ಮನೆಯಲ್ಲಿಯೇ ಕುಳಿತು ತಿಂಗಳಿಗೆ ಐವತ್ತು ಸಾವಿರ ದುಡಿಯಿರಿ…
Team Udayavani, Dec 25, 2017, 1:08 PM IST
ಉಡುಪಿ ಸಿಟಿ ಬಸ್‌ಸ್ಟಾಂಡ್ ಬಳಿ ತಿಂಗಳಿಗೈವತ್ತು ಪರ್ಸೆಂಟ್ ಬಡ್ಡಿ ಕೊಡುವ ಪಾಂಜಿ ಸ್ಕೀಮ್ ಎಂಬ ಮಹಾ ರಿಸ್ಕಿ ವ್ಯವಹಾರಕ್ಕೆ ಕೈ ಹಾಕಿದ ರಾಯರು ಆ ಬಳಿಕ ಅತೀವ ಜಾಗರೂಕರಾಗಿದ್ದಾರೆ. ಈಗೀಗ ರಾಯರ ಒಡನಾಟ ಏನಿದ್ದರೂ ಸೇಫ್ ಎನಿಸಿಕೊಂಡ ನಿಗದಿತ ಬಡ್ಡಿದರದ ಸಾಧು ಸ್ಕೀಮುಗಳೊಡನೆ ಮತ್ತು ಜೀವನಾವಶ್ಯಕವಾದ ಇನ್ಶೂರೆನ್ಸ್ ಪಾಲಿಸಿಗಳೊಡನೆ ಮಾತ್ರ.
ಒಂದಕ್ಕೆರಡು ಬಡ್ಡಿ ಕೊಡುವ ದಗಲಾºಜಿ ಸ್ಕೀಮುಗಳನ್ನು ಕಂಡರೆ, ಕಂಡಲ್ಲೇ ಗುಂಡಿಟ್ಟು ಕೊಲ್ಲುವಷ್ಟು ಕ್ರೋಧವನ್ನು ಬೆಳೆಸಿಕೊಂಡಿದ್ದಾ ರೆ. ಅದಲ್ಲದೆ, ಯಾರೇ ಸಿಕ್ಕಿ ಇನ್‌ವೆಸ್ಟ್‌ಮೆಂಟ್ ಬಗ್ಗೆ ಮಾತು ಬೆಳೆಸಿದರೂ ತಾವು ಜೀವನದಲ್ಲಿ ಗಳಿಸಿದ ಅನುಭವಾಮೃತವನ್ನು ಧಾರೆಯೆರೆದೇ ಮುಂದಿನ ಮಾತು… ಅಷ್ಟೂ ಸಾಲದ್ದಕ್ಕೆ, ದಿನಾ ಉದಯವಾಣಿಯ ಪೇಜ್ ಟೆನ್ ತೆರೆದು ಅದರಲ್ಲಿ ಬರುವ “ಕರಂಗಲಪಾಡಿಯಲ್ಲಿ ನಡೆದ ಹಣ ದ್ವಿಗುಣ ವಂಚನೆ: ಎರಡು ಬಂಧನ’, “ಪುತ್ತೂರಿನಲ್ಲಿ ಮನಿ ಡಬಲ್ ಸ್ಕೀಮ್: 4 ಜನ ಪರಾರಿ’, “ಉಡುಪಿಯಲ್ಲಿ ಕೋಟ್ಯಂತರ ರುಪಾಯಿ ವಂಚನೆ ಪ್ರಕರಣ, ಅರೋಪಿ ನಾಪತ್ತೆ’, “ಫಾರೆಕ್ಸ್ ಟ್ರೇಡಿಂಗ್ ಹೆಸರಿನಲ್ಲಿ ವಂಚನೆ, ಇಬ್ಬರ ಬಂಧನ’ “ಇಮೈಲ್ ಲಾಟರಿ ಸ್ಕ್ಯಾಮ್, ಲಕ್ಷ ರೂಪಾಯಿ ಪಂಗನಾಮ’ ಇತ್ಯಾದಿ ತಲೆಬರಹಗಳನ್ನು ನೋಡಿ ರಾಯರು ತಮ್ಮ ಒರಿಜಿನಲ್ ಬ್ರಾಂಡಿನಲ್ಲಿ ಕೆಂಡಾಮಂಡಲರಾಗುತ್ತಾರೆ. ಅಂತಹ ಪೇಪರ್
ಕ್ಲಿಪ್ಪಿಂಗ ಇರಿಸಿಕೊಂಡು ಅವುಗಳ ಬಗ್ಗೆ ಮನೆಗೆ ಬಂದವರಿಗೆಲ್ಲ ಮಾರುದ್ದ ಉಪನ್ಯಾಸ ಆರಂಭಿಸುತ್ತಾರೆ. ರಾಯರ ಸೊಸೆಗಂತೂ ಈಗೀಗ ಈ ಉಪನ್ಯಾಸಗಳು ಚಾಪ್ಟರ್ ಬೈ ಚಾಪ್ಟರ್ ಬಾಯಿಪಾಠ ಬರುತ್ತವೆ.
ಡಾ| ಅನಾರೋಗ್ಯ ವೈದ್ಯ, ನಮ್ಮ ಗಡಿನಾಡು ಕನ್ನಡನಾಡಾದ ಕಾಸರಗೋಡಿನ ಒಬ್ಬ ಫಿಸಿಶಿಯನ್. ಕಾಸರಗೋಡಿನಲ್ಲಿ ಅಲ್ಲದೆ ಪಕ್ಕದ ಮುಳ್ಳೇರಿಯಾದಲ್ಲೂ ಅವರ ಕ್ಲಿನಿಕ್ ಇದೆ. ಗುರುಗುಂಟಿರಾಯರು ಮೊನ್ನೆ ಅವರನ್ನು ತಮ್ಮ ಪಿತ್ತ ಪ್ರಾಬ್ಲೆಂ ಬಗ್ಗೆ ಭೇಟಿಯಾದಾಗ ಅವರು ರಾಯರಿಗೆ ತಾವು ಅನುಭವಿಸಿದ ವಿತ್ತ ಪ್ರಾಬ್ಲೆಂ ಬಗ್ಗೆ ವಿವರವಾಗಿ ತಿಳಿಸಿದರು. “ಇದೆಂಥದ್ದು ರಾಯರೇ, ನೀವು ಸ್ವಲ್ಪ ಇದಕ್ಕೆ ಪ್ರಚಾರ ಕೊಡಬೇಕು. ಊರಲ್ಲಿ ಯಾವ್ಯಾವ ರೀತಿಯ ವಿದ್ಯಮಾನಗಳು ನಡೆಯುತ್ತವೆ ಅಂತ ಜನರಿಗೆ ಗೊತ್ತಾಗಬೇಕು’ ಅಂತ ತಾವು ಅನುಭವಿಸಿದ ಘಟನೆಯನ್ನು ವಿವರವಾಗಿ ರಾಯರಿಗೆ ಹೇಳಿದರು.
ಸಣ್ಣ ಊರಾದ ಮುಳ್ಳೆರಿಯಾದಲ್ಲಿ ಜಾಸ್ತಿ ಕೆಲಸ ಇರುವುದಿಲ್ಲ. ಇರುವ ಸ್ವಲ್ಪ ಬಿಡುವನ್ನು ಹೇಗೆ ಸದುಪಯೋಗಪಡಿಸುವುದು ಎಂದು ಯೋಚಿಸುತ್ತಿರುವಾಗ ಡಾ| ವೈದ್ಯರಿಗೆ ಪ್ರತಿಷ್ಠಿತ ಪೇಪರಿನಲ್ಲಿ ಒಂದು ಕ್ಲಾಸಿಫೈಡ್ ಜಾಹೀರಾತು ಕಂಡಿತು. ಈ ರೀತಿಯ ಜಾಹೀರಾತುಗಳು ಅದೇ ಪೇಪರಿನಲ್ಲಿ ಅದೇ ಪೇಜಿನಲ್ಲಿ ರೆಗ್ಯುಲರ್ ಆಗಿ ಬರುತ್ತವಂತೆ.
ಆ ಜಾಹೀರಾತಿನ ಪ್ರಕಾರ ನೀವು ಮನೆಯಲ್ಲೇ ಕುಳಿತುಕೊಂಡು ಪೇಪರ್ ಕೆಲಸ ಮಾಡಿ ತಿಂಗಳಿಗೆ 50,000 ಸಂಪಾದಿಸಬಹುದಂತೆ. ಉಚಿತ ವಿವರಗಳಿಗಾಗಿ ನಿಮ್ಮ ಹೆಸರು, ವಿಳಾಸವನ್ನು ಅದರಲ್ಲಿ ಕೊಟ್ಟ ಮೊಬೈಲ್ ನಂಬರಿಗೆ ಎಸ್ಸೆಮ್ಮೆಸ್ ಮಾಡಿದರೆ ಸಾಕು. ಸರಿ, ಸುಲಭವಾಗಿ ಬರೇ ಪೇಪರ್ ವರ್ಕ್ ಮಾಡಿ 50 ಸಾವಿರ ಸಂಪಾದಿಸಿದರೆ ಯಾಕಾಗಬಾರದು ಅಂತ ಡಾಕ್ಟರರು ಆ ನಂಬರಿಗೆ ಒಂದು ಎಸ್ಸೆಮ್ಮೆಸ್ ಕುಟ್ಟಿದರು. ಕೆಲವೇ ದಿನಗಳಲ್ಲಿ ಅವರ ಹೆಸರಿಗೆ ಒಂದು ಪತ್ರ ಬಂತು, ಆ ಸಂಸ್ಥೆಯಿಂದ. 6 ಪುಟಗಳ ಆ ಪತ್ರದಲ್ಲಿ ಇನ್ನೂ ವಿವರವಾಗಿ ಅದೇ ಮಾತನ್ನು ವಿವರಿಸಲಾಗಿತ್ತು. “ಭಾರತದ ನಂ. 1 ಹೋಮ್ ಬೇಸ್ಡ್ ಬಿಸಿನೆಸ್’, “ಮನೆಯಲ್ಲೇ ಪೇಪರ್ ವರ್ಕ್ ಮಾಡಿ ತಿಂಗಳಿಗೆ 30 ಸಾವಿರ ಸಂಪಾದಿಸಿ’, “ಗೃಹಿಣಿಯರು, ವಿದ್ಯಾರ್ಥಿಗಳು, ಉದ್ಯೋಗಸ್ಥರು, ನಿವೃತ್ತರು, ಬಿಸಿನೆಸ್‌ಮನ್‌ಗಳು – ಯಾರು ಬೇಕಾದರೂ ಇದನ್ನು ಆರಂಭಿಸಬಹುದು,’ “ಉಚಿತ ಡೀಲರ್‌ಶಿಪ್ ಪಡೆಯಿರಿ’ ಎಂಬಿತ್ಯಾದಿ ಹೆಡ್ಡಿಂಗುಗಳುಳ್ಳ ಕರಪತ್ರ ಆಕರ್ಷಕವಾಗಿತ್ತು. ಜತೆಗೆ “ಇದು ಗ್ಯಾರಂಟೀಡ್, ಈ ರೀತಿ ದುಡ್ಡು ಗಳಿಸುವವರು ತುಂಬಾ ಜನರಿದ್ದಾರೆ’ ಅಂತೆಲ್ಲ ಶಿಫಾರಸುಗಳೂ ಇದ್ದವು. ಸರಿ, ಅದನ್ನು ನಂಬಿಕೊಂಡು ಡಾಕ್ತರರು ರೂ.590 ಅನ್ನು ನಿಗದಿತ ಹೆಸರಿಗೆ ಡಿಡಿ ಮಾಡಿ ಕಳಿಸಿದರು.
ಕೆಲವು ದಿನಗಳ ಬಳಿಕ ಅವರಿಗೆ ಇನ್ನೊಂದು ದಪ್ಪಗಾದ ಕಿಟ್ ಬಂತು. ಅದರೊಳಗೆ ಕೆಲವು ಪತ್ರಗಳೂ ದುಡ್ಡು ಮಾಡುವ ಬಗ್ಗೆ ಒಂದು ಪುಸ್ತಕವೂ ಇತ್ತು. ಆ ಪುಸ್ತಕದಲ್ಲಿ ಮನೆಯಲ್ಲೇ ಕುಳಿತು ದುಡ್ಡು ಮಾಡುವ ಸುಲಭ ಸೂತ್ರಗಳ ಬಗ್ಗೆ ಬೋಧನೆ ಇತ್ತು. ಉದಾಹರಣೆಗೆ, ಟೈಪಿಂಗ್ ಮಾಡಿರಿ, ಜಾಬ್ ವರ್ಕ್ ತಗೊಳ್ಳಿರಿ, ಮೆಡಿಕಲ್ ಟ್ರಾನ್‌ಸ್ಕ್ರಿಪ್ಶನ್ ಆರಂಭಿಸಿ ಅಂತೆಲ್ಲ ಸಾಮಾನ್ಯವಾಗಿ ನಮಗೆಲ್ಲ ತಿಳಿದೇ ಇರುವ ವಿಷಯಗಳನ್ನು ಬರೆದಿದ್ದರು. ಅಲ್ಲದೆ ಅತಿಮುಖ್ಯವಾಗಿ, “ಇನ್ನು ನೀವೂ ಕೂಡ ಇದೇ ರೀತಿ ಒಂದು ಜಾಹೀರಾತು ನೀಡಿ ಬೇರೆಯವರಿಗೆ ಮನೆಯಲ್ಲೇ ಕೂತು 50 ಸಾವಿರ ಸಂಪಾದಿಸುವ ಬಿಸಿನೆಸ್ ಕಿಟ್ ಮಾರಾಟ ಮಾಡಿ’ ಎಂದು ಬರೆದಿತ್ತು.
ಡಾಕ್ಟರರಿಗೆ ಈಗ ಮನೆಯಲ್ಲೇ ಕೂತು 50 ಸಾವಿರ ಸಂಪಾದಿಸುವ ಈ ಬಿಸಿನೆಸ್ ಏನೇನೂ ಹಿಡಿಸಲಿಲ್ಲ. 590 ರೂ. ಡಿಡಿ ಮಾಡಿ ಉಪಯೋಗಕ್ಕೆ ಬಾರದ ಮಾಮೂಲಿ ಮಾಹಿತಿ ಪಡೆದದ್ದಲ್ಲದೆ ಅದರ ಮೇಲಿನಿಂದ 50 ಸಾವಿರ ಸಂಪಾದಿಸಬೇಕಾದರೆ ನೀನೂ ಇನ್ನೊಬ್ಬರಿಗೆ ಹೀಗೆಯೇ ಮಾಡು ಎಂಬ ಉಪದೇಶ ಬೇರೆ! ಇದು ನ್ಯಾಯವಾದ ವ್ಯವಹಾರವಲ್ಲ ಎಂದು ಅವರಿಗೆ ಕಂಡಿತು. ಕೂಡಲೇ ಆ ವ್ಯಕ್ತಿಗೆ ಒಂದು ಖಾರವಾದ ಪತ್ರ ಬರೆದು ದುಡ್ಡಿನ ರಿಫಂಡ್ ಕೇಳಿದರು. ನಿಮ್ಮ ಮೇಲೆ ಹೈ ಕೋರ್ಟಿನಲ್ಲಿ ಕೇಸು ಮಾಡುತ್ತೇನೆ ಎಂಬ ಬೆದರಿಕೆಯೂ ಹಾಕಿದರು. ಆ ಕೂಡಲೇ ರೂ. 590ರಲ್ಲಿ ರೂ. 200 ಕಳೆದು ಉಳಿದ ಮೊತ್ತವನ್ನು ಆ ವ್ಯಕ್ತಿ ರಿಫಂಡ್ ಮಾಡಿದರು. ಕೊನೆಗೂ ಡಾಕ್ಟರರಿಗೆ
200 ರೂಪಾಯಿ ಖೋತಾವೇ ಸರಿ.
ಡಾ| ವೈದ್ಯರ ಅನುಭವ ಕೇಳಿ ರಾಯರಿಗೂ ಸಿಟ್ಟು ಬಂತು. ಅವರಿಗೂ ಈ ವ್ಯವಹಾರ ನ್ಯಾಯಯುತವಾಗಿ ಕಾಣಲಿಲ್ಲ. “ಛೇ… ಹೀಗೂ ಉಂಟೇ?’ ಅಂತ ರಾಯರು ರೇಗಿದರು. ಯಾವುದೆಲ್ಲ ರೀತಿಯಲ್ಲಿ ದುಡ್ಡು ಮಾಡಲು ಜನರು ಹೊರಡುತ್ತಾರೆ ಎಂಬುದೇ ರಾಯರಿಗೆ ಅಚ್ಚರಿಯಾಯಿತು.
**
ದುಡ್ಡು ಸಂಪಾದಿಸುವುದು ಹೇಗೆ ಎಂಬುದು ಮನುಕುಲವನ್ನು ಅನಾದಿ ಕಾಲದಿಂದಲೂ ಕಾಡುತ್ತಿರುವ ಸಮಸ್ಯೆ. ಈ ರೀತಿಯ ಹುಡುಕಾಟವೇ ಹಲವು ವಿನಾಶಗಳಿಗೆ ಹಾದಿ ಹಾಕಿಕೊಡುತ್ತದೆ. ದುಡ್ಡಿನ ಬಗ್ಗೆ ತುರ್ತು ಜಾಸ್ತಿಯಾದಷ್ಟು ಅಂತಹ ಅಮಾಯಕ ಕ್ಷಣಗಳನ್ನು ದುರುಪಯೋಗ ಪಡಿಸಿಕೊಂಡು ದುಡ್ಡು ಮಾಡುವವರ ಸಂಖ್ಯೆಯೂ ಜಾಸ್ತಿಯಾಗುತ್ತದೆ. ಕೆಲವರಂತೂ ಅತಿಲೋಭಕ್ಕೆ ಒಳಗಾಗಿ ಈ ರೀತಿ ಇಷ್ಟವಾಗದ ವ್ಯವಹಾರದಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಾರೆ.
“ಇದು ಒಂದು ಮೋಸ ಅಲ್ಲವೇ?’ ಎಂದು ಹಲವಾರು ಜನರು ನನ್ನನ್ನು ಕೇಳಿದ್ದುಂಟು. “ಮೋಸ ಹೌದಾದರೆ ಹಾಡು ಹಗಲಿನಲ್ಲಿ ಇಂತಹ ವ್ಯವಹಾರಗಳು ಹೇಗೆ ನಡೆಯುತ್ತವೆ? ಪೋಲೀಸರು ಅವರನ್ನು ಯಾಕೆ ಹಿಡಿಯುವುದಿಲ್ಲ?’ ಎಂಬುದು ಅವರ ಸಪ್ಲಿಮೆಂಟರಿ ಪ್ರಶ್ನೆಗಳು. ಇದಕ್ಕೆ ಉತ್ತರ ತುಂಬಾ ಕಾಂಪ್ಲಿಕೇಟೆಡ್ ಹಾಗೂ ಈ ಕಾಂಪ್ಲಿಕೇಟೆಡ್ ಉತ್ತರದಲ್ಲಿಯೇ ಈ ಸ್ಕೀಮುಗಳ ಜೀವಾಳ ಇದೆ.
ಡಾ| ಅನಾರೋಗ್ಯ ವೈದ್ಯರು ಅನುಭವಿಸಿದ ಸಂದರ್ಭವನ್ನು ಒಂದು “ಮೋಸ’ ಎಂದು ಕೋರ್ಟಿನಲ್ಲಿ ಸಾಬೀತು ಪಡಿಸಲು ಹರಸಾಹಸ ಪಡಬೇಕಾಗುತ್ತದೆ. ಜಾಹೀರಾತಿನಲ್ಲಿ ಮತ್ತು ಕರಪತ್ರದಲ್ಲಿ ತಿಳಿಸಿದಂತೆಯೇ ಕೊಟ್ಟ ಡಿಡಿಗೆ ಪ್ರತಿಫಲವಾಗಿ ಹೊಸ ಬಿಸಿನೆಸ್ ಆರಂಭಿಸುವ ಬಗ್ಗೆ ಪುಸ್ತಕ ಮತ್ತು ಇತರ ಮಾಹಿತಿಯನ್ನು ಕಳುಹಿಸಿರುವ ಕಾರಣ ಇದನ್ನು ಮೋಸ ಎಂದು ಕೋರ್ಟಿನಲ್ಲಿ ಪ್ರತಿಪಾದಿಸಿ ಪ್ರೂವ್ ಮಾಡಬೇಕಾದರೆ ತುಂಬಾ ಕಷ್ಟವಿದೆ. “ನಾನು ನಿರೀಕ್ಷಿಸಿದ ಗುಣಮಟ್ಟದ ಮಾಹಿತಿ ಸಿಕ್ಕಿಲ್ಲ’ ಎನ್ನುವ ಏಕೈಕ ಕಾರಣ ಅಥವಾ “ನನಗೆ ಹೇಳಿಕೊಟ್ಟ ಹಾದಿಯಲ್ಲಿ ಮುಂದುವರಿಯಲು ನಾನು ಸಿದ್ಧನಿಲ್ಲ, ಅದು ನನ್ನ ಅಭಿರುಚಿಯಲ್ಲ, ನನ್ನ ಪ್ರಕಾರ ಅದು ಮೋಸ!’ ಎನ್ನುವ ಏಕೈಕ ಕಾರಣ ಇದನ್ನು ಮೋಸ ಎಂದು ಪ್ರೂವ್ ಮಾಡಲು ಸಾಕಾಗುವುದಿಲ್ಲ. ಬಹು ಎಚ್ಚರಿಕೆಯಿಂದ ಕಾನೂನಿನ ಚೌಕಟ್ಟಿನ ಒಳಗೆಯೇ ಇಂತಹ ಒಂದು ಬಿಸಿನೆಸ್ ಅನ್ನು ಕುಳ್ಳಿರಿಸಲಾಗಿದ್ದು, ಪ್ರತಿಯೊಂದು ಹಂತದಲ್ಲೂ ಡಿಡಿ, ರಿಜಿಸ್ಟರ್ಡ್ ಪತ್ರ, ಫೋನ್ ಇತ್ಯಾದಿ ಪಕ್ಕಾ ದಾಖಲೆಗಳ ಮೂಲಕವೇ ವ್ಯವಹಾರ ನಡೆಸಲಾಗುತ್ತದೆ. ಎಲ್ಲೂ ನಿಮ್ಮಲ್ಲಿ ಯಾರೂ ಕ್ಯಾಶ್ ಕೇಳುವುದಿಲ್ಲ.
ಎಲ್ಲೂ ಕೊಡುತ್ತೇನೆ ಎಂದ ಸಾಮಗ್ರಿಯನ್ನು ಕೊಡದೇ ಇರುವುದಿಲ್ಲ. ಆದರೂ ನಿಮಗೆ ಸಮಾಧಾನ ಆಗುವುದಿಲ್ಲ. 590 ರೂ. ಪಡೆದು ಒಂದು ಪುಸ್ತಕ ಕೊಟ್ಟು, ಹತ್ತು ಮಾಮೂಲಿ ಸಲಹೆಗಳನ್ನು ನೀಡಿ, ಇನ್ನೂ ದುಡ್ಡು ಬೇಕಾದರೆ ನೀವೂ ಇದೇ ರೀತಿ ಜಾಹೀರಾತು ಹಾಕಿ ಜನರನ್ನು ಹಿಡಿಯಿರಿ ಎನ್ನುವುದು ನಿಮ್ಮ ಪ್ರಕಾರ ಅನೈತಿಕವಾಗಿರಬಹುದು; ಆದರೆ ಕಾನೂನುಬಾಹಿರವಲ್ಲ!
“ಸೋ ಕಾಲ್ಡ್ ಇಮ್ಮೊರಲ್’ ಮತ್ತು “ಇಲ್ಲೀಗಲ…’ಗಳ ನಡುವೆ ಒಂದು ದೊಡ್ಡ ವ್ಯತ್ಯಾಸವಿದೆ. ಇದೇ ಈ ರೀತಿಯ ಸ್ಕೀಮುಗಳ ಜೀವಾಳ. ಇದೇ ಕಾರಣಕ್ಕಾಗಿ ಈ ಮತ್ತು ಈ ರೀತಿಯ ಹಲವಾರು ವ್ಯವಹಾರಗಳು ಮೋಸ ಎಂದು ಪ್ರೈಮಾ ಫೇಸೀ, ಪರಿಗಣಿಸಲಾಗುವುದಿಲ್ಲ. ಮತ್ತು ಆ ಕಾರಣಕ್ಕಾಗಿಯೇ ಪೋಲೀಸರಾಗಲಿ, ಜಿಲ್ಲಾಡಳಿತವಾಗಲಿ ಇಂತಹ ವ್ಯವಹಾರಗಳ ವಿರುದ್ಧ ಕ್ರಮ ಕೈಗೊಳ್ಳುವುದಿಲ್ಲ. ಒಂದು ವ್ಯವಹಾರವನ್ನು ಮೋಸ ಎಂದು ಪರಿಗಣಿಸಬೇಕಾದರೆ ಅದು ಕಾನೂನಿನ ರೀತ್ಯಾ ಒಂದಲ್ಲ ಒಂದು ರೀತಿಯಲ್ಲಿ ತಪ್ಪು ಆಗಿರಬೇಕು.
ಕರಾರು ಪ್ರಕಾರ ಕೊಟ್ಟ ಹಣಕ್ಕೆ ಒಪ್ಪಿಕೊಂಡ ಪ್ರತಿಫಲವನ್ನು ನೀಡದೇ ಇರುವುದು ಅಥವಾ ಹಣಕಾಸಿನ ವಹಿವಾಟಿನಲ್ಲಿ ಆರ್‌ಬಿಐ ಕಾನೂನುಗಳ ಉಲ್ಲಂಘನೆ ಇತ್ಯಾದಿ ನಡೆದರೆ ಮಾತ್ರವೇ ಅದು ಮೋಸದ ಪರಿಧಿಯೊಳಗೆ ಬರುತ್ತದೆ. ಒಂದು ವೇಳೆ ಸಿಗಬೇಕಾದದ್ದು ಸಿಕ್ಕದೆ ಪ್ರತಿಫಲ ಅಸಮರ್ಪಕವಾದರೂ ಅದು ಒಂದು “ಡೆಫಿಶಿಯೆನ್ಸಿ’ ಆಗುತ್ತದೆಯೇ ಹೊರತು “ಮೋಸ’ ಆಗುವುದಿಲ್ಲ. ಅಂತಹ ಕೇಸುಗಳನ್ನು ಡೆಫಿಶಿಯಂಟ್ ಸರ್ವಿಸ್ ಅಡಿಯಲ್ಲಿ ಸೌಮ್ಯವಾಗಿಯೇ ಡೀಲ್ ಮಾಡಬೇಕಾಗುತ್ತದೆ. ಕ್ರಿಮಿನಲ್ ಕೇಸ್ ಹಾಕುವುದು ಕಷ್ಟ. ತಜ್ಞ ವಕೀಲರ ಬಳಿ ಇದರಲ್ಲಿ ಕ್ರಿಮಿನಲ್ ಅಂಶಗಳಿವೆಯೇ ಎಂದು ಪರಿಶೀಲಿಸಿಕೊಳ್ಳಬೇಕು. ಆದರೂ ಬಹುತೇಕ ಜನರಿಗೆ ಈ ವ್ಯವಹಾರ ಸರಿ ಕಾಣುವುದಿಲ್ಲ.
ಇದನ್ನು ಮಾಡಲು ಅವರ ಮನಃಸಾಕ್ಷಿ ಒಪ್ಪುವುದಿಲ್ಲ. ಅಂಥವರು ಇಂತಹ ವ್ಯವಹಾರಗಳಿಂದ ದೂರವಿರುವುದೇ ಒಳಿತು. ಇದಕ್ಕೆ ಪ್ರವೇಶವಾಗುವ ಮೊದಲೇ ಇದರ ತತ್ವ ಮತ್ತು ಸ್ವರೂಪದ ಸ್ಪಷ್ಟ ಪರಿಚಯ ಇಟ್ಟುಕೊಂಡು, ಇಷ್ಟ ಇದ್ದವರು ಮಾತ್ರವೇ ಒಳಹೊಗಬೇಕು. ಇಲ್ಲದವರು ದೂರದಿಂದಲೇ ಒಂದು ದೊಡ್ಡ ನಮಸ್ಕಾರ ಹಾಕಿ ಅಷ್ಟೇ ದೂರ ಉಳಿಯುವುದು ಒಳ್ಳೆಯದು. “ಸಂಪೂರ್ಣ ಅರ್ಥ ಮಾಡಿಕೊಳ್ಳುವ’ ಈ ಮಾತು ಎಲ್ಲ ವ್ಯವಹಾರಗಳಿಗೂ ಅನ್ವಯಿಸುತ್ತದೆ. ಶೇರು ವ್ಯವಹಾರವಾಗಲಿ, ಮೈಲ್ ಆರ್ಡರ್ ಬಿಸಿನೆಸ್ ಆಗಲಿ, ಮಲ್ಟಿ ಲೇಯರ್
ಮಾರ್ಕೆಟಿಂಗ್ ಆಗಲಿ; ಯಾವುದೇ ವಿತ್ತ ವ್ಯವಹಾರವನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡ ಬಳಿಕವೇ ನಮಗೆ ಇಷ್ಟವಾದರೆ ಮಾತ್ರ ಮುಂದುವರಿಯಬೇಕು. ಅರಿಯದೆ ಒಳಹೊಕ್ಕು ಇಷ್ಟಪಡದೆ ಮುಂದುವರಿಸಲಾರದೆ ದುಡ್ಡು ಕಳೆದುಕೊಂಡು ಬೊಬ್ಬಿಡಬಾರದು ಎನ್ನುವುದೇ ಕಾಸು-ಕುಡಿಕೆ ಕಾಲಂನ ಆಶಯಗಳಲ್ಲೊಂದು. ಅದಕ್ಕಾಗಿ ಪ್ರತಿಯೊಂದು ಸ್ಕೀಮಿನ ಪೂರ್ವಾಪರಗಳನ್ನು ಕೂಲಂಕಷವಾಗಿ
ತಿಳಿದುಕೊಳ್ಳುವುದು ಬಹು ಮುಖ್ಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.