ಮಾರ್ಕೆಟ್ಟೊಳಗೊಂದು ಮನೆಯ ಮಾಡಿ ನಷ್ಟಕ್ಕಂಜಿದೊಡೆಂತಯ್ನಾ?
Team Udayavani, Oct 23, 2017, 6:58 AM IST
ಲಾಭದ ವಿಷಯಕ್ಕೆ ರಿಸ್ಕ್ ತೆಗೆದುಕೊಳ್ಳದ ಅದೇ ಜನರು ಕಣ್ಣೆದುರಿಗೆ ಕಾಣುವ ನಷ್ಟದ ವಿಷಯಕ್ಕೆ ಬರುವಾಗ ರಿಸ್ಕ್ ತೆಗೆದುಕೊಳ್ಳಲು ಸಿದ್ಧ ಎಂಬ ಮಾತು ಸಾಬೀತಾಯಿತು. ಇದರ ಪ್ರಕಾರ ಜನರು ಖಂಡಿತವಾಗಿಯೂ ನಡೆಯುವ ವಿಷಯಕ್ಕೆ ಜಾಸ್ತಿ ಮಹತ್ವ ಕೊಟ್ಟು “ನಡೆದರೂ ನಡೆಯಬಹುದು’ ಎಂಬಂತಹ ಕೇವಲ ಸಂಭಾವ್ಯ ಘಟನೆಗಳಿಗೆ ಕಡಿಮೆ ಒತ್ತು ಕೊಡುತ್ತಾರೆ
ಕಾಲಿಂಗ್ ಬೆಲ್ ಕೇಳಿ ಮನೆಯ ಬಾಗಿಲು ತೆರೆದ ನನಗೆ ಹೊರಗೆ ನಿಂತಿದ್ದ “ಯಾಹೂ’ ಖ್ಯಾತಿಯ ಶಮ್ಮಿ ಕಪೂರ್‌ನನ್ನು ನೋಡಿ ಅರೆಕ್ಷಣ ದಿಕ್ಕೇ ತೋಚದಂತಾಯಿತು. ಆಮೇಲೆ, ಪಕ್ಕಾ ಟ್ಯೂಬ್‌ಲೈಟ್ ಸ್ಟೈಲಿನಲ್ಲಿ ಅವರ ಗುರುತು ಹೊತ್ತಿತು, ಅಲ್ಲಲ್ಲ, ಹತ್ತಿತು. “ಅರೆ, ಇದು ನಮ್ಮ ಗುರುಗುಂಟಿರಾಯರಲ್ಲವೇ?’ ಅಂತ ನಿಧಾನವಾಗಿಯಾದರೂ ಜ್ಞಾನೋದಯವಾಯಿತು. ನನ್ನ ಬಳಿ ಕೋಪಿಸಿಕೊಂಡು ಕಾಕು ಅಂಕಣ ಬಿಟ್ಟು ಓಡಿ ಹೋಗಿದ್ದ ಗುರುಗುಂಟಿರಾಯರು ಈ ತೀರ್ಥ ಯಾತ್ರೆ ಕಾಸ್ಟೂಮಿನಲ್ಲಿ ಪ್ರತ್ಯಕ್ಷರಾಗಿದ್ದಾರೆ! ಊರೂರು ಸುತ್ತಿ ತುಸು ಆಯಾಸಗೊಂಡಂತಿದ್ದರೂ ಮುಖದಲ್ಲಿ ತೃಪ್ತಿಯ ಕಳೆ ಇತ್ತು. ಕೊರಳಲ್ಲಿ ರುದ್ರಾಕ್ಷಿ, ಹಣೆಯಲ್ಲಿ ನಾಮ, ಕುರುಚಲು ಕೂದಲು, ಬಿಳಿ ಗಡ್ಡ, ಬಿಳಿ ಜುಬ್ಬ-ಪೈಜಾಮದಲ್ಲಿ ಗುರುಗುಂಟಿರಾಯರು ಶಮ್ಮಿ ಕಪೂರ್‌ನನ್ನೇ ಎದುರಿಗೆ ಕಟ್ ಆ್ಯಂಡ್ ಪೇಸ್ಟ್ ಮಾಡಿದಂತಿತ್ತು.
“ನಮಸ್ಕಾರ ಮೊಳೆಯಾರರೇ, ಹೇಗಿದ್ದೀರಿ?’ ಎನ್ನುತ್ತಾ ಗುರುಗುಂಟಿರಾಯರು ತೀರ್ಥಯಾತ್ರೆಯ ಪ್ರಸಾದದ ಕಟ್ಟನ್ನು ನನ್ನ ಕೈಯಲ್ಲಿ ಇಟ್ಟು ಒಳಬಂದು ಸೋಫಾದಲ್ಲಿ ಕುಳಿತರು. “ಚೆನ್ನಾಗಿಯೇ ಇದ್ದೇನೆ. ನೀವಿಲ್ಲದೆ ಕಾಕು ಕಣದಲ್ಲಿ ಸ್ವಲ್ಪ ಬೋರ್, ಕೆಲವರು ನಿಮ್ಮ ಬಗ್ಗೆ ಕೇಳಲು ಆರಂಭಿಸಿದ್ದಾರೆ. ರಿಚರ್ಡ್ ಥೇಲರ್‌ನ ಬಿಹೇವಿಯರಲ್ ಸಯನ್ಸ್ ಬಗೆಗಿನ ಕಳೆದ ಎಪಿಸೋಡ್ ಅಂತೂ ನೀವಿಲ್ಲದೆ ಸಪ್ಪೆಯಾಗಿಯೇ ನಡೆಯಿತು. ಈಗ ನೀವು ಬಂದಿದ್ದೀರಲ್ವ? ಒಳ್ಳೆಯದಾಯಿತು. ಕೂತುಕೊಂಡು ಸ್ವಲ್ಪ ಮಾತನಾಡಬಹುದಲ್ವ?’ ಅಂತ ಹೇಳಿದೆ.
“ಈ ದುಡ್ಡಿನ ಬಗ್ಗೆ ಎಷ್ಟು ಮಾತನಾಡುವುದು. ಎಲ್ಲ ನಶ್ವರ ಅಲ್ಲವೇ? ಸುಮ್ಮನೇ ದುಡ್ಡು ದುಡ್ಡು ಅಂತ ಹೊಡೆದಾಡುವುದಕ್ಕಿಂತ ರಾಮಜಪ ಮಾಡಿಕೊಂಡು ಆತ್ಮ ಸಾಕ್ಷಾತ್ಕಾರ ಮಾಡಿಕೊಳ್ಳುವುದು ಒಳ್ಳೆಯದಲ್ಲವೇ?’ ರಾಯರ ತೀರ್ಥಯಾತ್ರೆಯ ಇಫೆಕ್ಟ್ ಈಗ ಸ್ಪಷ್ಟವಾಗಿ ಕಾಣತೊಡಗಿತು. ಇದೊಳ್ಳೆ ಕಷ್ಟ ಆಯ್ತಲ್ಲ ಮಾರಾರ್ರೆ. ಈಗ ಇದನ್ನು ಹೇಗೆ ಸರಿಪಡಿಸಬೇಕು ಅಂತ ಅರೆಕ್ಷಣ ಯೋಚನೆಗೆ ಬಿದ್ದೆ.
“ದುಡ್ಡಿಗೂ ರಾಮಜಪಕ್ಕೂ ಏನು ಸಂಬಂಧ ರಾಯರೆ? ದುಡ್ಡು ಬಿಟ್ಟುಬಿಟ್ಟು ಮಾತ್ರ ರಾಮಜಪ ಮಾಡಬೇಕಾ? ದುಡ್ಡು ಇಟ್ಟುಕೊಂಡೂ ರಾಮಜಪ ಮಾಡಬಹುದಲ್ವೇ? ದುಡ್ಡು ಎಂಬುದು ಒಂದು ಜೀವನಾವಶ್ಯಕ ಸಂಗತಿ ಅಲ್ಲವೇ? ಅದನ್ನು ಗಳಿಸುವುದರಲ್ಲಿ, ಗಳಿಸಿದ್ದನ್ನು ಬೆಳೆಸುವುದರಲ್ಲಿ ಉಳಿಸುವುದರಲ್ಲಿ ಏನು ತಪ್ಪಿದೆ?’ ಅಂತ ನಾನೂ ಒಂದು ಪ್ರತ್ಯಸ್ತ್ರ ಎಸೆದೆ.
“ಹಾಗಲ್ಲ, ದುಡ್ಡು ಬೇಕು ನಿಜ, ಆದ್ರೆ ಈ ಷೇರು ಕಟ್ಟೆಯಲ್ಲಿ ಅದಕ್ಕಾಗಿ ಹೊಡೆದಾಡುವುದನ್ನು ನೋಡಿದರೆ ಬೇಸರವಾಗುತ್ತದೆ. ಮನುಷ್ಯರಿಗೆ ಯಾಕಿಷ್ಟು ಲೋಭ? ಎಲ್ಲ ಬಿಟ್ಟುಬಿಡಬಾರದೇ?’ ರಾಯರೂ ಒಂದು ಬಾಣ ನನ್ನತ್ತ ಬಿಟ್ಟರು. “ಓ, ಅದು ಮನುಷ್ಯಸಹಜ ಪ್ರಕೃತಿ. ಮನುಷ್ಯ ಒಬ್ಬ ಭಾವಜೀವಿ. ಭಾವನೆಗಳು ಆತನನ್ನು ಆಳುತ್ತವೆ. ಎಷ್ಟೇ ಪ್ರೊಫೆಶನಲ್ ಎಂದು ತಿಳಿದುಕೊಂಡಿರುವ ನಿರ್ಧಾರಗಳೂ ವಾಸ್ತವದಲ್ಲಿ ಭಾವುಕತೆಯ ತಳಹದಿಯ ಮೇಲೆ ಮೊದಲೇ ನಿರ್ಧಾರವಾಗಿರುತ್ತವೆ. ಆಮೇಲೆ ಮಾಡುವ ವಿಚಾರಗಳೆಲ್ಲವೂ ಆ ಪೂರ್ವ ನಿರ್ಧಾರಿತ ವಿಚಾರಗಳನ್ನು ಸಮರ್ಥಿಸಿಕೊಳ್ಳುವುದೇ ಆಗಿದೆ’ ಅಂತ ನಾನೂ ಒಂದು ಸಮಜಾಯಿಶಿ ಎಸೆದೆ.
“ಇರ್ಲಿ ಬಿಡಿ, ಬಿಟ್ಟು ಬಿಡಿ ಅದನ್ನು’ ಅಂತ ಒಂದು ನಿಟ್ಟುಸಿರು ಹೊರಡಿಸಿ ಸುಮ್ಮನೆ ಯೋಚನೆಯಲ್ಲಿ ಬಿದ್ದರು. ನಾನೂ ಕೂಡ ಸ್ವಲ್ಪ ಹೊತ್ತು ಸುಮ್ಮನೇ ಅವರನ್ನೇ ಗಮನಿಸುತ್ತಾ ಕಾಲ ಕಳೆದೆ. ಇಬ್ಬರೂ ಮೌನವಾಗಿ ಹಾಗೆ ಕುಳಿತೇ ಇದ್ದೆವು. ಒಂದೆರಡು ನಿಮಿಷಗಳು ಕಳೆದಿರಬಹುದು. ನಿಧಾನವಾಗಿ ರಾಯರು ಸ್ವರ ಹೊರಡಿಸಿದರು. “ಜಯದೇವ್, ಅದೇನದು ಭಾವನೆಗಳ ತಳಹದಿ? ಷೇರುಗಳಲ್ಲಿ ದುಡ್ಡು ಹೂಡುವವರು ಯಾವ ರೀತಿ ಆಲೋಚಿಸುತ್ತಾರೆ? ಯಾವ ರೀತಿ ನಿರ್ಧಾರ ತೆಗೆದುಕೊಳ್ಳುತ್ತಾರೆ? ಯಾವ ರೀತಿ ಭಾವನೆಗಳು ಎಫೆಕ್ಟ್ ಆಗುತ್ತೆ? ಸ್ವಲ್ಪ ಹೇಳಿ. ಈ ಎಲ್ಲ ಆಗುಹೋಗುಗಳ ಗರ್ಭದಲ್ಲಿ ಏನಿದೆ? ಸ್ವಲ್ಪ ಹೇಳ್ತೀರಾ?’ ಎಂದರು.
ಷೇರು ಪೇಟೆಯಲ್ಲಿ ಅತಿಮುಖ್ಯವಾಗಿ ಎರಡು ಭಾವನೆಗಳು ಕೆಲಸ ಮಾಡುತ್ತವೆ- ಗ್ರೀಡ್ ಮತ್ತು ಫಿಯರ್ – ಲೋಭ ಮತ್ತು ಭಯ! ದುಡ್ಡು ಬೇಕು, ಇನ್ನೂ ಮಾಡಬೇಕು ಎಂಬ ಲೋಭ ಹಾಗೂ ದುಡ್ಡು ಹೋಗುವ, ಎಲ್ಲವನ್ನೂ ಕಳೆದುಕೊಳ್ಳುವ ಭಯ! ಮಾರುಕಟ್ಟೆಯಲ್ಲಿ ಪ್ರತಿಯೊಬ್ಬರೂ ಈ ತಳಹದಿಯಿಂದಲೇ ವರ್ತಿಸುತ್ತಾರೆ. ಸುಮಾರಾಗಿ ಲೋಭವು ಗೂಳಿಯಾಟಕ್ಕೆ ತಳಹದಿಯಾದರೆ ಭಯವು ಕರಡಿಯಾಟಕ್ಕೆ ನಾಂದಿಹಾಡುತ್ತದೆ. ಇದು ಸರ್ವೇಸುಮಾರಾಗಿ ಕೇಳಿಬರುವಂತಹ ಮಾತು.
ಇನ್ನು ಈ ಭಾವನೆಗಳು ಯಾವ ರೀತಿ ನಮ್ಮ ನಿರ್ಧಾರ/ನಿರ್ಣಯಗಳನ್ನು ಭಾದಿಸುತ್ತವೆ ಎಂಬ ವಿಚಾರ. ಅದರ ಬಗ್ಗೆ ಕೆಲವು ಥಿಯರಿಗಳಿವೆ. ಕಳೆದ ಬಾರಿ ಕೆಲವನ್ನು ನೋಡಿದ್ದೇವೆ. ಈ ಬಾರಿ ಇನ್ನೊಂದು ಥಿಯರಿ ಬಗ್ಗೆ ಚರ್ಚೆ ಮಾಡೋಣ:
ನಷ್ಟದ ಭಯ
ನೋಬೆಲ್ ವಿಜೇತ ಕಾನ್ನೆಮನ್ ಮತ್ತು ಟ್ಟೆಸ್ಕ್ರಿ ಎಂಬವರು 1979ರಲ್ಲಿ ಮನುಷ್ಯ ಅನಿಶ್ಚಿತತೆಯನ್ನು ಎದುರಿಸುವಾಗ ಯಾವ ರೀತಿ ಭಾವನಾತ್ಮಕ ನಿರ್ಧಾರವನ್ನು ತೆಗೆದುಕೊಳ್ಳುತ್ತಾನೆ ಎಂಬ ವಿಷಯದ ಬಗ್ಗೆ ಒಂದು ಪ್ರಮುಖ ಸಂಶೋಧನೆ ನಡೆಸಿದರು. ಆ ಸಂಶೋಧನೆಯ ಪ್ರಕಾರ ಶೇರು ಮಾರುಕಟ್ಟೆಯಲ್ಲಿ ಕಾಣುವ ಮಾನವ ಸ್ವಭಾವಕ್ಕೆ ಕೆಲವು ಟಿಪ್ಪಣಿಗಳನ್ನು ಬರೆಯಬಹುದಾಗಿದೆ. ಈಗ ಅವರು ನಡೆಸಿದ ಒಂದು ಸಣ್ಣ ಪ್ರಯೋಗ; ಈ ಕೆಳಗಿನ ಆಯ್ಕೆಗಳನ್ನು ಗಮನಿಸಿ:
ಆಯ್ಕೆ 1: ರೂ. 30,000 ಗೆಲ್ಲುವ 100% ಗ್ಯಾರಂಟಿ ಅವಕಾಶ.
ಆಯ್ಕೆ 2: ರೂ. 40,000 ಬಹುಮಾನ ಗೆಲ್ಲುವ 80% ಸಾಧ್ಯತೆ.
(ಅಂದರೆ ಏನೂ ಗೆಲ್ಲದಿರುವ 20% ಸಾಧ್ಯತೆ)
ನಿಮ್ಮ ಆಯ್ಕೆ ಯಾವುದು?
ಅವರ ಪ್ರಯೋಗದ ಪ್ರಕಾರ 80% ಜನರು 1ನೆಯ ಆಯ್ಕೆಯನ್ನು ಮಾಡಿದರು. ಅನಿಶ್ಚಿತ ಜಾಸ್ತಿ ಮೊತ್ತಕ್ಕಿಂತ ನಿಶ್ಚಿತ ಕಡಿಮೆ ಮೊತ್ತವೇ ಲೇಸು ಎಂಬ ಧೋರಣೆಯನ್ನು ತೋರಿದರು. ಕೇವಲ 20% ಜನರು ಮಾತ್ರ ಜಾಸ್ತಿ ಮೊತ್ತಕ್ಕಾಗಿ ರಿಸ್ಕ್ ತೆಗೆದುಕೊಳ್ಳಲು ನಿರ್ಧರಿಸಿದರು. ಇದು ಮನುಷ್ಯ ರಿಸ್ಕ್ ತೆಗೆದುಕೊಳ್ಳಲು ಇಷ್ಟಪಡುವುದಿಲ್ಲ ಎಂಬ ಮಾತನ್ನು ಪುಷ್ಟೀಕರಿಸುತ್ತದೆ ಅಲ್ಲವೇ? ಇರಲಿ ಬಿಡಿ. ಇದೆಲ್ಲ ನಮಗೆ ಗೊತ್ತಿದ್ದದ್ದೇ.
ಆದರೆ ಆ ಪ್ರಯೋಗ ಅಷ್ಟಕ್ಕೇ ನಿಲ್ಲಲಿಲ್ಲ. ಈ ಎರಡು ವಿಜ್ಞಾನಿಗಳು ಈಗ ಇದೇ ಪ್ರಯೋಗವನ್ನು ಮುಂದುವರಿಸಿ ಅದೇ ಗುಂಪಿಗೆ ಇನ್ನೂ ಎರಡು ಹೊಸ ಆಯ್ಕೆಗಳನ್ನು ಕೊಡುತ್ತಾರೆ:
ಆಯ್ಕೆ 1: ರೂ. 30,000 ಕಳೆದುಕೊಳ್ಳುವ 100% ಗ್ಯಾರಂಟಿ
ಅವಕಾಶ.
ಆಯ್ಕೆ 2: ರೂ. 40,000 ಕಳೆದುಕೊಳ್ಳುವ 80% ಸಾಧ್ಯತೆ (ಅಂದರೆ
ಏನೂ ಕಳೆದುಕೊಳ್ಳದ 20% ಸಾಧ್ಯತೆ).
ಈಗ ನಿಮ್ಮ ಆಯ್ಕೆ ಯಾವುದು?
ಪ್ರಯೋಗದ ಪ್ರಕಾರ 92% ಜನರು ಆಯ್ಕೆ 2ನ್ನು ಮಾಡಿದರು! 92% ಜನರು ಒಂದು ನಿಶ್ಚಿತ ಕಡಿಮೆ ಸೋಲಿಗೆ ಶರಣಾಗಲಿಲ್ಲ. ಅನಿಶ್ಚಿತವಾದ ಹೆಚ್ಚಿನ ಸೋಲನ್ನು ಎದುರಿಸುವ ರಿಸ್ಕ್ ತೆಗೆದುಕೊಂಡರು. ರಿಸ್ಕ್ ತೆಗೆದುಕೊಳ್ಳಲು ರೆಡಿ ಇಲ್ಲ ಎಂದ ಜನರೇ ಈಗ ಜಾಸ್ತಿ ರಿಸ್ಕ್ ತೆಗೆದುಕೊಳ್ಳುತ್ತೇವೆ, ಸದ್ಯಕ್ಕೆ ನಷ್ಟ ಬೇಡ, ಏನೂ ಕಳೆದುಕೊಳ್ಳದ ಸಾಧ್ಯತೆಯೂ 20% ಇದೆಯಲ್ಲ? ಮುಂದೆ ನೋಡೋಣ… ಎಂದರು.
ಇದು ನೋಡಿ ಪ್ರಾಬ್ಲೆಂ! ಈ ಪ್ರಯೋಗದಿಂದಾಗಿ ಮೆಜಾರಿಟಿ ಜನರು ರಿಸ್ಕ್ ತೆಗೆದುಕೊಳ್ಳಲು ಸಿದ್ಧರಿಲ್ಲ ಎಂಬ ಮಾತು ಸತ್ಯವಲ್ಲ ಎಂದು ಸಿದ್ಧವಾಯಿತು. ಬದಲಾಗಿ, ಲಾಭದ ವಿಷಯಕ್ಕೆ ರಿಸ್ಕ್ ತೆಗೆದುಕೊಳ್ಳದ ಅದೇ ಜನರು ಕಣ್ಣೆದುರಿಗೆ ಕಾಣುವ ನಷ್ಟದ ವಿಷಯಕ್ಕೆ ಬರುವಾಗ ರಿಸ್ಕ್ ತೆಗೆದುಕೊಳ್ಳಲು ಸಿದ್ಧ ಎಂಬ ಮಾತು ಸಾಬೀತಾಯಿತು. ಇದರ ಪ್ರಕಾರ ಜನರು ಖಂಡಿತವಾಗಿಯೂ ನಡೆಯುವ ವಿಷಯಕ್ಕೆ ಜಾಸ್ತಿ ಮಹತ್ವ ಕೊಟ್ಟು “ನಡೆದರೂ ನಡೆಯಬಹುದು’ ಎಂಬಂತಹ ಕೇವಲ ಸಂಭಾವ್ಯ ಘಟನೆಗಳಿಗೆ ಕಡಿಮೆ ಒತ್ತು ಕೊಡುತ್ತಾರೆ ಎಂದಾಯಿತು. ಇದನ್ನು ಕಾನ್ನೆಮನ್ ಮತ್ತು ಟೆÌಸ್ರಿ$R “ಸರ್ಟನಿಟಿ ಇಫೆಕr…’ ಎಂದು ಕರೆದರು. ಅಲ್ಲದೆ, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಲಾಭ ನಷ್ಟಗಳ ಅನಿಶ್ಚಿತತೆ ಇರುವಾಗ ಜನರು ಜಾಸ್ತಿ ಗಳಿಕೆಯ ಹಾದಿಯನ್ನು – ಅದು ರಿಸ್ಕಿಯಾದರೂ ಕೂಡ – ತುಳಿಯುತ್ತಾರೆ ಎಂದೂ ಹೇಳಿದರು. ಇದು “ಪ್ರಾಸ್ಪೆಕ್ಟ್ ಥಿಯರಿ’ ಎಂಬ ಹೆಸರಿನಿಂದ ಜನಪ್ರಿಯವಾಯಿತು.
ಇದರಿಂದಾಗಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರ ಸ್ವಭಾವವನ್ನೂ ನಡವಳಿಕೆಯನ್ನು ಅರ್ಥ ಮಾಡಿಕೊಳ್ಳಬಹುದಾಗಿದೆ:
ಮುಖ್ಯವಾಗಿ, ಹೇಳುವುದಾದರೆ 80% ಜನರು ನಿಶ್ಚಿತ ಮತ್ತು ಅನಿಶ್ಚಿತ ಪ್ರತಿಫಲವಿರುವ ಆಯ್ಕೆಗಳಿರುವಾಗ ನಿಶ್ಚಿತ ಆದಾಯದ ಹಾದಿಯನ್ನೇ ಆಯುತ್ತಾರೆ. ಉದಾಹರಣೆಗೆ, ಮೆಜಾರಿಟಿ ಜನರು ಈ ಸಲುವಾಗಿಯೇ ಶೇರುಕಟ್ಟೆಯಿಂದ ದೂರ ಸರಿದು ಈ ಎಫ್ಡಿ, ಆರ್‌ಡಿ, ಎನ್‌ಎಸ್‌ಸಿ, ಪಿಪಿಎಫ್ ಇತ್ಯಾದಿ ನಿಶ್ಚಿತ ಆದಾಯದ ಸ್ಕೀಂಗಳಲ್ಲಿ ದುಡ್ಡು ಹೂಡುತ್ತಾರೆ (ಸರ್ಟನಿಟಿ ಇಫೆಕr…). ಅಂತಹವರು ಮಾರುಕಟ್ಟೆಗೆ ಇಳಿದರೂ ಅವರು ಹೂಡಿದ ಸ್ಕ್ರಿಪ್‌ನಲ್ಲಿ ಒಂದು ಚೂರು ವೃದ್ಧಿ ಕಂಡಾಕ್ಷಣ ಅದನ್ನು ಮಾರಿ ಸಣ್ಣ ಮೊತ್ತದ ಲಾಭವನ್ನು ಕಿಸೆಗೇರಿಸುತ್ತಾರೆ. ಆ ಹೂಡಿಕೆಯ ಪೂರ್ತಿ ಲಾಭವನ್ನು ಪಡೆಯುವ ಮೊದಲೇ ನಷ್ಟಕ್ಕಂಜಿ ಅದರಿಂದ ಹೊರಬರುತ್ತಾರೆ. ಇದು ಸರ್ಟನಿಟಿಯ ಬೆನ್ನೇರಿ ಕಳಕ್ಕೆ ಇಳಿಯುವವರ ಲಕ್ಷಣ.
ಉಳಿದ 20% ಜನರು ಅನಿಶ್ಚಿತತೆಯ ಹಾದಿಯ ಶೋಧಕ್ಕೆ ಸಿದ್ಧರಾಗಿರುತ್ತಾರೆ. ಇವರುಗಳು ಷೇರು-ಗೀರು ಎಂದೆಲ್ಲ ಗೀಳು ಹಚ್ಚಿಕೊಂಡು ದುಡ್ಡನ್ನು ಪಣಕ್ಕೆ ಒಡ್ಡಿ ತಮ್ಮ ಅದೃಷ್ಟ ಪರೀಕ್ಷೆ ಮಾಡುತ್ತಾರೆ. ಆ ರೀತಿಯಲ್ಲಿ ಷೇರುಗಳಲ್ಲಿ ಡೀಲ್ ಮಾಡುವಾಗಲೂ ಕೂಡ 92% ಜನ ನಷ್ಟವನ್ನು ಎದುರಿಸಲು ಅಶಕ್ಯರಾಗಿಯೇ ಜಾಸ್ತಿ ಗಳಿಕೆಯ ಹಾದಿಯನ್ನು ಅರಸುತ್ತಲೇ ಹೆಜ್ಜೆಯಿಡುತ್ತಾರೆ (ಪ್ರಾಸ್ಪೆಕ್ಟ್ ಥಿಯರಿ). ಯಾರೋ ಒಬ್ಬ ಮಿಸ್ಟರ್ ಸಂಬಡಿ ಇದ್ದಾನೆ ಎಂದಿಟ್ಟು ಕೊಳ್ಳಿ, ಆತ 1000 ರೂಪಾಯಿಗೆ “ಕಚಟತಪ’ ಎಂಬ ಸಿನೆಮಾ ಕಂಪೆನಿಯ ಷೇರುಗಳನ್ನು ಖರೀದಿಸಿದ್ದಾನೆ ಎಂದಿಟ್ಟುಕೊಳ್ಳಿ. ಖರೀದಿಸಿದ ಮರು ದಿನದಿಂದ ಷೇರುಬೆಲೆ ಕೃಷ್ಣ ಪಕ್ಷದ ಚಂದ್ರನಂತೆ ಕ್ಷೀಣಿಸತೊಡಗುತ್ತದೆ. ಯಾವುದೇ ಸೂಚನೆಯ ಪ್ರಕಾರ ಈ ಷೇರು ಸದ್ಯಕ್ಕೆ ವಾಪಾಸು ಮೇಲೇರುವ ಸೂಚನೆ ಇರುವುದಿಲ್ಲ. ಆ ಸಂದರ್ಭದಲ್ಲಿ ಅದನ್ನು ಕೂಡಲೇ ಮಾರಿ ಖಚಿತವಾದ ನಷ್ಟವನ್ನು ಎದುರಿಸುವ ಬದಲು ನಮ್ಮ ಮಿಸ್ಟರ್ ಸಂಬಡಿ ವೈಟ್ ಮಾಡುತ್ತಾ ಹೋಗುತ್ತಾನೆ. ನಷ್ಟ ಜಾಸ್ತಿ ಯಾಗುತ್ತಾ ಹೋದರೂ ಮುಂದೊಂದು ದಿನ ಷೇರು ಪುನಃ ಏರುಮುಖವಾಗಿ (ಸಂಭಾವ್ಯ ಕಡಿಮೆಯಾದರೂ) ಲಾಭದ ಹಾದಿಗೆ ಬಂದೀತು ಎಂಬ ಆಸೆಯಿಂದ ಕಾಯುತ್ತಾನೆ. ಹೀಗೆ ಅಗತ್ಯವಿಲ್ಲದೆಡೆ ಕಾಯುವಾಗ ಜಾಸ್ತಿ, ಮತ್ತೂ ಜಾಸ್ತಿ ನಷ್ಟ ಎದುರಿಸುತ್ತಾ ಹೋಗುತ್ತಾನೆ. ಇದೇ ಪ್ರಾಸ್ಪೆಕ್ಟ್ ಥಿಯರಿಯ ಪ್ರಕಾರ ಜಾಸ್ತಿ ಗಳಿಕೆಯ ಹಾದಿ ಹುಡುಕುತ್ತಾ ಜಾಸ್ತಿ ರಿಸ್ಕ್ ತೆಗೆದುಕೊಳ್ಳುವ ಪರಿ.
ಈ ರೀತಿಯಲ್ಲಿ ಹಲವರು ತಮ್ಮ ಪೋರ್ಟ್‌ಫೋಲಿಯೋದಲ್ಲಿ ಇರುವ ಉತ್ತಮ ಷೇರುಗಳನ್ನು ಲಾಭ ಬಂದಾಕ್ಷಣ ಕೊಟ್ಟು, ಕೆಳಕ್ಕಿಳಿಯುತ್ತಿರುವ ಷೇರುಗಳನ್ನು ನಷ್ಟಕ್ಕಂಜಿ ಕೊಡದೆ ಹಾಗೆಯೇ ಇಟ್ಟು ಬಾರದಿರುವ ಲಾಭಕ್ಕಾಗಿ ಕಾಯುತ್ತಾ ಇನ್ನಷ್ಟೂ ನಷ್ಟ ಮಾಡುತ್ತಾ ಇರುತ್ತಾರೆ – ತಮ್ಮಲ್ಲಿದ್ದ ಉತ್ತಮ ತಳಿಯ ಕುದುರೆಗಳನ್ನು ಕೊಟ್ಟು ಕತ್ತೆಗಳನ್ನು ಸಾಕುತ್ತಾ ಕಾಲ ಕಳೆಯುತ್ತಾರೆ.
ನಷ್ಟ ಬೇಡವೇ ಬೇಡ ಎನ್ನುವವರು ಮಾರುಕಟ್ಟೆಗೆ ಇಳಿಯಲೇ ಬಾರದು. ಮಾರುಕಟ್ಟೆಗೆ ಇಳಿದೆವೆಂದಾದರೆ ನಷ್ಟದ ಬಗ್ಗೆ ಒಂದು ಆರೋಗ್ಯಕರ ದೃಷ್ಟಿ ಬೆಳೆಸಿಕೊಳ್ಳಬೇಕು. ಲಾಭ-ನಷ್ಟ ಎರಡನ್ನೂ ಸಮಾನವಾಗಿ ನಿಭಾಯಿಸುವ ಶಕ್ತಿ ಇರಬೇಕು. ದೊಡ್ಡ ದೊಡ್ಡ ತಪ್ಪುಗಳನ್ನು ಮಾಡದೆ, ಹಗರಣಗಳಲ್ಲಿ ಸಿಕ್ಕಿಹಾಕಿಕೊಳ್ಳದೆ ಜಾಗ್ರತೆಯಿಂದ ಹಣ ಹೂಡಿ ದೀರ್ಘಕಾಲದಲ್ಲಿ ವಾರ್ಷಿಕ 10-15% ಒಟ್ಟಾರೆ ಲಾಭ ಮಾಡಿಕೊಂಡರೂ ಸಾಕು. ಎಲ್ಲ ಸಲವೂ ಯಾರೂ ಲಾಭ ಮಾಡುವುದಿಲ್ಲ. ನಷ್ಟಕ್ಕೆ ಅಂಜಿ ಇನ್ನಷ್ಟು ನಷ್ಟ ಮಾಡಿಕೊಳ್ಳುವುದು ತರವಲ್ಲ.
ಷೇರು ಮಾರ್ಕೆಟ್ಟೊಳಗೊಂದು ಮನೆಯ ಮಾಡಿ ನಷ್ಟಕ್ಕಂಜಿದೊಡೆಂತಯ್ನಾ…?
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.