ಅಪ್ಪನೆಂಬ ‘ದಿನಗೂಲಿ ದೇವರಿಗೆ’ ಮಗಳು ಕೊಟ್ಟ ಕಾಣಿಕೆ
32 ವರ್ಷ ಆದ್ಮೇಲೂ ಲೈಫ್ನಲ್ಲಿ ಸೆಟ್ಲ ಆಗಬಹುದು, ಆದರೆ 32 ವರ್ಷ ತುಂಬಿದ ಮೇಲೆ ಐಎಎಸ್, ಐಪಿಎಸ್ ಮಾಡೋಕ್ಕಾಗಲ್ಲ...
Team Udayavani, Sep 15, 2019, 5:52 AM IST
ನಮ್ಮ ಕಂಪನಿಯ ಬಾಸ್, ಛೇಂಬರ್‌ಗೆ ಕರೆದು ಹೇಳಿದರು; ‘ನಿನಗೇನಾದರೂ ಬುದ್ಧಿ ಇದೆಯೋ ಇಲ್ವೋ? ಎಂಎನ್‌ಸಿಲಿ ಸಿಕ್ಕಿರೋ ಒಳ್ಳೆಯ ಕೆಲ್ಸ ಬಿಡ್ತೀನಿ ಅನ್ನೋದಾ? ಪ್ರತಿ ವರ್ಷ 5 ಲಕ್ಷ ಜನ ಪರೀಕ್ಷೆ ಬರಿತಾರೆ. ಅವರಲ್ಲಿ 90 ಜನ ಮಾತ್ರ ಐಎಎಸ್ ಆಫೀಸರ್ ಅಂತ ಸೆಲೆಕ್ಟ್ ಆಗೋದು. ಸುಮ್ನೆ ಯಾಕಮ್ಮ ರಿಸ್ಕ್ ತಗೊಳ್ತೀಯ?’ ಅವರ ಮಾತು ಮುಗೀತಿದ್ದಂತೆಯೇ ನಾನು ಸ್ಪಷ್ಟವಾಗಿ ಹೇಳಿದೆ : ‘ಸರ್, ಐಎಎಸ್‌ಗೆ 90 ಜನ ಮಾತ್ರ ಸೆಲೆಕ್ಟ್ ಆಗ್ತಾರೆ ಅಲ್ವ ? ಆ 90 ಜನರಲ್ಲಿ ನಾನೂ ಒಬ್ಬಳಾಗಿರ್ತೀನಿ…’
ಡಾಕ್ಟರ್ ಮಕ್ಕಳು ಡಾಕ್ಟರ್ ಆಗುವುದು, ಇಂಜಿನಿಯರ್ ಮಕ್ಕಳು ಇಂಜಿನಿಯರ್ ಆಗುವುದು, ಆಫೀಸರ್ ಮಕ್ಕಳು ಆಫೀಸರ್‌ಗಳೇ ಆಗುವುದು ಖಂಡಿತ ಸುದ್ದಿಯಲ್ಲ. ಆದರೆ ಕಡುಬಡವನ ಮಕ್ಕಳು ಐಎಎಸ್‌ನಂಥ ದೊಡ್ಡ ಹುದ್ದೆಗೆ ಹೋದರೆ, ನಿಜಕ್ಕೂ ಅದು ಸುದ್ದಿ. ದೊಡ್ಡ ಹುದ್ದೆಯಲ್ಲಿ ಕೂತ ನಂತರವೂ ನಡೆದು ಬಂದ ದಾರಿಯನ್ನು ಅವರು ನೆನಪಿಸಿಕೊಂಡರೆ, ಅದೂ ಕೂಡ ಸುದ್ದಿ. ಅಂಥದೊಂದು ಸ್ಟೋರಿ ಇಲ್ಲಿದೆ. ಓದಿಕೊಳ್ಳಿ…
‘ಪಶ್ಚಿಮ ಬಂಗಾಳದಲ್ಲಿ ಹೂಗ್ಲಿ ನದಿಯೂ, ಅದೇ ಹೆಸರಿನ ಜಿಲ್ಲೆಯೂ ಇದೆ. ಈ ಜಿಲ್ಲಾ ಕೇಂದ್ರದಿಂದ 35 ಕಿ.ಮೀ. ದೂರದಲ್ಲಿರುವ ಭದ್ರೇಶ್ವರವೆಂಬ ಪುಟ್ಟ ಗ್ರಾಮವೇ ನಮ್ಮ ಊರು. ಅಲ್ಲಿ, 28 ಮಂದಿಯಿಂದ ಕೂಡಿದ ಕೂಡು ಕುಟುಂಬವಿತ್ತು. ಆ ಕುಟುಂಬದ ಸದಸ್ಯರಾಗಿ ನನ್ನ ಅಪ್ಪ-ಅಮ್ಮನೂ ಇದ್ದರು. ಅಪ್ಪನ ಹೆಸರು-ಸಂತೋಷ್ ಅಗರ್‌ವಾಲ್. ಅಮ್ಮನ ಹೆಸರು-ಪ್ರೇಮಾ.
ನಮ್ಮದು ಮಾರ್ವಾಡಿಗಳ ಕುಟುಂಬ. ಅದ್ಯಾವ ಕಾರಣಕ್ಕೋ ಗೊತ್ತಿಲ್ಲ. ಯಾವುದೇ ವ್ಯಾಪಾರಕ್ಕೆ ಮುಂದಾದರೂ ನಮ್ಮ ತಂದೆಗೆ ಮೇಲಿಂದ ಮೇಲೆ ನಷ್ಟವೇ ಆಗುತ್ತಿತ್ತಂತೆ. ಇದರಿಂದ ನೊಂದ ನನ್ನ ತಂದೆ, ಲಾಸ್ ಮಾಡಿಕೊಂಡು ಸಾಲಗಾರ ಆಗುವ ಬದಲು, ಕೂಲಿ ಕೆಲಸಕ್ಕೆ ಹೋಗುವುದೇ ಮೇಲು ಎಂದು ನಿರ್ಧರಿಸಿ ದಿನಗೂಲಿಗೆ ಸೇರಿಕೊಂಡು ಬಿಟ್ಟರಂತೆ. ಹೀಗೇ ಒಂದಷ್ಟು ದಿನ ಕಳೆದ ಮೇಲೆ, ಅದೊಮ್ಮೆ, ನನ್ನ ತಾಯಿ ಘೋಷಿಸಿದ್ದಾರೆ: ‘ನಾನು ಗರ್ಭಿಣಿ’
ಕಡೆಗೊಂದು ದಿನ, ಹೆರಿಗೆ ನೋವೆಂದು ಅಮ್ಮ ಆಸ್ಪತ್ರೆಗೆ ದಾಖಲಾದಳು. ಎರಡು ದಿನಗಳ ನಂತರ- ‘ಹೆಣ್ಣು ಮಗು’ ಎಂಬ ಸುದ್ದಿ ಆಸ್ಪತ್ರೆಯಿಂದ ಹೊರಬಿತ್ತು. ಈ ಸುದ್ದಿ ಕೇಳಿ, ಅಯ್ಯೋ ಹೆಣ್ಮಗೂನಾ? ಈಗಲೇ ಅವರ ಮನೇಲಿ ಕಷ್ಟವಿದೆ. ಇನ್ಮುಂದೆ ಆ ಕಷ್ಟ ಇನ್ನಷ್ಟು ಜಾಸ್ತಿಯಾಗುತ್ತೆ ಎಂದೇ ಮನೆಮಂದಿಯೆಲ್ಲ ಮಾತಾಡಿಕೊಂಡರಂತೆ. ಆದರೆ ಅಪ್ಪ-ಅಮ್ಮ ಮಾತ್ರ ‘ಯಾರು ಏನೇ ಅನ್ನಲಿ; ನಮ್ಮ ಮಗು ನಮಗೆ ಯಾವತ್ತೂ ಹೊರೆಯಲ್ಲ. ಇವಳನ್ನು ಎಷ್ಟು ಸಾಧ್ಯವೋ ಅಷ್ಟು ಮುದ್ದಿನಿಂದ ಬೆಳೆಸೋಣ’ ಎಂದು ಮಾತಾಡಿಕೊಂಡರಂತೆ…’
ತಮ್ಮ ಕುಟುಂಬದ ಹಿನ್ನೆಲೆ ಹಾಗೂ ತಮ್ಮ ಬಾಲ್ಯದ ಕಥೆಯನ್ನು ಯಾವುದೇ ಸಂಕೋಚವಿಲ್ಲದೆ ಶ್ವೇತಾ ಅಗರ್‌ವಾಲ್ ಅವರು ಹೇಳಿಕೊಂಡಿದ್ದು ಹೀಗೆ. ಮುಂದುವರಿದು ಅವರು ಹೇಳುತ್ತಾರೆ: ಬಾಲ್ಯದಲ್ಲಿ ನಾನು ಅನುಭವಿಸಿದ ಕಷ್ಟಗಳು ಒಂದೆರಡಲ್ಲ. ಮುಖ್ಯವಾಗಿ, ನಾನು ಶಾಲೆಗೆ ಹೋಗುವುದಕ್ಕೆ ಕುಟುಂಬದ ಸದಸ್ಯರಿಂದಲೇ ವಿರೋಧವಿತ್ತು. ಹೇಳಿಕೇಳಿ ಹೆಣ್ಣು ಮಗು. ನಾಳೆ ಮದುವೆಯಾಗಿ ಗಂಡನ ಮನೆಗೆ ಹೋಗುವವಳು. ಇವಳನ್ನು ಯಾಕೆ ಪ್ರತಿಷ್ಠಿತ ಶಾಲೇಲಿ ಓದಿಸಬೇಕು? ಚೆನ್ನಾಗಿ ಮನೆಕೆಲಸ ಮಾಡಲು ಕಲಿಸಿದರೆ ಸಾಕು ಎಂದೇ ಬಂಧುಗಳೆಲ್ಲಾ ಹೇಳುತ್ತಿದ್ದರು. ಆದರೆ, ಮಗಳನ್ನು ಓದಿಸಬೇಕೆಂಬ ಹಂಬಲದಿಂದ, ಹೆತ್ತವರು, ಬಂಧುಗಳ ಮಾತು ಲೆಕ್ಕಿಸದೆ ನನ್ನನ್ನು ಇಂಗ್ಲಿಷ್ ಮೀಡಿಯಂ ಶಾಲೆಗೆ ಸೇರಿಸಿದರು.
ಹೇಳಲು ಮರೆತಿದ್ದೆ; ನಾನು ಹುಟ್ಟಿದ್ದು 1980ರಲ್ಲಿ. ಆ ದಿನಗಳಲ್ಲಿ ನನ್ನ ಶಾಲೆಯ ಫೀ, ತಿಂಗಳಿಗೆ 160 ರುಪಾಯಿ. ಅವತ್ತು ನಮ್ಮ ಕುಟುಂಬದ ಪರಿಸ್ಥಿತಿ ಅದೆಷ್ಟು ಕೆಟ್ಟದಿತ್ತು ಅಂದರೆ, ತಿಂಗಳಿಗೆ 160 ರುಪಾಯಿ ಉಳಿಸುವುದಕ್ಕೂ ನಮ್ಮ ತಂದೆಗೆ ಸಾಧ್ಯವಿರಲಿಲ್ಲ. ಅದೊಂದು ದಿನ ಅವರು ತುಂಬ ನೋವಿನಿಂದ ಅಮ್ಮನಿಗೆ ಹೇಳುತ್ತಿದ್ದರು: ದಿನಕ್ಕೆ 10ರುಪಾಯಿ ಉಳಿಸುವುದಕ್ಕೂ ಸಾಧ್ಯವಾಗ್ತಾ ಇಲ್ಲ…
ನಮ್ಮ ಆರ್ಥಿಕ ಸ್ಥಿತಿ ಹೀಗಿದ್ದಾಗಲೇ ಬಂಧುಗಳು – ಅಹಹಹ, ಕೈಲಿ ಮೂರ್ ಕಾಸು ಇಲ್ಲದಿದ್ರೂ ಶೋಕಿಗೇನ್ ಕಡ್ಮೆ ಇಲ್ಲ. ಹೆಣ್ಣು ಮಗೂನ ಕಾನ್ವೆಂಟ್‌ನಲ್ಲಿ ಓದಿಸುವ ಅಗತ್ಯ ಏನಿತ್ತು? ಎಂದು ಕೊಂಕು ನುಡಿಯುತ್ತಿದ್ದರು. ಇಂಥ ಟೀಕೆಗಳಿಂದ ವಿಚಲಿತರಾಗಿದ್ದ ಅಪ್ಪ, ಮನೆಯ ಹತ್ತಿರದಲ್ಲೇ ಒಂದು ಪೆಟ್ಟಿ ಅಂಗಡಿ ತೆರೆದಿದ್ದರು. ದಿನಗೂಲಿ ಮುಗಿಸಿ ಬಂದಮೇಲೆ ರಾತ್ರಿ 10 ಗಂಟೆಯವರೆಗೂ ಅಂಗಡಿಯಲ್ಲಿದ್ದು ನಾಲ್ಕು ಕಾಸು ಸಂಪಾದಿಸಬೇಕೆಂಬುದು ಅವರ ನಿರ್ಧಾರವಾಗಿತ್ತು.
ಮನೆಯಲ್ಲಿ ಬಡತನವಿದೆ, ಶಾಲೆಯ ಫೀ ಕಟ್ಟಲಿಕ್ಕೂ ಹಣವಿಲ್ಲ ಎಂದು ಗೊತ್ತಾದಾಗ, ಅಪ್ಪ- ಅಮ್ಮನಿಗೆ ಹೇಗಾದರೂ ಸಹಾಯ ಮಾಡಬೇಕೆಂದು ಯೋಚಿಸಿದೆ. ಯಾವುದಾದರೂ ಹಬ್ಬ, ನಾಮಕರಣ, ಪೂಜೆಯಂಥ ಸಂದರ್ಭಗಳಲ್ಲಿ ಪರಿಚಯದವರ, ಬಂಧುಗಳ ಮನೆಗೆ ಹೋದರೆ, ಹೆಣ್ಣು ಮಕ್ಕಳಿಗೆ ಚಿಲ್ಲರೆ ಹಣ ಕೊಡುವ ಸಂಪ್ರದಾಯ ಮಾರ್ವಾಡಿಗಳಲ್ಲಿದೆ. ಹಾಗೆ ಸಿಕ್ಕ ಹಣವನ್ನೆಲ್ಲಾ ಅಮ್ಮನ ಕೈಲಿಡುತ್ತಿದ್ದೆ. ಅಮ್ಮ, ಅದನ್ನೆಲ್ಲ ಒಂದು ಡಬ್ಬಿಯಲ್ಲಿ ಕೂಡಿಡುತ್ತಿದ್ದಳು. ಫೀ ಕಟ್ಟಲು ಹಣವಿಲ್ಲ ಅನ್ನಿಸಿದಾಗ, ಆ ಹಣವನ್ನು ಬಳಸುತ್ತಿದ್ದೆವು.
ಹತ್ತನೇ ತರಗತಿಯಲ್ಲಿ ನಾನು ಫಸ್ಟ್ ಕ್ಲಾಸ್ ಬಂದಾಗಲೂ ಬಂಧುಗಳು ಸಂಭ್ರಮಿಸಲಿಲ್ಲ. ಕಾಲೇಜಿಗೆ ಹೊರಟು ನಿಂತಾಗಲಂತೂ ನಮ್ಮ ಅಂಕಲ್ – ‘ನಿಂದ್ಯಾಕೋ ಅತಿಯಾಯ್ತು. ಹೆಣ್ಣು ಮಕ್ಕಳಿಗೇಕೆ ಓದು?’ ಅಂದರು! ಆದರೆ ನನ್ನ ಹೆತ್ತವರು ಮಾತ್ರ ‘ಯಾರು ಏನಾದರೂ ಅಂದುಕೊಳ್ಳಲಿ. ಅದರ ಬಗ್ಗೆ ತಲೆ ಕೆಡಿಸ್ಕೋಬೇಡ. ಖುಷಿಯಿಂದ ಕಾಲೇಜಿಗೆ ಹೋಗು’ ಅಂದರು.
ಪಿಯೂಸಿಯಲ್ಲಿದ್ದಾಗ, ಯಾವುದೋ ದಾಖಲಾತಿಗಾಗಿ ತಹಶಿಲ್ದಾರರ ಸಹಿಯಿರುವ ಪತ್ರ ಬೇಕಿತ್ತು. ಅದನ್ನು ಪಡೆಯಲೆಂದು ಹೋದರೆ, ಬೆಳಗಿನಿಂದ ಸಂಜೆಯವರೆಗೆ ಟೇಬಲ್ನಿಂದ ಟೇಬಲ್ಗೆ ಅಲೆದಾಡಿಸಿದರು. ಕೆಲಸ ಮಾತ್ರ ಆಗಲಿಲ್ಲ. ನ್ಯಾಯವಾಗಿ ಕೆಲಸ ಮಾಡಿಕೊಡದೆ ಹೀಗೆ ಆಟವಾಡ್ತಾರಲ್ಲ; ಇವರ ವಿರುದ್ಧ ಯಾರಿಗೆ ದೂರು ಕೊಟ್ರೆ ಬೇಗ ಶಿಕ್ಷೆಯಾಗುತ್ತೆ? ಎಂದು ಅಲ್ಲಿಯೇ ಇದ್ದ ಕೆಲವರನ್ನು ಕೇಳಿದೆ. ‘ಡಿ.ಸಿ. ಸಾಹೇಬರಿಗೆ ದೂರು ಕೊಟ್ಟರೆ ಕ್ರಮ ತಗೋಳ್ತಾರೆ’ ಎಂಬ ಉತ್ತರ ಸಿಕ್ಕಿತು. ನನ್ನನ್ನು ಟೇಬಲ್ನಿಂದ ಟೇಬಲ್ಗೆ ಅಲೆದಾಡಿಸಿದ್ದರಲ್ಲ; ಅವರ ಬಳಿಗೆ ಹೋಗಿ ಗಟ್ಟಿಯಾಗಿ ಹೇಳಿದೆ: ‘ಮುಂದೊಂದು ದಿನ ನಾನು ಡಿ.ಸಿ. ಆಗ್ತೀನಿ. ಆಗೇನಾದ್ರೂ ನೀವು ನನ್ನ ಕೈಗೆ ಸಿಕ್ಕಿದ್ರೆ ಸರಿಯಾದ ಶಾಸ್ತಿ ಮಾಡ್ತೀನಿ….’
ಡಿಗ್ರಿ ಮುಗಿಸಬೇಕು. ಕೆಲಸಕ್ಕೆ ಸೇರಬೇಕು. ಮನೆಯಲ್ಲಿ ಹಣಕಾಸಿನ ಮುಗ್ಗಟ್ಟು ಇರದಂತೆ ನೋಡಿಕೊಳ್ಳಬೇಕು ಎಂಬುದಷ್ಟೇ ನನ್ನ ಗುರಿಯಾಗಿತ್ತು. ಲವ್, ಬಾಯ್‌ಫ್ರೆಂಡ್, ಕ್ರಶ್, ಶೋಕಿ, ಇತ್ಯಾದಿ ಸಂಗತಿಗಳು, ನನ್ನನ್ನು ಯಾವ ಸಂದರ್ಭದಲ್ಲೂ ಕ್ಯಾಚ್ ಮಾಡಲೇ ಇಲ್ಲ.
ಡಿಗ್ರಿ ಮುಗಿಯುತ್ತಿದ್ದಂತೆಯೇ, ಐಎಎಸ್‌ನ ಒಂದು ಕೈ ನೋಡೇಬಿಡೋಣ ಅನಿಸುತ್ತಿತ್ತು. ಆದರೆ ಐಎಎಸ್‌ಗೆ ಕೋಚಿಂಗ್ ಪಡೆಯಲು ಅಪಾರ ಮೊತ್ತದ ಹಣ ಬೇಕು ಅನ್ನಿಸಿದಾಗ, ಆ ಕನಸನ್ನು ಕೈಬಿಟ್ಟೆ. ಎಂಬಿಎ ಮುಗಿಸಿ, ಎಂಎನ್‌ಸಿಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡೆ. ವರ್ಷ ಕಳೆಯುವುದರೊಳಗೆ ಆ ಕೆಲಸವೂ ಬೋರ್ ಹೊಡೆಸಿತು. ನನ್ನ ಗುರಿ ಏನಿದ್ದರೂ ಡಿ.ಸಿ ಆಗುವುದೇ ವಿನಃ ಈ ಎಂಎನ್‌ಸಿಯ ನೌಕರಿಯಲ್ಲ ಅನಿಸಿತು. ತಕ್ಷಣ ರಾಜೀನಾಮೆ ಸಲ್ಲಿಸಿದೆ. ಅದಕ್ಕೆ ಕಾರಣವನ್ನೂ ಸ್ಪಷ್ಟವಾಗಿ ನಮೂದಿಸಿದ್ದೆ. ನಮ್ಮ ಕಂಪನಿಯ ಬಾಸ್, ಛೇಂಬರ್‌ಗೆ ಕರೆದು ಹೇಳಿದರು; ‘ನಿನಗೇನಾದರೂ ಬುದ್ಧಿ ಇದೆಯೋ ಇಲ್ವೋ? ಇಂಥಾ ಒಳ್ಳೆಯ ಕೆಲ್ಸ ಬಿಡ್ತೀನಿ ಅನ್ನೋದಾ? ಪ್ರತಿ ವರ್ಷ 5 ಲಕ್ಷ ಜನ ಪರೀಕ್ಷೆ ಬರಿತಾರೆ. ಅವರಲ್ಲಿ 90 ಜನ ಮಾತ್ರ ಐಎಎಸ್ ಆಫೀಸರ್ ಅಂತ ಸೆಲೆಕ್ಟ್ ಆಗೋದು. ಸುಮ್ನೆ ಯಾಕಮ್ಮ ರಿಸ್ಕ್ ತಗೊಳ್ತೀಯ?’ ಅವರ ಮಾತು ಮುಗೀತಿದ್ದಂತೆಯೇ ನಾನು ಸ್ಪಷ್ಟವಾಗಿ ಹೇಳಿದೆ ; ‘ಸರ್, ಐಎಎಸ್‌ಗೆ 90 ಜನ ಮಾತ್ರ ಸೆಲೆಕ್ಟ್ ಆಗ್ತಾರೆ ಅಲ್ವ ? ಆ 90 ಜನರಲ್ಲಿ ನಾನೂ ಒಬ್ಬಳಾಗಿರ್ತೀನಿ…’
ನನ್ನ ಈ ನಡೆ, ನಮ್ಮ ಕುಟುಂಬದಲ್ಲಿ ಹಲವರಿಗೆ ಇರಿಸುಮುರಿಸು ಉಂಟುಮಾಡಿತು. ‘ಮಾರ್ವಾಡಿ ಕುಟುಂಬಗಳಲ್ಲಿ ಹುಡುಗಿಯರು 20 ವರ್ಷ ತುಂಬುತ್ತಿದ್ದ ಹಾಗೇ ಮದುವೆಯಾಗಿ ಲೈಫ್ನಲ್ಲಿ ಸೆಟಲ್ ಆಗಬೇಕು. ಆದರೆ ಇವಳೇನು ಐಎಎಸ್ ಮಾಡ್ತೇನೆ ಅನ್ನೋದು? ಮಗಳು ಹೇಳಿದ್ದಕ್ಕೆಲ್ಲಾ ಈ ಅಪ್ಪ-ಅಮ್ಮ ತಾಳ ಹಾಕೋದು ಬೇರೆ…’ ಎಂದೆಲ್ಲಾ ಟೀಕಿಸಿದರು. ಎಂಎನ್‌ಸಿ ನೌಕರಿ ಬಿಟ್ಟ ಮೇಲಂತೂ ಕೊಂಕು ಮಾತುಗಳು ಇನ್ನಷ್ಟು ಹೆಚ್ಚಿಸಿದವು. ಇಂಥ ಪರಿಸ್ಥಿತಿಯಲ್ಲಿ ಊರಿಗೆ ಹೋಗಿ ನೆಮ್ಮದಿಯಿಂದ ಬದುಕುವುದಾಗಲೀ, ಮನೆಯಲ್ಲೇ ಇದ್ದು ಐಎಎಸ್‌ಗೆ ಪ್ರಿಪೇರ್ ಆಗುವುದಾಗಲಿ ಸಾಧ್ಯವೇ ಇರಲಿಲ್ಲ. ಆಪದ್ಧನದ ರೂಪದಲ್ಲಿ ಇದ್ದುದು ಎಂಎನ್‌ಸಿಯಲ್ಲಿ ಒಂದು ವರ್ಷ ದುಡಿದಿದ್ದೆನಲ್ಲ, ಅದಷ್ಟೇ ಹಣ. ಅದನ್ನೇ ನಂಬಿಕೊಂಡು ಕೋಚಿಂಗ್‌ಗೂ ಸೇರಿಕೊಂಡು, ಹಾಸ್ಟೆಲಿನ ಖರ್ಚನ್ನೂ ನಿಭಾಯಿಸಲು ಸಾಧ್ಯವೇ ಇರಲಿಲ್ಲ. ಆಗ ನಾನೊಂದು ಉಪಾಯ ಮಾಡಿದೆ. ಈಗಾಗಲೇ ಐಎಎಸ್ ಪಾಸ್ ಮಾಡಿರುತ್ತರಲ್ಲ, ಅವರಿಂದ ಸಲಹೆ-ಮಾರ್ಗದರ್ಶನ ಪಡೆದು, ರೂಂನಲ್ಲಿ ಇದ್ದುಕೊಂಡು ಓದಲು ನಿರ್ಧರಿಸಿದೆ. ಕೋಲ್ಕೊತ್ತಾದಲ್ಲಿ ಸಿಂಗಲ್ ಬೆಡ್‌ರೂಂನ ಮನೆಯೊಂದನ್ನು ಬಾಡಿಗೆಗೆ ಹಿಡಿದೆ.
ಇದನ್ನೆಲ್ಲ ಸಹಿಸಿಕೊಳ್ಳುವುದಕ್ಕೆ ಹಲವರು ಸಿದ್ಧರಿರಲಿಲ್ಲ. ಅವರೆಲ್ಲ ನನ್ನ ಹೆತ್ತವರ ಬಳಿ, ಆಪ್ತರ ಬಳಿ ಹೋಗಿ ‘ಆಗಲೇ 30 ವರ್ಷ ಆಗ್ತಾ ಬಂತು. ಅವಳೇನು ಮದುವೆಯಾಗಿ ಸೆಟಲ್ ಆಗ್ತಾಳ್ಳೋ ಅಥವಾ ಆ ಊರು ಈ ಊರು, ಆ ಕೆಲ್ಸ ಈ ಕೆಲ್ಸ ಅಂತ ಸುತ್ಕೊಂಡು ಇರ್ತಾಳ್ಳೋ?’ ಎಂದು ಕೇಳಿದರು. ಅಪ್ಪ, ಇದನ್ನೆಲ್ಲ ಸಂಕೋಚದಿಂದಲೇ ಹೇಳಿದರು. ನಾನಾಗ ಅವರಿಗೆ ಸ್ಪಷ್ಟವಾಗಿ ಹೇಳಿದೆ. ‘ಅಪ್ಪಾ, 32 ವರ್ಷ ತುಂಬಿದ ಮೇಲೂ ಮದುವೆಯಾಗಿ ಲೈಫ್ನಲ್ಲಿ ಸೆಟಲ್ ಆಗಲು ಅವಕಾಶ ಇದೆ. ಆದರೆ 32 ವರ್ಷ ತುಂಬಿಬಿಟ್ಟರೆ, ಆಮೇಲೆ ಐಎಎಸ್ ಪರೀಕ್ಷೆ ಬರೆಯಲು ನನಗೆ ಅವಕಾಶ ಸಿಗಲ್ಲ. ಈಗ ನಾನು ಒಂಟಿಯಾಗಿ ಬದುಕ್ತಿದೀನಿ ನಿಜ. ಆದರೆ, ನಿಮಗೆ ಕೆಟ್ಟ ಹೆಸರು ತರುವಂಥ ಯಾವ ಕೆಲಸವನ್ನೂ ನಾನು ಮಾಡೋದಿಲ್ಲ. ನನ್ನನ್ನು ನಂಬಿ…’
ಹೀಗೆ, ಹೆಜ್ಜೆ ಹೆಜ್ಜೆಗೂ ಅಡೆತಡೆ ಎದುರಿಸುತ್ತಲೇ 2013 ರಲ್ಲಿ ಐಎಎಸ್ ಪರೀಕ್ಷೆಗೆ ಕೂತೆ. ಆಗಲೇ, ಈವರೆಗೂ ಚಾಲ್ತಿಯಲ್ಲಿದ್ದ ಸಿಲಬಸ್ಸನ್ನು ಪೂರ್ತಿಯಾಗಿ ಬದಲಿಸಲಾಗಿದೆ ಎಂದು ಯುಪಿಎಸ್ಸಿ ಪ್ರಕಟಣೆ ಹೊರಡಿಸಿತು. ಪರೀಕ್ಷೆಗೆ ಸಿದ್ಧರಾಗಿದ್ದವರೆಲ್ಲ ಶಾಕ್ ಹೊಡೆಸಿಕೊಂಡವರಂತೆ ಬೆಚ್ಚಿಬಿದ್ದರು. ಸಿಲಬಸ್ ಬದಲಾಗಿದೆ ಅಂದಮೇಲೆ, ಪ್ರಶ್ನೆಪತ್ರಿಕೆ ಹೇಗಿರುತ್ತೋ, ಏನೇನು ಕೇಳ್ತಾರೋ ಏನ್ ಕತೇನೋ ಎಂದು ಮಾತನಾಡಿಕೊಂಡರು. ಇಷ್ಟು ದಿನ ಓದಿದ್ದಂತೂ ಆಗಿದೆ. ಏನಾಗುತ್ತೋ ಆಗಲಿ, ಪರೀಕ್ಷೆ ಎದುರಿಸಿದ ಅನುಭವವಂತೂ ಆಗುತ್ತೆ ಎಂಬ ನಿರುಮ್ಮಳಭಾವದಿಂದಲೇ ಪರೀಕ್ಷೆ ಬರೆದೆ. ಕಡೆಗೊಮ್ಮೆ ಫಲಿತಾಂಶವೂ ಬಂತು. 497ನೇ ರ್‍ಯಾಂಕ್ ಪಡೆದ ಕಾರಣಕ್ಕೆ ಐಎಎಸ್ ಗೆ ಬದಲಾಗಿ, ಐಆರ್‌ಎಸ್ (ಇಂಡಿಯನ್ ರೆವಿನ್ಯೂ ಸರ್ವಿಸ್) ಗ್ರೇಡ್ ಸಿಕ್ಕಿತು. ಕಂದಾಯ ಇಲಾಖೆ ಅಧೀಕ್ಷಕಿಯ ಕೆಲಸ ಸಿಕ್ಕಿತು. ಉಹುಂ, ನನ್ನ ಆಯ್ಕೆ ಇದಲ್ಲ. ನಾನು ಡಿ.ಸಿ ಆಗಬೇಕು. ಅದಷ್ಟೇ ನನ್ನ ಗುರಿ ಅಂದುಕೊಂಡು ಮತ್ತೆ ಓದಲು ಆರಂಭಿಸಿದೆ. ಕೆಲಸ ಮಾಡುತ್ತಲೇ ದಿನಕ್ಕೆ ಒಂಬತ್ತು ಗಂಟೆ ಕಾಲ ಓದಿ, 2014ರಲ್ಲಿ ಮತ್ತೆ ಯುಪಿಎಸ್‌ಸಿ ಪರೀಕ್ಷೆ ಬರೆದೆ. 2015ರಲ್ಲಿ ಫಲಿತಾಂಶವೂ ಬಂತು. ಈ ಬಾರಿ ನನಗೆ ಐಪಿಎಸ್ ಗ್ರೇಡ್ ಸಿಕ್ಕಿತು. ಪರಿಣಾಮ, ಪೊಲೀಸ್ ಅಧಿಕಾರಿಯಾದೆ. ಆದರೂ ಮನಸ್ಸಿಗೆ ಸಮಾಧಾನವಾಗಲಿಲ್ಲ. ಈ ಬಾರಿ ಕೇವಲ 10 ಅಂಕಗಳು ಕಡಿಮೆಯಾದದ್ದಕ್ಕೆ ಐಎಎಸ್ ಗ್ರೇಡ್ ಮಿಸ್ ಆಗಿತ್ತು. ಇರಲಿ, ಇದೂ ಒಂದು ಎಕ್ಸ್ಪೀರಿಯನ್ಸ್. ಇನ್ನೊಮ್ಮೆ ಪರೀಕ್ಷೆ ಬರೆದರೆ ಹೇಗೆ ಎಂದು ಯೋಚಿಸಿದವಳು, ಮತ್ತೆ ವಿದ್ಯಾರ್ಥಿಯಾಗಲು, ಅಧ್ಯಯನದಲ್ಲಿ ಮುಳುಗಿ ಹೋಗಲು ಮಾನಸಿಕವಾಗಿ ಸಿದ್ಧಳಾದೆ. ಅದೇ ವರ್ಷ, ಮತ್ತೆ ಪರೀಕ್ಷೆ ಬರೆದೆ.
ಅವತ್ತು 2016, ಮೇ 10ನೇ ತಾರೀಖು. ಇಂಧೋರ್‌ನಲ್ಲಿ ನಡೆಯಲಿದ್ದ ಕುಂಭಮೇಳದಲ್ಲಿ ನಮಗೆ ಡ್ಯೂಟಿ ಹಾಕಲಾಗಿತ್ತು. ಯುಪಿಎಸ್‌ಸಿ ಪರೀಕ್ಷೆಯ ಫಲಿತಾಂಶವೂ ಅವತ್ತೇ ಪ್ರಕಟ ಆಗಬಹುದೆಂದು ಗಾಳಿಸುದ್ದಿ ಇತ್ತು. ನಾನು ಗೆಳತಿಯರೊಂದಿಗೆ ವಿಮಾನ ಹತ್ತಿದ್ದೆನಷ್ಟೆ. ಆಗಲೇ ಫೋನ್ ರಿಂಗಾಯಿತು. ‘ಹಲೋ’ ಅಂದರೆ- ಆ ಕಡೆಯಲ್ಲಿದ್ದ ನನ್ನ ಹಿತೈಷಿ ಸಂಭ್ರಮದಿಂದ ಹೇಳಿದರು: ‘ಯುಪಿಎಸ್‌ಸಿ ರಿಸಲ್ಟ್ ಬಂದಿದೆ. ನಿಂಗೆ 19ನೇ ರ್‍ಯಾಂಕ್ ಸಿಕ್ಕಿದೆ. ಇಡೀ ಪಶ್ಚಿಮ ಬಂಗಾಳಕ್ಕೆ ನೀನೇ ಟಾಪರ್. ಕಂಗ್ರಾಟ್ಸ್…’
ಆ ಕ್ಷಣಕ್ಕೆ ನನಗೆ ನೆನಪಾಗಿದ್ದು ನನ್ನ ತಂದೆ. ಆತ, ನನ್ನನ್ನು ಓದಿಸಲೆಂದು ದಿನಗೂಲಿಗೆ ಮೈ ಒಡ್ಡಿದ್ದ ದೇವರು. ನನ್ನಿಂದಾಗಿ ಅವರು ಹತ್ತೆಂಟು ಮಂದಿಯಿಂದ ಟೀಕೆಗೆ ಗುರಿಯಾಗಿದ್ದರು. ರಾಜ್ಯಕ್ಕೇ ಮೊದಲಿಗಳಾಗಿ ಪಾಸ್ ಮಾಡಿದೀನಿ ಅನ್ನಿಸಿದಾಗ ಬಿಟ್ಟೂ ಬಿಡದೆ ನೆನಪಾಗಿದ್ದು ನನ್ನ ತಂದೆಯೇ. ತಕ್ಷಣವೇ ಅವರಿಗೆ ಫೋನ್ ಮಾಡಿ ಹೇಳಿದೆ: ಅಪ್ಪಾ, ರಿಸಲ್ಟ್ ಬಂತು. ರ್‍ಯಾಂಕ್ ಬಂದಿದೀನಪ್ಪಾ. 19ನೇ ರ್‍ಯಾಂಕು. ಈ ವರ್ಷವೇ ಡಿ.ಸಿ ಆಗ್ತೀನಿ ಕಣಪ್ಪಾ, ನೀನು ತಲೆ ತಗ್ಗಿಸುವಂಥ ಯಾವ ಕೆಲ್ಸಾನೂ ಮಾಡಲ್ಲ. ನೀನು ಹೆಮ್ಮೆಯಿಂದ ತಲೆಯೆತ್ತಿ ನಿಲ್ಲುವಂಥ ಸಾಧನೆ ಮಾಡ್ತಿನಿ ಅಂದಿದ್ದೇ ಅಲ್ವ? ಹಾಗೇ ಬದುಕಿದೀನಪ್ಪ. ಇನ್ಮೇಲೆ ನೀನು ಕೆಲಸಕ್ಕೆ ಹೋಗ್ಬೇಡ, ಮನೇಲಿದ್ದು ರೆಸ್ಟ್ ತಗೋಪ್ಪ… ಇಷ್ಟು ಹೇಳುವುದರೊಳಗೆ, ಕಂಠ ಬಿಗಿದುಬಂತು. ಜಾರಿದ ಕಂಬನಿಯನ್ನು ಒರೆಸಿಕೊಳ್ಳಲೆಂದು ಕ್ಷಣ ಮೌನವಾದೆ. ಆಗಲೇ ‘ಮಗಳೇ, ಸುದ್ದಿ ಕೇಳಿ ಖುಷಿಯಾಯ್ತು. ನಿಂಗೆ ಒಳ್ಳೇದಾಗಲಿ..’ ಎಂದು ಸಣ್ಣದನಿಯಲ್ಲಿ ಹೇಳಿದ್ದು ಕೇಳಿಸಿತು..
ಹೌದು; ಆ ತುದಿಯಲ್ಲಿದ್ದ ಅಪ್ಪನೂ ಬಿಕ್ಕಳಿಸುತ್ತಿದ್ದ, ಖುಷಿಯಿಂದ, ಸಂಭ್ರಮದಿಂದ…
ಎ.ಆರ್.ಮಣಿಕಾಂತ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Assembly bypolls; 14 ರಾಜ್ಯಗಳ 48 ಸ್ಥಾನಗಳ ಗೆಲುವಿನ ವಿವರ ಇಲ್ಲಿದೆ: ಎನ್‌ಡಿಎ ಮೇಲುಗೈ
Uppinangady: ಸರಣಿ ಅಪಘಾತ; 19 ಮಂದಿಗೆ ಗಾಯ
Maharashtra ; ಕೈ ಯಿಂದ ಲೋಕಸಭಾ ಸ್ಥಾನ ಕಸಿದ ಬಿಜೆಪಿ: ರಾಜ್ಯಸಭೆ ಬಹುಮತದತ್ತ ಚಿತ್ತ
By Election: ಮೂರು ಕ್ಷೇತ್ರದಲ್ಲೂ ಬಿಜೆಪಿ ಸೋತಿದ್ದಕ್ಕೆ ಟಿವಿಯನ್ನೇ ಒಡೆದು ಹಾಕಿದ ಮುಖಂಡ!
Basavaraj Bommai: ಹಣದ ಹೊಳೆಹರಿಸಿ ಕಾಂಗ್ರೆಸ್ ಗೆಲುವು: ಬೊಮ್ಮಾಯಿ ಆರೋಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.