ಭೀಮನಿಗೆ ಧಿಕ್ಕಾರವಿರಲಿ ಅಂದಳು ಭಾನುಮತಿ…
Team Udayavani, May 1, 2022, 5:55 AM IST
ನಾನು ಭಾನುಮತಿ. ಓಹ್, ಈ ಹೆಸರನ್ನು ಎಲ್ಲೋ ಕೇಳಿದಂತಿದೆಯಲ್ಲ ಎಂದಿರಾ? ಹೌದು. ನಿಮ್ಮ ಅನುಮಾನ ನಿಜ. ನಾನು ಅವಳೇ; ದುರ್ಯೋಧನನ ಹೆಂಡತಿ. ಧೃತರಾಷ್ಟ್ರ- ಗಾಂಧಾರಿಯ ಹಿರಿಯ ಸೊಸೆ. ಒಬ್ಬಿಬ್ಬರಲ್ಲ, ನೂರು ಮಂದಿಯಿಂದ ಅತ್ತಿಗೆ’ ಎಂದು ಕರೆಸಿಕೊಂಡವಳು. ಅಂಥ ನಾನು, ಈಗ ಒಂಟಿ, ಒಂಟಿ, ಒಬ್ಬಂಟಿ! ಸಾಮ್ರಾಟ್ ದುರ್ಯೋಧನನನ್ನು ಕಳೆದುಕೊಂಡೆನಲ್ಲ? ಅವತ್ತೇ ನನ್ನ ಸೌಭಾಗ್ಯವೆಲ್ಲ ಕಳೆದು ಹೋಯಿತು. ದುಃಸ್ವಪ್ನ ಕ್ಷಣಕ್ಷಣದ ಮಾತಾಯಿತು. ನೆಮ್ಮದಿ ಮಾಯವಾಯಿತು. ಸಂಕಟ ಜತೆಯಾಯಿತು.
ಮೂರು ತಿಂಗಳ ಹಿಂದೆ. ಹೌದು, ಬರೀ ಮೂರು ತಿಂಗಳ ಹಿಂದೆ ಅದೇ ವೈಶಂಪಾಯನ ನದೀ ತೀರದಲ್ಲಿ ವಿಹಾರಕ್ಕೆ ಹೋಗಿದ್ದೆ . ಅವತ್ತು, ಮಾರ್ಗಾಯಾಸ ತಿಳಿಯದಂತೆ ನೋಡಿಕೊಳ್ಳಲು ಗಾಯಕಿಯರಿದ್ದರು. ನರ್ತಕಿಯರಿದ್ದರು. ಪರಾಕು ಹೇಳಲಿಕ್ಕೆ, ಆಜ್ಞೆ ಪಾಲಿಸಲಿಕ್ಕೆ ಸಖಿಯರಿದ್ದರು. ಅರಮನೆಗೆ ಹಿಂದಿರುಗಲು ಮೇನೆಯಿತ್ತು. ಆದರೆ, ಈಗ ಅದೇ ವೈಶಂಪಾಯನ ನದಿ ತೀರದಲ್ಲಿ ಸಾಮ್ರಾಟ್ ದುರ್ಯೋಧನ; ನನ್ನ ಹೃದಯೇಶ್ವರ ಸುಯೋಧನ ನರಳುತ್ತಾ ಬಿದ್ದಿದ್ದಾನೆ. ಅವನ ತೊಡೆಯೇ ಮುರಿದು ಹೋಗಿದೆ. ಸುತ್ತಲೂ ಹೆಪ್ಪುಗಟ್ಟಿ ನಿಂತ ರಕ್ತ. ದುರ್ಯೋಧನನಿಂದ ಮಾರು ದೂರದಲ್ಲಿ ಗದೆ ಬಿದ್ದಿದೆ. ಹೆಪ್ಪುಗಟ್ಟಿದ ರಕ್ತದ ಕಮಟು ವಾಸನೆ ನಿಧಾನವಾಗಿ ಸುತ್ತಲೂ ಹರಡುತ್ತಿದೆ. ಕಾಗೆ, ರಣಹದ್ದುಗಳು ಒಂದರ ಹಿಂದೊಂದು ಬರುತ್ತಿವೆ. ಈ ಹಿಂದೆ ಸಾಮ್ರಾಟ್ ಸುಯೋಧನನ ಎದುರು ನಿಲ್ಲಲು ಎಂಥ ರಾಜಾಧಿರಾಜರೂ ಗಡಗಡ ನಡುಗುತ್ತಿದ್ದರು. ಕುರುಕ್ಷೇತ್ರ ಯುದ್ಧಕ್ಕೂ ಮೊದಲು ಪಾಂಡವರ ದೂತನಾಗಿ ಬಂದಿದ್ದ ವಾಸುದೇವ ಕೃಷ್ಣನೂ ದುರ್ಯೋಧನ ಮಹಾಪ್ರಭುಗಳ ದನಿಗೆ ಬೆಚ್ಚಿದ್ದನಂತೆ. ಅಂಥ ಧೀರ ಸುಯೋಧನ ಇವತ್ತು ಅನಾಥನಂತೆ ಬಿದ್ದಿದ್ದಾನೆ. ಮೈಯ ಮಾಂಸಕ್ಕೆ ಬಾಯಿ ಹಾಕಲು ಬಂದ ರಣಹದ್ದನ್ನೂ ಓಡಿಸಲಾಗದಷ್ಟು ನಿತ್ರಾಣನಾಗಿ ಕಡೆಗೆ ಸತ್ತೇ ಹೋಗಿದ್ದಾನೆ. ಹೇ ಪರಮೇಶ್ವರಾ, ಇಷ್ಟು ವರ್ಷ, ಒಂದು ದಿನವೂ ತಪ್ಪಿಸದಂತೆ ನಿನ್ನನ್ನು ಪೂಜಿಸಿದ್ದಕ್ಕೆ ಇದೇನಾ ಪ್ರತಿಫಲ?
ಹೌದು. ಈಗ ಎಲ್ಲವನ್ನೂ ಹೇಳಿ ಬಿಡುತ್ತೇನೆ. ನನಗೆ ಯಾರನ್ನೋ ಮೆಚ್ಚಿಸುವ ಆಸೆಯಿಲ್ಲ. ಯಾರನ್ನೋ ಹಂಗಿಸುವ ಉದ್ದೇಶವೂ ಇಲ್ಲ. ನನ್ನದೇನಿದ್ದರೂ ನೇರಾನೇರ. ಒಪ್ಪುವವರು ಒಪ್ಪಬಹುದು, ಇಲ್ಲವಾದಲ್ಲಿ ಬಿಡಬಹುದು. ಎಲ್ಲ ಮಾತು ಮುಗಿದ ಅನಂತರವೂ ಒಂದು ಮಾತನ್ನಂತೂ ಭೂಮಂಡಲದ ಎಲ್ಲರೂ ಒಪ್ಪಬೇಕೆಂಬುದು ನನ್ನ ಆಗ್ರಹ: ಏನೆಂದರೆ- ನನ್ನ ಯಜಮಾನರು ಎಲ್ಲರಿಗಿಂತ ಒಳ್ಳೆಯವರು. ಪಾಂಡವರಿಗೆ ಹೋಲಿಸಿದರಂತೂ ಹತ್ತು ಪಟ್ಟು ಒಳ್ಳೆಯವರು!
ಸಾಮ್ರಾಟ್ ಸುಯೋಧನ’ ಎಂಬ ಹೆಸರು ಕೇಳಿದಾಗ ನನಗೆ ಉಕ್ಕುವ ಹರೆಯ. ಕಣ್ತುಂಬ ಕನಸು. ಎದೆಯ ತುಂಬ ಆಸೆ! ಹಸ್ತಿನಾವತಿಗೆ ತುಂಬ ಹತ್ತಿರವೇ ಇದ್ದ ಕಳಿಂಗ ದೇಶ ನಮ್ಮದು. ರಾಜವಂಶ ಅಂದಮೇಲೆ ಸ್ವಯಂವರದ ಮೂಲಕವೇ ಮದುವೆಯಾಗಬೇಕು ಎಂಬುದು ಎಲ್ಲ ರಾಜಕುಮಾರಿಯರ ಹಣೆಬರಹ-ಕರ್ಮ. ಅರಮನೆಗಳೇ ಹಾಗೆ. ಅಲ್ಲಿ ಹೆಣ್ಣುಮಕ್ಕಳು ಪ್ರದರ್ಶನಕ್ಕೆ ಎಂಬಂತೆ ಇರುತ್ತಾರೆ. ಅರಮನೆಗಳಲ್ಲಿ ಅವರಿಗೆ ಎಲ್ಲ ಸೌಭಾಗ್ಯವೂ ಇರುತ್ತದೆ. ಆದರೆ, ಸ್ವಾತಂತ್ರ್ಯವೇ ಇರುವುದಿಲ್ಲ. ಅವರು ಮುಕ್ತವಾಗಿ ಮಾತಾಡುವಂತಿಲ್ಲ. ವಯೋಸಹಜ ಹುಮ್ಮಸ್ಸಿನಿಂದ ಯಾರನ್ನೂ ಪ್ರೀತಿಸುವಂತೆಯೂ ಇಲ್ಲ! ಬದಲಿಗೆ, ಸ್ವಯಂವರದ ದಿನ ಸರ್ವಾಲಂಕಾರ ಭೂಷಿತೆಯಾಗಿ ಹೂಮಾಲೆ ಹಿಡಿದು ತಂದೆಯ ಪಕ್ಕದಲ್ಲೇ ಒಂದು ಪುಟ್ಟ ಸಿಂಹಾಸನದಲ್ಲಿ ಕುಳಿತಿರಬೇಕು. ಸ್ವಯಂವರದಲ್ಲಿ ಗೆದ್ದವನ ಕೊರಳಿಗೆ ಒಂದೂ ಮಾತಾಡದೆ ಮಾಲೆ ಹಾಕಬೇಕು! ಈ ವಿಷಯ ಕೇಳಿದಾಗಲೆಲ್ಲ- “ಛೀ, ಇದೆಂಥ ಧೂರ್ತ ಆಚರಣೆ! ಹೆಣ್ಣನ್ನು ಈ ಜನ ಮಾರಾಟದ ಸರಕೆಂದು ತಿಳಿದರೋ ಹೇಗೆ?’ ಎಂದು ರೊಚ್ಚಿನಿಂದ ಕೇಳುವ ಆಸೆಯಾಗುತ್ತಿತ್ತು. ಅದೊಮ್ಮೆ ತಂದೆಯವರಲ್ಲಿ ನನಗನ್ನಿಸಿದ್ದನ್ನು ಹೇಳಿಯೂ ಬಿಟ್ಟೆ.
ತಂದೆಯವರು ನಸುನಕ್ಕರು. ಅನಂತರ ಹೇಳಿದರು: ಮಗಳೆ, ಈಗಾಗಲೇ ಹಸ್ತಿನಾವತಿಯಿಂದ ಸುದ್ದಿ ಬಂದಿದೆ. ಯುವರಾಜ ದುರ್ಯೋಧನನಿಗೆ ನಿನ್ನನ್ನು ತಂದುಕೊಳ್ಳಲು ಭೀಷ್ಮ, ವಿದುರ, ಧೃತರಾಷ್ಟ್ರ.. ಎಲ್ಲರೂ ಬಯಸಿದ್ದಾರೆ. ದುರ್ಯೋಧನನೂ. ಹುಡುಗ ವಿಪರೀತ ಧೈರ್ಯವಂತ ಮತ್ತು ಅಷ್ಟೇ ಸಿಡುಕನಂತೆ. ಆದರೆ ಸಾಮ್ರಾಜ್ಯದ ರಕ್ಷಣೆಗೆ, ಎಲ್ಲರ ನೆಮ್ಮದಿಯ ಬದುಕಿಗೆ ಕಾವಲಾಗಿ ಭೀಷ್ಮನಿದ್ದಾನೆ. ನಾವೂ ಸಮ್ಮತಿಸಿದ್ದೇವೆ.
ಹಸ್ತಿನಾವತಿಗೆ ನಾನು ಬಂದದ್ದು ಹಾಗೆ. ಅರಮನೆಯಲ್ಲಂತೂ ನನಗೆ ವಿಪರೀತ ಸ್ವಾತಂತ್ರ್ಯವಿತ್ತು. ಅವತ್ತು, ಮೊದಲ ರಾತ್ರಿಯ ರೋಮಾಂಚನದಲ್ಲಿ ನಾನು ಹೂವಂತೆ ಅರಳುತ್ತಿದ್ದೆ. ಆಗಲೇ ಇವರು’ ಕರೆದರು: ಭಾನೂ…’ ಓಹ್, ಅವರ ದನಿಯಲ್ಲಿ ಅದೆಂಥ ಕಕ್ಕುಲಾತಿ! ನನಗೆ ಖುಷಿಯಾಯಿತು. ನಾಚುತ್ತ ನಾಚುತ್ತಲೇ- ಪ್ರಭೂ’ ಅಂದೆ. ಅವರು ನನ್ನನ್ನೇ ಕಣ್ಣೊಳಗೆ ತುಂಬಿಕೊಂಡು ಹೇಳಿದರು: ಕ್ಷಮಿಸು ಭಾನೂ. ಈ ಸುಯೋಧನ ನಿನ್ನಷ್ಟು ಪರಿಶುದ್ಧನಾಗಿ ಉಳಿದಿಲ್ಲ. ಅರಮನೆ ಎಂಬುದೇ ಹಾಗೆ. ಅಲ್ಲಿ ಹಾದಿ ತಪ್ಪಲು ಹೇರಳ ಅವಕಾಶಗಳಿರುತ್ತವೆ. ಆದರೆ, ಈ ಸೌಲಭ್ಯಗಳೆಲ್ಲ ರಾಜಕುಮಾರರಿಗೆ ಮೀಸಲು. ನಿನ್ನಲ್ಲಿ ಎಂಥ ಮುಚ್ಚುಮರೆ? ಇಲ್ಲಿ ನನ್ನ ಸೇವೆಗೆಂದು ದಾಸಿಯರಿದ್ದಾರೆ. ಅವರೊಂದಿಗೆಲ್ಲ ನಾನು ಸುಖಪಟ್ಟಿದ್ದೇನೆ. ಆದರೆ ಭಾನೂ, ತೊತ್ತುಗಳ ಸಹವಾಸ ಬೇರೆ. ಹೆಂಡತಿಯ ಸಾನ್ನಿಧ್ಯವೇ ಬೇರೆ. ಅದೊಂದು ಅಪೂರ್ವವಾದ ಧನ್ಯಲೋಕ, ಮಾನ್ಯಲೋಕ ಎಂಬುದು ನಿನ್ನ ಸಹವಾಸದಿಂದ ಅರಿವಿಗೆ ಬಂದಿದೆ. ತಿಳಿಯದೇ ತಪ್ಪು ಮಾಡಿದ ಈ ಸುಯೋಧನನನ್ನು ಕ್ಷಮಿಸುವೆಯಾ ಭಾನೂ…’
ಅವರ’ ಮಾತುಗಳಲ್ಲಿದ್ದ ಮಾರ್ದವಕ್ಕೆ ನಾನು ಕರಗಿಹೋದೆ. ಹೇಗೆ ಉತ್ತರಿಸುವುದೋ ಗೊತ್ತಾಗದೆ ಅವರ ಕೈ ಹಿಡಿದು ತುಟಿಗೆ ಒತ್ತಿಕೊಂಡೆ. ಅವರು’ ಮೊದಲೇ ನಿರ್ಧರಿಸಿ ದ್ದಂತೆ ಹೇಳ ತೊಡಗಿದರು: ಭಾನೂ, ಈ ಪಾಂಡವರಿದ್ದಾರಲ್ಲ? ಅವರ ಮೇಲೆ ನನಗೆ ಹಗೆಯುಂಟು. ಅವರೊಂದಿಗೇ ಬದುಕಿ ಎಂದು ತಾತ ಭೀಷ್ಮ, ವಿದುರ ಇಬ್ಬರೂ ಪದೇ ಪದೆ ಹೇಳುತ್ತಾರೆ. ಆದರೆ ಅವರೊಂದಿಗೆ, ಅದರಲ್ಲೂ ಭೀಮನೊಂದಿಗೆ ಬದುಕುವುದು ನನ್ನಿಂದ ಆಗದ ಕೆಲಸ. ಇಷ್ಟಕ್ಕೂ ದಶಕಗಳಿಂದಲೂ ಹಸ್ತಿನಾವತಿಯ ದೊರೆ ಆಗಿದ್ದಾತ ನನ್ನ ತಂದೆ-ಧೃತರಾಷ್ಟ್ರ. ವಂಶಪಾರಂಪರ್ಯ ನಿಯಮದಂತೆ ಯುವರಾಜನ ಪಟ್ಟ ನನ್ನದಾಗಿದೆ. ಈಗ ಪಾಂಡವರು ದಿಢೀರನೆ ಬಂದು ಸಾಮ್ರಾಜ್ಯದಲ್ಲಿ ಪಾಲು ಕೊಡು ಅಂದರೆ ಒಪ್ಪುವುದಾದರೂ ಹೇಗೆ? ಈ ಪಾಂಡವರಿಗೆ ಏನು ಕಡಿಮೆ ಆಗಿದೆ? ಅವರಿಗೇಕೆ ಭಿಕ್ಷೆ ಬೇಡುವ ಹುಚ್ಚು? ಪಾಲು ಕೇಳುವ ಬದಲು ತಾವೇ ಒಂದು ಸಾಮ್ರಾಜ್ಯ ಕಟ್ಟಬಾರದೆ? ಈ ವಾದ ನನ್ನದು. ಆದರೆ ವಿದುರ, ಭೀಷ್ಮಾದಿಗಳು ಒಪ್ಪುತ್ತಿಲ್ಲ.
ಅವರಿಗೆ ಗೊತ್ತಿಲ್ಲದ ವಿಷಯಗಳೆಂದರೆ-ಈ ಪಾಂಡವರಿಂದ ದುರ್ಯೋ ಧನ ಬಗೆ ಬಗೆಯಲ್ಲಿ ಅವಮಾನಕ್ಕೆ ಗುರಿಯಾಗಿದ್ದಾನೆ. ಅದನ್ನೆಲ್ಲ ತೀರಿಸಿಕೊಳ್ಳ ಬೇಕು ಎಂಬ ಛಲದಿಂದಲೇ ಬದುಕಿದ್ದಾನೆ. ಈ ರಾಜ್ಯದಲ್ಲಿ ಪಾಲು ಬೇಕೇ ಬೇಕು ಎಂದಾದರೆ ಅವರು ಯುದ್ಧ ಮಾಡಿ ಗೆಲ್ಲಲಿ. ಈ ರಾಜಕಾರಣದ ಮಧ್ಯೆ ಕೆಲವೊಮ್ಮೆ ನಿನ್ನ ನೆನಪಾಗದೇ ಹೋಗಬಹುದು. ಆಗೆಲ್ಲ ಕ್ಷಮಿಸಿಬಿಡು ರಾಣೀ…’ ಮುಂದೆ ನಡೆದಿದ್ದೆಲ್ಲ ದ್ವೇಷಾಸೂಯೆಯ ರಾಜಕೀಯವೇ. ಅದು ಜಗತ್ತಿಗೇ ಗೊತ್ತಿದೆ. ಈ ರಗಳೆಯ ಮಧ್ಯೆಯೇ ನನಗಿಬ್ಬರು ಮಕ್ಕಳಾದರು. ಮಗನಿಗೆ ಲಕ್ಷಣ ಎಂದು ಹೆಸರಿಟ್ಟೆ. ಮಗಳನ್ನು ಲಕ್ಷಣಿ ಎಂದು ಕರೆದೆ. ಕೆಲವೇ ದಿನಗಳಲ್ಲಿ ಮೈದುನರ ವಂಶವೂ ಬೆಳೆದು ಅರಮನೆಯೆಂಬುದು ಪುಟ್ಟ ಮಕ್ಕಳ ಅಳು, ನಗು, ಕೇಕೆಯಿಂದ ತುಂಬಿ ಹೋಯಿತು. ವಿಪರ್ಯಾಸವೆಂದರೆ, ಜಿದ್ದಾ ಜಿದ್ದಿ ರಾಜಕಾರಣದಿಂದಾಗಿ ಮಕ್ಕಳೊಡನೆ ಬೆರೆತು ಖುಷಿಪಡುವ ಯೋಗ ನಮಗೆ ಒದಗಿ ಬರಲೇ ಇಲ್ಲ. ದ್ರೌಪದಿಯ ವಸ್ತ್ರಾಪಹರಣದ ಪ್ರಸಂಗದಿಂದ ನನ್ನವರು ವಿನಾಕಾರಣ ಅಪರಾಧಿಯಂತೆ ಕಾಣಿಸಿಕೊಂಡರು. ಇರಲಿ; ಒಂದು ಮಾತು ಕೇಳಿ, ಇಲ್ಲಿ ಧರ್ಮರಾಯನ ತಪ್ಪಿರಲಿಲ್ಲವೆ? ಜೂಜಿಗೆ ಕೂತವನಿಗೆ ಸಾಮಾನ್ಯಪ್ರಜ್ಞೆ ಎಂಬುದು ಇರಬೇಡವೆ? ರಾಜ್ಯ ಹೋಯ್ತು, ಕೋಶ ಹೋಯ್ತು. ಆ ಕೂಡಲೇ ಅವನು ಎದ್ದು ಹೋಗಬೇಕಿತ್ತು. ಆತ ಹಾಗೆ ಮಾಡಲಿಲ್ಲ. ತಮ್ಮಂದಿರನ್ನು ಪಣಕ್ಕಿಟ್ಟು ಸೋತ. ಆಗಲೂ ಎಚ್ಚರಗೊಳ್ಳದೆ ಹೆಂಡತಿ ಯನ್ನೂ ಪಣಕ್ಕಿಟ್ಟ. ಯಾವ ಗಂಡಸಾದರೂ ಮಾಡುವ ಕೆಲಸವೇ ಇದು?
ಆಮೇಲೆ ಆ ದ್ರೌಪದಿ! ಅವಳೇನೂ ಕಡಿಮೆಯಿಲ್ಲವಲ್ಲ; ಮೊದಲು ಸ್ವಯಂವರದಲ್ಲಿ; ಅನಂತರ ಇಂದ್ರಪ್ರಸ್ಥದ ಅರಮನೆಯಲ್ಲಿ ಅವಮಾನ ಮಾಡಿದ್ದಳಂತೆ. ಅದಕ್ಕೆ ಇಲ್ಲಿ ಇವರೂ’ ಮುಯ್ಯಿ ತೀರಿಸಿಕೊಂಡಿದ್ದಾರೆ. ಆದರೆ, ನನ್ನವರ’ ವರ್ತನೆ ಯಾರೂ ಒಪ್ಪುವಂತಿರಲಿಲ್ಲ. ಅದು ಖಂಡಿತ ಕ್ಷಮಾರ್ಹವಲ್ಲ ಎಂದೇ ನಾನು ಹೇಳ ಬಯಸುತ್ತೇನೆ. ಆದರೆ, ಸದಾ ಧರ್ಮದ ಕುರಿತೇ ಮಾತಾಡುವ ಭೀಷ್ಮ, ದ್ರೋಣ, ವಿದುರರ ಬುದ್ಧಿ ಎಲ್ಲಿ ಮಣ್ಣು ತಿನ್ನುತ್ತಿತ್ತು? ಸುಯೋಧನಾ, ಈ ಅವಿವೇಕ ಸಲ್ಲದು ಎಂದು ಅವರೇಕೆ ಅಬ್ಬರಿಸಲಿಲ್ಲ? ಪರಶುರಾಮನನ್ನೇ ಮಣಿಸಿದ ಭೀಷ್ಮನಿಗೆ ದುರ್ಯೋಧನನನ್ನು ಸುಮ್ಮನಿರಿಸಲು ಆಗಲಿಲ್ಲ ಎಂದರೆ ನಂಬಲು ಸಾಧ್ಯವೆ? ಒಂದು ಸತ್ಯ ಹೇಳುತ್ತೇನೆ ಕೇಳಿಸಿಕೊಳ್ಳಿ: ಈ ಭೀಷ್ಮ ದ್ರೋಣಾದಿಗಳು ಸುಯೋಧನನಿಗೆ ಕೆಟ್ಟ ಹೆಸರು ಬರಲೆಂದೇ ಕಾದಿದ್ದರು. ಅಂಥದೊಂದು ಸಂದರ್ಭ ಬಂದಾಗ ಕಣ್ಮುಚ್ಚಿಕೊಂಡು ಕೂತು ಬಿಟ್ಟರು, ಅಷ್ಟೆ…
ಇವರೊಮ್ಮೆ ಹೇಳಿದ್ದರು- ನನ್ನ ಶಕ್ತಿ-ದೌರ್ಬಲ್ಯ ಎರಡೂ ಅವನೇ; ಕರ್ಣ! ಉಹುಂ, ಅವನಿಗೆ ಸರಿಸಮಾನರು ಯಾರೂ ಇಲ್ಲ. ಈ ಭೀಷ್ಮ-ದ್ರೋಣರಂಥ ಮೂರ್ಖರು ಕರ್ಣನಿಗೆ ಅರ್ಜುನನೇ ಎದುರಾಳಿ ಅನ್ನುತ್ತಾರೆ. ಆದರೆ ಭಾನೂ, ಈ ಕರ್ಣ ಹುಲಿಯಾದರೆ ಅರ್ಜುನ ಹುದ್ದೆಯಿದ್ದಂತೆ. ಒಂದೊಮ್ಮೆ ಯುದ್ಧವಾಯ್ತು ಅಂದುಕೋ; ಆಗ ನಾನು ನಂಬುವುದು ಕರ್ಣನನ್ನು ಮಾತ್ರ…’
ಯುದ್ಧದಲ್ಲಿ ಹೆಚ್ಚಿನ ಅನ್ಯಾಯ ನಡೆದದ್ದು ಪಾಂಡವರಿಂದಲೇ. ಭೀಷ್ಮ, ದ್ರೋಣ, ಜಯದ್ರಥ, ಕರ್ಣ, ಕಡೆಗೆ ದುರ್ಯೋಧನ… ಹೀಗೆ ಎಲ್ಲರ ವಿಷಯದಲ್ಲೂ ಅನ್ಯಾಯ ನಡೆಯಿತು. ಈ ಎಲ್ಲ ಸಂದರ್ಭದಲ್ಲೂ ಧರ್ಮಾತ್ಮ ಎನ್ನಿಸಿಕೊಂಡ ಯುಧಿಷ್ಠಿರ ಇದ್ದ. ಪರಮಾತ್ಮ ಎಂದು ಕರೆಸಿಕೊಂಡ ವಾಸುದೇವನೂ ಇದ್ದ. ಭೀಮಾರ್ಜುನರು ಮಾಡಿದ್ದು ತಪ್ಪು ಎಂದು ಅವರಿಬ್ಬರಿಗೂ ಅನ್ನಿಸಲೇ ಇಲ್ಲ. ಅಥವಾ ಎಲ್ಲ ಮುಗಿದ ಮೇಲೆ, ಲೋಕದ ದೃಷ್ಟಿಯಲ್ಲಿ ಸಭ್ಯರು ಅನ್ನಿಸಿಕೊಳ್ಳಲು ಮೊಸಳೆ ಕಣ್ಣೀರು ಹಾಕಿದರು. ಸಮಾಧಾನವೆಂದರೆ- ನನ್ನ ಹೃದಯೇಶ್ವರ ಸುಯೋಧನ ಇಂಥ ಕೆಲಸವನ್ನು ಯಾವತ್ತೂ ಮಾಡಲಿಲ್ಲ. ಯುದ್ಧದಲ್ಲಿ ಅಭಿಮನ್ಯು ಪರಾಕ್ರಮದಿಂದ ಹೋರಾಡಿ ಸತ್ತಾಗ, ಆತ ತನ್ನ ಬದ್ಧ ವೈರಿಯ ಮಗ ಎಂಬ ಯೋಚನೆ ನನ್ನ ದೊರೆಗೆ’ ಬರಲೇ ಇಲ್ಲ. ಆತನ ಎದುರು ಕೂತು, ನಿನಗೆ ಬಂದಂಥ ಪರಾಕ್ರಮದ ಸಾವೇ ನನಗೂ ಬರಲಿ ಎಂದು ಕೇಳಿಕೊಂಡರು. ಅಶ್ವತ್ಥಾಮ, ಪಾಂಡವರೆಂದು ಭಾವಿಸಿ ಉಪಪಾಂಡವರನ್ನು ಕೊಂದದ್ದು ತಿಳಿದಾಗ, ಆ ಪುಟ್ಟ ಮಕ್ಕಳ ದೌರ್ಭಾಗ್ಯಕ್ಕೆ ಕಣ್ಣೀರಿಟ್ಟರು. ಗದಾ ಯುದ್ಧದ ಸಂದರ್ಭದಲ್ಲಿ ಅದೊಮ್ಮೆ ಭೀಮನೇ ಮೂರ್ಛೆತಪ್ಪಿಬಿದ್ದಾಗ- ಅವನನ್ನು ಕೊಂದು ಹಾಕುವ ಅವಕಾಶವಿದ್ದರೂ ಇವರು’ ಹಾಗೆ ಮಾಡಲಿಲ್ಲ ವಂತೆ. ಬದಲಿಗೆ, ಭೀಮನಿಗೆ ಗದೆಯಿಂದಲೇ ಗಾಳಿ ಬೀಸಿ, ಎಚ್ಚರಿಸಿ ಹೇಳಿ ದರಂತೆ: ಎರಡು ಘಳಿಗೆ ವಿಶ್ರಮಿಸಿಕೋ. ಅನಂತರ ಯುದ್ಧ ಮುಂದುವರಿ ಸೋಣ…’ ಹೀಗೆ ಪ್ರಾಣಭಿಕ್ಷೆ ನೀಡಿದವರನ್ನೂ ಆ ಧುರುಳ ಭೀಮ ಅಧರ್ಮದ ಹಾದಿಯಲ್ಲೇ ಕೊಂದು ಹಾಕಿದನಲ್ಲ? ಅವನ ಪೌರುಷಕ್ಕೆ ಧಿಕ್ಕಾರವಿರಲಿ… ಭಾನು ಮತಿಯ ಮನದಾಳದ ನೋವನ್ನು ಲೋಕ ಇನ್ನಾದರೂ ಕೇಳಿಸಿಕೊಳ್ಳಲಿ…
***
ಮಹಾಭಾರತದಲ್ಲಿ ಇದ್ದೂ ಇಲ್ಲದಂತೆ ಕಾಣಿಕೊಳ್ಳುವ ಪಾತ್ರ ಭಾನುಮತಿ ಯದು. ಸಾಮ್ರಾಟ್ ಸುಯೋಧನನ ಧರ್ಮಪತ್ನಿಯಾಗಿ ಆಕೆ ಅನುಭವಿಸಿದ್ದು ಸುಖವೋ- ಸಂಕಟವೋ? ಉಳಿದೆಲ್ಲರ ಕಣ್ಣಲ್ಲಿ ಅಹಂಕಾರಿ, ಉದ್ಧಟ, ಯುವರಾಜ ಅನ್ನಿಸಿಕೊಂಡ ದುರ್ಯೋಧನ ಭಾನುಮತಿಯ ಕಣ್ ಬೆಳಕಿನಲ್ಲಿ ಹೇಗೆ ಕಾಣಿಸುತ್ತಿದ್ದ? ಬಾಳಸಂಗಾತಿಯೊಂದಿಗೆ ಆತ ಹೇಳಿಕೊಂಡ ಮಾತುಗಳು -ಹಂಚಿಕೊಂಡಿದ್ದ ಸಂಗತಿಗಳು ಏನಿದ್ದವು? -ಇಂಥವೇ ಪ್ರಶ್ನೆಗಳಿಗೆ ಉತ್ತರ ಹುಡುಕುವ ನೆಪದಲ್ಲಿ ಮಹಾಭಾರತಕ್ಕೆ ಸಂಬಂಧಿಸಿದ ಐದಾರು ಪುಸ್ತಕ ಹಿಡಿದು ಕೂತಾಗ-ಭಾನುಮತಿಯ ಪರಿಚಯವಾಯಿತು. ಕೆಲವೇ ಕ್ಷಣದಲ್ಲಿ ಆಕೆ ಹಿರಿಯ ಗೆಳತಿಯಾದಳು. ಒಂದೊಂದೇ ಮಾತುಗಳಿಂದ ಹತ್ತಿರವಾದಳು. ಮೂರ್ನಾಲ್ಕು ದಿನಗಳಲ್ಲಿ ಸಲುಗೆ ಸಿಕ್ಕಿತು ನೋಡಿ; ಅವತ್ತೇ ಮನದ ಮಾತನ್ನೆಲ್ಲ ಹೇಳಿಕೊಂಡಳು. ಹೀಗೇ…
– ಎ.ಆರ್.ಮಣಿಕಾಂತ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Ullala; ನೇಮದ ಗದ್ದೆಯಲ್ಲಿ ತ್ಯಾಜ್ಯ ರಾಶಿ: ವೈದ್ಯನಾಥ ದೈವದ ಕೋಪಾವೇಶ
Security ನೀಡುವಂತೆ ಕೇಂದ್ರ ಸಚಿವರಿಗೆ ಸ್ನೇಹಮಯಿ ಪತ್ರ
Puttur: ನಿಯಂತ್ರಣ ತಪ್ಪಿ ಗುಂಡಿಗೆ ಬಿದ್ದ ಕಾರು; ಮೂವರ ದುರ್ಮರಣ
INDvsAUS: ವಿಚಿತ್ರ ರೀತಿಯಲ್ಲಿ ಔಟಾದ ರಿಷಭ್ ಪಂತ್ ವಿರುದ್ದ ಕಿಡಿಕಾರಿದ ಗಾವಸ್ಕರ್
Hathras: ಶಾಲೆಗೆ ರಜೆ ಸಿಗಬೇಕೆಂದು 2ನೇ ತರಗತಿ ಮಗುವನ್ನು ಕೊಂದ ವಿದ್ಯಾರ್ಥಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.