EPF ಎಂಬೋ ನೌಕರರ ಭವಿಷ್ಯ ನಿಧಿ
Team Udayavani, Sep 24, 2018, 8:30 PM IST
(ಕಳೆದ ವಾರದಿಂದ)
ಕಳೆದ ವಾರ ಎಂಪ್ಲಾಯೀಸ್ ಪ್ರಾವಿಡೆಂಟ್ ಫಂಡಿನ ಸ್ಥೂಲವಾದ ರೂಪುರೇಷೆ, ಉಸ್ತುವಾರಿ ವ್ಯವಸ್ಥೆ, ದೇಣಿಗೆ ಮತ್ತು ಬಡ್ಡಿಯ ವಿವರಗಳನ್ನು ನೀಡಿದ್ದೇನೆ. ಈ ವಾರ ಈ ಫಂಡಿನಿಂದ ದುಡ್ಡು ವಾಪಸಾತಿ, ನಿಷ್ಕ್ರಿಯ ಖಾತೆಯ ಬಗ್ಗೆ, ಕರವಿನಾಯತಿ, ನಾಮಿನೇಶನ್ ಮತ್ತು ಆನ್‌ಲೈನ್ ಚಟುವಟಿಕೆಗಳ ಬಗ್ಗೆ ತಿಳಿಯೋಣ.
UAN
ಎಲ್ಲಾ ಇಪಿಎಫ್ ಖಾತೆಗಳಿಗೆ ಈಗ Universal Account Number ಅಥವಾ UAN ನೀಡಲಾಗಿದೆ. ನಿಮ್ಮ ಸಂಸ್ಥೆ ನಿಮಗೆ ಇದನ್ನು ಮಾಡಿಸಿಕೊಡುತ್ತದೆ. ಈ ಯುಎ ನಂಬರ್ ನಿಮ್ಮ ಶಾಶ್ವತ ಖಾತೆಯ ನಂಬರ್ ಆಗಿದ್ದು ಎಲ್ಲಾ ವ್ಯವಹಾರಗಳನ್ನು ಆನ್‌ಲೈನ್ ಮೂಲಕ ಮಾಡಲು ಇದು ಸಹಾಯಕ.
ಇಪಿಎಫ್ ವಾಪಸಾತಿ
ನಿವೃತ್ತಿಯ ಸಮಯದಲ್ಲಿ ಅಥವಾ ಇರುವ ನೌಕರಿ ಬಿಟ್ಟು ಕನಿಷ್ಟ 2 ತಿಂಗಳು ನಿರುದ್ಯೋಗಿಯಾಗಿದ್ದರೆ ಮಾತ್ರ ಸಂಪೂರ್ಣ ದುಡ್ಡನ್ನು ಬಡ್ಡಿ ಸಹಿತ ವಾಪಾಸು ಪಡಕೊಳ್ಳಬಹುದು. 2 ತಿಂಗಳೊಳಗೆ ಉದ್ಯೋಗ ಬದಲಿಸಿಕೊಂಡರೆ ಹೊಸ ಕಂಪೆನಿಗೆ ಖಾತೆಯನ್ನು ವರ್ಗಾಯಿಸತಕ್ಕದ್ದು. ಇದೀಗ ಬಂದ ಹೊಸ ತಿದ್ದುಪಡಿಯ ಪ್ರಕಾರ ಕೆಲಸ ಬಿಟ್ಟು 1 ತಿಂಗಳ ಬಳಿಕ ಶೇ.75 ಹಾಗೂ 2 ತಿಂಗಳ ಬಳಿಕ ಉಳಿದ ಶೇ.25 ಹಿಂಪಡೆಯಬಹುದು. ಇಪಿಎಫ್ ಎನ್ನುವುದು ದೀರ್ಘಕಾಲಿಕ ಉಳಿತಾಯ ಯೋಜನೆಯಾಗಿದ್ದು ನಿವೃತ್ತಿಯ ಹೊತ್ತಿನಲ್ಲಿ ಸಹಾಯಕ್ಕೆ ಬರಲಿ ಎನ್ನುವುದು ಇದರ ಮೂಲ ಉದ್ದೇಶ. ಇಪಿಎಫ್ ದುಡ್ಡನ್ನು ವಾಪಾಸು ಪಡೆಯಲು ಫಾರ್ಮ್ 13 ತುಂಬಿ ನಿಮ್ಮ ಹೊಸ ಕಂಪೆನಿಯಲ್ಲಿ ಸಲ್ಲಿಸುವ ಪದ್ಧತಿ ಇತ್ತು. ಆದರೆ ಇದೀಗ ಇದನ್ನು UAN ಬಳಸಿ ಆನ್‌ಲೈನ್ ಆಗಿಯೇ ಮಾಡಲು ಬರುತ್ತದೆ. ಒಂದು ನೌಕರಿ ಬಿಟ್ಟ 2 ತಿಂಗಳೊಳಗೆ ಇನ್ನೊಂದು ಹೊಸ ಉದ್ಯೋಗಕ್ಕೆ ಸೇರಿಕೊಂಡರೂ ನಿರುದ್ಯೋಗಿಯಂತೆ ದುಡ್ಡು ಹಿಂಪಡೆದುಕೊಳ್ಳುವುದು ಪಿಎಫ್ ಕಾನೂನಿನ ವಿರುದ್ಧ. ಆದರೂ ಈ ಉಲ್ಲಂಘನೆಯನ್ನು ಲಕ್ಷಾಂತರ ಜನರು ವ್ಯಾಪಕವಾಗಿ ಮಾಡುತ್ತಿದ್ದಾರೆ ಎನ್ನುವುದು ಬೇರೆ ಮಾತು.
ಇಪಿಎಫ್ ವರ್ಗಾವಣೆ
ನೀವು ಯಾವ ನೌಕರಿಗೆ ಎಲ್ಲಿ ಸೇರಿಕೊಂಡರೂ ಈ ನಂಬರನ್ನು ನಿಮ್ಮ ಹೊಸ ಕಂಪೆನಿಗೆ ಕೊಡಿ. ನಿಮ್ಮ ಹೊಸ ಪಿಎಫ್ ದೇಣಿಗೆಗಳು ನಿಮ್ಮ ಈ ಶಾಶ್ವತ ಖಾತೆಗೆ ಸ್ವಯಂ ಜಮೆಯಾಗುತ್ತದೆ. ಮೊದಲಿನಂತೆ ಖಾತೆಯನ್ನು ಸಂಸ್ಥೆಯಿಂದ ಸಂಸ್ಥೆಗೆ ವರ್ಗಾಯಿಸುವ ಜಂಜಟ್ ಇಲ್ಲ.
ನಿಷ್ಕ್ರಿಯ ಖಾತೆ (Dormant Account)
3 ವರ್ಷಗಳವರೆಗೆ ಒಂದು ಖಾತೆ ಯಾವುದೇ ದೇಣಿಗೆ ಇಲ್ಲದೆ ವರ್ಗಾವಣೆಯೂ ಆಗದೆ ಹಾಗೆಯೇ ಬಿದ್ದಿದ್ದರೆ ಅವುಗಳನ್ನು ನಿಷ್ಕ್ರಿಯ ಖಾತೆ ಎಂದು ಪರಿಗಣಿಸಲಾಗುವುದು. ಇಂತಹ ‘ಡಾರ್ಮಂಟ್ ಎಕೌಂಟು’ಗಳಿಗೆ ಆ ಬಳಿಕ ಯಾವುದೇ ಬಡ್ಡಿಯನ್ನು ಪೇರಿಸಲಾಗುವುದಿಲ್ಲ ಎಂಬ ಕಾನೂನು 2011-12 ರಲ್ಲಿ ಬಂದಿತ್ತು. ಆದರೆ ಆ ಕಾನೂನನ್ನು ಮತ್ತೆ 2016-17 ರಲ್ಲಿ ರದ್ದುಗೊಳಿಸಿದ ಸರಕಾರ ಇದೀಗ ನಿಷ್ಕ್ರಿಯ ಖಾತೆಯ ಮೇಲೂ ಕೂಡಾ ಬಡ್ಡಿಯನ್ನು ಹಿಂದಿನಂತೆ ನೀಡುತ್ತಿರಲು ನಿರ್ಧರಿಸಿದೆ. ಆದರೆ ಈ ಸೌಲಭ್ಯ ನಿವೃತ್ತಿಯಾಗುವವರೆಗೆ ಮಾತ್ರ ಲಭ್ಯವಿದೆ. ಇಪಿಎಫ್ಒ ಪ್ರಕಾರ ನಿವೃತ್ತಿಯ ವಯಸ್ಸು 55 ವರ್ಷ, ಹಾಗಾಗಿ 58 ವರ್ಷದವರೆಗೆ ಮಾತ್ರ ಒಂದು ನಿಷ್ಕ್ರಿಯ ಖಾತೆಯಲ್ಲಿ ಬಡ್ಡಿ ಬೀಳುತ್ತಿರುತ್ತದೆ.
ಆಂಶಿಕ ಹಿಂಪಡೆತ (Partial Withdrawal)
ಇಪಿಎಫ್ ಕಾನೂನಿನಲ್ಲಿ ಉದ್ಯೋಗಾವಧಿಯಲ್ಲಿ ಸಾಲ ಅಥವಾ ಲೋನ್ ಎಂಬುದಿಲ್ಲ. ಅಂದರೆ ಬಡ್ಡಿ ಸಹಿತ ಮರುಪಾವತಿ ಮಾಡುವಂತಹ ಸಾಲದ ಸೌಲಭ್ಯ ಇಲ್ಲ. ಆದರೆ ಕೆಲವು ನಿರ್ದಿಷ್ಟ ವಿಶೇಷ ಕಾರಣಗಳಿಗೆ ಖಾತೆಯಲ್ಲಿರುವ ಮೊತ್ತವನ್ನು ಭಾಗಶಃ ಹಿಂಪಡೆಯಬಹುದು. ಅದೆಷ್ಟೋ ಜನ ತಮ್ಮ ಸಂಸ್ಥೆಯಿಂದ ತಾನು ಪಿಎಫ್ ಲೋನ್ ಪಡೆದೆ ಎನ್ನುತ್ತಾರಾದರೂ ನಿಜವಾಗಿಯೂ ಅವರು ಬಳಸಿರುವುದು ಈ ಅಂಶಿಕ ಹಿಂಪಡೆತದ ಸೌಲಭ್ಯವನ್ನೇ. (ಬ್ಯಾಂಕ್/ಪೋಸ್ಟಾಫೀಸಿಗಳಲ್ಲಿರುವ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಖಾತೆಗಳಲ್ಲಿ ಪಿಎಫ್ ಲೋನ್ ಸೌಲಭ್ಯ ಇರುತ್ತದೆ) ಮನೆಕಟ್ಟಿ ನೋಡುವವರಿಗೆ, ಮದುವೆ ಮಾಡಿ ನೋಡುವವರಿಗೆ ಮತ್ತು ವಿದ್ಯಾಭ್ಯಾಸದ, ಅನಾರೋಗ್ಯದ ಮತ್ತು ಇನ್ನಿತರ ಕಾರಣಕ್ಕೆ ಇಪಿಎಫ್ನಿಂದ ಅಂಶಿಕವಾಗಿ ದುಡ್ಡು ಹಿಂಪಡೆಯುವ ಸೌಲಭ್ಯ ಇದೆ.
ಕೆಲವು ಹಿಂಪಡೆಯುವ ಮುಖ್ಯ ಕಾರಣಗಳ ವಿವರಗಳು ಹೀಗಿವೆ:
1. ಮದುವೆ (ಸ್ವಂತ, ಮಕ್ಕಳು ಅಥವ ಒಡಹುಟ್ಟಿದವರಿಗೆ) ಹಾಗೂ ಮೆಟ್ರಿಕ್ ಮೇಲಿನ ವಿದ್ಯಾಭ್ಯಾಸ (ಸ್ವಂತ ಮತ್ತು ಮಕ್ಕಳಿಗೆ)
– ಕನಿಷ್ಟ 7 ವರ್ಷಗಳ ಸೇವೆ ಸಲ್ಲಿಸಿರಬೇಕು
– ಗರಿಷ್ಟ ಹಿಂಪಡೆಯಬಹುದಾದ ಮೊತ್ತ ನಿಮ್ಮ ದೇಣಿಗೆಯ ಶೇ. 50
– ವೃತ್ತಿ ಜೀವನದಲ್ಲಿ 3 ಬಾರಿ ಮಾತ್ರ ಈ ಸೌಲಭ್ಯವನ್ನು ಪಡಕೊಳ್ಳಬಹುದು
– ಇದಕ್ಕಾಗಿ ಫಾರ್ಮ್ 31ರಲ್ಲಿ ಅರ್ಜಿ ಹಾಗೂ ಮದುವೆಯ ಕರೆಯೋಲೆ ಅಥವಾ ಫೀಸ್ ಮೊತ್ತದ ದೃಢೀಕೃತ ಪ್ರತಿಯನ್ನು ನೀಡತಕ್ಕದ್ದು.
2. ವೈದ್ಯಕೀಯ ಖರ್ಚು – ಸ್ವಂತ, ಅಥವಾ ಕುಟುಂಬಕ್ಕೆ (ಗಂಡ/ಹೆಂಡತಿ, ಮಕ್ಕಳು, ಅವಲಂಬಿತ ಹೆತ್ತವರು)
– ದೊಡ್ಡ ಶಸ್ತ್ರಕ್ರಿಯೆಗೆ ಅಥವಾ ಟಿಬಿ, ಕುಷ್ಟರೋಗ, ಪಾರ್ಶ್ವವಾಯು, ಕಾನ್ಸರ್, ಮಾನಸಿಕ ಅಸ್ವಸ್ಥತೆ ಅಥವ ಹೃದ್ರೋಗಕ್ಕೆ
– ಗರಿಷ್ಠ ಅರ್ಹ ಮೊತ್ತ ಮಾಸಿಕ ಸಂಬಳದ 6 ಪಾಲು ಅಥವಾ ನೌಕರರ ದೇಣಿಗೆಯ ಮೊತ್ತ
– ಕನಿಷ್ಟ 1 ತಿಂಗಳ ಆಸ್ಪತ್ರೆಯ ದಾಖಲಾತಿ ಮತ್ತು ಅದೇ ಅವಧಿಯ ಅನಾರೋಗ್ಯದ ರಜೆಯ ಪುರಾವೆ ಸಲ್ಲಿಸತಕ್ಕದ್ದು
– ವೃತ್ತಿ ಜೀವನದಲ್ಲಿ ಅಗತ್ಯ ಬಂದಂತೆ ಎಷ್ಟು ಬಾರಿಯೂ ಈ ಸೌಲಭ್ಯ ಪಡೆಯಬಹುದು.
3. ಗೃಹ ಸಾಲದ ಮರುಪಾವತಿ (ಸ್ವಂತ,ಗಂಡ/ಹೆಂಡತಿ ಅಥವಾ ಜಂಟಿ ಹೆಸರಿನಲ್ಲಿರುವ ಮನೆಗೆ)
– ಕನಿಷ್ಟ 10 ವರ್ಷಗಳ ಸೇವೆ ಸಲ್ಲಿಸಿರಬೇಕು
– ಮಾಸಿಕ ಸಂಬಳದ 36 ಪಟ್ಟು ಹಿಂಪಡೆಯುವ ಮಿತಿ
– ವೃತ್ತಿ ಜೀವನದಲ್ಲಿ ಒಂದೇ ಬಾರಿ ಈ ಸೌಲಭ್ಯ
4. ಮನೆಯ ಸೇರ್ಪಡೆ/ಬದಲಾವಣೆ ಅಥವಾ ದುರಸ್ತಿ (ಸ್ವಂತ, ಗಂಡ/ಹೆಂಡತಿ ಅಥವ ಜಂಟಿ ಹೆಸರಿನಲ್ಲಿರುವ ಮನೆಗೆ)
– ಮನೆಯ ಖರೀದಿ/ನಿರ್ಮಾಣದ ಬಳಿಕ ಕನಿಷ್ಠ 5 ವರ್ಷಗಳ ಸೇವೆ ಅಗತ್ಯ (ದುರಸ್ತಿಗೆ 10 ವರ್ಷ)
– ಮಾಸಿಕ ಸಂಬಳದ 12 ಪಾಲಿನವರೆಗೆ ಹಿಂಪಡೆಯುವ ಮಿತಿ, ಒಂದೇ ಬಾರಿ
5. ಮನೆ/ಫ್ಲ್ಯಾಟ್ ಅಥವಾ ಜಾಗ/ಸೈಟಿನ ನಿರ್ಮಾಣ ಅಥವಾ ಖರೀದಿ (ಸ್ವಂತ, ಗಂಡ/ಹೆಂಡತಿ ಅಥವಾ ಜಂಟಿ ಹೆಸರಿನಲ್ಲಿ)
– ಕನಿಷ್ಠ 5 ವರ್ಷಗಳ ಸೇವೆ ಸಲ್ಲಿಸಿರಬೇಕು
– ಗರಿಷ್ಠ ಹಿಂಪಡೆಯುವ ಮಿತಿ ಸಂಬಳದ 36 ಪಟ್ಟು
– ಸೈಟ್ ಅಥವ ಜಾಗ ಖರೀದಿಗೆ ಮಿತಿ ಮಾಸಿಕ ಸಂಬಳದ 24 ಪಟ್ಟು
– ಸೇವೆಯ ಅವಧಿಯಲ್ಲಿ ಈ ಸೌಲಭ್ಯ ಒಂದೇ ಬಾರಿ
6. ನಿವೃತ್ತಿಪೂರ್ವ
54 ವರ್ಷಗಳನ್ನು ತಲುಪಿದ ಓರ್ವ ಉದ್ಯೋಗಿ ನಿವೃತ್ತಿಯಾಗುವ ಕನಿಷ್ಟ 1 ವರ್ಷ ಮೊದಲು ಮೊದಲೇ ತನ್ನ ಫಂಡಿನಲ್ಲಿರುವ ಒಟ್ಟು ದುಡ್ಡಿನ ಶೇ.90 ಮೊತ್ತವನ್ನು ವಾಪಾಸು ಪಡಕೊಳ್ಳಬಹುದಾಗಿದೆ. ಈ ಸೌಲಭ್ಯವನ್ನು ಒಂದೇ ಒಂದು ಬಾರಿ ಮಾತ್ರ ಉಪಯೋಗಿಸಿಕೊಳ್ಳಬಹುದಾಗಿದೆ.
7. ಅಂಗವಿಕಲರಿಗೆ
– ಅಂಗವಿಕಲರಿಗೆ ತಮ್ಮ ಸಂಕಷ್ಟಗಳನ್ನು ಕಡಿಮೆ ಮಾಡುವ ಸಲಕರಣೆಗಳನ್ನು ಖರೀದಿಸಲು ಪಿಎಫ್ನಿಂದ ದುಡ್ಡು ಪಡೆಯಬಹುದಾಗಿದೆ
– 6 ತಿಂಗಳ ಸಂಬಳ, ಫಂಡಿನಲ್ಲಿ ತನ್ನ ದೇಣಿಗೆ ಬಡ್ಡಿಸಹಿತ ಅಥವಾ ಸಲಕರಣೆಯ ವೆಚ್ಚ – ಇವುಗಳಲ್ಲಿ ಕನಿಷ್ಠ ಮೊತ್ತವನ್ನು ಪಡಕೊಳ್ಳಬಹುದಾಗಿದೆ
– ಇದಕ್ಕೆ ಮೆಡಿಕಲ್ ಸರ್ಟಿಫಿಕೇಟ್ ಅಗತ್ಯ
ಇವಲ್ಲದೆ ಪವರ್ ಕಟ್‌ನಿಂದಾಗಿ ಆದಾಯ ಕಳಕೊಂಡವರಿಗೆ ಹಾಗೂ ನೈಸರ್ಗಿಕ ಪ್ರಕೋಪಗಳಿಂದ ನಷ್ಟ ಹೊಂದಿದವರಿಗೆ ಅಲ್ಲದೆ ಲಾಕ್ ಔಟ್ ಅಥವಾ ಸಂಸ್ಥೆಯ ರದ್ಧತಿಗಳಿಗೂ ಕೂಡಾ ಫಂಡ್ ದುಡ್ಡನ್ನು ನಿಯಮಾನುಸಾರ ಹಿಂಪಡೆಯಬಹುದಾಗಿದೆ.
(ಇಲ್ಲಿ ಸಂಬಳ ಅಂದರೆ ಬೇಸಿಕ್ + ಡಿಎ)
ಕರ ವಿನಾಯತಿ
ಇದಕ್ಕೆ ಹಾಕಿದ ಎಲ್ಲಾ ದುಡ್ಡಿಗೂ (ವಿಪಿಎಫ್ ಸಹಿತ) ಸೆಕ್ಷನ್ 80ಸಿ ಅನ್ವಯ ಕರವಿನಾಯತಿ ದೊರಕುತ್ತದೆ. ಇದರಲ್ಲಿ ಉತ್ಪನ್ನವಾದ ವಾರ್ಷಿಕ ಬಡ್ಡಿಯೂ ಕರರಹಿತ ಹಾಗೂ ಇದರಿಂದ ವಾಪಾಸು ಪಡಕೊಳ್ಳುವ ಸಮಯದಲ್ಲಿ ಕೂಡಾ ಪೂರ್ಣ ಮೊತ್ತ ಕರರಹಿತ. ಹೀಗೆ ಮೂರೂ ಹಂತಗಳಲ್ಲಿ ಕರವಿನಾಯತಿ ಇರುವ ಇಂತಹ ಸ್ಕೀಂಗಳಿಗೆ Exempt & Exempt & Exempt (EEE) ಎನ್ನುತ್ತಾರೆ.
ಆದರೆ, ಖಾತೆ ಆರಂಭಿಸಿ 5 ವರ್ಷಗಳ ನಿರಂತರ ಸೇವೆಯ ಒಳಗಾಗಿ ಪಿಎಫ್ ದುಡ್ಡು ವಾಪಾಸು ತೆಗೆದುಕೊಂಡಲ್ಲಿ ಆ ಮೊತ್ತದ ಉದ್ಯೋಗದಾತರ ದೇಣಿಗೆ ಹಾಗೂ ಬಡ್ಡಿಯ ಅಂಶವು ಸಂಪೂರ್ಣವಾಗಿ ಆ ವರ್ಷದ ಆದಾಯಕ್ಕೆ ಸೇರಿಸಲ್ಪಟ್ಟು ತೆರಿಗೆಗೆ ಒಳಪಡುತ್ತದೆ. ನೌಕರನ ದೇಣಿಗೆಯ ಮೇಲೆ ಹಿಂದೆ ಕರ ವಿನಾಯಿತಿ ಪಡೆದಿದ್ದರೆ ಈಗ ಅದನ್ನೂ ಕೂಡಾ ಆದಾಯವೆಂದು ತೋರಿಸಿ ಅದರ ಮೆಲೆ ಕರ ಕಟ್ಟತಕ್ಕದ್ದು. ಅಲ್ಲದೆ ಹಿಂಪಡೆದ ಒಟ್ಟು ಮೊತ್ತ ರೂ. 50,000 ದಾಟಿದರೆ ಶೇ. 10 ಟಿಡಿಎಸ್ (ಪ್ಯಾನ್ ಕಾರ್ಡ್ ಇಲ್ಲದಿದ್ದರೆ ಶೇ. 30) ಕಡಿತ ಕೂಡಾ ಇರುತ್ತದೆ (ಪಾರ್ಮ್ 15ಜಿ/ಎಚ್ ನೀಡಿದರೆ ಟಿಡಿಎಸ್ ಮಾಫ್). ಈ 5 ವರ್ಷದ ನಿರ್ಬಂಧಕ್ಕೆ ಕೂಡಾ ಕೆಲ ರಿಯಾಯಿತಿಗಳಿವೆ. ಒಂದು ವೇಳೆ ಅನಾರೋಗ್ಯದ ನಿಮಿತ್ತ, ಕಂಪೆನಿಯೇ ಬಂದ್ ಆದ ಕಾರಣಕ್ಕೆ ಅಥವಾ ನೌಕರನ ಕೈ ಮೀರಿದ ಬೇರಾವುದೇ ಕಾರಣಕ್ಕಾಗಿ ಕೆಲಸ ಕಳೆದುಕೊಂಡವರಿಗೆ 5 ವರ್ಷದ ನಿರಂತರ ಸೇವೆ ಇಲ್ಲದಿದ್ದರೂ ಆದಾಯ ತೆರಿಗೆ ಇರುವುದಿಲ್ಲ. ಅಲ್ಲದೆ ನಿವೃತ್ತಿ ಅಥವಾ ರಾಜೀನಾಮೆಯ ಬಳಿಕವೂ ಖಾತೆಯನ್ನು ಊರ್ಜಿತದಲ್ಲಿ ಇಟ್ಟಿದ್ದರೆ ಅಂತಹ ಅವಧಿಯಲ್ಲಿ ನೀಡುವ ಬಡ್ಡಿಗೆ ಕರ ವಿನಾಯಿತಿ ಇರುವುದಿಲ್ಲ. ಉದ್ಯೋಗದಲ್ಲಿ ಇಲ್ಲದ ವ್ಯಕ್ತಿಯ ಖಾತೆಗೆ ಬೀಳುವ ಬಡ್ಡಿಯ ಮೇಲೆ ಆದಾಯ ತೆರಿಗೆ ಕಟ್ಟತಕ್ಕದ್ದು ಎನ್ನುವ ಆದಾಯ ತೆರಿಗೆ ಟ್ರಿಬ್ಯೂನಲ್ ತೀರ್ಪು ಇದೆ.
ನಾಮಿನೇಶನ್
ಬೇರೆಲ್ಲಾ ವಿತ್ತೀಯ ಸೊತ್ತುಗಳಿಗೆ ಇರುವಂತೆ ಇಲ್ಲೂ ನಾಮಿನೇಷನ್ ನಮೂದಿಸಿರುವುದು ಅತ್ಯಗತ್ಯ. ಖಾತೆದಾರನ ಮರಣದ ನಂತರ ಅತಿಸುಲಭವಾಗಿ ದುಡ್ಡು ನಾಮಿನಿಯ ಕೈಗೆ ಹಸ್ತಾಂತರಿಸಲ್ಪಡುತ್ತದೆ. ದಯವಿಟ್ಟು ನಿಮ್ಮ ಕಂಪೆನಿಯಲ್ಲಿ ಈ ಬಗ್ಗೆ ವಿಚಾರಿಸಿ ನಿಮ್ಮ ಖಾತೆಗೆ ನಾಮಿನೇಶನ್ ನಮೂದಿಸದೇ ಇದ್ದಲ್ಲಿ ಈ ಕೂಡಲೇ ಫಾರ್ಮ್ 2 ತುಂಬಿ ಆ ಕಾರ್ಯ ಮಾಡಿ ಪುಣ್ಯ ಕಟ್ಟಿಕೊಳ್ಳಿ. ಮರಣಾನಂತರ ನಾಮಿನೇಶನ್ ಇಲ್ಲದ ಖಾತೆಯಿಂದ ದುಡ್ಡು ಪಡೆಯಬೇಕಾದರೆ ಕುಟುಂಬದವರಿಗೆ ಇನ್ನಿಲ್ಲದ ಕಾನೂನೀ ಕೆಲಸ ಮಾಡಬೇಕಾಗಿ ಬರಬಹುದು.
ಆನ್‌ಲೈನ್ ವ್ಯವಹಾರ
ಇತ್ತೀಚೆಗೆ ಎಪಿಎಫ್ಓ ತನ್ನ ಜಾಲತಾಣವನ್ನು ಹೂಡಿಕೆದಾರರಿಗಾಗಿ ತೆರೆದಿದ್ದು ಅದರಲ್ಲಿ ಬ್ಯಾಲನ್ಸ್ ವಿಚಾರಣೆ ಅಲ್ಲದೆ ಖಾತಾ ವರ್ಗಾವಣೆ, ಹಿಂಪಡೆತ ಇತ್ಯಾದಿಗಳಿಗೆ ಆನ್‌ಲೈನ್ ಅರ್ಜಿ ಗುಜರಾಯಿಸಬಹುದು. ಇದರಲ್ಲಿರುವ ಇ-ಪಾಸ್‌ಬುಕ್ ಸೌಲಭ್ಯದಿಂದ ನೀವು ನಿಮ್ಮ ಖಾತೆಯ ಪಾಸ್ ಬುಕ್ಕನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. https://unifiedportal&mem.epfindia.gov.in/memberinterface ತಾಣಕ್ಕೆ ಹೋಗಿ ನಿಮ್ಮ UAN ನಂಬರ್ ಬಳಸಿಕೊಂಡು ರಿಜಿಸ್ಟರ್ ಮಾಡಿಕೊಳ್ಳಿ. ಆ ಬಳಿಕ ಮೊಬೈಲ್ ಸಂದೇಶದ ಮೂಲಕ ದೊರಕಿದ ಪಿನ್ ನಂಬರ್ ಮೂಲಕ ಲಾಗ್‌ಇನ್ ಆಗಬಹುದು. ಅಲ್ಲಿ ಸೈಟಿನಲ್ಲಿರುವ ಇ-ಪಾಸ್‌ಬುಕ್ ಅಯ್ಕೆಯ ಮೂಲಕ ನಿಮ್ಮ ಪಾಸ್‌ಬುಕ್ಕನ್ನು ಡೌನ್ಲೋಡ್ ಮಾಡಬಹುದು. ನಿಧಿ ವರ್ಗಾವಣೆ ಮತ್ತು ವಾಪಸಾತಿಗೆ ಅರ್ಜಿಯನ್ನೂ ಗುಜರಾಯಿಸಬಹುದು. ಅಷ್ಟೇ ಅಲ್ಲದೆ ಇಲ್ಲಿ ಉಮಂಗ್ ಎನ್ನುವ ಮೊಬೈಲ್ ಆ್ಯಪ್ ಕೂಡಾ ಡೌನ್ಲೋಡ್ ಮಾಡಬಹುದು. ಇದು ಹೊಸ ಸೌಲಭ್ಯವಾದ ಕಾರಣ ಇನ್ನೂ ಪೂರ್ಣ ಪ್ರಮಾಣದಲ್ಲಿ ಕಾರ್ಯವೆಸಗುತ್ತಿಲ್ಲ. ಇನ್ನೂ ಬಹಳಷ್ಟು ಕೆಲಸ ಬಾಕಿ ಇದೆ. ನಿಮ್ಮ ಕಂಪೆನಿ ಇ-ಚಲನ್ ಮೂಲಕ ಪಿಎಫ್ ಕಂತು ಪಾವತಿ ಮಾಡಿದ್ದರೆ ಮಾತ್ರ ಇದರಲ್ಲಿ ವಿವರ ಕಾಣಿಸಬಹುದು. ಅದಲ್ಲದೆ ಈ ಸೌಲಭ್ಯ ಟ್ರಸ್ಟ್ ನಿರ್ವಹಣೆಯಲ್ಲಿ ನಡೆಯುವ ಫಂಡುಗಳಿಗೆ ಇನ್ನೂ ತೆರೆದಿಲ್ಲ. ಕ್ರಮೇಣ ಎಲ್ಲವನ್ನೂ ವಿದ್ಯುನ್ಮಾನ ವೇದಿಕೆಯಲ್ಲಿ ತೆರೆದಿಡುವ ಯೋಜನೆ ಇದೆ.
►►ಪಿಎಫ್ ಹೆಸರಿನಲ್ಲಿ ಯುಗಾದಿ ಆಚರಿಸುವ ಸರಕಾರ: https://bit.ly/2xKuKMf
— ಜಯದೇವ ಪ್ರಸಾದ ಮೊಳೆಯಾರ, [email protected]
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.