ಹೊಸ ರೂಪದಲ್ಲಿ ಬಂದಿದೆ ಪಬ್ಲಿಕ್ ಪ್ರಾವಿಡೆಂಟ್ ಫಂಡ್
Team Udayavani, Dec 23, 2019, 4:11 AM IST
ಪಿಪಿಎಫ್ ಎನ್ನುವುದು ಗೋಲ್ಡನ್ ಇನ್‌ವೆಸ್ಟ್‌ಮೆಂಟ್ ಎಂದು ಕರೆಯಲಾಗುತ್ತದೆ. ಈ ಹೂಡಿಕೆಯಲ್ಲಿ ಲಾಗಾಯ್ತಿನಿಂದ ಬಂದಂತಹ ಕೆಲ ಮುಖ್ಯ ಅಂಶಗಳನ್ನು ಇನ್ನೊಮ್ಮೆ ಅವಲೋಕಿಸೋಣ…
ನಮ್ಮ ಉದ್ಯೋಗದ ಹೊರಗೆ ನಾವೇ ಸ್ವಯಂ ಖಾಸಗಿಯಾಗಿ ಪೋಸ್ಟಾಫೀಸು, ಬ್ಯಾಂಕುಗಳಲ್ಲಿ ಮಾಡುವ ಪ್ರಾವಿಡೆಂಟ್ ಫಂಡ್ ಅನ್ನು ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಅಥವಾ ಪಿಪಿಎಫ್ ಎನ್ನುತ್ತೇವೆ. ಇದು ಉದ್ಯೋಗಿಗಳಿಗೆ ಕಂಪೆನಿಗಳು ನೀಡುವ ಎಂಪ್ಲಾಯೀಸ್ ಪ್ರಾವಿಡೆಂಟ್ ಫಂಡ್ ಅಥವಾ ಇಪಿಎಫ್ಗಿಂತ ಭಿನ್ನ. ಸಾರ್ವಜನಿಕ ಕ್ಷೇತ್ರದಲ್ಲಿ ಈವರೆಗೆ ಚಾಲ್ತಿಯಲ್ಲಿದ್ದದ್ದು ಪ್ರಾವಿಡೆಂಟ್ ಫಂಡ್ ಸ್ಕೀಮ…- 1968. ಗವರ್ನಮೆಂಟ್ ಸೇವಿಂಗ್ ಪ್ರೊಮೋಶನ್ ಆ್ಯಕ್ಟ್ – 1873 ಅಡಿಯಲ್ಲಿ ಬರುವ ಈ ಪಿಪಿಎಫ್ ಇದೀಗ ಸಂಪೂರ್ಣವಾಗಿ ನವೀಕರಿಸಲ್ಪಟ್ಟು ಪಿಪಿಎಫ್- 2019 ಎಂಬ ಹೆಸರಿನೊಂದಿಗೆ ಡಿ.12ರಿಂದ ಜಾರಿಗೆ ಬಂದಿದೆ. ಇನ್ನು ಮುಂದೆ 1968ರ ಪಿಪಿಎಫ್ ಬದಲಿಗೆ 2019ರ ಹೊಸ ಪಿಪಿಎಫ್ ಜಾರಿಯಲ್ಲಿರುತ್ತದೆ.
ಹೊಸ ಪಿಪಿಎಫ್ ಕಾಯಿದೆಯಲ್ಲಿ ಈ ಕೆಳಗಿನ ಕೆಲ ಬದಲಾವಣೆಗಳನ್ನು ತರಲಾಗಿದೆ. ಉಳಿದಂತೆ ಹಳೆಯ ಕಾಯಿದೆಯಲ್ಲಿನ ಬಹುತೇಕ ಅಂಶಗಳನ್ನು ಮುಂದುವರಿಸಲಾಗಿದೆ.
1. ಅವಧಿ ಪೂರ್ವ ಮುಕ್ತಾಯ
ಪಿಪಿಫ್ 15 ವರ್ಷಗಳ ಖಾತೆ. 15 ವರ್ಷ ಮುಗಿದ ಬಳಿಕ ಪ್ರತಿ 5 ವರ್ಷಗಳ ಅವಧಿಗೆ ಎಷ್ಟು ಬಾರಿ ಬೇಕಾದರೂ ಖಾತೆಯನ್ನು ರಿನ್ಯೂ ಮಾಡುತ್ತಾ ಹೋಗಬಹುದು. 15 ವರ್ಷಗಳ ಅವಧಿಗೆ ಮೊದಲು ಖಾತೆಯಿಂದ ಸಾಲ ಅಥವಾ ಅಂಶಿಕ ಹಿಂಪಡೆತ ಪಡೆಯುವ ಅವಕಾಶ ಇತ್ತು. ಅಲ್ಲದೆ, 2016ರಲ್ಲಿ ಪಿಪಿಎಫ್ ಖಾತೆಯನ್ನು ಅವಧಿ ಪೂರ್ವ ಮುಕ್ತಾಯಗೊಳಿಸುವ ಅವಕಾಶವನ್ನು ನೀಡಿತ್ತು. ಖಾತೆ ತೆರೆದ ವರ್ಷದ ಕೊನೆಯಿಂದ (ಮಾರ್ಚ್ 31, ಆ ವರ್ಷ) 5 ವರ್ಷಗಳು ಕಳೆದ ಬಳಿಕ ಒಂದು ಖಾತೆಯನ್ನು ಎರಡೂ ಮುಖ್ಯ ಕಾರಣಗಳಿಗೆ ಕ್ಲೋಸ್ ಮಾಡಲು ಅನುಮತಿ ನೀಡಿತ್ತು. ಮೊದಲನೆಯದಾಗಿ ಸ್ವಂತ, ಅವಲಂಬಿತ ಮಕ್ಕಳು, ಪತಿ/ಪತ್ನಿ, ಹೆತ್ತವರಿಗೆ ಮರಣಾಂತಿಕ ಕಾಯಿಲೆ ಎದುರಾದಾಗ ಮತ್ತು ಎರಡನೆಯದಾಗಿ ಭಾರತ/ಪರದೇಶದಲ್ಲಿ ಸ್ವಂತ ಅಥವಾ ಅವಲಂಬಿತ ಮಕ್ಕಳ ಉನ್ನತ ಶಿಕ್ಷಣಕ್ಕೆ ಅವಧಿ ಪೂರ್ವ ಖಾತೆ ಸಮಾಪ್ತಿ ಮಾಡಬಹುದಿತ್ತು. ಅದರೆ ಇಂತಹ ಸಮಾಪ್ತಿಯ ಸಂದರ್ಭದಲ್ಲಿ ಖಾತೆಯ ಮೇಲೆ ನೀಡಿದ ಬಡ್ಡಿ ದರದಿಂದ ಶೇ.1 ಕಡಿತಗೊಳಿಸಿ ಖಾತೆಯ ಲೆಕ್ಕ ಚುಕ್ತ ಮಾಡಲಾಗುತ್ತಿತ್ತು. ಇದೀಗ 2019ರ ಕಾನೂನಿನಲ್ಲಿ ಇನ್ನೊಂದು ಹೆಚ್ಚುವರಿ ಕಾರಣಕ್ಕಾಗಿ – ಅಂದರೆ, ಖಾತೆದಾರ ದೇಶ ಬಿಟ್ಟು ಪರದೇಶಕ್ಕೆ ಹೋಗಿ ಎನ್ನಾರೈ ಆದರೆ ಕೂಡಾ ಅವಧಿ ಪೂರ್ವ ಖಾತೆ ಸಮಾಪ್ತಿ ಮಾಡುವ ಅವಕಾಶ ನೀಡಲಾಗಿದೆ.
2. ಸಾಲದ ಬಡ್ಡಿ
ಈ ಖಾತೆಯಲ್ಲಿ ಸಾಲವನ್ನೂ ಕೂಡಾ ಪಡೆಯಬಹುದು. ಖಾತೆ ತೆರೆದ ಮೂರನೇ ವರ್ಷದಿಂದ ಮೊದಲ್ಗೊಂಡು ಹಿಂದಿನ ಎರಡನೆಯ ವರ್ಷದ ಕೊನೆಗಿದ್ದ ಬ್ಯಾಲನ್ಸ್ ಮೊತ್ತದ ಶೇ. 25ರಷ್ಟು ಸಾಲವನ್ನು ಪಡೆದು ಅದನ್ನು 36 ಕಂತುಗಳಲ್ಲಿ ಮರುಪಾವತಿ ಮಾಡಬಹುದಾಗಿದೆ. ಈ ಬಡ್ಡಿದರವನ್ನು ಪ್ರಚಲಿತ ಪಿಪಿಎಫ್ ಬಡ್ಡಿ+ಶೇ.2 ಎಂದು ಲೆಕ್ಕ ಹಾಕಲಾಗುತ್ತಿತ್ತು. (ಪ್ರಸ್ತುತ ಶೇ. 9.9). ಏಳನೆಯ ವರ್ಷದಿಂದ ಅಂಶಿಕ ವಾಪಸಾತಿಯ ಸೌಲಭ್ಯವಿರುವ ಕಾರಣ ಸಾಲ ಸಿಗಲಾರದು. ಇದೀಗ ಹೊಸ ಪಿಪಿಎಫ್ ಕಾನೂನಿನನ್ವಯ ಹೆಚ್ಚುವರಿ ಶೇ.1 ಬಡ್ಡಿ ನೀಡಿದರೆ ಸಾಕು. (ಪ್ರಸ್ತುತ ಶೇ.8.9)
3. ಡೆಪಾಸಿಟುಗಳು
ಈವರೆಗೆ ಕನಿಷ್ಟ ರೂ. 5 ರಂತೆ ವರ್ಷಕ್ಕೆ ಗರಿಷ್ಠ 12 ಡೆಪಾಸಿಟುಗಳನ್ನು ಮಾತ್ರ ಮಾಡಲು ಸಾಧ್ಯವಿತ್ತು. ಇದೀಗ ಕನಿಷ್ಠ ರೂ. 50 ರಂತೆ ವರ್ಷಕ್ಕೆ ಎಷ್ಟು ಬಾರಿಯಾದರೂ ಡೆಪಾಸಿಟ್ ಮಾಡುವ ಸೌಲಭ್ಯ ಕಲ್ಪಿಸಲಾಗಿದೆ. ಆದರೆ ವರ್ಷವೊಂದರ ಒಟ್ಟು ಮೊತ್ತ ಕನಿಷ್ಠ ರೂ. 500 ಹಾಗೂ ಗರಿಷ್ಟ ರೂ. 1,50,000 ಎಂಬುದರಲ್ಲಿ ಯಾವುದೇ ಬದಲಾವಣೆಯಿಲ್ಲ. ಈ ಗರಿಷ್ಠ ರೂ. ಒಂದೂವರೆ ಲಕ್ಷ ನೀವು ಗಾರ್ಡಿಯನ್ ಆಗಿರುವಂತಹ ಮೈನರ್ ಮಕ್ಕಳ ಖಾತೆಗಳನ್ನು ಕೂಡಾ ಸೇರಿಸಿ ಲೆಕ್ಕ ಹಾಕಲಾಗುತ್ತದೆ.
4. ಇವಲ್ಲದೆ ಪಿಪಿಎಫ್ ಬಳಕೆಯಲ್ಲಿನ ಫಾರ್ಮು ನಮೂನೆಗಳಲ್ಲಿ ಬದಲಾವಣೆಗಳು ಬಂದಿವೆ. ಅವಷ್ಟು ಮಹತ್ತರದ್ದಲ್ಲ. ಇವಿಷ್ಟು ಈ ಪಿಪಿಎಫ್ ಕಾನೂನಿನಲ್ಲಿ ಬಂದಿರುವ ಮುಖ್ಯ ಬದಲಾವಣೆಗಳು. ಉಳಿದಂತೆ ಹಳೆಯ ಕಾನೂನಿನ ಎಲ್ಲಾ ಅಂಶಗಳನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ. ಪಿಪಿಎಫ್ ಎನ್ನುವುದು ಗೋಲ್ಡನ್ ಇನ್‌ವೆಸ್ಟ್‌ಮೆಂಟ್ ಎಂದು ಕರೆಯಲಾಗುತ್ತದೆ. ಈ ಹೂಡಿಕೆಯಲ್ಲಿ ಲಾಗಾಯ್ತಿನಿಂದ ಬಂದಂತಹ ಕೆಲ ಮುಖ್ಯ ಅಂಶಗಳನ್ನು ಇನ್ನೊಮ್ಮೆ ಅವಲೋಕಿಸೋಣ:
ಬಡ್ಡಿದರ
ಪಿಪಿಎಫ್ ಮತ್ತಿತರ ಸಣ್ಣ ಉಳಿತಾಯ ಯೋಜನೆಯಲ್ಲಿ ಪ್ರತಿ ತ್ತೈಮಾಸಿಕವೂ ಹೊಸ ಬಡ್ಡಿದರವನ್ನು ಘೋಷಿಸುತ್ತದೆ. ಇದು ಸರಕಾರದ ಸಾಲ ಪತ್ರದ ಆಧಾರದ ಮೇಲೆ ನಿಗದಿಯಾಗುತ್ತದೆ. ಈ ರೀತಿ ಕಾಲಕಾಲಕ್ಕೆ ಸರಕಾರ ನಿಗದಿಪಡಿಸಿದ ಬಡ್ಡಿದರವನ್ನು (ಸದ್ಯಕ್ಕೆ ಶೇ. 7.9 ವಾರ್ಷಿಕ) ಪ್ರತಿ ತಿಂಗಳ 5 ರಿಂದ 30/31 ರ ಒಳಗಿನ ಕನಿಷ್ಟ ಮೊತ್ತದ ಮೇಲೆ ನೀಡಲಾಗುತ್ತದೆ. ಹಾಗಾಗಿ ಪಿಪಿಎಫ್ನಲ್ಲಿ ದುಡ್ಡು ಹೂಡುವವರು ತಿಂಗಳ 5ನೆಯ ತಾರೀಕಿನ ಒಳಗೆ ದುಡ್ಡು ಜಮೆ ಮಾಡಲು ಇಷ್ಟಪಡುತ್ತಾರೆ. ಈ ರೀತಿ ಲೆಕ್ಕ ಹಾಕಿದ ಬಡ್ಡಿಯನ್ನು ವರ್ಷಕ್ಕೊಮ್ಮೆ ಮಾರ್ಚ್ 31ಕ್ಕೆ ಖಾತೆಗೆ ಕ್ರೆಡಿಟ್ ಮಾಡಲಾಗುತ್ತದೆ. ಆದುದರಿಂದ ಇದರಲ್ಲಿ ವಾರ್ಷಿಕವಾಗಿ ಬಡ್ಡಿ ಚಕ್ರೀಕೃತವಾಗುತ್ತದೆ.
ಕರ ವಿನಾಯಿತಿ
ಇದರಲ್ಲಿ ದುಡ್ಡನ್ನು ಹೂಡುವ ಹೊತ್ತಿಗೆ ಸೆಕ್ಷನ್ 80ಸಿ ಅಡಿಯಲ್ಲಿ ರೂ. 1,50,000ಕ್ಕೆ ಆದಾಯ ವಿನಾಯಿತಿ ಸಿಗುತ್ತದೆ. ಬಳಿಕ ಇದರಲ್ಲಿ ಉತ್ಪತ್ತಿಯಾಗುವ ವಾರ್ಷಿಕ ಬಡ್ಡಿಯೂ ಯಾವುದೇ ಮಿತಿಯಿಲ್ಲದೆ ಸೆಕ್ಷನ್ 10ರ ಅಡಿಯಲ್ಲಿ ಕರ ವಿನಾಯಿತಿಗೆ ಒಳಗಾಗುತ್ತದೆ. ಅದಲ್ಲದೆ, ಇದರಿಂದ ಪಡೆಯುವ ಅಂತಿಮ ಮೊತ್ತವೂ ಸೆಕ್ಷನ್ 10ರಡಿಯಲ್ಲಿ ಸಂಪೂರ್ಣ ಕರ ವಿನಾಯಿತಿಯುಳ್ಳದ್ದು ಆಗಿರುತ್ತದೆ. ಇದನ್ನು ಕರ ಭಾಷೆಯಲ್ಲಿ EXEMPT -EXEMPT- EXEMPT ಅಥವಾ -E-E-E ಎನ್ನುತ್ತಾರೆ. ಆದಾಯ ಕರ ಕಾನೂನಿನಲ್ಲಿ ಇದಕ್ಕಿಂತ ಮಿಗಿಲಾದ ಕರ ವಿನಾಯಿತಿಯನ್ನು ಯಾವುದೇ ಯೋಜನೆಗೆ ನೀಡಲು ಸಾಧ್ಯವಿಲ್ಲ. ಈ ರೀತಿ ಮೂರೂ ಹಂತದಲ್ಲಿ ಕರ ವಿನಾಯಿತಿ ಸಿಗುವುದೇ ಈ ಯೋಜನೆಯ ಒಂದು ದೊಡ್ಡ ಹೆಗ್ಗಳಿಕೆ.
ಮೆಚ್ಯೂರಿಟಿ ಮತ್ತು ವಿಸ್ತರಣೆ
15 ವರ್ಷಗಳಲ್ಲಿ ಪಕ್ವವಾಗುವ ಈ ಖಾತೆಯನ್ನು ಮೆಚ್ಯೂರಿಟಿಯಾದ ಮೇಲೆ 1 ವರ್ಷದ ಒಳಗಾಗಿ ಮುಂದಿನ 5 ವರ್ಷಗಳ ಅವಧಿಗೆ ಎಷ್ಟು ಬಾರಿಯಾದರೂ ಮುಂದುವರಿಸುತ್ತಲೇ ಹೋಗಬಹುದು. ಇಂತಹ ಮುಂದುವರಿಕೆಯನ್ನು ಹೊಸ ವಾರ್ಷಿಕ ಹೂಡಿಕೆಯೊಂದಿಗೆ ಅಥವಾ ಏನೇನೂ ಹೂಡಿಕೆಯಿಲ್ಲದೆಯೂ ಮಾಡಬಹುದು. ಎಲ್ಲಾ ಸಂದರ್ಭಗಳಲ್ಲಿಯೂ ನಿಗದಿತ ಕರ ವಿನಾಯಿತಿಯುಳ್ಳ ಬಡ್ಡಿ ಮೊತ್ತವು ವರ್ಷಾಂತ್ಯದಲ್ಲಿ ಸೇರ್ಪಡುತ್ತಲೇ ಹೋಗುತ್ತದೆ.
ಅಂಶಿಕ ಹಿಂಪಡೆತ
ಪಿಪಿಎಫ್ ಒಂದು 15 ವರ್ಷಗಳ ದೀರ್ಘಕಾಲಿಕ ಹೂಡಿಕೆಯಾಗಿ ಮೇಲ್ನೋಟಕ್ಕೆ ಕಂಡು ಬಂದರೂ ಖಾತೆ ತೆರೆದ 7ನೇ ವರ್ಷದಿಂದ ಮೊದಲ್ಗೊಂಡು ಪ್ರತಿವರ್ಷವೂ ಹಿಂದಿನ 4ನೆಯ ವರ್ಷದ ಮೊತ್ತದ ಶೇ. 50ರಷ್ಟು ಹಣವನ್ನು (ಅಥವಾ ಕಳೆದ ವರ್ಷಾಂತ್ಯದ ಬ್ಯಾಲೆನ್ಸ್; ಯಾವುದು ಕಡಿಮೆಯೋ, ಅದು) ವಾಪಾಸು ಪಡೆಯಬಹುದು. ಈ ರೀತಿ ವಾಪಾಸು ಪಡೆದ ಮೊತ್ತವನ್ನು ಯಾವುದೇ ಕಾರಣಕ್ಕೂ ಉಪಯೋಗಿಸಬಹುದು. ಅಂದರೆ ಅದನ್ನೇ ವಾಪಾಸು ಪಿಪಿಎಫ್ ಖಾತೆಗೆ ಹೊಸ ಹೂಡಿಕೆಯಾಗಿಯೂ ಉಪಯೋಗಿಸಬಹುದು. ಈ ರೀತಿ ಹೊಸ ದುಡ್ಡು ಇಲ್ಲದೆಯೇ ಹಳೆಯ ದುಡ್ಡನ್ನೇ ಮರುಹೂಡಿ ಪಿಪಿಎಫ್ ಖಾತೆಯಲ್ಲಿ ಪುನಃ ಪುನಃ ಕರ ವಿನಾಯಿತಿ ಪಡಕೊಳ್ಳಬಹುದು. ಈ ರೀತಿಯಲ್ಲಿ ನೋಡಿದರೆ 15 ವರ್ಷದ ಈ ಖಾತೆ ಬರೇ 6 ವರ್ಷಗಳ ಖಾತೆಯೇ ಸರಿ. 15 ವರ್ಷಗಳ ಖಾತೆಯನ್ನು ವಿಸ್ತರಿಸುವ ಸಂದರ್ಭದಲ್ಲಿ ಖಾತೆಯಲ್ಲಿರುವ ದುಡ್ಡಿನ ಶೇ. 60ನ್ನು ಆಂಶಿಕ ಹಿಂಪಡೆತವಾಗಿ ಪಡೆದುಕೊಳ್ಳಬಹುದಾಗಿದೆ.
ಅತ್ಯಂತ ಸುರಕ್ಷಿತ
ಪಿಪಿಎಫ್ ಅನ್ನು ಅತ್ಯಂತ ಸುರಕ್ಷಿತ ಎಂದು ಯಾಕೆ ಹೇಳುತ್ತಾರೆ ಅಂದರೆ ಇದಕ್ಕೆ ಭಾರತ ಸರಕಾರದ ಆಧಾರವಿದೆ. ಇದಕ್ಕೆ ಸರಕಾರವೇ ಗ್ಯಾರಂಟಿ. ಅದಲ್ಲದೆ, ಇದರಲ್ಲಿರುವ ದುಡ್ಡನ್ನು ಕೋರ್ಟ್ ಕೂಡಾ ಅಟ್ಯಾಚ್ ಮಾಡಲಾರದು. ದುರದೃಷ್ಟಾವಶಾತ್ ಯಾವುದಾದರು ವಿತ್ತೀಯ ವಿಪತ್ತು ಬಂದು ಎಲ್ಲವೂ ಕೋರ್ಟಿನ ಆಧೀನಕ್ಕೆ ಬಂದಲ್ಲಿಯೂ ಪಿಪಿಎಫ್ಲ್ಲಿರುವ ನಿಧಿ ಆ ವ್ಯಕ್ತಿಯ ಸ್ವಂತಕ್ಕೆ ಕೈಯಲ್ಲಿಯೇ ಉಳಿಯುತ್ತದೆ. ಇದು ಪ್ರಾವಿಡೆಂಟ್ ಫಂಡಿನ ಕಾನೂನಿನಲ್ಲಿಯೇ ಬಂದಿರುವ ಒಂದು ಉತ್ತಮ ಅಂಶ.
ಮೇಲ್ನೋಟಕ್ಕೆ ಅಷ್ಟೇನೂ ಆಕರ್ಷಕವಾಗಿ ಕಾಣದಿದ್ದರೂ ಯಾವುದೇ ಪ್ರಚಾರದ ಅಬ್ಬರವಿಲ್ಲದ, ಸದ್ಯದ ಸ್ಥಿತಿಯಲ್ಲಿಯೂ ಶೇ. 7.9 ಗ್ಯಾರಂಟಿ ಬಡ್ಡಿ ನೀಡುವ, ಉ ಉ ಉ ಕರವಿನಾಯತಿ ಪದ್ಧತಿಯನ್ನು ಅನುಸರಿಸುವ ದೀರ್ಘಕಾಲಕ್ಕೆ ಉಳಿತಾಯವನ್ನು ಮಾಡಿಸಿಕೊಳ್ಳುವ ಈ ಸರಕಾರಿ ಕೃಪಾಪೋಷಿತ ಪಿಪಿಎಫ್ ಎಂಬ ಭವಿಷ್ಯ ನಿಧಿಯನ್ನು ಹೂಡಿಕೆದಾರರ ಸ್ವರ್ಗವೆಂದೇ ಪರಿಗಣಿಸಲಾಗುತ್ತದೆ. ಪ್ರತಿಯೊಬ್ಬ ನಾಗರಿಕನೂ ಇದರಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ದುಡ್ಡನ್ನು ಹೂಡಿಯೇ ಬೇರೆ ಯೋಜನೆಗಳತ್ತ ದೃಷ್ಟಿ ಹರಿಸಬೇಕೆಂಬುದೇ ನಮ್ಮ ಆಶಯ. ಇದೊಂದು ಸಾರ್ವಕಾಲಿಕ ಉತ್ತಮ ಹೂಡಿಕೆ.
ಜಯದೇವ ಪ್ರಸಾದ ಮೊಳೆಯಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Surathkal: ಸಿಲಿಂಡರ್ ಸ್ಫೋ*ಟ ಪ್ರಕರಣ; ಮತ್ತೋರ್ವ ಮಹಿಳೆಯ ಸಾವು
Daily Horoscope: ದೀರ್ಘಕಾಲದ ಸಮಸ್ಯೆಗಳಿಂದ ಬಿಡುಗಡೆ, ಅಪರಿಚಿತರೊಡನೆ ವಾದ ಬೇಡ
Vijay Hazare Trophy: ಅರುಣಾಚಲ ಎದುರಾಳಿ; ರಾಜ್ಯಕ್ಕೆ 4ನೇ ಜಯದ ನಿರೀಕ್ಷೆ
Afzalpur: ಹುಂಡಿ ನೋಟಿನಲ್ಲಿ “ನಮ್ಮ ಅತ್ತೆ ಬೇಗ ಸಾಯಬೇಕು’ ಬರಹ ಪತ್ತೆ!
Kasaragod: ಎಟಿಎಂಗೆ ತುಂಬಿಸಲು ತಂದ 50 ಲಕ್ಷ ರೂ. ಕಳವು ಮಾಡಿದ ಸೂತ್ರಧಾರನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.