ಯುಲಿಪ್ ಎಂಬ ಭಾರೀ ಮಾರಾಟವಾಗುವ ಲಾಲಿಪಾಪ್
Team Udayavani, Sep 2, 2019, 5:58 AM IST
ಈಗ ಅತ್ಯಂತ ಅಧಿಕವಾಗಿ ಮಾರಾಟವಾಗುವ ವಿತ್ತೀಯ ಉತ್ಪನ್ನ ಅಂದರೆ ಅದು ಜೀವ ವಿಮೆ; ಅದರಲ್ಲೂ ಯುಲಿಪ್! ಕಳೆದ ಕೆಲ ವರ್ಷಗಳಿಂದ ಯಾರಾದರೂ ಏಜೆಂಟರು ನಿಮ್ಮನ್ನು ಸಂಪರ್ಕಿಸಿ ನಿಮಗೆ ಒಂದು ಉತ್ತಮ ವಿತ್ತೀಯ ಪ್ಲಾನ್ ಅನ್ನು ಮಾರಾಟ ಮಾಡುವ ಪ್ರಯತ್ನಕ್ಕೆ ನಾಂದಿ ಹಾಡಿದರೆ ಅದು ಯುಲಿಪ್ ಎಂದು ಕಣ್ಣು ಮುಚ್ಚಿ ಹೇಳಬಹುದು.
ಸಾಧಾರಣವಾಗಿ ನನಗೆ ಓದುಗರಿಂದ ಫೋನ್ ಅಥವಾ ಇ-ಮೇಲ್ ಬರುತ್ತಲೇ ಇರುತ್ತದೆ. ಅವರ ಪ್ರಶ್ನೆಗಳ ಧಾಟಿ ಬಹುತೇಕ ಹೀಗಿರುತ್ತದೆ ಸಾರ್, ಇಲ್ಲಿ ನನ್ನ ಸ್ನೇಹಿತರೊಬ್ಬರು ಒಂದು ಪ್ಲಾನ್ ಕೊಳ್ಳಲು ಬಹಳ ಒತ್ತಾಯ ಮಾಡುತ್ತಿದ್ದಾರೆ. ಭಾರೀ ಒಳ್ಳೆದುಂಟಂತೆ. ವರ್ಷಕ್ಕೆ ಹತ್ತು ಸಾವಿರ ಹಾಕಿದ್ರೆ ಹತ್ತು ವರ್ಷಗಳಲ್ಲಿ ಅದೆಷ್ಟೋ ಲಕ್ಷ ಆಗ್ತದಂತೆ. ಹೇಗೆ ತೆಕ್ಕೊÙ್ಬೌದಾ?
ಪ್ಲಾನ್ ಹೆಸರು ಅವರಿಗೆ ಗೊತ್ತಿರುವುದಿಲ್ಲ. ಕಂಪೆನಿಯ ಹೆಸರು ಅಸ್ಪಷ್ಟವಾಗಿ ನೆನಪಿರುತ್ತದೆ. ಸ್ನೇಹಿತನ ಹೆಸರು ನೆನಪಿರುವುದೇ ನನ್ನ ಪುಣ್ಯ! ಇನ್ನು ಪ್ಲಾನ್‌ನ ಇತರ ವಿವರಗಳ ಬಗ್ಗೆ ಅವರಿಗೆ ಗಂಧಗಾಳಿ ಇರುವುದಿಲ್ಲ. ಯಾವುದೇ ವಿವರಗಳು ಇಲ್ಲದೆ ಅಭಿಪ್ರಾಯ ತಿಳಿಸುವುದು ಅಸಾಧ್ಯ. ಹೋಗಲಿ ಪ್ಲಾನ್ ಹೆಸರು ತಿಳಿದು ನನಗೆ ತಿಳಿಸಿದರೆ ವಿವರಗಳನ್ನು ನಾನೇ ಗೂಗಲ್ ಮಾಡಿ ತಿಳಿದುಕೊಂಡು ಆಮೇಲೆ ನಿಮಗೆ ನನ್ನ ಅಭಿಪ್ರಾಯ ತಿಳಿಸುತ್ತೇನೆ ಎನ್ನುವುದು ನನ್ನ ಸಾಮಾನ್ಯ ಉತ್ತರ. ಆದರೆ ಇತ್ತೀಚೆಗಿನ ಕೆಲ ವರ್ಷಗಳಿಂದ ನಾನು ನೋಡುತ್ತಲೇ ಇದ್ದೇನೆ – ನೂರಕ್ಕೆ ನೂರು ಬಾರಿ ಅಂತಹ ಏಜೆಂಟ್ ದ್ವಾರಾ ಮಾರಾಟವಾಗುವ ಏಕೈಕ ವಿತ್ತೀಯ ಪ್ಲಾನ್ ಎಂದರೆ ಅದು ಯುಲಿಪ್!
ಇದೊಂದು ವಿಚಿತ್ರವಾದರೂ ಸತ್ಯ! ದೇಶದಲ್ಲಿ ಹಲವಾರು ಉತ್ತಮ ಹೂಡಿಕೆಗಳಿವೆ. ಪೋಸ್ಟಾಫೀಸಿನ ಖಚಿತ ಆದಾಯದ ಆರ್‌ಡಿ, ಟಿಡಿ, ಎನ್‌ಎಸ್‌ಸಿ, ಪಿಪಿಎಫ್, ಸುಕನ್ಯಾ ಸಮೃದ್ಧಿ, ಸೀನಿಯರ್ ಸಿಟಿಜನ್ ಇತ್ಯಾದಿ ಹಲವಾರು ಸ್ಕೀಮುಗಳಿವೆ. ಬ್ಯಾಂಕಿನಲ್ಲಿ ಎಫ್ಡಿಗಳಿವೆ, ರಾಷ್ಟ್ರೀಯ ಪಿಂಚಣಿ ಯೋಜನೆ ಇದೆ, ಉತ್ತಮ ಮ್ಯೂಚುವಲ್ ಫಂಡುಗಳಿವೆ, ವಿಮೆಯಲ್ಲಿಯೇ ಟರ್ಮ್ ಪ್ಲಾನುಗಳಿವೆ, ಎಂಡೊಮೆಂಟ್ ಪಾಲಿಸಿಗಳಿವೆ, ಆದರೆ ಅವೆಲ್ಲವನ್ನೂ ಬಿಟ್ಟು ಕೇವಲ ಯುಲಿಪ್ಪುಗಳು ಮಾತ್ರ ಮಾರುಕಟ್ಟೆಯಲ್ಲಿ ಬಾರೀ ಒತ್ತಡದ ಮೂಲಕ ಮಾರಾಟವಾಗುತ್ತಿವೆ. ಬೇರಾವ ವಿತ್ತೀಯ ಯೋಜನೆಗಳನ್ನು ಮಾರಾಟ ಮಾಡುತ್ತಾ ತಿರುಗುವ ಏಜೆಂಟರು ನಮಗೆ ಯಾರೊಬ್ಬನೂ ಇವತ್ತು ಕಾಣ ಸಿಗುವುದಿಲ್ಲ.
ಹಾಗಾಗಿ ಯುಲಿಪ್ಪಿನ ಬಗ್ಗೆ ದೀರ್ಘವಾಗಿ ವಿಶ್ಲೇಷಣಾತ್ಮಕ ಲೇಖನ ಮಾಲಿಕೆ ಕುಟ್ಟುವುದು ಇವತ್ತಿನ ತಾರೀಕಿನಲ್ಲಿ ಅತಿ ಮುಖ್ಯ ಅಗತ್ಯವಾಗಿದೆ.
ಏನಿದು ಯುಲಿಪ್?
ಯುಲಿಪ್ ಎಂದರೆ ಯುನಿಟ್ ಲಿಂಕ್ಡ್ ಇನ್ಶೂರೆನ್ಸ್ ಪ್ಲಾನ್ – ಮಾರುಕಟ್ಟೆ ಆಧಾರಿತ ವಿಮಾ ಪಾಲಿಸಿ. ಸರಳವಾಗಿ ಹೇಳುವುದಾದರೆ ಯುಲಿಪ್ = ವಿಮಾ ಪ್ಲಾನ್ + ಮ್ಯೂಚುವಲ್ ಫಂಡ್. ಇದು ಮಾರುಕಟ್ಟೆಯಲ್ಲಿ ದುಡ್ಡು ಹೂಡುವ ಒಂದು ಸ್ಕೀಂ. ನೀವು ಕಟ್ಟಿದ ದುಡ್ಡಿನ ಅಲ್ಪ ಅಂಶದಲ್ಲಿ ಇನ್ಶೂರೆನ್ಸ್ ಖರೀದಿಸಿ ಉಳಿದ ಭಾಗವನ್ನು ಮಾರುಕಟ್ಟೆಯಲ್ಲಿ (ಈಕ್ವಿಟಿ ಅಥವಾ ಡೆಟ್) ಹೂಡುತ್ತಾರೆ. ಆದ್ದರಿಂದ ಮಾರುಕಟ್ಟೆಯ ಎಲ್ಲಾ ರಿಸ್ಕಾಗಳೂ ಇದರ ಮೇಲೆ ಲಾಗೂ ಆಗುತ್ತವೆ. ಇದರಲ್ಲಿ ಯಾವುದೇ ಗ್ಯಾರಂಟಿ ಮತ್ತು ಭದ್ರ ಪ್ರತಿಫಲ ನಿರೀಕ್ಷಿಸುವುದು ಅಸಾಧ್ಯ. ಏನಿದ್ದರೂ ಮಾರುಕಟ್ಟೆ ಆಧಾರಿತ ರಿಟರ್ನ್ ಮಾತ್ರ ಸಾಧ್ಯ.
ಯುಲಿಪ್ ಆರಂಭ
ಯುಮಿಟ್-64 ಎಂಬ ಹೆಸರಿನ ಯು.ಟಿ.ಐ ಪ್ರಾಯೋಜಿತ ಯೋಜನೆ ನಿಮ್ಮಲ್ಲಿ ಹಲವರಿಗೆ ನೆನಪಿರಬಹುದು. ಗುರುಗುಂಟಿರಾಯರ ಕಾಲದಿಂದಲೇ ಮಾರಾಟವಾಗುತ್ತಾ ಬಂದಿದ್ದ ಭಾರತದ ಪ್ರಥಮ ಯುಲಿಪ್ ಯೋಜನೆ ಅದು. ಆದರೆ ಮಾರಕಟ್ಟೆಯ ಹೊಡೆತದಿಂದ ಅದು ಸಂಪೂರ್ಣವಾಗಿ ದಿವಾಳಿ ಎದ್ದು ಹೋಗಿತ್ತು. ಆಮೇಲೆ, ಸರಕಾರ ಮಧ್ಯೆ ಪ್ರವೇಶಿಸಿ ಹೂಡಿಕೆದಾರರಿಗೆ ಒಂದಿಷ್ಟು ಪರಿಹಾರ ನೀಡಿ ಅದು ಹೇಗೋ ಅದಕ್ಕೆ ಒಂದು ಗತಿ ಕಾಣಿಸಿದ್ದೂ ಆಗಿತ್ತು. ಆದರೆ ಆರ್ಥಿಕ ಸುಧಾರಣೆಯ ಬಳಿಕ ಬಹುತೇಕ ಎಲ್ಲಾ ವಿಮಾ ಕಂಪೆನಿಗಳೂ ತಮ್ಮ ಶಾಸ್ತ್ರೀಯ ವಿಮಾ ಪಾಲಿಸಿಗಳ ಹೊರತಾಗಿ ಹಲವಾರು ಯುಲಿಪ್ ಪಾಲಿಸಿಗಳನ್ನೂ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾರಂಭಿಸಿದವು.
ಎರಡು ಸಾವಿರದ ದಶಕ ಯುಲಿಪ್ ಪಾಲಿಸಿಗಳಿಗೆ ಒಂದು ಉಚ್ಚ್ರಾಯ ಘಟ್ಟ, ಒಟ್ಟಾರೆ ಶುಕ್ರದೆಶೆ. ಸರಿಯಾದ ಸರಕಾರಿ ನಿಯಂತ್ರಣವಿಲ್ಲದೆ ಅಬ್ಬರದ ಪ್ರಚಾರದೊಂದಿಗೆ ತಮ್ಮ ಪಾಲಿಸಿಗಳನ್ನು ಬೇಕಾಬಿಟ್ಟಿ ಮಾರಾಟ ಮಾಡಿ ಮಾರುಕಟ್ಟೆಯನ್ನು ಕೊಳ್ಳೆಹೊಡೆದದ್ದು ಸತ್ಯ. ಹತ್ತು ಹಲವು ಚಿತ್ರ ವಿಚಿತ್ರ ಹೆಸರುಗಳ ಅಡಿಯಲ್ಲಿ ಖರ್ಚುವೆಚ್ಚಗಳನ್ನು ಹೇರಿ ಏಜೆಂಟರಿಗೆ ಅತಿಯಾದ ಕಮಿಶನ್ ನೀಡಿ ಮಾರುಕಟ್ಟೆಯಲ್ಲಿ ಸಂಪೂರ್ಣವಾದ ಪ್ರಭುತ್ವ ಸಾಧಿಸಿ ಇತರ ಎಲ್ಲಾ ರೀತಿಯ ವಿತ್ತೀಯ ಯೋಜನೆಗಳನ್ನು ಮೂಲೆಗೆ ತಳ್ಳಿತು.
ಖರ್ಚುವೆಚ್ಚಗಳ ಮೇಲೆ, ನಡಾವಳಿಯ ಮೇಲೆ ಕಟ್ಟುನಿಟ್ಟಾದ ಸರಕಾರಿ ನಿಯಂತ್ರಣ ಇರುವ ಇತರ ಯೋಜನೆಗಳು ಯುಲಿಪ್ ಎದುರು ಸ್ಪರ್ಧಿಸಲಾರದೆ ಸರಕಾರಕ್ಕೆ ಶರಣು ಹೋದವು. ಆವಾಗಷ್ಟೇ ಸರಕಾರಿ ನಿಯಂತ್ರಣದಲ್ಲಿ ಎಂಟ್ರಿ ಲೋಡ್-ಎಕ್ಸಿಟ್ ಲೋಡ್ ಎಂಬ ರೆಕ್ಕೆಪುಕ್ಕ ಕತ್ತರಿಸಿಕೊಂಡಿದ್ದ ಮ್ಯೂಚುವಲ್ ಫಂಡ್ ಉದ್ಯಮ ಯಾವುದೇ ಮಾರುಕಟ್ಟೆ ನಿಯಂತ್ರಣವಿಲ್ಲದ ಯುಲಿಪ್‌ಗೆ ಉದ್ಯಮಕ್ಕೆ ಹೆದರಿ ನಡುಗತೊಡಗಿತು.
ಯುಲಿಪ್ ನಿಯಂತ್ರಣ
ಮ್ಯೂಚುವಲ್ ಫಂಡುಗಳೊಂದಿಗೆ ತೌಲನಿಕವಾಗಿ ನೋಡಿದರೆ ಕಾಣುತ್ತಿದ್ದಿದ್ದು ಯುಲಿಪ್‌ಗ್ಳದ್ದು ಅನ್ಯಾಯ ಎಂದೆನಿಸುವಷ್ಟರ ಮಟ್ಟಿನ ಅತಿ ದುಬಾರಿ ವೆಚ್ಚ- ಮ್ಯೂಚುವಲ್ ಫಂಡಿಗಿಂತಲೂ ಎಷ್ಟೋ ಜಾಸ್ತಿ. ಇದೊಂದೇ ಕಾರಣಕ್ಕೆ ಯುಲಿಪ್ ಸ್ಕೀಂಗಳು ಮಾರುಕಟ್ಟೆ ನಿಯಂತ್ರಕ ಸೆಬಿಯ ಕಣ್ಣು ಕೆಂಪಾಗಿಸಿದವು. ಅದಕ್ಕೇ ಎಪ್ರಿಲ್ 20, 2010ರಂದು ಸೆಬಿಯು 14 ಖಾಸಗಿ ಯುಲಿಪ್ ಕಂಪೆನಿಗಳಿಗೆ ಮಾರಾಟ ಸ್ಥಗಿತಗೊಳಿಸಿ ತನ್ನೊಡನೆ ನೋಂದಾಯಿಸಿಕೊಳ್ಳಲು ಆದೇಶ ನೀಡಿತು. ಆವಾಗ ಅವರೆಲ್ಲರೂ ನಾವು ಇನ್ಶೂರೆನ್ಸ್ ಕಂಪೆನಿಗಳು ಮಹಾಸ್ವಾಮೀ. ನಾವು ಐ.ಆರ್.ಡಿ.ಎ ಜತೆ ಯಾವಾಗಲೇ ನೋಂದಾಯಿಸಿದ್ದಾಗಿದೆ ಮಹಾಸ್ವಾಮೀ ಎಂದು ದೀನರಾಗಿ ಕೈಮುಗಿದು ನರಿನಗೆ ನಕ್ಕ ಕತೆ ನಿಮಗೆಲ್ಲಾ ಗೊತ್ತೇ ಇದೆ. ಆಗ ಇರ್ಡಾ ಅವರ ನೆರವಿಗೆ ಬಂದು ಸೆಬಿಯೊಡನೆ ಹಗ್ಗ ಜಗ್ಗಾಟಕ್ಕೆ ಇಳಿದದ್ದನ್ನು ತಾವೆಲ್ಲರೂ ಕಾಕು-20 ರಲ್ಲಿ ಓದಿ ಅನಂದಿಸಿದ್ದೀರಿ.
ತರುವಾಯ, ಈ ಬಾರಿ ಇರ್ಡಾ ಮೀಸೆಗೆ ಮಣ್ಣು ತಾಗಬಾರದೆಂಬ ಧೋರಣೆಯ ಸಮನ್ವಯಚಿತ್ತ ವಿತ್ತ ಮಂತ್ರಿಗಳು ಅಗತ್ಯವಿರುವ ಕಾನೂನು ಮಾಡಿ ಯುಲಿಪ್ ಸ್ಕೀಂಗಳು ಇರ್ಡಾ ಅಡಿಯಲ್ಲಿಯೇ ಬರುತ್ತವೆ, ಸೆಬಿಯಡಿಯಲ್ಲಿ ಬರಲಾರದು ಎಂಬ ಆದೇಶವನ್ನು ಹೊರಡಿಸಿತು. ಅಲ್ಲದೆ ಯುಲಿಪ್‌ನಲ್ಲಿರುವ ದೋಷಗಳನ್ನು ಸರಿಪಡಿಸಿಕೊಳ್ಳಲು ಕೇಳಿಕೊಂಡಿತು. ಲಾಗಾಯ್ತಿನಿಂದ ನಿದ್ದೆಯಲ್ಲಿಯೇ ಬಿದ್ದಿರುವ ಕುಂಭಕರ್ಣ ಗೋತ್ರೋತ್ಪನ್ನ ಇರ್ಡಾ ಭಾಯ್ ಈ ಬಾರಿ ಸೆಬಿಯಣ್ಣನ ಒದೆತಕ್ಕೆ ಎಚ್ಚೆತ್ತು 28-6-2010ರ ಯುಲಿಪ್ ಸುಧಾರಣಾ ಕ್ರಮವನ್ನು ಘೋಷಣೆ ಮಾಡಿತು.
2010 ರ ಸುಧಾರಣೆ
ಮೊತ್ತ ಮೊದಲನೆಯದಾಗಿ ಯುಲಿಪ್ ಒಂದು ವಿಮಾ ಯೋಜನೆ ಎಂಬುದಕ್ಕೆ ಪುಷ್ಟಿಕೊಡಲು. . .
– ಇದರಲ್ಲಿ ಒದಗಿಸುವ ವಿಮಾ ಮೊತ್ತವನ್ನು 45ರ ಕೆಳಗಿನ ವಯಸ್ಸಿನವರಿಗೆ, ಕಟ್ಟುವ ಪ್ರೀಮಿಯಂನ ಕನಿಷ್ಟ 5 ಪಾಲಿನಿಂದ ಕನಿಷ್ಟ 10 ಪಾಲಿನಷ್ಟಕ್ಕೆ ಹೆಚ್ಚಿಸಿತು. 45ರ ಮೇಲಿನ ವಯಸ್ಸಿನವರಿಗೆ ಇದನ್ನು 5 ರಿಂದ 7 ಪಾಲು.
– ಪಾಲಿಸಿಯ ಪ್ರೀಮಿಯಂ ಕಟ್ಟುವ ಕನಿಷ್ಟಾವಧಿಯನ್ನು (ಲಾಕ್‌ಇನ್) 3 ವರ್ಷಕ್ಕಿಂತ 5 ವರ್ಷಕ್ಕೆ ಹೆಚ್ಚಿಸಿತು.
– ಯಾವುದೇ ಹೆಚ್ಚುವರಿ ವಿಮೆಯಿಲ್ಲದೆ ಕೇವಲ ಹೂಡಿಕೆಯಾಗಿ ಕಟ್ಟುವ ಹಳೆಯ ‘ಟಾಪ್‌ಅಪ್’ ಪ್ರೀಮಿಯಂ ಪದ್ಧತಿಯನ್ನು ನಿಲ್ಲಿಸಲಾಯಿತು. ಪ್ರತೀ ಟಾಪ್‌ಅಪ್ ಪ್ರೀಮಿಯಂ ಮೇಲೆ – ಎಲ್ಲಾ ಸಿಂಗಲ್ ಪ್ರೀಮಿಯಂ ಪಾಲಿಸಿಗಳಿಗೂ ಅನ್ವಯವಾಗುವಂತೆಯೇ- ಕಟ್ಟುವ ಆ ಒಂದು ಪ್ರೀಮಿಯಂನ ಕನಿಷ್ಟ ಶೇ.125ದಷ್ಟು ವಿಮೆಯ ಹೆಚ್ಚುವರಿ ಕವರ್ ನೀಡಲೇ ಬೇಕು ಎಂಬ ಕಾನೂನು ಬಂದಿತು.
ಎರಡನೆಯದಾಗಿ, ವೆಚ್ಚಗಳಿಗೆ ಒಟ್ಟಾರೆ ಮಿತಿಯನ್ನು ಹೇರಲು…
– 10 ವರ್ಷಾವಧಿಯ ಮೇಲಿನ ಯುಲಿಪ್ ಪಾಲಿಸಿಗಳ ಮೇಲಿನ ಎಲ್ಲಾ ವೆಚ್ಚಗಳು ಒಟ್ಟು ಶೇ.3 ಮಿತಿಯೊಳಗೆ ಮತ್ತು 10 ವರ್ಷಾವಧಿ ಮೀರಿದ ಯುಲಿಪ್ ಪಾಲಿಸಿಗಳ ಮೇಲಿನ ಚಾರ್ಜ್ ಶೇ.2.25 ಮಿತಿಯೊಳಗೆ ಇರತಕ್ಕದ್ದು. 5 ವರ್ಷಗಳ ಬಳಿಕ ಸರೆಂಡರ್ ಮಾಡಿದರೆ ಇದು ಶೇ.4. ಇದು ಏಜೆಂಟ್ ಕಮಿಶನ್/ಪೀಮಿಯಂ ಅಲೋಕೇಶನ್ ಚಾರ್ಜ್, ಅಡ್ಮಿನಿಸ್ಟ್ರೇಶನ್ (ಆಡಳಿತಾತ್ಮಕ) ಚಾರ್ಜ್, ಮಾರ್ಟಾಲಿಟಿ ಚಾರ್ಜ್(ವಿಮೆಯ ವೆಚ್ಚ) ಹಾಗೂ ಫಂಡ್ ಮ್ಯಾನೇಜ್ಮೆಂಟ್ ಚಾರ್ಜ್‌ಗಳನ್ನು ಒಳಗೊಂಡಿರಬೇಕು. ಈ ಶೇಕಡಾ ಚಾರ್ಜ್‌ಗಳಲ್ಲಿ ತಲಾ ಶೇ.1.5 ಹಾಗೂ ಶೇ.1.25 ಪ್ರಮಾಣದಲ್ಲಿ ಫಂಡ್ ಮ್ಯಾನೇಜ್ಮೆಂಟ್ ಚಾರ್ಜಿನ ಒಳಮಿತಿ ಸೇರಿರುತ್ತದೆ. ಈ ಶೇಕಡಾಗಳು ಯಾವುದರ ಮೇಲೆ ಎನ್ನುವುದು ಮುಖ್ಯ. ಇವುಗಳನ್ನು ಫಂಡ್‌ನ ಒಟ್ಟಾರೆ ಲಾಭ ಮತ್ತು ಖರ್ಚು ಕಳೆದ ಬಳಿಕದ ನಿವ್ವಳ ಲಾಭದ ಮಧ್ಯೆ ಇರಬಹುದಾದ ವ್ಯತ್ಯಾಸವೆಂದು ನಿಗದಿಪಡಿಸಲಾಯಿತು. ಇದರಿಂದಾಗಿ ಏಜೆಂಟ್ ಕಮಿಶನ್ ಸಹಿತ ಇತರ ಎಲ್ಲಾ ಚಾರ್ಜ್‌ಗಳಲ್ಲೂ ಕಡಿತ ಉಂಟಾಯಿತು.
– ಲಾಕ್‌ಇನ್ ಅವಧಿಯಲ್ಲಿ (5 ವರ್ಷಗಳವರೆಗೆ) ಸರೆಂಡರ್ ಮಾಡಿದರೆ ಸರೆಂಡರ್ ಚಾರ್ಜಸ್ ವಿಧಿಸಲಾಗುತ್ತದೆ. ಆದರೆ ಫಂಡ್ ವ್ಯಾಲ್ಯೂನ ಶೇ.30-40 ಅಥವಾ ಶೇ.90 ಅಲ್ಲ. ಪ್ರಥಮ ವರ್ಷದಲ್ಲಿ ಸರೆಂಡರ್ ಮಾಡಿದರೆ ರೂ. 25,000 ಮೇಲಿನ ಪ್ರೀಮಿಯಂ ಪಾಲಿಸಿಗಳಿಗೆ ಪ್ರೀಮಿಯಂನ ಅಥವಾ ಫಂಡ್ ಮೌಲ್ಯದ ಶೇ.6 ಅಥವಾ ರೂ. 6,000 ಯಾವುದು ಕಡಿಮೆಯೋ ಅದು. ರೂ. 25,000ಕ್ಕಿಂತ ಕಡಿಮೆ ಪ್ರೀಮಿಯಂ ಪಾಲಿಸಿಗಳಿಗೆ ಪ್ರೀಮಿಯಂನ ಅಥವಾ ಫಂಡ್ ಮೌಲ್ಯದ ಶೇ.20 ಅಥವಾ ರೂ. 3,000 ಯಾವುದು ಕಡಿಮೆಯೋ ಅದು. ಈ ಚಾರ್ಜ್ ಎರಡನೆಯ, ಮೂರನೆಯ ವರ್ಷಗಳಲ್ಲಿ ಹಂತಹಂತವಾಗಿ ಕಡಿಮೆಯಾಗಿ 4 ನೇ ವರ್ಷದ ಬಳಿಕ ರೂ. 2,000 ಮತ್ತು ರೂ.1,000 ಆಗುತ್ತದೆ. 5 ವರ್ಷಗಳ ಬಳಿಕ ಸರೆಂಡರ್ ಚಾರ್ಜ್ ಇರುವುದಿಲ್ಲ.
ಅತಿ ಮುಖ್ಯವಾಗಿ ಈಗ ಎಲ್ಲಾ ಖರ್ಚುಗಳನ್ನೂ ಉದಾಹರಣೆಯ ಸಹಿತ – ಸಂಭಾವ್ಯ ಪ್ರತಿಫಲ ಶೇ.6 ಮತ್ತು ಶೇ.10ರೊಟ್ಟಿಗೆ ಲೆಕ್ಕ ಹಾಕಿ ತೋರಿಸಿದ ಹಾಳೆಯಲ್ಲಿ ಗ್ರಾಹಕರ ಸಹಿ ತೆಗೆದುಕೊಳ್ಳಬೇಕು. ಇದರಿಂದಾಗಿ ಗ್ರಾಹಕರಿಗೆ ಖರ್ಚುಗಳ ಬಗ್ಗೆ ಸಂಪೂರ್ಣ ಮಾಹಿತಿ ಇರುತ್ತದೆ. ಅಂತಹ ಸಹಿ ಹಾಕಿದ ಶೀಟ್ ಇಲ್ಲದೆ ಪಾಲಿಸಿ ಅಪ್ಲಿಕೇಶನ್ ಸಂಪೂರ್ಣವಾಗಲಾರದು.
ಮೂರನೆಯದಾಗಿ ಲಿಕ್ವಿಡಿಟಿಯನ್ನು ಹೆಚ್ಚಿಸಲು…
ಹೊಸ ಕಾನೂನಿನ ಪ್ರಕಾರ ಸೆಪ್ಟೆಂಬರ್ 1, 2010ರ ಅನಂತರ ಬಿಡುಗಡೆಯಾಗುವ ಎಲ್ಲಾ ಯುಲಿಪ್ ಪಾಲಿಸಿಗಳ ಮೇಲೂ ಸಾಲದ ಸೌಲಭ್ಯವನ್ನು ಕಲ್ಪಿಸಿದೆ. ಕನಿಷ್ಟ ಶೇ.60 ಈಕ್ವಿಟಿ ಇರುವ ಈಕ್ವಿಟಿ ಪ್ರಾಧಾನ್ಯ ಯುಲಿಪ್‌ಗ್ಳಲ್ಲಿ ಫಂಡ್ ಮೌಲ್ಯದ ಶೇ.40 ಸಾಲವನ್ನೂ ಕನಿಷ್ಟ ಶೇ. 60 ಸಾಲಪತ್ರಗಳಿರುವ ಡೆಟ್ ಪ್ರಾಧಾನ್ಯ ಯುಲಿಪ್‌ಗ್ಳಲ್ಲಿ ಫಂಡ್ ಮೌಲ್ಯದ ಶೇ. 50 ಸಾಲವನ್ನೂ ಪಡೆಯಬಹುದಾಗಿದೆ. ಸಾಲದ ಸೌಲಭ್ಯ ಆ ಮೊದಲಿನ ಯುಲಿಪ್‌ಗ್ಳಲ್ಲಿ ಇರಲಿಲ್ಲ.
ಪರಿಣಾಮ
ಈ ಸುಧಾರಣಾ ಕ್ರಮಗಳಿಂದಾಗಿ ಕಡ್ಪಕತ್ತಿ ಹಿಡಿದು ಬೀದಿಗಿಳಿದಿದ್ದ ಯುಲಿಪ್ ಯೋಜನೆಯ ಮೇಲೆ ಒಂದು ಸಾತ್ವಿಕ ನಿಯಂತ್ರಣ ಸಾಧಿಸಿದಂತಾಯ್ತು. ವಿಮೆ-ಮ್ಯೂಚುವಲ್ ಫಂಡ್-ಯುಲಿಪ್ ಎಂಬ ತ್ರಿಕೋನದ ಚೌಕಟ್ಟಿನಲ್ಲಿ ಒಂದು ಅರ್ಥಪೂರ್ಣ ಹೋಲಿಕೆ ಮಾಡಲು ಸಾಧ್ಯವಾಗುವಂತಹ ವೇದಿಕೆ ಸೃಷ್ಟಿ ಮಾಡಿದಂತಾಯ್ತು. ಅತ್ಯಂತ ಕೆಟ್ಟ ಹೆಸರು ಗಳಿಸಿ ಕುಪ್ರಸಿದ್ಧವಾಗಿದ್ದ ಯುಲಿಪ್ ಬಗ್ಗೆ ನಮ್ಮಂತವರು ತುಸು ಗೌರವಪೂರ್ಣವಾಗಿ ಮಾತನಾಡುವಂತಹ ಪರಿಸರ ನಿರ್ಮಾಣವಾಯ್ತು.
ಇವಿಷ್ಟು ಯುಲಿಪ್ಪಿನ ಚರಿತ್ರೆಗೆ ಸಂಬಂಧಪಟ್ಟದ್ದು. ಉಳಿದಂತೆ ವರ್ತಮಾನ ಸಮಾಚಾರದ ಬಗ್ಗೆ ಮುಂದಿನ ವಾರ ನೋಡೋಣ.
– ಜಯದೇವ ಪ್ರಸಾದ ಮೊಳೆಯಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.