ನಿವೃತ್ತಿ ಪಾವತಿಗಳು ಮತ್ತು ಕರ ಕಾನೂನು
Team Udayavani, Nov 5, 2018, 6:00 AM IST
ವರ್ಷಗಟ್ಲೆ ದುಡಿದು ನಿವೃತ್ತಿಯಾದಾಗ ಸೆಂಡಾಫ್ ಪಾರ್ಟಿಯ ಒಂದು ಕಪ್ ಚಹಾ, ಎರಡು ಬಿಸ್ಕೇಟ್ ಜತೆ ಕೆಲ ನಿವೃತ್ತಿಯ ಪಾವತಿಗಳಿಗೂ ನೀವು ಭಾಜನರಾಗುತ್ತೀರಿ. ಆಗ ನಿಮ್ಮ ಕೈ ಸೇರುವ ಕೆಲ ಮುಖ್ಯ ಪಾವತಿಗಳು, ಅವುಗಳ ಮೇಲಿನ ಕರಗಳ ಬಗ್ಗೆ ಇಲ್ಲಿದೆ ಮಾಹಿತಿ.
ಕಾಸು ಕುಡಿಕೆ ಕಾಲಂನಲ್ಲಿ ಇ-ಮೈಲ್ ಐಡಿ ಹಾಕಿದ ನಂತರ ಹಲವಾರು ಓದುಗರ ಪತ್ರಗಳು ಬರುತ್ತಲೇ ಇರುತ್ತವೆ. ಲೇಖನಗಳನ್ನು ಓದಿ ಮೆಚ್ಚಿ ಬರೆವ ಪತ್ರಗಳು ಕೆಲವಾದರೆ ಹಲವಾರು ಪತ್ರಗಳು ಒಂದಲ್ಲ ಒಂದು ಗೊಂದಲಗಳ ನಿವಾರಣೆಗಾಗಿ ಬರುವಂತದ್ದು. ವೈಯಕ್ತಿಕವಾಗಿ ಹೂಡಿಕಾ ವಿಚಾರವಾಗಿ ಅಥವಾ ಕರ ವಿಚಾರವಾಗಿ ವಿವರಣೆಗಳನ್ನು ಕೋರುತ್ತಾ ಬರುವ ಇ-ಮೈಲ್‌ಗಳೇ ಅಧಿಕ. ಕಾಕು ಕಾಲಂ ಆರಂಭ ಮಾಡಿದ್ದೇ ಜನ ಹಿತಕ್ಕಾಗಿ ಆದಕಾರಣ ಬರುವ ಬಹಳಷ್ಟು ಪತ್ರಗಳಿಗೆ ಆ ಕೂಡಲೇ ಉತ್ತರಿಸುವ ಪ್ರಯತ್ನ ಮಾಡುತ್ತೇನೆ. ಆದರೂ ಎಲ್ಲಾ ಪತ್ರಗಳಿಗೆ ಉತ್ತರಿಸಲು ಆಗುತ್ತಿಲ್ಲ. ಕೆಲ ಪತ್ರಗಳಲ್ಲಿ ಅಗತ್ಯವಾದ ಮಾಹಿತಿಗಳ ಕೊರತೆ ಇರುತ್ತದೆ; ಇನ್ನು ಕೆಲವು ಗೊಂದಲಗಳು ಯಾವುದೋ ವಿಚಾರವಾಗಿ ಒಂದು ನಿಲುವನ್ನು ಕೋರುವಂತದ್ದಾಗಿದ್ದು ಅದನ್ನು ಒಂದು ಕೋರ್ಟ್ ಮಾತ್ರವೇ ಪರಿಹರಿಸಲು ಸಾಧ್ಯ. ಇನ್ನು ಕೆಲವು ಪತ್ರಗಳು ಒಂದು ಸುದೀರ್ಘ ಲೇಖನವನ್ನೇ ಬಯಸುತ್ತವೆ. ಆದಾಗ್ಯೂ ಸಾಧ್ಯವಾದಷ್ಟು ಮಟ್ಟಿಗೆ ಉತ್ತರಿಸುವ ಪ್ರಯತ್ನ ಮಾಡುತ್ತಿದ್ದೇನೆ. ಆದರೂ ಕೆಲವರಿಗೆ ನನ್ನಿಂದ ಉತ್ತರ ಬಾರದಿದ್ದಲ್ಲಿ ದಯವಿಟ್ಟು ಕ್ಷಮೆ ಇರಲಿ. ಸಮಯದ ಅಭಾವವೂ ಬಹಳಷ್ಟು ಬಾರಿ ಕಾಡಿದ್ದಿದೆ.
ಹಲವಾರು ಬಾರಿ ಬರುವ ಪ್ರಶ್ನೆಗಳೇ ಮುಂದಿನ ಕಾಕುವಿನ ವಸ್ತುವಾಗುವುದಿದೆ. ಅಂತಹ ವಸ್ತುಗಳನ್ನೇ ಆಯ್ದು ಅವನ್ನೇ ಮುಂದಿನ ಕಾಕುವಾಗಿ ಹೊಸೆದದ್ದಿದೆ. ಇತ್ತೀಚೆಗಿನ ದಿನಗಳಲ್ಲಿ ಬಹಳವಾಗಿ ಕೇಳಲ್ಪಡುವ ಒಂದು ಪ್ರಶ್ನೆ ನಿವೃತ್ತಿ ಸಮಯದ ಪಾವತಿ ಮತ್ತದರ ಮೇಲಿನ ಕರ ವಿನಾಯಿತಿಗೆ ಸಂಬಂಧಪಟ್ಟಂಥದ್ದು. ಈ ಬಾರಿ ಸ್ವಲ್ಪ ಅದೇ ಶೈಲಿಯಲ್ಲಿ ನಿವೃತ್ತಿಯ ಪಾವತಿಗಳು ಮತ್ತವುಗಳ ಮೇಲಿನ ಕರಭಾರದ ಬಗ್ಗೆ ಒಂದಿಷ್ಟು ಹೊಸೆದಿದ್ದೇನೆ. ಒಪ್ಪಿಸಿಕೊಳ್ಳಿ.
ಹೌದು, ವರ್ಷಗಟ್ಲೆ ದುಡಿದು ಕೊನೆಗೊಮ್ಮೆ ನಿವೃತ್ತಿಯ ಹಂತ ತಲುಪಿದಾಗ ಸೆಂಡಾಫ್ ಪಾರ್ಟಿಯ ಒಂದು ಕಪ್ ಚಹಾ ಮತ್ತೆರಡು ಬಿಸ್ಕೇಟ್‌ಗಳಲ್ಲದೆ ಕೆಲ ನಿವೃತ್ತಿಯ ಪಾವತಿಗಳಿಗೂ ನೀವು ಭಾಜನರಾಗುತ್ತೀರಿ. ನಿವೃತ್ತಿಯ ಸಂದರ್ಭದಲ್ಲಿ ನಿಮ್ಮ ಕೈ ಸೇರುವ ಕೆಲ ಮುಖ್ಯ ಪಾವತಿಗಳ ಬಗ್ಗೆ ಮತ್ತು ಅವುಗಳ ಮೇಲಿರುವ ಕರ ಕಾನೂನಿನ ಬಗ್ಗೆ ಈ ವಾರ ಚರ್ಚೆ ಮಾಡೋಣ:
ನಿವೃತ್ತಿ ಪಾವತಿಗಳು
1. ಪ್ರಾವಿಡೆಂಟ್ ಫಂಡ್
2. ಪೆನ್ಶನ್ ಮೊತ್ತ
3. ಗ್ರಾಚೂÂಟಿ ಮೊತ್ತ
4. ರಜೆಯ ನಗದು ಮೊತ್ತ
ಪ್ರಾವಿಡೆಂಟ್ ಫಂಡ್
ಉದ್ಯೋಗದ ಅವಧಿಯಲ್ಲಿ ಮಾಸಿಕ ಸಂಬಳದಿಂದ ಶೇ.12 ದರದಲ್ಲಿ ಕಡಿತಗೊಂಡ ಪ್ರಾವಿಡೆಂಟ್ ಫಂಡ್ ನಿಮ್ಮ ಹೆಸರಿನಲ್ಲಿಯೇ ಪ್ರತ್ಯೇಕ ಖಾತೆಯಲ್ಲಿ ಜಮೆಯಾಗಿರುತ್ತದೆ. ಈ ಮೊತ್ತ ನಿಮ್ಮ ನಿವೃತ್ತಿಯ ಸಂದರ್ಭದಲ್ಲಿ ನಿಮ್ಮ ಕೈಸೇರುತ್ತದೆ. ನಿವೃತ್ತಿಯ ಸಂದರ್ಭದಲ್ಲಿ ಕೈಸೇರಿದ ಪ್ರಾವಿಡೆಂಟ್ ಫಂಡ್ ಮೊತ್ತ ಸಂಪೂರ್ಣವಾಗಿ ಕರಮುಕ್ತವಾಗಿರುತ್ತದೆ. ಯಾವುದೇ ಮಿತಿಯಿಲ್ಲದೆ ಇದು ಕರಮುಕ್ತವಾಗಿರುವುದು ಉದ್ಯೋಗಿಗಳಿಗೆ ಒಂದು ವರದಾನವೇ ಸರಿ. ಏಕಗಂಟಿನಲ್ಲಿ ಸಿಗುವ ಈ ಮೊತ್ತವನ್ನು ಸೀನಿಯರ್ ಸಿಟಿಜನ್ ಸೇವಿಂಗ್ ಸ್ಕೀಂ ಅಥವಾ ಅನ್ಯೂಟಿ, ಮಂಥಿ ಇನ್‌ಕಮ್ ಸ್ಕೀಂ, ಡೆಟ್ ಫಂಡ್. ಫಿಕ್ಸ್$x ಡೆಪಾಸಿಟ್ ಇನ್ನಿತರ ಯೋಜನೆಯಲ್ಲಿ ತೊಡಗಿಸಿಕೊಂಡರೆ ನಿವೃತ್ತಿ ಜೀವನಕ್ಕೆ ಆಧಾರವಾದೀತು. ಈ ಪ್ರತಿಯೊಂದು ಹೂಡಿಕೆಗೂ ತನ್ನದೇ ಆದ ಪ್ರತಿಫಲ ಹಾಗೂ ಆದಾಯ ಕರ ಇರುವ ಕಾರಣ ಕೂಲಂಕಷ ಅಧ್ಯಯನ ಅಗತ್ಯ.
2. ಪೆನ್ಶನ್ ಮೊತ್ತ
ಇಪಿಎಸ್ ರೀತಿಯ ಪೆನ್ಶನ್ ಇರಲಿ ಅಥವಾ ಸರಕಾರಿ ಪೆನ್ಶನ್ ಇರಲಿ, ನಿವೃತ್ತಿಯ ಸಮಯದಲ್ಲಿ ನಿಮ್ಮ ಪೆನ್ಶನ್ ಖಾತೆಯಲ್ಲಿ ಒಂದು ಲೆಕ್ಕಾಚಾರದ ಪ್ರಕಾರ ಒಂದು ಪೆನ್ಶನ್ ಮೊತ್ತ ಸಂಚಯವಾಗಿರುತ್ತದೆ. ಈ ಮೊತ್ತವನ್ನು ಎರಡು ರೀತಿಯಲ್ಲಿ ಪಡಕೊಳ್ಳಬಹುದು.
ನಿವೃತ್ತಿಯ ಸಮಯದಲ್ಲಿ ಪೆನ್ಶನ್ ಫಂಡಿನ ಒಂದು ಭಾಗವನ್ನು ಏಕಗಂಟಿನಲ್ಲಿ ಕಮ್ಯೂಟೆಡ್ ಪೆನ್ಶನ್ ರೂಪದಲ್ಲಿ ಆಯ್ದುಕೊಂಡು ಉಳಿದ ಭಾಗವನ್ನು ಮಾಸಿಕ ಪೆನ್ಶನ್ ಪಾವತಿಯಾಗಿ ಪಡಕೊಳ್ಳುವ ಪದ್ಧತಿ ಬಹುತೇಕ ಚಾಲ್ತಿಯಲ್ಲಿದೆ. ಮಾಸಿಕವಾಗಿ ಕೈಸೇರುವ ಪೆನ್ಶನ್ ಸಂಬಳದ ಆದಾಯದಂತೆಯೇ ಕರಾರ್ಹವಾಗಿರುತ್ತದೆ. ಇದು ಸರಕಾರಿ ಹಾಗೂ ಖಾಸಗಿ ನೌಕರರಿಗೆ ಸಮಾನವಾಗಿ ಅನ್ವಯವಾಗುವ ಕಾನೂನು. ಆದರೆ ಉದ್ಯೋಗಿಯ ಮೃತ್ಯುವಿನ ಬಳಿಕ ಬರುವ ಫ್ಯಾಮಿಲಿ ಪೆನ್ಶನ್‌ಗೆ ವಾರ್ಷಿಕ ರೂ. 15,000 ಅಥವಾ 1/3ನೇ ಭಾಗಕ್ಕೆ (ಯಾವುದು ಕಡಿಮೆಯೋ ಅದು) ಕರ ವಿನಾಯಿತಿ ಇದೆ.
ಕಮ್ಯೂಟೆಡ್ ಭಾಗವು ನೌಕರರಿಗಾದರೆ ಅದು ಸಂಪೂರ್ಣವಾಗಿ ಕರ ವಿನಾಯಿತಿಯನ್ನು ಹೊಂದಿರುತ್ತದೆ. ಇಲ್ಲಿ ಸರಕಾರಿ ಅಂದರೆ ಕೇಂದ್ರ/ರಾಜ್ಯ ಸರಕಾರ, ಸ್ಥಳೀಯ ಸಂಸ್ಥೆಗಳು, ಸರಕಾರಿ ಕಾರ್ಪೋರೇಶನ್ ಹಾಗೂ ಪಿಎಸ್‌ಯುಗಳು. ಆದರೆ ಖಾಸಗಿ ಕ್ಷೇತ್ರದ ಉದ್ಯೋಗಿಗಳಿಗೆ ಎರಡು ರೀತಿಯ ಕಾನೂನು ಇದೆ. ಗ್ರಾಚೂÂಟಿ ಪಡೆಯುವ ನೌಕರರಿಗೆ ಒಟ್ಟು ಮೊತ್ತದ 1/3 ಕಮ್ಯೂಟೆಡ್ ಭಾಗ ಮಾತ್ರ ಕರ ವಿನಾಯಿತಿಗೆ ಅರ್ಹವಾಗಿರುತ್ತದೆ. ಗ್ರಾಚೂÂಟಿ ಪಡೆಯದ ನೌಕರರಿಗೆ 1/2 ಭಾಗದಷ್ಟು ಕರ ವಿನಾಯಿತಿಯೊಂದಿಗೆ ಕಮ್ಯೂಟ್ ಮಾಡಲು ಅವಕಾಶವಿದೆ.
3. ಗ್ರಾಚೂÂಟಿ ಮೊತ್ತ
5 ವರ್ಷ ಮೀರಿ ಕೆಲಸ ಮಾಡಿದ ಉದ್ಯೋಗಿಗಳಿಗೆ ನಿವೃತ್ತಿ/ವಿಆರ್‌ಎ ಸ್/ರಾಜೀನಾಮೆಯ ಸಂದರ್ಭಗಳಲ್ಲಿ ಅಥವಾ ಅವರು ಮೃತ್ಯು ಹೊಂದಿದರೆ ಕುಟುಂಬದವರ ಕೈಗೆ ಸಿಗುವ ಗ್ರಾಚೂÂಟಿ ಮೊತ್ತ ಒಟ್ಟು ಸರ್ವಿಸ್ ಅವಧಿಯನ್ನು ಅನುಸರಿಸಿ ನೀಡಲಾಗುತ್ತದೆ. ಇಂತಹ ಗ್ರಾಚೂÂಟಿ ಸರಕಾರಿ ನೌಕರರ ಕೈಯಲ್ಲಿ ಯಾವುದೇ ಮಿತಿಯಿಲ್ಲದೆ ಸಂಪೂರ್ಣವಾಗಿ ಕರಮುಕ್ತವಾಗಿರುತ್ತದೆ.
ಆದರೆ ಖಾಸಗಿ ವಲಯದಲ್ಲಿ ಕರವಿನಾಯಿತಿಗೆ ಮಿತಿ ಇದೆ. ಪೇಯೆ¾ಂಟ್ ಆಫ್ ಗ್ರಾಚೂÂಟಿ ಆ್ಯಕ್ಟ್ 1972 ಅಡಿಯಲ್ಲಿ ಬರುವವರಿಗೆ ಆ ಮಿತಿಯನ್ನು ಈ ಕೆಳಗಿನಂತೆ ಲೆಕ್ಕ ಹಾಕಲಾಗುತ್ತದೆ.
1.ಪ್ರತಿ ವರ್ಷದ ಸೇವೆಗೆ 15 ದಿನಗಳ ಲೆಕ್ಕದಲ್ಲಿ ಅಂತ್ಯದ ಸಂಬಳದ ಅನುಸಾರ ಲೆಕ್ಕ ಹಾಕಿದರೆ ಸಿಗುವ ಮೊತ್ತ (ಒಂದು ತಿಂಗಳಿಗೆ 26 ದಿನಗಳೆಂದು ತೆಗೆದುಕೊಳ್ಳಬೇಕು ಹಾಗೂ 6 ತಿಂಗಳು ದಾಟಿದ ಸೇವೆಯನ್ನು ಪೂರ್ತಿ ವರ್ಷದ ಲೆಕ್ಕಕ್ಕೆ ತೆಗೆದುಕೊಳ್ಳಬೇಕು. ಸಂಬಳ ಎಂದರೆ ಬೇಸಿಕ್ ಮತ್ತು ಡಿಎ ಎಂದು ತಿಳಿಯಬೇಕು)
2. ನಿಜವಾಗಿಯೂ ಪಾವತಿಗೊಂಡ ಗ್ರಾಚೂÂಟಿ ಮೊತ್ತ
3. ರೂ. 20 ಲಕ್ಷ
ಈ ಮೂರರಲ್ಲಿ ಯಾವುದು ಕನಿಷ್ಠವೋ ಅಷ್ಟು ಮೊತ್ತ ಕರ ಮುಕ್ತವಾಗಿರುತ್ತದೆ. ಅದಕ್ಕೂ ಮೀರಿ ಗ್ರಾಚೂÂಟಿ ಸಿಕ್ಕಿದರೆ ಅದರ ಮೇಲೆ ಆ ವರ್ಷದ ಸ್ಲಾಬ್ ಅನುಸರಿಸಿ ಕರ ಕಟ್ಟಬೇಕು. ಕೆಲ ಖಾಸಗಿ ಕಂಪೆನಿಗಳು ರೂ. 20 ಲಕ್ಷಕ್ಕೂ ಮೀರಿ ಗ್ರಾಚೂÂಟಿ ಕೊಡುವುದುಂಟು. ಅಂತಹ ಸಂದರ್ಭದಲ್ಲಿ ಆ ಹೆಚ್ಚುವರಿ ಮೊತ್ತದ ಮೇಲೆ ಕರ ನೀಡಬೇಕಾಗುತ್ತದೆ.
4. ರಜೆಯ ನಗದು ಮೊತ್ತ
ಲೀವ್ ಎನ್‌ಕ್ಯಾಶ್‌ಮೆಂಟ್ ಎಂದು ಕರೆಯಲ್ಪಡುವ ಈ ಪಾವತಿ “ಅರ್ನ್ಡ್ ಲೀವ್’ಗೆ ಮಾತ್ರ ಅನ್ವಯಿಸುತ್ತದೆ. ಒಬ್ಟಾತ ತನ್ನ ಕ್ಯಾಶುವಲ್ ಲೀವ್, ಸಿಕ್ ಲೀವ್ ಇತ್ಯಾದಿಗಳನ್ನು ನಗದೀಕರಿಸುವಂತಿಲ್ಲ. ಸಂಸ್ಥೆಗಳಲ್ಲಿ ಎಷ್ಟು ರಜೆಯನ್ನು ಯಾವ ರೀತಿಯಲ್ಲಿ ನಗದೀಕರಿಸಬಹುದು ಎನ್ನುವ ಬಗ್ಗೆ ಪ್ರತ್ಯೇಕ ನಿಯಮಾವಳಿಗಳು ಇರುತ್ತವೆ. ಬಹುತೇಕ ಖಾಸಗಿ ನೌಕರರಿಗೆ ಒಂದು ವರ್ಷಕ್ಕೆ 1 ತಿಂಗಳಿಂದ ಮಿಗಿಲಾಗಿ ಅರ್ನ್ಡ್ ಲೀವ್ ಇರುವುದಿಲ್ಲ.
ಸೇವೆಯ ಅವಧಿಯಲ್ಲಿ ರಜೆಯನ್ನು ನಗದೀಕರಿಸಿದರೆ ಅದರ ಮೇಲೆ ಪೂರ್ತಿ ಆದಾಯ ಕರ ಬೀಳುತ್ತದೆ. ಆದರೆ ನಿವೃತ್ತಿ/
ವಿಆರ್‌ಎಸ್/ರಾಜೀನಾಮೆಯ ಸಂದರ್ಭದಲ್ಲಿ ನಗದೀಕರಿಸಿದರೆ ಅದರ ಮೇಲೆ ಕರ ವಿನಾಯಿತಿ ಇದೆ.
ಸರಕಾರಿ ನೌಕರರಿಗೆ (ಕೇಂದ್ರ ಹಾಗೂ ರಾಜ್ಯ ಸರಕಾರ) ನಿವೃತ್ತಿ ಸಂದರ್ಭದಲ್ಲಿ ಅರ್ನ್ಡ್ ಲೀವ್ ಅನ್ನು ನಗದೀಕರಿಸಲು ಯಾವುದೇ ಮಿತಿ ಇಲ್ಲದೆ ಕರ ವಿನಾಯಿತಿ ಸಿಗುತ್ತದೆ. ಖಾಸಗಿ ನೌಕರಿಯಲ್ಲಿ ನಿವೃತ್ತಿ ಪಡೆದಾಗ ಅರ್ನ್ಡ್ ಲೀವ್ ನಗದೀಕರಿಸುವಲ್ಲಿ ಈ ಕೆಳಗಿನ ರೀತ್ಯಾ ಆದಾಯ ಕರ ವಿನಾಯಿತಿ ಸಿಗುತ್ತದೆ.
1. ಕಳೆದ 10 ತಿಂಗಳುಗಳ ಸರಾಸರಿ ಸಂಬಳ ಲೆಕ್ಕದಲ್ಲಿ ಗರಿಷ್ಟ 10 ತಿಂಗಳ ಸಂಬಳ (ಇಲ್ಲಿ ಬೇಸಿಕ್,ಡಿಎ, ಡಿಯರೆ°ಸ್ ಪೇ, ಶೇಕಡಾವಾರು ಕಮಿಶನ್) ಮೊತ್ತವನ್ನು ಸಂಬಳವೆಂದು ಪರಿಗಣಿಸಬೇಕು)
2. ನೈಜವಾಗಿ ಅರ್ನ್ಡ್ ಲೀವ್ ನಗದೀಕರಣದ ಮೊತ್ತ
3. ವರ್ಷಕ್ಕೆ 30 ದಿನಗಳಂತೆ ಪ್ರತಿ ಸೇವಾ ವರ್ಷಕ್ಕೆ ಲೆಕ್ಕ ಹಾಕಿದ ಬಾಕಿ ರಜೆಯ ಒಟ್ಟು ಮೊತ್ತ
4. ರೂ. 3 ಲಕ್ಷ
ಇವುಗಳಲ್ಲಿ ಯಾವುದು ಕನಿಷ್ಠವೋ ಅದು ಕರ ವಿನಾಯಿತಿಯನ್ನು ಹೊಂದುತ್ತದೆ. ಆದರೆ ಮೃತ್ಯು ಸಂಭವಿಸಿದಲ್ಲಿ ನೌಕರನ ಮನೆಯವರಿಗೆ ನೀಡುವ ರಜೆಯ ಮೊತ್ತಕ್ಕೆ ಸಂಪೂರ್ಣ ಕರ ವಿನಾಯಿತಿ ಇರುವುದು.
ವಿ.ಸೂ: ತೆರಿಗೆ ವಿಚಾರಗಳನ್ನು ಆದಷ್ಟು ಸರಳ ರೂಪದಲ್ಲಿ ಜನಸಾಮಾನ್ಯರ ಮಾಹಿತಿಗಾಗಿ ತಿಳಿಸುವುದು ಮಾತ್ರ ಇಲ್ಲಿನ ಉದ್ಧೇಶ. ಆದಾಯ ತೆರಿಗೆ ಒಂದು ಕ್ಲಿಷ್ಟ ಮತ್ತು ಗೋಜಲಿನ ವಿಚಾರವಾಗಿದ್ದು ಎಷ್ಟೋ ವಿಚಾರಗಳನ್ನು ಇಲ್ಲಿ ಪ್ರಸ್ತಾಪಿಸಿಲ್ಲ. ಎಷ್ಟೋ ವಿಚಾರಗಳಲ್ಲಿ ಗೊಂದಲಗಳು ಮೂಲ ಕಾನೂನಿನಲ್ಲಿಯೇ ಇರುತ್ತವೆ. ಅದೆಷ್ಟೋ ವಿಚಾರಗಳು ಟ್ರಿಬ್ಯೂನಲ…/ಕೋರ್ಟ್ ನಿರ್ಧಾರಗಳನ್ನು ಅನುಸರಿಸಿ ಅಥೆìçಸಲಾಗುತ್ತದೆ. ಇನ್ನೆಷ್ಟೋ ವಿಚಾರಗಳು ಕರ ಇಲಾಖೆಯ ಒಂದೊಂದು ಕಚೇರಿಯಲ್ಲಿ ಚಾರಿತ್ರಿಕ ಹಿನ್ನೆಲೆಯ ಪ್ರಕಾರ ಅಥೆìçಸಲಾಗುತ್ತದೆ. ಇನ್ನು ಕೆಲವು ವಿಚಾರಗಳು ಅನುಷ್ಠಾನದಲ್ಲಿ ಇರುವುದೇ ಇಲ್ಲ. ಪ್ರತಿಯೊಬ್ಬರೂ ಅವರವರ ಸಂದರ್ಭಾನುಸಾರ ನುರಿತ ಸಿಎ/ಕರ ಸಲಹೆಗಾರರ ಜೊತೆ ಚರ್ಚಿಸಿಯೇ ಕರ ವಿಚಾರದಲ್ಲಿ ಮುಂದುವರಿಯಬೇಕಾಗಿ ವಿನಂತಿ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.