ಅಂತರ್ಜಾಲದಲ್ಲಿ ನಡೆಯುತ್ತಿದೆ ಭಾರೀ ಮೋಸದ ಮೀನುಗಾರಿಕೆ!!!
Team Udayavani, Jan 22, 2018, 12:24 PM IST
Phishing ಅಂದರೆ ನಿಮ್ಮಲ್ಲಿರುವ ಯೂಸರ್ ಐಡಿ, ಪಾಸ್‌ವರ್ಡ್, ಬ್ಯಾಂಕ್ ಎಕೌಂಟ್ ನಂಬರ್ ಇತ್ಯಾದಿ ಗುಪ್ತ ಮಾಹಿತಿ ಗಳನ್ನು ಇಂಟರ್ನೆಟ್‌ನಲ್ಲಿ ಬಲೆ ಬೀಸಿ ಮೋಸದಿಂದ ಪಡೆದು ಕೊಳ್ಳುವುದು.
Empty pockets never held anyone back. Only empty heads and empty hearts can do that.
– Norman Vincent Peale
ಖಾಲಿ ಕಿಸೆಗಳು ಯಾರನ್ನೂ ತಡೆಯಲಿಲ್ಲ. ಖಾಲಿ ತಲೆ ಮತ್ತು ಖಾಲಿ ಕೈಗಳಿಂದ ಮಾತ್ರ ಅದು ಸಾಧ್ಯ…
- ನಾರ್ಮನ್ ವಿನ್ಸೆಂಟ್ ಪೀಲೆ
ಮೊನ್ನೆಯ ಭಾನುವಾರ ಆರಾಮವಾಗಿ ಕುಳಿತುಕೊಂಡು ಸುಮ್ಮನೇ ಫೇಸ್‌ಬುಕ್ಕಿನಲ್ಲಿ ಸಮಯ ಕೊಲ್ಲುತ್ತಿರಬೇಕಾದರೆ ನನ್ನ ಮನೆಗೆ ಗುರುಗುಂಟಿರಾಯರ ಆಗಮನವಾಯಿತು. ರಾಯರು ಕೊಂಚ ರಿಲ್ಯಾಕ್ಸ್ ಆಗಿದ್ದು ಒಳ್ಳೆಯ ಮೂಡಿನಲ್ಲಿದ್ದಂತೆ ತೋರಿತು. ಲವಲವಿಕೆಯಿಂದಲೇ ಇದ್ದರು. ಈ ಬಾರಿ ಮುಖದಲ್ಲಿ ಸ್ವಲ್ಪ”ಗೆಲು’ ಇತ್ತು. ಆಫ್ಟರ್ ಉಭಯ ಕುಶಲೋಪರಿ, ರಾಯರು ತಮ್ಮ ಬತ್ತಳಿಕೆಯಿಂದ ಒಂದು ಪ್ರಶ್ನಾಬಾಣವನ್ನು ನನ್ನತ್ತ ಎಸೆದರು…
ಫಿಶಿಂಗ್ ಅಂದ್ರೆ ಏನ್ಸಾರ್?
ಪ್ರಶ್ನೆ ಸರಳವಾದರೂ ಎಲ್ಲಾ ಬಿಟ್ಟು ರಾಯರು ಮೀನುಗಾರಿಕೆ ಯಲ್ಲಿ ಯಾಕಪ್ಪಾ ಆಸಕ್ತರಾದರು ಎಂಬ ಗೊಂದಲ ಮೊತ್ತ ಮೊದಲು ಮನದಲ್ಲಿ ಮೂಡಿತು. ಕಳೆದ ಮೂವತ್ತು ವರ್ಷಗಳಿಂದ ಮೀನುಗಾರಿಕೆ ಕ್ಷೇತ್ರದಲ್ಲಿ ನೀರು ಹೊರುತ್ತಿರುವ ನನಗೆ ಮೀನು ಗಾರಿಕೆಯ ಬಗ್ಗೆ ಎಂತೆಂತ¨ªೋ ಚಿತ್ರ ವಿಚಿತ್ರ ಪ್ರಶ್ನೆಗಳನ್ನು ಕೇಳಿಸಿ ಕೊಂಡು ಅಭ್ಯಾಸವಿದ್ದರೂ ಇಷ್ಟು ಮೂಲಭೂತವಾದ ಪ್ರಶ್ನೆಯನ್ನು ಇದುವರೆಗೆ ಯಾರೂ ಕೇಳಿರಲಿಲ್ಲ. ಇಷ್ಟು ಸಿಂಪಲ… ಪ್ರಶ್ನೆ ಯಾಕಪ್ಪಾ ಕೇಳಿದರು ಅಂತ ಗೊಂದಲ ಮೂಡಿತಾದರೂ ನನ್ನ ಕೊರೆತಕ್ಕೆ ಸದ್ಯ ಒಬ್ಬರಾದರೂ ಶ್ರೋತೃ ಸಿಕ್ಕರಲ್ಲಾ ಅಂತ ಕಂಡಾಬಟ್ಟೆ ಖುಶಿಯೂ ಆಯಿತು.
ಗಂಟಲಿನಿಂದ ಒಂದೆರಡು ಸ್ಯಾಂಪಲ್ ಸ್ವರ ಹೊರಡಿಸಿ ಶೃತಿ ಸರಿಪಡಿಸಿಕೊಂಡು ನಿಧಾನವಾಗಿ ನನ್ನ ಭಾಷಣ ಸುರುಮಾಡಿದೆ. ಭಾಷಣಕಾರ ತನ್ನ ಭಾಷಣವನ್ನು ಎಷ್ಟು ನಿಧಾನವಾಗಿ ಆರಂಭಿಸು ತ್ತಾನೆ ಎಂಬುದನ್ನು ನೋಡಿದರೇನೇ ಆತನಿಗೆ ಅದನ್ನು ಎಷ್ಟು ಉದ್ದ ಎಳೆಯುವ ಇರಾದೆ ಇದೆ ಎಂಬುದರ ಅಂದಾಜು ನಿಮಗೆ ಸಿಗುತ್ತ ದಲ್ಲವೇ? ಹಾಗೆ ರಾಯರಿಗೂ ಬೆಳಗ್ಗಿನಿಂದ ನನಗೆ ಬೇರ್ಯಾರೂ ಸಿಕ್ಕಿರಲಿಲ್ಲ ಎಂಬ ಸತ್ಯದ ಅರಿವಾಗಿ ಹೋಯಿತು. ಇಲ್ಲ ಮೊಳೆ ಯಾರೇì , ಬ್ರಿಫ್ ಆಗಿ ತಿಳಿಸಿದ್ರೆ ಸಾಕು ಅಂತ ಸೂಚನೆ ನೀಡಿದರು. ಛೇ.. ಛೇ.. ಎಂತಹ ಕಾಲ ಬಂತಯ್ನಾ? ಇಷ್ಟು ನೇರವಾಗಿ ಹೇಳಿ ಬಿಡೋದೇ? ದಾಕ್ಷಿಣ್ಯ ಎಂಬ ಎಂಬ ಸೊತ್ತು ಸತ್ತೇ ಹೋಗಿದೆ ಈ ಜಗತ್ತಿನಲ್ಲಿ ಅಂತ ಅನಿಸುತ್ತದೆ ಒಮ್ಮೊಮ್ಮೆ.
ಇರ್ಲಿ ಬಿಡಿ, ಇನ್ನೊಮ್ಮೆ ನನ್ನ ಇನ್‌ಬಿಲ್ಟ್ ಶೃತಿ ಪೆಟ್ಟಿಗೆಯನ್ನು ಅಜಸ್ಟ್ ಮಾಡಿ ಸಣ್ಣ ಉತ್ತರಕ್ಕಿರುವ ಪಿಚ್ ಸಿಲೆಕ್ಟ್ ಮಾಡಿ ಮುಂದುವರಿಸಿದೆ. ಫಿಶಿಂಗ್ ಅಂದ್ರೆ ಮೀನುಗಾರಿಕೆ ಸಾರ್… ಅದ್ರಲ್ಲಿ ಬೇರೆ ಬೇರೆ ತರ ಇದೆ, 24 ರೀತಿ. ನೆಟ್ ಹಿಡ್ಕೊಂಡೂ…
ಆ ನೆಟ್ ಬಿಟಿºಡಿ ಸಾರ್… ನಾನು ಹೇಳಿದ್ದು ಇಂಟರ್‌ನೆಟ… ಫಿಶಿಂಗ್. ಸಮುದ್ರದಲ್ಲಿ ಬಲೆ ಹಾಕಿ ಮೀನು ಹಿಡಿಯುವ ನಿಮ್ಮ ಫಿಶಿಂಗ್ ಅಲ್ಲ ರಾಯರು ರಾಂಗ್ ನಂಬರ್ ಸ್ವರದಲ್ಲಿ ತಡೆದರು.
ಓ ಅದಾ?…. ಇಂಟರ್ನೆಟ್ ಫಿಶಿಂಗಾ…??? ನಾನೂ ರಾಂಗ್ ನಂಬರ್ ಡಯಾಲಿಸಿಸ್ ಮಾಡಿ ಸಿಕ್ಕಿಬಿದ್ದ ಗ್ರಾಹಕನಂತೆ ಪೆಚ್ಚಾದೆ. ಜೊತೆ ಜೊತೆಗೇ ಮೊನ್ನೆ ತಾನೇ ನನ್ನ ಪತ್ನಿಯ ಹೆಸರಿನಲ್ಲಿ ಆದಾಯ ತೆರಿಗೆ ಇಲಾಖೆಯಿಂದ ಟ್ಯಾಕ್ಸ್ ರಿಫಂಡ್ ಬಗ್ಗೆ ಬಂದ ಇ-ಮೈಲ್ ನೆನಪಾಯಿತು. ಇದು ಕಳೆದ ವಾರದ ಕತೆ – ನನ್ನ ಪತ್ನಿಗೆ ಆದಾಯ ಕರ ಇಲಾಖೆಯ ಹೆಸರಿನಿಂದ ಒಂದು ಇ-ಮೈಲ್ ಬಂದಿತ್ತು. ಮೇಡಮ…, ನಿಮ್ಮ ಇದುವರೆಗಿನ ರಿಟರ್ನ್ ಫೈಲ್ಗಳನ್ನು ಪರಿಶೀ ಲಿಸಲಾಗಿ ನಿಮಗೆ ರೂ. 34,786 ರಿಫಂಡ್ ಬರಬೇಕಾಗಿದೆಯಿಂದು ತಿಳಿದು ಬಂತು. ಆ ಮೊತ್ತವನ್ನು ಪಡೆಯಬೇಕಾದರೆ ನಿಮ್ಮ ಬ್ಯಾಂಕ್ ವಿವರಗಳನ್ನು ಇಲ್ಲಿ ನೀಡಲಾದ ಕೊಂಡಿಯನ್ನು ಒತ್ತಿ ಅಲ್ಲಿ ತುಂಬಿರಿ. ದುಡ್ಡನ್ನು ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ವರ್ಗಾ ಯಿಸಲಾಗುವುದು ಎನ್ನುವುದು ಪತ್ರದ ಒಕ್ಕಣೆ.
ಬಹುತೇಕ ನನ್ನ ಪತ್ನಿ ಆದಾಯ ಕರಗಿರ ಇತ್ಯಾದಿ ವಿಚಾರಗಳಿಗೆ ತಲೆ ಹಾಕುವುದಿಲ್ಲ. ಮನೆಯಲ್ಲಿಯೇ ಒಂದು ಕಾಸು-ಕುಡಿಕೆ ಯನ್ನು ಸಾಕುತ್ತಿರಬೇಕಾದರೆ ಅದಕ್ಕೆಲ್ಲಾ ತಲೆಕೆಡಿಸಿಕೊಳ್ಳುವ ಅವಶ್ಯಕತೆ ಯಾದರೂ ಏನು? ಊರವರಿಗೆಲ್ಲಾ ಕುಡಿಕೆ ಕಟ್ಟುತ್ತಿರುವ ಗಂಡ ಸ್ವಂತ ಮನೆಗೆ ಈ ರೀತಿಯಾದರೂ ನಾಲ್ಕು ಕಾಸಿನ ಉಪಕಾರ ಮಾಡಲಿ ಎನ್ನುವ ಕಾರಣಕ್ಕೆ ಇಂತಹ ನೋಟೀಸುಗಳನ್ನು ಅವರು ಕಣ್ಣು ಮುಚ್ಚಿ ನನಗೆ ಫಾರ್ವರ್ಡ್ ಮಾಡಿ ಬಿಡುತ್ತಾರೆ.
ಆ ಮೈಲ್ ನೋಡಿದಾಕ್ಷಣವೇ ಅದೆಂತಾ ಭಾರೀ ಭಯಂಕರದ ಮೋಸ ಎನ್ನುವುದು ನನಗೆ ತಿಳಿದು ಹೋಯಿತು. ಇದನ್ನು ರಾಯರು ತಿಳಿಸಿದಂತೆ phishing ಎನ್ನುತ್ತಾರೆ ಮತ್ತು ಅದು ಈ ರೀತಿಯಲ್ಲಿ ನಡೆಯುತ್ತದೆ:
ಒಂದು ದಿನ ನಿಮಗೊಂದು ಇ-ಮೈಲ್ ಬರುತ್ತದೆ, ನಿಮ್ಮ ಬ್ಯಾಂಕಿನಿಂದ. ಅದರಲ್ಲಿ ಒಂದು ಕೊಂಡಿ ಅಥವ ಲಿಂಕ್ ಕೊಟ್ಟಿರು ತ್ತಾರೆ. ಅದನ್ನು ಒತ್ತಿ ನಿಮ್ಮ ಬ್ಯಾಂಕ್ ಸೈಟಿನಲ್ಲಿ ನಿಮ್ಮ ಕೆಲವು ಉಪಯುಕ್ತ ಮಾಹಿತಿಗಳನ್ನು ತುಂಬಿರಿ. ಇದೊಂದು ಪರಿಶೀಲನಾ ವ್ಯವಸ್ಥೆ ಎಂದು ಹೇಳಲಾಗುತ್ತದೆ. ಕೊಂಡಿ ಒತ್ತಿದಾಗ ಅದು ಕೊಂಡೊಯ್ಯುವುದು ಮಾತ್ರ ಒಂದು ನಕಲಿ ಕಳ್ಳ ಸೈಟಿಗೆ, ನಿಜವಾದ ಬ್ಯಾಂಕಿನ ಸೈಟಿಗೆ ಅಲ್ಲ. ಬ್ಯಾಂಕಿನ ಹೆಸರು, ಲೋಗೋ ವಿನ್ಯಾಸ ಎಲ್ಲವೂ ನೈಜವಾದ ಬ್ಯಾಂಕಿನದ್ದರಂತೆಯೇ ಇರುತ್ತದೆ. ಆದರೆ ಕೂಲಂಕಷವಾಗಿ ನೋಡಿದರೆ ಮಾತ್ರ ಅದು ನಕಲಿ ಎಂದು ತಿಳಿಯುತ್ತದೆ. ಆದರೆ ನೀವು ಅಷ್ಟೆಲ್ಲಾ ಪರಿಶೀಲಿಸಿ ನೋಡಲು ಹೋಗುವುದಿಲ್ಲ. ಅಲ್ಲಿ ನಿಮ್ಮ ಹೆಸರು ವಿಳಾಸ, ಎಕೌಂಟ್ ನಂಬರ್, ಲಾಗ್ ಇನ್ ಐಡಿ, ಪಾಸ್‌ವರ್ಡ್, ಸಿವಿವಿ ನಂಬರ್ ಇತ್ಯಾದಿ ಪ್ರಾಮುಖ್ಯ ಮಾಹಿತಿಗಳನ್ನು ತುಂಬಲು ಹೇಳಲಾಗುತ್ತದೆ. ನೀವು ಅವನ್ನು ತುಂಬಿದರೆ ಅಲ್ಲಿಗೆ ನಿಮ್ಮ ಕತೆ ಮುಗಿಯಿತು. ಮರುಕ್ಷಣವೇ ಯಾರೋ ಧೂರ್ತರು ಆ ಮಾಹಿತಿಗಳನ್ನು ಉಪಯೋಗಿಸಿ ನಿಮ್ಮ ಖಾತೆಯನ್ನು ಗುಡಿಸಿ ಸಾರಿಸಿ ಕ್ಲೀನ್ ಮಾಡುತ್ತಾರೆ. ಇಂತಹ ಕೃತ್ಯಕ್ಕೆ ಹೆಸರು ಫಿಶಿಂಗ್. ಗಾಳ ಹಾಕಿ ನಿಮ್ಮ ಗುಪ್ತ ಮಾಹಿತಿಗಳನ್ನು ಸೆಳೆಯುವ ಮೀನುಗಾರಿಕೆ. ಇದೊಂದು ಇಂಟರ್‌ನೆಟ್ ಮೂಲಕ ನಡೆಯುವ ವಿತ್ತೀಯ ಕ್ರೈಮ್.
Phishing ಅಂದರೆ ನಿಮ್ಮಲ್ಲಿರುವ ಯೂಸರ್ ಐಡಿ, ಪಾಸ್‌ವರ್ಡ್, ಬ್ಯಾಂಕ್ ಎಕೌಂಟ್ ನಂಬರ್ ಇತ್ಯಾದಿ ಗುಪ್ತ ಮಾಹಿತಿ ಗಳನ್ನು ಇಂಟರ್ನೆಟ್‌ನಲ್ಲಿ ಬಲೆ ಬೀಸಿ ಮೋಸದಿಂದ ಪಡೆದು ಕೊಳ್ಳುವುದು. ನಿಮ್ಮ ಬ್ಯಾಂಕು, ಆಯಕರ ವಿಭಾಗ, ಇತ್ಯಾದಿ ಒಂದು ನಂಬಿಗಸ್ಥ ವೆಬ್‌ಸೈಟನ್ನು ಹೋಲುವ ಒಂದು ಕಳ್ಳ ಸೈಟನ್ನು ತಯಾರು ಮಾಡಿ ಅಲ್ಲಿಗೆ ಇ-ಮೈಲ್ ಕೊಂಡಿ ಮೂಲಕ ನಿಮ್ಮನ್ನು ಕೊಂಡೊಯ್ದು ಅಲ್ಲಿ ನೀವು ಗುಪ್ತ ಮಾಹಿತಿಗಳನ್ನು ಟೈಪ್ ಮಾಡು ವಂತೆ ಮಾಡಿಸಲಾಗುತ್ತದೆ. ಹಾಗೆ ಪಡೆದುಕೊಂಡ ಮಾಹಿತಿಯನ್ನು ಉಪಯೋಗಿಸಿಕೊಂಡು ನಿಮ್ಮ ಖಾತೆಯಿಂದ ಇದ್ದ ಹಣವನ್ನು ದೋಚಲಾಗುತ್ತದೆ. ನಕಲಿ ಸೈಟ್ ವಿಳಾಸಕ್ಕೂ ಅಸಲಿಗೂ ಬಹಳ ಸೂಕ್ಷ್ಮ ವ್ಯತ್ಯಾಸಗಳಿರುತ್ತವೆ. ಅಸಲಿಯನ್ನೇ ಹೋಲುವ ಲೈಫ್ಬಾಯ್, ಲಿರಿಲ್, ಸರ್ಫ್ಗಳನ್ನು ನೋಡಿಲ್ಲವೇ? ಅದೇ ರೀತಿ ಇರುತ್ತವೆ. ಸಣ್ಣ ಪುಟ್ಟ ಸ್ಪೆಲ್ಲಿಂಗ್ ವ್ಯತ್ಯಾಸಗಳಿರಬಹುದು. ಪುಟ ವಿನ್ಯಾಸದಲ್ಲಿ ಕೆಲವೊಮ್ಮೆ ಅವೂ ಇರುವು ದಿಲ್ಲ. ಮೂಲದಂತೆಯೇ ಇರುತ್ತವೆ. ಈ ರೀತಿ ಗಾಳ ಹಾಕಿ ಮಾಡುವ fishing ಅನ್ನು ಅದೇ ಸೂತ್ರ ಉಪಯೋಗಿಸಿಕೊಂಡು Phishing ಎಂದು ಕರೆಯುತ್ತಾರೆ.
ಸಾಮಾನ್ಯವಾಗಿ ನಿಮ್ಮ ಬ್ಯಾಂಕಿನ/ಕ್ರೆಡಿಟ್ ಕಾರ್ಡ್ ಹೆಸರು ಉಪಯೋಗಿಸಿ ಇಂತಹ ಫಿಶಿಂಗ್ ನಡೆಯುತ್ತದೆ. ಆದಾಯಕರ ವಿಭಾಗದಿಂದ ನಿಮಗೆ ರಿಫಂಡ್ ಬಂದಿದೆ, ಈ ಕೊಂಡಿಗೆ ಹೋಗಿ ನಿಮ್ಮ ಬ್ಯಾಂಕು ವಿವರಗಳನ್ನು ತುಂಬಿರಿ ಎಂಬ ಇ-ಮೈಲ್ ಬರುವುದೂ ಇದೆ. ಅಸಲಿಗೆ ನಿಮಗೆ ಯಾವುದೇ ಆದಾಯ ಕರ ರಿಫಂಡ್ ಬರಲು ಇರುವುದಿಲ್ಲ. ನಿಜವಾದ ರಿಫಂಡ್ ಬರಲಿರುವವರಂತೂ ತಕ್ಷಣವೇ ಈ ಮೋಸಕ್ಕೆ ಬಲಿಯಾಗುತ್ತಾರೆ. (ಆದಾಯ ಕರ ಇಲಾಖೆ ಯಾವತ್ತೂ ಈ ರೀತಿಯಾಗಿ ಬ್ಯಾಂಕ್ ಮಾಹಿತಿಯನ್ನು ನಿಮ್ಮಲ್ಲಿ ಕೇಳುವುದಿಲ್ಲ ಮತ್ತು ಈ ರೀತಿಯಾಗಿ ರಿಫಂಡ್ ಪ್ರಕ್ರಿಯೆ ನಡೆಸುವುದಿಲ್ಲ). ನಿಮ್ಮ ಎಕೌಂಟು ದೃಢೀಕರಿಸಿರಿ, ಪಾಸ್‌ವರ್ಡ್ ನವೀಕರಿಸಿ ಇತ್ಯಾದಿ ಕೇಳಿಕೆಗಳು ಸಾಮಾನ್ಯವಾಗಿ ಫಿಶಿಂಗ್ ನಡೆಸಲು ಉಪಯೋಗಿಸಲಾಗುತ್ತದೆ.
ನಿಮಗೆ ಕೊಟ್ಟ ಕೊಂಡಿ ಅಥವ ಲಿಂಕ್ ಅನ್ನು ಸರಿಯಾಗಿ ಓದಿ ನೋಡಿರಿ. ಅದು ನೀವು ಎಕೌಂಟ್ ಪಾಲಿಸಿಕೊಂಡು ಬಂದಂತಹ ನಿಮ್ಮ ನೆಚ್ಚಿನ ಸ್ಟೇಟ್‌ಬ್ಯಾಂಕಿನದ್ದಾಗಿರಬಹುದು. ಆದರೆ ಅದರ ಮೇಲೆ ಮೌಸ್ ಇಟ್ಟ ಕೂಡಲೇ ಅದರ ಹಿಂದೆ ಅವಿತಿರುವ ನಿಜವಾದ ತಾಣದ ಹೆಸರು ಸ್ಕ್ರೀನಿನಲ್ಲಿ ಮೂಡುತ್ತದೆ. ಒತ್ತಿದಾಗ ಅದು ಹೋಗುವ ತಾಣ ಸ್ಕ್ರೀನಿನ ಕೆಳಗಿನ ಎಡಬದಿಯಲ್ಲಿ ಕಾಣುತ್ತದೆ, ಹಾಗೂ ಮೇಲಿನ ಬದಿಯ ಅಡ್ರೆಸ್ ಜಾಗದಲ್ಲಿ ಬರುತ್ತದೆ. ಅದನ್ನು ಸರಿಯಾಗಿ ಪರೀಕ್ಷಿಸಿಕೊಳ್ಳಬೇಕು. ಆ ರೀತಿಯಲ್ಲಿ ನೋಡಿದರೆ ಸ್ಟೇಟ್ ಬ್ಯಾಂಕಿಗಾಗಿ ಒತ್ತಿದ ಕೊಂಡಿ ನಿಜವಾಗಿ ನಿಮ್ಮನ್ನು ಸ್ಟೇಟ್ಸ್‌ಬ್ಯಾಂಕ್ ಅಥವ ಇನ್ಯಾವುದೋ ನಕಲಿ ಮೋಸದ ತಾಣಕ್ಕೆ ಕೊಂಡು ಹೋಗುವುದನ್ನು ಕಾಣಬಹುದು.
ಅದಲ್ಲದೆ, ಗೂಗಲ್ ಮತ್ತಿತರ ಸರ್ಚ್ ಎಂಜಿನ್‌ಗಳು ಇತ್ತೀಚೆಗೆ ನಂಬಿಗಸ್ಥ ಸೈಟುಗಳ ಎಡ್ರೆಸ್ ಅನ್ನು httpsನಿಂದ ಆರಂಭ ಗೊಂಡಂತೆ ಎಡ್ರೆಸ್ ಬಾರ್‌ನಲ್ಲಿ ನಮೂದಿಸುತ್ತದೆ. ಈ ರೀತಿ sಇಲ್ಲದೆ ಬರೇ https ಮಾತ್ರ ಇರುವ ಸೈಟುಗಳ ಬಗ್ಗೆ ಜಾಸ್ತಿ ಜಾಗ್ರತೆ ವಹಿಸಿಕೊಳ್ಳಬೇಕು. ಅದಲ್ಲದೆ ಯಾವುದೇ ಕಾರಣಕ್ಕೂ ಯಾವುದೇ ನೈಜ ಕಂಪೆನಿ ಅಥವ ಬ್ಯಾಂಕು ಕೂಡಾ ಇ-ಮೈಲ್ ಮುಖಾಂತರ ಧೃಡೀಕರಣ, ನವೀಕರಣ ಕೇಳುವುದಿಲ್ಲ ಎಂಬುದನ್ನು ನೆನಪಿಡ ಬೇಕು. ಇ-ಮೈಲ್ ಮುಖಾಂತರ ಅಲ್ಲೆಲ್ಲ ಹೋಗಿ ಎಕೌಂಟ್ ನಂಬರ್, ಪಾಸ್‌ವರ್ಡ್ ಇತ್ಯಾದಿ ಸೂಕ್ಷ್ಮ ಮಾಹಿತಿ ಗಳನ್ನು ಎಂದಿಗೂ ನೀಡಬಾರದು. ಇ -ಮೈಲ್ ನಲ್ಲಿ ಬರುವ ಕೊಂಡಿಗಳ ಮೂಲಕ ಬ್ಯಾಂಕು ಇತ್ಯಾದಿ ಸೈಟುಗಳನ್ನು ಪ್ರವೇಶಿ
ಸಲೇ ಬಾರದು. ಪ್ರತ್ಯೇಕವಾಗಿ ಆಯಾ ಎಡ್ರೆಸ್‌ಗಳನ್ನು ಬ್ರೌಸರ್‌ಗಳಲ್ಲಿ ಬರೆದು ಅಲ್ಲಿಗೆ ಭೇಟಿ ನೀಡಬೇಕು. ಅದೂ ಅಲ್ಲದೆ, ಬ್ಯಾಂಕು, ಕ್ರೆಡಿಟ್ ಕಾರ್ಡ್ ಕಂಪೆನಿಗಳನ್ನು ಪ್ರತ್ಯೇಕವಾಗಿ ಸಂಪರ್ಕಿಸಿ ತಿಳಿಯಬೇಕು.
ಬರೇ ಇ -ಮೈಲ್ ಮಾತ್ರವಲ್ಲ; ಫೋನ್ ಮೂಲಕವೂ ಫಿಶಿಂಗ್ ನಡೆಯಲು ಸಾಧ್ಯ. ಫೋನ್ ಮಾಡಿ ದೃಢೀಕರಣಕ್ಕೆಂದು ಆನ್‌ಲೈನ್ ಎಕೌಂಟಿನ ಪಾಸ್‌ವರ್ಡ್, ಕ್ರೆಡಿಟ್ ಕಾರ್ಡ್ ನಂಬರ್ ಮತ್ತು ಅದರ ಹಿಂಭಾಗ ಇರುವ ಸಿವಿವಿ ನಂಬರ್‌ಗಳನ್ನು ಕೇಳಿ ತಿಳಿದುಕೊಳ್ಳುವುದು, ಡಬಲ… ವೆರಿಫಿಕೇಶನ್ ಕೋಡ್ ಪಡೆದುಕೊಳ್ಳುವುದು, ಇತ್ಯಾದಿ ಮೋಸಗಳು ತುಂಬಾ ನಡೆಯುತ್ತವೆ. ನಿಮ್ಮ ಕ್ರೆಡಿಟ್ ಕಾರ್ಡ್ ನಂಬರ್ ಮತ್ತು ಸಿವಿವಿ ನಂಬರ್ ಸಿಕ್ಕರೆ ಅವನ್ನು ಉಪಯೋಗಿಸಿಕೊಂಡು ನಿಮ್ಮ ಹೆಸರಿನಲ್ಲಿ ಸಾಕಷ್ಟು ಆನ್‌ಲೈನ್ ಖರೀದಿ ಮಾಡಬಹುದು. ಚೆನ್ನಾಗಿ ಟೋಪಿ ಹಾಕಿಸಿಕೊಂಡ ಬಳಿಕವೇ ತಿಳಿಯುತ್ತದೆ, ನಡೆದ ಸಂಗತಿ.
ಜಯದೇವ ಪ್ರಸಾದ ಮೊಳೆಯಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್
Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ
Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ
Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್ ಗೋಯಲ್
Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.