ಗುರುಗುಂಟಿರಾಯರ ಭೂಮಿ ಮಾರಾಟ ಮತ್ತು ಕ್ಯಾಪಿಟಲ್ ಗೈನ್ಸ್ ಟ್ಯಾಕ್ಸ್
Team Udayavani, Aug 7, 2017, 9:21 AM IST
ನನ್ನ ಸೈಟಿನ ಮೇಲೆ ಒಂದು ಆರ್ಟೀಸಿ ಸಿಕ್ಕಬಹುದೇ ಎಂಬ ಆಸೆಯಿಂದ ಉಡುಪಿಯ ರಿಜಿಸ್ತ್ರಿ ಆಫೀಸಿನ ಮೆಟ್ಟಲು ಹತ್ತುತ್ತಿರಬೇಕಾದರೆ ಎದುರಿನಿಂದ ಕೆಳಗಿಳಿಯುತ್ತಾ ಬರುತ್ತಿರುವ ಗುರುಗುಂಟಿರಾಯರ ಖಾಮುಖೀಯಾಯಿತು. ಮುಖಭಾವದಿಂದಲೇ ಟೆನ್ಶನ್ ಆವಾಹಿಸಿಕೊಂಡು ಉಸಿರಾಡುತ್ತಿರುವವರಂತೆ ತೋರುತ್ತಿದ್ದ ರಾಯರ ಹತ್ತಿರ ಈ ಸಂದರ್ಭದಲ್ಲಿ ಕುಶಾಲು-ಗಿಶಾಲು ಏನಾರ ಮಾಡಿದರೆ ಗ್ರಹಚಾರ ನೆಟ್ಟಗಾಗಲಿಕ್ಕಿಲ್ಲ ಎನ್ನುವುದನ್ನು ಊರಲ್ಲಿ ಯಾರಾದರೂ ನಿಮಗೆ ಹೇಳಿಯಾರು. ಹಾಗಾಗಿ ನನ್ನ ಡಿಪಿಯನ್ನು ಒಂದು ಮಟ್ಟಿನ ಸೀರಿಯಲ್ ಲುಕ್ಕಿಗೆ ಬದಲಾಯಿಸಿಕೊಂಡು “ನಮಸ್ಕಾರ ರಾಯರೆ, ಏನಿವತ್ತು ಇಲ್ಲಿ?’ ಎಂದು ಕೇಳಿದೆ. “ಓ ನಮಸ್ಕಾರ, ಒಂದು ತುಂಡು ಜಮೀನು ಸೇಲ್ ಮಾಡ್ತಾ ಇದ್ದೇನೆ. ಅದರ ರಿಜಿಸ್ಟ್ರೇಶನ್ ಕೆಲ್ಸಕ್ಕೆ ಅಲೆದಾಟ ಈಗ. ಹಾಂ! ನೀವು ಸಿಕ್ಕಿದ್ದು ಒಳ್ಳೆಯದಾಯಿತು. ಈಗ ಈ ಭೂಮಿ ಮಾರಿದ್ರಲ್ಲಿ ಸರಕಾರಕ್ಕೆ ಏನಾದ್ರು ಟ್ಯಾಕ್ಸ್-ಗೀಕ್ಸ್ ಕೊಡ್ಲಿಕ್ಕೆ ಉಂಟೋ?? ಅದನ್ನು ಸ್ವಲ್ಪ ಡಿಟೇಲ್ ಆಗಿ ವಿವರಿಸಿ ನೋಡ್ವಾ’ ಅಂತ ಒಂದು ನಂಬರ್ ಸವಾಲನ್ನು ನನ್ನತ್ತ ಎಸೆದರು.
ಹಾಗೆ ನೋಡಿದರೆ ಗುರುಗುಂಟಿರಾಯರು ಎಸೆದ ಸವಾಲು ಅಷ್ಟೊಂದು ಅಸಾಧಾರಣವಾದದ್ದೇನೂ ಅಲ್ಲ. ಬರುವ ನೂರಾರು ಇ-ಮೈಲ್‌ಗಳಲ್ಲಿ ಬಹಳಷ್ಟು ಇದೇ ವಿಷಯವನ್ನು ಒಳಗೊಂಡಿರುತ್ತವೆ. ನಮ್ಮ ದೇಶದಲ್ಲಿ ಭೂಮಿ ಅಥವಾ ಕಟ್ಟಡದಲ್ಲಿ ಹೂಡಿಕೆ ಮಾಡಿ ಆ ಬಳಿಕ ಮಾರಾಟ ಮಾಡುವುದು ಒಂದು ಜನಪ್ರಿಯವಾದ ವಿತ್ತ ಚಟುವಟಿಕೆಯೇ ಆಗಿದೆ. ಹಾಗಾಗಿ ಅದರಿಂದ ಬರುವ ಲಾಭಾಂಶದ ಮೇಲೆ ಆದಾಯ ಕರ ಯಾವ ರೀತಿಯಲ್ಲಿ ಲೆಕ್ಕ ಹಾಕಲಾಗುತ್ತದೆ ಎನ್ನುವುದು ಸ್ವಾಭಾವಿಕವಾದ ಪ್ರಶ್ನೆ. ಈಗ ಎಲ್ಲೆಡೆ ಆಧಾರ್, ಪ್ಯಾನ್ ಇತ್ಯಾದಿ ನಂಬರುಗಳನ್ನು ಜೋಡಣೆ ಮಾಡುವುದೇ ಕೆಲಸವಾದ ಕಾಲಘಟ್ಟದಲ್ಲಿ ಸರಕಾರವು ಕ್ಷಣಾರ್ಧದಲ್ಲಿ ನಿಮ್ಮ ಭೂಮಿ ಸೇಲಿನ ವಿವರವನ್ನು ಕಂಡು ಹಿಡಿಯುತ್ತದೆ. ಜುಜುಬಿ ಎಫ್ಡಿ ಬಡ್ಡಿಯ ಲೆಕ್ಕವನ್ನೇ ಹಿಡಿದು ಹಿಂಡುತ್ತಿರುವ ಆದಾಯ ಇಲಾಖೆ ಇನ್ನು ಲಕ್ಷಾಂತರ ರೂ. ಮೌಲ್ಯದ ಭೂಮಿ ವ್ಯವಹಾರದಲ್ಲಿ ನಿಮ್ಮನ್ನು ಬಿಟ್ಟಿತೇ? ಶೀಘ್ರದಲ್ಲಿ ಎಲ್ಲವೂ ಪ್ರಶ್ನಿಸಲ್ಪಡಲಿದೆ.
ತೆರಿಗೆ ಕಾನೂನಿನ ಪ್ರಕಾರ ಭೂಮಿ ಅಥವಾ ಕಟ್ಟಡದಂತಹ ಭೌತಿಕ ಆಸ್ತಿಯನ್ನು ಕ್ಯಾಪಿಟಲ್ ಎಂದು ಪರಿಗಣಿಸಲಾಗುತ್ತದೆ ಹಾಗೂ ಅದರ ಮೇಲೆ ಬರುವಂತಹ ಲಾಭಾಂಶವನ್ನು ಕ್ಯಾಪಿಟಲ್ ಗೈನ್ಸ್ ಎಂದು ಕರೆಯಲಾಗುತ್ತದೆ. ಅಂತೆಯೇ ಆ ಗೈನ್ಸ್ ಮೇಲೆ ಲಾಗೂ ಆಗುವ ತೆರಿಗೆ ಕ್ಯಾಪಿಟಲ್ ಗೈನ್ಸ್ ಟ್ಯಾಕ್ಸ್ ಅಡಿಯಲ್ಲಿ ಲೆಕ್ಕ ಹಾಕಲಾಗುತ್ತದೆ. ಇದು ಸಂಬಳ, ಪೆನÒನ್, ಬಡ್ಡಿ, ಡಿವಿಡೆಂಡ್, ಇತ್ಯಾದಿ ಸಾಮಾನ್ಯ ಆದಾಯಗಳಿಗಿಂತ ಭಿನ್ನವಾಗಿದೆ.
ಈ ರಾಯರು ಎತ್ತಿ ಹಾಕಿದ ಭೂಮಿ/ಕಟ್ಟಡಗಳ ಮೇಲಿನ ಕ್ಯಾಪಿಟಲ್ ಗೈನ್ಸ್ ಟ್ಯಾಕ್ಸ್ ಯಾವ ರೀತಿ ಕೆಲಸ ಮಾಡುತ್ತದೆ ಎನ್ನುವುದನ್ನು ಈಗ ತಿಳಿದುಕೊಳ್ಳೋಣ:
ಕೃಷಿ ಭೂಮಿ
ಮೊತ್ತ ಮೊದಲನೆಯದಾಗಿ ಕೃಷಿ ಭೂಮಿಯ ಮಾರಾಟದ ಮೇಲೆ ಯಾವುದೇ ರೀತಿಯ ಆದಾಯ ತೆರಿಗೆ ಇರುವುದಿಲ್ಲ. ಆದರೆ ಇದು ಎಲ್ಲ ರೀತಿಯ ಕೃಷಿ ಭೂಮಿಯ ಮೇಲೆ ಅನ್ವಯವಾಗುವುದಿಲ್ಲ ಎನ್ನುವುದು ಬಹಳಷ್ಟು ಜನರಿಗೆ ಅರಿವಿಲ್ಲ. ಕೇವಲ ಗ್ರಾಮೀಣ ಪ್ರದೇಶದ ಕೃಷಿ ಭೂಮಿಯ ಮೇಲೆ ಮಾತ್ರ ಈ ಶೂನ್ಯ ಕರದ ಸವಲತ್ತನ್ನು ನೀಡಲಾಗಿದೆ. ಯಾವುದು ಗ್ರಾಮೀಣ ಯಾವುದು ಟೌನ್ ಎನ್ನುವುದಕ್ಕೂ ಕಾನೂನಿನಲ್ಲಿ ಸ್ಪಷ್ಟವಾದ ಉಲ್ಲೇಖ ಇದೆ. ಈ ಕೆಳಗೆ ಕಾಣಿಸಿದ ಪ್ರದೇಶಗಳನ್ನು ಮಾತ್ರವೇ ಗ್ರಾಮೀಣ ಪ್ರದೇಶವೆಂದ ಪರಿಗಣಿಸಲಾಗುತ್ತದೆ:
1. ಹತ್ತು ಸಾವಿರಕ್ಕಿಂತ ಕಡಿಮೆ ಜನಸಂಖ್ಯೆಯುಳ್ಳ ಮುನಿಸಿಪಾಲಿಟಿ ಲಿಮಿಟಿನ ಒಳಗಿನ ಪ್ರದೇಶ.
2. ಹತ್ತು ಸಾವಿರಕ್ಕಿಂತ ಜಾಸ್ತಿ ಜನಸಂಖ್ಯೆಯುಳ್ಳ ಒಂದು ಮುನಿಸಿಪಾಲಿಟಿ ಲಿಮಿಟಿಗಿಂತ 2 ಕಿ.ಮೀ ವರೆಗಿನ ಪ್ರದೇಶ.
3. ಒಂದು ಲಕ್ಷಕ್ಕಿಂತ ಜಾಸ್ತಿ ಜನ ಸಂಖ್ಯೆಯುಳ್ಳ ಒಂದು ಮುನಿಸಿಪಾಲಿಟಿ ಸಭೆ ಲಿಮಿಟಿಗಿಂತ 6 ಕಿ.ಮೀ ವರೆಗಿನ ಪ್ರದೇಶ ಅಥವಾ,
4. ಹತ್ತು ಲಕ್ಷಕ್ಕಿಂತ ಜಾಸ್ತಿ ಜನಸಂಖ್ಯೆಯುಳ್ಳ ಮುನಿಸಿಪಾಲಿಟಿ ಲಿಮಿಟಿಗಿಂತ 8 ಕಿ.ಮೀ ವರೆಗಿನ ಪ್ರದೇಶ.
(ಇಲ್ಲಿ ಜನ ಸಂಖ್ಯೆಯನ್ನು ಹಿಂದಿನ ಅಧಿಕೃತ ಸೆನ್ಸಸ್ ಪ್ರಕಾರ ಹಾಗೂ ದೂರವನ್ನು “ಕಾಗೆ ಹಾರುವ’ ಪ್ರಕಾರ ನೇರವಾಗಿ ತೆಗೆದುಕೊಳ್ಳಬೇಕು)
ಈ ಷರತ್ತಿನ ಪ್ರಕಾರ ಬರುವ ಗ್ರಾಮೀಣ ಪ್ರದೇಶಗಳಲ್ಲಿರುವ ಕೃಷಿ ಭೂಮಿಯನ್ನು ಕರ ಕಾನೂನು ಕ್ಯಾಪಿಟಲ್ ಎಂದೇ ಪರಿಗಣಿಸುವುದಿಲ್ಲ ಮತ್ತು ಹಾಗಾಗಿ ಶೂನ್ಯ ಕ್ಯಾಪಿಟಲ್ ಗೈನ್ಸ್ ತೆರಿಗೆಗೆ ಅರ್ಹ. ಅಂದರೆ ಮೇಲ್ಕಾಣಿಸಿದ ಕಿ.ಮೀ ಪರಿಧಿಯ ಒಳಗೆ ಬರುವ ಕೃಷಿ ಭೂಮಿ ಕೂಡ ಕೃಷಿಯೇತರ ಭೂಮಿಯಂತೆಯೇ ಕ್ಯಾಪಿಟಲ್ ಗೈನ್ಸ್ ತೆರಿಗೆಯ ಬಲೆಗೆ ಸಿಲುಕುತ್ತದೆ. ಯಾವುದೇ ಪ್ರದೇಶದಲ್ಲಿರುವ ಎಲ್ಲ ಕೃಷಿಯೇತರ ಭೂಮಿಗಳು ಕ್ಯಾಪಿಟಲ್ ಗೈನ್ಸ್ ತೆರಿಗೆಯಡಿಯಲ್ಲಿ ಹೇಗೂ ಬರುತ್ತವೆ.
ಆದ್ದರಿಂದ ಪ್ರತಿಯೊಬ್ಬ ಕೃಷಿಕನೂ ತನ್ನ ಕೃಷಿ ಭೂಮಿಯನ್ನು ಆದಾಯ ತೆರಿಗೆಯ ಕಾನೂನಿನಡಿಯಲ್ಲಿ ಯಾವ ರೀತಿಯಲ್ಲಿ ನೋಡಲಾಗುತ್ತದೆ ಎನ್ನುವುದನ್ನು ಮೊತ್ತ ಮೊದಲು ಅರಿತಿರಬೇಕು. ಕೃಷಿ ಎಂದಾಕ್ಷಣ ಎಲ್ಲವೂ ಮುಕ್ತ ಎನ್ನುವ ಭಾವನೆ ಹಲವು ಕೃಷಿಕರಲ್ಲಿದೆ. ನನಗೆ ತಿಳಿದಿರುವ ಹಲವಾರು ಕೃಷಿಕರು ತಾವು ಕೃಷಿ ಆದಾಯದಿಂದ ಇಟ್ಟಿರುವ ಎಫ್.ಡಿ. ಮೇಲಿನ ಬಡ್ಡಿ ಕೂಡ ಕರಮುಕ್ತ ಎನ್ನುವ ತಪ್ಪು ಕಲ್ಪನೆಯಲ್ಲಿ ಇ¨ªಾರೆ. ಅಂತಹ ಹಲವಾರು ಜನರಿಗೆ ಈಗಾಗಲೇ ಇಲಾಖೆಯಿಂದ ನೋಟಿಸ್ ಬರಲು ಆರಂಭವಾಗಿದೆ. ಮುಂದಕ್ಕೆ ಗ್ರಾಮೀಣವಲ್ಲದ ಕೃಷಿ ಭೂಮಿ ಮಾರಾಟ ಮಾಡಿದವರಿಗೂ ಇಲಾಖೆಯಿಂದ ಲವ್ ಲೆರ್ಟ ಬರುವ ದಿನ ದೂರವಿಲ್ಲ.
ಟೌನ್ ಕೃಷಿ ಭೂಮಿ/ಕೃಷಿಯೇತರ ಭೂಮಿ/ಕಟ್ಟಡ
ಮೇಲೆ ಹೇಳಿದ ಕೃಷಿ ಭೂಮಿಯ ಹೊರತಾಗಿ ಈಗ ಉಳಿದದ್ದು ಟೌನ್ ಪ್ರದೇಶವೆಂದು ಗಣನೆಯಾಗುವ ಗ್ರಾಮೀಣವಲ್ಲದ ಕೃಷಿ ಭೂಮಿ, ಯಾವುದೇ ಪ್ರದೇಶದ ಕೃಷಿಯೇತರ ಭೂಮಿ ಮತ್ತು ಕಟ್ಟಡ. ಇವೆಲ್ಲಾ ಸ್ತಿರಾಸ್ಥಿಗಳ ಮೇಲೆ ಕ್ಯಾಪಿಟಲ್ ಗೈನ್ಸ್ ತೆರಿಗೆ ಲಾಗೂ ಆಗುತ್ತದೆ ಮತ್ತು ಆ ಲೆಕ್ಕಾಚಾರ ಈ ಕೆಳಗಿನ ಎರಡು ರೀತಿಯಲ್ಲಿ ನಡೆಯುತ್ತದೆ:
ಕ್ಯಾಪಿಟಲ್ ಗೈನ್ಸ್ ಅನ್ನು ಅಲ್ಪಕಾಲಿಕ ಮತ್ತು ದೀರ್ಘ ಕಾಲಿಕ ಎಂಬ ಎರಡು ರೀತಿಯಲ್ಲಿ ನೋಡಲಾಗುತ್ತದೆ. ಇದು ಭೂಮಿ/ಕಟ್ಟಡ ಮಾರಾಟವಾಗುವ ಹೊತ್ತಿನಲ್ಲಿ ನಿಮ್ಮ ಕೈಯಲ್ಲಿ ಎಷ್ಟು ಸಮಯ ಇತ್ತು ಎನ್ನುವುದರ ಮೇಲೆ ನಿರ್ಧಾರವಾಗುತ್ತದೆ. ಈ ಹೋಲ್ಡಿಂಗ್ ಪೀರಿಯಡ್ 2 ವರ್ಷಕ್ಕಿಂತ ಕಮ್ಮಿ ಇದ್ದರೆ ಅದು ಅಲ್ಪಕಾಲಿಕ ಹಾಗೂ 2 ವರ್ಷಕ್ಕಿಂತ ಜಾಸ್ತಿ ಇದ್ದರೆ ಅದು ದೀರ್ಘಕಾಲಿಕ. (ಕಳೆದ ವಿತ್ತ ವರ್ಷ, ಅಂದರೆ ಮಾರ್ಚ್ 31, 2017 ರವರೆಗೆ ಇದು 3 ವರ್ಷ ಇತ್ತು. 2017ರ ಬಜೆಟ್ ಪ್ರಕಾರ ಸದ್ರಿ ವರ್ಷದಿಂದ ಇದು 2 ವರ್ಷ)
ಅಲ್ಪಕಾಲಿಕ ಕ್ಯಾಪಿಟಲ್ ಗೈನ್ಸ್
ಒಬ್ಟಾತ ಒಂದು ಭೂಮಿ/ಕಟ್ಟಡವನ್ನು ಖರೀದಿಸಿ ಅದರ ಅಭಿವೃದ್ಧಿಗಾಗಿ ಸ್ವಲ್ಪ ಖರ್ಚು ಮಾಡಿ ಆಮೇಲೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಾನೆ ಎಂದಿಟ್ಟುಕೊಳ್ಳಿ. ಆವಾಗ ಅಲ್ಪಕಾಲಿಕ ಕ್ಯಾಪಿಟಲ್ ಗೈನ್ಸ್ = ಮಾರಾಟದ ಬೆಲೆ – (ಖರೀದಿ ಬೆಲೆ + ಅಭಿವೃದ್ಧಿ ವೆಚ್ಚ). ಈ ಸೂತ್ರದ ಪ್ರಕಾರ ಲಾಭಾಂಶ ಲೆಕ್ಕ ಹಾಕಿ ಅದನ್ನು ಆ ವರ್ಷದ ತಮ್ಮ ಆದಾಯಕ್ಕೆ ಸೇರಿಸಿ ತಮಗೆ ಅನ್ವಯಿಸುವ ಸ್ಲಾಬ್ ದರದಲ್ಲಿ ಯಾವತ್ತಿನಂತೆ ತೆರಿಗೆ ಕಟ್ಟಬೇಕು. ಇದಕ್ಕೆ ಪ್ರತ್ಯೇಕವಾದ ಬೇರೆ ಕ್ರಮಗಳು ಇಲ್ಲ.
ದೀರ್ಘಕಾಲಿಕ ಕ್ಯಾಪಿಟಲ್ ಗೈನ್ಸ್
2 ವರ್ಷಗಳಿಂದ ಜಾಸ್ತಿ ಅವಧಿಗೆ ಹೂಡಿಕೆಯಲ್ಲಿದ್ದಭೂಮಿ/ಕಟ್ಟಡಕ್ಕೆ ದೀರ್ಘಕಾಲಿಕ ಕ್ಯಾಪಿಟಲ್ ಗೈನ್ಸ್ ಎಂಬ ಹೆಸರಿನಲ್ಲಿ ಕೆಲ ರಿಯಾಯಿತಿಗಳು ಸಿಗುತ್ತವೆ. ಮೊತ್ತ ಮೊದಲನೆಯದಾಗಿ ಈ ತರಗತಿಯ ಕ್ಯಾಪಿಟಲ್ ಗೈನ್ಸ್‌ಗೆ ಬೆಲೆಯೇರಿಕೆಯ ಇಂಡೆಕ್ಸೇಶನ್ ಸೌಲಭ್ಯ ದೊರಕುತ್ತದೆ. ಅಂದರೆ, ಮೂಲ ಹೂಡಿಕೆ ಮತ್ತು ಅಭಿವೃದ್ಧಿ ವೆಚ್ಚಗಳೆರಡನ್ನೂ ಬೆಲೆಯೇರಿಕೆಯ ಪ್ರಮಾಣದಷ್ಟು ಎತ್ತರಿಸಿ ಉಳಿದ ಲಾಭಾಂಶಕ್ಕೆ ಮಾತ್ರ ತೆರಿಗೆ ಕಟ್ಟಿದರಾಯಿತು. ಅರ್ಥಾತ…, ನೀವು ತೆರುವ ಕರ ನೈಜ ಲಾಭದ ಮೇಲೆ ಮಾತ್ರ ಆಗಿದ್ದು ಬೆಲೆಯೇರಿಕೆಯಿಂದ ಉಂಟಾಗುವ ತೋರಿಕೆಯ ಲಾಭದ ಮೆಲೆ ಅಲ್ಲ ಎನ್ನುವುದು ಇಲ್ಲಿ ಮುಖ್ಯ.
ಇದರ ಲೆಕ್ಕವನ್ನು 2001 ತಳಹದಿಯಲ್ಲಿ ಹಾಕಲಾಗುತ್ತದೆ. 2001ನೇ ಇಸವಿಯಲ್ಲಿ ಇದ್ದ ರೂ 100 ಈಗ ಎಷ್ಟಾಗುತ್ತದೆ ಎನ್ನುವ ಲೆಕ್ಕಾಚಾರವೇ ಈ ಇಂಡೆಕ್ಸ್. (ಇದು ಈ ಮೊದಲು 1981 ಆಗಿತ್ತು) ಈ ಅಂಕಿಗಳನ್ನು ಸರಕಾರ ಇಟsಠಿ ಐnflಚಠಿಜಿಟn ಐnಛಛಿx ಅಥವಾ ಇಐಐ ಎಂದು ಪ್ರಕಟಿಸುತ್ತದೆ. ಅದನ್ನು ಹಿಡಿದುಕೊಂಡು ಮೂಲ ಹೂಡಿಕೆ ಮತ್ತು ಅಭಿವೃದ್ಧಿ ವೆಚ್ಚಗಳನ್ನು ಎತ್ತರಿಸಿ ಉಳಿದ ಭಾಗಕ್ಕೆ ಮಾತ್ರ ತೆರಿಗೆ ಕಟ್ಟಿದರೆ ಸಾಕು.
ದೀರ್ಘ ಕಾಲಿಕ ಕ್ಯಾಪಿಟಲ್ ಗೈನ್ಸ್ = ಮಾರಾಟದ ಬೆಲೆ – (ಖರೀದಿ ಬೆಲೆ ಗಿ ಇಐಐ + ಅಭಿವೃದ್ಧಿ ವೆಚ್ಚ ಗಿ ಇಐಐ)
ಇದರ ಮೇಲೆ ತೆರಿಗೆ 20% ದರದಲ್ಲಿ ಕಟ್ಟಬೇಕು. (ಬೇಸಿಕ್ ಎಕ್ಸೆಂಪ್ಷನ್ ಲಿಮಿಟ್ಟಿನಲ್ಲಿ ಅವಕಾಶವಿದ್ದರೆ ಅದರಲ್ಲಿ ಇದನ್ನು ಕಳೆದು ಉಳಿದ ಭಾಗಕ್ಕೆ ಕಟ್ಟಿದರೆ ಸಾಕು) ಕಾಪಿಟಲ್ ಗೈನ್ಸ್ ತೆರಿಗೆ ವಿನಾಯಿತಿ ಸಾಮಾನ್ಯ ಆದಾಯಕ್ಕೆ ಇರುವಂತೆ 80ಸಿ ಇನ್ನಿತರ ಸೆಕ್ಷನ್‌ಗಳ ವಿನಾಯಿತಿ (ಪಿಪಿಎಫ್, ಎನ್‌ಎಸ್‌ಸಿ, 5 ವರ್ಷದ ಎಫ್.ಡಿ, ಇಎಲ್ ಎಸ್‌ಎಸ್ ಇತ್ಯಾದಿ) ಕ್ಯಾಪಿಟಲ್ ಗೈನ್ಸ್ ಮೇಲೆ ಸಿಗುವುದಿಲ್ಲ. ಕ್ಯಾಪಿಟಲ್ ಗೈನ್ಸ್ ತೆರಿಗೆಗೆ ಪ್ರತ್ಯೇಕವಾದ ವಿನಾಯಿತಿ ಸೆಕ್ಷನ್ನುಗಳಿವೆ:
1. ಸೆಕ್ಷನ್ 54: ಒಂದು ಮನೆಯ ಮಾರಾಟದಿಂದ ದೀರ್ಘಕಾಲಿಕ ಕಾಪಿಟಲ್ ಗಳಿಕೆ ಉಂಟಾದರೆ ಅಂತಹ ಗಳಿಕೆಯನ್ನು ಇನ್ನೊಂದು ಹೊಸ ಮನೆ ಹೊಂದುವ ಸಲುವಾಗಿ ಮಾರಾಟದ 1 ವರ್ಷ ಮೊದಲು ಖರೀದಿಗಾಗಿ, 2 ವರ್ಷಗಳ ಒಳಗೆ ಖರೀದಿಗಾಗಿ ಅಥವಾ 3 ವರ್ಷಗಳ ಒಳಗೆ ನಿರ್ಮಾಣಕ್ಕಾಗಿ ಖರ್ಚು ಮಾಡಿದಲ್ಲಿ ಕಾಪಿಟಲ್ ಗಳಿಕೆ ತೆರಿಗೆಯಿಂದ ಸಂಪೂರ್ಣ ವಿನಾಯಿತಿ ಸಿಗುತ್ತದೆ. ಭಾಗಶಃ ಖರ್ಚು ಮಾಡಿದರೆ ಅಷ್ಟೇ ಭಾಗದ (pro rata) ವಿನಾಯತಿ ಸಿಗುತ್ತದೆ.
2. ಸೆಕ್ಷನ್ 54B: ಒಂದು ಗ್ರಾಮೀಣವಲ್ಲದ ಕೃಷಿ ಭೂಮಿಯನ್ನು ಮಾರಾಟ ಮಾಡಿದರೆ ಉಂಟಾಗುವ ಲಾಭಾಂಶದಿಂದ ಎರಡು ವರ್ಷಗಳೊಳಗೆ ಇನ್ನೊಂದು ಕೃಷಿ ಭೂಮಿಯನ್ನು ಖರೀಧಿ ಮಾಡಿದರೆ ಕ್ಯಾಪಿಟಲ್ ಗೈನ್ಸ್‌ನಿಂದ ಸಂಪೂರ್ಣ ಮುಕ್ತಿ ಸಿಗುತ್ತದೆ. ಮಾರಾಟವಾಗುವ ಕೃಷಿ ಭೂಮಿ ಬರೇ ಹೆಸರಿಗೆ ಮಾತ್ರ ಕೃಷಿ ಭೂಮಿಯಾಗಿರದೆ ಅದರಲ್ಲಿ ನೈಜವಾದ ಕೃಷಿ ಚಟುವಟಿಗೆ ಕನಿಷ್ಠ 2 ವರ್ಷಗಳಿಂದ ನಡೆಯುತ್ತಿದ್ದಿರಬೇಕು.
2. ಸೆಕ್ಷನ್ 54F: ಒಂದಕ್ಕಿಂತ ಜಾಸ್ತಿ ಮನೆ ಇಲ್ಲದವರು – ಮನೆಯಲ್ಲದ – ಬೇರಾವುದೇ ಕ್ಯಾಪಿಟಲ್ ಆಸ್ತಿಯನ್ನು ಮಾರಾಟ ಮಾಡಿ ಕಾಪಿಟಲ್ ಗೈನ್ಸ್ ಪಡೆದರೆ ಅಂತಹ ಇಡೀ ಮಾರಾಟದ ಮೊತ್ತವನ್ನು (ಬರೇ ಗೈನ್ಸ್ ಮಾತ್ರವಲ್ಲ) ಮೇಲೆ ಹೇಳಿದ ಕಾಲಘಟ್ಟಾನುಸಾರ ಒಂದು ಮನೆಗಾಗಿ ಖರ್ಚು ಮಾಡಿದರೆ ಅಂತಹ ಗಳಿಕೆಯೂ ಸಂಪೂರ್ಣ ಕರಮುಕ್ತ. ಅಂತಹ ಹೊಸ ಮನೆಯನ್ನು 3 ವರ್ಷಗಳ ಕಾಲಕ್ಕೆ ಮಾರಬಾರದು.
3. ಸೆಕ್ಷನ್ 54EC: ಯಾವುದೇ ಕಾಪಿಟಲ್ ಆಸ್ತಿಯ ಮಾರಾಟದ 6 ತಿಂಗಳೊಳಗೆ ಅದರ ಕಾಪಿಟಲ್ ಗಳಿಕೆಯನ್ನು ರೂರಲ್ ಇಲೆಕ್ಟ್ರಿಫಿಕೇಶನ್ ಕಾರ್ಪೋರೇಶನ್ (REC) ಅಥವ ನಾಶನಲ್ ಹೈವೆ ಅಥಾರಿಟಿಯ (NHAI) ಬಾಂಡುಗಳಲ್ಲಿ ಹೂಡಿದರೆ (ಮಿತಿ 50 ಲಕ್ಷ ವರ್ಷಕ್ಕೆ) ಅಂತಹ ಕಾಪಿಟಲ್ ಗಳಿಕೆ ಸಂಪೂರ್ಣವಾಗಿ ಕರಮುಕ್ತ. 2017 ಬಜೆಟ್ ಘೋಷಣೆ ಪ್ರಕಾರ ಈ ವರ್ಷ ಇದೇ ಮಾದರಿಯ ಬೇರೆ ಬಾಂಡುಗಳು ಬರುವ ನಿರೀಕ್ಷೆ ಇದೆ.
(ಕರ ವಿಚಾರವಾಗಿ ಇಲ್ಲಿ ಕೆಲವು ಆಸಕ್ತಿದಾಯಕ ವಿಚಾರಗಳನ್ನು ಸಂಕ್ಷಿಪ್ತವಾಗಿ ಮಾಹಿತಿ ಮತ್ತು ಚರ್ಚೆಗಾಗಿ ಎತ್ತಿಕೊಳ್ಳಲಾಗಿದೆ. ಎಷ್ಟೋ ಸೂಕ್ಷ್ಮ ವಿವರಗಳನ್ನು ಇಲ್ಲಿ ಕೊಡಲು ಸಾಧ್ಯವಾಗುವುದಿಲ್ಲ. ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ವೈಯಕ್ತಿಕ ಪರಿಸ್ಥಿತಿಯನ್ನು ನುರಿತ ಚಾರ್ಟರ್ಡ್ ಅಕೌಂಟಂಟ್ ಜತೆ ಚರ್ಚಿಸಿಯೇ ತೆಗೆದುಕೊಳ್ಳಿ. ಕೇವಲ ಒಂದು ಲೇಖನವನ್ನು ಓದಿ ಯಾವುದೇ ನಿರ್ಧಾರವನ್ನೂ ಯಾವತ್ತೂ ತೆಗೆದುಕೊಳ್ಳಬಾರದು- ಕಾಕು ಶಾಸನ ವಿಧಿಸಿದ ಎಚ್ಚರಿಕೆ)
ಜಯದೇವ ಪ್ರಸಾದ ಮೊಳೆಯಾರ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.