ಕಳ್ಳನಿಗಾಗಿ ಹುಡುಕಿದರೆ ಮಗ ಸಿಕ್ಕ!
Team Udayavani, Dec 4, 2018, 12:30 AM IST
ಮುಳುಗು ತಜ್ಞರು ಆಗಿಂದಾಗ್ಗೆ ಕಾಣಿಸಿಕೊಂಡು “ಏನೂ ಸಿಕ್ತಾ ಇಲ್ಲ. ಏನೂ ಪತ್ತೆಯಾಗ್ತಾ ಇಲ್ಲ’ ಅನ್ನುತ್ತಿದ್ದರು. ಕಡೆಗೊಮ್ಮೆ ಇನ್ನು 15 ನಿಮಿಷ ಕಾಯೋಣ. ಆಗಲೂ ಏನೂ ಪತ್ತೆಯಾಗದಿದ್ರೆ ಇವನನ್ನು ಅರೆಸ್ಟ್ ಮಾಡ್ತೇವೆ ಎಂದು ಪೊಲೀಸರು ನಿರ್ಧಾರದ ಧ್ವನಿಯಲ್ಲಿ ಹೇಳಿಬಿಟ್ಟರು.
ಅಮೆರಿಕದ ಮುಖ್ಯ ನಗರಗಳಲ್ಲಿ ನಾರ್ತ್ ಕೆರೊಲಿನಾ ಕೂಡ ಒಂದು. ಅಟ್ಲಾಂಟಿಕ್ ಮಹಾಸಾಗರಕ್ಕೆ ಅಂಟಿಕೊಂಡಂತೆಯೇ ಇರುವ ಈ ನಗರದ ಉದ್ದಕ್ಕೂ ಬಂದರುಗಳಿವೆ. ಅದೇ ಕಾರಣಕ್ಕೆ, ಈ ಊರನ್ನು “ಬಂದರುಗಳ ನಗರ’ ಎಂದೂ ಕರೆಯಲಾಗುತ್ತದೆ. ಪ್ರತಿ ಬಂದರಿನಲ್ಲಿಯೂ, ವಿದೇಶಗಳಿಂದ ಆಮದಾಗುವ ವಸ್ತುಗಳನ್ನು ಇಳಿಸಿಕೊಳ್ಳುವ, ರಫ್ತಾಗುವ ವಸ್ತುಗಳನ್ನು ಹಡಗುಗಳಿಗೆ ತುಂಬಿಸುವ ಕೆಲಸ ನಿರಂತರವಾಗಿ ನಡೆಯುತ್ತಲೇ ಇರುತ್ತದೆ.
ಬೀಚ್ ಅಂದಮೇಲೆ ಕೇಳಬೇಕೆ? ಅಲ್ಲಿ ಜನ ಮತ್ತು ಬಾರ್-ರೆಸ್ಟೋರೆಂಟ್‌ಗಳು ಇದ್ದೇ ಇರುತ್ತವೆ. ನಾರ್ತ್ ಕೆರೊಲಿನಾ ಕೂಡ ಈ ಮಾತಿಗೆ ಹೊರತಾಗಿಲ್ಲ. ಅಲ್ಲಿನ ರೈಟ್ಸ್‌ವಿಲ್ಲೆ ಬೀಚ್‌ನಲ್ಲಿರುವ ಬಾರ್ ಕಂ ರೆಸ್ಟೋರೆಂಟ್‌ನ ಮಾಲೀಕ ಜಿಮ್ಮಿ ಗಿಲೀಸ್‌ಗೆ, 2018ರ ಮಾರ್ಚ್ 19ರಂದು ಒಂದು ಫೋನ್ ಬಂತು. ಇವನು “ಹಲೋ’ ಅನ್ನುತ್ತಿದ್ದಂತೆಯೇ ಆ ತುದಿಯಲ್ಲಿದ್ದ ಹೆಣ್ಣು, ಗಾಬರಿಯ ದನಿಯಲ್ಲಿ ಹೇಳಿದಳು: “ಸರ್, ನಿನ್ನೆ ಮಧ್ಯಾಹ್ನ ನಿಮ್ಮ ಬಾರ್‌ಗೆ ಬಂದಿದ್ದೆ. ಅಲ್ಲಿಂದ ವಾಪಸಾಗುವಾಗ, ಗಡಿಬಿಡಿಯಲ್ಲಿ ಪರ್ಸ್ ಮರೆತು ಬಂದಿದೀನಿ. ಕೈಚೀಲದಂತಿದ್ದ ಅದರೊಳಗೆ 150 ಡಾಲರ್, ಕ್ರೆಡಿಟ್ ಕಾರ್ಡ್‌ಗಳಿದ್ದವು. ಅದಕ್ಕಿಂತ ಮುಖ್ಯವಾಗಿ, ಅದೇ ಪರ್ಸಿನೊಳಗೆ, ದುಬಾರಿ ಬೆಲೆಯ ನನ್ನ ವೆಡ್ಡಿಂಗ್ ರಿಂಗ್ ಕೂಡ ಇತ್ತು. ಮದುವೆಯಾಗಿ ತಿಂಗಳಷ್ಟೇ ಕಳೆದಿದೆ. ಆ ರಿಂಗ್ ಮೇಲೆ ವಿಪರೀತ ಅನ್ನುವಷ್ಟು ಸೆಂಟಿಮೆಂಟ್, ಏನೋ ಅಟ್ಯಾಚ್‌ಮೆಂಟ್. ನನ್ನದು ಸ್ವಲ್ಪ ಗಡಿಬಿಡಿ ಸ್ವಭಾವ. ಅದೇ ಕಾರಣದಿಂದ, ಧರಿಸಿಕೊಂಡರೆ ಎಲ್ಲಾದರೂ ಕೈಜಾರಿ ಬಿದ್ದುಹೋಗಬಹುದು ಎಂದು ಯೋಚಿಸಿ, ಅದನ್ನು ಪರ್ಸ್‌ನಲ್ಲಿ ಇಟ್ಟಿದ್ದೆ. ಈಗ ನೋಡಿದರೆ, ಆ ಪರ್ಶೇ ಕಳೆದುಹೋಗಿದೆ. ನಿನ್ನೆ ಇಡೀ ದಿನ ಎಲ್ಲಾ ಕಡೆ ಹುಡುಕಿದೆ. ಏನೂ ಪ್ರಯೋಜನವಾಗಲಿಲ್ಲ. ಕಡೆಗೆ, ನಿಮ್ಮ ಬಾರ್‌ನಲ್ಲಿಯೇ ಅದು ಮಿಸ್ ಆಗಿರಬೇಕು ಎಂದುಕೊಂಡೇ ಈಗ ಕಾಲ್ ಮಾಡಿದ್ದೇನೆ. ದಯವಿಟ್ಟು ನಿಮ್ಮ ಸಿಬ್ಬಂದಿಯನ್ನೆಲ್ಲ ಒಮ್ಮೆ ವಿಚಾರಿಸಿ…’
“ಖಂಡಿತ ಮೇಡಂ, ಎಲ್ಲರನ್ನೂ ವಿಚಾರಿಸ್ತೀನಿ. ನಾನೂ ಹುಡುಕ್ತೇನೆ. ನಿಮ್ಮ ವಸ್ತು ಸಿಕ್ಕಿದ್ರೂ, ಸಿಗದಿದ್ರೂ ಮತ್ತೆ ಫೋನ್ ಮಾಡಿ ತಿಳಿಸ್ತೇನೆ…’ ಫೋನ್‌ನಲ್ಲಿ, ಆ ಹೆಂಗಸಿಗೆ ಹೀಗೊಂದು ಭರವಸೆ ನೀಡಿದ ಗಿಲೀಸ್, ಮರುಕ್ಷಣವೇ ಬಾರ್‌ನಲ್ಲಿದ್ದ ಎಲ್ಲಾ ನೌಕರರನ್ನೂ ಕರೆದು ವಿಷಯ ತಿಳಿಸಿದರು. ನಮ್ಮ ಪಾಲಿಗೆ “ಗ್ರಾಹಕರೇ ದೇವರು. ಅಕಸ್ಮಾತ್ ಯಾರಿಗಾದ್ರೂ ಆ ಪರ್ಸ್ ಸಿಕ್ಕಿದ್ರೆ ಕೊಟ್ಟುಬಿಡಿ’ ಅಂದರು. ನೌಕರರೆಲ್ಲ ಒಕ್ಕೊರಲಿನಿಂದ – “ಇಲ್ಲ ಸರ್, ನಮ್ಮಲ್ಲಿ ಯಾರಿಗೂ ಪರ್ಸ್ ಸಿಕ್ಕಿಲ್ಲ’ ಅಂದರು.
ಈ ಮಾತಿಂದ ಗಿಲೀಸ್ ನಿರಾಶರಾಗಲಿಲ್ಲ. “ಹೌದಾ? ಆಲ್‌ರೈಟ್. ಎಲ್ರೂ ನಿಮ್ಮ ನಿಮ್ಮ ಕೆಲಸ ಮಾಡ್ತಿರಿ. ಸಿಸಿಟಿವಿ ಇದೆಯಲ್ಲ? ಎಲ್ಲಾ ಕ್ಲಿಪ್ಪಿಂಗ್‌ನೂ ಒಮ್ಮೆ ಚೆಕ್ ಮಾಡ್ತೇನೆ. ಅಕಸ್ಮಾತ್ ಆ ಹೆಂಗಸು, ನಮ್ಮ ಬಾರ್‌ನಲ್ಲಿಯೇ ಪರ್ಸ್ ಬಿಟ್ಟು ಹೋಗಿದ್ರೆ ಅದು ಖಂಡಿತ ಗೊತ್ತಾಗಿಬಿಡುತ್ತೆ’ ಅಂದರು. ನಂತರದ ಕೆಲವೇ ಹೊತ್ತಿಗೆ 16 ವಿವಿಧ ಕೋನಗಳಿಂದ ಸೆರೆಹಿಡಿಯಲಾದ ವಿಡಿಯೋ ಕ್ಲಿಪ್ಪಿಂಗ್‌ಗಳು ಗಿಲೀಸ್‌ನ ಮುಂದಿದ್ದವು.
ಫೂಟೇಜ್‌ಗಳನ್ನು ಇಂಚಿಂಚಾಗಿ ಗಮನಿಸುತ್ತಿದ್ದ ಗಿಲೀಸ್‌ಗೆ, ಮಧ್ಯಾಹ್ನದ ವೇಳೆ ಒಬ್ಬಳು ಹೆಂಗಸು ಬಾರ್‌ಗೆ ಬಂದು ಕುಳಿತು, ಯಾವುದೋ ಡ್ರಿಂಕ್ಸ್ ಸೇವಿಸಿ, ಪರ್ಸನ್ನು ಅಲ್ಲಿಯೇ ಬಿಟ್ಟು ಎದ್ದು ಹೋಗುವುದು ಸ್ಪಷ್ಟವಾಗಿ ಕಾಣಿಸಿತು. ಮುಂದೆನಾಯ್ತು ಎಂದು ತಿಳಿಯಲು, ಅದೇ ದೃಶ್ಯಾವಳಿಯನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿದ ಗಿಲೀಸ್. ಈ ಹೆಂಗಸು ಎದ್ದು ಹೋದ ಕೆಲವೇ ಕ್ಷಣಗಳಲ್ಲಿ, ಒಬ್ಬ ಹುಡುಗ, ಸೈಲೆಂಟಾಗಿ ನಡೆದು ಬಂದು, ಆ ಪರ್ಸ್ ಎತ್ತಿಕೊಂಡು ಸದ್ದಿಲ್ಲದೆ ಹೋಗಿಯೇ ಬಿಟ್ಟ. ಅಲ್ಲಿಗೆ, ಪರ್ಸ್ ತಮ್ಮ ಬಾರ್‌ನಲ್ಲಿಯೇ ಉಳಿದಿತ್ತು, ಎಂಬುದೂ, ಅದು ಒಬ್ಬ ಕಳ್ಳನ ಪಾಲಾಗಿದೆ ಎಂಬುದೂ ಗಿಲೀಸ್‌ಗೆ ಖಚಿತವಾಯಿತು. ಅವನು ಅದೆಷ್ಟೇ ಪ್ರಯತ್ನಿಸಿದರೂ, ಪರ್ಸ್ ಎತ್ತಿಕೊಂಡು ಹೋದ ಹುಡುಗನ ಮುಖವನ್ನು ಸ್ಪಷ್ಟವಾಗಿ ನೋಡಲು ಆಗಲೇ ಇಲ್ಲ. ಕಳ್ಳನ ಮುಖವನ್ನು ಸೆರೆ ಹಿಡಿಯುವಲ್ಲಿ ಸಿಸಿ ಟಿವಿಗಳು ವಿಫಲವಾಗಿದ್ದವು.
ಗಿಲೀಸ್ ತಡಮಾಡಲಿಲ್ಲ. ಪರ್ಸ್ ಕಳೆದುಕೊಂಡಿದ್ದ ಯುವತಿಗೆ ಫೋನ್ ಮಾಡಿ ನಡೆದುದೆಲ್ಲವನ್ನೂ ತಿಳಿಸಿದ. ಹೇಗಾದರೂ ಸರಿ; ನಿಮ್ಮ ಪರ್ಸ್ ಹುಡುಕಿಕೊಡುತ್ತೇನೆ ಎಂದೂ ಭರವಸೆ ನೀಡಿದ. ನಂತರ ತನ್ನ ಫೇಸ್‌ಬುಕ್ ಪುಟದಲ್ಲಿ ನಡೆದಿರುವುದನ್ನೆಲ್ಲ ವಿವರವಾಗಿ ದಾಖಲಿಸಿದ. “ಸಿಸಿ ಟಿವಿಯ ಫೂಟೇಜ್‌ಗಳನ್ನು ಗಮನಿಸಿದ್ದೇನೆ. ಆದರೆ, ಪರ್ಸ್ ತಗೆದುಕೊಂಡವನ ಮುಖ ಸ್ಪಷ್ಟವಾಗಿ ಕಾಣಿಸುತ್ತಿಲ್ಲ. ಯಾಕೋಪ್ಪ, ಆ ಹುಡುಗನನ್ನು “ಕಳ್ಳ’ ಎಂದು ಕರೆಯಲು ನನ್ನ ಮನಸ್ಸು ಒಪ್ಪುತ್ತಿಲ್ಲ. ಈ ಹುಡುಗ ಯಾರು ಅಂತ ಯಾರಿಗಾದ್ರೂ ಗೊತ್ತಿದ್ದರೆ ತಿಳಿಸಿ..’ ಎಂದೂ ಅಲ್ಲಿ ಬರೆದಿದ್ದ.
ಹೀಗೆ ಒಂದೆರಡು ಗಂಟೆಗಳು ಕಳೆದವು. ಆಗಲೇ, ಒಂದು ಅಪರಿಚಿತ ನಂಬರಿನಿಂದ ಗಿಲೀಸ್‌ಗೆ ಫೋನ್‌ಬಂತು. ಇವನು “ಹಲೋ’ ಅನ್ನುತ್ತಿದ್ದಂತೆಯೇ- “ಅಂಕಲ್, ನನ್ನ ಹೆಸರು ರಿವರ್ಸ್ ಪ್ರಥೇರ್. ನಿಮ್ಮ ಬಾರ್‌ನಲ್ಲಿ ಪರ್ಸ್ ತೆಗೊಂಡವನು ನಾನೇ. ಆದ್ರೆ, ಅಂಕಲ್, ನಾನು ಕಳ್ಳ ಅಲ್ಲ. ನಿನ್ನೆ ನಂಗೆ ವಿಪರೀತ ಹಸಿವಾಗಿತ್ತು. ಜೇಬಲ್ಲಿ ದುಡ್ಡಿರಲಿಲ್ಲ. ವಾರದ ಹಿಂದೆಯೇ ಮನೆಯಿಂದ ಓಡಿ ಹೋಗಿದ್ದೆ. ಕಾಡಲ್ಲಿ ಉಳಿದಿದ್ದೆ. ಎರಡು ದಿನದಿಂದ ಏನೂ ತಿಂದಿರಲಿಲ್ಲ. ಹಾಗಾಗಿ ಪರ್ಸ್ ಕದ್ದು ಬಿಟ್ಟೆ. ಅದರಲ್ಲಿದ್ದ ಡಾಲರ್ ತಗೊಂಡು ಸ್ಯಾಂಡ್‌ವಿಚ್ ತಿಂದೆ. ಪರ್ಸ್‌ನೊಳಗೆ ರಿಂಗ್ ಇತ್ತು. ಒರಿಜಿನಲ್ ರಿಂಗ್‌ನ ಯಾರಾದ್ರೂ ಪರ್ಸ್‌ನಲ್ಲಿ ಇಡ್ತಾರಾ? ಇದು ಡೂಪ್ಲಿಕೇಟ್ ರಿಂಗ್ ಅಂದೊRಂಡು, ಅದನ್ನು ಪರ್ಸ್‌ನ ಒಳಕ್ಕೇ ಹಾಕಿ, ಜಿಪ್ ಎಳೆದು, ನಿಮ್ಮ ಬಾರ್‌ನ ಸಮೀಪವೇ ಇರುವ ಹೊಂಡದೊಳಕ್ಕೆ ಎಸೆದುಬಿಟ್ಟೆ…ನೀವು ಫೇಸ್‌ಬುಕ್‌ನಲ್ಲಿ ಫೋಸ್ಟ್ ಹಾಕಿರುವ ಬಗ್ಗೆ ನಮ್ಮ ಅಕ್ಕ ಈಗಷ್ಟೇ ಹೇಳಿದಳು. ತಕ್ಷಣ ನಿಮಗೆ ಕಾಲ್ ಮಾಡಿದೀನಿ ಅಂದ. ಅಷ್ಟೇ ಅಲ್ಲ, ಮರುದಿನವೇ ಗಿಲೀಸ್‌ನ ಬಾರ್‌ಗೆà ಬಂದು ಭೇಟಿಯಾಗಿ, ಪರ್ಸ್ ಎಸೆದ ಜಾಗವನ್ನೂ ತೋರಿಸಿದ. “ಯಾವುದೋ ಕಾರಣಕ್ಕೆ ಜಗಳ ಆಯ್ತು ಅಂತ ನನ್ನನ್ನು ಮನೆಯಿಂದ ಹೊರಗೆ ಕಳಿಸಿಬಿಟ್ರಾ ಅಂಕಲ್. ಅಮ್ಮನಿಂದ ನನ್ನನ್ನು ದೂರ ಮಾಡಿಬಿಟ್ರಾ. ನಿಜವಾಗ್ಲೂ ನಾನು ಅನಾಥನ ಥರಾನೇ ಬದುಕಿದ್ದೆ. ಕಾಡಿಗೆ ಹೋಗಿ ಕಾಲ ಕಳೆದೆ. ಹಸಿವು ತಡೆಯಲಾಗದೆ ಹೀಗೆ ಮಾಡಿಬಿಟ್ಟೆ…’ ಎಂದು ಸಂಕಟದಿಂದ ಹೇಳಿಕೊಂಡ. ಬಾಲಕನ ಮಾತುಗಳಲ್ಲಿ ಕಪಟವಿಲ್ಲ ಎಂಬುದು ಗಿಲೀಸ್‌ಗೆ ಅರ್ಥವಾಯಿತು.
“ಹೆದರಬೇಡ. ನಿನಗೆ ಬೆಂಬಲವಾಗಿ ನಾನಿದ್ದೇನೆ. ಎಲ್ಲಾದ್ರೂ ನಿನಗೊಂದು ಕೆಲಸ ಕೆಲಸ ಹುಡುಕೋಣ’ ಎಂದು ಗಿಲೀಸ್ ಆ ಹುಡುಗ ಪ್ರಥೇರ್‌ಗೆ ಸಮಾಧಾನ ಹೇಳಿದ. ಈ ವೇಳೆಗೆ ಒಂದು ಎಡವಟ್ಟಾಗಿ ಹೋಗಿತ್ತು. ಪರ್ಸ್ ಕಳೆದುಕೊಂಡಿದ್ದ ಯುವತಿ, ಈ ಸಂಬಂಧವಾಗಿ ಪೊಲೀಸರಿಗೆ ದೂರು ನೀಡಿಬಿಟ್ಟಿದ್ದಳು. ಪರ್ಸ್ ಕದ್ದವನ ಮುಖ ಚಹರೆಯ ಫೂಟೇಜ್ ಸಹ ಸಿಸಿ ಟಿವಿಯಲ್ಲಿ ಕಾಣಿಸಿದೆ ಎಂದೂ, ಬಾರ್ ಓನರ್ ಜೊತೆ ನಡೆಸಿದ ಸಂಭಾಷಣೆಯನ್ನೂ ತನ್ನ ದೂರಿನಲ್ಲಿ ಉಲ್ಲೇಖೀಸಿದ್ದಳು.
ನೋಡನೋಡುತ್ತಲೇ ಗಿಲೀಸ್‌ನ ಬಾರ್‌ಗೆ ಪೊಲೀಸರು ಬಂದೇಬಿಟ್ಟರು. ಆ ಹುಡುಗ ಯಾರು? ಸಿಸಿ ಟಿವಿಯ ಫೂಟೇಜ್ ಎಲ್ಲಿದೆ ಎಂದರು. ಗಿಲೀಸ್, ಪ್ರಾಮಾಣಿಕವಾಗಿ ಉತ್ತರಿಸಿದ. “ಹಸಿವಿನಿಂದ ಕಂಗಾಲಾಗಿದ್ದ ಕಾರಣಕ್ಕೆ ಪ್ರಥೇರ್ ಹಣ ತಗೊಂಡಿದ್ದಾನೆ. ಅವನನ್ನು ಕಳ್ಳ ಎಂದು ಕರೆಯಲು ನನ್ನ ಮನಸ್ಸು ಒಪ್ಪುತ್ತಿಲ್ಲ. ಪರ್ಸ್ ಎಸೆದಿರುವ ಸ್ಥಳವನ್ನೂ° ಆತ ತೋರಿಸಿದ್ದಾನೆ. ಅವನ ಮಾತಿನಲ್ಲಿ ನನಗೆ ನಂಬಿಕೆಯಿದೆ. ಇಬ್ಬರು ಮುಳುಗು ತಜ್ಞರನ್ನು ನಾನೇ ಕರೆಸುತ್ತೇನೆ. ನಿಮ್ಮ ಸಮ್ಮುಖದಲ್ಲಿಯೇ ಶೋಧ ಕಾರ್ಯ ನಡೆಯಲಿ. ಪರ್ಸ್ ಸಿಕ್ಕಿಬಿಟ್ಟರೆ, ಅದರಲ್ಲಿ ರಿಂಗ್ ಕೂಡ ಇದ್ದರೆ, ಆ ಹುಡುಗನ ಮೇಲೆ ಯಾವುದೇ ಪ್ರಕರಣ ದಾಖಲಿಸದೆ ಬಿಟ್ಟು ಬಿಡಿ. ಇದು ನನ್ನ ಸವಿನಯ ವಿನಂತಿ’ ಎಂದು ಪ್ರಾರ್ಥಿಸಿದ.
ಮರು ದಿನ ಮುಳುಗು ತಜ್ಞರು ಬಾರ್‌ನ ಸಮೀಪವಿದ್ದ ಹೊಂಡಕ್ಕೆ ಡೈವ್ ಹೊಡೆದ ಕೆಲವೇ ಕ್ಷಣಗಳಲ್ಲಿ, ಪೊಲೀಸರ ವಿಚಾರಣೆಯೂ ಆರಂಭವಾಯಿತು. ಪರ್ಸ್‌ನಲ್ಲಿದ್ದ ಭಾರೀ ಬೆಲೆ ಬಾಳುವ ರಿಂಗನ್ನು ತೆಗೆದುಕೊಂಡು ಎಲ್ಲೋ ಅಡಗಿಸಿಟ್ಟು ಅಥವಾ ಮಾರಿಕೊಂಡು ಈ ಹುಡುಗ ನಾಟಕವಾಡುತ್ತಿದ್ದಾನೆ ಎಂದೇ ಪೊಲೀಸರು ನಂಬಿದ್ದರು. ಪ್ರಥೇರ್‌ನ ಪ್ರತಿಯೊಂದು ಮಾತಿನಲ್ಲಿಯೂ ತಪ್ಪು ಹುಡುಕ್ತಿದ್ದರು. ಈ ಮಧ್ಯೆ, ಮುಳುಗು ತಜ್ಞರು ಆಗಿಂದಾಗ್ಗೆ ಕಾಣಿಸಿಕೊಂಡು “ಏನೂ ಸಿಕ್ತಾ ಇಲ್ಲ. ಏನೂ ಪತ್ತೆಯಾಗ್ತಾ ಇಲ್ಲ’ ಅನ್ನುತ್ತಿದ್ದರು. ಕಡೆಗೊಮ್ಮೆ ಇನ್ನು 15 ನಿಮಿಷ ಕಾಯೋಣ. ಆಗಲೂ ಏನೂ ಪತ್ತೆಯಾಗದಿದ್ರೆ ಇವನನ್ನು ಅರೆಸ್ಟ್ ಮಾಡ್ತೇವೆ ಎಂದು ಪೊಲೀಸರು ನಿರ್ಧಾರದ ಧ್ವನಿಯಲ್ಲಿ ಹೇಳಿಬಿಟ್ಟರು.
ಈ ವೇಳೆಗೆ ಅಲ್ಲಿ ಸಾಕಷ್ಟು ಜನ ಸೇರಿದ್ದರು. ನಡೆದಿರುವುದೇನೆಂದು ಎಲ್ಲರಿಗೂ ಗೊತ್ತಾಗಿತ್ತು. 15 ನಿಮಿಷದೊಳಗೆ ಪರ್ಸ್ ಮತ್ತು ರಿಂಗ್ ಸಿಗದಿದ್ರೆ ಈ ಹುಡುಗ ಅರೆಸ್ಟ್ ಆಗ್ತಾನೆ. ಅಂಥ ಸಂದರ್ಭ ಬಂದ್ರೆ ನಾನು ಇಂಥಾ ಕಡೆ ಈ ಪರ್ಸ್‌ನ ಅಡಗಿಸಿ ಇಟ್ಟಿದೀನಿ. ಈಗಲೇ ಹೋಗಿ ತಂದುಕೊಡ್ತೇನೆ. ನನ್ನನ್ನು ಬಿಟ್ಟು ಬಿಡೀ..’ ಎಂದು ಆ ಹುಡುಗ ಚೀರಬಹುದು ಎಂದೆಲ್ಲ ಹಲವರು ಲೆಕ್ಕಹಾಕುತ್ತಿದ್ದರು.
ಹೀಗಿದ್ದಾಗಲೇ, ಮುಳುಗು ತಜ್ಞರಲ್ಲಿ ಒಬ್ಬ ಮೇಲೆ ಬಂದು “ಸಿಕು¤, ಸಿಕು¤’ ಎನ್ನುತ್ತಲೇ ಕೈ ಮೇಲೆತ್ತಿದ. ಅವನ ಕೈಯಲ್ಲಿ ಪರ್ಸ್ ಕಾಣಿಸಿತು. ಅಷ್ಟೇ: ನೆರೆದಿದ್ದ ಜನರೆಲ್ಲ ಹುರ್ರಾ…ಎನ್ನುತ್ತಾ ಚಪ್ಪಾಳೆ ಹೊಡೆದರು. ದಡ ತಲುಪಿದ ಆ ಮುಳುಗು ತಜ್ಞ , “ಪರ್ಸ್ ಒಳಗೆ ಏನೋ ಇದ್ದಂತೆ ಭಾಸವಾಗ್ತಿದೆ. ಬಹುಶಃ ಅದು ರಿಂಗೇ ಇರಬೇಕು’ ಅಂದ.
ಅವನಿಂದ ಪರ್ಸ್ ಪಡೆದ ಪೊಲೀಸರು, ಲಗುಬಗೆಯಿಂದಲೇ ತೆರೆದು ನೋಡಿದರು. ಪರ್ಸ್‌ನೊಳಗೆ ರಿಂಗ್ ಆರಾಮಾಗಿ ಉಳಿದಿತ್ತು. ಕ್ರೆಡಿಟ್ ಕಾರ್ಡ್‌ಗಳೆಲ್ಲ ಆಗಷ್ಟೇ ಜೋಡಿಸಿದಷ್ಟು ನೀಟ್ ಆಗಿ ಇದ್ದವು. ಗಿಲೀಸ್ ತಡಮಾಡಲಿಲ್ಲ.ಪರ್ಸ್ ಕಳೆದುಕೊಂಡಿದ್ದ ಯುವತಿಗೆ ಕಾಲ್ ಮಾಡಿ, ನಿಮ್ಮ ಪರ್ಸ್ ಸಿಕ್ಕಿದೆ. ಪರ್ಸ್ ಕೊಂಡೊಯ್ದಿದ್ದ ಹುಡುಗ ಮಾತ್ರವಲ್ಲ; ಪೊಲೀಸರೂ ನಮ್ಮ ಬಾರ್‌ಗೆ ಬಂದಿದ್ದಾರೆ. ತಕ್ಷಣ ಬನ್ನಿ’ ಎಂದು ವಿನಂತಿಸಿದ.
ಆ ಯುವತಿ ಧಾವಿಸಿ ಬಂದಳು. ಪರ್ಸನ್ನೂ, ಅದರೊಳಗಿದ್ದ ರಿಂಗನ್ನೂ ಕಂಡು ಭಾವುಕಳಾಗಿ ಬಿಕ್ಕಳಿಸಿದಳು. ನಡೆದ ಕಥೆಯನ್ನೆಲ್ಲ ಕೇಳಿ-“ಯಾರೋ ಕಳ್ಳರು ಕದ್ದುಬಿಟ್ಟಿದ್ದಾರೆ ಎಂದು ನಾನು ದೂರು ನೀಡಿದ್ದೆ. ಈಗ ಪರ್ಸ್ ಸಿಕ್ಕಿರುವುದರಿಂದ, ದೂರನ್ನೂ ವಾಪಸ್ ತಗೊಳ್ತಾ ಇದೀನಿ’ ಎಂದಳು. “ಹಸಿವಿನಿಂದ ಕಂಗಾಲಾಗಿದ್ದ ಕಾರಣದಿಂದಷ್ಟೇ ಪ್ರಥೇರ್ ಪರ್ಸ್‌ನಲ್ಲಿದ್ದ ಹಣ ತೆಗೆದುಕೊಂಡಿದ್ದಾನೆ. ಕಳವು ಮಾಡಬೇಕೆಂಬ ಉದ್ದೇಶವಾಗಲಿ, ಕ್ರಿಮಿನಲ್ ಹಿನ್ನೆಲೆಯಾಗಲಿ ಅವನಿಗಿಲ್ಲ. ಹಾಗಾಗಿ ಅವನಿಗೆ ಯಾವುದೇ ಶಿಕ್ಷೆ ಕೊಡಬೇಡಿ. ಅವನ ವಿರುದ್ಧ ಯಾವುದೇ ಪ್ರಕರಣ ದಾಖಲಿಸಬೇಡಿ’ ಎಂದು ಗಿಲೀಸ್ ಮತ್ತೂಮ್ಮೆ ಪೊಲೀಸರಲ್ಲಿ ಮನವಿ ಮಾಡಿಕೊಂಡ. ಇಡೀ ಪ್ರಸಂಗಕ್ಕೆ ಸಾಕ್ಷಿಯಾಗಿದ್ದ ಜನತೆಯೂ ಗಿಲೀಸ್‌ನ ಮಾತುಗಳನ್ನೇ ಅನುಮೋದಿಸಿದರು. ಸಾರ್ವಜನಿಕರ ಒತ್ತಡಕ್ಕೆ ಪೊಲೀಸರೂ ಮಣಿಯಲೇಬೇಕಾಯಿತು.
ಪರ್ಸ್ ಕಳೆದುಕೊಂಡಾಕೆಗೆ ಅದು ಮರಳಿ ಸಿಕ್ಕಿತು. ಪೊಲೀಸರಿಗೆ, ಒಂದು ಕೇಸ್ ಬಗೆಹರಿಸಿದ ತೃಪ್ತಿ ಸಿಕ್ಕಿತು. ಆದರೆ, ಮನೆಯವರಿಂದ ದೂರವಾಗಿರುವ, ಅದೇ ಬೇಸರದಲ್ಲಿ ಕಾಡಿನಲ್ಲಿ ಒಂಟಿಯಾಗಿ ದಿನಕಳೆಯುವ ಪ್ರಥೇರ್‌ನ ಕಥೆ ಏನು ಎಂದು ಯೋಚಿಸಿದ ಗಿಲೀಸ್ ಕಡೆಗೆ ಹೀಗೆಂದ: “ನೋಡೂ, ಕಳ್ಳನನ್ನು ಹುಡುಕಲು ಹೊರಟಾಗ ಮಗನ ಥರಾ ಇರುವ ನೀನು ಸಿಕ್ಕಿಬಿಟ್ಟಿದ್ದೀಯಾ. ಹೋಗು, ನಿನ್ನ ಹಣೆಯಲ್ಲಿ ಬರೆದಂತಾಗಲಿ. ಎಲ್ಲಾದ್ರೂ ನೆಮ್ಮದಿಯಾಗಿ ಬದುಕು ಅನ್ನೋಕೆ ನನಗೆ ಮನಸಿಲ್ಲ. ನಮ್ಮ ಮನೇಲಿ-ಮನಸಲ್ಲಿ ನಿನಗೆ ಜಾಗವಿದೆ. ನಮ್ ಬಾರ್‌ನಲ್ಲಿ ನಿನಗೊಂದು ಕೆಲಸವೂ ಸಿಗುತ್ತೆ. ನನ್ನ ಜೊತೇನೇ ಇದ್ದುಬಿಡು…’
ಇದನ್ನೆಲ್ಲ ನೆನಪು ಮಾಡಿಕೊಂಡು ಈಗ ಪ್ರಥೇರ್ ಹೇಳುತ್ತಾನೆ. ಅಕಸ್ಮಾತ್ ಗಿಲೀಸ್ ಅವರು ನನ್ನನ್ನು ಪೊಲೀಸರಿಗೆ ಒಪ್ಪಿಸಿದ್ದರೆ, ನಾನು ರಿಮ್ಯಾಂಡ್ ಹೋಂನ ಪಾಲಾಗಿದ್ದರೆ, ಭವಿಷ್ಯದಲ್ಲಿ ನಾನೂ ಒಬ್ಬ ಕ್ರಿಮಿನಲ್ ಆಗ್ತಿದ್ದೆನೇನೋ…ಆದರೆ, ಅವರು ನನ್ನನ್ನು ಮಗನಂತೆ ಭಾವಿಸಿದರು. ಪ್ರೀತಿ ತೋರಿದರು. ಹಾಗಾಗಿ ನಾನಿವತ್ತು ನೆಮ್ಮದಿಯಿಂದ ಬಾಳುವಂತಾಗಿದೆ. ನನ್ನ ಬದುಕಿಗೆ ದೇವರಂತೆಯೇ ಒದಗಿ ಬಂದ ಗಿಲೀಸ್ ಎಂಬ ತಂದೆಯನ್ನು ಮರೆಯಲಾರೆ…
(ಮಾಹಿತಿ ಕೃಪೆ: ರೀಡರ್ಸ್ ಡೈಜೆಸ್ಟ್)
ಎ.ಆರ್. ಮಣಿಕಾಂತ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Deepika Das: ನಟಿ ದೀಪಿಕಾ ದಾಸ್ ಕುಟುಂಬಕ್ಕೆ ಬೆದರಿಕೆ ಕರೆ; ಯುವಕನ ವಿರುದ್ಧ ದೂರು
Pakistan: ಇಮ್ರಾನ್ ಬಿಡುಗಡೆಗೆ ಬೆಂಬಲಿಗರ ಪ್ರತಿಭಟನೆ: ಹಿಂಸಾಚಾರ, ಸಾವಿರಾರು ಜನರ ಬಂಧನ
Madikeri: ಲಾರಿ ಡಿಕ್ಕಿಯಾಗಿ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಬಾಲಕಿ ಸಾವು
Mumbai Cricket: ಸಚಿನ್ ತೆಂಡೂಲ್ಕರ್ ಸಲಹೆಯನ್ನೂ ನಿರ್ಲಕ್ಷಿಸಿದರಾ ಪೃಥ್ವಿ ಶಾ..
Teacher: ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.