರದು. ಅಲ್ಲದೆ, ಇಲ್ಲೂ CGAS Clause ಇದೆ.
3. ಭೂಮಿ ಯಾ ಕಟ್ಟಡ ರೂಪದ ಆಸ್ತಿಯ ಮಾರಾಟದ 6 ತಿಂಗಳೊಳಗೆ ಅದರ ಕಾಪಿಟಲ್ ಗಳಿಕೆಯನ್ನು ರೂರಲ್ ಇಲೆಕ್ಟ್ರಿಫಿಕೇಶನ್ ಕಾರ್ಪೋರೇಶನ್ (REC)) ಅಥವಾ ನ್ಯಾಶನಲ್ ಹೈವೆ ಅಥಾರಿಟಿಯ (NHAI) ಬಾಂಡುಗಳಲ್ಲಿ ಕನಿಷ್ಟ 5 ವರ್ಷಕ್ಕೆ ಹೂಡಿದರೆ (ವಾರ್ಷಿಕ ಮಿತಿ 50 ಲಕ್ಷ) ಅಂತಹ ಕ್ಯಾಪಿಟಲ್ ಗಳಿಕೆ ಸಂಪೂರ್ಣವಾಗಿ ಕರಮುಕ್ತ. ಶೇರು, ಮ್ಯೂಚುವಲ್ ಫಂಡ್, ಚಿನ್ನದ ಮಾರಾಟದಲ್ಲಿನ ಕ್ಯಾಪಿಟಲ್ ಗೈನ್ಸ್ ಮೇಲೆ ಈ ತೆರನಾದ ಯಾವುದೇ ರಿಯಾಯಿತಿ ಈ ವಿತ್ತ ವರ್ಷದಿಂದ ಇರುವುದಿಲ್ಲ.
ಕರ ಪಾವತಿ
ಮೇಲೆ ಹೇಳಿದ ರೀತಿಯಲ್ಲಿ ಲೆಕ್ಕ ಹಾಕಿದ ನಂತರ ದೀರ್ಘಕಾಲಿಕ ಕ್ಯಾಪಿಟಲ್ ಗೈನ್ಸ್ ಗಳಿಕೆಯ ಮೇಲೆ 80ಸಿ ಇತ್ಯಾದಿ ಸೆಕ್ಷನ್ ಅಡಿಯಲ್ಲಿ ಪುನಃ ಕರ ವಿನಾಯಿತಿ ಸಿಗುವುದಿಲ್ಲ. ಹಾಗಾಗಿ ನಿಮ್ಮ ದೀರ್ಘಕಾಲಿಕ ಕ್ಯಾಪಿಟಲ್ ಗಳಿಕೆಯ ಮೇಲೆ ಕೋಷ್ಟಕದ ಪ್ರಕಾರ ತೆರಿಗೆ ಪಾವತಿ ಮಾಡತಕ್ಕದ್ದು.
ನಿವಾಸಿ ಭಾರತೀಯರು ಬೇಸಿಕ್ ಕರ ವಿನಾಯಿತಿಯ ಮಿತಿಯಾದ ರೂ. 2.5 ಲಕ್ಷ (ಹಿರಿಯ ನಾಗರಿಕರಿಗೆ 3 ಲಕ್ಷ ಹಾಗೂ ಅತಿ ಹಿರಿಯ ನಾಗರಿಕರಿಗೆ 5 ಲಕ್ಷ) ವಾರ್ಷಿಕದ ಲಾಭವನ್ನು ಪಡೆಯಬಹುದು. ಆ ಮಿತಿ ಮೀರಿದ ಮೊತ್ತಕ್ಕೆ ಮಾತ್ರ ಕೋಷ್ಟಕದ ಪ್ರಕಾರ ಕರ ಕಟ್ಟಿದರೆ ಸಾಕು. ಆದರೆ ಈ ಸೌಲಭ್ಯ ಎನ್ನಾರೈಗಳಿಗೆ ಇಲ್ಲ. ಅವರು ಪೂರ್ತಿ ಧನವೃದ್ದಿಯ ಮೇಲೆ ಕರಕಟ್ಟಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.