ಸಾವು ಗೆದ್ದವನು, ಬದುಕು ಗೆಲ್ಲುವ ಪುಸ್ತಕ ಬರೆದ!
Team Udayavani, May 5, 2019, 8:02 AM IST
ನನ್ನ ಹಿಸ್ಟರಿಯನ್ನೆಲ್ಲ ಕೇಳಿದ ವೈದ್ಯರು, ‘ನಿನಗೆ ಇದೆಯಲ್ಲಪ್ಪ: ಅದನ್ನು ಮನೋವಿಜ್ಞಾನದಲ್ಲಿ ಆಬ್ಸೆಸಿವ್ ಕಂಪಲ್ಸಿವ್ ಡಿಸಾರ್ಡರ್'(OCD) ಅನ್ನುತ್ತಾರೆ. ಅತೀ ಬುದ್ಧಿವಂತರು ಅಥವಾ ವೆರಿವೆರಿ ಸ್ಪೆಷಲ್ ಪರ್ಸನ್ಸ್ ಅಂತಾರಲ್ಲ, ಅವರಿಗೆ ಮಾತ್ರ ಈ ಸಮಸ್ಯೆ ಇರುತ್ತೆ. ಹೆಸರಾಂತ ಹಾಲಿವುಡ್ ನಟ, ಟೈಟಾನಿಕ್ ಸಿನೆಮಾ ಖ್ಯಾತಿಯ ಲಿಯೋನಾರ್ಡೋ ಡಿಕ್ಯಾಪ್ರಿಯೋ, ಬಾಲಿವುಡ್‌ನ ಫರ್ಹಾನ್ ಅಖ್ತರ್, ಆಯುಷ್ಮಾನ್ ಖುರಾನ ಇವರೆಲ್ಲ OCD ಸಮಸ್ಯೆಯಿಂದ ಬಳಲುತ್ತಾ ಇರುವವರೇ. ಹಾಗಂತ ಅವರೆಲ್ಲ ಬದುಕಲ್ಲಿ ಆಸಕ್ತಿ ಕಳ್ಕೊಂಡಿದ್ದಾರಾ? ಇಲ್ಲ ತಾನೆ?’ ಅಂದರು.
ಸ್ಥಳ: ಗುಜರಾತ್‌ನ ಮುಖ್ಯ ಪಟ್ಟಣವಾದ ಆನಂದ್‌ನ ಖಾಸಗಿ ಆಸ್ಪತ್ರೆ. 32 ವರ್ಷಗಳ ಹಿಂದೆ ಅಲ್ಲಿನ ವೈದ್ಯರ ಮುಂದೆ, ಸುರೇಶ್- ಮಮತಾ ಜೋಶಿ ದಂಪತಿ ಕೈಜೋಡಿಸಿಕೊಂಡು ನಿಂತಿದ್ದರು. ‘ಡಾಕ್ಟ್ರೇ, ನೀವೇ ದಿಕ್ಕು’ ಎಂಬುದು ಅವರಿಬ್ಬರ ಆದ್ರರ್ ದನಿಯಾಗಿತ್ತು. ಅವರನ್ನೇ ಕನಿಕರದಿಂದ ನೋಡಿದ ವೈದ್ಯರು, ‘ನಮ್ಮ ಪ್ರಯತ್ನ ನಾವು ಮಾಡ್ತಾನೇ ಇದ್ದೀವಿ. ಆದರೂ ಹೀಗೇ ರಿಸಲ್ಟ್ ಬರುತ್ತೆ ಅಂತ ಗ್ಯಾರಂಟಿ ಕೊಡಲು ಆಗುವುದಿಲ್ಲ. ಭಗವಂತನ ಇಚ್ಛೆ ಏನಿದೆಯೋ ಯಾರಿಗೆ ಗೊತ್ತು. ಸಮಾಧಾನ ಮಾಡಿಕೊಳ್ಳಿ. ಎಲ್ಲಾ ಒಳ್ಳೆಯದಾಗುತ್ತೆ ಅಂದುಕೊಳ್ಳಿ’ ಎನ್ನುತ್ತಾ ಬೇರೊಂದು ವಾರ್ಡ್‌ಗೆ ಹೋಗಿಬಿಡುತ್ತಿದ್ದರು.
ಏನಾಗಿತ್ತೆಂದರೆ, ನರೇಶ್-ಮಮತಾ ದಂಪತಿಯ ಏಳು ತಿಂಗಳ ಮಗು ಆಸ್ಪತ್ರೆಗೆ ದಾಖಲಾಗಿತ್ತು. ಆ ಮಗುವಿಗೆ ಉಸಿರಾಟದ ಸಮಸ್ಯೆಯಿತ್ತು. ಹಾಲು ಕುಡಿಸಿದರೆ, ಮರುಕ್ಷಣವೇ ವಾಂತಿಯಾಗುತ್ತಿತ್ತು. ಇದ್ದಕ್ಕಿದ್ದಂತೆ ಮೈ ಬಿಸಿಯಾಗಿ ಬಿಡುತ್ತಿತ್ತು. ಮುದ್ದಿನ ಮಗುವಿಗೆ ಏನಾಯಿತೆಂದು ತಿಳಿಯಲು ಆಸ್ಪತ್ರೆಗೆ ಬಂದರೆ, ಅಲ್ಲಿಯೇ ಉಸಿರಾಟದ ತೊಂದರೆ ಕಾಣಿಸಿಕೊಂಡಿತು. ಕೂಡಲೇ ಚಿಕಿತ್ಸೆ ಆರಂಭಿಸಿದ ವೈದ್ಯರು, ಮೂಗು, ಬಾಯಿಗೆಲ್ಲಾ ಪೈಪ್‌ಗ್ಳನ್ನು ಫಿಕ್ಸ್ ಮಾಡಿಬಿಟ್ಟರು. ಆನಂತರದಲ್ಲಿ ಆ ಮಗು ಅತ್ತಿದ್ದನ್ನು, ಖೀಲ್ಲನೆ ನಕ್ಕಿದ್ದನ್ನು, ಕೈಕಾಲು ಆಡಿಸುತ್ತಾ ಹೊರಳಿಕೊಂಡಿದ್ದನ್ನು ಯಾರೂ ನೋಡಲಿಲ್ಲ. ಅದು ಸದಾ ಜೀವಚ್ಛವದಂತೆ ಮಲಗೇ ಇರುತ್ತಿತ್ತು. ‘ಡಾಕ್ಟ್ರೇ, ನೀವೇ ದಿಕ್ಕು’ ಎಂದು ನರೇಶ್ -ಮಮತಾ ದಂಪತಿ ಕಣ್ಣೀರಿಡುತ್ತಾ ಹೇಳಿದ್ದು ಆ ಸಂದರ್ಭದಲ್ಲಿಯೇ.
ಹತ್ತು ದಿನ ಕಳೆದರೂ, ಆ ಮಗು ಕಣ್ತೆರೆಯಲೇ ಇಲ್ಲ. ಆಗ, ಪೋಷಕರನ್ನು ಕರೆದ ವೈದ್ಯರು-‘ಚಿಕಿತ್ಸೆಗೆ ಮಗು ಸ್ಪಂದಿಸ್ತಾ ಇಲ್ಲ. ಅದು ಬದುಕುವುದು ಡೌಟು. ಅದಕ್ಕಿನ್ನೂ ಏಳು ತಿಂಗಳು. ಸದ್ಯ, ನಿಮಗೂ ಹೆಚ್ಚಿನ ಅಟ್ಯಾಚ್ಮೆಂಟ್ ಬೆಳೆದಿಲ್ಲ. ಈ ಕೈಲಿ ಕೊಟ್ಟ ದೇವರು, ಆ ಕೈಲಿ ಕಿತ್ಕೊಂಡ ಅಂತ ತಿಳಿಯಿರಿ. ಯಾವುದೇ ಕ್ಷಣದಲ್ಲಾದ್ರೂ ಕೆಟ್ಟ ಸುದ್ದಿ ಬರಬಹುದು. ನೀವು ಎಲ್ಲಕ್ಕೂ ರೆಡಿಯಾಗಿರಿ…’ ಅಂದರು.
ಡಾಕ್ಟರೇ ಹೀಗೆಂದ ಮೇಲೆ ಮಾಡುವುದೇನು? ಐದಾರು ದಿನ ಹಗಲು ರಾತ್ರಿ ಬಿಕ್ಕಳಿಸಿ, ತಮ್ಮ ದುರಾದೃಷ್ಟವನ್ನು ಹಳಿದುಕೊಂಡು ಕೆಟ್ಟ ಸುದ್ದಿ ಕೇಳಲು ಮಾನಸಿಕವಾಗಿ ಸಿದ್ಧವಾದರು ನರೇಶ್-ಮಮತಾ ದಂಪತಿ. ದಿನಗಳು ಕಳೆದವು. ವೈದ್ಯರ ಲೆಕ್ಕಾಚಾರವೆನ್ನಲ್ಲ ಮೀರಿ, ಆ ಮಗು ಚೇತರಿಸಿಕೊಂಡಿತು. ದೇವರ ಕೃಪೆಯಿಂದ ಮಗು ಉಳಿಯಿತು ಎಂದುಕೊಂಡ ನರೇಶ್-ಮಮತಾ ದಂಪತಿ, ಅದಕ್ಕೆ ಹಾರ್ದಿಕ್ ಜೋಶಿ ಎಂದು ಹೆಸರಿಟ್ಟು ಅಕ್ಕರೆಯಿಂದ ಬೆಳೆಸಿದರು. ಆನಂತರದಲ್ಲಿ, ಉಳಿದೆಲ್ಲ ಮಕ್ಕಳಂತೆಯೇ ಹಾರ್ದಿಕ್ ಚೂಟಿ ಅನ್ನಿಸಿಕೊಂಡ. ಯಾವುದೇ ವಿಷಯವನ್ನಾದರೂ, ಹೇಳಿದ ತಕ್ಷಣ ಅರ್ಥ ಮಾಡಿಕೊಳ್ಳುವಂಥ ಕೆಪ್ಯಾಸಿಟಿ ಅವನಿಗಿತ್ತು. ಪರಿಣಾಮ, ‘ಕ್ಲಾಸ್‌ಗೇ ಫಸ್ಟ್’ ಎಂಬ ಹೆಗ್ಗಳಿಕೆಯೂ ಅವನ ಪಾಲಾಯಿತು.
ಸದ್ಯ, ಎಲ್ಲವೂ ಸರಿಹೋಯ್ತು ಅಂದುಕೊಂಡಾಗಲೇ, ಅಂದರೆ ಹಾರ್ದಿಕ್ ಜೋಶಿಗೆ 12 ವರ್ಷವಿದ್ದಾಗ ಹೊಸದೊಂದು ಸಮಸ್ಯೆ ಕಾಣಿಸಿಕೊಂಡಿತು. ಈ ಹುಡುಗ, ಕೆಲವೊಮ್ಮೆ ಶೂನ್ಯವನ್ನೇ ದಿಟ್ಟಿಸುತ್ತ ಕೂತುಬಿಡುತ್ತಿದ್ದ. ಶಾಲೆಗೆ ಹೋಗುತ್ತಿದ್ದವನು, ಇದ್ದಕ್ಕಿದ್ದಂತೆ ವಾಪಸಾಗಿ, ದಾರೀಲಿ ಏನಾದರೂ ತೊಂದರೆ ಆಗುತ್ತೆ. ಹಾಗಾಗಿ ನಾನು ಹೋಗುವುದಿಲ್ಲ ಎಂದು ಘೋಷಿಸುತ್ತಿದ್ದ. ಹಿಂದಿನ ರಾತ್ರಿ ಕಂಡ ಕೆಟ್ಟ ಕನಸು ನೆನೆದು ನಡುಗುತ್ತಿದ್ದ. ಏನಾದರೂ ಅನಾಹುತವಾಗಿ ಬಿಟ್ಟರೆ ಗತಿಯೇನು ಅಂದುಕೊಂಡು ಕಂಗಾಲಾಗುತ್ತಿದ್ದ. ಚಿಕ್ಕಂದಿನಲ್ಲಿ ಎಲ್ಲ ಮಕ್ಕಳೂ ಹೀಗೆ ಯೋಚಿಸುವುದು, ಹೆದರಿಕೊಳ್ಳುವುದು ತೀರಾ ಸಾಮಾನ್ಯ. ದಿನಕಳೆದಂತೆ ಎಲ್ಲವೂ ಸರಿಯಾಗುತ್ತದೆ ಎಂದು ಯೋಚಿಸಿದ ನರೇಶ್- ಮಮತಾ ದಂಪತಿ, ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಲಿಲ್ಲ. ಕ್ಲರ್ಕ್ ಗ್ರೇಡ್‌ನ ಸರ್ಕಾರಿ ಹುದ್ದೆಯಲ್ಲಿದ್ದ ನರೇಶ್, ಬೇರ್ಯಾವ ರೀತಿಯಲ್ಲಿ ಯೋಚಿಸುವುದಕ್ಕೂ ಸಾಧ್ಯವಿರಲಿಲ್ಲ.
ಒಂದನೇ ತರಗತಿಯಿಂದಲೂ ಕ್ಲಾಸ್‌ಗೇ ಫಸ್ಟ್ ಎಂಬ ಹೆಗ್ಗಳಿಕೆಯೊಂದಿಗೆ ಬೆಳೆದಿದ್ದನಲ್ಲ; ಅದೇ ಕಾರಣದಿಂದ ಮಗನನ್ನು ಎಂಜಿನಿಯರಿಂಗ್ ಅಥವಾ ಮೆಡಿಕಲ್ಗೆ ಸೇರಿಸಬೇಕೆಂಬ ಆಸೆ ನರೇಶ್ ಅವರಿಗಿತ್ತು. ಆದರೆ, ಪಿಯೂಸಿ ಫಲಿತಾಂಶ ಬಂದಾಗ ಎಲ್ಲರಿಗೂ ಶಾಕ್ ಆಯಿತು. ಏಕೆಂದರೆ, ಅದುವರೆಗೂ ತರಗತಿಗೇ ಮೊದಲಿಗನಾಗಿದ್ದ; ಡಿಸ್ಟಿಂಕ್ಷನ್ ಬರಬಹುದೆಂಬ ನಿರೀಕ್ಷೆ ಮೂಡಿಸಿದ್ದ ಹಾರ್ದಿಕ್, ಕೇವಲ 50 ಪರ್ಸೆಂಟ್ ಅಂಕ ಗಳಿಸಿದ್ದ. ಯಾಕೆ ಹೀಗಾಯ್ತಪ್ಪ? ಚೆನ್ನಾಗಿ ಬರೆದಿರಲಿಲ್ವ ಎಂದು ಪೋಷಕರು ಕೇಳಿದ್ದಕ್ಕೆ ‘ ನನಗೆ ಯಾವಾಗಲೂ ನೆಗೆಟಿವ್ ಫೀಲಿಂಗ್ಸ್ ಬರ್ತಿತ್ತು. ಹಾಗಾಗಿ, ಓದಿನಲ್ಲಿ ಹೆಚ್ಚು ಆಸಕ್ತಿ ವಹಿಸಲು ಆಗಲಿಲ್ಲ. ಫಸ್ಟ್‌ಕ್ಲಾಸ್ ಬರುವ ಮಟ್ಟಕ್ಕೆ ನಾನು ಬರೆದಿರಲಿಲ್ಲ’ ಎಂದ. ಆಗಿದ್ದಾಯ್ತು. ಚಿಂತೆ ಮಾಡಬೇಡ ಬಿ.ಎಸ್ಸಿಗೆ ಸೇರು. ಚೆನ್ನಾಗಿ ಓದಿ ರ್‍ಯಾಂಕ್ ತಗೊಂಡ್ರೆ ಒಬ್ಬರಲ್ಲ. ನೂರು ಜನ ಕೆಲಸಕೊಡಲು ಓಡಿ ಬರ್ತಾರೆ ಎಂಬ ಸಲಹೆ ಪೋಷಕರು, ಬಂಧುಗಳಿಂದ ಬಂತು.
ಬಿ.ಎಸ್ಸಿಯಲ್ಲಿ ಶ್ರದ್ಧೆಯಿಂದ ಓದಿದ ಹಾರ್ದಿಕ್, ಮೊದಲ ವರ್ಷ ಪ್ರಥಮ ದರ್ಜೆಯ, ಎರಡನೇ ವರ್ಷ ಡಿಸ್ಟಿಂಕ್ಷನ್‌ನ ಅಂಕಗಳನ್ನು ಪಡೆದ. ಈ ಸಂದರ್ಭದಲ್ಲಿಯೇ ಅವನ ಪೋಷಕರನ್ನು ಸಂಪರ್ಕಿಸಿದ ಕಾಲೇಜಿನ ಆಡಳಿತ ಮಂಡಳಿ -‘ನಿಮ್ಮ ಮಗ ತುಂಬಾ ಚೆನ್ನಾಗಿ ಓದ್ತಾ ಇದ್ದಾನೆ. ಇನ್ನೂ ಸ್ವಲ್ಪ ಎಫರ್ಟ್ ಹಾಕಿದ್ರೆ ಯೂನಿವರ್ಸಿಟಿಗೆ ಫಸ್ಟ್ ರ್‍ಯಾಂಕ್ ಬರ್ತಾನೆ. ಹಾರ್ಡ್‌ವರ್ಕ್ ಮಾಡಲು ತಿಳಿಸಿ’ ಅಂದರು. ಇದೇ ಮಾತನ್ನು ಹಾರ್ದಿಕ್‌ಗೂ ಹೇಳಿದರು.
ಚೆನ್ನಾಗಿ ಓದಿ ರ್‍ಯಾಂಕ್ ತಗೋಬೇಕು ಎಂದುಕೊಂಡ ಹಾರ್ದಿಕ್‌ಗೆ, ಆನಂತರ ಏಕಾಗ್ರತೆಯಿಂದ ಓದಲು ಸಾಧ್ಯವಾಗಲೇ ಇಲ್ಲ. ತನ್ನ ತಳಮಳವನ್ನು ಅಪ್ಪನೊಂದಿಗೆ ಹೇಳಿಕೊಂಡ. ನಂತರ, ಅಪ್ಪ-ಮಗ ಇಬ್ಬರೂ ಕುಟುಂಬ ವೈದ್ಯರನ್ನು ಸಂಪರ್ಕಿಸಿದರು. ಹಾರ್ದಿಕ್‌ನಿಂದ ಎಲ್ಲಾ ಮಾಹಿತಿ ಪಡೆದ ವೈದ್ಯರು, ಡಿಪ್ರಶನ್ ಕಂಟ್ರೋಲ್ ಮಾಡುವ ಮಾತ್ರೆಗಳನ್ನು ಬರೆದುಕೊಟ್ಟರು. ಬೀಳ್ಕೊಡುವ ಮುನ್ನ, ನರೇಶ್ ಅವರನ್ನು ಪ್ರತ್ಯೇಕವಾಗಿ ಕರೆದು ಹೇಳಿದರು: ‘ಈ ಮಾತ್ರೆಗಳಿಂದ ಗುಣವಾಗಲಿಲ್ಲ ಅಂದರೆ, ತಕ್ಷಣವೇ ತಜ್ಞ ಮನೋವೈದ್ಯರನ್ನು ಭೇಟಿಯಾಗಿ’.
ಆನಂತರದ ದಿನಗಳನ್ನು ನೆನಪಿಸಿಕೊಂಡು ಹಾರ್ದಿಕ್ ಜೋಶಿ ಹೇಳುತ್ತಾರೆ: ಮಾತ್ರೆಗಳನ್ನು ತಗೊಂಡೆ. ಆದ್ರೆ ಏನೂ ಪ್ರಯೋಜನ ಆಗಲಿಲ್ಲ. ಹಾಗಂತ, ದೈಹಿಕವಾಗಿ ಯಾವುದೇ ಸಮಸ್ಯೆ ಇರಲಿಲ್ಲ. ನೋಡುವವರಿಗೆ ಯಾವುದೇ ಸಮಸ್ಯೆಗಳಿಲ್ಲದ ಸುಖಪುರುಷನಂತೆ ನಾನು ಕಾಣಿಸುತ್ತಿದ್ದೆ. ಆದರೆ ನನ್ನ ಮನಸೊಳಗೆ ಕ್ಷಣಕ್ಕೊಂದು ಯೋಚನೆಗಳು, ಪ್ರಶ್ನೆಗಳು ಎದ್ದು ನಿಲ್ಲುತ್ತಿದ್ದವು. ಒಮ್ಮೊಮ್ಮೆಯಂತೂ ನಾಳೆ ಯಾರಾದರೂ ನನ್ನನ್ನು ಕಿಡ್ನಾಪ್ ಮಾಡ್ತಾರೆ, ಪ್ರಳಯವೇ ಆಗಿಬಿಡುತ್ತೆ ಎಂಬಂಥ ಯೋಚನೆಗಳು ಬಂದುಬಿಡುತ್ತಿದ್ದವು. ಕಡೆಗೊಂದು ದಿನ ತಂದೆಯ ಎದುರು ನಿಂತು-‘ಅಪ್ಪಾ, ನನ್ನ ಮೇಲಿನ ಆಸೆ ಬಿಟ್ಟುಬಿಡಿ. ಪರಿಸ್ಥಿತಿ ಇದೇ ಥರ ಮುಂದುವರಿದರೆ, ನಾನೇ ಸೂಸೈಡ್ ಮಾಡಿಕೊಂಡುಬಿಡ್ತೇನೆ ಅನಿಸುತ್ತೆ’ ಅಂದುಬಿಟ್ಟೆ. ಈ ಮಾತು ಕೇಳಿ ಗಾಬರಿಯಾದ ತಂದೆಯವರು, ನನ್ನನ್ನು ಮನೋವೈದ್ಯರ ಬಳಿಗೆ ಕರೆದೊಯ್ದರು.
ಆ ವೈದ್ಯರು, ಹಳೆಯ ಪರಿಚಿತರಂತೆ- ‘ಬಾಪ್ಪಾ, ಬಾ. ಈಗ ಬಂದ್ರಾ? ಏನ್ಸಮಾಚಾರ?’ ಎಂದು ಆತ್ಮೀಯವಾಗಿ ಪ್ರಶ್ನಿಸಿದರು. ಅವರ ಮುಂದೆ ನನ್ನ ಸಂಕಟವನ್ನೆಲ್ಲಾ ಹೇಳಿಕೊಳ್ಳಬೇಕು ಅನ್ನಿಸಿತು. ಪರೀಕ್ಷೆ ನಾಳೆ ಅನ್ನುವಾಗಲೂ ಓದಲು ಸಾಧ್ಯವಾಗಲ್ಲ ಸಾರ್. ಪುಸ್ತಕ ತಗೊಂಡರೆ ಸಾಕು: ಮತ್ಯಾವುದೋ ಯೋಚನೆ ತಲೆ ಹೊಕ್ಕುತ್ತೆ. ಪರೀಕ್ಷೆ ಬರೀತಿದ್ದಾಗಲೇ ಮತ್ಯಾವುದೋ ನೆಗೆಟಿವ್ ಫೀಲಿಂಗ್ ಬಂದುಬಿಡುತ್ತೆ. ನಾನು ಏನೂ ತಪ್ಪು ಮಾಡಿರಲ್ಲ. ಆದ್ರೂ ಭಯವಾಗುತ್ತೆ. ನನ್ನ ವಯೋಮಾನದವರೆಲ್ಲ ಲೈಫ್ನ ಎಂಜಾಯ್ ಮಾಡ್ತಿರೋವಾಗ, ಡಿಪ್ರಶನ್ ಮಧ್ಯ ನಾನು ನರಳಿ, ಕೊರಗಿ, ಕಂಗಾಲಾಗಿ ಹೋಗಿದೀನಿ. ಮನೆ ಮಂದಿಗೆಲ್ಲ ನನ್ನದೇ ಚಿಂತೆಯಾಗಿದೆ. ಒಂದೊಂದ್ಸಲ, ನಾನು ಬದುಕಿರೋದೇ ವೇಸ್ಟ್ ಎಂಬ ಯೋಚನೆ ಕೂಡ ಬಂದುಬಿಡ್ತದೆ. ನನ್ನದೂ ಒಂದು ಬದುಕಾ ಸಾರ್? ಆ ದೇವರು, ನನ್ನನ್ನು ಒಂದೇ ಬಾರಿಗೆ ಸಾಯಿಸಿಬಿಡಬಾರ್ದಾ? ನನಗೆ ಯಾಕಿಷ್ಟು ನೋವು ಕೊಡ್ತಿದಾನೆ? ಎಂದೆಲ್ಲ ಹೇಳಿಕೊಂಡು ಸಮಾಧಾನ ವಾಗುವಷ್ಟು ಅತ್ತೆ.
ಡಾಕ್ಟರ್, ಒಮ್ಮೆ ನನ್ನ ಮೈದಡವಿದರು. ನನ್ನ ‘ಹಿಸ್ಟರಿಯನ್ನೆಲ್ಲ’ ಮತ್ತೂಮ್ಮೆ ಕೇಳಿದರು. ನಂತರ-‘ನಿನಗೆ ಇದೆಯಲ್ಲಪ್ಪ: ಅದನ್ನು ಮನೋವಿಜ್ಞಾನದಲ್ಲಿ ಆಬ್ಸೆಸಿವ್ ಕಂಪಲ್ಸಿವ್ ಡಿಸಾರ್ಡರ್'(OCD) ಅನ್ನುತ್ತಾರೆ. ಅತೀ ಬುದ್ಧಿವಂತರು ಅಥವಾ ವೆರಿವೆರಿ ಸ್ಪೆಷಲ್ ಪರ್ಸನ್ಸ್ ಅಂತಾರಲ್ಲ, ಅವರಿಗೆ ಮಾತ್ರ ಈ ಸಮಸ್ಯೆ ಇರುತ್ತೆ. ಹೆಸರಾಂತ ಹಾಲಿವುಡ್ ನಟ, ಟೈಟಾನಿಕ್ ಸಿನೆಮಾ ಖ್ಯಾತಿಯ ಲಿಯೋನಾರ್ಡೋ ಡಿಕ್ಯಾಪ್ರಿಯೋ, ಬಾಲಿವುಡ್‌ನ ಫರ್ಹಾನ್ ಅಖ್ತರ್, ಆಯುಷ್ಮಾನ್ ಖುರಾನ ಇವರೆಲ್ಲ OCD ಸಮಸ್ಯೆಯಿಂದ ಬಳಲುತ್ತಾ ಇರುವವರೇ. ಹಾಗಂತ ಅವರೆಲ್ಲ ಬದುಕಲ್ಲಿ ಆಸಕ್ತಿ ಕಳ್ಕೊಂಡಿದ್ದಾರಾ? ಇಲ್ಲ ತಾನೆ? ಅರ್ಥ ಮಾಡ್ಕೋ. ನೀನು ಹೀರೋ ಮಟೀರಿಯಲ್. ಮಲ್ಟಿ ಟ್ಯಾಲೆಂಟೆಡ್ ಪರ್ಸನ್. ಈಗ ಮಾತ್ರೆ ಕೊಡ್ತೇನೆ. ಅದನ್ನು ತಪ್ಪದೇ ತಗೋ. ಎಲ್ಲಾ ಸರಿಹೋಗುತ್ತೆ…’ ಅಂದರು.
ಮುಂದಿನ ಒಂದು ತಿಂಗಳು ಅವರ ಸಲಹೆಯಂತೆಯೇ ನಡೆದುಕೊಂಡೆ. ಆಗ, ಏಕಾಗ್ರತೆ ಎಂಬುದು ತಂತಾನೇ ಜೊತೆಯಾಯಿತು. ಬಿ.ಎಸ್ಸಿ ಕಡೆಯ ವರ್ಷವನ್ನು ಫಸ್ಟ್ ಕ್ಲಾಸ್‌ನಲ್ಲಿ ಪಾಸ್ ಮಾಡಿ, ಎಂ.ಎಸ್ಸಿಗೆ ಸೇರಿದ್ದೂ ಆಯ್ತು. ಈ ಮಧ್ಯೆ ನನಗೇ ಗೊತ್ತಿಲ್ಲದಂತೆ ನಾನೊಂದು ದೊಡ್ಡ ತಪ್ಪು ಮಾಡಿದ್ದೆ. ಎರಡು ತಿಂಗಳು ಮಾತ್ರೆ ನುಂಗಿದವನು, ನಾನೀಗ ಪೂರ್ತಿ ವಾಸಿಯಾಗಿದೀನಿ, ಮತ್ತೆ ಮಾತ್ರೆ ತಗೊಳ್ಳುವ ಅಗತ್ಯವಿಲ್ಲ ಎಂದು ನನಗೆ ನಾನೇ ಹೇಳಿಕೊಂಡು, ಮಾತ್ರೆ ನುಂಗುವುದನ್ನೇ ನಿಲ್ಲಿಸಿಬಿಟ್ಟೆ. ಮೊದಲ ಎರಡು ತಿಂಗಳು ಏನೂ ಆಗಲಿಲ್ಲ. ಮೂರನೇ ತಿಂಗಳಿಂದ ಮತ್ತೆ ಮೊದಲಿನಂತೆಯೇ ಭಯ, ಉದ್ವೇಗ, ಅಸಹನೆ, ಚಡಪಡಿಕೆ, ಹತಾಶೆ, ಅತೀ ಸಿಟ್ಟು ಜೊತೆಯಾಗತೊಡಗಿತು. ನನ್ನ ಪಾಡಿಗೆ ನಾನು ಉಳಿದೆಲ್ಲರಂತೆ ನೆಮ್ಮದಿಯಿಂದ ಬಾಳಲು ಸಾಧ್ಯವೇ ಇಲ್ಲ ಅನ್ನಿಸಿತು. ‘ಸಾರ್, ಟ್ರೀಟ್ಮೆಂಟ್ ಬೇಕು ಎನ್ನುತ್ತ ಮತ್ತೆ ಹಳೆಯ ವೈದ್ಯರ ಮುಂದೆ ನಿಲ್ಲಲು ಧೈರ್ಯವಿರಲಿಲ್ಲ. ಅಪ್ಪನ ನೆರವಿನಿಂದ ಈ ಬಾರಿ ಇನ್ನೊಬ್ಬ ಮನೋವೈದ್ಯರನ್ನು ಭೇಟಿಯಾಗಿ, ಎಲ್ಲಾ ಕತೆಯನ್ನು ಹೇಳಿಕೊಂಡೆ…’
ಎಲ್ಲ ಕತೆಯನ್ನೂ ಕೇಳಿದ ವೈದ್ಯರು ನಸುನಕ್ಕು ಹೇಳಿದರು. ನಿಮಗೆ ವಿಪರೀತ ಚಡಪಡಿಕೆ, ಅಪರಾಧಿ ಪ್ರಜ್ಞೆ ಜೊತೆಯಾಗಿಬಿಟ್ಟಿದೆ. ಹಾಗಾಗಿ, ನೀವು ಹೆಚ್ಚಿನ ಸಂದರ್ಭದಲ್ಲಿ ಯಾವ ಕೆಲಸದಲ್ಲೂ ಏಕಾಗ್ರತೆ ಸಾಧಿಸಲು ಆಗುತ್ತಿಲ್ಲ. ನಿಮಗಿರೋ ಒಸಿಡಿ ಸಮಸ್ಯೇನ ಒಂದು ಕಾಯಿಲೆ ಅಂತಾನೇ ಇಟ್ಕೊಳ್ಳಿ. ಅದು ಮಾತ್ರೆ ನುಂಗಿದ್ರೆ ಮಾತ್ರ ವಾಸಿ ಯಾಗುತ್ತೆ ಎಂದು ಯಾಕೆ ನಂಬ್ತೀರಿ? ಪ್ರಾರ್ಥನೆಯಿಂದ, ಧ್ಯಾನ ದಿಂದ, ವಿಲ್ಪವರ್‌ನಿಂದ ಕೂಡ ಅದು ವಾಸಿಯಾಗಬಹುದಲ್ವ? ಕೆಟ್ಟ ಯೋಚನೆ ಬಂದಾಕ್ಷಣ, ನೀವು ಧ್ಯಾನಕ್ಕೆ ಕೂತುಬಿಡಿ. ಇಲ್ಲವಾದರೆ ಒಂದರ್ಧ ಗಂಟೆ ಜೋರು ಸದ್ದಿನ ಹಾಡು ಕೇಳಿ. ಹೀಗೆ ಮಾಡಿದ್ರೆ ಡಿಪ್ರಶನ್ ತಂತಾನೇ ದೂರವಾಗುತ್ತೆ. ಯಶಸ್ಸು ನಿಮ್ಮ ಕೈಹಿಡಿಯುತ್ತೆ’ ಅಂದರು.
ಇದಿಷ್ಟೂ ನಡೆದಿದ್ದು 2013ರಲ್ಲಿ. ಮನೋ ವೈದ್ಯರ ಸಲಹೆಗಳನ್ನು ಚಾಚೂ ತಪ್ಪದೆ ಪಾಲಿಸಿದ ಹಾರ್ದಿಕ್, ನಂತರ ರಸಾಯನ ಶಾಸ್ತ್ರದಲ್ಲಿ ಪಿಎಚ್‌ಡಿ ಮುಗಿಸಿ, ಯುನಿವರ್ಸಿಟಿ ಯಲ್ಲಿ ಪ್ರೊಫೆಸರ್ ಆದರು. ಈ ಮಧ್ಯೆ ತನ್ನ ಬದುಕನ್ನೇ ಒಮ್ಮೆ ಹಿಂತಿರುಗಿ ನೋಡಿದಾಗ, ತನ್ನಂತೆಯೇ ಮನೋರೋಗದಿಂದ ಡಿಪ್ರಶನ್‌ಗೆ ತುತ್ತಾಗಿರುವ ಯುವಜನರ ಚಿತ್ರ ಕಣ್ಮುಂದೆ ಬಂತು. ಅವರಿಗೆ ಮಾರ್ಗದರ್ಶಕ ಆಗಬೇಕು, ಡಿಪ್ರಶನ್ ಎದುರಿಸುವ ಬಗೆಯನ್ನು ಹೇಳಿಕೊಡಬೇಕು ಅನ್ನಿಸಿತು.
ಈತ ತಡಮಾಡಲಿಲ್ಲ. ಪ್ರೊಫೆಸರ್ ಕೆಲಸಕ್ಕೆ ರಾಜೀನಾಮೆ ನೀಡಿ, ಥಂಬ್ಸ್ ಅಪ್ ಹೆಸರಿನ ಫೌಂಡೇಷನ್ ಮತ್ತು ಬ್ಲಾಗ್ ಆರಂಭಿಸಿದರು. ತನ್ನ ಬದುಕಿನ ಕತೆಯನ್ನು, ತಾನು ಮೆಟ್ಟಿನಿಂತ ಸವಾಲುಗಳನ್ನು ಮುಕ್ತವಾಗಿ ಬರೆದು ಕೊಂಡರು. ನೂರಾರು ವೇದಿಕೆಗಳಲ್ಲಿ ಭಾಷಣ ಮಾಡಿ, ವ್ಯಕ್ತಿತ್ವ ವಿಕಸನ ಗುರು ಅನ್ನಿಸಿಕೊಂಡರು. ಅಷ್ಟೇ ಅಲ್ಲ, ಒಂದು ಕಾಲದಲ್ಲಿ ಪದೇ ಪದೆ ಡಿಪ್ರಶನ್‌ಗೆ ತುತ್ತಾಗುತ್ತಿದ್ದ, ಇವತ್ತಲ್ಲ ನಾಳೆ ನಾನು ಸತ್ತುಹೋಗ್ತೀನೇನೋ ಎಂದು ಯೋಚಿಸಿ ನಿಂತಲ್ಲೇ ನಡುಗುತ್ತಿದ್ದ ಹಾರ್ದಿಕ್ ಜೋಶಿ- ಬದುಕನ್ನು ಗೆಲ್ಲುವುದು ಹೇಗೆ ಎಂದು ವಿವರಿಸುವ ಪುಸ್ತಕವನ್ನೇ ಬರೆದುಬಿಟ್ಟರು! How to Develop a Never giveup attitude ಎಂಬ ಆ ಪುಸ್ತಕ ಅಮೆಜಾನ್ ಆನ್‌ಲೈನ್‌ನಲ್ಲಿ ಬೆಸ್ಟ್ ಸೆಲ್ಲರ್ ಅನ್ನಿಸಿಕೊಂಡಿದೆ.
‘ನನ್ನ ಅನುಭವಗಳನ್ನಷ್ಟೇ ಪುಸ್ತಕದಲ್ಲಿ ಹೇಳಿಕೊಂಡಿದ್ದೇನೆ. ಅದರಿಂದ ಹತ್ತುಮಂದಿಗೆ ಉಪಯೋಗ ಆಗುವುದಾದರೆ ನಾನು ಬದುಕಿದ್ದಕ್ಕೂ, ಬರಹಗಾರ ಆಗಿದ್ದಕ್ಕೂ ಸಾರ್ಥಕ’ ಅನ್ನುತ್ತಾರೆ ಹಾರ್ದಿಕ್ ಜೋಶಿ.
ಹೋರಾಟದ ಜೀವನದಲ್ಲಿ ಗೆಲ್ಲುವುದು ಹೇಗೆ ಎಂದು ಗುಟ್ಟು ಹೇಳಿಕೊಡುವ ಈ ಹೀರೋಗೆ ಅಭಿನಂದನೆ ಹೇಳಲು [email protected]
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.