ಗೃಹ ಸಾಲದ ಮೇಲೆ ಕರ ವಿನಾಯಿತಿ
ಕಾಸು - ಕುಡಿಕೆ
Team Udayavani, Feb 24, 2020, 6:55 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಮನೆ ಕಟ್ಟುವುದು ಬಹುತೇಕ ಮಧ್ಯಮ ವರ್ಗದವರ ದೊಡ್ಡ ಕನಸು. ಈ ಖರ್ಚಿನ ಯುಗದಲ್ಲಿ ಸಾಲವಿಲ್ಲದೆ ಮನೆ ಕಟ್ಟಲು ಸಾಧ್ಯವಿಲ್ಲ. ಬ್ಯಾಂಕ್‌ಗಳಿಂದ ಪಡೆಯಬಹುದಾದ ಗೃಹ ಸಾಲಗಳಲ್ಲಿ ಒಂದಿಷ್ಟು ತೆರಿಗೆ ವಿನಾಯ್ತಿ ಸೌಲಭ್ಯಗಳಿವೆ. ಇವು ಸಾಲದ ಮೇಲೆ ಮರುಪಾವತಿಸಬಹುದಾದ ಬಡ್ಡಿ ಹಾಗೂ ಮರು ಪಾವತಿಸಿದ ಅಸಲು ಎಂಬ ಎರಡು ವಿಭಾಗಗಳಡಿ ಲಭ್ಯವಿವೆ. ಆ ಎರಡೂ ವಿಭಾಗಗಳ ಬಗೆಗಿನ ವಿವರಣಾತ್ಮಕ ಮಾಹಿತಿ ಇಲ್ಲಿದೆ.
ಸಾಲ ಮಾಡಿ ಮನೆಕಟ್ಟುವುದರಲ್ಲಿ ಬಹಳಷ್ಟು ಕರ ಸಂಬಂಧಿ ಲಾಭಗಳಿವೆ. ಅವುಗಳನ್ನು ಸಾಲದ ಮೇಲೆ ಮರು ಪಾವತಿಸಿದ ಬಡ್ಡಿ ಮತ್ತು ಮರು ಪಾವತಿಸಿದ ಅಸಲು ಎಂಬ ಎರಡು ಮುಖ್ಯ ವಿಭಾಗಗಳಾಗಿ ನೋಡಬಹುದು:
1. ಮರುಪಾವತಿಸಿದ ಬಡ್ಡಿ
ಮರು ಪಾವತಿಸಿದ ಗೃಹ ಸಾಲದ ಬಡ್ಡಿಯ ಮೇಲೆ ಕರ ವಿನಾಯಿತಿ ಇದೆ. ಅದನ್ನು ಸ್ವಂತ ವಾಸದ್ದು ಮತ್ತು ಬಾಡಿಗೆಗೆ ನೀಡಿದ್ದು ಎಂಬ ಎರಡು ಭಾಗಗಳಲ್ಲಿ ನೋಡಬಹುದು.
ಅ. ಸ್ವಂತ ವಾಸಕ್ಕೆ ಗೃಹಸಾಲ
ಆದಾಯ ತೆರಿಗೆಯ ಕಾನೂನಿನನ್ವಯ ಸ್ವಂತ ವಾಸದ ಒಂದು ಮನೆ ಖರೀದಿ, ನಿರ್ಮಾಣ, ದುರಸ್ತಿ , ನವೀಕರಣ ಅಥವಾ ಪುನರ್ನಿರ್ಮಾಣಕ್ಕಾಗಿ ಗೃಹ ಸಾಲ ಪಡೆದುಕೊಂಡಿದ್ದಲ್ಲಿ ಅದರ ಮೇಲಿನ ಬಡ್ಡಿಯ ಮೇಲೆ ಕರ ವಿನಾಯತಿ ಪಡಕೊಳ್ಳಬಹುದು.
ಈ ವಿನಾಯತಿ ಎಪ್ರಿಲ್ 1, 1999ರ ಮೊದಲು ಮಾಡಿಕೊಂಡ ಮನೆಗಳಿಗೆ ರೂ. 30,000 ಹಾಗೂ ಆ ಬಳಿಕ ಖರೀದಿಸಿದ ಅಥವಾ ನಿರ್ಮಿಸಿದ ಮನೆಗಳ ಮೇಲೆ ರೂ. 1,50,000 ಇದ್ದಿದ್ದು ವಿತ್ತ ವರ್ಷ 2015-16ರಿಂದ ಅನ್ವಯವಾಗುವಂತೆ ಅದನ್ನು ರೂ. 2,00,000ಕ್ಕೆ ಏರಿಸಲಾಗಿದೆ. ರಿಪೇರಿ, ನವೀಕರಣ ಹಾಗೂ ಪುನರ್ನಿರ್ಮಾಣದ ಮನೆಗಳಿಗೆ ಈ ಲಾಭ ಈಗಲೂ ರೂ. 30,000 ಮಾತ್ರವೇ ಇದೆ.
ಅಂದರೆ ಸ್ವಂತ ವಾಸದ ಮನೆಗೆ ಬಾಡಿಗೆ ಆದಾಯ ಶೂನ್ಯವಾಗಿದ್ದು, ಗೃಹ ಸಾಲದ ಮೇಲೆ ಕೊಟ್ಟ ಬಡ್ಡಿಯನ್ನು ರೂ. 2,00,000 ದ ಮಿತಿಯೊಳಗೆ ಒಂದು ವೆಚ್ಚವಾಗಿ ತೋರಿಸಬಹುದು. ಇದು ಸ್ವಂತ ವಾಸದ ಮನೆಗಳಿಗೆ ಮಾತ್ರ ಅನ್ವಯ. ಈ ವಿತ್ತ ವರ್ಷದಿಂದ (2019-20) ಆರಂಭಗೊಂಡಂತೆ ನಿಮ್ಮ 2 ಮನೆಗಳನ್ನು ಸ್ವಂತ ವಾಸದ ಮನೆ ಎಂದು ತೋರಿಸಬಹುದಾಗಿದೆ. (ಮೊದಲು ಒಂದೇ ಮನೆ ಇತ್ತು) ಹಾಗೂ, ಇಲ್ಲಿ ಗೃಹಸಾಲ ಪಡೆದು 5 ವರ್ಷಗಳೊಳಗಾಗಿ ಗೃಹ ನಿರ್ಮಾಣ ಪೂರ್ಣಗೊಂಡು ವಾಸ್ತವ್ಯ ಹೂಡಿರಬೇಕು. ಆದರೆ ಉದ್ಯೋಗ/ಬಿಸಿನೆಸ್ ನಿಮಿತ್ತ ಪರವೂರಿನಲ್ಲಿ ಇರಬೇಕಾದ ಸಂದರ್ಭದಲ್ಲಿ ವಾಸವಿಲ್ಲದಿದ್ದರೂ ಸ್ವಂತ ವಾಸವೆಂದು ಪರಿಗಣಿಸಬಹುದು. ಈ ವೆಚ್ಚವನ್ನು ನಿಮ್ಮ ಸಂಬಳ, ಬಿಸಿನೆಸ್, ಮತ್ತಿತರ ಇತರ ಆದಾಯಗಳಿಂದ ಕಳೆಯಲ್ಪಟ್ಟು ನಿಮ್ಮ ಆದಾಯದ ಸ್ಲಾಬ್ ಪ್ರಕಾರ ಒಟ್ಟು ಆದಾಯದ ಮೇಲೆ ಕರ ರಿಯಾಯಿತಿಗೆ ಎಡೆಮಾಡಿ ಕೊಡುತ್ತದೆ.
ಆ. ಬಾಡಿಗೆ ಮನೆಯ ಗೃಹ ಸಾಲ
ಒಂದಕ್ಕಿಂತ ಜಾಸ್ತಿ ಮನೆ ಇರುವವರು ಅದರಲ್ಲಿ ಯಾವುದಾದರೂ ಎರಡನ್ನು (ಅವರ ಆಯ್ಕೆಯಂತೆ) ಮಾತ್ರ ಶೂನ್ಯ ಆದಾಯದ ಸ್ವಂತ ವಾಸವಿದ್ದಾರೆಂದು ಗುರುತಿಸಬಹುದಾಗಿದೆ. ಉಳಿದ ಮನೆಗಳೆಲ್ಲವೂ ಬಾಡಿಗೆಯ ಎಂದು ಗುರುತಿಸಿ ಅವುಗಳಿಂದ ಬಾಡಿಗೆ ಬಂದಿದೆಯೆಂದೇ ಪರಿಗಣಿಸಿ (ಖಾಲಿ ಬಿದ್ದಿದ್ದರೂ ಸಹ) ಅದರ ಮೇಲೆ ಆದಾಯ ತೆರಿಗೆ ಕಟ್ಟತಕ್ಕದ್ದು.
ಒಂದು ವೇಳೆ ನೀವು ಮತ್ತೂಂದು, ಮಗದೊಂದು ಮನೆಗಾಗಿ ಗೃಹಸಾಲ ಪಡೆದಿದ್ದಲ್ಲಿ ಅದನ್ನು ಬಾಡಿಗೆಗೆ ನೀಡಿದ್ದಲ್ಲಿ ಯಾ ಕಾನೂನು ಪ್ರಕಾರ ನೀಡಿದೆಯೆಂದು ಪರಿಗಣಿಸಿದ್ದಲ್ಲಿ ಅಂತಹ ಸಾಲಗಳ ಬಡ್ಡಿಗಳ ಮೇಲೂ ಪ್ರತ್ಯೇಕವಾದ ಇನ್ನೊಂದು ರೂ. 2 ಲಕ್ಷದ ಅದಾಯ ತೆರಿಗೆ ವಿನಾಯತಿ ಪಡೆಯಬಹುದು.
(ಅಂದರೆ 2+2=4 ಲಕ್ಷದ ಒಟ್ಟಾರೆ ಮಿತಿ). ಅಂತಹ ಸಂದರ್ಭದಲ್ಲಿ ಮನೆಯ ವಾರ್ಷಿಕ ಮೌಲ್ಯವನ್ನು ಆದಾಯವಾಗಿ ತೋರಿಸಿ ಅದರಿಂದ ಮುನಿಸಿಪಲ್ ಟ್ಯಾಕ್ಸ್ ಕಳೆದು ಆ ಬಳಿಕ ಅದರ ಶೇ.30 ಅನ್ನು ದುರಸ್ತಿ ಇತ್ಯಾದಿ ಬಾಬ್ತು ಸ್ಟಾಂಡರ್ಡ್ ಖರ್ಚು (ನಿಜವಾದ ಖರ್ಚು ಎಷ್ಟೇ ಇದ್ದರೂ ಈ ಶೇ. 30 ಲಭ್ಯ) ಎಂದು ಕಳೆದು ಉಳಿದ ಮೊತ್ತವನ್ನು ನಿವ್ವಳ ಆದಾಯವಾಗಿ ತೋರಿಸತಕ್ಕದ್ದು. (ವಾರ್ಷಿಕ ಮೌಲ್ಯ ಎಂದರೆ ಮುನಿಸಿಪಾಲಿಟಿ ಲೆಕ್ಕದ ಮೌಲ್ಯ ಮತ್ತು ಆ ಪರಿಸರದ ನ್ಯಾಯಯುತ ಬಾಡಿಗೆ ಮತ್ತು ನಿಜವಾಗಿ ಪಡೆದ ಬಾಡಿಗೆ – ಇವುಗಳಲ್ಲಿ ಯಾವುದು ಹೆಚ್ಚೋ ಅದು).
ಹೆಚ್ಚುವರಿ ಲಾಭ (ಸೆಕ್ಷನ್ 80ಇಇ)
ವಿತ್ತೀಯ ವರ್ಷ 2013-14 ಹಾಗೂ 2014-15 ಬೇರೆಯೇ ರೀತಿಯಲ್ಲಿ ಚಾಲ್ತಿಯಲ್ಲಿದ್ದ ಈ ಕಾನೂನು 2015-16ರಲ್ಲಿ ಇರಲಿಲ್ಲ. 2016 ಬಜೆಟ್ಟಿನಲ್ಲಿ ವಿತ್ತ ವರ್ಷಕ್ಕೆ (2016-17) ಅನ್ವಯವಾಗುವಂತೆ ಈ ಸೆಕ್ಷನ್ನನ್ನು ಪುನಃ ತರಲಾಯಿತು. ಇದರ ಪ್ರಕಾರ ಬಡ್ಡಿ ಪಾವತಿಯ ಮೇಲೆ ಸಿಗುವ ವಿನಾಯಿತಿಯ ಮಿತಿಯನ್ನು ಮೇಲ್ಕಾಣಿಸಿದ ರೂ. 2 ಲಕ್ಷ ಅಲ್ಲದೆ, ಹೆಚ್ಚುವರಿ ರೂ. 50,000ಕ್ಕೆ ನೀಡಲಾಯಿತು. ಆದರೆ ಇದು ಎಲ್ಲಾ ಗೃಹ ಸಾಲಗಳಿಗೂ ಅನ್ವಯಿಸುವುದಿಲ್ಲ.
ಷರತ್ತುಗಳು: 1. ಇದು ನಿಮ್ಮ ಮೊತ್ತ ಮೊದಲ ಮನೆಯಾಗಿರಬೇಕು
2. ಮನೆಯ ಒಟ್ಟು ಬೆಲೆ ರೂ. 50 ಲಕ್ಷದ ಒಳಗಿರಬೇಕು
3. ಗೃಹ ಸಾಲದ ಮೊತ್ತ ರೂ. 35 ಲಕ್ಷದ ಒಳಗಿರಬೇಕು.
4. ಮನೆ ಪೂರ್ತಿ ನಿರ್ಮಾಣವಾಗಿ ನಿಮ್ಮ ಕೈಗೆ (ಪೊಸೆಷನ್) ಬಂದಿರಬೇಕು.
5. ಗೃಹಸಾಲ ಒಂದು ವಿತ್ತೀಯ ಸಂಸ್ಥೆಯಿಂದ ಮಾತ್ರವೇ ತೆಗೆದುಕೊಂಡದ್ದಾಗಿರಬೇಕು.
6. ಸಾಲವನ್ನು 2016-17 ವಿತ್ತೀಯ ವರ್ಷದಲ್ಲಿ ಪಡೆದಿರಬೇಕು. ಅಲ್ಲದೆ ಈ ಕರಲಾಭಕ್ಕೆ ಸ್ವಂತ ವಾಸ/ಬಾಡಿಗೆ ಎಂಬ ತಾರತಮ್ಯ ಇಲ್ಲ. ಈ ಸೆಕ್ಷನ್ನನ್ನು ಯಥಾವತ್ತಾಗಿ 2018ರ ಬಜೆಟ್ಟಿನಲ್ಲಿ ವಿತ್ತ ವರ್ಷ 2018-19ಕ್ಕೆ ಅನ್ವಯಿಸುವಂತೆ ರಿನ್ಯೂ ಮಾಡಲಾಯಿತು.
ಹಾಗಾಗಿ 2018-19ರಲ್ಲಿ ಪಡೆದ ಸಾಲಗಳಿಗೂ ಈ ಸೌಲಭ್ಯ ಲಭ್ಯವಾಯಿತು. ಆದರೆ 2019ರ ಬಜೆಟ್ಟಿನಲ್ಲಿ ಈ ಸೆಕ್ಷನ್ ಅನ್ನು ಕೈ ಬಿಡಲಾಯಿತು. ಆದರೆ ಈ ಸೆಕ್ಷನ್ನಿನಲ್ಲಿ ಒಮ್ಮೆ ಪಡಕೊಂಡ ರಿಯಾಯಿತಿ ಸಾಲದ ಕೊನೆಯವರೆಗೂ ಪಡೆದುಕೊಳ್ಳಬಹುದು. ಸೆಕ್ಷನ್ ಹೋದರೂ ಆರಂಭಗೊಂಡ ರಿಯಾಯಿತಿ ಮುಂದುವರಿಯುತ್ತದೆ.
80ಇಇಎ
2019 ಬಜೆಟ್ಟಿನಲ್ಲಿ ಮೊದಲು ಕೈಬಿಟ್ಟಿದ್ದ 80ಇಇ ಬದಲಾಗಿ ಹೊಸದಾದ 80ಇಇಎ ತರಲಾಯಿತು. ಇದರಲ್ಲಿ ರೂ. 50,000 ಬದಲಾಗಿ ಹೆಚ್ಚುವರಿ ರೂ. 1.5 ಲಕ್ಷದವರೆಗೆ ಗೃಹಸಾಲದ ಬಡ್ಡಿಯ ಮೇಲೆ ವಿನಾಯಿತಿ ನೀಡಲಾಯಿತು. ಹಿಂದಿನಂತೆಯೇ ಇದು ಪ್ರಪ್ರಥಮ ಮನೆಗೆ ಮಾತ್ರ ಅನ್ವಯ. ಮನೆಯ ಮೌಲ್ಯ ರೂ. 45 ಲಕ್ಷವನ್ನು ದಾಟಬಾರದು ಹಾಗೂ ಸಾಲವನ್ನು 2019-20ರಲ್ಲಿ ಪಡೆದಿರಬೇಕು. ಅಲ್ಲದೆ 80ಇಇ ಪಡೆದವರಿಗೆ 80ಇಇಎ ಸೌಲಭ್ಯ ಸಿಗಲಾರದು.
ಜಂಟಿ ಸಾಲ
ಇದಕ್ಕಾಗಿ ಸ್ವಂತ ಕರಾರ್ಹ ಆದಾಯವಿರುವ ಪತಿ-ಪತ್ನಿಯರು ಜಂಟಿ ಹೆಸರಿನಲ್ಲಿ ಸಾಲ ಮಾಡಿದರೆ ಇಬ್ಬರಿಗೂ ಎರಡೆರಡು ಲಕ್ಷ, ಒಟ್ಟಿಗೆ ನಾಲ್ಕು ಲಕ್ಷದಷ್ಟು ಬಡ್ಡಿ ಪಾವತಿಯ ಮೇಲೆ ಕರ ವಿನಾಯತಿಯನ್ನು ಅವರವರ ವೈಯಕ್ತಿಕ ಆದಾಯದಲ್ಲಿ ಪಡಕೊಳ್ಳಬಹುದು. ಆದರೆ ಈ ರೀತಿ ಜಂಟಿ ಸಾಲದ ಕರಲಾಭ ಪಡೆಯ ಬೇಕಾದರೆ ಮೊತ್ತ ಮೊದಲು ಆ ಮನೆಯೂ ಜಂಟಿ ಹೆಸರಿನಲ್ಲಿ ಇರಬೇಕಾದುದು ಅತ್ಯಗತ್ಯ.
ಅದರಲ್ಲೂ ಇಬ್ಬರ ಪಾಲು 50-50 (ಅಥವಾ ಸಂದರ್ಭಾನುಸಾರ ಬೇರಾವುದೇ ಅನುಪಾತ) ಎಂಬುದನ್ನು ಸರಿಯಾಗಿ ಟೈಟಲ್ ಡೀಡ್‌ನಲ್ಲಿ ದಾಖಲಿಸಿಕೊಳ್ಳಬೇಕು. ಆಮೇಲೆ ಬ್ಯಾಂಕ್ ಸಾಲವನ್ನು ಮತ್ತದರ ಮಾಸಿಕ ಪಾವತಿಯನ್ನೂ (ಇಎಮ್‌ಐ) ಕೂಡಾ ಅದೇ ಅನುಪಾತದಲ್ಲಿ ಹಂಚಿಕೊಳ್ಳಬೇಕು. ಇವೆಲ್ಲವನ್ನೂ ಬ್ಯಾಂಕಿನ ಅಧಿಕಾರಿಗಳೊಂದಿಗೂ ಚರ್ಚಿಸಬೇಕು. ಹಾಗೆ ಸರಿಯಾದ ಕಾಗದ ಪತ್ರಗಳನ್ನು ಅನುಸರಿಸಿದರೇನೇ ಇಬ್ಬರಿಗೂ ಅವರವರ ಪಾಲಿನ ಬಡ್ಡಿಯ ಮೇಲೆ ಕರವಿನಾಯತಿ ಲಬಿಸೀತು.
ಪ್ರಿ-ಇಎಮ್
ಐ- ಅವಷ್ಟು ವಾರ್ಷಿಕ ಬಡ್ಡಿಯ ಮಾತಾಯಿತು. ಬಡ್ಡಿಪಾವತಿಯ ಮೇಲಿನ ಈ ಕರಸೌಲಭ್ಯ ಮನೆ ಸಂಪೂರ್ಣವಾಗಿ ವಾಸ್ತವ್ಯ ಪತ್ರ ಪಡೆದು ಬ್ಯಾಂಕಿನಲ್ಲಿ ಇಎಮ್ ಐ ಆರಂಭವಾದ ಬಳಿಕವೇ ದೊರೆಯುತ್ತದೆ. ಆದರೆ ಮನೆ ಕಟ್ಟುತ್ತಿರುವಾಗಲೂ ಬ್ಯಾಂಕು ತಾನು ನೀಡಿದ ಸಾಲದ ಮೇಲೆ ಬಡ್ಡಿ ಹೇರುತ್ತದಲ್ಲವೇ? ಆಗ ಇಎಮ್- ಐ ಇರುವುದಿಲ್ಲ. ತಾತ್ಕಾಲಿಕ ಮಾಸಿಕ ಬಡ್ಡಿ ಪಾವತಿಸಬೇಕಾಗಿ ಬರುತ್ತದೆ.
ಇಂತಹ ಇಎಮ್ -ಐ-ಪೂರ್ವ ಬಡ್ಡಿ (ಪ್ರಿ-ಇಎಮ್-ಐ) ಯ ಮೇಲೆಯೂ ಕರವಿನಾಯತಿ ಇದೆ. ಅಂತಹ ಪ್ರಿ-ಇಎಮ್-ಐ ಮೊತ್ತವನ್ನು ಗೃಹ ನಿರ್ಮಾಣವಾಗಿ ಬಡ್ಡಿಕಟ್ಟಲು ಆರಂಭಿಸಿದ ಮೇಲೆ 5 ಸಮಾನ ವಾರ್ಷಿಕ ಕಂತುಗಳಾಗಿ (ಒಟ್ಟು ಬಾಕಿಯ ಶೇ. 20 ಪ್ರತಿ ವರ್ಷ) ಕರ ವಿನಾಯತಿಯ ಲೆಕ್ಕಕ್ಕೆ ತೆಗೆದುಕೊಳ್ಳಬಹುದು. ಆದರೆ ಇದು ಮೇಲೆ ಹೇಳಿದ ರೂ. 2,00,000ದ ಮಿತಿಯೊಳಗೇ ಬರುತ್ತದೆ. ಅಷ್ಟರಮಟ್ಟಿಗೆ ಇಎಮ್- ಐ ಬಡ್ಡಿ ಇಲ್ಲದವರಿಗೆ ಮಾತ್ರ ಇದು 5 ವರ್ಷಗಳ ಮಟ್ಟಿಗೆ ಅನುಕೂಲವಾದೀತು.
2. ಮರು ಪಾವತಿಸಿದ ಅಸಲು
ಬಡ್ಡಿಯ ಮೇಲಲ್ಲದೆ ಸಾಲ ಪಾವತಿಯ ಅಸಲು (ಪ್ರಿನ್ಸಿಪಲ…) ಅಥವಾ ಅದರ ಭಾಗಶಃ ಮರು ಪಾವತಿಯ ಮೇಲೂ ಸೆಕ್ಷನ್ 80ಸಿ ಅನ್ವಯ ರೂ. 1.5 ಲಕ್ಷದವರೆಗೆ ವಿನಾಯತಿ ಇದೆ. ಆದರಿದು ಸ್ವಂತ ವಾಸದ ಮನೆಗೆ ಮತ್ತು ಬ್ಯಾಂಕುಗಳಿಂದ ಪಡೆದ ಸಾಲಕ್ಕೆ ಮಾತ್ರ ಅನ್ವಯ. (ಬಡ್ಡಿಯ ಮೇಲಿನ ಕರ ಲಾಭಕ್ಕೆ ಗೃಹಸಾಲವನ್ನು ಯಾರಿಂದಲೂ ಪಡೆದಿರಬಹುದು).
ಇದನ್ನೂ ಕೂಡಾ ಜಂಟಿ ಸಾಲದ ದಂಪತಿಗಳು ಮೇಲೆ ಹೇಳಿದಂತೆ ಗೃಹ ಮಾಲಕತ್ವ ಮತ್ತು ಸಾಲದಲ್ಲಿ ತಮ್ಮ ಪಾಲು ಹೊಂದಿಕೊಂಡು ಹಂಚಿಕೊಳ್ಳಬಹುದು. ಆದರೆ ಬಡ್ಡಿಯ ಮರು ಪಾವತಿಯ ಪ್ರಿ-ಇಎಂಐ ಅನ್ನು 5 ಭಾಗಗಳಾಗಿ ಮಾಡಿ ಲಾಭ ಪಡೆಯುವ ಸೌಲಭ್ಯ ಅಸಲಿನ ಮರು ಪಾವತಿಗೆ ಇರುವುದಿಲ್ಲ.
– ಜಯದೇವ ಪ್ರಸಾದ ಮೊಳೆಯಾರ ; [email protected]
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.