ನೋಬೆಲ್ ವಿಜೇತ ರಿಚಾರ್ಡ್ ಥೇಲರ್ ಮತ್ತು ನಿಮ್ಮ ಕುಡಿಕೆ
Team Udayavani, Oct 16, 2017, 11:02 AM IST
ಅರ್ಥ ಶಾಸ್ತ್ರ ವಿಭಾಗದಲ್ಲಿ ಈ ವರ್ಷದ ನೋಬಲ್ ಪ್ರಶಸ್ತಿಯು ರಿಚಾರ್ಡ್ ಥೇಲರ್ ಅವರಿಗೆ ಸಿಕ್ಕಿರುವುದು ಇದೇ ಕೆಲ ದಿನಗಳ ಹಿಂದೆ ಘೋಷಣೆಯಾಗಿರುವುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರವೇ. ಆಯ್ಕೆ ಪಟ್ಟಿಯಲ್ಲಿ ನಮ್ಮವರೇ ಆದ ರಘುರಾಮ ರಾಜನ್ ಅವರ ಹೆಸರೂ ಇದ್ದ ಕಾರಣ ಈ ಬಾರಿ ಅರ್ಥಶಾಸ್ತ್ರದ ನೋಬೆಲ್ ಭಾರತದಲ್ಲಿ ಜಾಸ್ತಿ ಸುದ್ದಿಗೆ ಗ್ರಾಸವಾಗಿತ್ತು. ಕೊನೆಗೂ ಅದು ಲಭಿಸಿದ್ದು ಅಮೇರಿಕಾದ ರಿಚಾರ್ಡ್ ಥೇಲರ್ ಅವರಿಗೆ. ಪ್ರಾಯಶಃ ನಿಮ್ಮಲ್ಲಿ ಹಲವರಿಗೆ ರಿಚಾರ್ಡ್ ಥೇಲರ್‌ಗೂ ನಮ್ಮ ಕುಡಿಕೆಗೂ ಇರುವ ಸಂಬಂಧ ತಿಳಿದಿರಲಿಕ್ಕಿಲ್ಲ. ನಮ್ಮ ಗಂಟಿಗೂ ಇವರಿಗೂ ಇರುವ ನಂಟು ಏನಪ್ಪಾ ಅಂದ್ರೆ ಇವರು ಮಾಡಿರುವ ಸಾಧನೆ ಹೂಡಿಕಾ ಕ್ಷೇತ್ರದಲ್ಲಿ ಮನುಷ್ಯನ ನಡತೆಯ ಬಗ್ಗೆ. ಈ ಬಗ್ಗೆ ನಾವು ಕಾಸು ಕುಡಿಕೆಯಲ್ಲಿ ಸುಮಾರು ಹತ್ತು ವರ್ಷಗಳ ಹಿಂದೆಯೇ ಒಂದು ಚರ್ಚೆಯನ್ನೂ ಮಾಡಿದ್ದೇವು.
ತಾನು ಅತೀ ಬುದ್ಧಿವಂತ ನನ್ನ ನಿರ್ಧಾರಗಳೆಲ್ಲವೂ ಅತಿ ತಾರ್ಕಿಕವಾದದ್ದು ಎಂದು ಹೇಳಿಕೊಂಡು ತಿರುಗಾಡುವ ಜೀವಿ ಎಂದರೆ ಮನುಷ್ಯ ಮಾತ್ರ. ಮನುಷ್ಯ ಎಂಬ ಈ ಪ್ರಾಣಿ, ತನ್ನ ಎಲ್ಲ ನಿರ್ಧಾರಗಳನ್ನು ಆಲೋಚನಾ ಬದ್ಧವಾಗಿಯೂ, ಅತಿ ತಾರ್ಕಿಕವಾಗಿಯೂ ತೆಗೆದುಕೊಳ್ಳುತ್ತಾನೆ ಎಂದು ತಿಳಿದು ಕೊಂಡಿರುವ ಕಾಲಘಟ್ಟವೊಂದಿತ್ತು. ಪಾಶ್ಚಾತ್ಯ ಜಗತ್ತಿನ ಹೆಚ್ಚಿನ ಅರ್ಥಶಾಸ್ತ್ರ ಹಾಗೂ ಸಮಾಜ ವಿಜ್ಞಾನದ ಥಿಯರಿಗಳು ಈ ಸಾಮಾನ್ಯ ನಂಬಿಕೆಯ ಮೇಲೆ ಕಟ್ಟಲ್ಪಟ್ಟಿದ್ದವು. ಪ್ರತಿಯೊಂದಕ್ಕೂ ತರ್ಕದ ಆಸರೆ ಪಡೆದು ತರ್ಕವೇ ಪ್ರಧಾನವೆಂದು ಮನುಷ್ಯನ ನಡವಳಿಕೆಯನ್ನು ಅವಲಂಭಿಸಿರುವ ವಿಷಯಗಳ ಮೇಲೆಲ್ಲಾ ಹೇರಲಾಗುತ್ತಿತ್ತು.
ಆದರೆ, ಕಳೆದ ಶತಕದ ಎಪ್ಪತ್ತರ ದಶಕದಲ್ಲಿ ಅಮೋಸ್ ಟ್ವೆಸ್ಕಿ ಹಾಗೂ ಡೇನಿಯಲ್ ಕೆನೆಮನ್ ಎಂಬೀರ್ವರು ಈ ನಂಬಿಕೆ ಯನ್ನು ಅಲುಗಾಡಿಸಿ ಮನುಷ್ಯ ಓರ್ವ ಅತಾರ್ಕಿಕ ನಿರ್ಧಾರ ವಂತ ಮತ್ತು ಆತನ ನಿರ್ಧಾರಗಳಲ್ಲಿ ಭಾವನೆಗೇ ಹೆಚ್ಚು ಒತ್ತಿ ಇರುತ್ತದೆ ಎನ್ನುವ ವಾದವನ್ನು ಆಧಾರ ಸಹಿತ ನಿರೂಪಣೆ ಮಾಡತೊಡಗಿದರು. ಈ ಸಂಶೋದನೆಗಳ ಸರಣಿಗೆ 2002ರಲ್ಲಿ ಡೇನಿಯಲ್ ಕೆನೆಮನ್ ಅವರಿಗಿ ಅರ್ಥ ಶಾಸ್ತ್ರದ ನೋಬೆಲ್ ನೀಡಿ ಗೌರವಿಸಲಾಯಿತು. ಟ್ವೆಸ್ಕಿಯವರ ಅಕಾಲಿಕ ನಿಧನದ ಕಾರಣದಿಂದಾಗಿ ಅವರಿಗೆ ಈ ಪ್ರಶಸ್ತಿ ಸಿಗಲಿಲ್ಲ. ಇದೀಗ 2017 ರಲ್ಲಿ ಅದೇ ಪಂಗಡಕ್ಕೆ ಸೇರಿದ ಅದೇ ವಿಚಾರದಲ್ಲಿ ದಶಕಗಳಿಂದಲೂ ಸಂಶೋಧನೆ ಮಾಡಿ ಪ್ರಬಂಧಗಳನ್ನು ಮಂಡಿಸಿರುವ ರಿಚಾರ್ಡ್ ಥೇಲರ್ ಅವರಿಗೂ ನೋಬೆಲ್ ಪ್ರಶಸ್ತಿ ಸಂದಿದೆ. ಮೂರ್ವರು ಹಾಗೂ ಬಿಹೇವಿಯರಲ್ ಫೈನಾನ್ಸ್ ಎಂಬ ಈ ಪಂಥದ ಇನ್ನಿತರ ಸಂಶೋಧಕರು ಪ್ರತಿಪಾದಿಸುವ ಮುಖವಾದ ತತ್ವವೇನೆಂದರೆ ಮನುಷ್ಯ, ತಾನು ಅತ್ಯಂತ ತಾರ್ಕಿಕನೆಂದು ಸೋಗು ಹಾಕುವ ಓರ್ವ ಅತಾರ್ಕಿಕ ಜೀವಿ!
ಈ ಬಾರಿಯ ಕಾಕುವಿನಲ್ಲಿ ರಿಚಾರ್ಡ್ ಥೇಲರ್ ಪ್ರತಿಪಾದಿ ಸಿದ ಎರಡು ಸ್ಯಾಂಪಲ್ ಥಿಯರಿಯ ಬಗ್ಗೆ ಸಂಕ್ಷಿಪ್ತವಾಗಿ ಪ್ರಸ್ತಾಪಿಸುತ್ತಿದ್ದೇನೆ. ದಯವಿಟ್ಟು ಆತನ ವಾದ ಸರಣಿಯನ್ನು ಓದಿ ನಮ್ಮೊಳಗೆ ನಡೆಯುವ ನಿರ್ಧಾರದ ಪ್ರಕ್ರಿಯೆಯನ್ನು ಒರೆಹಚ್ಚಿ ನಾವು ಯಾವ ರೀತಿ ಭಾವನೆಗಳಿಗೆ ಬಲಿ ಬಿದ್ದು ನಮ್ಮ ಆರ್ಥಿಕ ನಿರ್ಧಾರಗಳಲ್ಲಿ ಅತಾರ್ಕಿಕರಾಗುತ್ತೇವೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಿ.
ಹಾಕಿದ ದುಡ್ಡು ಎಂಬ ಮಿಥ್ಯೆ (ಸಂಕ್ ಕೋಸ್ಟ್ ಫಾಲ್ಲಸಿ)
ಈವಾಗ ನಿಮ್ಮಲ್ಲಿ ಕಳೆದ ವರ್ಷವಷ್ಟೇ ಕೊಂಡ ಒಂದು ಹೊಸ ಮಾರುತಿ ಆಲ್ಟೋ ಕಾರಿದೆ ಎಂದಿಟ್ಟುಕೊಳ್ಳಿ- 3 ಲಕ್ಷ ಕೊಟ್ಟು ಖರೀದಿಸಿದ್ದು. ಇವತ್ತಿನವರೆಗೆ ಅದು ಉತ್ತಮ ಸೇವೆ ನೀಡಿದ್ದು ಯಾವುದೇ ತೊಂದರೆ ಕೊಟ್ಟಿರಲಿಲ್ಲ ಎಂದಿಟ್ಟುಕೊಳ್ಳಿ. ಅದರೆ ಅಚಾನಕ್ಕಾಗಿ ಇವತ್ತು ಬೆಳಗ್ಗೆ ಏನು ಮಾಡಿದರೂ ಸ್ಟಾರ್ಟ್ ಅಗುವುದಿಲ್ಲ. ನೀವು ಆಗ ಮನೆಪಕ್ಕದ ಮೆಕಾನಿಕ್ ಅನ್ನು ಕರೆಸಿದಾಗ ಆತ ಅದನ್ನು ಪರೀಕ್ಷಿಸಿ ಅದರಲ್ಲಿ ಬೇರೇನೂ ತೊಂದರೆ ಇಲ್ಲ, ಒಂದು ಸಣ್ಣ ಎಲೆಕ್ಟ್ರಿಕಲ್ ಫಾಲ್ಟ್ ಮಾತ್ರ ಇದೆ.
ಒಂದು ನೂರಿನ್ನೂರು ಖರ್ಚು ಮಾಡಿದರೆ ಸರಿಯಾದೀತು ಎಂಬ ಡಿಯಗ್ನೊಸಿಸ್ ಕೊಡುತ್ತಾನೆ. ನೀವಾಗ ನೂರಿನ್ನೂರು ರುಪಾಯಿಗಳಿಗೆ ಹಿಂದು ಮುಂದು ನೋಡುವುದಿಲ್ಲ. ಕೂಡಲೇ ಅಷ್ಟು ಖರ್ಚು ಮಾಡಿ ಅದನ್ನು ರಿಪೇರಿಗೊಳಿಸಿ ಚಲಾಯಿಸ ತೊಡಗುತ್ತೀರಿ. ಯಾಕೆಂದರೆ ನೀವು ಕಾರಿಗೆ ಕೊಟ್ಟ 3 ಲಕ್ಷ ರೂ. ಇಂದಿಗೆ ಹಾಕಿದ ದುಡ್ಡು ಒಂದು ಸಂಕ್ ಕಾಸ್ಟ್. ಅದು ವಾಪಸು ಬರಲಾರದು. ನಿಮಗೆ ಕಾರನ್ನು ಈಗ ರಿಪೇರಿ ಮಾಡಿಸದೆ ಬೇರೆ ದಾರಿಯಿಲ್ಲ. ಕಾರು ಚಲಾಯಿಸಬೇಕಾದರೆ ಮತ್ತು ಹಾಕಿದ ಮೂರು ಲಕ್ಷದಿಂದ ಯಾವುದೇ ಪ್ರಯೋಜನ ಪಡೆಯಬೇಕಾ ದರೆ ಈಗ ಪುನಃ ನೂರಿನ್ನೂರು ಬಿಚ್ಚಲೇ ಬೇಕು. ಇದು ಸಂಕ್ ಕಾಸ್ಟ್‌ನ ಮೂಲ ತಣ್ತೀ; ಒಂದು ಧನಾತ್ಮಕ ಮುಖ.ಅದೇ ಭಾವನೆ ಮುಂದುವರಿದರೆ, ನಾವು ಇಪ್ಪತ್ತು ವರ್ಷಗಳ ಹಿಂದೆ ಕೊಂಡ ಮಾರುತಿ-ಎಂಟುನೂರು ಗಾಡಿ ಈಗ ಸಾಕಷ್ಟು ತೊಂದರೆ ಕೊಡುತ್ತಿದ್ದರೂ ಅದನ್ನು ಗುಜುರಿಗೆ ಸಾಗಹಾಕಲು ನಮ್ಮ ಹಾಕಿದ ದುಡ್ಡಿನ ಪಾಶ ನಮ್ಮನ್ನು ಬಿಡುವುದಿಲ್ಲ. ಅದಕ್ಕೆ ನಾನು ಆ ಕಾಲದಲ್ಲಿ ಒಂದು ಲಕ್ಷ ಕೊಟ್ಟಿದ್ದೇನೆ ಎಂಬ ಪ್ರಜ್ಞೆ ಯಾವತ್ತೂ ನಮ್ಮನ್ನು ಕಾಡುತ್ತಲೇ ಇರುತ್ತದೆ. ಅದೇ ಕಾರಣಕ್ಕಾಗಿ ಇವತ್ತಿಗೂ ವರ್ಷಂಪ್ರತಿ ಅದರ ರಿಪೇರಿ ಎಂದು ಜಾಸ್ತಿ ದುಡ್ಡನ್ನು ಅದರ ಮೇಲೆ ಸುರಿಯುತ್ತೇವೆ. ಅದರ ರಿಪೇರಿಗೆ ಸುರಿದ ದುಡ್ಡಿನಲ್ಲಿ ಇನ್ನೆರಡು ಹೊಸ ಕಾರು ಬರ್ತಿತ್ತು ಎಂಬ ಮಾತನ್ನು ನಿಮ್ಮ ಹೆಂಡತಿ ನಿಮ್ಮ ತಲೆಗೆ ಎಂಟು ನೂರು ಬಾರಿ ಹೇಳಿದರೂ ನೀವು ಕೇಳಿಸಿಕೊಳ್ಳುವುದಿಲ್ಲ.
ಇನ್ನೊಬ್ಬರಿಗಾದರೆ ಈ ಬುದ್ಧಿವಂತಿಕೆಯನ್ನು ನೀವೂ ನೀಡಿರಬಹುದು. ಆದರೆ ನಮ್ಮ ನಮ್ಮ ವಿಚಾರಕ್ಕೆ ನಾವು ಆ ತರ್ಕವನ್ನು ಒಪ್ಪಿಕೊಳ್ಳದೆ ಹಾಕಿದ ದುಡ್ಡಿನ ವ್ಯಾಮೋಹಕ್ಕೆ ಬಲಿಯಾಗುತ್ತೇವೆ. ನಮ್ಮ ಮನೆಯಲ್ಲಿ ಒಂದು ವಾಶಿಂಗ್ ಮೆಶೀನ್ ಇತ್ತು. ಅದರನ್ನೂ ನಾವು ಹಾಕಿದ ದುಡ್ಡಿನ ಮೋಹದಿಂದಾ ಗಿ ಕೆಲವು ವರ್ಷ ರಿಪೇರಿಗೆ ದುಬಾರಿ ವೆಚ್ಚ ಹಾಕಿ ಸಾಕಿದ್ದೇವೆ. ಅದರ ರಿಪೇರಿಗೆ ಹಾಕಿದ ದುಡ್ಡಿನಲ್ಲಿ ಎರಡು ವಾಶಿಂಗ್ ಮೆಶಿನ್ ನಮಗೂ ತೆಗೆಯಬಹುದಿತ್ತು. ಇದು ಸಂಕ್ ಕಾಸ್ಟ್‌ನ ಋಣಾತ್ಮಕ ಮುಖ- ಸಂಕ್ ಕಾಸ್ಟ್ ಮಿಥ್ಯೆ ಅಥವ ಸಂಕ್ ಕಾಸ್ಟ್ ಫಾಲಸಿ ರಿಚಾರ್ಡ್ ಥೇಲರ್ ಪ್ರತಿಪಾದಿಸಿದ ಸಂಕ್ ಕೋಸ್ಟ್ ಫಾಲ್ಲಸಿ ಎಂಬ ಈ ಥಿಯರಿಯ ಪ್ರಕಾರ ನಾವು ಯಾವುದೇ ವಸ್ತುವಿನಲ್ಲಿ ಒಮ್ಮೆ ಹೂಡಿದ ದುಡ್ಡನ್ನು ನಮ್ಮಿಂದ ಮರೆಯಲು ಸಾಧ್ಯವಾಗುವುದಿಲ್ಲ. ಅದರ ಪಾಶ ಎಂದೆಂದಿಗೂ ನಮ್ಮನ್ನು ಎಳೆ ಯುತ್ತಲೇ ಇರುತ್ತದೆ. ಆದರೆ ತಾರ್ಕಿಕವಾಗಿ ನೋಡುವುದಾದರೆ, ಞ ವಾಸ್ತವದಲ್ಲಿ ಯಾವುದೇ ವಸ್ತುವನ್ನೂ ಅದರ ಇಕನಾಮಿಕ್ ಲೈಫ್ ಕಳೆದ ಮೇಲೆ ಇಟ್ಟುಕೊಂಡು ಸಾಕುವುದರಲ್ಲಿ ಅರ್ಥವಿಲ್ಲ.
ಈಗ ಕಾಸು ಕುಡಿಕೆಗೆ ಬರೋಣ. ಒಂದು ಷೇರನ್ನು ಕೊಂಡ ಬಳಿಕ ಅದರ ಬೆಲೆ ಇಳಿಮುಖವಾದರೆ ಹೆಚ್ಚಿನವರಲ್ಲಿ ಈ ಸಂಕ್ ಕೋಸ್ಟ್ ಫಾಲ್ಲಸಿ ಪ್ರಜ್ಞೆ ಜಾಗ್ರತವಾಗುತ್ತದೆ. ಅಯ್ಯಯ್ಯೋ ಅದಕ್ಕೆ ನಾನು 1000 ರೂಪಾಯಿ ಹಾಕಿದ್ದೇನಲ್ಲಾ? ಈಗ ಬರೇ 900 ಕ್ಕೆ ಇಳಿದಿದೆಯಲ್ಲಾ? ಎಂಬ ಚಿಂತೆ ಸುರುವಾಗುತ್ತದೆ. ಇರಲಿ ಬಿಡಿ, 900ಕ್ಕೆ ಇನ್ನಷ್ಟು ಕೊಂಡು ನನ್ನ ಸರಾಸರಿ ಬೆಲೆಯನ್ನು ಕಡಿಮೆ ಮಾಡುತ್ತೇನೆ ಎಂದುಕೊಳ್ಳುತ್ತಾ ಇಳಿಯುತ್ತಿರುವ ಷೇರನ್ನು ಇನ್ನಷ್ಟು ಕೊಳ್ಳುತ್ತಾರೆ. ನಾನು ಅವರೇ ಜ್ ಡೌನ್ ಮಾಡುತ್ತಿದ್ದೇನೆ ಎಂಬ ವಿವರಣೆ ಯನ್ನು ಕೂಡಾ ಕೊಡುತ್ತಾರೆ. ಇದಕ್ಕೆ ಟಿವಿಯಲ್ಲಿ ಬರುವ ಸೂಟೆಡ್ ಬೂಟೆಡ್ ಷೇರು ಜೋಯಿಷರು ಇನ್ನಷ್ಟು ತುಪ್ಪ ಸುರಿಯುತ್ತಾರೆ. ಶೇರಾಗ್ನಿಯಲ್ಲಿ ಹೋಮಕ್ಕೆ ನೀವು ತಯಾರಾಗುತ್ತೀರಿ. ಈ ಬೆಲೆಯಿಳಿಕೆ ತಾತ್ಕಾಲಿಕವಾದರೆ ಪರವಾಗಿಲ್ಲ. ಮುಂದಕ್ಕೆ ಪುನಃ ಮೇಲಕ್ಕೆ ಹೋದೀತು ಎಂಬ ಧೋರಣೆಯಿಂದ ಇನ್ನಷ್ಟು ಕೊಳ್ಳುವುದು ಸರಿಯಾದ ಕ್ರಮವೇ. ಆದರೆ ಪೆನ್ನಿ ಷೇರುಗಳು, ಸ್ಕಾಮ್ ಕಳಂಕಿತ ಷೇರುಗಳು, ನಾಮೋ-ನಿಶಾನ್ ಇಲ್ಲದ ಗತಿಗೆಟ್ಟ ಷೇರುಗಳು- ಈ ರೀತಿ ಮುಳುಗುತ್ತಿರುವ ಕಳಪೆ ಷೇರಿನ ರಿಪೇರಿಗೆ ಇನ್ನಷ್ಟೂ ದುಡ್ಡು ಸುರಿಯುತ್ತಾರೆ. ಷೇರು ಮುಳುಗುತ್ತಲೇ ಹೋಗಿ ಒಂದು ದಿನ ಅಂತರ್ಧಾನವಾಗುತ್ತದೆ.
ಇದು ಸಂಕ್ ಕಾಸ್ಟ್ ಫಾಲಸಿಯ ಕರಾಳ ಮುಖ! ಒಂದೇ ಕಂಪೆನಿಯ ಪ್ರತಿಯೊಂದು ಷೇರೂ ಕೂಡಾ ಸ್ವತಂತ್ರ ಹಾಗೂ ಅದೇ ಕಂಪೆನಿಯ ಇನ್ನೊಂದು ಷೇರಿಗಿಂತ ಸ್ವತಂತ್ರ. ಹಾಗಾಗಿ, ಷೇರು ವ್ಯವಹಾರದಲ್ಲಿ ಪ್ರತಿ ಹೂಡಿಕೆಯನ್ನೂ ಹಳೆಯದಕ್ಕಿಂತ ಭಿನ್ನವಾಗಿ, ಒಂದು ಹೊಸ ಹೂಡಿಕೆಯೆಂದೇ ವಿಶ್ಲೇಷಿಸಬೇಕು. ಒಂದು ಸಂಪೂರ್ಣ ಹೊಸ ಹೂಡಿಕೆಯಾಗಿ ಅದು ಸಮರ್ಥಿಸಿಕೊಳ್ಳುವುದಾದರೆ ಮಾತ್ರ ಅದರಲ್ಲಿ ಪುನಃ
ಹೂಡಿಕೆ ಮಾಡಿದರೆ ಸಾಕು. ಅದಲ್ಲದೆ, ಬರೇ ಷೇರಿನ ಹೆಸರನ್ನು ನೋಡಿಕೊಂಡು ಅದರ ಸರಾಸರಿ ಬೆಲೆಯನ್ನು ಲೆಕ್ಕ ಹಾಕುವುದರಲ್ಲಿ ಯಾವುದೇ ಅರ್ಥವಿಲ್ಲ.
ತಾನು ಈಗಾಗಲೇ ಕೊಂಡಿಟ್ಟ ಕಂಪೆನಿಯ ಷೇರಿನಲ್ಲಿಯೇ ದುಡ್ಡು ಮಾಡಬೇಕು ಎಂಬುದು ಕೆಲವರ ಹಠ. ಇದು ಅರ್ಥಹೀನ. ಆ ಷೇರನ್ನು ಮಾರಿ ಅದರಲ್ಲಿ ತಾತ್ಕಾಲಿಕವಾಗಿ ನಷ್ಟ ತೆಗೆದುಕೊಂಡು ಆ ದುಡ್ಡನ್ನು ಇನ್ನೊಂದು ಏರುತ್ತಿರುವ ಷೇರಿನಲ್ಲಿ ಹೂಡಿದರೆ ಮೊದಲಿಗಿಂತ ಜಾಸ್ತಿ ದುಡ್ಡು ಬರುವುದಿಲ್ಲವೇ? ನಾವು ಹೋಗುತ್ತಿರುವ ಬಸ್ಸು ನಡುದಾರಿಯಲ್ಲಿ ಕೆಟ್ಟು ನಿಂತರೆ ಬೇರೆ ಹೋಗುತ್ತಿರುವ ಬಸ್ ಹತ್ತಿ ಪ್ರಯಾಣ ಮುಂದುವರಿಸಿದರಾಯಿತು. ನನಗೆ ಅದೇ ಬಸ್ಸಿನಲ್ಲಿ ಹೋಗ ಬೇಕು ಅಂತ ಹಠ ಕಟ್ಟಬಾರದು. ನೀವು ಷೇರು ಪೇಟೆಗೆ ಇಳಿದ ಉದ್ಧೇಶ ಷೇರು
ಬೆಲೆಯನ್ನು ಸರಾಸರಿ ಮಾಡುವುದಕ್ಕೋ? ಅಥವ ದುಡ್ಡು ಮಾಡುವುದಕ್ಕೋ?
ಎಂಡೋಮೆಂಟ್ ಇಫೆಕ್ಟ್
ರಿಚಾರ್ಡ್ ಥೇಲರ್ ಪ್ರಕಾರ ಮನುಷ್ಯರು ಯಾವುದೇ ಒಂದು ವಸ್ತುವಿಗೆ, ಅದು ತಮ್ಮಲ್ಲಿದ್ದರೆ ಜಾಸ್ತಿ ಬೆಲೆ ಹಾಗೂ ಅದೇ ವಸ್ತು ಇನ್ನೊಬ್ಬನಲ್ಲಿದ್ದರೆ ಕಡಿಮೆ ಬೆಲೆ ಕಟ್ಟುತ್ತಾರಂತೆ. ಇದನ್ನು ಕೇಳುವಾಗ ನಮಗದು ಹೌದು ಎಂದು ಅನಿಸದೆ ಇರದು. ಯಾಕೆಂದರೆ ನಾವು ಹುಲುಮಾನವರು, ನಮ್ಮಲ್ಲಿರುವ ಒಂದು ವಸ್ತು ಮಾರುವಾಗ ಊರಲ್ಲಿ ಇರುವ ಎಲ್ಲ ಕಾರಣಗಳನ್ನು ಕೊಟ್ಟು ಊರಲ್ಲಿಲ್ಲದ ರೇಟ… ಕೇಳುತ್ತೇವೆ. ಅದೇ ವಸ್ತುವನ್ನು ನಾವು ತೆಗೆದುಕೊಳ್ಳುವ ಕಾಲಕ್ಕೆ ಅದು ಆಗುದಿಲ್ಲ ಮಾರಾಯ್ರೆ ಅವನು ಊರಲ್ಲಿಲ್ಲದ ರೇಟ್ ಹೇಳ್ತಾನೆ ಅಂತ ಹೇಳ್ಕೊಂಡು ತಿರುಗಾಡ್ತೇವೆ. ಇದನ್ನೇ ರಿಚಾರ್ಡ್ ಥೇಲರ್ ಎಂಡೋಮೆಂಟ್ ಇಫೆಕ್ಟ್ ಅಂತ ಹೈ ಫಂಡಾ ಭಾಷೆಯಲ್ಲಿ ಕರೆದಿದ್ದಾನೆ. ಈ ಥಿಯರಿಯ ಪ್ರಕಾರ ನಮ್ಮಂತಹ ಅತಾರ್ಕಿಕ ಜೀವಿಗಳಿಗೆ ನಮ್ಮಲ್ಲಿದ್ದ ಷೇರನ್ನು ಮಾರುವ ಶುಭಗಳಿಗೆ ಬಂದಾಕ್ಷಣ ಅದರ ಸರ್ವಗುಣಗಳೂ ನೆನಪಾಗಿ ಅದರ ಬೆಲೆ ಇರುವುದಕ್ಕಿಂತ ಜಾಸ್ತಿ ತೋರುತ್ತದೆ. ಹಾಗಾಗಿ, ಇಲ್ಲ, ಈಗಲೇ ಬೇಡ, ಇನ್ನೂ ಒಂದು ಹತ್ತು ರುಪಾಯಿ ಏರಿದ ಮೇಲೆ ಕೊಡೋ ಅಂತ ಪೋಸ್ಟ್ ಪೋನ್ ಮಾಡುತ್ತಾ ಇರುತ್ತೇವೆ. ಇದೂ ಕೂಡಾ ರಿಚಾರ್ಡ್ ಥೇಲರ್ ಪ್ರತಿಪಾದಿಸಿರುವ ಇನ್ನೊಂದು ಥಿಯರಿ.
ಇದೇ ರೀತಿ ಬಿಹೇವಿಯರಲ್ ಫೈನಾನ್ಸ್ ಕ್ಷೇತ್ರದಲ್ಲಿ ಇನ್ನಷ್ಟು ಥಿಯರಿಗಳಿವೆ. ಇನ್ನೊಂದು ಕಂತಿನಲ್ಲಿ ಆ ಬಗ್ಗೆ ವಿಸ್ತೃತವಾಗಿ ಚರ್ಚೆ ಮಾಡೋಣ. ಓದುತ್ತಾ ಹೋದಂತೆ ನಿಮ್ಮದೇ ಮನಸ್ಸಿ ನಲ್ಲಿ ಕುಳಿತಿರುವ ಹಲವು ಭೂತ ಪ್ರೇತಗಳ ದರ್ಶವಾಗಿ ಭ್ರಮೆ ದೂರವಾಗುತ್ತದೆ. ಇದು ಬಹಳ ಮುಖ್ಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…
T20: ತಿಲಕ್ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219
Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
Vitla:ಮಾಣಿ -ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಲಾರಿ ಮೇಲೆ ಮರ ಬಿದ್ದು ರಸ್ತೆ ಸಂಪೂರ್ಣ ಬ್ಲಾಕ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.