ಡಾ| ಅಬ್ದುಲ್ ಕಲಾಂ ಕೃಪೆಯಿಂದ ಕಾರ್ ಚಾಲಕನ ಬಾಳು ಬೆಳಗಿತು
Team Udayavani, Sep 5, 2021, 6:30 AM IST
ಶಿಕ್ಷಕರ ದಿನಾಚರಣೆ ಎಂದುಕೊಂಡ ತತ್‌ಕ್ಷಣ, ಡಾ| ಅಬ್ದುಲ್ ಕಲಾಂ ಮತ್ತು ಕದಿರೇಶನ್ ಅವರ ನೆನಪಾಗುತ್ತದೆ. ಕಲಾಂ ಅವರು ಹೈದರಾಬಾದ್‌ನಲ್ಲಿರುವ ರಕ್ಷಣೆ ಮತ್ತು ಸಂಶೋಧನ ಕೇಂದ್ರದ ನಿರ್ದೇಶಕರಾಗಿದ್ದಾಗ, ಅವರಿಗೆ ಡ್ರೈವರ್ ಆಗಿದ್ದವನು ಕದಿರೇಶನ್. ಆ ಸಂದರ್ಭದಲ್ಲಿ ಅವನ ಕ್ವಾಲಿಫಿಕೇಷನ್- ಎಸೆಸೆಲ್ಸಿ ಫೇಲ…! ಮುಂದೆ ಕಲಾಂ ಅವರ ಪ್ರೋತ್ಸಾಹದಿಂದಾಗಿ, ಎಂ.ಎ, ಪಿಎಚ್.ಡಿ ಮಾಡಿದ್ದು ಮಾತ್ರವಲ್ಲ; ಪುಸ್ತಕ ಬರೆಯುವ ಮಟ್ಟಕ್ಕೂ ಕದಿರೇಶನ್ ಬೆಳೆದುನಿಂತರು. ಆ ವಿವರವನ್ನೆಲ್ಲ ಕದಿರೇಶನ್ ಅವರ ಮಾತು ಗಳಲ್ಲಿಯೇ ಕೇಳಿದರೆ ಸ್ವಾರಸ್ಯ ಹೆಚ್ಚು. ಓವರ್ ಟು ಕದಿರೇಶನ್…
***
ತಮಿಳುನಾಡಿನ ವಿರೂದ್ ನಗರ್ ಜಿಲ್ಲೆಯ ಕೋವಿಲ್ ಪಟ್ಟಿ ನಮ್ಮೂರು. ಅಪ್ಪ ಕೃಷಿಕ. ಅವರ ದುಡಿಮೆಯಿಂದಲೇ ಮನೆ ನಡೆಯುತ್ತಿತ್ತು. “ಕೃಷಿಯಲ್ಲಿ ಖುಷಿಯಿಲ್ಲ. ನೀನು ಚೆನ್ನಾಗಿ ಓದಿ ಆಫೀಸರ್ ಆಗು’ ಅಂದಿದ್ದರು ಅಪ್ಪ. ಪರಿಣಾಮ, ನಾನು ಕೃಷಿ ಕೆಲಸಗಳಿಂದ ದೂರವೇ ಉಳಿದೆ. ಹೀಗಿರುವಾಗಲೇ, ಹಾರ್ಟ್ ಅಟ್ಯಾಕ್‌ನಿಂದ ಅಪ್ಪ ದಿಢೀರ್ ತೀರಿಕೊಂಡರು. ಸಂಪಾದನೆ ಇಲ್ಲದ್ದರಿಂದ 3 ಹೊತ್ತಿನ ಊಟಕ್ಕೇ ಕಷ್ಟವಾಗತೊಡಗಿತು. ಈ ನಡುವೆ, ಇಂಗ್ಲಿಷ್ ಅರ್ಥವಾಗದ ಕಾರಣಕ್ಕೆ ಎಸೆಸೆಲ್ಸಿಯಲ್ಲಿ ಫೇಲ್ ಆದೆ. ಅದೊಂದು ದಿನ ಅಮ್ಮ ಹೇಳಿದಳು: ಸುಮ್ಮನೇ ಕೂತರೆ ಹೊಟ್ಟೆ ತುಂಬಲ್ಲ ಕಣಪ್ಪ, ಜಮೀನಿಗೆ ಹೋಗಿ ಕೆಲಸ ಮಾಡು…
ಮೊದಲೇ ಹೇಳಿದಂತೆ, ನನಗೆ ಕೃಷಿಯಲ್ಲಿ ಚೂರೂ ಆಸಕ್ತಿ ಇರಲಿಲ್ಲ. ಹಾಗಂತ ಸುಮ್ಮನೆ ಕುಳಿತುಕೊಳ್ಳಲು ಸಾಧ್ಯವಾ? ನಾನೇನು ಮಾಡಿದೆ ಗೊತ್ತೇ? ನನ್ನದೇ ವಾರಿಗೆಯ ಹುಡುಗರ ಜತೆ ಸೇರಿ ಎಲೆಕ್ಟ್ರೀಶಿಯನ್ ಕೆಲಸ ಕಲಿತೆ. ಡ್ರೈವಿಂಗ್ ಕಲಿತೆ. ಇದು 1978ರ ಮಾತು. ಆಗೆಲ್ಲ ಎಸೆಸೆಲ್ಸಿ ಫೇಲ್ ಆದವರು ಮನೆಯಿಂದ ಓಡಿ ಹೋಗಿ ಮಿಲಿಟರಿ ಸೇರಿ ಬಿಡುತ್ತಿದ್ದರು. ನಾನೂ ಹಾಗೇ ಮಾಡಿದೆ! ಸಿಪಾಯಿ ಕಂ ಡ್ರೈವರ್ ಕಂ ಎಲೆಕ್ಟ್ರೀಶಿಯನ್ ಕೆಲಸಗಳು ನನ್ನ ಪಾಲಿಗೆ ಸಿಕ್ಕವು. ಮೊದಲು ಭೂಪಾಲ್, ಅನಂತರ ಸಿಕ್ಕಿಂನಲ್ಲಿ ಕೆಲಸ ಮಾಡಿದೆ. ಅನಂತರ ಹೈದರಾಬಾದ್‌ನ ರಕ್ಷಣ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಕ್ಕೆ ವರ್ಗವಾಯಿತು. ಅಲ್ಲಿನ ನಿರ್ದೇಶಕರಾಗಿದ್ದವರು ಕಲಾಂ. ಅವರ ಕಾರ್ ಡ್ರೈವರ್ ಆಗುವ ಸುಯೋಗ ನನ್ನದಾಗಿತ್ತು.
ಕಲಾಂ ಅವರನ್ನು “ಅಯ್ಯನವರು’ ಎಂದು ಕರೆಯುತ್ತಿದ್ದೆವು. ಅವರು ಸದಾ ಪುಸ್ತಕ, ಪತ್ರಿಕೆಯ ಓದಿನಲ್ಲಿ ಮಗ್ನರಾಗಿರುತ್ತಿದ್ದರು. ಹೆಚ್ಚಿನವು ಇಂಗ್ಲಿಷ್ ಪುಸ್ತಕಗಳು. ಅವರಿಲ್ಲದ ವೇಳೆಯಲ್ಲಿ ಕುತೂಹಲ ದಿಂದ ಅವುಗಳನ್ನು ತಿರುವಿ ಹಾಕುತ್ತಿದ್ದೆ. ಅರ್ಥವಾಗದ ಇಂಗ್ಲಿಷ್ ಎಂದು ನಿಟ್ಟುಸಿರು ಬಿಡುತ್ತಿದ್ದೆ. ಅದೊಮ್ಮೆ ಲಾಂಗ್ ಡ್ರೈವ್ ಹೋದಾಗ ಕಲಾಂ ಸಾಹೇಬರು ಕೇಳಿದರು: “ಕದಿರೇಶನ್, ನೀವು ಆಗಾಗ ಪೇಪರ್, ಬುಕ್ಸ್ ತಿರುವಿ ಹಾಕುವುದನ್ನು ಗಮನಿಸಿದೆ. ಖುಷಿಯಾ ಯಿತು. ಈವರೆಗೆ ಯಾವ್ಯಾವ ಬುಕ್ ಓದಿದ್ರಿ?’
ಅವರಿಗೆ ಸುಳ್ಳು ಹೇಳಲು ಮನಸ್ಸಾಗಲಿಲ್ಲ. ಸರ್, ನನಗೆ ಇಂಗ್ಲಿಷ್ ಬರಲ್ಲ. ಎಸೆಸೆಲ್ಸಿ ಫೇಲ್ ಆದವ ನಾನು. ಸುಮ್ನೆ ಪುಸ್ತಕ ತಿರುವಿ ಹಾಕ್ತಿದ್ದೆ ಅಷ್ಟೇ. ಚೆನ್ನಾಗಿ ಓದಿ ಆಫೀಸರ್ ಆಗಬೇಕು ಅಂತ ನನಗೂ ಆಸೆ ಇತ್ತು. ಇಂಗ್ಲಿಷ್ ಬಹಳ ಕಷ್ಟ ಅನಿಸಿದ್ದರಿಂದ ಮತ್ತೆ ಪರೀಕ್ಷೆ ಕಟ್ಟಲಿಲ್ಲ, ಅಂದೆ. “ಓಹ್, ಇಂಗ್ಲಿಷ್ ಕಷ್ಟ ಅಂತ ಓದು ನಿಲ್ಸಿದ್ರ? ವೆರಿ ಬ್ಯಾಡ್. ಒಂದು ಕೆಲಸ ಮಾಡಿ, ಈ ವರ್ಷ ಮತ್ತೆ ಪ್ರೈವೇಟ್ ಆಗಿ ಪರೀಕ್ಷೆ ಕಟ್ಟಿ. ದಿನಾಲು ನಿಮಗೆ ಇಂಗ್ಲಿಷ್ ಹೇಳಿ ಕೊಡುತ್ತೇನೆ. ಚೆನ್ನಾಗಿ ಓದಿದ್ರೆ ಮುಂದೊಮ್ಮೆ ನೀವು ಖಂಡಿತ ದೊಡ್ಡ ಆಫೀಸರ್ ಆಗಬಹುದು’ ಎಂದರು ಕಲಾಂ.
ಮರುದಿನದಿಂದಲೇ ಕಲಾ ಅಯ್ಯನವರ ಪಾಠ ಶುರುವಾಯಿತು. ಬಿಡುವು ಸಿಕ್ಕಾಗೆಲ್ಲ ಇಂಗ್ಲಿಷ್ ಉಚ್ಚಾರಣೆ, ವ್ಯಾಕರಣ, ವಾಕ್ಯ ರಚನೆಯ ಬಗ್ಗೆ ಹೇಳಿಕೊಟ್ಟರು. ಪರಿಣಾಮ, ಇಂಗ್ಲಿಷ್ ಸುಲಭವಾಯಿತು. 19ನೇ ವಯಸ್ಸಿಗೆ ಎಸೆಸೆಲ್ಸಿ ಪಾಸ್ ಮಾಡಲು ಸಾಧ್ಯವಾಯಿತು. ವಿಷಯ ತಿಳಿದು ಕಲಾಂ ಖುಷಿಪಟ್ಟರು. ಸಂಜೆ ಕಾಲೇಜು ಸೇರಿ ಪಿಯು ಮುಗಿಸಿ ಎಂದರು. ಅನಂತರದಲ್ಲಿ ಬೆಳಗ್ಗೆ 10ರಿಂದ ಸಂಜೆ 5ರ ವರೆಗೆ ಡ್ರೈವರ್ ಕೆಲಸ, ಅನಂತರ ಕಾಲೇಜು, ಓದು. ನಡುನಡುವೆ ಕಲಾಂ ಅಯ್ಯನವರಿಂದ ಸಲಹೆ… ಹೀಗಿತ್ತು ನನ್ನ ಬದುಕು. ಶ್ರದ್ಧೆಯಿಂದ ಓದಿ, ಮೊದಲ ಪ್ರಯತ್ನದಲ್ಲೇ ಪಿಯುಸಿ ಮುಗಿಸಿದೆ.
“ನೋಡಿದ್ರಾ ಕದಿರೇಶನ್, ನಿಮ್ಮ ಪರಿಶ್ರಮಕ್ಕೆ ಒಳ್ಳೆಯ ಫಲಿತಾಂಶ ಸಿಕ್ಕಿದೆ. ಈಗ ಕರೆಸ್ಪಾಂಡೆ®Õ… ನಲ್ಲಿ ಬಿಎ ಮುಗಿಸಿ. ಅನಂತರ ಎಂ.ಎ ಆಗಲಿ. ಇಷ್ಟು ಓದಿದರೆ ನೀವು ಲೆಕ್ಚರರ್ ಆಗಬಹುದು. ಇಲಾಖಾ ಪರೀಕ್ಷೆ ಬರೆದರೆ ಆಫೀಸರ್ ಆಗಬಹುದು ಎಂದರು. ನಾನು ಎಂ.ಎ ಕಡೆಯ ವರ್ಷದಲ್ಲಿದ್ದಾಗ 1992ರಲ್ಲಿ ಕಲಾಂ ಸಾಹೇಬರಿಗೆ ದಿಲ್ಲಿಗೆ ವರ್ಗವಾಯಿತು. ಬೀಳ್ಕೊಡುವಾಗ ಕಲಾಂ ಹೇಳಿದರು: ಮುಂದೆ ಪಿಎಚ್.ಡಿ ಮಾಡಿ…
1996ರಲ್ಲಿ ನಾನು ಡ್ರೈವರ್ ಹುದ್ದೆಗೆ ರಾಜೀನಾಮೆ ನೀಡಿ ಬಿ.ಎಡ್, ಎಂ. ಎಡ್ ಮುಗಿಸಿದೆ. ಸರಕಾರಿ ಶಾಲೆಯ ಶಿಕ್ಷಕನಾದೆ. 2008ರಲ್ಲಿ, ಸೇಲಂಗೆ ಸಮೀಪದ ಅತ್ತೂರಿನ ಸರಕಾರಿ ಕಾಲೇಜಿನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಸೇರಿಕೊಂಡೆ.
ಅನಂತರದಲ್ಲಿ ತಿರುನಲ್ವೇಲಿ ಜಿಲ್ಲೆಯಲ್ಲಿ ಜಮೀನ್ದಾರಿ ಪದ್ಧತಿ ಎಂಬ ವಿಷಯವನ್ನು ಆಯ್ಕೆ ಮಾಡಿಕೊಂಡು ಡಾಕ್ಟರೇಟ್ ಅಧ್ಯಯನಕ್ಕೆ ತೊಡಗಿಸಿಕೊಂಡೆ. ಬ್ರಿಟಿಷರು ಭಾರತಕ್ಕೆ ಬರುವ ಮೊದಲು ತಮಿಳುನಾಡಿನಲ್ಲಿ ಪಾಳೆಯಗಾರರ ಆಡಳಿತವಿತ್ತಂತೆ. ಅವರನ್ನು ಸೋಲಿಸಿದ ಬ್ರಿಟಿಷರು, ಜಮೀನಾªರಿ ಪದ್ಧತಿಯನ್ನು ಜಾರಿಗೆ ತಂದರಂತೆ. ಈ ಸಂಗತಿಯನ್ನು ಕಲಾಂ ಅಯ್ಯನವರೇ ಹೇಳಿದ್ದರು. ಅಷ್ಟೇ ಅಲ್ಲ, ದಿಲ್ಲಿಗೆ ತೆರಳುವ ಮುನ್ನ, ಪಾಳೆಯಗಾರರು ಮತ್ತು ಆ ಕಾಲದ ಜಮೀನಾªರಿ ಪದ್ಧತಿಯ ಕುರಿತು ಡಾ| ಕತಿರ್ವೆಲ್ ಬರೆದ ಪುಸ್ತಕವನ್ನು ಉಡುಗೊರೆಯಾಗಿ ಕೊಟ್ಟಿದ್ದರು. ಅದನ್ನು ಜತೆಗಿಟ್ಟುಕೊಂಡೇ ಅಧ್ಯಯನದಲ್ಲಿ ತೊಡಗಿ ಯಶಸ್ಸು ಕಂಡೆ. ರಕ್ಷಣ ಸಂಶೋಧನಾಲಯದ ನಿರ್ದೇಶಕರಾಗಿದ್ದರಲ್ಲ, ಆ ದಿನಗಳಲ್ಲಿ ಕಲಾಂ ಅಯ್ಯನವರ ಬ್ಯುಸಿ ಶೆಡ್ನೂಲ್‌ನ್ನು ಪ್ರತ್ಯಕ್ಷ ಕಂಡಿ¨ªೆನಲ್ಲ, ಅದೇ ಕಾರಣಕ್ಕೆ ಅವರಿಗೆ ನಾನು ಒಮ್ಮೆಯೂ ಫೋನ್ ಮಾಡಲಿಲ್ಲ. ನನ್ನದೇನಿದ್ದರೂ ಪತ್ರದ ಮೂಲಕವೇ ಮಾತು. ಅಯ್ಯನವರದು ಅದೆಂಥ ದೊಡ್ಡ ಮನಸ್ಸು ಅಂದರೆ ರಾಷ್ಟ್ರಪತಿಯಾದ ಅನಂತರವೂ ನನ್ನ ಪತ್ರಕ್ಕೆ ವಿವರವಾಗಿ ಉತ್ತರ ಬರೆಯುತ್ತಿದ್ದರು. ಅವರನ್ನು ಸಂದರ್ಶಿಸಲು ಬಂದಿದ್ದ ಜಪಾನ್‌ನ ಪತ್ರಕರ್ತರಿಗೆ ನನ್ನ ವಿಳಾಸ ಕೊಟ್ಟು- “ಈ ಸಾಧಕನ ಬಗ್ಗೆಯೂ ಸ್ಟೋರಿ ಮಾಡಿ’ ಎಂದಿದ್ದರು.
ರಾಷ್ಟ್ರಪತಿ ಹುದ್ದೆಯಿಂದ ನಿರ್ಗಮಿಸಿದ ಅನಂತರ ವಿರೂದ್ ನಗ ರದ ಕಾಲೇಜೊಂದಕ್ಕೆ ಮುಖ್ಯ ಅತಿಥಿಯಾಗಿ ಕಲಾಂ ಅಯ್ಯನವರು ಬಂದಿದ್ದರು. ಕಾರ್ಯಕ್ರಮದ ದಿನ ಜನಜಾತ್ರೆ. ಎಲ್ಲರಿಗೂ ಕಲಾಂ ಅವರನ್ನು ಕಾಣುವ, ಮಾತಾಡಿಸುವ ಹುಮ್ಮಸ್ಸು. ಆ ರಶ್‌ನಲ್ಲಿ ಮಾತಾಡಿಸಲು ಸಾಧ್ಯವಿಲ್ಲ ಅನ್ನಿಸಿದಾಗ ನಾನೊಂದು ಉಪಾಯ ಮಾಡಿದೆ. ಮಧ್ಯಾಹ್ನದ ಭೋಜನಕ್ಕೆ ಕಲಾಂ ಅವರು ಗೆಸ್ಟ್ ಹೌಸ್‌ಗೆ ಹೋಗಿದ್ದರು. ಅಲ್ಲಿಗೆ ಹೋಗಿ-ಕದಿರೇಶನ್ ಬಂದಿದ್ದಾರೆ ಅಂತ ಕಲಾಂ ಅವರಿಗೆ ಒಂದು ಮಾತು ಹೇಳಿ ಸರ್. ಹಿಂದೊಮ್ಮೆ ನಾನು ಅವರಿಗೆ ಡ್ರೈವರ್ ಆಗಿದ್ದೆ. ಅವರನ್ನು ದೂರದಿಂದ ನೋಡಿ, ಕೈಮುಗಿದು ಹೋಗಿಬಿಡ್ತೇನೆ ಎಂದು ಮನವಿ ಮಾಡಿಕೊಂಡೆ. ಅನಂತರ ನಡೆದಿದ್ದನ್ನು ಎಂದಿಗೂ ಮರೆಯಲಾರೆ. ಎಸ್ಪಿ ಅವರು ಕದಿರೇಶನ್ ಎನ್ನುತ್ತಿದ್ದಂತೆಯೇ, ಬಂದಿದ್ದಾರಾ ಅವರು? ಎಲ್ಲಿ ನಮ್ಮ ಕದಿರೇಶನ್ ಎನ್ನುತ್ತಾ, ನಾವಿದ್ದ ಕಡೆಗೇ ಬಂದುಬಿಟ್ಟರು ಕಲಾಂ. ನನ್ನನ್ನು ಕಂಡವರೇ, ಬನ್ನಿ ಬನ್ನಿ, ನಿಮ್ಮನ್ನು ನೋಡಿ ಬಹಳ ಖುಷಿ ಆಯಿತು. ಮನೆಯಲ್ಲಿ ಎಲ್ಲರೂ ಕ್ಷೇಮವೇ, ಹೊಸದಾಗಿ ಏನು ಓದಿದಿರಿ? ಒಟ್ಟಿಗೆ ಊಟ ಮಾಡೋಣ ಬನ್ನಿ, ಅಂದರು!
ನನಗೆ ತುಂಬಾ ಮುಜುಗರವಾಯಿತು. ಕಾರಣ, ಅಲ್ಲಿ ಎಸ್ಪಿ, ಡಿಸಿ ಸೇರಿದಂತೆ ಹಿರಿಯ ಅಧಿಕಾರಿಗಳೆಲ್ಲ ನಿಂತಿದ್ದರು. ಅವರ ನಡುವೆ, ಒಬ್ಬ ಯಕಃಶ್ಚಿತ್ ಡ್ರೈವರ್ ಆಗಿದ್ದ ನನಗೆ ಅಷ್ಟೊಂದು ಮರ್ಯಾದೆ ಕೊಟ್ಟು ಕಲಾಂ ಆಯ್ಯನವರು ಮಾತಾಡಿಸಿದ್ದರು. ನನ್ನ ಸಾಧನೆಯ ಬಗ್ಗೆ ತಿಳಿಸಿದ್ದರು. ಆದರೆ ಅವರು ಮಾಡಿದ್ದ ಸಹಾಯದ ಬಗ್ಗೆ ಅಪ್ಪಿತಪ್ಪಿ ಕೂಡ ಹೇಳಲಿಲ್ಲ. ಅಂಥಾ ಮಹಾನ್ ವ್ಯಕ್ತಿತ್ವ ಇನ್ಯಾರಲ್ಲೂ ನನಗೆ ಕಾಣಲಿಲ್ಲ…
– ಎ.ಆರ್.ಮಣಿಕಾಂತ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್ ರನ್ ಆರಂಭಿಸಿದ ಸಿ.ಟಿ.ರವಿ
Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.