ಉಪಾಧ್ಯಾಯರ ಬಾಂಡ್ ಫಂಡ್ ವ್ಯಾಮೋಹ
Team Udayavani, Oct 2, 2017, 8:05 AM IST
“ಬಾಂಡ್ ಫಂಡ್‌ಗಳೂ ಕೂಡಾ ರಿಸ್ಕಿಯೇ. ಬಡ್ಡಿ ದರ ಆಧಾರಿತ ರಿಸ್ಕ್ ಖಂಡಿತಾ ಇದೆ. ಶೇರು ಬೆಲೆ ತಮ್ಮ ಬಿಸಿನೆಸ್ ಹೊಂದಿಕೊಂಡು ಏರಿಳಿದಂತೆ ಬಾಂಡ್ ಬೆಲೆ ಪ್ರಚಲಿತ ಬಡ್ಡಿದರವನ್ನು ಹೊಂದಿಕೊಂಡು ಏರಿಳಿಯುತ್ತವೆ. ಬಡ್ಡಿದರ ಇಳಿದಂತೆ ಬಾಂಡ್ ದರ ಏರುತ್ತದೆ ಹಾಗೂ ಬಡ್ಡಿದರ ಏರಿದಂತೆ ಬಾಂಡ್ ದರ ಇಳಿಯುತ್ತದೆ. ಇದನ್ನು ಅರ್ಥ ಮಾಡಿಕೊಂಡು ಮುಂದೆ ಬಡ್ಡಿ ದರ ಏರುವುದೋ ಇಳಿಯುವುದೋ ಎಂದು ನಿರೀಕ್ಷಿಸಿಕೊಂಡೇ ಬಾಂಡ್‌ಗಳಲ್ಲಿ ದುಡ್ಡು ಹಾಕಲು ಹೋಗಬೇಕು.’
ಮೊನ್ನೆ ಒಂದಿನ ಉಡುಪಿ ಬಸ್‌ಸ್ಟಾಂಡ್ ಬಳಿ ಉಪಾಧ್ಯಾಯರು ಸಿಕ್ಕರು. ಅವರು ನನ್ನ ಹಳೆಯ ಪರಿಚಯ. ಈಗಷ್ಟೇ ವೃತ್ತಿಯಿಂದ ನಿವೃತ್ತರಾಗಿದ್ದ ಉಪಾಧ್ಯಾಯರು ಲವಲವಿಕೆ ಯಿಂದಿದ್ದರು. ಪಕ್ಕದ ಹೋಟೆಲಿನಲ್ಲಿ ಕುಳಿತು ಮಸಾಲ ದೋಸೆ ತಿನ್ನುತ್ತಾ ತಮ್ಮ ಕಾಸು ಕುಡಿಕೆಯ ಬಗ್ಗೆ ಮಾತು ಬಿಚ್ಚಿದರು. ನಿವೃತ್ತಿಯೊಂದಿಗೆ ಕೈಯಲ್ಲಿ ಐದಾರು ಲಕ್ಷ ದುಡ್ಡು ಬಂದ ಹಾಗಿತ್ತು. ಶೇರು ಮಾರುಕಟ್ಟೆ ಎಂಬ ಜೂಜಾಟ ಅವರಿಗೆ ಆಗದು. ರಿಸ್ಕ್ ಎಂದರೆ ಅಲರ್ಜಿ. ಅದಕ್ಕೇ ಯಾವುದಾದರೂ ಒಳ್ಳೆಯ ಗ್ಯಾರಂಟಿಯುಳ್ಳ ಬಾಂಡ್ ಫಂಡ್ನಲ್ಲಿ ದುಡ್ಡು ತೊಡಗಿಸುವ ಗುಂಗಿನಲ್ಲಿದ್ದರು. ಕಳೆದ ಕೆಲ ವರ್ಷದಲ್ಲಿ ಹೆಚ್ಚಿನ ಬಾಂಡ್ ಫಂಡ್ಗಳು 10%-20% ಕನಿಷ್ಠ ಪ್ರತಿಫಲ ನೀಡಿದ್ದನ್ನು ಹಾಡಿ ಹೊಗಳತೊಡಗಿದರು. ರಿಸ್ಕೂ ಇಲ್ಲ ರಿಟರ್ನೂ ಚೆನ್ನಾಗಿದೆ ಎಂಬಂತೆ!
“ಬಾಂಡ್ ಫಂಡ್ನಲ್ಲಿ ದುಡ್ಡು ಹಾಕಬಹುದು, ಸಾರ್. ಆದರೆ ಗ್ಯಾರಂಟಿ ಪ್ರತಿಫಲ ಇರದು. ನಷ್ಟವಾಗಲೂಬಹುದು’ ಎಂದೆ. “ಅದು ಹೇಗೆ? ನಷ್ಟ ಆಗಲು ಸಾಧ್ಯವೇ ಇಲ್ಲ. ಆ ಫಂಡುಗಳು ಗಿಲ್ಟ್ ಪತ್ರಗಳಲ್ಲಿ ಮಾತ್ರವೇ ಹಾಕಿದರೆ ನಷ್ಟ ಬರೋದು ಹೇಗೆ? ಗಿಲ್ಟ… ಅಂದರೆ ಸರಕಾರದ ಸಾಲ ಪತ್ರ ಅಲ್ಲವೇ? ಸವೆರಿನ್ ಗ್ಯಾರಂಟಿಯೊಂದಿಗೆ ಭಾರತ ಸರಕಾರದ ಭದ್ರತೆಯೊಂದಿಗೆ ಬರುತ್ತದಲ್ಲವೇ?’ ಎಂದು ಒಂದು ಬ್ರಹ್ಮಾಸ್ತ್ರ ಎಸೆದು ವಿಜಯದ ನಗೆ ಬೀರಿದರು. ಉಪಾಧ್ಯಾಯರಿಗೆ ಸಾಲಪತ್ರಗಳ ಬಗ್ಗೆ ಜಾಸ್ತಿ ಮಾಹಿತಿ ಇಲ್ಲ. ಅಲ್ಲಿಲ್ಲಿಂದ ಅಲ್ಪಸ್ವಲ್ಪ ತಿಳಿದುಕೊಂಡಿದ್ದಾರೆ ಎಂದು ಗೊತ್ತಾಯಿತು. ಖಾಲಿಯಾದ ಮಸಾಲೆ ದೋಸೆ ಪ್ಲೇಟನ್ನು ಪಕ್ಕಕ್ಕೆ ಸರಿಸಿ, ಲೋಟದಲ್ಲಿದ್ದ ನೀರು ಕುಡಿದು, ಒಂದು ಪುಟ್ಟ ಭಾಷಣಕ್ಕೆ ರೆಡಿಯಾದೆ. “ಅದು ಹಾಗಲ್ಲ. ಭದ್ರತೆಯ ಮಟ್ಟಿಗೆ ನೀವು ಹೇಳಿದ್ದೆಲ್ಲವೂ ಸರಿಯಾದರೂ, ಬಿಳಿಯಿರುವುದೆಲ್ಲಾ ಹಾಲಲ್ಲ. ಸುಣ್ಣದ ನೀರೂ ಆಗಿರಬಹುದು.’
“ಅಂದ್ರೆ ಏನರ್ಥ? ಸ್ವಲ್ಪ ವಿವರಿಸಿ’ ಉಪಾಧ್ಯಾಯರು ಹುಬ್ಬೇರಿಸಿದರು. “ನೋಡಿ ಮೂಲಭೂತವಾಗಿ ಹೂಡಿಕೆಯಲ್ಲಿ ಇಕ್ವಿಟಿ (ಶೇರು) ಮತ್ತು ಡೆಟ್ (ಸಾಲಪತ್ರ) ಎಂಬ ಎರಡು ವರ್ಗಗಳು. ಹೆಚ್ಚಿನವರು ಶೇರಿಗೆ ಸಂಬಂಧಿತ ರಿಸ್ಕ್ ಬೇಡ ಎಂದು ಸಾಲಪತ್ರಗಳ ಮೊರೆ ಹೋಗುತ್ತಾರೆ. ಅದರಲ್ಲಿ ನಿಗದಿತ ಬಡ್ಡಿ ದರ ನಮೂದಿಸಲ್ಪಟ್ಟಿರುತ್ತದೆ. ಮತ್ತು ಆದಷ್ಟು ಭದ್ರ ಸಂಸ್ಥೆಗಳ ಸಾಲಪತ್ರವನ್ನು ಖರೀದಿಸಿದರೆ ಭದ್ರತೆಯೂ ಇದೆ, ಉತ್ತಮ ಪ್ರತಿಫಲವೂ ಇದೆ ಎಂದು ಹಲವರು ತಿಳಿದುಕೊಳ್ಳುತ್ತಾರೆ.’
“ಹೌದು. ಅಲ್ವೇ ಮತ್ತೆ?’ ಉಪಾಧ್ಯಾಯರು ಮಸಾಲೆ ದೋಸೆ ಮುಗಿಸಿ ನನ್ನನ್ನೇ ದೃಷ್ಟಿಸಿದರು. “ಅದು ಸರಿ ಅಲ್ಲ. ಇಲ್ನೋಡಿ. ಸಾಲ ಪತ್ರಗಳ ಮ್ಯೂಚುವಲ್ ಫಂಡ್ ಅಥವಾ ಡೆಟ್ ಫಂಡ್‌ಗಳ ಮಹಿಮೆ ಅಪಾರ. ಅವುಗಳು ಹಲವಾರು ಅವತಾರಗಳನ್ನೆತ್ತಿ ತಮ್ಮ ಸಹಸ್ರ ನಾಮಗಳೊಂದಿಗೆ ಮಾರುಕಟ್ಟೆಗೆ ಬರುತ್ತವೆ. ಉದಾಹರಣೆಗಾಗಿ,
1 ಸಾವೆರಿನ್ ಭದ್ರತೆಯುಳ್ಳ ಸರಕಾರೀ ಸಾಲಪತ್ರ (ಜಿ-ಸೆಕ್ಯೂರಿಟೀಸ್) ಗಳಲ್ಲಿ ಹೂಡುವ ಗಿಲ್ಟ್ ಫಂಡ್‌ಗಳು
2 ಕಂಪೆನಿ (ಕಾರ್ಪೋರೆಟ್) ಡಿಬೆಂಚರ್ಸ್ ಮತ್ತು ಸರಕಾರಿ ವಿತ್ತೀಯ ಸಂಸ್ಥೆಗಳ ಬಾಂಡ್‌ಗಳಲ್ಲಿ ಹೂಡುವ ಬಾಂಡ್ ಫಂಡ್‌ಗಳು.
3 ಆರ್.ಬಿ.ಐ ಮತ್ತು ಅಂತರ್ ಬ್ಯಾಂಕಿನ ದೈನಂದಿನ ನಗದು ಲೇವಾದೇವಿ (ಮನಿ ಮಾರ್ಕೆಟ್)ಗೆ ಸಂಬಂಧಪಟ್ಟ ಅಲ್ಪಾವಧಿಯ (ಶಾರ್ಟ್ ಟರ್ಮ್) ಲಿಕ್ವಿಡ್ ಫಂಡ್.
4 ಸಾಲಪತ್ರ ಮತ್ತು ಶೇರುಗಳ ಮಿಕ್ಸ್ ಉಳ್ಳ ಬಾಲನ್ಸೆಡ್ ಫಂಡ್, ಮಂಥ್ಲಿ ಇನ್‌ಕಂ ಪ್ಲಾನ್ (ಎಮ….ಐ.ಪಿ)
5 ನಿಗಧಿತ ಅವಧಿಯ (ಕ್ಲೋಸ್ಡ್ ಎಂಡೆಡ್) ಫಿಕ್ಸ್ ಮೆಚೂರಿಟಿ ಪ್ಲಾನ್ (ಎಫ್.ಎಮ….ಪಿ)
6 ಬ್ಯಾಂಕು ಮತ್ತು ಕಂಪೆನಿಗಳ ಫಿಸ್ಡ್ ಡೆಪಾಸಿಟ್‌ಗಳು. (ಎಫ್.ಡಿ)
ಇವೆಲ್ಲಾ ಡೆಟ್‌ಗಳೇ. ಎಲ್ಲವೂ ಬೇರೆ ಬೇರೆ. ಪ್ರತಿಯೊಂದಕ್ಕೂ ಅದರದ್ದೇ ಆದ ಗುಣದೋಷಗಳಿವೆ. ಸರಿಯಾಗಿ ಅರಿತೇ ನಮಗೆ ಅತಿಸೂಕ್ತವಾದ ಸ್ಕೀಂನಲ್ಲಿ ದುಡ್ಡು ಹೂಡಬೇಕು.’ ಪೀಠಿಕೆ ಶಾಸ್ತ್ರ ಮುಗಿಸಿ ಇನ್ನೊಂದಷ್ಟು ನೀರು ಕುಡಿದೆ.
ಉಪಾಧ್ಯಾಯರೂ ಸ್ವಲ್ಪ ನೀರು ಕುಡಿದು ಬಳಿಗೆ ಬಂದ ವೈಟರಿಗೆ ಎರಡು ಕಾಫಿ ಎಂದು ಆದೇಶಿಸಿ ಕಾಫಿ ಆಗಬಹುದಲ್ಲವೇ? ಎಂದು ಸ್ವಲ್ಪ ಬಿಗುವಾಗಿಯೇ ನನ್ನ ಮುಖ ನೋಡಿದರು. ಮಾತು ಮುಂದುವರಿಸಿದೆ. “ಈಗ ನೀವು ಹೇಳಿದ್ದು, ಬಾಂಡ್ ಫಂಡ್! ಸದ್ಯಕ್ಕೆ ಅದನ್ನು ಮಾತ್ರ ನೋಡೋಣ. ಬಹುತೇಕ, ಮೊದಲಿನ ಎರಡು ನಮೂನೆಯ ಫಂಡ್‌ಗಳನ್ನು ಬಾಂಡ್ ಫಂಡ್ ಎಂದು ಸಡಿಲವಾಗಿ ಕರೆಯುತ್ತಾರೆ. ಅಂದರೆ ಸರಕಾರಿ ಸಾಲಪತ್ರದ ಗಿಲ್ಟ… ಫಂಡ್‌ಗಳು ಮತ್ತು ಕಂಪೆನಿ ಡಿಬೆಂಚರ್ಸ್ ಹಾಗೂ ಸರಕಾರಿ ವಿತ್ತೀಯ ಸಂಸ್ಥೆಗಳ ಬಾಂಡ್ ಫಂಡ್‌ಗಳು’ “ಸರಿ ಗೊತ್ತಾಯಿತು. ಅವುಗಳಲ್ಲಿ ಲಾಸ್ ಬರುವುದು ಹೇಗೆ ಅದು ಮೊದು ಹೇಳಿ’. ಉಪಾಧ್ಯಾಯರಿಗೆ ಸಹನೆ ಮೀರುತ್ತಿತ್ತು.
“ಅದು ಆ ಫಂಡ್‌ಗಳ ಕಾರ್ಯ ವೈಖರಿಯಿಂದ. ಸರಕಾರಿ ಗಿಲ್ಟ… ಪತ್ರವಿರಲಿ, ಕಂಪೆನಿ ಡಿಬೆಂಚರ್ಸ್ ಇರಲಿ, ವಿತ್ತ ಸಂಸ್ಥೆಗಳ ಬಾಂಡ್‌ಗಳೇ ಇರಲಿ, ಅವೆಲ್ಲವೂ ಒಂದು ನಿರ್ದಿಷ್ಟ ಬಡ್ಡಿದರ (ಕೂಪನ್ ರೇಟ್) ಗಳೊಂದಿಗೆ ಬಿಡುಗಡೆಯಾಗುತ್ತವೆ. ಅಮೇಲೆ ಅವುಗಳು ಸಾಲಪತ್ರಗಳ ಮುಕ್ತ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತವೆ. ಮ್ಯೂಚುವಲ್ ಫಂಡ್‌ಗಳು ಇದೇ ಮಾರುಕಟ್ಟೆಯಲ್ಲಿ ಈ ಬಾಂಡುಗಳನ್ನು ಕೊಡುತ್ತಾರೆ, ಕೊಳ್ಳುತ್ತಾರೆ. ಮಾರಾಟವಾಗುತ್ತವೆ ಅಂದಮೇಲೆ ಅದಕ್ಕೊಂದು ಮಾರುಕಟ್ಟೆಯ ಬೆಲೆ ಇರುತ್ತದಲ್ಲವೇ? ಪ್ರಚಲಿತ ಬಡ್ಡಿದರ ಇಳಿದಂತೆಲ್ಲ ಹಳೆಯ ಹೆಚ್ಚಿನ ಬಡ್ಡಿದರ (ಕೂಪನ್ ರೇಟ್)ಗಳುಳ್ಳ ಬಾಂಡುಗಳ ಬೆಲೆ ಮಾರುಕಟ್ಟೆಯಲ್ಲಿ ಏರುತ್ತವೆ. ಅದರಿಂದಾಗಿ ಬಡ್ಡಿ ದರ ಇಳಿದಂತೆಲ್ಲ ಹಳೆಯ ಬಾಂಡ್ ಫಂಡುಗಳ ಮೌಲ್ಯ ಅಥವಾ ಎನ್.ಎ.ವಿ. ಹೆಚ್ಚಾಗುತ್ತಾ ಹೋಗುತ್ತದೆ. ಈ ರೀತಿಯಲ್ಲಿ ಇಳಿಮುಖ ಬಡ್ಡಿದರದ ಕಾಲದಲ್ಲಿ ಬಾಂಡ್ ಫಂಡುಗಳಿಗೆ ಸುಗ್ಗಿ. 10% ಯಾಕೆ 50% ಕೂಡಾ ಪ್ರತಿಫಲ ತೋರಿಸಬಹುದು. ಕಳೆದ ಕೆಲ ವರ್ಷಗಳಿಂದ ರಿಸರ್ವ್ ಬ್ಯಾಂಕು ಬಡ್ಡಿದರವನ್ನು ಸತತವಾಗಿ ಇಳಿಸುತ್ತಿದೆ ಅಲ್ಲವೇ? ಹಾಗಾಗಿ ಈ ವರ್ಷ ಉತ್ತಮ ಪ್ರತಿಫಲ ಸಿಕ್ಕಿತು. ಬಾಂಡುಗಳಲ್ಲಿ ಪ್ರತಿಫಲ ಬರುವುದು ಅದರಲ್ಲಿ ನಮೂದಿಸಿದ ಕೂಪನ್ ರೇಟ್ನಿಂತದ ಮಾತ್ರವಲ್ಲ; ಅದರ ಮಾರುಕಟ್ಟೆಯ ಸದ್ಯದ ಬೆಲೆಯಿಂದಲೂ.’
“ಹೌದಾ?’ ಎಂದು ಅಚ್ಚರಿಪಟ್ಟರು ಉಪಾಧ್ಯಾಯರು. ಬಿಗಿ ಕಡಿಮೆಯಾಗಿತ್ತು. ಮುಖದಲ್ಲಿ ಕುತೂಹಲ ಮೂಡಿತ್ತು. “ಹೌದು. ಆದರೆ, ಹಿಂದಿನ ಸಾಧನೆ ಭವಿಷ್ಯದ ಪ್ರತಿಫಲನ ಅಲ್ಲವಲ್ಲ? ಇದು ಶಾಸನವೇ ವಿಧಿಸಿದ ಎಚ್ಚರಿಕೆ. ಆದ್ರೆ ತಲೆಬುರುಡೆಯ ಚಿತ್ರ ನೋಡಿ ಯಾರಾದರೂ ಸಿಗರೇಟ್ ಸೇವನೆ ನಿಲ್ಲಿಸಿ¨ªಾರೆಯೇ? ಮ್ಯೂಚುವಲ್ ಫಂಡುಗಳಲ್ಲೂ ಹಾಗೇನೇ. ಹಿಂದಿನ ಸಾಧನೆಯನ್ನೇ ನೋಡಿ ಜನ ಮುಗಿ ಬಿದ್ದು ದುಡ್ಡು ಹೂಡುತ್ತಾರೆ, ಭವಿಷ್ಯವನ್ನು ನಿರೀಕ್ಷಿಸಿಕೊಂಡು ಅಲ್ಲ! ಅದರೆ, ಮುಂದೊಂದು ದಿನ ಬಡ್ಡಿದರ ಏರುಮುಖ
ವಾದಾಕ್ಷಣ ಬಾಂಡ್ ಫಂಡುಗಳು ಇಡೀ ಪ್ರಕ್ರಿಯೆ ಉಲ್ಟಾ ಆಗಿ ನಷ್ಟ ತೋರಿಸಲು ಆರಂಭಿಸುತ್ತದೆ. ಜನರು ಹೂಡಿದ ಹಣ ಕಳೆದುಕೊಳ್ಳುತ್ತಾರೆ. ಬಾಂಡ್ ಫಂಡ್‌ಗಳಲ್ಲಿ ಲಾಸ್ ಬರುವುದು ಹೀಗೆ’ ಅಂದೆ.
ಉಪಾಧ್ಯಾಯರಿಗೆ ಗೊತ್ತಾದಂತಿತ್ತು. ಯಾಕೆಂದರೆ ಅವರ ಮುಖ ಕಳೆಗುಂದಿತ್ತು. ಬಾಂಡ್ ಫಂಡ್‌ಗಳ ಕಾರ್ಯವೈಖರಿ ಮತ್ತು ಪ್ರತಿಫಲದ ತತ್ವ ಅವರು ಯೋಚಿಸಿದ್ದಕ್ಕಿಂತ ಬಹಳ ಭಿನ್ನವಾಗಿತ್ತು. ನಾನೇ ನಿಧಾನವಾಗಿ ಮುಂದುವರಿಸಿದೆ. “ಬಾಂಡ್ ಫಂಡು ಗಳೂ ಕೂಡಾ ರಿಸ್ಕಿಯೇ. ಬಡ್ಡಿ ದರ ಆಧಾರಿತ ರಿಸ್ಕ್ ಖಂಡಿತಾ ಇದೆ. ಶೇರು ಬೆಲೆ ತಮ್ಮ ಬಿಸಿನೆಸ್ ಹೊಂದಿಕೊಂಡು ಏರಿಳಿದಂತೆ ಬಾಂಡ್ ಬೆಲೆ ಪ್ರಚಲಿತ ಬಡ್ಡಿದರವನ್ನು ಹೊಂದಿಕೊಂಡು ಏರಿಳಿಯುತ್ತವೆ. ಬಡ್ಡಿದರ ಇಳಿದಂತೆ ಬಾಂಡ್ ದರ ಏರುತ್ತದೆ ಹಾಗೂ ಬಡ್ಡಿದರ ಏರಿದಂತೆ ಬಾಂಡ್ ದರ ಇಳಿಯುತ್ತದೆ. ಇದನ್ನು ಅರ್ಥ ಮಾಡಿಕೊಂಡು ಮುಂದೆ ಬಡ್ಡಿ ದರ ಏರುವುದೋ ಇಳಿಯುವುದೋ ಎಂದು ನಿರೀಕ್ಷಿಸಿಕೊಂಡೇ ಬಾಂಡ್‌ಗಳಲ್ಲಿ ದುಡ್ಡು ಹಾಕಲು ಹೋಗಬೇಕು.’ “ಹಾಗಾದರೆ ಸದ್ಯೋ ಭವಿಷ್ಯತ್ತಿನಲ್ಲಿ ಬಡ್ಡಿದರ ಏರುವುದೋ? ಬಾಂಡ್‌ಗಳಲ್ಲಿ ದುಡ್ಡು ಹೂಡಿದರೆ ಲಾಸ್ ಆಗುವ ಸಂಭವ ಇದೆಯೋ?’ ಉಪಾಧ್ಯಾಯರು ಬಾಟಮ್ ಲೈನ್ ಪ್ರಶ್ನೆ ಕೇಳೇ ಬಿಟ್ಟರು.
“ಭವಿಷ್ಯ ನುಡಿಯುವುದು ನನ್ನ ಕೆಲಸವಲ್ಲ. ವಿವರಣೆಗಳನ್ನೆಲ್ಲ ಕೊಟ್ಟಿದ್ದೇನೆ. ನೀವೇ ಸ್ಟಡಿ ಮಾಡಿ ಡಿಸೈಡ್ ಮಾಡಿ. ಆದರೆ ಇಷ್ಟು ಮಾತ್ರ ಹೇಳಬಲ್ಲೆ. ಪ್ರಧಾನ ಮಂತ್ರಿ, ವಿತ್ತ ಮಂತ್ರಿ ಸಹಿತ ಪ್ರತಿಯೊಬ್ಬರೂ ಬಡ್ಡಿದರ ಇಳಿಯುವ ಬಗ್ಗೆ ಮಾತ್ರ ಮಾತನಾಡುತ್ತಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಬಡ್ಡಿದರ ಏರುವ ಇಳಿಯುವ ಬಗ್ಗೆ ಮಾರುಕಟ್ಟೆಯಲ್ಲಿ ಯಾರೊಬ್ಬರೂ ಮಾತನಾಡುತ್ತಿಲ್ಲ. ಹಾಗಾಗಿ ಸದ್ಯಕ್ಕೆ ತೊಂದರೆ ಇಲ್ಲ ಅಂತ ಅಂದುಕೊಂಡಿದ್ದೇವೆ’ ಕಾಫಿಯ ಕೊನೇ ಸಿಪ್ ಹೀರಿ ಕಪ್ ಕೆಳಗಿಟ್ಟು ಬಿಲ್ ಎತ್ತಿಕೊಂಡು ಉಪಾಧ್ಯಾಯರು ಲೇಟಾಗುತ್ತೆ ಎಂದು ಹೇಳುತ್ತಾ ಎದ್ದುಬಿಟ್ಟರು. ನಾನೂ ಕಾಫಿ ಮುಗಿಸಿ ಎದ್ದುಬಿಟ್ಟೆ. ಅಂದು ಥ್ಯಾಂಕ್ಸ್ ಎಂದು ಬೀಳ್ಕೊಟ್ಟ ಉಪಾಧ್ಯಾಯರು ಮತ್ತೆ ನನಗೆ ಸಿಗಲಿಲ್ಲ. ಕೊನೆಗೆ, ಬಾಂಡ್ ಫಂಡಿನಲ್ಲಿ ಯಾವ ರೀತಿ ದುಡ್ಡು ಹೂಡಿದರೋ ತಿಳಿಯಲಿಲ್ಲ.
(ವಿ.ಸೂ: ಕಳೆದ ವಾರದ ಕಾಕುವಿನಲ್ಲಿ ಪ್ರಧಾನ ಮಂತ್ರಿ ವಯ ವಂದನ ಯೋಜನೆಯಲ್ಲಿ ಗರಿಷ್ಟ ಹೂಡಿಕೆಯು
ರೂ. 15 ಲಕ್ಷ ಎಂಬುದಾಗಿ ನನ್ನ ಕೈದೋಷದಿಂದಾಗಿ ತಪ್ಪಾಗಿ ಅಚ್ಚಾಗಿತ್ತು. ಗರಿಷ್ಟ ಹೂಡಿಕೆ ರೂ 7.5 ಲಕ್ಷ ಮಾತ್ರವೇ ಆಗಿರು
ತ್ತದೆ. ಸೀನಿಯರ್ ಸಿಟಿಜನ್ ಸೇವಿಂಗಗ್ಸ್ ಯೋಜನೆಯ ಮಿತಿ ರೂ. 15 ಲಕ್ಷ ಆಗಿರುತ್ತದೆ. ಇದರಿಂದ ಉಂಟಾದ ಗೊಂದಲ ಕ್ಕಾಗಿ ಕ್ಷಮಿಸಿ.)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Recipe: ಆರೋಗ್ಯಕ್ಕೆ ಅಮೃತ, ರುಚಿಗೆ ಅದ್ಭುತ ಈ ಚಟ್ನಿ!ಒಂದ್ಸಲ ಈ ವಿಧಾನದಲ್ಲಿ ಟ್ರೈ ಮಾಡಿ…
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
Mahakumbh 2025: 45 ಕೋಟಿ ಯಾತ್ರಾರ್ಥಿಗಳ ನಿರೀಕ್ಷೆ
INDvAUS: ಬಿಸಿಸಿಐ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ರಾ ಟ್ರಾವಿಸ್ ಹೆಡ್? Video
Sheikh ಹಸೀನಾರನ್ನು ಬಾಂಗ್ಲಾದೇಶಕ್ಕೆ ವಾಪಸ್ ಕಳುಹಿಸಿ: ಭಾರತಕ್ಕೆ ಬಾಂಗ್ಲಾ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.