ಗ್ರಾಚ್ಯೂಟಿ ಸುತ್ತಮುತ್ತ ಒಂದಿಷ್ಟು ಲೆಕ್ಕಾಚಾರಗಳು
Team Udayavani, Oct 22, 2018, 2:41 PM IST
ದೀರ್ಘಾವಧಿ ಸೇವೆ ಸಲ್ಲಿಸಿದವರಿಗೆ ನೌಕರಿ ಬಿಡುವಾಗ ಸಂಸ್ಥೆಗಳು ಪಿಎಫ್, ಪೆನ್ಶನ್ ಜೊತೆಗೆ ಗ್ರಾಚ್ಯೂಟಿ ನೀಡುತ್ತವೆ. ಉದ್ಯೋಗಿಗಳು ಸಲ್ಲಿಸಿದ ಸೇವೆಗೆ ಗೌರವಾರ್ಥವಾಗಿ ಹಾಗೂ ಅವರ ನಿವೃತ್ತಿ ಜೀವನಕ್ಕೆ ಸಹಾಯವಾಗುವಂತೆ ಈ ಮೊತ್ತವನ್ನು ನೀಡಲಾಗುತ್ತದೆ. ಗ್ರಾಚ್ಯೂಟಿ ಎಂಬ ಈ ಪದ ಸರ್ವೇ ಸಾಮಾನ್ಯವಾಗಿ ಬಳಕೆಯಲ್ಲಿದ್ದರೂ ಇದರ ಬಗ್ಗೆ ಸರಿಯಾದ ಮಾಹಿತಿ ಹೆಚ್ಚಿನವರಿಗಿಲ್ಲ.
ಗ್ರಾಚ್ಯೂಟಿ ಯಾರಿಗೆ?: ಸರಕಾರಿ ಉದ್ಯೋಗಿಗಳಿಗೆ ಸಲ್ಲುವ ಗ್ರಾಚ್ಯೂಟಿ ಬಗ್ಗೆ ಸರಕಾರಕ್ಕೆ Central Civil Services (Pension) Rules, 1972 ಹೆಸರಿನಲ್ಲಿ ತನ್ನದೇ ಆದ ಲೆಕ್ಕಾಚಾರ ಹಾಗು ನಿಯಮಾವಳಿಗಳು ಇವೆ. ಆ ಲೆಕ್ಕಾಚಾರದ ಪ್ರಕಾರ ಸರಕಾರಿ ಉದ್ಯೋಗಿಗಳಿಗೆ ಸದ್ರಿ ಗರಿಷ್ಟ ರೂ. 20 ಲಕ್ಷದವರೆಗೆ ಸಂಪೂರ್ಣವಾಗಿ ಕರ ವಿನಾಯಿತಿಯುಳ್ಳ ಗ್ರಾಚ್ಯೂಟಿ ಲಭಿಸುವ ಅವಕಾಶ ಇದೆ.
ಈ ಮಿತಿ ಮೊದಲು ರೂ. 10 ಲಕ್ಷ ಇದ್ದು, 7ನೇ ವೇತನಾ ಆಯೋಗದ ಅನುಷ್ಠಾನದೊಂದಿಗೆ ಜನವರಿ 1, 2016ರ ಬಳಿಕ ರೂ. 20 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಇನ್ನು ಸರಕಾರೇತರ ಖಾಸಗಿ ಉದ್ಯೋಗ ವಲಯದ ಬಗ್ಗೆ ಹೇಳುವುದಾದರೆ, ಆ ವಲಯವನ್ನು ಎರಡು ವಿಭಾಗಗಳಾಗಿ ನೋಡಬಹುದು:
1. ಪೇಮೆಂಟ್ ಆಫ್ ಗ್ರಾಚ್ಯೂಟಿ ಆ್ಯಕ್ಟ್ 1972 ಅಡಿಯಲ್ಲಿ ಬರುವವರಿಗೆ, ಹಾಗೂ
2. ಪೇಮೆಂಟ್ ಆಫ್ ಗ್ರಾಚ್ಯೂಟಿ ಆ್ಯಕ್ಟ್ 1972 ಅಡಿಯಲ್ಲಿ ಬಾರದವರಿಗೆ.
ಈ ಎರಡು ಸಂದರ್ಭಗಳಲ್ಲಿ ಗ್ರಾಚ್ಯೂಟಿ ಪಾವತಿಯ ಬಗ್ಗೆ ಕಾನೂನು ಈ ಕೆಳಗಿನಂತಿದೆ:
ಪೇಮೆಂಟ್ ಆಫ್ ಗ್ರಾಚ್ಯೂಟಿ ಆ್ಯಕ್ಟ್ 1972 ಅಡಿಯಲ್ಲಿ ಬರುವ ಎಲ್ಲಾ ಸಂಸ್ಥೆಗಳಲ್ಲೂ ಗ್ರಾಚ್ಯೂಟಿ ಪಾವತಿ ಕಡ್ಡಾಯ. ಕನಿಷ್ಠ ಹತ್ತು ಮಂದಿ ಉದ್ಯೋಗಿಗಳನ್ನು ಹೊಂದಿದ ಎಲ್ಲಾ ಸಂಸ್ಥೆಗಳಿಗೂ ಈ ಕಾನೂನು ಅನ್ವಯವಾಗುತ್ತದೆ. ಕಳೆದ ಒಂದು ವರ್ಷದಲ್ಲಿ ಯಾವುದೇ ಒಂದು ದಿನವಾದರೂ ಕನಿಷ್ಠ ಹತ್ತು ಜನ ಕೆಲಸಕ್ಕಿದ್ದು ಉಳಿದ ದಿನಗಳಲ್ಲಿ ಹತ್ತಕ್ಕಿಂತ ಕಡಿಮೆ ಜನರಿದ್ದರೂ ಆ ವರ್ಷಕ್ಕೆ ಆ ಒಂದೇ ಒಂದು ದಿನದ ಮಹತ್ವದಿಂದಾಗಿ ಈ ಕಾನೂನು ಅನ್ವಯವಾಗುತ್ತದೆ ಎನ್ನುವುದು ನೆನಪಿರಲಿ.
ಅಂದರೆ, ಒಂದೂ ದಿನ ಬಿಡದೆ ವರ್ಷ ಪೂರ್ತಿ ಕೆಲಸಕ್ಕೆ ಹತ್ತಕ್ಕಿಂತ ಕಡಿಮೆ ಜನರಿದ್ದವರು ಈ ಪೇಮೆಂಟ್ ಆಫ್ ಗ್ರಾಚ್ಯೂಟಿ ಆ್ಯಕ್ಟ್ 1972 ಅಡಿಯಲ್ಲಿ ಬರುವುದಿಲ್ಲ. ಅಂತವರಿಗೆ ಈ ಕಾನೂನಿನಿಂದ ಮುಕ್ತಿ ದೊರೆಯುತ್ತದೆ. ಆ ರೀತಿ ಕನಿಷ್ಠ ಹತ್ತು ಮಂದಿ ಉದ್ಯೋಗಿಗಳನ್ನು ಹೊಂದದ ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ಗ್ರಾಚ್ಯೂಟಿ ನೀಡುವುದು ಕಡ್ಡಾಯವಲ್ಲ. ಆದರೂ ಗ್ರಾಚ್ಯೂಟಿ ನೀಡುವ ಸಂಸ್ಥೆಗಳು ಇಲ್ಲದಿಲ್ಲ. ಅದು ಅವರವರ ಇಷ್ಟ.
ಕನಿಷ್ಠ ಸೇವೆ: ದೀರ್ಘಕಾಲದ ಸೇವೆಯ ಬಳಿಕ ನಿವೃತ್ತಿಯಾಗುವ ಉದ್ಯೋಗಿಗಳಿಗೆ ಅವರು ಸಂಸ್ಥೆ ಬಿಡುವ ಸಮಯದಲ್ಲಿ ಗ್ರಾಚ್ಯೂಟಿ ಸಿಗುವುದು ಎಲ್ಲರೂ ಬಲ್ಲ ವಿಚಾರ. ಆದರೆ ಗ್ರಾಚ್ಯೂಟಿ ಮೊತ್ತಕ್ಕೆ ಅಷ್ಟು ದೀರ್ಘಕಾಲ ಕಾಯಬೇಕಾಗಿಲ್ಲ. ಯಾವುದೇ ಒಂದು ಸಂಸ್ಥೆಯಲ್ಲಿ ಕನಿಷ್ಠ ಐದು ವರ್ಷಗಳ ಕಾಲ ನಿರಂತರ ಸೇವೆ ಸಲ್ಲಿಸಿದವರಿಗೆ ಆ ಸಂಸ್ಥೆಯ ವತಿಯಿಂದ ಸಂಸ್ಥೆ ಬಿಡುವ ಸಮಯದಲ್ಲಿ ಗ್ರಾಚ್ಯೂಟಿ ಸಲ್ಲತಕ್ಕದ್ದು. ಅಲ್ಲದೆ, ಈ ಐದು ವರ್ಷ ಸೇವೆ ಸಲ್ಲಿಸದೆಯೂ ಮೃತ್ಯು ಸಂಭವಿಸಿದರೆ ಅಂತವರ ಕುಟುಂಬಕ್ಕೆ ಗ್ರಾಚ್ಯೂಟಿ ಸಲ್ಲತಕ್ಕದ್ದು.
ಹಾಗೆಯೇ ಉದ್ಯೋಗಿಯು ಅನಾರೋಗ್ಯ/ಅಪಘಾತದ ನಿಮಿತ್ತ ಅಂಗವಿಕಲರಾದರೆ ಅಂತವರಿಗೂ ಸೇವೆ ಬಿಡುವ ಸಂದರ್ಭದಲ್ಲಿ ಗ್ರಾಚ್ಯೂಟಿ ಸಲ್ಲತಕ್ಕದ್ದು. ಅಲ್ಲದೆ, ಐದು ವರ್ಷ ಕನಿಷ್ಠ ಸೇವೆ ಎಂದು ಕಾನೂನು ಹೇಳಿದರೂ ಐದನೆಯ ವರ್ಷ 240 ದಿನಗಳ ಸೇವೆ ಸಲ್ಲಿಸಿದರೂ ಅದನ್ನು ಒಟ್ಟಾರೆ ಐದಾಗಿ ಪರಿಗಣಿಸಿ ಗ್ರಾಚ್ಯೂಟಿಗೆ ಅರ್ಹತೆ ಇದೆಯೆಂಬ ಮದ್ರಾಸ್ ಹೈಕೋರ್ಟ್ ತೀರ್ಪು ಒಂದಿದೆ ಎಂಬುದನ್ನು ಕೂಡಾ ಗಮನದಲ್ಲಿ ಇಟ್ಟಿರಿ.
ಇಲ್ಲಿ ನಿರಂತರ ಸೇವೆ ಎಂದರೆ ಯಾವುದೇ ಬ್ರೇಕ್ ಇಲ್ಲದೆ ನಡೆಸಿದ ಸೇವೆ. ಅಂದರೆ ಮಧ್ಯದಲ್ಲಿ ಕೆಲಸ ಬಿಟ್ಟು ಪುನಃ ಅದೇ ಸಂಸ್ಥೆಗೆ ಸೇರಿದರೂ ಅದು ನಿರಂತರ ಸೇವೆಯಾಗುವುದಿಲ್ಲ. ಎರಡು ಬೇರೆ ಬೇರೆ ಸಂಸ್ಥೆಗಳ ಸೇವೆಗಳನ್ನು ಕೂಡಲು ಬರುವುದಿಲ್ಲ. ಪಡಕೊಂಡ ಅಧಿಕೃತ ರಜಾಗಳನ್ನು ಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ. ಮಹಿಳಾ ಉದ್ಯೋಗಿಗಳು ಮಟರ್ನಿಟಿ ರಜೆಯಲ್ಲಿ ಹೋಗಿದ್ದರೆ ಅಂತಹ 26 ವಾರಗಳ ರಜೆಯನ್ನು ಕೂಡಾ ನಿರಂತರ ಸೇವೆಯ ಲೆಕ್ಕಕ್ಕೆ ಸೇರಿಸತಕ್ಕದ್ದು ಎನ್ನುವುದು ಕೂಡಾ ಗ್ರಾಚ್ಯೂಟಿ ಕಾಯ್ದೆಯ ಒಂದು ಮುಖ್ಯ ಭಾಗ.
ಎಷ್ಟು ಗ್ರಾಚ್ಯೂಟಿ?: ಸಂಸ್ಥೆಗಳು ಪೇಮೆಂಟ್ ಆಫ್ ಗ್ರಾಚ್ಯೂಟಿ ಆ್ಯಕ್ಟ್ 1972 ಪ್ರಕಾರ ಗ್ರಾಚ್ಯೂಟಿ ನೀಡಬೇಕು. ಆ ಪ್ರಕಾರ ಪ್ರತಿ ಪೂರ್ಣಗೊಂಡ ವರ್ಷದ ಸೇವೆಗೆ ಹದಿನೈದು ದಿನಗಳ ಸಂಬಳದ ಪ್ರಕಾರ ಗ್ರಾಚ್ಯೂಟಿ ಮೊತ್ತ ಲೆಕ್ಕ ಹಾಕಲಾಗುತ್ತದೆ. ಇಲ್ಲಿ ತಿಂಗಳಿಗೆ ಇಪ್ಪತ್ತಾರು ದಿನಗಳ ಲೆಕ್ಕ ತೆಗೆದುಕೊಳ್ಳಬೇಕು ಹಾಗೂ ಆರು ತಿಂಗಳು ದಾಟಿದ ಅವಧಿಯನ್ನು ಒಂದು ಪೂರ್ತಿ ವರ್ಷವೆಂದು ಪರಿಗಣಿಸಬೇಕು. ಸಂಬಳ ಎಂದರೆ ಬೇಸಿಕ್ ಮತ್ತು ಡಿಎ ಮಾತ್ರವೇ ತೆಗೆದುಕೊಳ್ಳಬೇಕು. ಇತರ ಭತ್ತೆಗಳು ಗ್ರಾಚ್ಯೂಟಿ ಸಂದರ್ಭದಲ್ಲಿ ಲೆಕ್ಕಕ್ಕಿಲ್ಲ.
ಗ್ರಾಚ್ಯೂಟಿ = ಸೇವೆಯ ಅವಧಿ (ಪೂರ್ತಿವರ್ಷ) ಮಾಸಿಕ ಸಂಬಳ (15/26): ಈ ಫಾರ್ಮುಲಾ ಪ್ರಕಾರ ರೂ. 20 ಲಕ್ಷದ ಗರಿಷ್ಟ ಮಿತಿಯವರೆಗೆ ಗ್ರಾಚ್ಯೂಟಿ ಪಾವತಿ ಕಡ್ಡಾಯ. (ಅದಕ್ಕೂ ಮೀರಿದ ಪಾವತಿಯನ್ನುex-gratia ರೂಪದಲ್ಲಿ ಮಾಡಲು ಕಾನೂನಿನ ಅಡ್ಡಿಯಿಲ್ಲ) ಈ ಮಿತಿಯು ಮೊದಲು ರೂ. 10 ಲಕ್ಷ ಇದ್ದಿದ್ದು 29 ಮಾರ್ಚ್ 2018ರ ಬಳಿಕ ರೂ. 20 ಲಕ್ಷಕ್ಕೆ ಏರಿಸಲಾಗಿದೆ.
ಇನ್ನು, ಮೊದಲೇ ಹೇಳಿದಂತೆ ಪೇಮೆಂಟ್ ಆಫ್ ಗ್ರಾಚ್ಯೂಟಿ ಆ್ಯಕ್ಟ್ 1972 ಅಡಿಯಲ್ಲಿ ಬಾರದ ಅಂದರೆ ಕನಿಷ್ಠ ಹತ್ತು ಮಂದಿ ಉದ್ಯೋಗಿಗಳು ಇಲ್ಲದ ಸಂಸ್ಥೆಗಳಿಗೆ ಗ್ರಾಚ್ಯೂಟಿ ನೀಡುವುದು ಕಡ್ಡಾಯವಲ್ಲ. ಅಂತವರು ಅವರಿಗೆ ಇಷ್ಟ ಬಂದಂತೆ ಎಷ್ಟಾದರೂ ಗ್ರಾಚ್ಯೂಟಿ ನೀಡಬಹುದು ಅಥವಾ ಬಿಡಿಕಾಸೂ ನೀಡದೆ ಸುಮ್ಮನಿರಬಹುದು.
ಆದಾಯ ಕರ: ಗ್ರಾಚ್ಯೂಟಿ ಪಾವತಿಯ ವಿಚಾರ ಬೇರೆ; ಅದರ ಮೇಲಿನ ಆದಾಯ ಕರದ ವಿಚಾರ ಬೇರೆ. ಈಗ ಪಾವತಿಯ ವಿಚಾರ ಬಿಟ್ಟು ಅದರ ಮೇಲೆ ಅನ್ವಯವಾಗುವ ಕರ ಕಾನೂನಿನತ್ತ ಹೊರಳ್ಳೋಣ… ಗ್ರಾಚ್ಯೂಟಿ ಪಾವತಿಯ ಮೇಲೆ ಆದಾಯ ಕರ ಯಾವ ರೀತಿ ಅನ್ವಯವಾಗುತ್ತದೆ ಎನ್ನುವುದು ಕೂಡಾ ಉದ್ಯೋಗವು ಸರಕಾರಿಯೇ ಖಾಸಗಿಯೇ ಎನ್ನುವುದರ ಮೇಲೆ ನಿರ್ಧಾರಿತವಾಗುತ್ತದೆ.
(ಇಲ್ಲಿ ಸರಕಾರಿ ಅಂದರೆ ಸಂಪೂರ್ಣ ಸರಕಾರಿ, ಬ್ಯಾಂಕ್, ಎಲ್ಲೆ„ಸಿ, ಇನ್ನಿತರ ಅರೆ ಸರಕಾರಿಗಳು ಖಾಸಗಿಯವರ ಜೊತೆಗೆ ಸೇರುತ್ತಾರೆ). ಉದ್ಯೋಗವು ಸರಕಾರಿಯಾದರೆ ಅಂತಹ ಗ್ರಾಚ್ಯೂಟಿ ಪಾವತಿಯು ಸರಕಾರಿ ನೌಕರರ ಕೈಯಲ್ಲಿ ಯಾವುದೇ ಮಿತಿಯಿಲ್ಲದೆ ಸಂಪೂರ್ಣವಾಗಿ ಕರಮುಕ್ತವಾಗಿರುತ್ತದೆ. ಆ ಮಿತಿ ಈಗ ರೂ. 20 ಲಕ್ಷ. ಆದರೆ ಖಾಸಗಿ ಉದ್ಯೋಗ ವಲಯದಲ್ಲಿ ಗ್ರಾಚ್ಯೂಟಿ ಪಾವತಿಯ ಮೇಲೆ ಕರ ವಿನಾಯಿತಿಗೆ ಒಂದು ಮಿತಿ ಇದೆ. ಈ ಮಿತಿಯು ಕೂಡಾ ಮೇಲೆ ತಿಳಿಸಿದಂತೆ ಎರಡು ರೀತಿಯಲ್ಲಿ ಅನ್ವಯವಾಗುತ್ತದೆ.
1. ಪೇಮೆಂಟ್ ಆಫ್ ಗ್ರಾಚ್ಯೂಟಿ ಆ್ಯಕ್ಟ್ 1972 ಅಡಿಯಲ್ಲಿ ಬರುವವರಿಗೆ ಆ ಮಿತಿಯನ್ನು ಈ ಕೆಳಗಿನ ಮೂರು ಅಂಶಗಳಲ್ಲಿ ಕನಿಷ್ಠವಾದ ಮೊತ್ತವಾಗಿ ತೆಗೆದುಕೊಳ್ಳಲಾಗುತ್ತದೆ:
1. ಪ್ರತಿ ಪೂರ್ಣಗೊಂಡ ವರ್ಷದ ಸೇವೆಗೆ ಹದಿನೈದು ದಿನಗಳ ಲೆಕ್ಕದಲ್ಲಿ ಸೇವೆಯ ಅಂತ್ಯದ ಸಂಬಳದ ಅನುಸಾರ ಲೆಕ್ಕ ಹಾಕಿದರೆ ಸಿಗುವ ಮೊತ್ತ (ಒಂದು ತಿಂಗಳಿಗೆ ಇಪ್ಪತ್ತಾರು ದಿನಗಳೆಂದು ತೆಗೆದುಕೊಳ್ಳಬೇಕು ಹಾಗೂ ಆರು ತಿಂಗಳು ದಾಟಿದ ಸೇವೆಯನ್ನು ಪೂರ್ತಿ ವರ್ಷದ ಲೆಕ್ಕಕ್ಕೆ ತೆಗೆದುಕೊಳ್ಳಬೇಕು. ಸಂಬಳ ಎಂದರೆ ಬೇಸಿಕ್ ಮತ್ತು ಡಿಎ ಎಂದು ತಿಳಿಯಬೇಕು)
2. ನಿಜವಾಗಿಯೂ ಪಾವತಿಗೊಂಡ ಗ್ರಾಚ್ಯೂಟಿ ಮೊತ್ತ
3. ರೂ. ಇಪ್ಪತ್ತು ಲಕ್ಷ.
ಈ ಮೂರರಲ್ಲಿ ಯಾವುದು ಕನಿಷ್ಠವೋ ಅಷ್ಟು ಮೊತ್ತ ಕರಮುಕ್ತವಾಗಿರುತ್ತದೆ. ಇದು ಗ್ರಾಚ್ಯೂಟಿ ಪಾವತಿಯ ಕಾನೂನಿನ ನೊಣಪ್ರತಿ! ಅಂದರೆ ಈ ಕಾನೂನಿನಡಿಯಲ್ಲಿ ಪಾವತಿಸಿದ ಗ್ರಾಚ್ಯೂಟಿ ಸಂಪೂರ್ಣವಾಗಿ ಕರಮುಕ್ತ.
2. ಪೇಮೆಂಟ್ ಆಫ್ ಗ್ರಾಚ್ಯೂಟಿ ಅಡಿಯಲ್ಲಿ ಬಾರದ ಸಂದರ್ಭಗಳಲ್ಲಿ ಕರ ವಿನಾಯಿತಿಯಲ್ಲಿ ಸ್ವಲ್ಪ ಬದಲಾವಣೆ ಇದೆ. ಇಲ್ಲಿ ಪಾವತಿಯ ಬಗ್ಗೆ ಯಾವುದೇ ಫಾರ್ಮುಲಾ ನೀಡದಿದ್ದರೂ ಕರ ವಿನಾಯಿತಿ ಮೇಲೆ ಸ್ಪಷ್ಟವಾದ ಕಾನೂನು ಇದೆ.
1. ಇಲ್ಲಿ ಪ್ರತಿ ಪೂರ್ಣಗೊಂಡ ವರ್ಷದ ಸೇವೆಗೆ ಹದಿನೈದು ದಿನಗಳ ಲೆಕ್ಕದಲ್ಲಿ ಕಳೆದ ಹತ್ತು ತಿಂಗಳ ಸೇವೆಯ ಸರಾಸರಿ ಸಂಬಳದ ಅನುಸಾರ ಲೆಕ್ಕ ಹಾಕಿದರೆ ಸಿಗುವ ಮೊತ್ತ (ಒಂದು ತಿಂಗಳಿಗೆ ಮೂವತ್ತು ದಿನಗಳೆಂದು ತೆಗೆದುಕೊಳ್ಳಬೇಕು ಹಾಗೂ ಇಲ್ಲಿ ಆರು ತಿಂಗಳು ದಾಟಿದ ಸೇವೆಯನ್ನು ಪೂರ್ತಿ ವರ್ಷದ ಲೆಕ್ಕಕ್ಕೆ ತೆಗೆದುಕೊಳ್ಳವ ಅಗತ್ಯವಿಲ್ಲ. ಸಂಬಳ ಎಂದರೆ ಬೇಸಿಕ್ ಮತ್ತು ಡಿಎ ಎಂದು ತಿಳಿಯಬೇಕು.
2. ನಿಜವಾಗಿಯೂ ಪಾವತಿಗೊಂಡ ಗ್ರಾಚ್ಯೂಟಿ ಮೊತ್ತ
3. ರೂ. ಇಪ್ಪತ್ತು ಲಕ್ಷ.
ಈ ಮೂರರಲ್ಲಿ ಯಾವುದು ಕನಿಷ್ಠವೋ ಅಷ್ಟು ಮೊತ್ತ ಕರ ಮುಕ್ತವಾಗಿರುತ್ತದೆ.
ಮೇಲಿನ ಎರಡೂ ಸಂದರ್ಭಗಳಲ್ಲೂ, ಕರಮುಕ್ತ ಮಿತಿ ಮೀರಿದ ಗ್ರಾಚ್ಯೂಟಿ ಸಿಕ್ಕಿದರೆ (ex gratia)ಅದರ ಮೇಲೆ ಆ ವರ್ಷದ ಆದಾಯ ಸ್ಲಾಬ್ ಅನುಸರಿಸಿ ಕರ ಕಟ್ಟಬೇಕು.
ಮಿತಿಯಲ್ಲಿ ಹೆಚ್ಚಳ: ಗ್ರಾಚ್ಯೂಟಿ ಮಿತಿ ರೂ. 10 ಲಕ್ಷದಿಂದ ರೂ. 20 ಲಕ್ಷಕ್ಕೆ ಏರಿಕೆಯಾಗಿದೆಯಷ್ಟೆ. ಈ ಹೊಸ ತಿದ್ದುಪಡಿಯ ಬಗ್ಗೆ ಇನ್ನೂ ಸ್ವಲ್ಪ ಸ್ಪಷ್ಟತೆ ಬೇಕೇ ಬೇಕಾಗುತ್ತದೆ. ಎಷ್ಟೋ ಜನ ಅಮಾಯಕರು ತಮ್ಮ ಎಂದೋ ಸಿಗಲಿರುವ ಗ್ರಾಚ್ಯೂಟಿ ಮೊತ್ತ ಈಗಾಗಲೇ ಜಾಸ್ತಿಯಾಗಿದೆ ಎಂದು ಭ್ರಮೆಯಲ್ಲಿ ಈಗಾಗಲೇ ನಾಲ್ಕು ಕಿಲೋ ಧಾರವಾಡ ಪೇಡಾ ಹಂಚಿ ಕಿಸೆ ಖಾಲಿಮಾಡಿಕೊಂಡಿದ್ದಾರೆ.
ಇಲ್ಲಿ ಅತ್ಯಂತ ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳಬೇಕಾದದ್ದು ಏನೆಂದರೆ ಗ್ರಾಚ್ಯೂಟಿಯ ಗರಿಷ್ಟ ಮಿತಿಯಲ್ಲಿ ಮಾತ್ರವೇ ಹೆಚ್ಚಳವಾಗಲಿದೆ. ಪಡೆಯಲಿರುವ ಗ್ರಾಚ್ಯೂಟಿ ಲೆಕ್ಕಾಚಾರದಲ್ಲಿ ಅಥವಾ ಫಾರ್ಮುಲಾದಲ್ಲಿ ಯಾವುದೇ ಬದಲಾವಣೆ ಇಲ್ಲ; ಅದು ಮೊದಲಿನಂತೆಯೇ ಇದೆ. ಅಂದರೆ, ಫಾರ್ಮುಲಾ ಪ್ರಕಾರ 10 ಲಕ್ಷ ಮೀರಿದ ಗ್ರಾಚ್ಯೂಟಿ ಬರುವವರಿಗೆ ಮಾತ್ರ ಈ ಮಿತಿ ಹೆಚ್ಚಳದಿಂದ ಲಾಭವಾಗುತ್ತದೆ. ಈಗಾಗಲೇ 10 ಲಕ್ಷ ಮೀರುವ ಕೆಲವರಿದ್ದಾರೆ;
ಇನ್ನು ಕೆಲವರಿಗೆ ಈ ಏಳನೆಯ ಪೇ ಕಮಿಶನ್ ಸಂಬಳದ ನಂತರದ ದಿನಗಳಲ್ಲಿ ಗ್ರಾಚ್ಯೂಟಿ ಮೊತ್ತ ಹತ್ತು ಲಕ್ಷ ಮೀರುವ ಸಂಭಾವ್ಯವಿದ್ದು ಅಂತವರಿಗೆ ಈ ಮಿತಿ ಹೆಚ್ಚಳ ಸಹಾಯವಾದೀತು. ಆದರೆ ಫಾರ್ಮುಲಾ ಪ್ರಕಾರ ಹತ್ತು ಲಕ್ಷವೂ ಗ್ರಾಚ್ಯೂಟಿ ಬಾರದ ದೇಶದ ಬಹುಪಾಲು ಮಧ್ಯಮ ಹಾಗೂ ಕೆಳ ಮಧ್ಯಮ ವರ್ಗದವರಿಗೆ ಈ ಹೊಸ ಕಾನೂನಿನಿಂದ ಯಾವುದೇ ಪ್ರಯೋಜನ ಆಗಲಿಕ್ಕಿಲ್ಲ. ಅಂತವರಿಗೆ ಪೇಡಾ ಹಂಚಿ ಕಿಸಿಖಾಲಿಯಾದದ್ದಷ್ಟೇ ಬಂತು!
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.