ಅಡುಗೆ ಮನೆಯ ಅಗ್ನಿಯೆದುರು ಅರಳಿದ ಹೂ
Team Udayavani, Mar 20, 2022, 7:50 AM IST
50 ವರ್ಷ ದಾಟುತ್ತಿದ್ದಂತೆ-ದೃಷ್ಟಿ ಮಂಕಾಗುತ್ತದೆ. ನಡಿಗೆ ನಿಧಾನವಾಗುತ್ತದೆ. ಒಂದೆರಡು ಹಲ್ಲುಗಳು ಬಿದ್ದು ಹೋಗುತ್ತವೆ. ಬೆನ್ನು ಬಾಗುತ್ತದೆ. ಕೆಲವೊಮ್ಮೆ ಕೈಗಳು ನಡುಗುತ್ತವೆ. ಬೇಡ ಬೇಡವೆಂದರೂ ಬಿಪಿ ಜತೆಯಾಗುತ್ತದೆ. ಶುಗರ್, ಮರೆಯಲ್ಲಿದ್ದೇ ಹೆದರಿಸುತ್ತದೆ. ನಾಳೆ ಇದ್ದಕ್ಕಿದ್ದಂತೆ ಆರೋಗ್ಯದಲ್ಲಿ ಏರುಪೇರು ಆಗಿಬಿಟ್ಟರೆ; ಹೈ ಬಿಪಿಯ ಕಾರಣದಿಂದ ಸ್ಟ್ರೋಕ್, ಲೋ ಬಿಪಿ ಕಾರಣಕ್ಕೆ ಹಾರ್ಟ್ ಅಟ್ಯಾಕ್ ಆಗಿಬಿಟ್ಟರೆ-ಎಂಬಂಥ ಯೋಚನೆಗಳು ಮೇಲಿಂದ ಮೇಲೆ ಬರತೊಡಗುತ್ತವೆ. 60 ವರ್ಷ ದಾಟಿದರಂತೂ ಮರೆವಿನ ಕಾಯಿಲೆಯೇ ಜತೆಯಾಗಿ ಆಟ ಆಡಿಸ ತೊಡಗುತ್ತದೆ. “ನಂಗೂ ಅರವತ್ತಾಯ್ತು. ಈಗ ದೇಹದಲ್ಲಿ ಮೊದಲಿನಷ್ಟು ಶಕ್ತಿ ಉಳಿದಿಲ್ಲ. ಇನ್ನು ಎಷ್ಟು ದಿನ ಇರ್ತೀನೋ ಗೊತ್ತಿಲ್ಲ…’ ಎಂದು ಜನ ತಾವಾಗಿಯೇ ಭವಿಷ್ಯ ಹೇಳುವುದು ಈ ಸಂದರ್ಭದಲ್ಲೇ.
ವಾಸ್ತವ ಹೀಗಿರುವಾಗ, ಮುಂಬಯಿಯಲ್ಲಿರುವ ಅಜ್ಜಿಯೊಬ್ಬರು ತಮ್ಮ 77ನೇ ವಯಸ್ಸಿನಲ್ಲಿ ಮೊಮ್ಮಗನ ಜತೆ ಸೇರಿಕೊಂಡು ಸ್ಟಾರ್ಟ್ ಅಪ್ ಆರಂಭಿಸಿದ್ದಾರೆ. ಈ ವಯಸ್ಸಿನಲ್ಲಿಯೂ ದಿನಕ್ಕೆ ನಿರಂತರವಾಗಿ 10 ಗಂಟೆ ಕೆಲಸ ಮಾಡುತ್ತಾರೆ. ಪರಿಣಾಮ, ಅವರ ಹೊಸ ಉದ್ಯಮ ಕೇವಲ ಎರಡೇ ವರ್ಷದಲ್ಲಿ ಮುಂಬಯಿಯಲ್ಲಿ ಮನೆ ಮಾತಾಗಿದೆ. ಲಾಭದ ಹಳಿಗೆ ಬಂದು ನಿಂತಿದೆ. ಅಜ್ಜಿಯ ಯಶೋಗಾಥೆ ಯನ್ನು ಮುಂಬಯಿಯ ಎಲ್ಲ ಪತ್ರಿಕೆಗಳು ಪ್ರಕಟಿಸಿವೆ. ಚಾನೆಲ್‌ಗಳು ಸಂದರ್ಶನ ಪ್ರಸಾರ ಮಾಡಿವೆ. ಯುಟ್ಯೂಬ್ ಚಾನೆಲ್‌ನಲ್ಲಿ ಈ ಅಜ್ಜಿಯ ವೀಡಿಯೋಗಳಿಗೆ ಭಾರೀ ಬೇಡಿಕೆಯಿದೆ. ಒಂದೇ ಮಾತಲ್ಲಿ ಹೇಳುವುದಾದರೆ- ಊರ್ಮಿಳಾ ಜಮನಾದಾಸ್ ಎಂಬ ಅಜ್ಜಿ ಈಗ ಮುಂಬಯಿಯಲ್ಲಿ ವರ್ಲ್ಡ್ ಫೇಮಸ್!
ಗುಜ್ಜು ಬೆನ್‌ನ ನಾಷ್ಟಾ- ಇದು ಅಜ್ಜಿಯ ಸ್ಟಾರ್ಟ್ ಅಪ್‌ನ ಹೆಸರು. ಅಂದರೆ ರುಚಿಕರವಾದ ತಿಂಡಿ ತಿನಿಸು ತಯಾರಿಸುವ ಮಳಿಗೆ. 77 ನೇ ವಯಸ್ಸಿನಲ್ಲಿ ಸ್ಟಾರ್ಟ್ ಅಪ್ ಆರಂಭಿಸುವಂಥ ಅನಿವಾರ್ಯತೆ ಅಜ್ಜಿಗೆ ಬಂದುದಾದರೂ ಏಕೆ? ಆಕೆಯ ಸ್ಟಾರ್ಟ್ ಅಪ್‌ನಿಂದ ಎಷ್ಟು ಜನರಿಗೆ ಅನುಕೂಲವಾಯಿತು? ಎಂಬ ಪ್ರಶ್ನೆಗೆ, ಆಕೆಯ ಮೊಮ್ಮಗ ಹರ್ಷ್ ವಿವರವಾಗಿಯೇ ಉತ್ತರ ನೀಡಿದರು. ಅದು ಹೀಗೆ…
“ನಾವು ಗುಜರಾತಿನವರು. ನಮ್ಮ ತಾತ ಅಲ್ಲಿಂದ ವಲಸೆ ಬಂದು ಮುಂಬಯಿಯಲ್ಲಿ ನೆಲೆನಿಂತರು. ಅಜ್ಜಿಯ ತವರಿನವರು ತುಂಬಾ ಶ್ರೀಮಂತರಾಗಿದ್ದರಂತೆ. ಆಕೆ ಮಧ್ಯಮ ವರ್ಗದ ಕುಟುಂಬಕ್ಕೆ ಸೊಸೆಯಾಗಿ ಬಂದರು. ಬ್ಯಾಡ್ ಲಕ್. ಅನಂತರದಲ್ಲಿ ಒಂದೊಂದೇ ಕಷ್ಟಗಳು ಜತೆಯಾದವು. ಅಜ್ಜಿಗೆ ಚಿಕ್ಕ ವಯಸ್ಸಿಗೇ ವೈಧವ್ಯ ಜತೆಯಾಯಿತು. ಹಿಂದೆಯೇ ಬಡತನವೂ ಕೈ ಹಿಡಿಯಿತು. ಉಹೂಂ, ಅಂಥ ಸಂದ ರ್ಭದಲ್ಲೂ ಆಕೆ ಸೈರಣೆ ಕಳೆದುಕೊಳ್ಳಲಿಲ್ಲ. ತನ್ನ ಕಿರಿಯ ಮಗ(ನಮ್ಮ ತಂದೆ) ನ ಕುಟುಂಬದೊಂದಿಗೆ ಉಳಿದಿದ್ದಳು. ಅಪ್ಪ-ಅಮ್ಮ, ಅಕ್ಕ, ಅಜ್ಜಿ, ನಾನು-ಹೀಗೆ ಐದು ಜನರ ಕುಟುಂಬಕ್ಕೆ ಅಪ್ಪನ ದುಡಿಮೆಯೇ ಆಧಾರವಾಗಿತ್ತು.
ಹೀಗಿರುವಾಗಲೇ ಅವತ್ತೂಂದು ದಿನ ದುಡಿಮೆಗೆಂದು ಹೋಗಿದ್ದ ಅಪ್ಪ, ಅಲ್ಲಿಯೇ ಹಾರ್ಟ್ ಅಟ್ಯಾಕ್‌ನಿಂದ ತೀರಿಕೊಂಡರು. ಈ ಸಂದರ್ಭದಲ್ಲಿ ನಾನಿನ್ನೂ ವಿದ್ಯಾರ್ಥಿ. ನಾನು ಎಂಬಿಎ ಮುಗಿಸಿ ನೌಕರಿಗೆ ಸೇರುವವರೆಗೂ ಅಮ್ಮ ಮತ್ತು ಅಜ್ಜಿಯೇ ಕುಟುಂಬ ನಿರ್ವಹಣೆಯ ಹೊರೆ ಹೊತ್ತರು. ಅಜ್ಜಿಗೆ ತುಂಬಾ ಚೆನ್ನಾಗಿ ಅಡುಗೆ ಮಾಡುವ ಕಲೆ ಒಲಿದಿತ್ತು. ಕುಟುಂಬ ನಿರ್ವಹಣೆ ಮಾಡಬೇಕಾಗಿ ಬಂದಾಗ ಆಕೆ ಕೇಟರಿಂಗ್‌ನ ಕಾಂಟ್ರಾಕ್ಟ್ ಪಡೆದದ್ದೂ ಉಂಟು. ರುಚಿಯಾದ ಗುಜರಾತಿ ತಿನಿಸುಗಳ ತಯಾರಿಕೆಯಲ್ಲಿ ಅಜ್ಜಿಗೆ ಅದೆಂಥ ಪ್ರಾವೀಣ್ಯ ಇತ್ತೆಂದರೆ, ಅಡುಗೆ ಮಾಡುವುದಕ್ಕೆಂದೇ ಆಕೆ ಅಮೆರಿಕ, ಇಂಗ್ಲೆಂಡ್, ಪೋರ್ಚುಗಲ್ ಮುಂತಾದ ದೇಶಗಳಿಗೂ ಒಬ್ಬರೇ ಹೋಗಿ ಬಂದರು.
2012ರಲ್ಲಿ ಎಂಬಿಎ ಮುಗಿಯುತ್ತಿದ್ದಂತೆ ವಿದೇಶಿ ಕಂಪೆನಿಯೊಂದರಲ್ಲಿ ನೌಕರಿಗೆ ಸೇರಿದೆ. ಎರಡು ವರ್ಷಗಳ ಅನಂತರ ಆ ಕೆಲಸ ಬಿಟ್ಟು ಸ್ವಂತ ಬಿಸಿನೆಸ್ ಆರಂಭಿಸಿ ಯಶಸ್ಸು ಕಂಡೆ. ಚಿಕ್ಕಂದಿನಿಂದಲೂ ನನಗೆ ಹಾರ್ಲೆ ಡೇವಿಡ್ ಸನ್ ಬೈಕ್ ಅಂದ್ರೆ ಬಹಳ ಇಷ್ಟವಿತ್ತು. ಲಾಭದ ರೂಪದಲ್ಲಿ ಸಿಕ್ಕಿದ ಹಣವನ್ನು ಬಂಡವಾಳವಾಗಿ ಹೂಡಿ ಹಾರ್ಲೆ ಡೇವಿಡ್ ಸನ್ ಬೈಕ್‌ನ ಶೋ ರೂಮ್ ತೆರೆದೆ. ಅನಂತರದಲ್ಲಿ- ಆರಕ್ಕೆ ಏರಲಿಲ್ಲ. ಮೂರಕ್ಕೆ ಇಳಿಯಲಿಲ್ಲ. ಹೊಟ್ಟೆಬಟ್ಟೆಗೆ ಕೊರತೆ ಇಲ್ಲ ಅನ್ನುವಂಥ ಸಂತೃಪ್ತ ಜೀವನ ನಮ್ಮದಾಗಿತ್ತು. ಲೈಫ್ ಈಸ್ ಬ್ಯೂಟಿಫುಲ್ ಎಂಬ ಖುಷಿಯಲ್ಲಿ ನಾನಿದ್ದಾಗಲೇ ಕೋವಿ ಡ್‌ನ ರೂಪದಲ್ಲಿ ದುರದೃಷ್ಟ ಹೆಗಲು ತಟ್ಟಿತು. ಬಿಸಿನೆಸ್‌ನಲ್ಲಿ ಲಾಸ್ ಆಯಿತು. ಬೈಕ್‌ಗಳನ್ನು ಕೊಳ್ಳುವವರಿಲ್ಲದೆ ಶೋ ರೂಮ್ ಮುಚ್ಚಬೇಕಾಗಿ ಬಂತು. ಇಷ್ಟು ಸಾಲದೆಂಬಂತೆ ನಾನು ಓಡಿಸುತ್ತಿದ್ದ ಬೈಕ್ ಆ್ಯಕ್ಸಿಡೆಂಟ್‌ಗೆ ತುತ್ತಾಯಿತು!
ಅಪಘಾತದ ತೀವ್ರತೆ ಎಷ್ಟಿತ್ತೆಂದರೆ- ನನ್ನ ಮೇಲುªಟಿಯ ಭಾಗ ತುಂಡಾಗಿ ರಸ್ತೆಯಲ್ಲಿ ಬಿದ್ದಿತ್ತಂತೆ. ಅದನ್ನು ಪ್ಲಾಸ್ಟಿಕ್ ಕವರ್‌ನಲ್ಲಿ ಹಾಕಿಕೊಂಡು ಆಸ್ಪತ್ರೆಗೆ ತಲುಪಿಸಲಾಯಿತಂತೆ. ಅನಂತರ ಪ್ಲಾಸ್ಟಿಕ್ ಸರ್ಜರಿ ಮೂಲಕ ಅದನ್ನು ಜೋಡಿಸಿ ದರಂತೆ. ಇದನ್ನೆಲ್ಲ ಅನಂತರದಲ್ಲಿ ವಿವರಿಸಿ ಹೇಳಿದ ವೈದ್ಯರು- “ನೀವು ಬದುಕುಳಿಯಬಹುದು ಎಂಬ ಬಗ್ಗೆ ನಮಗೆ ನಂಬಿಕೆ ಇರಲಿಲ್ಲ. ಅದೃಷ್ಟ ನಿಮ್ಮ ಕಡೆಗಿತ್ತು. ಹಾಗಾಗಿ ಉಳಿದುಕೊಂಡಿರಿ’ ಎಂದು ಮಾತು ಮುಗಿಸಿದ್ದರು.
ಆರೆಂಟು ತಿಂಗಳ ಚಿಕಿತ್ಸೆಯ ಅನಂತರ ಕನ್ನಡಿಯ ಎದುರು ಕೂತವನು ಬೆಚ್ಚಿಬಿದ್ದೆ. ಆ್ಯಕ್ಸಿಡೆಂಟ್‌ಗೂ ಮುಂಚೆ, ಹತ್ತು ಜನ ಮೆಚ್ಚಬೇಕು, ಅಂಥ ರೂಪು ನನಗಿತ್ತು. ಗೆಳೆ ಯರು- ಬಂಧುಗಳಂತೂ “ಹೀರೋ’ ಎಂದೇ ಕರೆಯು ತ್ತಿದ್ದರು. ಸಿನೆಮಾ ಸ್ಟಾರ್ ಥರಾ ಇದೀಯ ಅನ್ನುತ್ತಿದ್ದರು. ಆದರೆ ಆ್ಯಕ್ಸಿಡೆಂಟ್‌ನ ಅನಂತರ ನನ್ನ ಮುಖ ನನಗೇ ಕೆಟ್ಟದಾಗಿ ಕಾಣತೊಡಗಿತ್ತು. ಆಗಿನ್ನೂ ನನಗೆ 30 ವರ್ಷ. ಈ ಕುರೂಪಿನೊಂದಿಗೇ ಜೀವನ ಕಳೆಯಬೇಕು. ಜನ ಗೇಲಿ ಮಾಡಿದರೆ, ಆಡಿಕೊಂಡು ನಕ್ಕರೆ ಗತಿಯೇನು ಅನ್ನಿಸತೊಡಗಿತು. ಈ ಯೋಚನೆಯಲ್ಲಿಯೇ ಹಾಸಿಗೆ ಹಿಡಿದೆ. ಡಿಪ್ರಶನ್‌ಗೆ ಹೋಗಿಬಿಟ್ಟೆ. ಹೀಗಿದ್ದಾಗಲೇ ಅದೊಂದು ದಿನ ಅಜ್ಜಿ ನನ್ನ ಹಣೆ ನೇವರಿಸಿತು. ಅಂಥದೊಂದು ಸಾಂತ್ವನಕ್ಕೆ ಕಾದಿದ್ದವನಂತೆ ಬಿಕ್ಕಿಬಿಕ್ಕಿ ಅತ್ತುಬಿಟ್ಟೆ.
ಐದು ನಿಮಿಷಗಳ ಅನಂತರ ಅಜ್ಜಿ ಹೇಳಿದರು: “ಹರ್ಷಾ, ನನ್ನ ಕಥೆಯನ್ನು ಸ್ವಲ್ಪ ಕೇಳಿಸ್ಕೊ. ನನಗೆ ಮೂರು ಮಕ್ಕಳು. ಮುದ್ದಿನ ಮಗಳು, 3ನೇ ವಯಸ್ಸಿನಲ್ಲೇ ಮಹಡಿಯ ಮೇಲಿಂದ ಬಿದ್ದು ಸತ್ತುಹೋದಳು. ಇದಾದ ಸ್ವಲ್ಪ ದಿನಕ್ಕೆ ಯಜಮಾನರೂ ತೀರಿಕೊಂಡರು. ಆರೆಂಟು ವರ್ಷಗಳ ಬಳಿಕ ಹಿರಿಯ ಮಗ ಮೆದುಳಿನ ಕಾಯಿಲೆಗೆ ತುತ್ತಾದ. ಕಡೆಯ ಭರವಸೆ ಎಂಬಂತೆ ಉಳಿದಿದ್ದ ನಿನ್ನ ತಂದೆಯೂ ಆ್ಯಕ್ಸಿಡೆಂಟ್‌ನಲ್ಲಿ ಹೋಗಿಬಿಟ್ಟ. ಅನಂತರದಲ್ಲಿ ನನಗೇ ಎರಡು ಬಾರಿ ಹಾರ್ಟ್ ಅಟ್ಯಾಕ್ ಆಯಿತು. ನೀನು ಬರೀ ತುಟಿ ಕಳ್ಕೊಂಡಿದೀಯ. ಆದರೆ ನಾನು ಗಂಡ ಮತ್ತು ಮಕ್ಕಳನ್ನೇ ಕಳ್ಕೊಂಡಿದೀನಿ! ಈಗ ಹೇಳು: ನಿನಗೆ ಆಗಿರುವ ಆ್ಯಕ್ಸಿಡೆಂಟ್ ದೊಡ್ಡದಾ? ಅಥವಾ ನನಗೆ ಬದುಕಿನುದ್ದಕ್ಕೂ ಬಿದ್ದಿರುವ ಪೆಟ್ಟುಗಳ ಮೊತ್ತ ದೊಡ್ಡದಾ? ಕೊರಗುತ್ತಾ ಕುಳಿತರೆ ಏನುಪಯೋಗ? ಹಸಿವು ಕೊಟ್ಟ ದೇವರು ಅನ್ನವನ್ನೂ ಅಲ್ಲೆಲ್ಲೋ ಇಟ್ಟಿರ್ತಾನೆ. ಕತ್ತಲಲ್ಲಿ ಬಿಟ್ಟವನು ಬೆಳಕನ್ನೂ ತೋರಿಸ್ತಾನೆ. ಸೋತಾಗಲೇ ಗೆಲ್ಲಬೇಕೆಂಬ ಆಸೆ ಹುಟ್ಟೋದು, ಜಾರಿ ಬಿದ್ದಾಗಲೇ ಎದ್ದು ನಿಲ್ಲುವ ಮನಸ್ಸಾ ಗೋದು. ಅರ್ಥ ಆಯ್ತಾ? ಬದುಕು ನಡೆಯಬೇಕು ಅಂದ್ರೆ ಏನಾದ್ರೂ ಕೆಲಸ ಮಾಡಬೇಕು, ಎದ್ದೇಳು…’
ಗಂಡ-ಮಕ್ಕಳನ್ನು ಕಳೆದುಕೊಂಡು ಹೆಜ್ಜೆ ಹೆಜ್ಜೆಗೂ ಕಷ್ಟಗಳನ್ನೇ ಉಸಿರಾಡಿದರೂ ಅಜ್ಜಿ ಕಣ್ಣೀರು ಹಾಕುತ್ತಾ ಕೂತಿರಲಿಲ್ಲ. ನಾನು ಮುಖದ ಅಂದ ಹಾಳಾಯಿತೆಂಬ ಕಾರಣಕ್ಕೇ ಡಿಪ್ರಶನ್‌ಗೆ ಹೋಗಿ ಬಿಟ್ಟಿದ್ದೆ ಅನ್ನಿಸಿದಾಗ ನಾಚಿಕೆಯಾಯಿತು. ಈಗ ಮನೆ ನಡೆಯಬೇಕೆಂದರೆ, ಏನಾದರೂ ಉದ್ಯೋಗ ಮಾಡಲೇಬೇಕಿತ್ತು. ನನಗೋ- ಹೊರಗೆ ಹೋಗಲು ಸಂಕೋಚ, ನಾಚಿಕೆ. ಆ ಸಂದರ್ಭ ದಲ್ಲಿಯೇ- ಉಪ್ಪಿನಕಾಯಿ ಮಾಡಿ ಅದನ್ನು ಸೋಶಿಯಲ್ ಮೀಡಿಯಾ ಮೂಲಕ ಮಾರಾಟ ಮಾಡಿದರೆ ಹೇಗೆ ಅನ್ನಿಸಿತು. ಅಜ್ಜಿಗೂ ಅದನ್ನೇ ಹೇಳಿದೆ. ನಮ್ಮ ಉತ್ಪನ್ನಕ್ಕೆ “ಗುಜ್ಜೂ ಬೆನ್ ನಾ ನಾಷ್ಟಾ'(ಗುಜರಾತಿನ ರುಚಿಕರ ತಿನಿಸುಗಳು) ಎಂಬ ಹೆಸರು ಹಾಕಿ ಮಾರಾಟಕ್ಕೆ ಬಿಟ್ಟೆ. ನಂಬಿದರೆ ನಂಬಿ ಬಿಟ್ಟರೆ ಬಿಡಿ; ಕೇವಲ 20 ದಿನಗಳಲ್ಲಿ 500 ಕೆಜಿ ಉಪ್ಪಿನಕಾಯಿ ಮಾರಾಟ ವಾಯಿತು. ಅನಂತರ ನಡೆದಿರುವುದೆಲ್ಲ ಅಜ್ಜಿಯ ಯಶೋಗಾಥೆಯೇ..
ಈಗ ಚಪಾತಿ, ರೋಟಿ ಸೇರಿದಂತೆ 15ಕ್ಕೂ ಹೆಚ್ಚು ಬಗೆಯ ಗುಜರಾತಿ ತಿನಿಸುಗಳನ್ನು ಅಜ್ಜಿ ತಯಾರಿಸುತ್ತಾಳೆ. ಆಕೆಗೆ ಈಗ 78 ವರ್ಷ. ಆದರೆ ಅಡುಗೆ ಮನೆ ಹೊಕ್ಕರೆ ಸಾಕು, ಆಕೆಗೆ 18ರ ಹುಮ್ಮಸ್ಸು ಬಂದು ಬಿಡುತ್ತದೆ. ದಿನವೂ ಬೆಳಗ್ಗೆ 5 ಗಂಟೆಯಿಂದ ರಾತ್ರಿ 9ಗಂಟೆಯವರೆಗೂ ಬಗೆಬಗೆಯ ತಿನಿಸುಗಳನ್ನು ತಯಾರಿಸುತ್ತಾಳೆ. ಅಡುಗೆ ಮನೆ ಜವಾಬ್ದಾರಿ ಅವರದು. ಆರ್ಡರ್ ತಗೊಳ್ಳೋ ಹೊಣೆ ನನ್ನದು. ಅಜ್ಜಿಯ ಕೈರುಚಿಗೆ ಮಾರು ಹೋಗದವರಿಲ್ಲ. ಸ್ವಿಗ್ಗಿ ಮತ್ತು ಝೊàಮ್ಯಾಟೊ ನಲ್ಲಿ ನಮ್ಮ ಉತ್ಪನ್ನಗಳಿಗೆ ಮುಂಬಯಿಯಲ್ಲಿ ಭಾರೀ ಡಿಮ್ಯಾಂಡ್ ಇದೆ. ಅಜ್ಜಿಯ ಜತೆಗೆ ಅಮ್ಮನೂ ಕೆಲಸ ಹಂಚಿಕೊಳ್ಳುತ್ತಾರೆ. ಇನ್ನೂ ಮೂವರಿಗೆ ನೌಕರಿ ಕೊಡುವ ಮಟ್ಟಿಗೆ ನಮ್ಮ ಉದ್ಯಮ ಬೆಳೆದಿದೆ. ಮುಂದಿನ ದಿನಗಳಲ್ಲಿ ಬ್ರ್ಯಾಂಚ್ ಗಳನ್ನು ಆರಂಭಿಸುವ ಯೋಚನೆಯೂ ಇದೆ. “ಮನುಷ್ಯನಿಗೆ ವಿಪರೀತ ಖುಷಿಯಾಗೋದು, ಅವನಿಷ್ಟದ ಊಟ-ತಿಂಡಿ ಸಿಕ್ಕಾಗ. ಅದನ್ನು ಒದಗಿಸುವ ಪುಣ್ಯದ ಕೆಲಸ ನಮ್ಮದು. ಅದನ್ನು ಶ್ರದ್ಧೆಯಿಂದ ಮಾಡೋಣ’ ಅನ್ನುವುದು ಅಜ್ಜಿಯ ಮಾತು. ಕಷ್ಟಕಾಲದಲ್ಲಿ ಆಕೆ ನನ್ನ ಜತೆ ಬಂಡೆಯಂತೆ ನಿಂತಳು. ನಮ್ಮ ಮನೆಯನ್ನು ಕಾಪಾಡಿದಳು. ಅಜ್ಜಿ ಇಲ್ಲದೇ ಹೋಗಿದ್ದರೆ ನನ್ನ ಬದುಕು ಏನಾಗ್ತಿತ್ತೋ ಗೊತ್ತಿಲ್ಲ. ಆಕೆ ನಮ್ಮ ಪಾಲಿಗೆ ಬರೀ ಅಜ್ಜಿಯಲ್ಲ, ನಮ್ಮ ಪಾಲಿನ ದೇವರು… ಹೀಗೆ ಮುಗಿಯುತ್ತದೆ ಹರ್ಷ ಅವರ ಮಾತು.
*****
78 ನೇ ವಯಸ್ಸಿನಲ್ಲೂ ದಿನಕ್ಕೆ 10 ಗಂಟೆಗಳ ಕಾಲ ಕೆಲಸ ಮಾಡುವ ಅಜ್ಜಿ ಊರ್ಮಿಳಾ ಹೇಳುತ್ತಾರೆ: ನಾನು ಓದಿ ದವಳಲ್ಲ. ನನಗೆ ವ್ಯವಹಾರ ಗೊತ್ತಿಲ್ಲ. ಕೆಲಸ ಮಾಡೋದಷ್ಟೇ ಗೊತ್ತು ನನಗೆ. ಕಣ್ಣೆದುರೇ ಗಂಡ-ಮಕ್ಕಳು ಹೋಗಿಬಿಟ್ರಾ. ದುಃಖ ಆಗದೇ ಇರುತ್ತಾ? ಸಮಾಧಾನ ಆಗುವಷ್ಟು ಅತ್ತೆ. ಹಿರಿಯರು ಚಿಕ್ಕವರ ಒಳಿತಿಗಾಗಿ ಏನಾದರೂ ಮಾಡಬೇಕು ತಾನೇ? ನನ್ನ ಕೈಲಾದದ್ದು ನಾನು ಮಾಡಿದ್ದೇನೆ. ನಾಲ್ಕು ಜನರಿಗೆ ಕೆಲಸ ಕೊಟ್ಟ ಸಂತೃಪ್ತಿ- ರುಚಿಯಾದ ತಿನಿಸುಗಳ ಮೂಲಕ ಸಾವಿರಾರು ಜನರ ಮನಸ್ಸು ಗೆದ್ದ ಖುಷಿ ನನ್ನದು. ಅನ್ನುತ್ತಾರೆ ಅಜ್ಜಿ.
ಇಂಥಾ ಅಜ್ಜಿಯರು ಮನೆ ಮನೆಯಲ್ಲೂ ಇದ್ದರೆ ಎಷ್ಟು ಚೆಂದ ಅಲ್ಲವೇ?.
–ಎ.ಆರ್.ಮಣಿಕಾಂತ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.