ಬೋನಸ್ ಗಿಮಿಕ್‌ಗೆ ಜನಸಾಮಾನ್ಯರ ಮಹಾಬಲಿ
Team Udayavani, May 1, 2017, 11:15 AM IST
ಒಂದು ಕಾಲದಲ್ಲಿ ಬೋನಸ್ ನೀಡಿಕೆ ಶೇರು ಮಾರುಕಟ್ಟೆಯಲ್ಲಿ ಅವ್ಯಾಹತವಾಗಿ ನಡೆಯುತ್ತಿತ್ತು. ಬೋನಸ್ ನ್ಯೂಸಿಗೆ ಶೀಘ್ರದಲ್ಲೇ ಕರು ಹಾಕಲಿರುವ ಗಬ್ಬದ ಎಮ್ಮೆಯಂತೆ ಶೇರಿನ ಬೆಲೆಯೇರುತ್ತಿತ್ತು. ಆದರೆ ಈಗ ಕಾಲ ಬದಲಾಗಿದೆ.
ಒಂದು ಉದ್ಯಮ ಆರಂಭಿಸಲು ಕಾಪಿಟಲ್ ಅಥವಾ ಮೂಲಧನ ಬೇಕು ತಾನೆ? ಅದನ್ನು ಶೇರು ಕ್ಯಾಪಿಟಲ್ ಎಂದು ಕರೆಯುತ್ತಾರೆ. ಉದಾಹರಣೆಗೆ, ಡಿ.ಪಿ. ರಂಗ್ ಎಂಬ ಒಬ್ಬ ಮುಂಬೈ ಕಾ ಸೇಟ್ 100 ಕೋಟಿ ರೂಪಾಯಿಗಳ ಶೇರು ಕ್ಯಾಪಿಟಲ್ ಅನ್ನು ಹಾಕಿ ದೋಂಡುರಂಗ್ ಪಾಂಡುರಂಗ್ ಆ್ಯಂಡ್ ಸನ್ಸ್ ಎಂಬ ಒಂದು ಕಂಪೆನಿಯನ್ನು ಹುಟ್ಟುಹಾಕುತ್ತಾನೆ. ಆವಾಗ ಆತನ ಬ್ಯಾಲನ್ಸ್ ಶೀಟಿನಲ್ಲಿ ಶೇರು ಕ್ಯಾಪಿಟಲ್ = 100 ಕೋಟಿ ಎಂದು ನಮೂದಿಸಲಾಗುತ್ತದೆ.
ಡಿ.ಪಿ.ರಂಗ್ ಎಂಬ ಈ ಹೊಲಿಗೆ ಉದ್ಯಮದ ಕಿಂಗ್ ಜನರಿಗೆ ತರತರವಾದ ದಿರಿಸುಗಳನ್ನು ಹೊಲಿಯುತ್ತಾನೆ- ಅಂಗಿ, ಚಡ್ಡಿ ಪ್ಯಾಂಟ್, ಶರ್ಟ್, ಸಲ್ವಾರ್, ಚೂಡಿದಾರ್, ಟೋಪಿ ಇತ್ಯಾದಿ. ಆತನಿಗೆ ಟೋಪಿ ಉದ್ಯಮದಲ್ಲಿ ಭಾರೀ ಲಾಭ ಬಂದ ಕಾರಣ ವರ್ಷಾಂತ್ಯಕ್ಕೆ ಆತನ ಕಂಪೆನಿಯು 30 ಕೋಟಿ ರೂ. ಲಾಭ ಗಳಿಸುತ್ತದೆ ಎಂದಿಟ್ಟುಕೊಳ್ಳಿ. ಅದರಲ್ಲಿ 5 ಕೋಟಿ ರೂ.ಗಳನ್ನು ಡಿವಿಡೆಂಡ್ ಆಗಿ ಹಂಚಿ ಉಳಿದ 25 ಕೋಟಿ ರೂ.ಗಳನ್ನು ಬಿಸಿನೆಸ್ ವಿಸ್ತರಿಸುವ ಉದ್ದೇಶದಿಂದ ಹೊಸದಾದ ಒಂದು ಮಕ್ಮಲ್ ಟೋಪಿ ಹೊಲಿಯುವ ಉದ್ಯಮದಲ್ಲಿ ತೊಡಗಿಸುತ್ತಾನೆ. ಈ ರೀತಿ 25 ಕೋಟಿ ರೂ.ಗಳನ್ನು ಬಿಸಿನೆಸ್‌ನಲ್ಲಿಯೇ ಮರುಹೂಡಿದಾಗ ಆತನ ಬ್ಯಾಲನ್ಸ್ ಶೀಟ್ ಈ ರೀತಿ ಕಾಣಿಸುತ್ತದೆ:
ಶೇರ್ ಕ್ಯಾಪಿಟಲ್ 100 ಕೋಟಿ
ರಿಸರ್ವ್ಸ್ 25 ಕೋಟಿ
ಒಟ್ಟು ಇಕ್ವಿಟಿ 125 ಕೋಟಿ
25 ಕೋಟಿ ರೂ. ಲಾಭವನ್ನು ರಿಸರ್ವ್ಸ್ ಅಥವಾ ರಿಟೈನ್x ಅರ್ನಿಂಗ್ಸ್ ಎಂಬ ಹಣೆಪಟ್ಟಿಯಡಿ ಹಾಕುತ್ತಾರೆ. ಹಾಗಾಗಿ ಆತನ ಟೋಟಲ್ ಇಕ್ವಿಟಿ 100ರಿಂದ 125 ಕೋಟಿಗೆ ಏರುತ್ತದೆ.
ಅದೇ ರೀತಿ ಮರುವರುಷ 45 ಕೋಟಿ ರೂ. ಲಾಭ ಪಡೆದು ಅದರಲ್ಲಿ 20 ಕೋಟಿ ರೂ. ಡಿವಿಡೆಂಡ್ ಹಂಚಿ ಉಳಿದ 25 ಕೋಟಿಯನ್ನು ರಿಸರ್ವ್ಸ್ಗೆ ಸೇರಿಸುತ್ತಾನೆ. ಈಗ ಬ್ಯಾಲನ್ಸ್ ಶೀಟಿನ ಸ್ವರೂಪ ಈ ರೀತಿ:
ಶೇರ್ ಕ್ಯಾಪಿಟಲ್ 100 ಕೋಟಿ
ರಿಸರ್ವ್ಸ್ 50
ಒಟ್ಟು ಇಕ್ವಿಟಿ 150
ಈ ಟೋಪಿ ಕಂಪೆನಿಯ ಲಾಭ ಈಗ ಶುಕ್ಲ ಪಕ್ಷದ ಚಂದ್ರನಂತೆ ವೃದ್ಧಿಯಾಗುತ್ತದೆ. ಹಾಗೆ, ಮುಂದಿನ ವರ್ಷ 75 ಕೋಟಿ ಲಾಭ ಪಡೆದು ಅದರಲ್ಲಿ 25 ಕೋಟಿ ಡಿವಿಡೆಂಡ್ ನೀಡಿ ಉಳಿದ 50 ಕೋಟಿಯನ್ನು ರಿಸರ್ವ್ ಅಕೌಂಟಿಗೆ ಸೇರಿಸುತ್ತಾರೆ.
ಈಗ ಬ್ಯಾಲನ್ಸ್ ಶೀಟ್ ಈ ರೀತಿ:
ಶೇರ್ ಕ್ಯಾಪಿಟಲ್ 100 ಕೋಟಿ
ರಿಸರ್ವ್ಸ್ 100 ಕೋಟಿ
ಒಟ್ಟು ಇಕ್ವಿಟಿ 200 ಕೋಟಿ
ಈ ಸಂದರ್ಭದಲಿ ಡಿ.ಪಿ.ರಂಗ್ ಆ್ಯಂಡ್ ಸನ್ಸ್‌ನ ಸನ್ ಎಂಟ್ರಿ ಹೊಡೆಯುತ್ತಾನೆ. ಆತ ಕಂಪೆನಿ ಶೇರುಗಳಿಗೆ ಒಂದಕ್ಕೊಂದು (1:1) ಬೋನಸ್ ಅನೌನ್ಸ್ ಮಾಡುತ್ತಾನೆ. ಕೇವಲ ಡಿವಿಡೆಂಡ್ ಮಾತ್ರ ಪಡೆಯುತ್ತಿದ್ದ ಶೇರು ಹೋಲ್ಡರುಗಳು ಹೀಗೆ ಅಚಾನಕ್ಕಾಗಿ ಬಂದ ಬೋನಸ್ ಶೇರುಗಳಿಂದ ಆನಂದತುಂದಿಲರಾಗುತ್ತಾರೆ. ಆದರೆ ಈತ ಬೋನಸ್ ಅನೌನ್ಸ್ ಮಾಡಿದ ಬಳಿಕ ಕಂಪೆನಿಯ ಬ್ಯಾಲನ್ಸ್ ಶೀಟ್ ಏನಾಗಿದೆ ಎಂದು ಒಮ್ಮೆ ಇಣುಕಿ ನೋಡೋಣ:
ಶೇರ್ ಕ್ಯಾಪಿಟಲ್ 200 ಕೋಟಿ
ರಿಸರ್ವ್ಸ್ 0
ಒಟ್ಟು ಇಕ್ವಿಟಿ 200 ಕೋಟಿ
ಅಂದರೆ, ರಿಸರ್ವ್ಸ್ನಿಂದ ದುಡ್ಡನ್ನು ಸ್ಥಳಾಂತರಿಸಿ ಶೇರ್ ಕ್ಯಾಪಿಟಲ್ ಅನ್ನು ಜಾಸ್ತಿ ಮಾಡಲಾಗಿದೆ. ಒಟ್ಟು ಇಕ್ವಿಟಿಯಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಹೂಡಿಕೆದಾರರ ಕೈಯಲ್ಲಿ ಒಂದಕ್ಕೆ ಡಬಲ್ ಶೇರುಗಳನ್ನು ಇರಿಸಿದರೂ ಒಟ್ಟು ಮೊತ್ತದಲ್ಲಿ ವ್ಯತ್ಯಾಸವಿಲ್ಲದ ಕಾರಣ ಪ್ರತಿ ಶೇರಿನ ಬೆಲೆಯೂ ಈಗ ಅರ್ಧಕ್ಕರ್ಧ. ಮಗ ಮಾಡಿದ್ದು ಬರೇ ಒಂದು ಅಕೌಂಟಿಂಗ್ ಅಜಸ್ಟ್‌ಮೆಂಟ್ ಮಾತ್ರ!
ಈ ರೀತಿಯ ಬೋನಸ್ ನೀಡುವುದು ಶೇರು ಮಾರುಕಟ್ಟೆಯ ಒಂದು ಕಾಲದಲ್ಲಿ ಅವ್ಯಾಹತವಾಗಿ ನಡೆಯುತ್ತಿತ್ತು. ಶೇರು ವಿಜ್ಞಾನದ ಲೆಕ್ಕಾಚಾರ ತಿಳಿಯದ ಜನರು ಬೋನಸ್ ಶೇರುಗಳನ್ನು ಉಚಿತವೆಂದು ತಿಳಿದು ಅದರ ಹಿಂದೆ ಮುಗಿಬೀಳುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಸಾಂಸ್ಥಿಕ ಹೂಡಿಕೆದಾರರೇ ಮೇಲುಗೈ ಆಗಿರುವ ಈಗಿನ ಮಾರುಕಟ್ಟೆಯಲ್ಲಿ ಬೋನಸ್ ಶೇರಿನ ನಿಜವಾದ ಅರ್ಥ ಮಾರುಕಟ್ಟೆಗೆ ಆಗಿದೆ. ಬರೇ ಬೋನಸ್ ನೀಡುವುದರಿಂದ ವಾಸ್ತವದಲ್ಲಿ ಶೇರು ಮೌಲ್ಯದಲ್ಲಿ ಯಾವುದೇ ವ್ಯತ್ಯಾಸವಾಗಲಾರದು- ಹಾಗೆ ಆಗುತ್ತದೆ ಎಂದಿದ್ದಲ್ಲಿ ಪ್ರತೀ ಕಂಪೆನಿಯೂ ತನ್ನ ಫಾಕ್ಟರಿಗಳಲ್ಲಿ ಪ್ರೊಡಕ್ಷನ್ ನಿಲ್ಲಿಸಿ ಪ್ರತೀ ದಿನಾ ಬೆಳಗ್ಗೆ ಎದ್ದು ಬೋನಸ್ ಡಿಕ್ಲೇರ್ ಮಾಡುತ್ತಾ ಕುಳಿತರೆ ಸಾಕಲ್ಲವೇ? ಹಾಗಾಗಿ ಈಗೀಗ ಬೋನಸ್ ಘೋಷಣೆಯೊಂದಿಗೆ ಶೇರು ಬೆಲೆ ಹೆಚ್ಚಳವಾಗುವುದಿಲ್ಲ. ಯಾವುದೇ ಎಫ್ಐಐ ಅಥವಾ ಡಿಐಐಗಳು ಶೇರು ಮೌಲ್ಯಮಾಪನದಲ್ಲಿ ಬೋನಸ್ ನೀಡಿಕೆಗೆ ಕಾಸಿನ ಮಹತ್ವ ಕೊಡುವುದಿಲ್ಲ.
ಹಾಗಾದರೆ ಬೋನಸ್ ನೀಡುವುದಕ್ಕೆ ಯಾವುದೇ ಕಾರಣ ಇಲ್ಲವೇ ಎಂದು ನೀವು ಕೇಳಬಹುದು. ಬೋನಸ್ ನೀಡಿದಾಕ್ಷಣ ಶೇರು ಬೆಲೆ ಏರುವುದಕ್ಕೆ ಕಾರಣವಿಲ್ಲ. ಬೋನಸ್ ನೀಡಲೂ ಒಂದು ಕಾರಣವಿದೆ. ಆದರೆ ಶೇರುಬೆಲೆ ಏರುವುದು ಆ ಕಾರಣಕ್ಕಲ್ಲ. ಬದೆÉà ಮೇ, ಬೋನಸ್ ನೀಡಿದಾಗ ಬೆಲೆ ಇಳಿಯುತ್ತದೆ ಎಂಬುದೇ ಆ ಕಾರಣ. 1:1 ಬೋನಸ್ ನೀಡಿದರೆ ಬೆಲೆ ಅರ್ಧವಾಗುತ್ತದೆ; ಹಾಗಾಗಿ ಶೇರು ಬೆಲೆ ಮಿತಿಮೀರಿ ಹೂಡಿಕೆದಾರರ ಕೈಗೆಟುಕದ ಮಟ್ಟಕ್ಕೆ ಏರಿದಾಗ ಬೋನಸ್ ಮೂಲಕ ಅದನ್ನು ಕೆಳಗಿಳಿಸಲಾಗುತ್ತದೆ. ಹಾಗೆ ಬೋನಸ್ ಅನ್ನು ಕಾಲ ಕಾಲಕ್ಕೆ ನೀಡುತ್ತಾ ಶೇರು ಬೆಲೆಯನ್ನು ಒಂದು ಹಂತದಲ್ಲಿ ನಿಯಂತ್ರಿಸುತ್ತಾರೆ. ಇದರಿಂದ ಶೇರುಗಳು ಜನಸಾಮಾನ್ಯರ ಕೈಗೆಟಕುವ ಸಂಖ್ಯೆಯಲ್ಲಿ ಮತ್ತು ಪ್ರೈಸ್‌ಬ್ಯಾಂಡಿನಲ್ಲಿ ಇರುತ್ತದೆ. ಇದರಿಂದಾಗಿ ಶೇರಿನಲ್ಲಿ ಲವಲವಿಕೆ ಹೆಚ್ಚಾಗುತ್ತದೆ ಎಂಬುದು ಕಂಪೆನಿಯವರ ಅಂಬೋಣ.
ಈಗ ಒಂದು ಕಂಪೆನಿಯ ದೃಷ್ಟಿಯಿಂದ ಈ ಬೋನಸ್ ವೃತ್ತಾಂತದ ಇನ್ನೊಂದು ಮಜಲನ್ನು ನೋಡೋಣ. ಶೇರು ಬೆಲೆಯ ಜತೆಜತೆಗೆ ಡಿವಿಡೆಂಡ್ ಶೇಕಡಾವನ್ನು ಕೂಡ ಈ ಬೋನಸ್ಸೀಕರಣ ಒಂದು ಮಿತಿಯೊಳಗೆ ನಿಯಂತ್ರಿಸಿಡುತ್ತದೆ. ಒಂದಕ್ಕೊಂದು ಬೋನಸ್ ಕೊಟ್ಟಾಗ ಹೂಡಿಕೆದಾರರ ಕೈಯಲ್ಲಿ ಮೊದಲು ಒಂದಿದ್ದ ಶೇರು ಈಗ ಎರಡಾಗುತ್ತದೆ. ಮೊದಲು ಒಂದು ಶೇರಿನ ಮೇಲೆ ನೀಡುವ ಡಿವಿಡೆಂಡ್ ಇನ್ನು ಮುಂದೆ ಎರಡು ಶೇರಿನ ಮೇಲೆ ನೀಡಬೇಕಾಗುತ್ತದೆ. ಆಗ ಡಿವಿಡೆಂಡ್ ಶೇಕಡಾ ಅರ್ಧವಾಗುತ್ತದೆ. ಆ ರೀತಿ ಬೋನಸ್ ನೀಡದೆ ಇದ್ದಲ್ಲಿ ಕೆಲವೊಂದು ಅತಿ ಲಾಭದಾಯಕ ಕಂಪೆನಿಗಳ ಡಿವಿಡೆಂಡ್ ಶೇಕಡಾ ಬೆಳೆದೂ ಬೆಳೆದೂ ಕಾಲಕ್ರಮೇಣ ಸಾವಿರಾರು ಶೇಕಡಾ ಡಿವಿಡೆಂಡ್ ನೀಡತೊಡಗಿಯಾವು. ಹಾಗೂ ತಮ್ಮ ಬ್ಯಾಲನ್ಸ್ ಶೀಟಿನಲ್ಲಿ ಹತ್ತಾರು ಪಾಲು ರಿಸರ್ವ್ಸ್ ತೋರಿಸಿಯಾವು. ಇದು ಆ ಕಂಪೆನಿಯನ್ನು ಒಂದು ಲಾಭಬಡುಕ ಕಂಪೆನಿ ಎಂಬ ರೀತಿಯಲ್ಲಿ ಬಿಂಬಿಸೀತು. ಅದಕ್ಕೆ ಅದರದ್ದೇ ಆದ ಹತ್ತು ಹಲವಾರು ತೊಂದರೆಗಳಿವೆ. ಅಂತಹ ಅಪಾಯದಿಂದ ತಪ್ಪಿಸಿಕೊಳ್ಳಲು ಈ ರೀತಿ ಬೋನಸ್ ಶೇರುಗಳು ಸಹಾಯವಾಗುತ್ತವೆ.
ಈಗ ಅದೇ ನಾಣ್ಯದ ಇನ್ನೊಂದು ಮುಖ ನೋಡಿ- ಒಂದಕ್ಕೆರಡು ಬೋನಸ್ ಕೊಟ್ಟ ಮೇಲೆ ಒಂದು ಕಂಪೆನಿಯ ಸಾಧನೆ ಡಬಲ್ ಆಗಲೂ ಬೇಕಾಗುತ್ತದೆ. ಆಗದಿದ್ದಲ್ಲಿ ಶೇಕಡಾವಾರು ಡಿವಿಡೆಂಡ್ ಮೊದಲಿನ ಅರ್ಧವಾಗುತ್ತದೆ. ಒಂದಕ್ಕೆರಡು ಬೋನಸ್ ಶೇರು ಕೊಟ್ಟಾಗ ಆನಂದತುಂದಿಲರಾಗಿ ಕುಣಿದಾಡಿದ ಅಮಾಯಕ ಜನರು ಅದೇ ಬೋನಸ್ ಕಾರಣಕ್ಕೆ ಡಿವಿಡೆಂಡ್ ಅರ್ಧವಾಶಿಯಾದರೆ ಕುಪಿತರಾಗುತ್ತಾರೆ.
ಅಂತಹ ಕಷ್ಟದ ಸಂದರ್ಭಗಳಲ್ಲಿ ಕಂಪೆನಿಗಳು ಬೋನಸ್ಸಿಗೆ ಬದಲಾಗಿ ಶೇರಿನ ಮುಖಬೆಲೆಯನ್ನು ವಿಭಜಿಸುತ್ತಾರೆ (ಖಜಚrಛಿ sಟlಜಿಠಿಠಿಜಿnಜ). ಹತ್ತು ರೂಪಾಯಿ ಮುಖ ಬೆಲೆಯ ಒಂದು ಶೇರನ್ನು ವಿಭಜಿಸಿ ಐದು ರೂಪಾಯಿಗಳ ಎರಡು ಶೇರು ನೀಡುತ್ತಾರೆ. ಅಥವಾ ಎರಡು ರೂಪಾಯಿಗಳ ಐದು ಶೇರು ಅಥವಾ ಒಂದು ರೂಪಾಯಿಯ ಹತ್ತು ಶೇರು ಇತ್ಯಾದಿ ನೀಡುತ್ತಾರೆ. ಇದರಿಂದಾಗಿ ಬೋನಸ್ ಶೇರಿನಲ್ಲಿ ಆಗುವಂತೆಯೇ ಮಾರುಕಟ್ಟೆಯ ಬೆಲೆ ಕೈಗೆಟಕುವ ಮಟ್ಟಕ್ಕೆ ಇಳಿಯುತ್ತದೆ ಅಲ್ಲದೆ ಹೆಚ್ಚುವರಿ ಡಿವಿಡೆಂಡ್ ಹಂಚುವ ವರಿ ಇರುವುದಿಲ್ಲ ಯಾನೀ ಕೀ, ಬೆಸ್ಟ್ ಆಫ್ ಬೋತ್ ವಲ್ಡ್ì!
– ಜಯದೇವ ಪ್ರಸಾದ ಮೊಳೆಯಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf issue: ಉಪಚುನಾವಣೆಯಲ್ಲಿ ನಾಟಕ ಮಾಡಲು ಜೆಪಿಸಿ ದುರ್ಬಳಕೆ: ಎಚ್.ಕೆ.ಪಾಟೀಲ್
Bengaluru: ಪೀಣ್ಯದಲ್ಲಿ 12 ಕೋಟಿ ರೂ. ಮೌಲ್ಯದ ಆಸ್ತಿ ವಶಕ್ಕೆ ಪಡೆದ ಅಭಿವೃದ್ಧಿ ಪ್ರಾಧಿಕಾರ
Siddapura: ಅದೃಷ್ಟ ತಂದ ಲಾರಿ ಧರ್ಮಸ್ಥಳ ಕ್ಷೇತ್ರಕ್ಕೆ ಸಮರ್ಪಣೆ
Bengaluru: ಮಾದಾವರ ವಿಸ್ತರಿತ ಮೆಟ್ರೊದಲ್ಲಿ ಮೊದಲ ದಿನ 16000 ಜನ ಪ್ರಯಾಣ
Balaganur: ಕಾಲುವೆಯಲ್ಲಿ ನವಜಾತ ಶಿಶು ದೇಹ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.