ಮಗರಾಯನ ಗೃಹ ಸಾಲ ಪಾರಾಯಣ
Team Udayavani, Jul 24, 2017, 1:15 PM IST
ಈ ರೀತಿ ಗುರುಗುಂಟಿರಾಯರು ಮತ್ತು ಬಹೂರಾನಿ ಒಂದಾಗಿ ಪದೇ ಪದೇ ಮಗರಾಯನನ್ನು ಉಡಾಫೆ ಮಾಡುವುದು ಆತನಿಗೆ ಬಿಲ್ಕುಲ್ ಸರಿ ಹೋಗುವುದಿಲ್ಲ. ಪ್ರತೀ ವರ್ಷ ಮಳೆಗಾಲದಲ್ಲಿ ಈ ಮಳೆರಾಯರ ಕೃಪೆಯಿಂದ ಲೋಕದವರಿಗೆಲ್ಲಾ ಇನ್ಕಂ ಟ್ಯಾಕ್ಸ್… ಫೈಲಿಂಗ್ ಮಾಡಿಸುವ ನೆಪದಲ್ಲಿ ಮಾನ ಹರಾಜು ಹಾಕಿಸಿಕೊಳ್ಳುವುದು ಆತನಿಗೊಂದು ಕಟ್ಟಿಟ್ಟ ಬುತ್ತಿಯಿಂದ ಬರುವ ನುಂಗಲಾರದ ತುತ್ತು. ಇದನ್ನ ಹೇಗಾರ ಮಾಡಿ ಸರಿದೂಗಿಸಿಕೊಂಡು ಹೋಗಲೇ ಬೇಕೆಂಬ ಹಠಕ್ಕೆ ಬಿದ್ದ ಮಗರಾಯನು ಗಂಭೀರವದನನಾಗಿ ಚಿಂತನೆಯಲ್ಲಿ ಮುಳುಗಿದ.
ಅಪ್ಪನ ಈ ತಲೆಬಿಸಿಯ ಹೊಸ ಸ್ಟೇಟಸ್ ಅಪ್ಡೆಟ್ ಗಮನಿಸಿದ ಮೊಮ್ಮಗ ತಾನೀಗ ಆತನ ಪಾರ್ಟಿ ಹಿಡಿದು ಅಲ್ಪ ಸ್ವಲ್ಪ ಸಹಾಯ ಮಾಡಿದರೂ ಸಾಕು, ಫುಲ್ ಖುಶ್ ಆಗುವ ಅಪ್ಪ ತಾನು ಕೇಳಿದ್ದನ್ನು ಕೊಡಿಸುವ ಪರಿಸ್ಥಿತಿಗೆ ತಲುಪುತ್ತಾನೆ ಎಂಬ ಲೆಕ್ಕ ಹಾಕಿದ. ಒಂದೆಡೆ ಅಜ್ಜನನ್ನೂ ಇನ್ನೊಂದೆಡೆ ಅಪ್ಪನನ್ನೂ ಮಗದೊಂದೆಡೆ ಅಮ್ಮನನ್ನೂ ಡಿವೈಡ್ ಆ್ಯಂಡ್ ರೂಲ್ ಮಾಡುವ ಬ್ರಿಟಿಷ್ ಕಲೆಯಲ್ಲಿ ಸಿದ್ಧ ಹಸ್ತನಾದ ಮೊಮ್ಮಗ ಅಪ್ಪಾ, ಈವಾಗ ನೀನು ಅಮ್ಮನನ್ನೂ ಮೀರಿಸಿ ಆದಾಯ ಕರದ ನಾಲ್ಕಾರು ಸೆಕ್ಷನ್ನುಗಳನ್ನು ಅಜ್ಜನೆದುರು ಹೊಸೆದು ಒಗಾಯಿಸಿದರೆ ಪರ್ವ ಬ್ಯಾಲನ್ಸನ್ನು ಇತ್ತಕಡೆ ಸೆಳೆದುಕೊಳ್ಳಬಹುದು ಎನ್ನುವ ಎಬಿಸಿಡಿ ಪಾಠ ಮಾಡಿದ. ಇದರಿಂದ ಅಮ್ಮನ ಬ್ಯಾಟ್ರಿ ಚಾರ್ಜ್ ಡೌನ್ ಆಗಿ ನಿನ್ನ ಬ್ಯಾಟ್ರಿ ಫುಲ್ ಚಾರ್ಜ್ ಆಗಿ ಕಳೆದು ಹೋದ ನಿನ್ನ ಅಧಿಕಾರ ತಿರುಗಿ ಮರಳೀತು ಎನ್ನುವ ಹುಳವನ್ನು ಅಪ್ಪನ ತಲೆಯೊಳಗೆ ಇಳಿಬಿಟ್ಟ.
ಮಗನ ರಾಜಕೀಯ ಪರಿಣತಿಗೆ ತಲೆದೂಗಿದ ಅಪ್ಪರಾಯ ಆ ಕೂಡಲೇ ಕಾರ್ಯ ಪ್ರವೃತ್ತನಾಗಿ ಇನ್ಕಂ ಟ್ಯಾಕ್ಸಿನ ರೆಡಿ ರೆಕರ್ನ ಹಿಡಿದುಕೊಂಡು ಗೃಹಸಾಲದ ಸೆಕ್ಷನ್ ಇಪ್ಪತ್ತನಾಲ್ಕನ್ನು ಇಪ್ಪತ್ತನಾಲ್ಕು ಗಂಟೆ ಉರುಹೊಡೆಯತೊಡಗಿದ.
ಮೊದಲನೆಯದಾಗಿ ಆದಾಯ ತೆರಿಗೆಯ ಪ್ರತಿಯೊಂದು ವಿಚಾರವು ಕೂಡಾ ಯಾವ ವಿತ್ತ ವರ್ಷಕ್ಕೆ ಮತ್ತು ಯಾವ ಅಸೆಸೆ¾ಂಟ್ ವರ್ಶಕ್ಕೆ ಅನ್ವಯವಾಗುತ್ತದೆ ಎನ್ನುವುದರ ಬಗ್ಗೆ ಸ್ಪಷ್ಟತೆ ಬೇಕು. ಇದೀಗ ನಾವು ಚರ್ಚೆ ನಡೆಸುತ್ತಿರುವುದು 2016-17 ರ ಬಗ್ಗೆ. 2017-18 ಅಸೆಸೆ¾ಂಟ್ ವರ್ಷ ಎಂದೂ ಕರೆಯುತ್ತಾರೆ. ಒಂದು ನಿರ್ದಿಷ್ಟ ವಿತ್ತ ವರ್ಷಕ್ಕೆ ಅದರ ನಂತರದ ವರ್ಷ ಅಸೆಸೆ¾ಂಟ್ ವರ್ಷವಾಗುತ್ತದೆ. ಈ ಮಾತನ್ನು ಕಾಸು ಕುಡಿಕೆಯಲ್ಲಿ ಎಷ್ಟು ಬಾರಿ ಹೇಳಿದರೂ ಅದನ್ನು ಕಿವಿಗೆ ಹಾಕಿಕೊಳ್ಳದೆ ಯಾವ ಯಾವುದೋ ವರ್ಷಕ್ಕೆ ಯಾವ ಯಾವುದೋ ಕರಕಾನೂನನ್ನು ತಗಲು ಹಾಕಿಸಿಕೊಂಡು ಅನಾವಶ್ಯಕ ಟೆನ್ಶನ್ ಏರಿಸಿಕೊಂಡು ಯಾರ್ಯಾರ ಮೇಲೋ ರೇಗಾಡುತ್ತಾ ತಿರುಗಾಡುತ್ತಿರುತ್ತಾರೆ.
ಗೃಹಸಾಲದ ಮೇಲೆ ಕರವಿನಾಯಿತಿ
ಈ ಹಿಂದೆ 80ಸಿ ಸೆಕ್ಷನ್ ರಿಯಾಯಿತಿಗಳ ಬಗ್ಗೆ ಸವಿಸ್ತಾರವಾಗಿ ಚರ್ಚೆ ನಡೆಸಿದ್ದೇವೆ. ಸೆಕ್ಷನ್ 80ಸಿ ಅನುಸಾರ ಸಿಗುವ ಕರವಿನಾಯಿತಿಯಲ್ಲದೆ ಬೇರೆ ಕೆಲವು ಕರ ವಿನಾಯಿತಿ ಸೌಲಭ್ಯಗಳೂ ಲಭ್ಯ ಎನ್ನುವುದು ಹಲವರಿಗೆ ಅರಿವಿಲ್ಲ. ಅಂತಹ ಕರ ವಿನಾಯಿತಿಗಳಲ್ಲಿ ಅತಿ ಮುಖ್ಯವಾದದ್ದು ಗೃಹಸಾಲದ ಮರುಪಾವತಿಯ ಮೇಲೆ ಸಿಗುವ ಕರ ವಿನಾಯಿತಿ. ಸೆಕ್ಷನ್ 24 ಎಂಬ ಪ್ರತ್ಯೇಕವಾದ ಭಾಗದಲ್ಲಿ ಬರುವ ಈ ವಿನಾಯಿತಿ 80ಸಿ ಗಿಂತ ತೀರಾ ಭಿನ್ನ. ಸಾಲ ಮಾಡಿ ಮನೆಕಟ್ಟುವುದರಲ್ಲಿ ಬಹಳಷ್ಟು ಕರಸಂಬಂಧಿ ಲಾಭಗಳಿವೆ. ಇವುಗಳು ಸಾಲದ ಬಡ್ಡಿಯ ಮೇಲೆ, ಅಸಲಿನ ಮೇಲೆ, ಸ್ವಂತ ವಾಸಕ್ಕೆ, ಬಾಡಿಗೆಗೆ ನೀಡುವುದಕ್ಕೆ – ಹೀಗೆ ಸಂದರ್ಭಾನುಸಾರ ವ್ಯತ್ಯಾಸವಾಗುತ್ತದೆ. ಕರಕಾನೂನಿನ ಸೂಕ್ಷ¾ತೆಯನ್ನು ಅರಿತು ಗೃಹ ಸಾಲವನ್ನು ನಮ್ಮ ಲಾಭಕ್ಕಾಗಿ ಬಳಸಿಕೊಳ್ಳಬಹುದು.
ಸ್ವಂತ ವಾಸಕ್ಕೆ ಗೃಹಸಾಲ
ಆದಾಯ ತೆರಿಗೆಯ ಕಾನೂನಿನನ್ವಯ ಸ್ವಂತ ವಾಸದ ಒಂದು ಮನೆಯ ಖರೀದಿ, ನಿರ್ಮಾಣ, ರಿಪೇರಿ, ನವೀಕರಣ ಅಥವ ಪುನರ್ನಿರ್ಮಾಣಕ್ಕಾಗಿ ಗೃಹ ಸಾಲ ಪಡೆದುಕೊಂಡಿದ್ದಲ್ಲಿ ಅದರ ಮೇಲಿನ ಬಡ್ಡಿಯ ಮೇಲೆ ಕರ ವಿನಾಯತಿ ಪಡಕೊಳ್ಳಬಹುದು. ಈ ವಿನಾಯತಿ ಎಪ್ರಿಲ್ 1, 1999 ರ ಮೊದಲು ಮಾಡಿಗೊಂಡ ಮನೆಗಳಿಗೆ ರೂ 30,000 ಹಾಗೂ ಆ ಬಳಿಕ ಮಾಡಿಗೊಂಡ ಮನೆಗಳ ಮೇಲೆ ರೂ 1,50,000 ಇದ್ದಿದ್ದು ವಿತ್ತ ವರ್ಷ 2015-16 ರಿಂದ ಅನ್ವಯವಾಗುವಂತೆ ಅದನ್ನು ರೂ 2,00,000 ಕ್ಕೆ ಏರಿಸಲಾಗಿದೆ.
ಅಂದರೆ ಸ್ವಂತವಾಸದ ಮನೆಗೆ ಬಾಡಿಗೆ ಆದಾಯ ಶೂನ್ಯವಾಗಿದ್ದು, ಗೃಹಸಾಲದ ಮೇಲೆ ಕೊಟ್ಟ ಬಡ್ಡಿಯನ್ನು ರೂ 2,00,000 ರ ಮಿತಿಯೊಳಗೆ ಒಂದು ವೆಚ್ಚವಾಗಿ ತೋರಿಸಬಹುದು. ಇದು ಸ್ವಂತ ವಾಸದ ಮನೆಗೆ ಮಾತ್ರ ಅನ್ವಯ ಹಾಗೂ ಇಲ್ಲಿ ಗೃಹಸಾಲ ಪಡೆದು 5 ವರ್ಷಗಳೊಳಗಾಗಿ ಗೃಹ ನಿರ್ಮಾಣ ಪೂರ್ಣಗೊಂಡು ವಾಸ್ತವ್ಯ ಹೂಡಿರಬೇಕು. ಆದರೆ ಉದ್ಯೋಗ/ಬಿಸಿನೆಸ್ ನಿಮಿತ್ತ ಪರವೂರಿನಲ್ಲಿ ಇರಬೇಕಾದ ಸಂದರ್ಭದಲ್ಲಿ ವಾಸವಿಲ್ಲದಿದ್ದರೂ ಸ್ವಂತವಾಸವೆಂದು ಪರಿಗಣಿಸಬಹುದು. ಈ ವೆಚ್ಚವನ್ನು ನಿಮ್ಮ ಸಂಬಳ, ಬಿಸಿನೆಸ…, ಮತ್ತಿತರ ಇತರ ಆದಾಯಗಳಿಂದ ಕಳೆಯಲ್ಪಟ್ಟು ನಿಮ್ಮ ಆದಾಯದ ಸ್ಲಾಬ್ ಪ್ರಕಾರ ಒಟ್ಟು ಆದಾಯದ ಮೇಲೆ ಕರರಿಯಾಯಿತಿಗೆ ಎಡೆಮಾಡಿ ಕೊಡುತ್ತದೆ.
ಹೆಚ್ಚುವರಿ ಲಾಭ (ಸೆಕ್ಷನ್ 80ಇಇ)
2016 ಬಜೆಟ್ಟಿನಲ್ಲಿ ಈ ವಿತ್ತ ವರ್ಷಕ್ಕೆ (2016-17) ಅನ್ವಯವಾಗುವಂತೆ ಬಡ್ಡಿ ಪಾವತಿಯ ಮೇಲೆ ಸಿಗುವ ವಿನಾಯಿತಿಯ ಮಿತಿಯನ್ನು ರೂ 2 ಲಕ್ಷದಿಂದ ರೂ 2.5 ಲಕ್ಷಕ್ಕೆ ಏರಿಸಲಾಗಿದೆ. ಆದರೆ ಇದು ಎಲ್ಲಾ ಗೃಹ ಸಾಲಗಳಿಗೂ ಅನ್ವಯಿಸುವುದಿಲ್ಲ.
ಷರತ್ತುಗಳು: 1. ಇದು ನಿಮ್ಮ ಮೊತ್ತ ಮೊದಲ ಮನೆಯಾಗಿರಬೇಕು 2. ಮನೆಯ ಒಟ್ಟು ಬೆಲೆ ರೂ 50 ಲಕ್ಷದ ಒಳಗಿರಬೇಕು 3. ಗೃಹ ಸಾಲದ ಮೊತ್ತ ರೂ 35 ಲಕ್ಷದ ಒಳಗಿರಬೇಕು. 4. ಮನೆ ಪೂರ್ತಿ ನಿರ್ಮಾಣವಾಗಿ ನಿಮ್ಮ ಕೈಗೆ (ಪೊಸೆಷನ್) ಬಂದಿರಬೇಕು. 5. ಗೃಹಸಾಲ ಒಂದು ವಿತ್ತೀಯ ಸಂಸ್ಥೆಯಿಂದ ಮಾತ್ರವೇ ತೆಗೆದುಕೊಂಡದ್ದಾಗಿರಬೇಕು. 6. ಸಾಲವನ್ನು 2016-17 ವಿತ್ತೀಯ ವರ್ಷದಲ್ಲಿ ಪಡೆದಿರಬೇಕು. ಈ ಹೊಸ ನಿಯಮದಿಂದಾಗಿ, ಆದಾಯದಲ್ಲಿ ರೂ 50,000 ದಷ್ಟು ಹೆಚ್ಚುವರಿ ಕಡಿತದಿಂದಾಗಿ, ಅವರವರ ಆದಾಯದ ಸ್ಲಾಬ್ ಅನುಸಾರ ಆ 50,000 ದ 10%, 20% ಅಥವಾ 30% ಕರವಿನಾಯಿತಿ ಲಭಿಸೀತು. ಅಂದರೆ ವಾರ್ಷಿಕ ರೂ 5,000, 10,000 ಯಾ 15,000 ಹೆಚ್ಚುವರಿ ಉಳಿಕೆ.
ಜಂಟಿ ಸಾಲ
ಇದಕ್ಕಾಗಿ ಸ್ವಂತ ಕರಾರ್ಹ ಆದಾಯವಿರುವ ಪತಿ-ಪತ್ನಿಯರು ಜಂಟಿ ಹೆಸರಿನಲ್ಲಿ ಸಾಲ ಮಾಡಿದರೆ ಇಬ್ಬರಿಗೂ ಎರಡೆರಡು ಲಕ್ಷ, ಒಟ್ಟಿಗೆ ನಾಲ್ಕು ಲಕ್ಷದಷ್ಟು ಬಡ್ಡಿ ಪಾವತಿಯ ಮೇಲೆ ಕರವಿನಾಯತಿಯನ್ನು ಅವರವರ ವೈಯಕ್ತಿಕ ಆದಾಯದಲ್ಲಿ ಪಡಕೊಳ್ಳಬಹುದು. ಆದರೆ ಈ ರೀತಿ ಜಂಟಿ ಸಾಲದ ಕರಲಾಭ ಪಡೆಯಬೇಕಾದರೆ ಮೊತ್ತ ಮೊದಲು ಆ ಮನೆಯೂ ಜಂಟಿ ಹೆಸರಿನಲ್ಲಿ ಇರಬೇಕಾದುದು ಅತ್ಯಗತ್ಯ. ಇಬ್ಬರ ಪಾಲು 50%-50% ಎಂಬುದನ್ನು ಸರಿಯಾಗಿ ಟೈಟಲ್ ಡೀಡ್ನಲ್ಲಿ ದಾಖಲಿಸಿಕೊಳ್ಳಬೇಕು. ಬ್ಯಾಂಕ್ ಸಾಲವನ್ನು ಮತ್ತದರ ಮಾಸಿಕ ಪಾವತಿಯನ್ನೂ (ಇಎಮ…ಐ) ಕೂಡಾ ಅದೇ ಅನುಪಾತದಲ್ಲಿ ಹಂಚಿಕೊಳ್ಳಬೇಕು. ಇವೆಲ್ಲವನ್ನೂ ಬ್ಯಾಂಕಿನ ಅಧಿಕಾರಿಗಳೊಂದಿಗೂ ಚರ್ಚಿಸಬೇಕು. ಹಾಗೆ ಸರಿಯಾದ ಕಾಗದ ಪತ್ರ ಅನುಸರಿಸಿದರೇನೇ ಇಬ್ಬರಿಗೂ ಅವರವರ ಪಾಲಿನ ಬಡ್ಡಿಯ ಮೇಲೆ ಕರವಿನಾಯತಿ ಲಭಿಸೀತು. ಸರಿಯಾದ ಕಾಗದಪತ್ರ ಇಲ್ಲದಿದ್ದಲ್ಲಿ ಅಥವಾ ಕೇವಲ ತೋರಿಕೆಗಾಗಿ ಜಂಟಿ ಪಾವತಿ ತೋರಿಸಿದಲ್ಲಿ ಕರ ಅಧಿಕಾರಿಗಳು ಜಂಟಿಲಾಭವನ್ನು ನೀಡಲು ನಿರಾಕರಿಸಬಹುದು.
ಪ್ರಿ-ಇಎಮಐ
ಅವಷ್ಟು ವಾರ್ಷಿಕ ಬಡ್ಡಿಯ ಮಾತಾಯಿತು. ಬಡ್ಡಿಪಾವತಿಯ ಮೇಲಿನ ಈ ಕರಸೌಲಭ್ಯ ಮನೆ ಸಂಪೂರ್ಣವಾಗಿ ವಾಸ್ತವ್ಯ ಪತ್ರ ಪಡೆದು ಬ್ಯಾಂಕಿನಲ್ಲಿ ಇಎಮ…ಐ ಆರಂಭವಾದ ಬಳಿಕವೇ ದೊರೆಯುತ್ತದೆ. ಆದರೆ ಮನೆ ಕಟ್ಟುತ್ತಿರುವಾಗಲೂ ಬ್ಯಾಂಕು ತಾನು ನೀಡಿದ ಸಾಲದ ಮೇಲೆ ಬಡ್ಡಿ ಹೇರುತ್ತದಲ್ಲವೇ? ಆಗ ಇಎಮ…ಐ ಇರುವುದಿಲ್ಲ. ತಾತ್ಕಾಲಿಕ ಮಾಸಿಕ ಬಡ್ಡಿ ಪಾವತಿಸಬೇಕಾಗಿ ಬರುತ್ತದೆ. ಇಂತಹ ಇಎಮ…ಐ-ಪೂರ್ವ ಬಡ್ಡಿ (ಪ್ರಿ-ಇಎಮ…ಐ) ಯ ಮೇಲೆಯೂ ಕರವಿನಾಯತಿ ಇದೆ. ಅಂತಹ ಪ್ರಿ-ಇಎಮ…ಐ ಮೊತ್ತವನ್ನು ಗೃಹ ನಿರ್ಮಾಣವಾಗಿ ಬಡ್ಡಿಕಟ್ಟಲು ಆರಂಭಿಸಿದ ಮೇಲೆ 5 ಸಮಾನ ವಾರ್ಷಿಕ ಕಂತುಗಳಾಗಿ (ಒಟ್ಟು ಬಾಕಿಯ 20% ಪ್ರತಿವರ್ಷ) ಕರವಿನಾಯತಿಯ ಲೆಕ್ಕಕ್ಕೆ ತೆಗೆದುಕೊಳ್ಳಬಹುದು. ಆದರೆ, ಇದು ಮೇಲೆ ಹೇಳಿದ ರೂ 200000 ದ ಮಿತಿಯೊಳಗೇ ಬರುತ್ತದೆ. ಅಷ್ಟರಮಟ್ಟಿಗೆ ಇಎಮ…ಐ ಬಡ್ಡಿ ಇಲ್ಲದವರಿಗೆ ಮಾತ್ರ ಇದು 5 ವರ್ಷಗಳ ಮಟ್ಟಿಗೆ ಅನುಕೂಲವಾದೀತು.
ಅಸಲು
ಬಡ್ಡಿಯ ಮೇಲಲ್ಲದೆ ಸಾಲಪಾವತಿಯ ಅಸಲು (ಪ್ರಿನ್ಸಿಪಲ…) ಭಾಗದ ಮೇಲೂ ಸೆಕ್ಷನ್ 80ಸಿ ಅನ್ವಯ ರೂ 1.5 ಲಕ್ಷದವರೆಗೆ ವಿನಾಯತಿ ಇದೆ. ಇಎಮ…ಐ ಪ್ರತಿ ತಿಂಗಳೂ ಸಮಾನವಾಗಿದ್ದರೂ ಅದರೊಳಗಿನ ಅಸಲು ಮತ್ತು ಬಡ್ಡಿಯ ಭಾಗಗಳು ಒಂದೇ ಸಮ ಇರುವುದಿಲ್ಲ. ಮೊದಮೊದಲು ಬಡ್ಡಿಯ ಭಾಗ ಜಾಸ್ತಿಯುದ್ದು ಕಾಲಕ್ರಮೇಣ ಅಸಲಿನ ಭಾಗ ಜಾಸ್ತಿಯಾಗುತ್ತದೆ. ಬ್ಯಾಂಕಿನವರು ಈ ನಿಟ್ಟಿನಲ್ಲಿ ಅಸಲು ಮತ್ತು ಬಡ್ಡಿಯ ಪ್ರತ್ಯೇಕವಾಗಿ ನಮೂದಿಸಿ ವರ್ಷಾಂತ್ಯದಲ್ಲಿ ಆ ಬಗ್ಗೆ ಸರ್ಟಿಫಿಕೇಟ್ ನೀಡುತ್ತಾರೆ. ಈ ಸೆಕ್ಷನ್ 80 ಸಿ ವಿನಾಯತಿಯಲ್ಲಿ ಇನ್ಶೂರನ್ಸ…, ಪಿಪಿಎಫ…, ಎನ…ಎಸ್ಸಿ, 5-ವರ್ಷದ ಎಫಿx, ಇಎಲ…ಎಸ…ಎಸ್ ಜಾತಿಯ ಮ್ಯೂಚುವಲ್ ಫಂಡ…, 2 ಮಕ್ಕಳ ಶಾಲಾ ಟ್ಯೂಶನ್ ಫೀಸ್ ಇತ್ಯಾದಿಗಳ ಪಟ್ಟಿಯಲ್ಲಿ ಗೃಹಸಾಲದ ಅಸಲು ಭಾಗ ಕೂಡಾ ಸೇರಿದೆ. ಇದನ್ನೂ ಕೂಡಾ ಜಂಟಿ ಸಾಲದ ದಂಪತಿಗಳು ಮೇಲೆ ಹೇಳಿದಂತೆ ಗೃಹಮಾಲಕತ್ವ ಮತ್ತು ಸಾಲದಲ್ಲಿ ತಮ್ಮ ಪಾಲು ಹೊಂದಿಕೊಂಡು ಹಂಚಿಕೊಳ್ಳಬಹುದು. ಕೆಲವೊಮ್ಮೆ ಕೈಯಲ್ಲಿ ಹಣವಿದ್ದಂತೆ ಸಾಲದ ಅಸಲು ಭಾಗವನ್ನು ಭಾಗಶಃ ಮರುಪಾವತಿ ಮಾಡುತ್ತಾರೆ. ಅಂತಹ ಸಂದರ್ಭದಲ್ಲಿಯೂ ಅಸಲಿನ ಮರುಪಾವತಿಯನ್ನು ಈ 80ಸಿ ಸೆಕ್ಷನ್ ಅಡಿಯಲ್ಲಿ ಕರಲಾಭಕ್ಕಾಗಿ ಬಳಸಿಕೊಳ್ಳಬಹುದಾಗಿದೆ.
ಒಂದಕ್ಕಿಂತ ಹೆಚ್ಚು ಗೃಹ ಸಾಲ
ಒಂದಕ್ಕಿಂತ ಜಾಸ್ತಿ ಮನೆ ಇರುವವರು ಅದರಲ್ಲಿ ಯಾವುದಾದರೂ ಒಂದನ್ನು (ಅವರ ಆಯ್ಕೆಯಂತೆ) ಮಾತ್ರ ಶೂನ್ಯ ಆದಾಯದ ಸ್ವಂತ ವಾಸದೆಂದು ಗುರುತಿಸಬಹುದಾಗಿದೆ. ಉಳಿದ ಮನೆಗಳೆಲ್ಲವೂ ಬಾಡಿಗೆಯದೆಂದು ಗುರುತಿಸಿ ಅವುಗಳಿಂದ ಬಾಡಿಗೆ ಬಂದಿದೆಯೆಂದೇ ಪರಿಗಣಿಸಿ (ಖಾಲಿ ಬಿದ್ದಿದ್ದರೂ ಸಹ) ಅದರ ಮೇಲೆ ಆದಾಯ ತೆರಿಗೆ ಕಟ್ಟತಕ್ಕದ್ದು.
ಒಂದು ವೇಳೆ ನೀವು ಇನ್ನೊಂದು ಮಗದೊಂದು ಮನೆಗಾಗಿ ಎರಡನೆಯ, ಮೂರನೆಯ ಇತ್ಯಾದಿ ಗೃಹಸಾಲ ಪಡೆದಿದ್ದಲ್ಲಿ ಅದನ್ನು ಬಾಡಿಗೆಗೆ ನೀಡಿದ್ದಲ್ಲಿ ಯಾ ಕಾನೂನು ಪ್ರಕಾರ ನೀಡಿದೆಯೆಂದು ಪರಿಗಣಿಸಿದ್ದಲ್ಲಿ ಅಂತಹ ಸಾಲಗಳ ಬಡ್ಡಿಗಳ ಮೇಲೂ ಯಾವುದೇ ಮಿತಿಯಿಲ್ಲದೆ ಅದಾಯ ತೆರಿಗೆ ವಿನಾಯತಿ ಪಡೆಯಬಹುದು. ಅಂತಹ ಸಂದರ್ಭ ಮನೆಯ ವಾರ್ಷಿಕ ಮೌಲ್ಯವನ್ನು ಆದಾಯವಾಗಿ ತೋರಿಸಿ ಅದರಿಂದ ಮುನಿಸಿಪಲ್ ಟಾಕ್ಸ್… ಕಳೆದು ಆ ಬಳಿಕ ಅದರ 30% ಅನ್ನು ರಿಪೇರಿ ಇತ್ಯಾದಿ ಬಾಬ್ತು ಸ್ಟಾಂಡರ್ಡ್ ಖರ್ಚು (ನಿಜವಾದ ಖರ್ಚು ಎಷ್ಟೇ ಇದ್ದರೂ ಈ 30% ಲಭ್ಯ) ಎಂದು ಕಳೆದು ಉಳಿದ ಮೊತ್ತವನ್ನು ನಿವ್ವಳ ಆದಾಯವಾಗಿ ತೋರಿಸತಕ್ಕದ್ದು. ವಾರ್ಷಿಕ ಮೌಲ್ಯ ಎಂದರೆ ಮುನಿಸಿಪಾಲಿಟಿ ಲೆಕ್ಕದ ಮೌಲ್ಯ ಮತ್ತು ಆ ಪರಿಸರದ ನ್ಯಾಯಯುತ ಬಾಡಿಗೆ ಮತ್ತು ನಿಜವಾಗಿ ಪಡೆದ ಬಾಡಿಗೆ – ಇವುಗಳಲ್ಲಿ ಯಾವುದು ಹೆಚ್ಚೋ ಅದು) ಅಲ್ಲದೆ 2016-17 ವಿತ್ತ ವರ್ಷಕ್ಕೆ ಇಲ್ಲಿ ರೂ 2 ಲಕ್ಷದ ವಾರ್ಷಿಕ ಬಡ್ಡಿಯ ಮಿತಿಯೂ ಇರುವುದಿಲ್ಲ. (ಆ ಬಳಿಕ ಇದು ಬದಲಾಗಿ ಈಗ ರೂ 2 ಲಕ್ಷದ ಮಿತಿ ಇದೆ). ಆದರೆ ಸ್ವಂತವಾಸವಲ್ಲದ ಇಂತಹ ಮನೆಗಳಿಗೆ ಅಸಲಿನ ಮರುಪಾವತಿಯ ಕರಲಾಭ ದೊರೆಯುವುದಿಲ್ಲ. ಆ ಸೌಲಭ್ಯ ಸ್ವಂತವಾಸದ ಮನೆಗಳಿಗೆ ಮಾತ್ರ ಲಭ್ಯ.
ಜಯದೇವ ಪ್ರಸಾದ ಮೊಳೆಯಾರ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.