ಎನ್‌ಪಿಎಸ್ Vs ಯುನಿಟ್ ಲಿಂಕ್ಡ್ ಪೆನ್ಶನ್ ಸ್ಕೀಂ
Team Udayavani, Jan 28, 2019, 12:30 AM IST
ಇಂದು ಮಾರುಕಟ್ಟೆಯಲ್ಲಿ ಅತ್ಯಂತ ಪ್ರಚಲಿತವಾಗುವ ಪೆನ್ಶನ್ ಪ್ಲಾನ್ ಎಂದರೆ ವಿಮಾ ಕಂಪೆನಿಗಳು ಮಾರುವ ಯುನಿಟ್ ಲಿಂಕ್ಡ್ ಪೆನ್ಶನ್ ಪ್ಲಾನ್. ಇದನ್ನು ಯುಎಲ್ಪಿಪಿ ಎನ್ನುತ್ತಾರೆ. ಸ್ಪಷ್ಟವಾಗಿ ಇದು ಪ್ರತ್ಯೇಕವಾಗಿ ಲಭ್ಯವಿರುವ ಯುಲಿಪ್ (ಯುನಿಟ್ ಲಿಂಕ್ಡ್ ಇನ್ಶೂರೆನ್ಸ್ ಪ್ಲಾನ್) ಅಲ್ಲದಿದ್ದರೂ ಸರಳವಾಗಿ ಬಹಳಷ್ಟು ಜನ ಇದನ್ನೂ ಕೂಡಾ ಯುಲಿಪ್ ಎಂದು ಹೇಳುವುದುಂಟು. ಯುಲಿಪ್‌ನಲ್ಲಿ ಇನ್ಶೂರೆನ್ಸ್ ಅಥವಾ ವಿಮೆ ಮಾತ್ರ ಇರುತ್ತದೆ. ಆದರೆ ಯುಎಲ್ಪಿಪಿಯಲ್ಲಿ ವಿಮೆಯ ಜೊತೆಗೆ ಪೆನ್ಶನ್ ಸೌಲಭ್ಯವೂ ಇರುತ್ತದೆ. ಬಿರ್ಲಾ ಸನ್ ಲೈಫ್, ಎಚ್‌ಡಿಎಫ್ಸಿ ಲೈಫ್, ಐಸಿಐಸಿಐ ಪ್ರುಡೆನ್ಷಿಯಲ್ ಇತ್ಯಾದಿ ವಿಮಾ ಕಂಪೆನಿಗಳು ಈ ಪಾಲಿಸಿಯನ್ನು ಮಾರುತ್ತವೆ. ಇತ್ತೀಚೆಗಿನ ದಿನಗಳಲ್ಲಿ ಸಹಜವಾಗಿಯೇ ಎನ್‌ಪಿಎಸ್ ಜೊತೆ ಈ ಯುಎಲ್ಪಿಪಿ ಯೋಜನೆಯನ್ನು ಹೋಲಿಸಲಾಗುತ್ತದೆ. ಎನ್‌ಪಿಎಸ್ ಮೇಲೋ ಯುಎಲ್ಪಿಪಿ ಮೇಲೋ ಎನ್ನುವ ಚರ್ಚೆ ಸಾಮಾನ್ಯವಾಗಿ ಎಲ್ಲೆಡೆ ಕೇಳಿ ಬರುತ್ತಿದೆ.
ಸನ್ 2000 ದಿಂದ 2010ರ ವರೆಗಿನ ಸುಮಾರು ಹತ್ತು ವರ್ಷಗಳ ಕಾಲಾವಧಿಯಲ್ಲಿ ಯುಲಿಪ್/ಯುಎಲ್ಪಿಪಿ ದರ್ಬಾರು ಜೋರಾಗಿತ್ತು. ಹಲವಾರು ಹೆಸರುಗಳಲ್ಲಿ ಬೇರೆ ಬೇರೆ ದುಬಾರಿ ವೆಚ್ಚವನ್ನು ಗ್ರಾಹಕರ ಮೇಲೆ ಹೊರಿಸಿ ಜಬರ್ದಸ್ತ್ ಬಿಸಿನೆಸ್ ಮಾಡಿದ ಚರಿತ್ರೆ ಈ ಪ್ಲಾನುಗಳಿಗೆ ಇವೆ. ಹಲವಾರು ವಿತ್ತ ವಿಶ್ಲೇಷಕರ ಟೀಕೆ ಟಿಪ್ಪಣಿಗಳಿಗೆ ಒಳಗಾಗಿ ಸಾರ್ವಜನಿಕರೂ ದನಿಗೂಡಿಸಿದ ಪರಿಣಾಮವಾಗಿ ಸರಕಾರ ಕೊನೆಗೂ ಮಧ್ಯ ಪ್ರವೇಶಿಸಿ ಸೆಪ್ಟೆಂಬರ್ 1, 2010ರಿಂದ ಅನ್ವಯವಾಗುವಂತೆ ಒಂದು ಹೊಸ ಮಾರ್ಗಸೂಚಿಯನ್ನು ಜಾರಿಗೆ ತಂದಿತು. ಈ ಮಾರ್ಗಸೂಚಿ ಈ ಯುಲಿಪ್/ಯುಎಲ್ಪಿಪಿ ವರ್ಗಕ್ಕೆ ಅವುಗಳ ಖರ್ಚುಗಳ ಮೇಲೆ ಬಲವಾದ ಕಡಿವಾಣ ಹಾಕಿದ ಪರಿಣಾಮವಾಗಿ ಯುಲಿಪ್ ಬಹಳಷ್ಟು ಸುಧಾರಣೆಗೊಂಡು ಜನಸ್ನೇಹಿಯಾಗಿ ವರ್ತಿಸತೊಡಗಿತು. ಯುಎಲ್ಪಿಪಿ ಮಟ್ಟಿಗೆ ಹೇಳುವುದಾದರೆ ಸರಕಾರ ಆ ಯೋಜನೆಗಳಿಗೆ ಖರ್ಚಿನ ಮಿತಿಯನ್ನು ಹಾಕಿ ಕನಿಷ್ಠ ಶೇ.4.5 ಪ್ರತಿಫಲದ ಭರವಸೆ ನೀಡುವಂತೆ ಆ ಪಾಲಿಸಿಗಳನ್ನು ಮಾರಾಟ ಮಾಡುವ ವಿಮಾ ಕಂಪೆನಿಗಳಿಗೆ ತಾಕೀತು ಮಾಡಿತು. ಕೇವಲ ಶೇ.4.5 ಪ್ರತಿಫಲವನ್ನು ಗ್ಯಾರಂಟಿ ನೀಡಲಾರದ ವಿಮಾ ಕಂಪೆನಿಗಳು ಬಹುತೇಕ ಯುಎಲ್ಪಿಪಿ ಪಾಲಿಸಿಗಳ ಮಾರಾಟವನ್ನು ಸ್ಥಗಿತಗೊಳಿಸಿತು. ತದ ನಂತರ ವಿಮಾ ಕಂಪೆನಿಗಳ ಬೇಡಿಕೆಯ ಮೇರೆಗೆ 2012 ರಲ್ಲಿ ಕನಿಷ್ಠ ಶೇ.4.5 ಪ್ರತಿಫಲದ ಪ್ರಮೇಯವನ್ನು ತೆಗೆದುಹಾಕಿ ಕೇವಲ ಹೂಡಿಕಾ ಮೊತ್ತವನ್ನು ಮಾತ್ರ ಹಿಂತಿರುಗಿಸುವ ಗ್ಯಾರಂಟಿಯನ್ನು ನೀಡುವಂತೆ ಹೊಸ ಆದೇಶವನ್ನು ಹೊರಡಿಸಿತು. ಅದರೊಂದಿಗೆ ಮರು ಹುಟ್ಟು ಪಡೆದ ಹೊಸ ಪೀಳಿಗೆಯ ಯುಎಲ್ಪಿಪಿ ಪಾಲಿಸಿಗಳು ಕ್ಯಾಪಿಟಲ್ ಪ್ರೊಟೆಕ್ಷನ್ (ಹೂಡಿಕೆಯನ್ನು ಹಿಂತಿರುಗಿಸುವ) ಪ್ರಮೇಯದ ಜೊತೆಗೆ ಈಗ ಮಾರಾಟವಾಗುತ್ತಿವೆ.
ಸದಸ್ಯತ್ವ
ಯುಎಲ್ಪಿಪಿ ಯೋಜನೆಗೆ 35 ರಿಂದ 70 ವಯಸ್ಸಿನ ಯಾರಾದರೂ ಸೇರಬಹುದು. ಎನ್‌ಪಿಎಸ್ ಯೋಜನೆಗೆ 18 ರಿಂದ 65 ವರ್ಷದ ಯಾರು ಕೂಡಾ ಸೇರಬಹುದು. ಯುಎಲ್ಪಿಪಿ ಯೋಜನೆಯಲ್ಲಿ 5/10/15/20/25/30 ವರ್ಷಗಳ ಅವಧಿಗೆ ಪಾಲಿಸಿಯನ್ನು ಕೊಳ್ಳಬಹುದು ಆದರೆ ಎನ್‌ಪಿಎಸ್ ಯೋಜನೆಯು ಚಂದಾದಾರನಿಗೆ 60 ವರ್ಷ ವಯಸ್ಸಾಗುವವರೆಗೆ ಚಾಲ್ತಿಯಲ್ಲಿ ಇರುತ್ತದೆ ಮತ್ತು 70ರವರೆಗೆ ಮುಂದುವರಿಸಬಹುದಾಗಿದೆ.
ಖರ್ಚು ವೆಚ್ಚ
ಯುಎಲ್ಪಿಪಿಯಲ್ಲಿ ಫಂಡ್ ಮ್ಯಾನೇಜ್ಮೆಂಟ್ ಚಾರ್ಜ್ ಸುಮಾರು ಶೇ.1-1.35 ಮಟ್ಟದಲ್ಲಿ ಇರುತ್ತದೆ, ಆದರೆ ಎನ್‌ಪಿಎಸ್‌ನಲ್ಲಿ ಅದು ಕೇವಲ ಶೇ.0.01ಆಗಿರುತ್ತದೆ. ಯುಎಲ್ಪಿಪಿಯಲ್ಲಿ ಕಮಿಶನ್ ಅಥವಾ ಪ್ರೀಮಿಯಂ ಅಲೋಕೇಶನ್ ಚಾರ್ಜ್ ಪ್ರಥಮ ವರ್ಷದ ಕಂತುಗಳಿಗೆ ಶೇ.7.5ವರೆಗೆ ಮತ್ತು ಅನಂತರದ ವರ್ಷಗಳಲ್ಲಿ ಶೇ.2 ಆಗಿರುತ್ತದೆ. ಆಗಿರುತ್ತದೆ ಆದರೆ ಎನ್‌ಪಿಎಸ್ ಯೋಜನೆಯಲ್ಲಿ ಅದು ಯಾವುದೇ ವರ್ಷದಲ್ಲಾದರೂ ಕೇವಲ ಶೇ.0.25 ಮಟ್ಟದಲ್ಲಿ ಮಾತ್ರವೇ ಕಡಿತವಾಗುತ್ತದೆ. ಅದಲ್ಲದೆ ಯುಎಲ್ಪಿಪಿಯಲ್ಲಿ ಪಾಲಿಸಿ ಅಡ್ಮಿನಿಸ್ಟೇಶನ್ ಚಾರ್ಜ್ ಶೇ.0.3-0.4 ಮಟ್ಟದಲ್ಲಿ ಕಡಿತವಾಗುತ್ತದೆ. ಎನ್‌ಪಿಎಸ್‌ನಲ್ಲಿ ಇದು ಶೇ.0.0032 ಮಾತ್ರ. ಅಷ್ಟು ಸಾಲದ್ದಕ್ಕೆ ಹೂಡಿಕೆಯ ಗ್ಯಾರಂಟಿಯ ಸಲುವಾಗಿ ಇನ್ವೆಸ್ಟ್‌ಮೆಂಟ್ ಪ್ರೊಟೆಕ್ಷನ್ ಚಾರ್ಜ್ ಎಂಬುದಾಗಿ ಶೇ. 0.4 ಹೆಚ್ಚುವರಿ ಚಾರ್ಜ್ ವಿಧಿಸಲಾಗುತ್ತಿದೆ.
ಕಾನೂನು ಪ್ರಕಾರ ಎನ್‌ಪಿಎಸ್ ಯಾವುದೇ ಪ್ರೊಟೆಕ್ಷನ್ ನೀಡುವುದಿಲ್ಲ. ಹಾಗಾಗಿ ಅಂತಹ ಚಾರ್ಜ್ ಕೂಡಾ ಇರುವುದಿಲ್ಲ. ಯುಎಲ್ಪಿಪಿ ಯೋಜನೆಯಲ್ಲಿ ಒಟ್ಟು ಖರ್ಚಿನ ಮೇಲೆ ಸರಕಾರವು ಮಿತಿ ಹೇರಿದ್ದರೂ (5 ವರ್ಷಕ್ಕೆ ಶೇ.4, 10 ವರ್ಷಕ್ಕೆ ಶೇ.3, ಹಾಗೂ 15 ವರ್ಷಕ್ಕೆ ಶೇ.2.25 ಇತ್ಯಾದಿ) ಖರ್ಚು ವೆಚ್ಚದ ಲೆಕ್ಕದಲ್ಲಿ ಯುಎಲ್ಪಿಪಿ ಯೋಜನೆಯು ಎನ್‌ಪಿಎಸ್ ಯೋಜನೆಗೆ ಯಾವ ನಿಟ್ಟಿನಲ್ಲಿ ನೋಡದರೂ ಸಾಟಿಯಾಗಲಾರದು.
ವಿಮಾ ವೆಚ್ಚ
ಯುಎಲ್ಪಿಪಿಯಲ್ಲಿ ವಿಮೆ ಇರುವುದರಿಂದ ನಿಮ್ಮ ದೇಣಿಗೆಯಿಂದ ಪ್ರತ್ಯೇಕವಾಗಿ ವಿಮಾ ವೆಚ್ಚವನ್ನು ಕಡಿಯಲಾಗುತ್ತದೆ. ಈ ವೆಚ್ಚ (ಮೋರ್ಟಾಲಿಟಿ ಚಾರ್ಜಸ್) ಪ್ರತಿಯೊಂದು ಕಂಪೆನಿ/ಸ್ಕೀಮಿನಲ್ಲೂ ವಿಭಿನ್ನವಾಗಿ ಇರುತ್ತದೆ. ಆ ವೆಚ್ಚವನ್ನು ಒಂದು ಸರಳವಾದ ಟರ್ಮ್ ಇನ್ಶೂರನ್ಸ್ ವೆಚ್ಚಕ್ಕೆ ಹೋಲಿಸಿ ಯಾವುದು ಅಗ್ಗವೆಂದು ಪ್ರತ್ಯೇಕವಾಗಿ ನೋಡಬೇಕು. ಎನ್‌ಪಿಎಸ್‌ನಲ್ಲಿ ವಿಮಾ ಸೌಲಭ್ಯ ಇರುವುದಿಲ್ಲ. ಎನ್‌ಪಿಎಸ್‌ನಲ್ಲಿ ಹೂಡುವವರು ವಿಮೆಗಾಗಿ ಪ್ರತ್ಯೇಕ ವಿಮಾ ಪಾಲಿಸಿ ಕೊಳ್ಳಬೇಕು.
ಹಿಂಪಡೆತ
ಯುಎಲ್ಪಿಪಿ ಯೋಜನೆಯಲ್ಲಿ ಅವಧಿಯ ಕೊನೆಯಲ್ಲಿ ಮೂರನೆಯ ಒಂದಂಶವನ್ನು (ಶೇ.33.33) ಕರಮುಕ್ತವಾಗಿ ಹಿಂಪಡೆದು ಉಳಿದ ಮೂರನೆಯ ಎರಡಂಶವನ್ನು (ಶೇ.66.66) ಆನ್ಯೂಟಿ ಅಥವಾ ಪೆನ್ಶನ್ ರೂಪದಲ್ಲಿ ಪಡೆಯಬಹುದು. ಯಾವ ವಿಮಾ ಕಂಪೆನಿಯಲ್ಲಿ ಖಾತೆ ಆರಂಭಿಸುತ್ತೀರೊ ಅದೇ ಕಂಪೆನಿಯ ಆನ್ಯೂಟಿ ಖರೀದಿಸುವುದು ಕಡ್ಡಾಯ. ಅಲ್ಲದೆ ಇಲ್ಲಿ ಅನ್ಯೂಟಿ ಕೊಳ್ಳುವಾಗ ಶೇ.1.8 ಜಿಎಸ್‌ಟಿ ತಗಲುತ್ತದೆ.
ಎನ್‌ಪಿಎಸ್ ಖಾತೆಯ ಮಟ್ಟಿಗೆ ಹೇಳುವುದಾದರೆ, ನಿಮ್ಮ ಖಾತೆಯನ್ನು ಯಾವುದೇ ಹಿಂಪಡೆತ/ಆನ್ಯೂಟಿ ಇಲ್ಲದೆ 70 ವರ್ಷದವರೆಗೆ ಜೀವಂತ ಖಾತೆಯಾಗಿ ದೇಣಿಗೆ ಕಟ್ಟುತ್ತಾ ಮುಂದುವರಿಸಿಕೊಂಡು ಹೋಗಬಹುದು ಅಥವಾ ದುಡ್ಡಿನ ಹಿಂಪಡೆತದಲ್ಲಿ ಆಸಕ್ತಿ ಉಳ್ಳವರು ತಮಗೆ 60 ವರ್ಷ ವಯಸ್ಸಾದ ಕೂಡಲೇ ಖಾತೆಯನ್ನು ಮುಕ್ತಾಯಗೊಳಿಸಿ ಎನ್‌ಪಿಎಸ್ ಫಂಡಿನಲ್ಲಿ ಸಂಚಯವಾಗಿರುವ ಒಟ್ಟು ಮೊತ್ತದ ಗರಿಷ್ಟ ಶೇ.60 ವರೆಗೆ ಏಕಗಂಟಿನಲ್ಲಿ ಹಿಂತೆಗೆಯಬಹುದಾಗಿದೆ. (ಇದರಲ್ಲಿ ಸದ್ಯ ಶೇ.40 ಕರರಹಿತ ಮತ್ತು ಶೇ. 20 ಕರಾರ್ಹ; ಶೀಘ್ರದಲ್ಲಿಯೇ ಸಂಪೂರ್ಣ ಶೇ.60 ಕರರಹಿತವಾಗುವ ಕಾನೂನು ಬರಲಿದೆ) ಬಾಕಿ ಕನಿಷ್ಟ ಶೇ.40ನ್ನು ಕಡ್ಡಾಯವಾಗಿ ಯಾವುದಾದರು ಒಂದು ವಿಮಾ ಕಂಪೆನಿಯ ಆನ್ಯುಟಿ ಯೋಜನೆಯಲ್ಲಿ ತೊಡಗಿಸುವ ನಿರ್ದೇಶನವನ್ನು ಎನ್‌ಪಿಎಸ್‌ಗೆ ನೀಡಬೇಕು. ಇದರ ಮೇಲೆ ಜಿಎಸ್‌ಟಿ ಕೂಡಾ ಇರುವುದಿಲ್ಲ. ಎನ್‌ಪಿಎಸ್ ಯೋಜನೆಯ ಇನ್ನೊಂದು ಲಕ್ಷಣ ಏನೆಂದರೆ, 60 ವರ್ಷ ದಾಟಿದವರು ತಮ್ಮ ಹಿಂಪಡೆತವನ್ನು, ಆನ್ಯೂಟಿಯನ್ನು ಅಥವಾ ಎರಡನ್ನೂ ಮುಂದೂಡಬಹುದು. ಆನ್ಯೂಟಿಯನ್ನು 63 ವಯಸ್ಸಿನ ಒಳಗಾಗಿ ಹಾಗೂ ಹಿಂಪಡೆತವನ್ನು 70 ವರ್ಷದವರೆಗೆ ಯಾವಾಗ ಬೇಕಾದರೂ ಪಡೆದುಕೊಳ್ಳಬಹುದು. ಈ ಅವಧಿಯಲ್ಲಿ ಹಿಂಪಡೆತವನ್ನು ಏಕಗಂಟಿನಲ್ಲಿ ಅಥವಾ ಒಟ್ಟು 10 ವಾರ್ಷಿಕ ಕಂತುಗಳಲ್ಲೂ ಪಡಕೊಳ್ಳಬಹುದು. ಈ ನಿಟ್ಟಿನಲ್ಲಿಯೂ ಎನ್‌ಪಿಎಸ್ ಯೋಜನೆಯು ಯುಎಲ್ಪಿಪಿಗಿಂತ ಉತ್ತಮವೆಂದು ತೋರುತ್ತದೆ.
ಸರೆಂಡರ್
ಯುಎಲ್ಪಿಪಿಯಲ್ಲಿ 5 ವರ್ಷಗಳ ಲಾಕ್-ಇನ್ ಇರುತ್ತದೆ. ಈ ಅವಧಿಯಲ್ಲಿ ಪಾಲಿಸಿಯನ್ನು ಸರೆಂಡರ್ ಮಾಡಿ ದುಡ್ಡು ವಾಪಾಸ್ ಪಡೆಯಲು ಬರುವುದಿಲ್ಲ. ಆದರೂ ಪಾಲಿಸಿಯನ್ನು 5 ವರ್ಷದೊಳಗೆ ಕೈಬಿಟ್ಟರೆ ಅದು ಡಿಸ್ಕಂಟಿನ್ಯುಯೇಶನ್ ಚಾರ್ಜ್ ಸಹಿತ ಬಹಳ ತುಟ್ಟಿಯಾಗುತ್ತದೆ. 5 ವರ್ಷಗಳ ಬಳಿಕ ಯಾವುದೇ ವೆಚ್ಚವಿಲ್ಲದೆ ಪಾಲಿಸಿಯನ್ನು ಸರೆಂರ್ಡ ಮಾಡಿ ದುಡ್ಡು ವಾಪಾಸ್ ಪಡೆಯಬಹುದು, ಆದರೆ ಆ ಮೊತ್ತ ಕರಾರ್ಹ.
ಎನ್‌ಪಿಎಸ್‌ನಲ್ಲಿ 60 ವರ್ಷ ಆಗುವ ಮುನ್ನವೇ ಸರೆಂಡರ್ ಮಾಡಬೇಕೆಂದರೆ, ಖಾತೆಗೆ ಕನಿಷ್ಠ 10 ವರ್ಷ ವಯಸ್ಸು ಆಗಿರಬೇಕು. ಅಂಥವರು ಕನಿಷ್ಠ ಶೇ.80 ಮೊತ್ತವನ್ನು ಆನ್ಯೂಟಿಗೆ ಪರಿವರ್ತಿಸಿಕೊಂಡು ಉಳಿದ ಗರಿಷ್ಟ ಶೇ. 20ವನ್ನು ಹಿಂಪಡೆಯಬಹುದು. ಆದರೆ ಖಾತೆಯಲ್ಲಿ ರೂ. 1 ಲಕ್ಷಕ್ಕಿಂತ ಕಡಿಮೆ ದುಡ್ಡು ಇದ್ದರೆ ಸಂಪೂರ್ಣ ಹಿಂಪಡೆತ ಸಾಧ್ಯ. ಸರೆಂಡರಿಗೆ ಪ್ರತ್ಯೇಕ ಚಾರ್ಜು ಇಲ್ಲಿಯೂ ಇಲ್ಲ.
ಭಾಗಶಃ ಹಿಂಪಡೆತ
ಎನ್ಪಿಎಸ್ ಟಯರ್-1ರಲ್ಲಿ ತೊಡಗಿಸಿದ ಮೊತ್ತವನ್ನು 60 ವರ್ಷ ತುಂಬುವ ಮೊದಲೂ ಕೂಡಾ ಭಾಗಶಃ ಹಿಂಪಡೆಯುವ ಸೌಲಭ್ಯವನ್ನು ಒದಗಿಸಲಾಗಿದೆ. ಆದರೆ ಖಾತೆಗೆ ಕನಿಷ್ಠ 3 ವರ್ಷ ಆಗಿರಬೇಕು. ಅಲ್ಲದೆ ಖಾತೆಯ ಒಟ್ಟು ಅವಧಿಯಲ್ಲಿ ಗರಿಷ್ಟ 3 ಬಾರಿ ಇಂತಹ ಭಾಗಶಃ ಹಿಂಪಡೆತವನ್ನು ಮಾಡಿಕೊಳ್ಳಬಹುದು. ಪ್ರತಿ ಬಾರಿಯೂ ನಿಮ್ಮ ದೇಣಿಗೆಯ ಶೇ. 25 ಮೀರದಂತೆ. ಈ ಮೂರು ಹಿಂಪಡೆತಗಳನ್ನು ಖಾತೆಗೆ 3 ವರ್ಷ ತುಂಬಿದ ಬಳಿಕ ಯಾವಾಗ ಬೇಕಾದರೂ ಮಾಡಬಹುದು. ಹಿಂಪಡೆತವು ನಿಮ್ಮ ಒಟ್ಟು ದೇಣಿಗೆಗೆ ಮಾತ್ರವೇ ಸೀಮಿತವಾಗಿದೆ ಹಾಗೂ 2017 ರ ಬಜೆಟ್ಟಿನಲ್ಲಿ ಇಂತಹ ಹಿಂಪಡೆತಗಳ ಮೊತ್ತಕ್ಕೆ ಕರ ವಿನಾಯಿತಿ ಕೂಡಾ ನೀಡಲಾಗಿದೆ. (ಟಯರ್-2 ಖಾತೆಯಿಂದ ಹಿಂಪಡೆತಕ್ಕೆ ಲಾಗಾಯ್ತಿನಿಂದಲೂ ಯಾವುದೇ ನಿರ್ಬಂಧವಿರಲಿಲ್ಲ. ಅದು ಒಂದು ಎಸ್ಬಿ ಖಾತೆಯಂತೆ ಕೆಲಸ ಮಾಡುತ್ತದೆ) ಯುಎಲ್ಪಿಪಿಯಲ್ಲಿ ಭಾಗಶಃ ಹಿಂಪಡೆದು ಖಾತೆಯನ್ನು ಜೀವಂತವಾಗಿ ಮುಂದುವರಿಸಿಕೊಂಡು ಹೋಗುವ ಸೌಲಭ್ಯವಿಲ್ಲ. ಇಲ್ಲೂ ಕೂಡಾ ಎನ್‌ಪಿಎಸ್ ಬೆಟರ್!
ಕರ ವಿನಾಯಿತಿ
ಯುಎಲ್ಪಿಪಿಗೆ ಮಾಡಿದ ದೇಣಿಗೆ 80ಸಿ ಸೆಕ್ಷನ್ ಅಡಿಯಲ್ಲಿ ವಾರ್ಷಿಕ ರೂ. 150000 ವರೆಗೆ ಇದೆ. ಆದರೆ ಎನ್‌ಪಿಎಸ್ ಇಲ್ಲೂ ವಿನ್ನರ್! ಎನ್‌ಪಿಎಸ್ ನಲ್ಲಿ 80ಸಿ ಅಡಿಯಲ್ಲಿ ರೂ. 1,50,000 ಹೊರತಾಗಿಯೂ ಪ್ರತ್ಯೇಕವಾದ ರೂ. 50000 ವಿನಾಯಿತಿ ಸೆಕ್ಷನ್ 80ಸಿಸಿಡಿ(1b) ಅಡಿಯಲ್ಲಿ ದೊರಕುತ್ತದೆ.
ಪ್ರತಿಫಲ
ಯುನಿಟ್ ಲಿಂಕ್ಡ್ ಎಂಬ ಪದ ಮಾರುಕಟ್ಟೆಯಲ್ಲಿ ಹೂಡಿಕೆಯನ್ನು ಸೂಚಿಸುತ್ತದೆ. ಅಂದರೆ ಪ್ರತಿಫಲವು ಮಾರುಕಟ್ಟೆಯ ಸಾಧನೆಯನ್ನು ಅನುಸರಿಸಿ ಸಿಗುತ್ತದೆ ಮತ್ತು ಇಲ್ಲಿ ಎಫ್ಡಿ, ಆರ್ಡಿಯಂತೆ ಯಾವುದೇ ಪೂರ್ವಸೂಚಿ ನಿಗದಿತ ಬಡ್ಡಿ ಸಿಗಲಾರದು. ಯುಎಲ್ಪಿಪಿ ಹಾಗೂ ಎನ್‌ಪಿಎಸ್ – ಇವೆರಡು ಯೋಜನೆಗಳೂ ಈ ನಿಟ್ಟಿನಲ್ಲಿ ಒಂದೇ ರೀತಿಯದ್ದಾಗಿದೆ. ಆದರೂ ಯುಎಲ್ಪಿಪಿ ಯೋಜನೆಯು ಕ್ಯಾಪಿಟಲ್ ಪ್ರೊಟೆಕ್ಷನ್ ಗ್ಯಾರಂಟಿಯ ಜೊತೆಗೆ ಬರುವ ಕಾರಣ ಇವುಗಳು ಶೇರು/ಈಕ್ವಿಟಿಯಲ್ಲಿ ಹೂಡಿಕೆ ಮಾಡಲು ಹಿಂಜರಿಯುತ್ತವೆ ಮತ್ತು ಸುಲಭವಾಗಿ ನಿರ್ದಿಷ್ಟ ಪ್ರತಿಫಲ ನೀಡುವ ಸಾಲಪತ್ರಗಳಲ್ಲಿ ಜಾಸ್ತಿ ಹೂಡಿಕೆ ಮಾಡುತ್ತವೆ.
ಹಾಗಾಗಿ ಯುಎಲ್ಪಿಪಿಯ ಪ್ರತಿಫಲ ಬಹಳಷ್ಟು ಸೌಮ್ಯವಾಗಿ ಇರುತ್ತದೆ, ಅತಿ ಜಾಸ್ತಿ ಎನ್ನುವ ಆಕರ್ಷಕ ಪ್ರತಿಫಲವನ್ನು ಈ ಯೋಜನೆ ಎಂದಿಗೂ ನೀಡಲಾರವು. ಆದರೆ ಎನ್‌ಪಿಎಸ್‌ನಲ್ಲಿ ನಿಮ್ಮ ನಿರ್ದೇಶನದ ಮೇರೆಗೆ ಈಕ್ವಿಟಿಯಲ್ಲಿ ಶೇ.75 ವರೆಗೆ ಹೂಡುವ ಅವಕಾಶ ಇರುವ ಕಾರಣ ದೀರ್ಘಾವಧಿಯ ಪ್ರತಿಫಲ ಜಾಸ್ತಿ ಬರುವ ನಿರೀಕ್ಷೆ ಇಟ್ಟುಕೊಳ್ಳಬಹುದು. ಆದರೂ ಬೇಕಾದವರಿಗೆ ಇಲ್ಲಿ ನೂರಕ್ಕೆ ನೂರು ಸಾಲಪತ್ರಗಳ ಹೂಡಿಕೆಯ ಆಯ್ಕೆಯೂ ಇದೆ. ಈ ರೀತಿ ಹಲವು ಮಜಲುಗಳಲ್ಲಿ ಯುಎಲ್ಪಿಪಿ ಹಾಗೂ ಎನ್‌ಪಿಎಸ್ ಯೋಜನೆಗಳನ್ನು ತಾಳೆ ಹಾಕಿ ನೋಡಬಹುದಾಗಿದೆ. ಒಂದು ಹೂಡಿಕೆಯ ದೃಷ್ಟಿಯಿಂದ ನೋಡುವುದಾದರೆ ಎನ್‌ಪಿಎಸ್ ಯೋಜನೆಯು ಯುಎಲ್ಎಫ್ ಯೋಜನೆಗಿಂತ ಕಡಿಮೆ ಖರ್ಚಿನ ಹೆಚ್ಚುವರಿ ಪ್ರತಿಫಲ/ಸೌಲಭ್ಯದ ಯೋಜನೆ ಎನ್ನುವುದು ಸರಿ ಸುಮಾರಾಗಿ ಕಂಡು ಬರುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ
BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ : ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?
Belagavi Session ಉದ್ವಿಗ್ನ:ಹೆಬ್ಬಾಳ್ಕರ್ ವಿರುದ್ದ ಅವಾಚ್ಯ ಪದ ಬಳಸಿದರೆ ಸಿ.ಟಿ.ರವಿ?
Year Ender: Horror movies-2024 ರ ಟಾಪ್ 5 ಹಾರರ್ ಚಲನಚಿತ್ರಗಳು
Udupi: ಗೀತೋತ್ಸವದಲ್ಲಿ ಹಾಸ್ಯೋತ್ಸವ; ನಕ್ಕು ನಲಿದ ಜನಸ್ತೋಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.