ಹಿಂದು ಅವಿಭಕ್ತ ಕುಟುಂಬ ಎಂಬ “ಕರಪ್ರಸಾದ’
Team Udayavani, Dec 3, 2018, 6:00 AM IST
ಗುರುಗುಂಟಿರಾಯರ ಕುಟುಂಬದಲ್ಲಿ ನಿವೃತ್ತರಾದ ಅವರನ್ನು ಬಿಟ್ಟರೆ ಮಗ-ಸೊಸೆ ಇಬ್ಬರೂ ಕೆಲಸಕ್ಕೆ ಹೋಗುವವರೇ. ಮಗರಾಯ ಒಂದು ಖಾಸಗಿ ಕಂಪೆನಿಯಲ್ಲಿ ಆಡಳಿತಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದು ವರ್ಷಕ್ಕೆ ಸುಮಾರು ರೂ. 5 ಲಕ್ಷದಷ್ಟು ಸಂಪಾದನೆ ಇಟ್ಟುಕೊಂಡವನಾಗಿದ್ದಾನೆ. ಸೊಸೆಯಾದ ಬಹೂರಾನಿ ಒಂದು ಖಾಸಗಿ ಹೈ-ಫೈ ಬ್ಯಾಂಕಿನಲ್ಲಿ ಕಸ್ಟಮರ್ ರಿಲೇಶನ್ ಮ್ಯಾನೇಜರ್ ಅಂತೇನೋ ಆಗಿದ್ದು ಗಂಡನಿಂದಲೂ 1 ಲಕ್ಷ ಜಾಸ್ತಿಯೇ ಸಂಪಾದಿಸುತ್ತಾಳೆ. ರಾಯರಿಗೆ ಮಾಮೂಲಿನಂತೆ ತಿಂಗಳಿಗೆ ಇಪ್ಪತ್ತೈದು ಸಾವ್ರ ಪಿಂಚಣಿ ಬರುತ್ತದೆ. ಅದಲ್ಲದೆ ಪ್ರತಿಯೊಬ್ಬರಿಗೂ ಬಡ್ಡಿ ಆದಾಯ, ಕೃಷಿ ಆದಾಯ, ಅಂಗಡಿ ಬಾಡಿಗೆ, ಭೂಮಿ ಮಾರಾಟದಿಂದ ಆದಾಯ ಇತ್ಯಾದಿ ಇತರ ಆದಾಯಗಳು ಅಗಾಗ್ಗೆ ಬರುತ್ತಾ ಇರುತ್ತದೆ.
ಹೀಗಿರುವಾಗ ಈ ಮೂವರೂ ತಮ್ಮ ಆದಾಯ ಕರವನ್ನು ಪ್ರತ್ಯೇಕವಾಗಿ ಕಟ್ಟುತ್ತಾರೆ. ಕುಟುಂಬ ಒಂದೇ ಆದರೂ ಅವರ ಮೂವರ ಆದಾಯಗಳನ್ನು ತೆರಿಗೆ ಕಟ್ಟುವ ಸಲುವಾಗಿ ಒಟ್ಟುಗೂಡಿಸಲಾಗುವುದಿಲ್ಲ. ವೈಯಕ್ತಿಕ ನೆಲೆಯಲ್ಲಿಯೇ ಪ್ರತ್ಯೇಕ ಖಾತೆ/ಪ್ಯಾನ್ ನಂಬರ್‌ಗಳ ಮೂಲಕ ತೆರಿಗೆ ಕಟ್ಟುತ್ತಾರೆ.
ಅಂತದ್ದರಲ್ಲಿ ಒಂದು ದಿನ ಬಹೂರಾನಿಗೆ ಒಂದು ಘನಂದಾರಿ ಐಡಿಯಾ ಬಂತು. ಅದೆಲ್ಲಿ ಆಫೀಸಿನ ಚರ್ಚೆಗಳಲ್ಲಿ ಮುಳುಗಿದ್ದಾಗ ತುಳುಕಿದ್ದನ್ನು ಹೆಕ್ಕಿಕೊಂಡಿದ್ದಾಳ್ಳೋ ಗೊತ್ತಿಲ್ಲ. ಆದರೆ ಕಾಕು ಅಂಗಳದಲ್ಲಿ ಕರಸಂಬಂಧಿ ಹೊಸ ಹೊಸ ಐಡಿಯಾಗಳನ್ನು ತಂದು ಬಡಿಸುವುದು ನಮ್ಮ ಬಹೂರಾನಿಯೇ ಎಂಬುದು ನಿಮಗೆಲ್ಲಾ ಚೆನ್ನಾಗಿ ಗೊತ್ತು. ಬಹೂರಾನಿಯ ಪ್ರಕಾರ ಅವಳೂ ಅವಳ ಗಂಡನೂ ಸೇರಿ ಒಂದು “ಹಿಂದು ಅವಿಭಕ್ತ ಕುಟುಂಬ’ ಎಂದು ಮಾಡಿಕೊಂಡು ಆ ಹೆಸರಿನಲ್ಲಿ ಕೆಲವು ಇತರ ಆದಾಯಗಳನ್ನು ತೂರಿಸಿದಲ್ಲಿ ಅದರಲ್ಲೇ ಒಂದು ಪ್ರತ್ಯೇಕ ಕರ ಖಾತೆ ಆರಂಭಿಸಬಹುದು. ಅದರಿಂದ ಸಾಕಷ್ಟು ತೆರಿಗೆ ವಿನಾಯಿತಿಯೂ ಸಿಕ್ಕೀತು.
ಈ ವಿಚಾರ ಕಿವಿಗೆ ಹಾಕಿಸಿಕೊಂಡ ಗುರುಗುಂಟಿರಾಯರಿಗೆ ಎಂದಿನಂತೆ ಈ ಮಾತು ಪಚನವಾಗಲಿಲ್ಲ. ಸೊಸೆ ತನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರೂ ಅಗಾಗ್ಗೆ ಎಲ್ಲೋ ಕೇಳಿಸಿಕೊಂಡು ಬಂದು ಇಲ್ಲಿ ಎಳೆದುಹಾಕುವ ಇಂತಹ ಗಂಡಾಂತರದ ಐಡಿಯಗಳು ಅವರಿಗೆ ಇಷ್ಟವಾಗುವುದಿಲ್ಲ. ಇದೆಂತದ್ದು ಇವಳು ತನ್ನ ಗಂಡನನ್ನು ಕಟ್ಟಿಕೊಂಡು ಅವಿಭಕ್ತ ಕುಟುಂಬ ಮಾಡುವುದು? ಇರುವುದು ಒಂದು ಮಗು; ಇನ್ನೊಂದಾದರೂ ಇರಲಿ ಅಂತ ತಾನು ನಾಲ್ಕಾರು ಬಾರಿ ಹಿಂಟ್ ಕೊಟ್ಟಿದ್ದರೂ ಏನೂ ಆಗುವುದು ಕಾಣುವುದಿಲ್ಲ. ಮಗರಾಯನ ಹೇಳಿಕೆ ಪ್ರಕಾರ ಅವಳಿಗೆ ಕೆರೀರು ಮುಖ್ಯವಂತೆ. ಅದು ಬಿಡಿ, ಎಲ್ಲಾ ಕಡೆ ಇದ್ದದ್ದೇ ಅನ್ನಿ, ಆದ್ರೆ ಇದೀಗ ಅವಿಭಕ್ತ ಕುಟುಂಬಕ್ಕೆ ಅದು ಹೇಗೆ ಹೊರಟು ನಿಂತಿದ್ದಾಳೆ? ಅದಕ್ಕೆಲ್ಲಾ ಹಳೇ ಕಾಲದಲ್ಲಿ ಇದ್ದ ಹಾಗೆ ಒಬ್ಬ ಹಿರಿಯಜ್ಜ ಮತ್ತು ಆತನ ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳು ಹೀಗೆಲ್ಲಾ ಬೇಕು. ಅದು ಬಿಟ್ಟು ಒಬ್ಬ ಅಯೋಗ್ಯ ಗಂಡ ಮತ್ತು ಎರಡು ಫೀಟ್ ಸೈಜಿನ ಒಂದು ಮಗುವನ್ನು ಕಟ್ಟಿಕೊಂಡು ಅದೆಂತ ಅವಿಭಕ್ತ ಕುಟುಂಬಕ್ಕೆ ಹೊರಟಿದ್ದಾಳೆ ಇವಳು. . . ಅಂತ ಗೊಣಗಾಡತೊಡಗಿದರು.
***
ಎಲ್ಲೆಡೆ ಕೂಡುಕುಟುಂಬಗಳು ನಶಿಸಿ ಹೋಗುತ್ತಿರೆ, ಎಲ್ಲೆಡೆ “ನಾವು ಮತ್ತು ನಮಗಿಬ್ಬರು’ ಕುಟುಂಬಗಳು ಜನಪ್ರಿಯವಾಗುತ್ತಿರೆ, ಭಾರತೀಯ ಆದಾಯ ಕರದ ಕಡತಗಳಲ್ಲಿ ಹಿಂದು ಅವಿಭಕ್ತ ಕುಟುಂಬದ ಪರಿಕಲ್ಪನೆ ಇನ್ನೂ ಜೀವಂತವಾಗಿದೆಯಷ್ಟೇ ಅಲ್ಲದೆ, ಅದನ್ನು ನಂಬಿ ಬಾಳುವಂತಹ ಭಕ್ತಾದಿಗಳಿಗೆ ಒಂದು ವರಪ್ರಸಾದವಾಗಿಯೇ ಒದಗಿ ಬರುತ್ತಿದೆ.
ಆದಾಯಕರ ಕಾಯಿದೆಯ ಪ್ರಕಾರ ಒಬ್ಬ ಮೇಜರ್ ವ್ಯಕ್ತಿಗೆ ಒಂದು ಫೈಲು ಅಥವಾ ಒಂದು ಖಾತೆ ಅಥವಾ ಒಂದು ಪ್ಯಾನ್ ನಂಬರ್ ಮೀಸಲಿಡಲಾಗುತ್ತದೆ. ಒಂದು ಕುಟುಂಬದಲ್ಲಿ ಇಬ್ಬರು ಸ್ವಂತ ಆದಾಯವುಳ್ಳ ವಯಸ್ಕರಿದ್ದಲ್ಲಿ (ಉದಾ: ಪತಿ, ಪತ್ನಿ) ಅವರಿಗೆ ಎರಡು ಫೈಲು ಅಥವ ಖಾತೆ ಅಥವ ಪ್ಯಾನ್ ನಂಬರ್ ಲಭ್ಯವಾಗುತ್ತದೆ ಮತ್ತು ಅವರವರ ಆದಾಯ ತೆರಿಗೆ ಪ್ರತ್ಯೇಕವಾಗಿ ಲೆಕ್ಕ ಹಾಕಲ್ಪಡುತ್ತದೆ. ಅಂದರೆ ಪ್ರತಿಯೊಬ್ಬರಿಗೂ ಅವರ ಆದಾಯ ಹೊಂದಿಕೊಂಡು ರೂ. 2.5 ಲಕ್ಷದ ಬೇಸಿಕ್ ವಿನಾಯಿತಿ ಹಾಗೂ ಸೆಕ್ಷನ್ 80ಸಿ ಯ ರೂ. 1.5 ಲಕ್ಷ ಮತ್ತಿತರ ಸೆಕ್ಷನ್ನುಗಳ ವಿನಾಯಿತಿಗಳು ಲಭ್ಯವಾಗುತ್ತದೆ. ಈ ರೀತಿ ವ್ಯಕ್ತಿಗತ ಆದಾಯದ ಮೇಲೆ ತೆರಿಗೆ ಅನ್ವಯವಾಗುತ್ತದೆ.
ವ್ಯಕ್ತಿಗತ ಆದಾಯವಲ್ಲದೆ ಬೇರೆ ಕೌಟುಂಬಿಕ ಆದಾಯವಿದ್ದಲ್ಲಿ ಬಹುತೇಕ ಅದನ್ನು ಪತಿ ಅಥವ ಪತ್ನಿಯ ಖಾತೆಗೆ, ಯಾರ ಹೆಸರಲ್ಲಿ ಆದಾಯ ಬರುತ್ತದೋ ಅವರ ಖಾತೆಗೆ ಸೇರಿಸಲ್ಪಡುತ್ತದೆ. ಉದಾಹರಣೆಗಾಗಿ ಕೌಟುಂಬಿಕ ಕಟ್ಟಡಗಳ ಮೇಲೆ ಬರುವ ಆದಾಯ, ಕೌಟುಂಬಿಕ ಬಿಸಿನೆಸ್ ಆದಾಯ, ಪಿತ್ರಾರ್ಜಿತವಾಗಿ ಬಂದ ತೋಟದ ಮೇಲಿನ ಆದಾಯ, ಕುಟುಂಬಕ್ಕೆ ಬಂದ ಗಿಫ್ಟ್ ಆದಾಯ, ಮನೆ/ಆಸ್ತಿ ಮಾರಿ ಬಂದ ಕ್ಯಾಪಿಟಲ್ ಗೈನ್ಸ್ ಆದಾಯ ಇತ್ಯಾದಿ. ಈ ರೀತಿ ಬಂದ ಆದಾಯವನ್ನು ವೈಯಕ್ತಿಕ ಆದಾಯಕ್ಕೆ ಸೇರಿಸಿ ಆದಾಯ ಕರ ಕಟ್ಟುತ್ತಾರೆ. ಇದಕ್ಕೆ ಅವರವರ ಸ್ಲಾಬಾನುಸಾರ ಕರ ತಗಲುತ್ತದೆ. ಶೇ.30 ಆದಾಯ ತೆರಿಗೆಯ ಸ್ಲಾಬ್‌ನಲ್ಲಿ ಇರುವವರು ಈ ಹೆಚ್ಚುವರಿ ಕೌಟುಂಬಿಕ ಆದಾಯದ ಮೇಲೂ ಶೇ. 30 ದರದಲ್ಲಿಯೇ ತೆರಿಗೆ ಕಟ್ಟಬೇಕಾಗುತ್ತದೆ.
ವೈಯಕ್ತಿಕ ನೆಲೆಯಲ್ಲಿ ಖಾತೆ ಹೊಂದುವುದಲ್ಲದೆ ಒಂದು ಕೌಟುಂಬಿಕ ನೆಲೆಯಲ್ಲಿಯೂ ಒಂದು ಪ್ರತ್ಯೇಕ ಖಾತೆ ಹೊಂದಲು ಸಾಧ್ಯ ಎನ್ನುವುದು ಬಹುತೇಕರಿಗೆ ಗೊತ್ತಿಲ್ಲ. ಹಿಂದು ಅನ್‌ಡಿವೈಡೆಡ್ ಫ್ಯಾಮಿಲಿ ಅಥವಾ ಎಚ್‌ಯುಎಫ್ ಅಥವಾ ಹಿಂದು ಅವಿಭಕ್ತ ಕುಟುಂಬ ಎಂಬ ಪರಿಕಲ್ಪನೆಯ ಅಡಿಯಲ್ಲಿ ಇಂತಹ ಇನ್ನೊಂದು ಪ್ರತ್ಯೇಕ ಖಾತೆ ತೆರೆಯಲು ಸಾಧ್ಯ.
ಸಂಬಳದಂಥಹ ವೈಯಕ್ತಿಕ ಆದಾಯವನ್ನು ವೈಯಕ್ತಿಕ ಕರಖಾತೆಯಲ್ಲೂ ಕೌಟುಂಬಿಕವಾದ ಆದಾಯವನ್ನು ಎಚ್‌ಯುಎಫ್ ಖಾತೆಯಲ್ಲೂ ಪ್ರತ್ಯೇಕವಾಗಿ ಕಾಣಿಸಬಹುದು. ಈ ರೀತಿ ಒಂದು ಎಚ್‌ಯುಎಫ್ ಖಾತೆ ಹೊಂದಿದಲ್ಲಿ ಆ ಖಾತೆಗೆ ಬರುವ ಕೌಟುಂಬಿಕ ಆದಾಯಗಳ ಮೇಲೆ ಪ್ರತ್ಯೇಕವಾದ ರೂ. 2.5 ಲಕ್ಷದ ಬೇಸಿಕ್ ರಿಯಾಯತಿ ಹಾಗೂ ರೂ.1.5 ಲಕ್ಷದ ಸೆಕ್ಷನ್ 80ಸಿ ರಿಯಾಯಿತಿ, ಅದಲ್ಲದೆ ಸದಸ್ಯರ ಮೇಲಿನ ಮೆಡಿಕಲ…, ಹೌಸಿಂಗ್, ಎಜುಕೇಶನ್ ಲೋನ್ ಮತ್ತಿತರ ವಿನಾಯತಿಗಳು ಲಭ್ಯವಾಗುತ್ತದೆ. ಈ ರೀತಿ ಒಂದೇ ಕುಟುಂಬದೊಳಗೆ ಪತಿ ಪತ್ನಿಗೆ 2 ಖಾತೆಗಳಲ್ಲದೆ ಎಚ್‌ಯುಎಫ್ ಹೆಸರಿನಲ್ಲಿ ಇನ್ನೊಂದು ಮೂರನೆಯ ಪ್ರತ್ಯೇಕ ಖಾತೆ ಹೊಂದಿ ಅದರ ಕರವಿನಾಯತಿಯ ಸೌಲಭ್ಯ ಪಡೆಯಲು ಸಾಧ್ಯ! ಇದೇ ಎಚ್‌ಯುಎಫ್ ಖಾತೆಯ ಹಿರಿಮೆ.
ಹೆಸರೇ ತಿಳಿಸುವಂತೆ ಇದು ಹಿಂದು (ಸಿಖ್/ಜೈನ್ ಸಹಿತ) ಧರ್ಮದವರಿಗೆ ಮಾತ್ರ ಲಭ್ಯ. ಅಲ್ಲದೆ ಇದನ್ನು ಹುಟ್ಟು ಹಾಕಲು ನಮ್ಮ ಗುರುಗುಂಟಿರಾಯರು ತಿಳಿದುಕೊಂಡ ಹಾಗೆ ಅಜ್ಜ, ಆಜ್ಜಿ, ಮಗಂದಿರು, ಸೊಸೆಯಂದಿರು, ಹತ್ತು ಡಜನ್ ಮೊಮ್ಮಕ್ಕಳನ್ನು ಹೊಂದಿದ ನಾಲ್ಕು ಕ್ರಿಕೆಟ್ ಟೀಮ್ ಸೈಜಿನ ಒಂದು ಕುಟುಂಬದ ಅಗತ್ಯ ಇಲ್ಲ. ಕೇವಲ ಇಬ್ಬರೇ ಇಬ್ಬರು ಸಾಕು ಈ ಸಂಸ್ಥೆ ತೆರೆಯಲು. ಒಬ್ಬ ಪತಿ ಹಾಗೂ ಆತನ ಒಬ್ಬಳು ಪತ್ನಿ ಸಾಕು. ವಾಸ್ತವದಲ್ಲಿ ಒಬ್ಟಾತ ಮದುವೆಯಾದ ಕ್ಷಣದಿಂದಲೇ ಆತನ ಹೆಸರಿನಲ್ಲಿ ಒಂದು ಎಚ್‌ಯುಎಫ್ ಆರಂಭವಾಗುತ್ತದೆ. ಪ್ರತಿಯೊಂದು ಮಗು ಹುಟ್ಟಿದಾಕ್ಷಣ ಅದು ಆ ಎಚ್‌ಯುಎಫ್ಗೆ ಸೇರಿಕೊಳ್ಳುತ್ತದೆ. ಓರ್ವ ಕರ್ತ ಮತ್ತು ಇತರರು ಪಾಲುದಾರರಾಗಿ/ಸದಸ್ಯರಾಗಿ ಈ ಸಂಸ್ಥೆಯನ್ನು ರಿಜಿಸ್ಟರ್ ಮಾಡಿಸಿಕೊಂಡು ಅದಕ್ಕೆ ಒಂದು ಪೇಪರ್ ರೂಪ ನೀಡಬಹುದು. ಒಂದು ಪ್ರತ್ಯೇಕ ಬ್ಯಾಂಕ್ ಖಾತೆ ಮತ್ತು ಪ್ರತ್ಯೇಕ ಪ್ಯಾನ್‌ಕಾರ್ಡ್ ಪಡೆದುಕೊಳ್ಳಬೇಕು.
ಓಹೋ ಹಾಗೋ ಸಮಾಚಾರ, ಇದೊಳ್ಳೆ ಅವಕಾಶ ಮಾರಾಯೆ, ನಾಳೇನೇ ಬೆಳಿಗ್ಗೆ ಒಬ್ಬ ಸಿಎಯನ್ನು ಕಂಡು ಒಂದು ಎಚ್‌ಯುಎಫ್ ತೆರೆದು ಈ “ಕರಪ್ರಸಾದದ ಫಲಾನುಭವಿಗಳಾಗೋಣ’ ಎಂದು ಹೊರಡದಿರಿ. ಕೇವಲ ಕರ ವಿನಾಯತಿ ಪಡೆಯಲೋಸ್ಕರೇ ಅಂತಹ ಒಂದು ಖಾತೆಯನ್ನು ತೆರೆದು ಒಂದಿಷ್ಟು ಆದಾಯವನ್ನು ಅದರಲ್ಲಿ ತುರುಕಿ ಕರ ವಿನಾಯತಿ ಪಡೆಯಲು ಪ್ರಯತ್ನಿಸುವುದು ತರವಲ್ಲ. ಭಾರತ ದೇಶದಲ್ಲಿ ಅಗ್ರಿಕಲ್ಚರ್ ಆದಾಯದಂತೆಯೇ ಅತ್ಯಂತ ದುರುಪಯೋಗ ಪಡಿಸಿಕೊಂಡಂತಹ ಇನ್ನೊಂದು ವಿಚಾರ ಈ “ಹಿಂದು ಅವಿಭಕ್ತ ಕುಟುಂಬ’ವೇ ಆಗಿದೆ. ಯಾರಿಗೆ ನೈಜವಾಗಿಯೂ ಅಂತಹ ಕೌಟುಂಬಿಕ ಆದಾಯ ಇದೆಯೋ ಅಂತವರು ಮಾತ್ರ ಒಂದು ಪ್ರತ್ಯೇಕ ಎಚ್‌ಯುಎಫ್ ಖಾತೆ ತೆರೆದರೆ ಸಾಧು. ಈ ಪರಿಕಲ್ಪನೆಯನ್ನು ಅತ್ಯಂತ ಜಾಗರೂಕರಾಗಿ ಕಾನೂನುಬದ್ಧವಾಗಿ ಉಪಯೋಗಿಸಬೇಕಾಗಿ ವಿನಂತಿ.
ಒಂದು ಎಚ್‌ಯುಎಫ್ ಅನ್ನು ನಿಮ್ಮಿಂದ ಪ್ರತ್ಯೇಕವಾದ ಒಂದು ವ್ಯಕ್ತಿತ್ವವಾಗಿ ಗುರುತಿಸಲ್ಪಡುತ್ತದೆ. ಒಂದು ಪ್ರತ್ಯೇಕ ಕಂಪೆನಿಯಂತೆ. ಈ ಖಾತೆಗೆ ಬರುವ ಹಣ ಮತ್ತು ಅದರಿಂದ ಹೊರ ಹೋಗುವ ಹಣದ ಬಗ್ಗೆ ಕಾನೂನುಗಳಿವೆ. ಈ ಬಗ್ಗೆ ಕೂಡಾ ಎಚ್ಚರ ಅಗತ್ಯ.
ನಿಮ್ಮ ಪರಿಸ್ಥಿತಿಗನುಗುಣವಾಗಿ ಇದನ್ನು ಹೇಗೆ ಉಪಯೋಗಿಸಿಕೊಳ್ಳಬಹುದೆಂಬುದನ್ನು ಓರ್ವ ನುರಿತ ಚಾರ್ಟರ್ಡ್ ಅಕೌಂಟಂಟ್ ಬಳಿ ಚರ್ಚಿಸಿಯೇ ತಿಳಿದುಕೊಳ್ಳಬೇಕು. ಕಾನೂನುಗಳ ಒಂದು ಸಂಕೀರ್ಣ ಹೆಣಿಗೆಯಾದ ಆದಾಯ ತೆರಿಗೆ ಕಾನೂನನ್ನು ನಿಮ್ಮ ಸಂದರ್ಭಕ್ಕೆ ಅಳವಡಿಸಿ ಸೂಕ್ತ ಮಾರ್ಗದರ್ಶನ ನೀಡುವುದು ಓರ್ವ ತಜ್ಞ ಸಿಎಯಿಂದ ಮಾತ್ರ ಸಾಧ್ಯ.
ಕಾಕು ಅಂಕಣ ಎಷ್ಟೇ ಜನಪ್ರಿಯವಾದರೂ ಇಲ್ಲಿ ಎಲ್ಲರಿಗೂ ಸಲ್ಲುವಂತಹ ಸಮಗ್ರ ಮಾಹಿತಿ ಕೊಡಲು ಸಾಧ್ಯವಾಗುವುದಿಲ್ಲ. ಇಲ್ಲಿ ಕೊಟ್ಟ ವಿವರಗಳಾಚೆಗೂ ಹಲವು ಸೂಕ್ಷ್ಮ ವಿಚಾರಗಳಿರಬಹುದು. ಕರ ಸಂಬಂಧಿ ಆಸಕ್ತಿದಾಯಕ ವಿಚಾರಗಳನ್ನು ಎತ್ತಿ ಅದರ ಬಗ್ಗೆ ನಿಮ್ಮಲ್ಲಿ ಪ್ರಾಥಮಿಕ ಅರಿವು ಮೂಡಿಸುವುದು ಮಾತ್ರ ನಮ್ಮಿಂದ ಸಾಧ್ಯ. ಆ ಬಳಿಕ ನಿಮ್ಮ ಸಂದರ್ಭಕ್ಕೆ ಸೂಕ್ತವಾದ ವಿಚಾರಗಳನ್ನು ಆಳವಾದ ಅಧ್ಯಯನ ಮತ್ತು ತಜ್ಞ ಸಿಎಗಳ ನೆರವಿನಿಂದ ಮಂಥನ ನಡೆಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಿ. ಕೇವಲ ಒಂದು ಲೇಖನ ಓದಿ ಸ್ವಯಂ ವೈದ್ಯಕೀಯ ಯಾವತ್ತೂ ಮಾಡಬಾರದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.