ಲೆಕ್ಕ ಕಲಿಯದವಳ ಲೆಕ್ಕಾಚಾರದ ಬದುಕು
Team Udayavani, Jan 16, 2022, 5:55 AM IST
ನೂರಾರು ಮಂದಿಗೆ ಕೆಲಸ ಕೊಡುವಂಥ ಸ್ಥಾನಕ್ಕೆ ಯಾರಾದರೂ ಚಿಕ್ಕ ವಯಸ್ಸಿನಲ್ಲೇ ಹೋದರು ಅಂದುಕೊಳ್ಳಿ; ಆಗ ಸಾಮಾನ್ಯವಾಗಿ ಎಲ್ಲರ ಪ್ರತಿಕ್ರಿಯೆ ಹೀಗಿರುತ್ತದೆ: ಪಿತ್ರಾರ್ಜಿತವಾಗಿ ಬಂದ ಆಸ್ತಿ-ಹಣದ ಬಲವಿದೆ. ಅಕೌಂಟೆಂಟ್‌ಗಳ ನೆರವು ಪಡೆದು ಎಲ್ಲವನ್ನೂ ಮ್ಯಾನೇಜ್ ಮಾಡ್ತಾರೆ!’ ಹೆಚ್ಚಿನ ಸಂದರ್ಭಗಳಲ್ಲಿ ಇದೇ ವಾಸ್ತವ ಸಂಗತಿಯೂ ಆಗಿರುತ್ತದೆ. ಹೀಗಿರುವಾಗ, ಯಾವುದೇ ಶ್ರೀಮಂತ ಹಿನ್ನೆಲೆಯೂ ಇಲ್ಲದ, ಗಾಡ್ ಫಾದರ್‌ಗಳ ಬೆಂಬಲವಿಲ್ಲದ, ಕುಗ್ರಾಮದ, ಬಡವರ ಮನೆಯ ಹುಡುಗಿ ಯೊಬ್ಬಳು 34ನೇ ವಯಸ್ಸಿನಲ್ಲಿಯೇ 1,000 ಮಂದಿಗೆ ಕೆಲಸ ಕೊಡುವಂಥ ಸ್ಟೇಜ್ ತಲುಪಿಕೊಂಡ ಸ್ವಾರಸ್ಯಕರ ಸಂಗತಿಯನ್ನು ತಿಳಿಯಬೇಕೆಂದರೆ, ನೇಹಾ ಮುಜ್ವಾಡಿಯಾ ಅವರ ಮಾತುಗಳಿಗೆ ಕಿವಿಯಾಗಬೇಕು. ಹೇಳಲು ಮರೆತೆ: ಈ ಯಶೋಗಾಥೆಯ ನಾಯಕಿಯೇ ನೇಹಾ ಮುಜ್ವಾಡಿಯಾ.
****
ಮಧ್ಯಪ್ರದೇಶದ ಮಾಂದ್ಸೂರ್ ಜಿಲ್ಲೆಯ ಮೆಕೆಡಾ ಎಂಬ ಕುಗ್ರಾಮ, ನೇಹಾಳ ಹುಟ್ಟೂರು. ತಮ್ಮ ಊರು, ಅಲ್ಲಿನ ಪರಿಸರವನ್ನು ನೆನಪು ಮಾಡಿಕೊಂಡು ನೇಹಾ ಹೇಳುತ್ತಾರೆ: ನಮ್ಮದು ಮಿಡ್ಲ್ ಕ್ಲಾಸ್ ಫ್ಯಾಮಿಲಿ. ಅಪ್ಪ ಸಣ್ಣದೊಂದು ಬಿಸಿನೆಸ್ ಮಾಡುತ್ತಿದ್ದರು. ಅಮ್ಮ ಗೃಹಿಣಿ. ಇಬ್ಬರೂ ಹೆಚ್ಚು ಕಲಿತವರಲ್ಲ. ನಮ್ಮ ಊರಲ್ಲಿ 7ನೇ ತರಗತಿಯವರೆಗಷ್ಟೇ ಶಾಲೆಯಿತ್ತು. ವಿಶೇಷವೆಂದರೆ, ಮಕ್ಕಳನ್ನು ಹೆಚ್ಚು ಓದಿಸಬೇಕು ಎಂದು ಯಾರೂ ಯೋಚಿಸು ತ್ತಿರಲಿಲ್ಲ. ಗಂಡು ಮಕ್ಕಳನ್ನು ಮಾತ್ರ ಹೈಸ್ಕೂಲ್ – ಕಾಲೇಜಿಗೆ ಸೇರಿಸುತ್ತಿದ್ದರು. 7ನೇ ತರಗತಿ ಮುಗಿಯುತ್ತಿದ್ದಂತೆಯೇ ಹೆಣ್ಣು ಮಕ್ಕಳಿಗೆ ಅಡುಗೆ-ಮನೆ ಕೆಲಸ ಕಲಿಸಿ ಮದುವೆ ಮಾಡಿ ಬಿಡುತ್ತಿದ್ದರು! ಹೆಣ್ಣು ಮಕ್ಕಳು ಓದಿ ಏನಾಗಬೇಕಿದೆ? ಅಡುಗೆ ಮಾಡಿಕೊಂಡು, ಮಕ್ಕಳನ್ನು ನೋಡಿಕೊಂಡು ಅವರು ಮನೆಯಲ್ಲಿ ಇದ್ದರೆ ಸಾಕು ಎಂಬುದು ಎಲ್ಲರ ವಾದ ಮತ್ತು ನಂಬಿಕೆಯಾಗಿತ್ತು.
ನಮ್ಮ ಸಂಬಂಧಿಯೊಬ್ಬರು ಎಂಜಿನಿಯರ್ ಆಗಿದ್ದರು. ಅವರು ಬಂದರೆ ಸಾಕು; ಊರ ಜನರೆಲ್ಲ ಎದ್ದು ನಿಂತು ಕೈ ಮುಗಿಯುತ್ತಿದ್ದರು. ಕುಟುಂಬದಲ್ಲೂ ಅವರಿಗೆ ದೊಡ್ಡ ಮರ್ಯಾದೆ ಸಿಗುತ್ತಿತ್ತು. ಅವರಂತೆಯೇ ನಾನೂ ದೊಡ್ಡ ಹುದ್ದೆ ತಲುಪಿ ಹೆಸರು ಮಾಡಬೇಕು ಎಂದು ಆಸೆಯಿತ್ತು. ಹೆತ್ತವರಿಗೂ ಅದನ್ನು ಹೇಳಿದ್ದೆ . “ಮುಂದೆ ನಾನೂ ಎಂಜಿನಿಯರ್ ಆಗ್ತೀನೆ. ಓದು ನಿಲ್ಲಿಸು ಅಂತ ಹೇಳಬೇಡಿ’ ಎಂದು ಪ್ರಾರ್ಥಿಸಿದ್ದೆ. ವಿಪರ್ಯಾಸವೇನು ಗೊತ್ತೇ? ನಮ್ಮೂರಿನ ಶಾಲೆಯಲ್ಲಿ ವಿಜ್ಞಾನ- ಗಣಿತದ ಅಧ್ಯಾಪಕರೇ ಇರಲಿಲ್ಲ. ಹೈಸ್ಕೂಲ್ , ನಮ್ಮ ಊರಿಂದ 4 ಕಿ.ಮೀ ದೂರವಿತ್ತು. ದುರಂತವೆಂದರೆ ಅಲ್ಲಿಯೂ ಗಣಿತ- ವಿಜ್ಞಾನದ ಅಧ್ಯಾಪಕರು ಇರಲಿಲ್ಲ. ಸೈನ್ಸ್ ನ ಪರಿಚಯವೇ ಇಲ್ಲದ ಮೇಲೆ ಎಂಜಿನಿಯರ್ ಆಗುವುದು ಹೇಗೆ? ಕಡೆಗೊಮ್ಮೆ 2008ರಲ್ಲಿ ಉಜ್ಜಯಿನಿ ವಿವಿಯಿಂದ ಆರ್ಟ್ಸ್ ನಲ್ಲಿ ಪದವಿ ಮುಗಿಸಿದೆ. ಇಡೀ ಊರಿನಲ್ಲಿ, ಡಿಗ್ರಿ ಮಾಡಿದ ಹೆಣ್ಣುಮಗಳು ನಾನೊಬ್ಬಳೇ ಅಂದರೆ, ನಮ್ಮ ಊರು, ಅಲ್ಲಿನ ಜನಜೀವನ ಹೇಗಿತ್ತು ಎಂಬುದನ್ನು ಅಂದಾಜು ಮಾಡಿಕೊಳ್ಳಿ..
ಡಿಗ್ರಿ ಮುಗಿಯುತ್ತಿದ್ದಂತೆಯೇ ಮದುವೆಯ ಮಾತು ಬಂತು. “ನಾನು ಎಂಬಿಎ ಮಾಡಬೇಕು ಅಂತಿದ್ದೇನೆ. ಅದಕ್ಕಾಗಿ ಒಂದು ವರ್ಷ ಇಂದೋರ್‌ಗೆ ಹೋಗಬೇಕು. ಅಲ್ಲಿದ್ದುಕೊಂಡು ಓದಲು ಅವಕಾಶ ಮಾಡಿಕೊಡಿ’ ಎಂದು ಹೆತ್ತವರನ್ನು ಕೇಳಿಕೊಂಡೆ. ಎಂಬಿಎ ಓದಲೇಬೇಕು ಎಂದು ಪಟ್ಟು ಹಿಡಿದೆ. ವರ್ಷದ ಅನಂತರ ಊರಿಗೆ ವಾಪಸ್ ಬರಬೇಕು ಎಂಬ ಷರತ್ತಿನೊಂದಿಗೆ ಅನುಮತಿ ಸಿಕ್ಕಿತು. ಪುಟ್ಟದೊಂದು ಬಾಡಿಗೆ ಮನೆ ಮಾಡಿಕೊಂಡು ಓದಲು ನಿರ್ಧರಿಸಿ ಇಂದೋರ್ ತಲುಪಿಕೊಂಡೆ. ಆದರೆ ಎಲ್ಲವೂ ನಾನು ಅಂದು ಕೊಂಡಷ್ಟು ಸುಲಭವಾಗಿರಲಿಲ್ಲ. ಕಾರಣ, ಆ ದಿನಗಳಲ್ಲಿ ಎಂಬಿಎ ಮಾಡಬೇಕು ಅಂದರೆ ಬಿ.ಕಾಂ ಪದವಿ ಕಡ್ಡಾಯವಾಗಿತ್ತು. ನಾನೋ, ಬಿಎ ಓದಿದ್ದೆ. ಎಂಬಿಎಗೆ ಪ್ರವೇಶ ಕೊಡಲು ಯಾವ ಕಾಲೇಜಿನಲ್ಲೂ ಒಪ್ಪಲಿಲ್ಲ. ಈ ಸಂದರ್ಭದಲ್ಲಿಯೇ, ಒಂದು ವರ್ಷದ ಅಸೋಸಿ ಯೇಟೆಡ್ ಚಾರ್ಟರ್ಡ್ ಅಕೌಂಟೆಂಟ್ (ಎಸಿಎ)ಮುಗಿಸಿ ಅನಂತರ ಎಂಬಿಎ ಸೀಟ್‌ಗೂ ಪ್ರವೇಶ ಪರೀಕ್ಷೆ ಬರೆಯಬಹುದು ಎಂಬ ಸಂಗತಿ ಗೊತ್ತಾಯಿತು. ತತ್‌ಕ್ಷಣವೇ ಎಸಿಎ ಕೋರ್ಸ್‌ಗೆ ಸೇರಿಕೊಂಡೆ.
ದೊಡ್ಡದೊಂದು ಕಷ್ಟ ಜತೆಯಾದದ್ದೇ ಆಗ. ಹಿಂದಿ ಮೀಡಿಯಂನಲ್ಲಿ ಓದಿದ್ದ ನಾನು ಇಂಗ್ಲಿಷ್‌ನಲ್ಲಿ ವಿಪರೀತ ಡಲ್ ಇದ್ದೆ. ಇಂಗ್ಲಿಷ್ ಮೀಡಿಯಂನಲ್ಲಿ ನಡೆಯುತ್ತಿದ್ದ ಎಸಿಎ ತರಗತಿಯ ಪಾಠ ಏನೇನೂ ಅರ್ಥವಾಗುತ್ತಿರಲಿಲ್ಲ. ಈ ಸಂದರ್ಭದಲ್ಲಿ ಪಕ್ಕದಲ್ಲಿ ಕುಳಿತಿದ್ದವರ ನೋಟ್ಸ್ ಗಳನ್ನೇ ಕಾಪಿ ಮಾಡಿದೆ. ಪ್ರತೀ ಪದದ ಅರ್ಥ ಕೇಳುತ್ತಿದ್ದೆ. ಎಷ್ಟೋ ಬಾರಿ ಇಡೀ ರಾತ್ರಿ ಓದಿದರೂ ಇಂಗ್ಲಿಷ್ ಅರ್ಥವಾಗುತ್ತಿಲ್ಲ ಅನ್ನಿಸಿ, ಹತಾಶೆಯಿಂದ ಬಿಕ್ಕಿ ಬಿಕ್ಕಿ ಅಳುತ್ತಿದ್ದೆ. ಪ್ರಾಜೆಕ್ಟ್ ಮತ್ತಿತರ ಕೆಲಸಕ್ಕೆ ದುಡ್ಡು ಬೇಕು ಅನ್ನಿಸಿದಾಗ, ಬೆಳಗ್ಗೆ ಮತ್ತು ಸಂಜೆ ಮನೆಮನೆಗೆ ಹೋಗಿ ಮಕ್ಕಳಿಗೆ ಟ್ಯೂಷನ್ ಮಾಡಿದೆ. ಅಡುಗೆ ಮಾಡಲೂ ಸಮಯ ಸಿಗದೇ ಉಪವಾಸ ಮಲಗಿದ ದಿನಗಳಿಗೆ ಲೆಕ್ಕವಿಲ್ಲ. ಈ ಮಧ್ಯೆಯೇ ಎಸಿಎ ಕೋರ್ಸ್ ಮುಗಿಸಿ, ಪ್ರವೇಶ ಪರೀಕ್ಷೆ ಬರೆದು ಎಂಬಿಎಗೆ ಸೀಟನ್ನೂ ಪಡೆದೆ.
ಈ ವೇಳೆಗೆ ಊರಲ್ಲಿ ಜನ ತಲೆಗೊಂದು ಮಾತಾಡತೊಡಗಿದ್ದರು. “ಅವಳು ಇಂದೋರ್‌ನಲ್ಲಿ ಇದ್ದಾಳಂತೆ. ಓದೋಕೆ ಹೋಗಿದ್ದಾಳ್ಳೋ ಮಜಾ ಮಾಡೋಕೆ ಹೋಗಿದ್ದಾಳ್ಳೋ ಯಾರಿಗೆ ಗೊತ್ತು? ಎಲ್ಲ ಹೆಣ್ಣುಮಕ್ಕಳಂತೆ ಮದುವೆ ಮಾಡಿಕೊಂಡು ತೆಪ್ಪಗೆ ಇರೋಕೆ ಆಗಲ್ವ? ಎಂದೆಲ್ಲ ಮಾತಾಡಿದ್ದರು. ಕೆಲವರಂತೂ ನನ್ನ ಅಪ್ಪನ ಎದುರಿಗೇ “ಅವಳು ಹೇಳಿದಂತೆಲ್ಲ ಕೇಳಿಕೊಂಡು ಕುಣೀತಿದ್ದೀರಲ್ಲ, ನಿಮಗೆ ಬುದ್ಧಿ ಇಲ್ವಾ? ಅವಳು ಓದಿ ಯಾವ ದೇಶ ಉದ್ಧಾರ ಆಗಬೇಕಿದೆ? ಅವಳಿಂದ ಊರ ಮರ್ಯಾದೆ ಹೋಗ್ತಿದೆ’ ಎಂದಿದ್ದರು. ಅಪ್ಪ ಇದನ್ನೆಲ್ಲ ಹೇಳಿಕೊಂಡು- “ನಮಗೆ ಊರಲ್ಲಿ ಬದುಕುವುದೇ ಕಷ್ಟ ಆಗ್ತಿದೆಯಮ್ಮಾ. ನೀನು ಊರಿಗೆ ಬಂದುಬಿಡು. ಇಲ್ಲಿದ್ದುಕೊಂಡೇ ಏನು ಬೇಕಾದ್ರೂ ಮಾಡು’ ಅಂದರು!
ನಮ್ಮ ಊರು ಯಾವುದೇ ಸೌಲಭ್ಯಗಳಿಲ್ಲದ ಕುಗ್ರಾಮ. ಅಲ್ಲಿದ್ದುಕೊಂಡು ಸಾಧನೆ ಮಾಡಲು ಸಾಧ್ಯವೇ ಇರಲಿಲ್ಲ. ಅಪ್ಪನಿಗೆ ಅದನ್ನೇ ಹೇಳಿದೆ. “ನೀವು ತಲೆ ತಗ್ಗಿಸುವಂಥ ಕೆಲಸವನ್ನು ನಾನು ಮಾಡಲಾರೆ. ಇನ್ನೊಂದು ವರ್ಷ ಸಮಯ ಕೊಡಿ. ಎಂಬಿಎ ಮುಗಿಸ್ತೇನೆ’ ಎಂದು ಪ್ರಾರ್ಥಿಸಿದೆ. ಒಂದು ಟೀಮ್ ಕಟ್ಟುವುದು ಹೇಗೆ, ಟ್ಯೂಷನ್ ಮಾಡಿಕೊಂಡೇ ಬದುಕು ಕಟ್ಟಿಕೊಳ್ಳುವುದು ಹೇಗೆ ಎಂಬುದನ್ನು ಎಂಬಿಎ ಕಲಿಯುವಾಗಲೇ ಅರ್ಥ ಮಾಡಿಕೊಂಡೆ. ನಾನು ಗಮನಿಸಿದಂತೆ, ಪೋಷಕರು ದುಬಾರಿ ಶುಲ್ಕ ನೀಡಿ ಮಕ್ಕಳನ್ನು ಟ್ಯೂಷನ್‌ಗೆ ಸೇರಿಸುತ್ತಿದ್ದರು ನಿಜ. ಆದರೆ, ಮಕ್ಕಳು ಆಸಕ್ತಿಯಿಂದ ಪಾಠ ಕೇಳುತ್ತಿದ್ದಾರಾ? ಟೀಚರ್ ಚೆನ್ನಾಗಿ ಕಲಿಸುತ್ತಾರಾ? ಎಂದು ಚೆಕ್ ಮಾಡುತ್ತಿರಲಿಲ್ಲ.
ನಾನು ಎಂಬಿಎ ಮುಗಿಸಿದ್ದು 2013ರಲ್ಲಿ. ಸ್ಟಾರ್ಟ್‌ಅಪ್ ಮತ್ತು ಆನ್‌ಲೈನ್ ತರಗತಿಯ ಜಮಾನಾ ಆಗಷ್ಟೇ ಶುರುವಾಗಿತ್ತು. ಆನ್‌ಲೈನ್‌ನಲ್ಲಿ ಟ್ಯೂಷನ್ ಮಾಡುವ ಸ್ಟಾರ್ಟ್‌ಅಪ್ ಆರಂಭಿಸಬೇಕು ಎಂಬ ಯೋಚನೆ ಬಂದದ್ದೇ ಆಗ. ನಾನು ತಡ ಮಾಡಲಿಲ್ಲ. ಮಕ್ಕಳ ಸಮಸ್ಯೆ, ಅದಕ್ಕೆ ಇರುವ ಪರಿಹಾರ, ಪಾಠ ಮಾಡುವ ವಿಧದ ಕುರಿತು ಪೂರ್ತಿ ಮೂರು ವರ್ಷ ತರಬೇತಿ ಪಡೆದೆ. 2016ರಲ್ಲಿ, ಬೆಂಗಳೂರಿನಲ್ಲಿ ನಡೆದ ಅಂತಾರಾಷ್ಟ್ರೀಯ ಸೆಮಿನಾರ್‌ನಲ್ಲಿ ಪಾಲ್ಗೊಳ್ಳುವ ಅವಕಾಶ ಸಿಕ್ಕಿತು. ಸ್ಟಾರ್ಟ್‌ಅಪ್ ಕುರಿತು ನನ್ನ ಐಡಿಯಾ ಬಗ್ಗೆ ಹೇಳಿಕೊಂಡೆ. ಪೋರ್ಚುಗಲ್‌ನ ಲಿಸ್ಬನ್ ನಗರದಲ್ಲಿ ನಡೆಯುವ ಸಮಾವೇಶಕ್ಕೂ ಆಹ್ವಾನ ಬಂತು. ಬ್ಯಾಡ್ ಲಕ್. ನನ್ನ ಬಳಿ ಆಗ ಪಾಸ್‌ಪೋರ್ಟ್ ಇರಲಿಲ್ಲ. ಇರಲಿ, ಭಾರತದಲ್ಲೇ ಕೆಲಸ ಮಾಡೋಣ ಅಂದುಕೊಂಡು, ನನ್ನಷ್ಟೇ ಕಾಳಜಿ ಹೊಂದಿದ್ದ 10 ಶಿಕ್ಷಕರನ್ನು ಜತೆ ಮಾಡಿಕೊಂಡು 2018ರಲ್ಲಿ ಸಣ್ಣದೊಂದು ಬಾಡಿಗೆ ರೂಮ್‌ನಲ್ಲಿ ಟ್ಯೂಟರ್ ಕ್ಯಾಬಿನ್ ಹೆಸರಿನ ಸ್ಟಾರ್ಟ್‌ಅಪ್ ಆರಂಭಿಸಿದೆ. ಎಂಬಿಎ ಓದುವಾಗ ಟ್ಯೂಷನ್ ಮಾಡಿ ಸಂಪಾದಿಸಿದ್ದ 25 ಸಾವಿರ ರೂಪಾಯಿಗಳನ್ನೇ ಸ್ಟಾರ್ಟ್‌ಅಪ್‌ಗೆ ಬಂಡವಾಳವಾಗಿ ಹಾಕಿದ್ದೆ. ಈ ವೇಳೆಗೆ, ಮಗಳು ಇಷ್ಟಪಟ್ಟಂತೆ ಬದುಕಲಿ ಎಂದು ಹೆತ್ತವರೂ ಸುಮ್ಮನಾಗಿದ್ದರು.
ಪೋಷಕರು-ಮಕ್ಕಳ ಆಶಯಕ್ಕೆ ತಕ್ಕಂತೆ ಪಾಠ ಮಾಡುವುದು, 24 ಗಂಟೆಯೂ ಸೇವೆ ಒದಗಿಸುವುದು, ಕಡಿಮೆ ಶುಲ್ಕಕ್ಕೆ ಅತ್ಯುತ್ತಮ ಟ್ಯೂಷನ್ ನೀಡುವುದು, ಪ್ರತೀ 5 ಮಕ್ಕಳಿಗೆ ಒಬ್ಬರು ಟೀಚರ್ ಇರುವುದು ನಮ್ಮ ತಂಡದ ಸ್ಪೆಷಾಲಿಟಿ. ನಮ್ಮ ಪರಿಶ್ರಮಕ್ಕೆ, ನಿರೀಕ್ಷೆಗೂ ಮೀರಿದ ಯಶಸ್ಸು ಸಿಕ್ಕಿತು. ಟ್ಯೂಟರ್ ಕ್ಯಾಬಿನ್‌ಗೆ ಸೇರಿಸಿದರೆ, ಮಕ್ಕಳು ಬೇಗ ಕಲೀತಾರೆ ಎಂದು ಜನ ಸಂಭ್ರಮದಿಂದ ಮಾತಾಡಿ ಕೊಂಡರು. ಈ ಬಗೆಯ ಮೌತ್ ಪಬ್ಲಿಸಿಟಿಯಿಂದಲೇ ನಮಗೆ ದೊಡ್ಡಮಟ್ಟದ ಪ್ರಚಾರ ಸಿಕ್ಕಿತು. ಮಧ್ಯಪ್ರದೇಶದ ಪ್ರತೀ ಜಿಲ್ಲೆಯಲ್ಲೂ ಬ್ರಾಂಚ್ ತೆರೆಯಲು ಆಹ್ವಾನ ಬಂತು!
ಈಗ ಏನಾಗಿದೆಯೆಂದರೆ- ಟ್ಯೂಟರ್ ಕ್ಯಾಬಿನ್ ಎನ್ನುವುದು ಬ್ರ್ಯಾಂಡ್ ನೇಮ್ ಆಗಿಬಿಟ್ಟಿದೆ. 25 ಸಾವಿರ ಬಂಡವಾಳದಲ್ಲಿ ಆರಂಭವಾದ ಸಂಸ್ಥೆಯ ವಾರ್ಷಿಕ ಆದಾಯ ಈಗ 50 ಲಕ್ಷವನ್ನು ದಾಟಿದೆ. ನನ್ನೊಂದಿಗೆ ಈಗ 1,000ಕ್ಕೂ ಹೆಚ್ಚು ಶಿಕ್ಷಕರಿದ್ದಾರೆ . (ಫುಲ್ ಟೈಮ್ ಮತ್ತು ಪಾರ್ಟ್ ಟೈಮ್) ಮಧ್ಯಪ್ರದೇಶ ಮಾತ್ರವಲ್ಲ, ದಿ, ಬೆಂಗಳೂರು, ದುಬಾೖ, ಅಮೆರಿಕ, ಇಂಗ್ಲೆಂಡ್ ದೇಶಗಳ ವಿದ್ಯಾರ್ಥಿಗಳಿಗೂ ಅವರು ಬಯಸಿದ ಭಾಷೆಯಲ್ಲಿ ಆನ್‌ಲೈನ್ ಮೂಲಕ ಪಾಠ ಮಾಡುತ್ತೇವೆ. ಇಂದೋರ್‌ನಲ್ಲಿಆಫ್ ಲೈನ್ ತರಗತಿಗಳನ್ನೂ ನಡೆಸುತ್ತೇವೆ. ಶುಲ್ಕದ ಮೊತ್ತ 50 ರೂ. ನಿಂದ ಶುರುವಾಗುತ್ತದೆ. ಇಂಗ್ಲಿಷ್ ಗೊತ್ತಾಗದೆ ನಾನು ಅನುಭವಿಸಿದ ಸಂಕಟ ಬೇರೆ ಯಾರಿಗೂ ಬಾರದಿರಲಿ ಎಂಬ ಉದ್ದೇಶದಿಂದ, ಇಂಗ್ಲಿಷ್ ಸ್ಪೀಕಿಂಗ್ ತರಗತಿಗಳನ್ನು ಉಚಿತವಾಗಿ ನಡೆಸುತ್ತೇವೆ. ಕೋವಿಡ್ ಕಾರಣಕ್ಕೆ ತಬ್ಬಲಿಗಳಾದ 155 ಮಕ್ಕಳಿಗೆ ಉಚಿತವಾಗಿ ಪಾಠ ಹೇಳುತ್ತಿದ್ದೇವೆ.
ತುಂಬಾ ಹಿಂದೇನಲ್ಲ, ಬರೀ 5 ವರ್ಷಗಳ ಹಿಂದೆ ನಮ್ಮ ಊರಿನ ಜನರು, ಬಂಧುಗಳು ನನ್ನನ್ನು ಬಯ್ಯುತ್ತಿದ್ದರು. ಆಡಿಕೊಳ್ಳುತ್ತಿದ್ದರು. ಅದೇ ಜನ ಈಗ ಹಾಡಿ ಹೊಗಳುತ್ತಿದ್ದಾರೆ. ಮಕ್ಕಳನ್ನು ಎದುರು ಕೂರಿಸಿಕೊಂಡು-ಹೇಗಿದ್ದವಳು ಹೇಗಾದಳು ಗೊತ್ತಾ? ಎಂದು ವಿವರಿಸುತ್ತಿದ್ದಾರೆ. “ನೀವೂ ಚೆನ್ನಾಗಿ ಓದಿ ನೇಹಾ ಥರಾನೇ ದೊಡ್ಡ ಹೆಸರು ಮಾಡಬೇಕು’ ಎನ್ನುತ್ತಿ¨ªಾರೆ. ಈ ಹಿಂದೆ ಅಪ್ಪನ ಎದುರು ನನ್ನನ್ನು ಹಂಗಿಸಿದ್ದ ಜನರೇ-“ನಮ್ಮ ಮಕ್ಕಳ ಶಿಕ್ಷಣದ ಬಗ್ಗೆ ಮಾತಾಡಬೇಕು, ನೇಹಾದು ಅಪಾಯಿಂಟ್‌ಮೆಂಟ್ ಕೊಡಿಸಪ್ಪಾ’ ಎಂದು ಅಪ್ಪನಲ್ಲಿ ಕೇಳಿದ್ದಾರೆ. ತಾವೇ ಮುಂದಾಗಿ ಮಕ್ಕಳನ್ನು ಕಾಲೇಜಿಗೆ ಕಳಿಸುತ್ತಿದ್ದಾರೆ. 7 ವರ್ಷಗಳ ಹಿಂದೆ ನಾನು ಇಂಗ್ಲಿಷ್ ಮಾತಾಡಲಾಗದೆ ನಡುಗುತ್ತಿದ್ದೆ . ಆದರೆ, ಈಗ ನನ್ನ ಮಾತು ಕೇಳಿದವರು ಸಭಾಂಗಣ ನಡುಗುವಂತೆ ಚಪ್ಪಾಳೆ ಹೊಡೆಯುತ್ತಾರೆ. ಇಂಥದೊಂದು ಬದಲಾವಣೆಗೆ ಕಾರಣಳಾದೆ ಎಂಬ ಹೆಮ್ಮೆ ನನ್ನದು’ ಎನ್ನುತ್ತಾರೆ ನೇಹಾ.
34 ವರ್ಷದ ಹೆಣ್ಣುಮಗಳು 1,000 ಮಂದಿಗೆ ನೌಕರಿ ಕೊಡುವುದು, ಸಾವಿರಾರು ಮಕ್ಕಳಿಗೆ ಟ್ಯೂಷನ್ ಮಾಡುವ ತಂಡವನ್ನು ಮುನ್ನಡೆಸುವುದು, ಒಂದಿಡೀ ಊರಿನ ಬದಲಾವಣೆಗೆ ಕಾರಣವಾಗುವುದು ತಮಾಷೆಯ ಮಾತಲ್ಲ. ಅಂಥದೊಂದು ಸಾಧನೆ ಮಾಡಿದ ನೇಹಾ ಅವರನ್ನು ಅಭಿನಂದಿಸಲು- [email protected]
– ಎ.ಆರ್. ಮಣಿಕಾಂತ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.