ವಿದ್ಯಾ ಸಾಲದ ಬಡ್ಡಿ ಲೆಕ್ಕ ಹಾಗೂ ತೆರಿಗೆ ವಿನಾಯಿತಿ
Team Udayavani, Mar 26, 2018, 5:59 PM IST
ಈ ವಾರ ಗುರುಗುಂಟಿರಾಯರಿಲ್ಲ. ಕಾಕು ಅಂಕಣದಲ್ಲಿ ರಾಯರನ್ನು ಮಾತ್ರ ಕಾಣಬಯಸುವವರು ಮುಂದೆ ಓದುವ ಅವಶ್ಯಕತೆಯೇ ಇಲ್ಲ, ನಿರಾಶೆ ಖಂಡಿತ! ಈ ವಾರ ವಿಷಯ ಗಂಭೀರ – ವಿದ್ಯಾ ಸಾಲದ ಮೇಲೆ ಬಡ್ಡಿ ಯಾವ ರೀತಿ ಲೆಕ್ಕ ಹಾಕಲಾಗುತ್ತದೆ ಮತ್ತು ಅದರ ಮೇಲೆ ಆದಾಯ ತೆರಿಗೆ ವಿನಾಯಿತಿ ಯಾವ ರೀತಿ ದೊರಕುತ್ತದೆ?
ಬಡ್ಡಿ ಲೆಕ್ಕಾಚಾರ
ವಿದ್ಯಾ ಸಾಲದ ಮೇಲೆ ಬಡ್ಡಿಯನ್ನು ಎರಡು ಹಂತದಲ್ಲಿ ವಿಧಿಸಲಾಗುತ್ತದೆ – ಮೊರಟೋರಿಯಂ ಮತ್ತು ಮರುಪಾವತಿಯ ಅವಧಿಗಳಲ್ಲಿ.
1. ಮೊರಟೋರಿಯಂ ಅವಧಿ
ವಿದ್ಯಾ ಸಾಲವನ್ನು ಬ್ಯಾಂಕುಗಳು ಏಕಗಂಟಿನಲ್ಲಿ ನೀಡುವುದಿಲ್ಲ. ದುಡ್ಡಿನ ಅಗತ್ಯ ಬಂದಂತೆ ಸೂಕ್ತ ಪುರಾವೆಯ ಎದುರು ಕಂತು ಕಂತಾಗಿ ಶಿಕ್ಷಣದ ಅವಧಿಯುದ್ದಕ್ಕೂ ಸಾಲವನ್ನು ನೀಡಲಾಗುತ್ತದೆ. ಶಿಕ್ಷಣ ಮುಗಿದು 1 ವರ್ಷದ ನಂತರ ಅಥವಾ ಕೆಲಸ ಸಿಕ್ಕಿ 6 ತಿಂಗಳ ಬಳಿಕ ಸಾಲದ ಮರುಪಾವತಿ ಆರಂಭವಾಗುತ್ತದೆ. ಅಲ್ಲಿಯವರೆಗಿನ ಪಾವತಿಪೂರ್ವ ಅವಧಿಯನ್ನು ಮೊರಟೋರಿಯಂ ಅವಧಿ ಅನ್ನುತ್ತಾರೆ. ಮೊರಟೋರಿಯಂ ಬಳಿಕವೇ ಸಾಲದ ಮರುಪಾವತಿ ಆರಂಭವಾಗುತ್ತದೆ.
ಅಂತಹ ಮೊರಟೋರಿಯಂ ಅವಧಿಯಲ್ಲಿ ಸಾಲದ ಮೇಲೆ ಸಿಂಪಲ್ ಇಂಟರೆಸ್ಟ್ ಅಥವಾ ಸರಳ ಬಡ್ಡಿ ಅನ್ವಯವಾಗುತ್ತದೆ. ಅಂದರೆ ಕಾಲಕಾಲಕ್ಕೆ ಅನ್ವಯವಾಗುವ ಬಡ್ಡಿದರವನ್ನು ನೀಡಿದ ಸಾಲ ಮೊತ್ತದ ಮೇಲೆ ಸೇರಿಸುತ್ತಾ ಹೋಗುತ್ತಾರೆ. ಇದರಲ್ಲಿ ಬಡ್ಡಿಯನ್ನು ಕಾಲಕಾಲಕ್ಕೆ ಚಕ್ರೀಕರಣ ಅಥವಾ ಕಾಂಪೌಂಡಿಂಗ್ ಮಾಡುವುದಿಲ್ಲ. ಈ ರೀತಿಯ ಸರಳ ಬಡ್ಡಿ ಕೂಡಾ ವಿದ್ಯಾ ಸಾಲದ ಹಿರಿಮೆಗಳಲ್ಲಿ ಒಂದು.
ಉದಾಹರಣೆಗಾಗಿ ಒಬ್ಬ ವಿದ್ಯಾರ್ಥಿ ರೂ. 10 ಲಕ್ಷ ಸಾಲವನ್ನು 4 ವರ್ಷಗಳಲ್ಲಿ 4 ಕಂತುಗಳಾಗಿ ತೆಗೆದುಕೊಳ್ಳುತ್ತಾನೆ. ಬಡ್ಡಿ ದರ ಶೆ.13 ಇದೆ ಎಂದಿಟ್ಟುಕೊಳ್ಳಿ. 5ನೆಯ ವರ್ಷದ ಅಂತ್ಯದವರೆಗೆ ಈತನ ಮೊರಟೋರಿಯಂ ಅವಧಿ ನಡೆಯುತ್ತದೆ. ಈ ಒಟ್ಟು 5 ವರ್ಷಗಳಲ್ಲಿ ಈತನ ಸಾಲದ ಮೇಲಿನ ಸರಳ ಬಡ್ಡಿ ಮತ್ತು ಒಟ್ಟು ಮೊತ್ತವನ್ನು ಈ ರೀತಿ ಲೆಕ್ಕ ಹಾಕಲಾಗುತ್ತದೆ:
ಮೊರಟೋರಿಯಂ ಅವಧಿಯಲ್ಲಿ ಸರಳ ಬಡ್ಡಿ (ರೂಪಾಯಿಗಳಲ್ಲಿ)
ಈ ಲೆಕ್ಕಾಚಾರದ ಮೇರೆಗೆ ರೂ. 10 ಲಕ್ಷ ಎಂದು ಯೋಚಿಸಿ ತೆಗೆದುಕೊಂಡ ಸಾಲ 5 ವರ್ಷದ ಕೊನೆಗೆ ರೂ 14.55 ಲಕ್ಷ ಆಗುತ್ತದೆ!ಹಲವಾರು ಜನರು ಇದನ್ನು ನೋಡಿ ಹೌಹಾರುತ್ತಾರೆ. ಸಾಲದ ಅವಧಿಯಲ್ಲೂ ಬಡ್ಡಿ ಇದೆ ಎನ್ನುವ ಕಲ್ಪನೆ ಅವರಿಗೆ ಇರುವುದಿಲ್ಲ. ಸಾಲದ ಅವಧಿಯಲ್ಲಿ ಬಡ್ಡಿ ಕಟ್ಟುವ ಅಗತ್ಯವಿಲ್ಲ ಎನ್ನುವುದೇನೋ ನಿಜ, ಆದರೆ ಬಡ್ಡಿಯೇ ಇಲ್ಲ ಎಂದು ಎಲ್ಲೂ ಹೇಳಿಲ್ಲ; ಹೇಳಲು ಸಾಧ್ಯವೂ ಇಲ್ಲ ಅಲ್ಲವೇ? ಆದರೂ ಜನಸಾಮಾನ್ಯರು ವಿದ್ಯಾಭ್ಯಾಸದ ಅವಧಿಯಲ್ಲಿ ಬಡ್ಡಿಯೇ ಇಲ್ಲ ಎನ್ನುವ ಭ್ರಮೆಯಲ್ಲಿ ಇರುತ್ತಾರೆ. ಬಡ್ಡಿ ಇದ್ದರೂ ಅದು ಇಷ್ಟೆಲ್ಲಾ ಆಗುತ್ತದೆ ಎನ್ನುವ ಕಲ್ಪನೆ ಇರುವುದಿಲ್ಲ. ಆ ಮೇಲೆ ಬ್ಯಾಂಕನ್ನು ಹತ್ತು ಲಕ್ಷದ ಸಾಲ ಹದಿನಾಲ್ಕೂವರೆ ಹೇಗಾಯಿತು ಎಂದು ಹಳಿಯುತ್ತಾರೆ. ಆದರೆ ಇಂತಹ ಘೋರ ಪರಿಣಾಮವನ್ನು ತಪ್ಪಿಸಿಕೊಳ್ಳಲು ಸಾಲದ ಅವಧಿಯುದ್ದಕ್ಕೂ ಬಡ್ಡಿ ಕಟ್ಟುವ ಆಯ್ಕೆಯೂ ಸಾಲಗಾರನಿಗೆ ಇರುತ್ತದೆ. ಅಷ್ಟೇ ಏಕೆ, ಸಾಲದ ಅವಧಿಯುದ್ದಕ್ಕೂ ಬಡ್ಡಿ ಕಟ್ಟುವವರಿಗೆ ಬ್ಯಾಂಕು ಶೇ. 1 ರಿಯಾಯಿತಿಯನ್ನೂ ನೀಡುತ್ತದೆ. (ಮೇಲಿನ ಉದಾಹರಣೆಯಲ್ಲಿ ಶೇ.13 ಬದಲು ಶೇ.12 ಲೆಕ್ಕದಲ್ಲಿ ಬಡ್ಡಿಕಟ್ಟಿದರೆ ಸಾಕು) ಆ ರೀತಿ ಬಡ್ಡಿಯನ್ನು ಕಟ್ಟುತ್ತಾ ಹೋಗುವವರಿಗೆ ಕಡಿಮೆ ಬಡ್ಡಿಯ ಲಾಭವೂ ದೊರಕುತ್ತದೆ, ಸಾಲದ ಮೊತ್ತ ಅನಾವಶ್ಯಕ ವೃದ್ಧಿಯಾಗುವ ಭಯವೂ ಇರುವುದಿಲ್ಲ. ಕಾಲಕಾಲಕ್ಕೆ ಸಾಲದ ಅವಧಿಯುದ್ದಕ್ಕೂ ಬಡ್ಡಿ ಕಟ್ಟುವವರಿಗೆ ತನ್ನ ಸಾಲವು ಮೂಲಮೊತ್ತದಲ್ಲಿಯೇ ಉಳಿಯುತ್ತದೆ.
2. ಮರುಪಾವತಿಯ ಅವಧಿ
ಒಮ್ಮೆ ಈ ರೀತಿ ಪೇರಿಸಲ್ಪಟ್ಟ ಸಾಲದ ಮೊತ್ತವನ್ನು ಮೊರಟೋರಿಯಂ ಅವಧಿ ಮುಗಿದಾಕ್ಷಣ ಆ ಸಮಯಕ್ಕೆ ಅನ್ವಯವಾಗುವ ಬಡ್ಡಿದರದಲ್ಲಿ EMI ಆಗಿ ಪರಿವರ್ತಿಸುತ್ತಾರೆ. ಈಗ ಮಾಸಿಕ ಮರುಪಾವತಿ ಆರಂಭ.
EMI ಎಂದರೆ ಈಕ್ವೇಟೆಡ್ ಮಂತ್ಲಿ ಇನ್‌ಸ್ಟಾಲ್‌ಮೆಂಟ್. ಅಂದರೆ ಇಡೀ ಸಾಲದ ಮೊತ್ತವನ್ನು ಮತ್ತು ಅದರ ಮೇಲೆ ಬರುವ ಪೂರ್ತಿ ಅವಧಿಯ ಬಡ್ಡಿಯನ್ನು ಒಟ್ಟು ಸೇರಿಸಿ ಅದನ್ನು ಸಮಾನ ಮಾಸಿಕ ಕಂತುಗಳಾಗಿ ಭಾಗಿಸುವುದು. ಇದರ ಗಣಿತಸೂತ್ರ ತುಸು ಕಠಿಣವಾಗಿದೆ ಆದರೆ ಯಾವುದೇ ಆನ್‌ಲೈನ್ ಕ್ಯಾಲ್ಕುಲೇಟರ್ ಇದನ್ನು ಸುಲಭವಾಗಿ ಮಾಡಿಕೊಡುತ್ತದೆ. ಮೂಲ ಮೊತ್ತ, ಬಡ್ಡಿ ದರ ಹಾಗೂ ಪಾವತಿಯ ಅವಧಿಯನ್ನು ನೀಡಿದರೆ ಅದು EMI ಕಂತುಗಳನ್ನು ಲೆಕ್ಕ ಹಾಕಿ ಕೊಡುತ್ತದೆ.
EMI ಲೆಕ್ಕಾಚಾರ ಒಂದು ಸಿದ್ಧ ಮಾದರಿ ಹಾಗೂ ಇದು ಬ್ಯಾಂಕಿನಿಂದ ಬ್ಯಾಂಕಿಗೆ ಬದಲಾಗುವುದಿಲ್ಲ. ಯಾರು ಬೇಕಾದರೂ ಈ ಲೆಕ್ಕವನ್ನು ಪರಿಶೀಲಿಸಿ ನೋಡಬಹುದು; ಎಲ್ಲರಿಗೂ ಒಂದೇ ಅಂಕಿ/ಅಂಶ ದೊರಕುತ್ತದೆ. ಹಲವರು ಅನಾವಶ್ಯಕ ಬ್ಯಾಂಕಿನವರ ಮೇಲೆ EMI ಸರಿ ಇಲ್ಲ, ಮೋಸ ಮಾಡುತ್ತಾರೆ ಎಂಬ ಆರೋಪ ಹೊರಿಸುತ್ತಾರೆ. ಈ ಕೆಳಗಿನ ಟೇಬಲ್ ಪ್ರತಿ ವರ್ಷ ಯಾವ ರೀತಿ ಒಟ್ಟು EMI ಲೆಕ್ಕ ಹಾಕಲಾಗುತ್ತದೆ ಎಂದು ತೋರಿಸುತ್ತದೆ.
EMI ಲೆಕ್ಕಾಚಾರ (ರೂಪಾಯಿಗಳಲ್ಲಿ)
ಇಲ್ಲಿ ನಾವು EMI ಕಂತು ಸಮಾನವಾಗಿ ಇರುವುದನ್ನು ಗಮನಿಸಬಹುದು. ಆದರೆ ಪ್ರತೀ EMI ಕಂತಿನಲ್ಲಿ ಅಸಲು ಮತ್ತು ಬಡ್ಡಿಯ ಭಾಗ ಏರಿಳಿಯುವುದನ್ನು ಕಾಣಬಹುದು. ಮೊದ ಮೊದಲು ಬಡ್ಡಿಯ ಭಾಗ ಜಾಸ್ತಿಯಿದ್ದರೆ ಅಸಲು ಭಾಗ ಕಡಿಮೆಯಿರುತ್ತದೆ ಆದರೆ ಕ್ರಮೇಣ ಅಸಲು ಭಾಗ ಜಾಸ್ತಿಯಾಗಿ ಬಡ್ಡಿಯ ಭಾಗ ಕಡಿಮೆಯಾಗುತ್ತದೆ. ಪ್ರತಿ ಮಾಸವೂ ಸಮಾನವಾದ ಪಾವತಿಯ ಹೊರೆ ಬರುವಂತೆ ಈ ಪದ್ಧತಿಯನ್ನು ಗ್ರಾಹಕರ ಹಿತದೃಷ್ಟಿಯಿಂದ ನಿಯೋಜಿಸಲಾಗಿದೆ. ಪ್ರತಿ ವರ್ಷವೂ ಬ್ಯಾಂಕು ತನ್ನ ಸಾಲಗಾರರಿಗೆ ಅಸಲು ಮತ್ತು ಬಡ್ಡಿ ಮೊತ್ತವನ್ನು ಪ್ರತ್ಯೇಕವಾಗಿ ತೋರಿಸಿ ತನ್ನ ಸ್ಟೇಟ್ಮೆಂಟ್ ನೀಡುತ್ತದೆ. ಇದು ಸೂಕ್ತ ರೀತಿಯಲ್ಲಿ ಆದಾಯ ತೆರಿಗೆಯ ಲಾಭ ಪಡೆಯುವುದರಲ್ಲಿ ಸಹಕಾರಿಯಾಗುತ್ತದೆ.
ಕರ ವಿನಾಯತಿ
ಗೃಹ ಸಾಲದಂತೆಯೇ ವಿದ್ಯಾಸಾಲದಲ್ಲೂ ಆದಾಯ ಕರ ವಿನಾಯಿತಿ ಇದೆ. ಸೆಕ್ಷನ್ 80E ಅನುಸಾರ ಒಬ್ಟಾತ ವಿದ್ಯಾ ಸಾಲದ ಮೇಲೆ ಕಟ್ಟುವ ಬಡ್ಡಿಯಂಶವನ್ನು ಯಾವುದೇ ಮಿತಿಯಿಲ್ಲದೆ ನೇರವಾಗಿ ಆ ವರ್ಷದ ಆದಾಯದಿಂದ ಕಳೆಯಬಹುದಾಗಿದೆ. ಹಾಗಾಗಿ ಪ್ರತಿಯೊಬ್ಬರಿಗೂ ತಮ್ಮ ಸ್ಲಾಬ್ ಅನುಸಾರ ಆದಾಯ ತೆರಿಗೆಯಲ್ಲಿ ರಿಯಾಯಿತಿ ದೊರಕೀತು. ಈ ರೀತಿ ಕರಲಾಭವನ್ನು ಒಟ್ಟು 8 ವರ್ಷಗಳ ಕಾಲ ಮಾತ್ರ ಪಡೆಯಬಹುದಾಗಿದೆ. ಸಾಲದ ಮರುಪಾವತಿ 8 ವರ್ಷಕ್ಕಿಂತ ಜಾಸ್ತಿಯಿದ್ದರೂ ಕರಲಾಭ ಕೇವಲ 8 ವರ್ಷಕ್ಕೆ ಮಾತ್ರ ಸೀಮಿತವಾಗಿದೆ ಎಂಬುದು ನೆನಪಿರಲಿ. ಅಂದರೆ ಬಡ್ಡಿಯ ಮೊತ್ತವನ್ನು ಆದಾಯದಿಂದ ನೇರವಾಗಿ ಕಳೆಯುವುದು ಅಂದರೆ, ಕರಾರ್ಹರಲ್ಲದವರಿಗೆ ಯಾವುದೇ ಕರಲಾಭ ಸಿಗಲಿಕ್ಕಿಲ್ಲ. ಆ ಬಳಿಕ ಶೇ.5, ಶೇ.20 ಹಾಗೂ ಶೇ.30 ತೆರಿಗೆ ಸ್ಲ್ಯಾಬ್ ನಲ್ಲಿರುವವರಿಗೆ ಅದೇ ಕ್ರಮಾನುಸಾರ ತೆರಿಗೆಯಲ್ಲಿ ಉಳಿತಾಯ ಸಿಗಬಹುದು.
ಆದರೆ ಇದರಲ್ಲಿ ಕಟ್ಟುವ ಅಸಲಿನ ಭಾಗಕ್ಕೆ ಯಾವುದೇ ಸೆಕ್ಷನ್‌ನಲ್ಲಿ ಯಾವುದೇ ತೆರಿಗೆ ವಿನಾಯಿತಿ ಇರುವುದಿಲ್ಲ. ವಿನಾಯಿತಿ ಸಿಗುವುದು ಬಡ್ಡಿಗೆ ಮಾತ್ರ ಎಂಬುದು ನೆನಪಿರಲಿ. ಬ್ಯಾಂಕಿಗೆ ಮರುಪಾವತಿ ಮಾಡುವ EMI ಮೊತ್ತ ಅಸಲು ಹಾಗೂ ಬಡ್ಡಿ ಎರಡನ್ನೂ ಹೊಂದಿರುತ್ತವೆ. EMI ಕಂತಿನ ಅಸಲು ಮತ್ತು ಬಡ್ಡಿಯನ್ನು ಪ್ರತ್ಯೇಕವಾಗಿ ಬ್ಯಾಂಕು ತನ್ನ ಹೇಳಿಕೆಯಲ್ಲಿ ನಮೂದಿಸುತ್ತದೆ.
ಅಲ್ಲದೆ ಈ ಸೌಲಭ್ಯವನ್ನು ಜನಪ್ರಿಯ ಸೆಕ್ಷನ್ 80ಸಿ ಜೊತೆ ಗೊಂದಲ ಮಾಡಿಕೊಳ್ಳಬೇಡಿ. (80ಸಿಯಲ್ಲಿ 1 ಲಕ್ಷದವರೆಗೆ ಹಲವು ಹೂಡಿಕೆಗಳಲ್ಲಿ ಹಾಕಿದ ಹಣವನ್ನು ಆದಾಯದಿಂದ ನೇರವಾಗಿ ಕಳೆಯಬಹುದಾಗಿದೆ. ಉದಾ, ಜೀವ ವಿಮೆ, PPF, ELSS) ವಿದ್ಯಾ ಸಾಲದಲ್ಲಿ ಕಟ್ಟುವ ಬಡ್ಡಿಯ ಮೊತ್ತವನ್ನು ಯಾವುದೇ ಮಿತಿಯಿಲ್ಲದೆ ಆದಾಯದಿಂದ ನೇರವಾಗಿ ಕಳೆಯ ಬಹುದಾಗಿದೆ. ವಿದ್ಯಾ ಸಾಲದ 80ಇ ಸೆಕ್ಷನ್ 80ಸಿ ಸೆಕ್ಷನ್‌ನಿಂದ ಸಂಪೂರ್ಣವಾಗಿ ಹೊರತಾಗಿದೆ. ಇವೆರಡೂ ಸೌಲಭ್ಯಗಳು ಬೇರೆ ಬೇರೆ ಹಾಗೂ ಇವೆರಡನ್ನೂ ಒಟ್ಟಿಗೇ ಪಡೆಯಬಹುದು.
ಉದಾಹರಣೆಗಾಗಿ, ಒಬ್ಬಾತ ರೂ. 10 ಲಕ್ಷದ ವಿದ್ಯಾಸಾಲ ತೆಗೆದುಕೊಂಡನೆಂದು ಇಟ್ಟುಕೊಳ್ಳಿ. 4 ವರ್ಷದ ಕಲಿಕೆಯ ಬಳಿಕ ಆತನ ಮರುಪಾವತಿ ಒಟ್ಟು 10 ವರ್ಷಗಳ ಇಎಂಐ ಮೂಲಕ ನಡೆಯುತ್ತದೆ ಎಂದಿಟ್ಟುಕೊಳ್ಳಿ. ಆತನ ಲೋನ್ ಖಾತೆ, EMI ಮತ್ತು ಕರ ವಿನಾಯತಿಯ ಲಾಭ ಈ ಕೆಳಗಿನ ಟೇಬಲ್ ನಲ್ಲಿ ಕೊಡಲಾಗಿದೆ. ಇಲ್ಲಿ ಆದಾಯ ತೆರಿಗೆ ಸ್ಲಾಬ್ ಅನುಸಾರ ಶೇ.5, ಶೇ.20 ಅಥವಾ ಶೇ.30 ಲೆಕ್ಕದಲ್ಲಿ ಉಳಿತಾಯವಾಗುತ್ತದೆ.
ಯಾರಿಗೆ ಕರ ವಿನಾಯತಿ?
ಕರ ನೀತಿಯ ಪ್ರಕಾರ ಯಾರು ಈ ವಿನಾಯಿತಿಯನ್ನು ಪಡಕೊಳ್ಳಬಹುದು ಎಂಬುದಕ್ಕೆ ಅದರದ್ದೇ ಆದ ವ್ಯಾಖ್ಯೆ ಇದೆ. ಕರ ನೀತಿ ಪ್ರಕಾರ ಯಾರ ಹೆಸರಿನಲ್ಲಿ ಸಾಲವಿದೆಯೋ ಆ ವ್ಯಕ್ತಿ ಮಾತ್ರ ಆದಾಯ ಕರ ವಿನಾಯಿತಿಯನ್ನು ಪಡಕೊಳ್ಳಬಹುದು. ಆದರೆ ಬ್ಯಾಂಕುಗಳ ಕಾನೂನು ಪ್ರಕಾರ ಒಬ್ಬ ವ್ಯಕ್ತಿ ತನ್ನ ಪತ್ನಿ/ಪತಿ ಅಥವಾ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಮಾತ್ರ ಸಾಲ ಪಡೆಯಬಹುದಾಗಿದೆ. ಅಂದರೆ ವಿದ್ಯಾಸಾಲವನ್ನು ವಿದ್ಯಾರ್ಥಿಯೂ ಪಡೆಯಬಹುದು, ಆತನ ಹೆತ್ತವರೂ ಪಡೆಯಬಹುದು. ಆದರೂ, ತೆರಿಗೆಯ ಲಾಭವನ್ನು ನೋಡಿಕೊಂಡು ವಿದ್ಯಾರ್ಥಿ ಹಾಗೂ ಹೆತ್ತವರೊಳಗೆ ಮನೆಯಲ್ಲಿ ಯಾರಿಗೆ ಭವಿಷ್ಯತ್ತಿನಲ್ಲಿ ಆದಾಯ ವಿನಾಯಿತಿಯ ಅಗತ್ಯ ಬೀಳುವುದೋ ಆತನೇ ಸಾಲಕ್ಕೆ ಅರ್ಜಿ ಹಾಕುವುದು ಉತ್ತಮ. ಇದರ ಅರಿವಿಲ್ಲದೆ ಆ ಸಮಯಕ್ಕೆ ತೋಚಿದಂತೆ ಅರ್ಜಿ ಹಾಕಿ ಬಳಿಕ ಅಗತ್ಯವಿದ್ದವರಿಗೆ ತೆರಿಗೆ ವಿನಾಯಿತಿ ಸಿಗದೆ ತೊಂದರೆಗೀಡಾದವರು ಹಲವರಿದ್ದಾರೆ. ಹೆತ್ತವರ ಹೆಸರಿನಲ್ಲಿ ಮಕ್ಕಳಿಗಾಗಿ ಸಾಲ ಪಡಕೊಂಡರೆ ಮರುಪಾವತಿಯ ಸಮಯದಲ್ಲಿ ಹೆತ್ತವರಿಗೆ ಮಾತ್ರವೇ ಆದಾಯ ತೆರಿಗೆಯ ಲಾಭ ಸಿಕ್ಕೀತು.
— ಜಯದೇವ ಪ್ರಸಾದ ಮೊಳೆಯಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MUDA Scam: ಕೇಸ್ ವಾಪಸ್‌ಗೆ ಹಣದ ಆಮಿಷ? ಸ್ನೇಹಮಯಿ ಕೃಷ್ಣ ಲೋಕಾಯುಕ್ತಕ್ಕೆ ದೂರು
Priyank Kharge: ಎಲ್ಲವನ್ನೂ ನ್ಯಾಯಾಂಗವೇ ಮಾಡೋದಾದ್ರೆ ಶಾಸಕಾಂಗ ಏಕೆ?
Krishna Byre Gowda: 16.5 ಸಾವಿರ ಗ್ರಾಮಗಳು ಈಗ ಪೋಡಿ ಮುಕ್ತ
Karnataka: ಶಕ್ತಿ ಯೋಜನೆ ಬಳಿಕ ನಿತ್ಯ ಪ್ರಯಾಣಿಕರ ಸಂಖ್ಯೆ 23 ಲಕ್ಷ ಏರಿಕೆ
ಮಾಜಿ ಸೈನಿಕರಿಗೆ ಭೂಮಿ ಬದಲು ಬಡಾವಣೆ: ಸಚಿವ ಕೃಷ್ಣ ಬೈರೇಗೌಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.