ಟ್ಯಾಕ್ಸಾಫೀಸಿನಿಂದ ಬರುವ ಲವ್ ಲೆಟರುಗಳು
Team Udayavani, Aug 27, 2018, 6:00 AM IST
ನೋಟೀಸು ಬಂದ ಮರುದಿನ ಪೋಲೀಸರು ಅರೆಸ್ಟ್ ಮಾಡಿ ವಿಚಾರಣೆಯಿಲ್ಲದೆ ಜೈಲಿಗೆ ದೂಡುವುದಿಲ್ಲ.ಕಾನೂನಿನಡಿಯಲ್ಲಿ ನೊಟೀಸಿಗೆ ಉತ್ತರಿಸಲು ಸಾಕಷ್ಟು ಅವಕಾಶ ನೀಡಲಾಗುತ್ತದೆ. ಕಾನೂನು ಪರಿಧಿಯ ಒಳಗೆಯೇ ಅಸೆಸೆ¾ಂಟ್ ನಡೆಯುತ್ತದೆ. ಅದನ್ನು ಒಪ್ಪುವ ಬಿಡುವ, ಕಾನೂನು ಹೋರಾಟ ನಡೆಸುವ ಹಕ್ಕು ನಿಮಗಿದೆ.
ಟ್ಯಾಕ್ಸಾಫೀಸು ಎಂಬ ಹೆಸರು ಕೇಳುತ್ತಲೇ ತರಗೆಲೆಯಂತೆ ಥರಥರ ನಡುಗುವವರ ಸಂಖ್ಯೆ ಕಡಿಮೆಯೇನಿಲ್ಲ. ಎಷ್ಟೋ ಜನ ಅದೊಂದು ಟೆರರಿಸ್ಟ್ ಕ್ಯಾಂಪೇ ಹೌದು ಎನ್ನುವ ರೇಂಜಿಗೆ ಅವರ ಸಹವಾಸವೇ ಬೇಡಪ್ಪಾ ಎನ್ನುತ್ತಾ ತಮ್ಮ ವಾರ್ಷಿಕ ರಿಟರ್ನ್ ಫೈಲಿಂಗ್ ಮಾಡುವುದಕ್ಕೂ ಹೆದರುತ್ತಾರೆ. ಇನ್ನು ಟ್ಯಾಕ್ಸಾಫೀಸಿನಿಂದ ಯಾವುದಾದರು ನೋಟೀಸು ಬಂದರಂತೂ ಅವರ ಪರಿಸ್ಥಿತಿ ಹೇಳತೀರದು. ಏಕªಂ ಬಿಪಿ ರೈಸಾಗಿಸಿಕೊಂಡು, ಹೆಂಡತಿ ಮಕ್ಕಳ ಮೇಲೆ ಎಗರಾಡಿಕೊಂಡು, ಅನಗತ್ಯ ಟೆನ್ಶನ್ ಏರಿಸಿಕೊಂಡು, ಉರಿ ಮುಸುಡಿ ಹೊತ್ತುಕೊಂಡು ಊರೆಲ್ಲಾ ಸುತ್ತಾಡುತ್ತಾರೆ.
ಇದೊಂದು ರೀತಿ ಹಾವಿನ ಬಗ್ಗೆ ಹೆದರಿಕೆ ಹುಟ್ಟುವ ಹಾಗೆ. ಬಾಲ್ಯದಲ್ಲಿ ಹಾವು ಕಚ್ಚಿ ಜನ ಸಾಯುವ ವಿಚಾರವನ್ನು ಬೇಕಾಬಿಟ್ಟಿ ಉದುರಿಸಿ ನಮ್ಮ ಮನಸ್ಸಿನಲ್ಲಿ ಒಂದು ನಮೂನಿ ಭೀತಿ ಹುಟ್ಟಿಸ ಲಾಗುತ್ತದೆ. ಆದರೆ ಅಸಲಿನಲ್ಲಿ ಎಲ್ಲಾ ಹಾವುಗಳು ವಿಷಕಾರಿಯಲ್ಲ. ವಿಷಕಾರಿಯಾದವುಗಳು ಕೂಡಾ ವಿನಾ ಕಾರಣ ಬಂದು ನಮ್ಮನ್ನು ಕಚ್ಚುವುದಿಲ್ಲ. ಆದರೆ ಏನು ಮಾಡುವುದು. ಆ ಭೀತಿ ನಮ್ಮ ಮನದಲ್ಲಿ ಮನೆ ಮಾಡಿರುತ್ತದೆ; ತಲೆಯಲ್ಲಿ ಹುತ್ತ ಕಟ್ಟಿರುತ್ತದೆ. ಅಸಲಿಗೆ ಅದು ನಮ್ಮ ಸಮಸ್ಯೆ. ಅದೇ ರೀತಿ ಈ ಆದಾಯ ತೆರಿಗೆ ಇಲಾಖೆಯ ನೋಟೀಸು ಅಂದಾಕ್ಷಣ ಹಲವರ ಗುಂಡಿಗೆಯಲ್ಲಿ ಅವಲಕ್ಕಿ ಕುಟ್ಟಲು ಆರಂಭವಾಗುತ್ತದೆ; ಬಾಯಿ ಪಸೆ ಆರುತ್ತದೆ.
ಹೌದು. ಯಾರಿಗೆ ಬೇಕು ಸ್ವಾಮೀ, ಈ ಇಂಕಂ ಟ್ಯಾಕ್ಸ್ ನೋಟಿಸು ಹಾವಳಿ? ಯಾವಾದ್ರೂ ಆಗಬಹುದು ಆದ್ರೆ ಈ ಟ್ಯಾಕ್ಸ್ ಡಿಪಾರ್ಟ್‌ಮೆಂಟಿನ ಸಹವಾಸ ಮಾತ್ರ ಬೇಡ ಎಂದು ಕಂಗಾಲಾಗುವವರ ಲೆಕ್ಕವಿಲ್ಲ. ಅಂತಹ ಅಸಂಖ್ಯಾತರ ಪಟ್ಟಿಯಲ್ಲಿ ನಿಮ್ಮ ಹೆಸರೂ ಇರಬಹುದೇನೋ? ಹಾಗಿದ್ದಲ್ಲಿ, ಈ ಕೆಳಗಿನ ಟ್ಯಾಕ್ಸ್ ನೊಟೀಸುಗಳ ಸೆಕ್ಷನ್ ಪಟ್ಟಿಯನ್ನು ಒಮ್ಮೆ ಅವಲೋಕಿಸುವುದು ಒಳಿತು. ರಿಟರ್ನ್ ಫೈಲಿಂಗ್ ಮಾಡಿ ಸ್ವಲ್ಪವೇ ದಿನಗಳಲ್ಲಿ ನಿಮಗೆ ಅಸೆಸೆ¾ಂಟ್ ಹೆಸರಿನಲ್ಲಿ ಈ ಕೆಳಗಿನ ನೋಟಿಸುಗಳಲ್ಲೊಂದು ಬರಬಹುದು. ಕಳೆದ 2-3 ತಿಂಗಳುಗಳಿಂದ ರಿಟರ್ನ್ ಫೈಲಿಂಗ್ ಮಾಡುತ್ತಿರುವವರಿಗೆಲ್ಲಾ ಈ ಕೆಳಗಿನ ಒಂದಾದರೂ ಲವ್ ಲೆಟರ್ ಬಂದಿರಲೇ ಬೇಕು. ಈ ರೀತಿಯಲ್ಲಿ ನೊಟೀಸು ಬಂದೊಡನೆ ಹೆದರದಿರಿ. ಎಲ್ಲಾ ಹಾವುಗಳೂ ವಿಷಪೂರಿತವಲ್ಲ, ನೆನಪಿರಲಿ.
ಸೆಕ್ಷನ್ 139(9)- ಡಿಫೆಕ್ಟಿವ್ ರಿಟರ್ನ್
ನೀವು ಫೈಲಿಂಗ್ ಮಾಡಿದ ಹೇಳಿಕೆಯನ್ನು ಪರಿಶೀಲನೆ ಮಾಡುವಾಗ ಒಂದಕ್ಕೊಂದು ತಾಳೆಯಾಗದ ಅಂಶಗಳು ಬೆಳಕಿಗೆ ಬಂದರೆ ಅಂತಹ ತಪ್ಪುಗಳನ್ನು ಸರಿಪಡಿಸಿ ಇನ್ನೊಮ್ಮೆ ಸರಿಯಾಗಿ ನಿಖರವಾದ ಮಾಹಿತಿಯೊಂದಿಗೆ ಫೈಲಿಂಗ್ ಮಾಡಿರಿ ಎನ್ನುವ ನೊಟೀಸು ಇದು. ನೀವು ತಪ್ಪಾದ ಫಾರ್ಮ್ ನಮೂನೆಯನ್ನು ಬಳಸಿರಬಹುದು ಉದಾ: ಐಟಿಆರ್-2 ಬದಲು ಐಟಿಆರ್-1. ನಿಮ್ಮ ಹೆಸರು ಪ್ಯಾನ್ ಕಾರ್ಡ್ ಮತ್ತು ರಿಟರ್ನ್ ಫೈಲಿಂಗಿನಲ್ಲಿ ತಾಳೆಯಾಗದೆ ಇರಬಹುದು, ಅಥವಾ ಇನ್ಯಾವುದೇ ಅಂಕಿ ಅಂಶಗಳು ತಪ್ಪಾಗಿ ಘೋಷಣೆಯಾಗಿರಬಹುದು. ಇಂತಹ ತಪ್ಪುಗಳನ್ನು ಇಲಾಖೆಯ ಕಂಪ್ಯೂಟರ್ ಕಂಡು ಹಿಡಿದಾಗ ಅದು ನಿಮಗೆ ಸೆಕ್ಷನ್ 139(9) ನಿಮ್ಮ ತಪ್ಪನ್ನು ಸರಿಪಡಿಸಲು ಆದೇಶಿಸಿ ನೋಟೀಸು ಜಾರಿ ಮಾಡಬಹುದು.
ಈ ನೋಟೀಸನ್ನು ಕರ ಇಲಾಖೆಯು ಯಾವತ್ತಾದರೂ ಜಾರಿ ಮಾಡಬಹುದು. ಆದರೆ ನೀವು ಇಂತಹ ನೋಟೀಸು ಜಾರಿಯಾದ 15 ದಿನಗಳ ಒಳಗಾಗಿ ಅದಕ್ಕೆ ಸೂಕ್ತ ರೂಪದಲ್ಲಿ ಉತ್ತರಿಸಲೇ ಬೇಕು. ಕರ ಇಲಾಖೆ ನೀಡಿದ ಯಾವುದೇ ನೋಟೀಸನ್ನು ನಜರ್ ಅಂದಾಜ್ ಮಾಡುವಂತಿಲ್ಲ. ತಡ ಮಾಡದೆ ಕೂಡಲೇ ಆನ್‌ಲೈನ್ ಆಗಿ ಉತ್ತರಿಸುವುದೇ ಒಳ್ಳೆಯದು.
ಈಗ ನೀವು ಮಾಡಬೇಕಾದದ್ದು ಇಷ್ಟೇ, ಮೊದಲನೆಯ ಬಾರಿ ರಿಟರ್ನ್ ಫೈಲಿಂಗ್ ಮಾಡಿದ ರೀತಿಯಲ್ಲಿಯೇ ಇನ್ನೊಮ್ಮೆ
ರಿಟರ್ನ್ ಫೈಲಿಂಗ್ ಮಾಡಬೇಕು. ಹಾಗೆ ಮಾಡುವಾಗ ಪ್ರಥಮ ಪುಟದಲ್ಲಿ Original Return ಬದಲಾಗಿ Revised return u/s 139(9) ಎಂಬ ಆಯ್ಕೆಯನ್ನು ಟಿಕ್ ಮಾಡಬೇಕು. ಅಲ್ಲದೆ ಒರಿಜಿನಲ್ ರಿಟರ್ನಿನ ಅಕ್ನಾಲೆಜೆ¾ಂಟ್ ನಂಬರನ್ನು ಕೂಡಾ ನಮೂದಿಸಬೇಕು. ಹೀಗೆ ಮಾಡುವ ರಿವೈಸ್ಡ್ ರಿಟರ್ನಿನಲ್ಲಿ ನಿಮ್ಮ ಎಲ್ಲಾ ಹಳೆಯ ತಪ್ಪುಗಳನ್ನು ಸರಿಪಡಿಸಿರಬೇಕು. ಹೀಗೆ ಪರಿಷ್ಕೃತ ಹೇಳಿಕೆಯನ್ನು ಫೈಲ್ ಮಾಡಿದ ಬಳಿಕ ಇಲಾಖೆಯ ಕಂಪ್ಯೂಟರ್ ಅದನ್ನು ಇನ್ನೊಮ್ಮೆ ಪ್ರತ್ಯೇಕವಾಗಿ ಪರಿಶೀಲಿಸಿ ಅಸೆಸೆ¾ಂಟ್ ಮಾಡುತ್ತದೆ.
ಸೆಕ್ಷನ್ 143(1)- ಮಾಹಿತಿ
ಇದು ರಿಟರ್ನ್ ಫೈಲಿಂಗ್ ಮಾಡಿದವರಿಗೆಲ್ಲಾ ಸಾಮಾನ್ಯವಾಗಿ ಬರುವ ಮಾಹಿತಿ. ಇದು ನೀವು ಕಟ್ಟಿದ ಕರ ಸರಿಯಾಗಿದೆಯೇ, ಕಡಿಮೆಯಾಗಿದೆಯೇ ಅಥವಾ ಹೆಚ್ಚಾಗಿದೆಯೇ ಎನ್ನುವ ಮಾಹಿತಿಯನ್ನು ನೀಡುತ್ತದೆ. ನಿಮ್ಮ ರಿಟರ್ನ್ ಹೇಳಿಕೆಯನ್ನು ಪರಿಶೀಲಿಸಿದ ಬಳಿಕ ಕರ ಇಲಾಖೆಯ ಕಂಪ್ಯೂಟರು ಸೆಕ್ಷನ್ 143(1) ಅಡಿಯಲ್ಲಿ ಈ ಮೂರರಲ್ಲಿ ಒಂದು ಮಾಹಿತಿಯನ್ನು ನಿಮಗೆ ನೀಡುತ್ತದೆ.
1 ನೀವು ಕಟ್ಟಿದ ಕರ ಸರಿಯಾಗಿದೆ; ನಮ್ಮ ಲೆಕ್ಕಾಚಾರದೊಂದಿಗೆ ತಾಳೆಯಾಗುತ್ತದೆ.
2 ನೀವು ಕಟ್ಟಿದ ಕರ ಕಡಿಮೆಯಾಗಿದೆ; ನಮ್ಮ ಲೆಕ್ಕಾಚಾರ ಪ್ರಕಾರ ನೀವು ಇಂತಿಷ್ಟು ಮೊತ್ತ ಕರ ಕಟ್ಟಲು ಬಾಕಿ ಇದೆ. 30 ದಿನಗಳೊಳಗಾಗಿ ಅದನ್ನು ಪಾವತಿ ಮಾಡಿರಿ.
3 ನೀವು ಕಟ್ಟಿದ ಕರ ಜಾಸ್ತಿಯಾಗಿದೆ. ನಿಮಗೆ ಈ ಮೂಲಕ ನಿಮ್ಮ ಬ್ಯಾಂಕ್ ಖಾತೆಗೆ ಜಮೆಯಾಗುವಂತೆ ಅದನ್ನು ಮರುಪಾವತಿ ಮಾಡಲಾಗಿದೆ. ಇಲ್ಲಿ ನಿಮ್ಮಿಂದ ಕರ ಬಾಕಿ ಇದ್ದಲ್ಲಿ ಅದನ್ನು 30 ದಿನಗಳ ಒಳಗಾಗಿ ಪಾವತಿ ಮಾಡತಕ್ಕದ್ದು.
ಸೆಕ್ಷನ್ 142(1)- ಎನ್‌ಕ್ವಾಯಿರಿ
ಒಬ್ಬನ ಕರ ಹೇಳಿಕೆಯ ಅಸ್ಸೆಸೆ¾ಂಟ್ ಪೂರ್ತಿಗೊಳಿಸುವ ಮೊದಲು ಅದರ ಬಗ್ಗೆ ತನಿಖೆ ನಡೆಸಲು ಹೆಚ್ಚುವರಿ ಮಾಹಿತಿ ಮತ್ತು ದಾಖಲೆಗಳನ್ನು ತರಿಸಲು ಈ ಸೆಕÏನ್ ಅಡಿಯಲ್ಲಿ ಎನ್‌ಕ್ವಾಯಿರಿ ನೋಟೀಸು ನೀಡಲಾಗುತ್ತದೆ. ಇದಕ್ಕೆ ಸಮರ್ಪಕವಾದ ರೀತಿಯಲ್ಲಿ ಉತ್ತರ ಕೊಡುವುದು ಒಳ್ಳೆಯದು. ಸಮರ್ಪಕ ಉತ್ತರ ನೀಡಲು ವಿಫಲನಾದರೆ ಇದು ಸೆಕ್ಷನ್ 143(2) ಮಟ್ಟಕ್ಕೆ ಏರುವ ಸಂಭವವಿದೆ. ಎಚ್ಚರ!
ಸೆಕ್ಷನ್ 143(1ಅ)- ಸೂಚನೆ
ರಿಟರ್ನ್ ಫೈಲಿಂಗಿನಲ್ಲಿ ನೀವು ನೀಡಿದ ನಿಮ್ಮ ಆದಾಯದ ಮಾಹಿತಿ ಹಾಗೂ ಫಾರ್ಮ್ 16 ರಲ್ಲಿ ಇಲಾಖೆಗೆ ಕಂಡು ಬರುವ ಆದಾಯದ ಮಾಹಿತಿ ಅಥವಾ ನಿಮ್ಮ ಕರ ವಿನಾಯಿತಿ ಹೂಡಿಕೆಯ ಮಾಹಿತಿ (ಸೆಕ್ಷನ್ 80ಸಿ ಇತ್ಯಾದಿ) ತಾಳೆಯಾಗದಿದ್ದಲ್ಲಿ ಅಥವಾ ನೀವು ಸಲ್ಲಿಸಿದ ಮಾಹಿತಿ ಹಾಗೂ ಫಾರ್ಮ್ 26ಎಎಸ್ ನಲ್ಲಿ ಕಾಣಿಸುವ ಮಾಹಿತಿ ತಾಳೆಯಾಗದಿದ್ದಲಿ ಕರ ಇಲಾಖೆಯು ಈ ಸೆಕ್ಷನ್ ಅಡಿಯಲ್ಲಿ ನಿಮಗೆ ಸೂಚನೆಯನ್ನು ಜಾರಿ ಮಾಡೀತು. ಇತ್ತೀಚೆಗಿನ ದಿನಗಳಲ್ಲಿ ಇಲಾಖೆಯ ಕಂಪ್ಯೂಟರ್ ಈ ಸೆಕ್ಷನ್ ಅಡಿಯಲ್ಲಿ ಹಲವಾರು ನೋಟಿಸುಗಳನ್ನು ಇಶ್ಯೂ ಮಾಡುತ್ತಿದೆ.
ಹಾಗಿದ್ದಲ್ಲಿ ನಿಮ್ಮ ಆನ್‌ಲೈನ್ ಖಾತೆಯೊಳಗೆ ಹೊಕ್ಕು ಅಲ್ಲಿ “ಇ-ಪ್ರೊಸೀಡಿಂಗ್’ ವಿಭಾಗಕ್ಕೆ ಹೋಗಿ ಅಲ್ಲಿ ನಿಮ್ಮ ಉತ್ತರವನ್ನು ತತ್ಸಂಬಂಧಿ ದಾಖಲೆಯ ಸ್ಕ್ಯಾನ್ ಪ್ರತಿಯನ್ನು ಅಪ್ಲೋಡ್ ಮಾಡುವುದರ ಜೊತೆಗೆ ನೀಡತಕ್ಕದ್ದು.
ಸೆಕ್ಷನ್ 143(2)- ಸುðಟಿನಿ
ಇದು ಸೆಕ್ಷನ್ 142(1) ಅಡಿಯಲ್ಲಿ ನೀಡಿದ ನೋಟೀಸಿಗೆ ನೀವು ಕೊಟ್ಟ ಉತ್ತರ ಸಮಾಧಾನಕರವಾಗದೆ ಇದ್ದಲ್ಲಿ ಮುಂದಿನ ವಿಚಾರಣೆಗಾಗಿ ನೀಡುವ ನೊಟೀಸು. ಈ ನೊಟೀಸು ಪ್ರಕಾರ ನೀವು ಸಂಬಂಧ ಪಟ್ಟ ಎಲ್ಲಾ ದಾಖಲೆಗಳನ್ನು ಹಿಡಿದುಕೊಂಡು ವೈಯಕ್ತಿಕವಾಗಿ ಅಥವಾ ಪ್ರತಿನಿಧಿಯ ಮೂಲಕ ಪರ್ಸನಲ್ ಹಿಯರಿಂಗಿಗಾಗಿ ಕರ ಅಧಿಕಾರಿಯ ಸಮಕ್ಷಮ ಹೋಗಬೇಕಾಗು ತ್ತದೆ. ಇಲ್ಲಿ ನಿಮ್ಮ ಕೇಸು ಎಳೆಎಳೆಯಾಗಿ ಸುðಟಿನಿಗೆ ಒಳಪಡುತ್ತದೆ. ವಿಷಯವನ್ನು ಈ ಘಟ್ಟಕ್ಕೆ ಎಳೆದೊಯ್ಯದಿರುವುದೇ ಲೇಸು.
ಸೆಕ್ಷನ್ 148- ರಿಅಸೆಸೆ¾ಂಟ್
ಐಟಿ ಅಧಿಕಾರಿಗೆ ನಿಮ್ಮ ಹಳೆಯ ರಿಟರ್ನ್ ಫೈಲಿಂಗಿನಲ್ಲಿ ಯಾವುದಾದರು ಆದಾಯ ಬಿಟ್ಟು ಹೋಗಿದೆ ಎನ್ನುವ ಅನುಮಾನ ಬಂದರೆ ನಿಮ್ಮ ಆ ವರ್ಷದ ರಿಟರ್ನ್ ಫೈಲಿಂಗನ್ನು ಮತ್ತೂಮ್ಮೆ ಮಾಡಲು ಈ ಸೆಕ್ಷನ್ ಅಡಿಯಲ್ಲಿ ಸೂಚಿಸಬಹುದು. ಇಲ್ಲಿ ಮುಖ್ಯವಾದ ವಿಷಯವೇನೆಂದರೆ ಇಲಾಖೆಯು ನಿಮ್ಮ ಹಳೆಯ ವರ್ಷಗಳ ಬಗ್ಗೆ ಈ ರೀತಿ ರಿ-ಫೈಲಿಂಗ್ ಮಾಡಲು ಸೂಚಿಸ
ಬಹುದು. ಬಿಟ್ಟು ಹೋದ ಆದಾಯ ರೂ. 1 ಲಕ್ಷದ ಒಳಗೆ ಇದ್ದರೆ ಅಸೆಸೆ¾ಂಟ್ ವರ್ಷ ಕಳೆದು 4 ವರ್ಷಗಳವರೆಗೂ ಅಥವಾ ರೂ. 1 ಲಕ್ಷ ಮೀರಿದರೆ 6 ವರ್ಷಗಳವರೆಗೂ ಈ ರೀತಿ ಮರುಪರಿಶೀಲನೆಗೆ ಕೇಳಬಹುದು. ಅಂತಹ ರಿ-ಫೈಲಿಂಗನ್ನು ಬಹುತೇಕ 30 ದಿನಗಳ ಒಳಗಡೆ ಮಾಡುವಂತೆ ಇಲಾಖೆಯು ಸೂಚಿಸಬಹುದು.
ಸೆಕ್ಷನ್ 156- ಡಿಮಾಂಡ್ ನೊಟೀಸು
ಆಖೈರಿಗೆ ಡಿಮಾಂಡ್ ನೋಟೀಸ್ ಅಂದರೆ ಇದೇನೇ. ನಿಮ್ಮ ವತಿಯಿಂದ ತೆರಿಗೆ, ಬಡ್ಡಿ, ಪೆನಾಲ್ಟಿ ಇತ್ಯಾದಿಗಳು ಕಟ್ಟದೆ ಬಾಕಿ ಇದೆ ಎಂದು ಕಂಡು ಬಂದರೆ ಕರ ಇಲಾಖೆ ಈ ಸೆಕ್ಷನ್ ಅಡಿಯಲ್ಲಿ ಡಿಮಾಂಡ್ ನೊಟೀಸ್ ಜಾರಿ ಮಾಡುತ್ತದೆ. ಅದನ್ನು 30 ದಿನಗಳ ಒಳಗಾಗಿ ಕಟ್ಟತಕ್ಕದ್ದು. ಇದು ತುಂಬಾ ಸೀರಿಯಸ್ ಸೆಕ್ಷನ್. ಇದನ್ನಂತೂ ಖಂಡಿತಾ ಅವಗಣನೆ ಮಾಡುವಂತಿಲ್ಲ.
ಸೆಕ್ಷನ್ 245-ಹೊಂದಾಣಿಕೆ
ನೀವು ರಿಟರ್ನ್ ಫೈಲಿಂಗ್‌ನಲ್ಲಿ ರಿಫಂಡ್ ಕ್ಲೈಮ್ ಮಾಡಿದ್ದಲ್ಲಿ ಹಾಗೂ ಸರಕಾರದ ಲೆಕ್ಕದ ಪ್ರಕಾರ ಇನ್ನೊಂದೆಡೆ ನೀವು ಕರ
ಪಾವತಿ ಮಾಡಬೇಕಿದ್ದಲ್ಲಿ ಅದನ್ನು ನಿಮ್ಮ ರಿಫಂಡಿನೊಂದಿಗೆ ಹೊಂದಾಣಿಕೆ ಮಾಡುವಂತಹ ನೋಟೀಸನ್ನು ಈ ಸೆಕ್ಷನ್ ಅಡಿಯಲ್ಲಿ ನೀಡಲಾಗುತ್ತದೆ. ಈ ಕೊಡು-ಕೊಳ್ಳುವಿಕೆಯ ಹೊಂದಾಣಿಕೆಯ ಬಳಿಕ ನಿಮಗೆ ರಿಫಂಡ್ ಬರಬಹುದು ಅಥವಾ ನೀವೇ ಅತ್ಲಾಗಿ ಒಂದಷ್ಟೂ ಕರ ಪಾವತಿ ಮಾಡಬೇಕಾಗಿ ಬರಬಹುದು. ನೀವೇ ಕೊಡಬೇಕಾಗಿ ಬಂದರೆ ಅಂತಹ ಕರ ಬೇಡಿಕೆಯನ್ನು ನೀವು ಮೊತ್ತ ಮೊದಲು ದೃಢೀಕರಿಸಬೇಕು. ಆನ್‌ಲೈನ್‌ನಲ್ಲಿ ನಿಮ್ಮ ಖಾತೆಯೊಳಕ್ಕೆ ಹೋಗಿ ಅಲ್ಲಿ Response to outstanding tax demand ಎಂಬಲ್ಲಿ ನಿಮ್ಮ ಸಮ್ಮತಿ ಅಥವಾ ಅಸಮ್ಮತಿಯನ್ನು ಸೂಚಿಸಬೇಕು. ಅಸಮ್ಮತಿ ಇದ್ದಲ್ಲಿ ಅದಕ್ಕೆ ಸೂಕ್ತ ವಿವರಣೆಯನ್ನು ತುಂಬಬೇಕು. ಸಮ್ಮತಿ ಇದ್ದಲ್ಲಿ ಅದನ್ನು ಸೂಚಿಸಿ ಪ್ರತ್ಯೇಕವಾಗಿ ಬಾಕಿ ಪಾವತಿಯನ್ನು ಮಾಡತಕ್ಕದ್ದು.
ಫಿಕರ್ ನಾಟ್
ಮೇಲ್ಕಾಣಿಸಿದ ಇವೇ ಕೆಲವು ಪ್ರಾಮುಖ್ಯ ಕರ ಸೆಕ್ಷನ್ನುಗಳು. ಫಿಕರ್ ನಾಟ್! ಯಾವುದಕ್ಕೂ ಹೆದರುವ ಅಗತ್ಯವಿಲ್ಲ. ನೋಟೀಸು ಬಂದ ಮರುದಿನ ಪೋಲೀಸು ಬಂದು ಅರೆಸ್ಟ್ ಮಾಡಿ ವಿಚಾರಣೆ ಯಿಲ್ಲದೆ ಜೈಲಿಗೆ ದೂಡುವುದಿಲ್ಲ. ಕಾನೂನಿನಡಿಯಲ್ಲಿ
ಯಾವುದೇ ನೊಟೀಸಿಗೆ ಉತ್ತರ ನೀಡಲು ಸಾಕಷ್ಟು ಅವಕಾಶ ನೀಡಲಾಗುತ್ತದೆ. ಕಾನೂನು ಪರಿಧಿಯ ಒಳಗೆಯೇ ಅಸೆಸೆ¾ಂಟ್ ನಡೆಯುತ್ತದೆ. ಅದನ್ನು ಒಪ್ಪುವ ಬಿಡುವ ಅಥವಾ ಕಾನೂನು ಹೋರಾಟ ನಡೆಸುವ ಸಂಪೂರ್ಣ ಹಕ್ಕು ನಿಮಗಿದೆ. ಸಣ್ಣ ಪುಟ್ಟ ಕರಬಾಕಿ ಇರುವ ಜನಸಾಮಾನ್ಯರ ಕೈಯಿಂದ ಬಾಕಿ ಕರ ಮತ್ತು ಅದರ ಮೇಲಿನ ಬಡ್ಡಿ ವಸೂಲಿ ಮಾಡಲಾಗುತ್ತದೆ. ಇದರಿಂದ ಅಮಾಯಕರಿಗೆ ಯಾವುದೇ ಅಪಾಯವಿಲ್ಲ. ನಿಶ್ಚಿಂತೆಯಿಂದ ನೋಟೀಸುಗಳನ್ನು ಎದುರಿಸಿ ಅಗತ್ಯಕ್ಕೆ ತಕ್ಕಂತೆ ವಿವರಣೆ ನೀಡಿರಿ ಇಲ್ಲವೇ ಕರಪಾವತಿ ಮಾಡಿರಿ. ಉತ್ತಮ ಚಾರ್ಟರ್ಡ್ ಅಕೌಂಟಂಟ್‌ಗಳ ಸಹಾಯ ಪಡೆಯಿರಿ.
(ಕರ ವಿಚಾರವಾಗಿ ಕೆಲವು ಆಸಕ್ತಿದಾಯಕ ವಿಚಾರಗಳನ್ನು ಸರಳವಾಗಿಸಿ ಸಂಕ್ಷಿಪ್ತವಾಗಿ ಮಾಹಿತಿಗಾಗಿ ಮಾತ್ರವೇ ಇಲ್ಲಿ ಚರ್ಚಿಸಲಾಗಿದೆ. ಕ್ಲಿಷ್ಟವಾದ ಕರ ಕಾನೂನಿನ ಎಷ್ಟೋ ಸೂಕ್ಷ್ಮ ವಿವರಗಳನ್ನು ಇಲ್ಲಿ ಕೊಡಲು ಸಾಧ್ಯವಾಗುವುದಿಲ್ಲ. ಇದು ಆದಾಯ ತೆರಿಗೆ ಕಾನೂನಿನ ಯಥಾಪ್ರತಿ ಅಥವಾ ಸಿ.ಎ. ಪರೀಕ್ಷೆಯ ಪಠ್ಯಪುಸ್ತಕವಲ್ಲ. ಹಾಗಾಗಿ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ವೈಯಕ್ತಿಕ ಪರಿಸ್ಥಿತಿಯನ್ನು ನುರಿತ ಚಾರ್ಟರ್ಡ್ ಅಕೌಂಟಂಟ್ ಜೊತೆ ಚರ್ಚಿಸಿಯೇ ತೆಗೆದುಕೊಳ್ಳಿ. ಕೇವಲ ಒಂದು ಲೇಖನವನ್ನು ಓದಿ ಯಾವುದೇ ನಿರ್ಧಾರವನ್ನೂ ಯಾವತ್ತೂ ತೆಗೆದುಕೊಳ್ಳಬಾರದು- ಈ ಸೂಚನೆ ಜನಹಿತದಲ್ಲಿ ಜಾರಿ)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ
Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.