ಕೇಡಿಯೊಬ್ಬ ಸತ್ತಿದ್ದಕ್ಕೆ ಸಾಕ್ಷಿ ಇರಲಿ ಅಂದುಕೊಂಡ…

ಕ್ಷಣಕಾಲ ಉಸಿರು ಬಿಗಿಹಿಡಿದು ಕಡೆಗೊಮ್ಮೆ ಮೊಬೈಲ್ ಓಪನ್‌ ಮಾಡಿದರೆ-ಅಲ್ಲಿ 50 ಮಿಸ್‌ ಕಾಲ್ಗಳಿದ್ದವು!

Team Udayavani, May 26, 2019, 6:00 AM IST

kallusakkare

ಇಪ್ಪತ್ತೇ ನಿಮಿಷದಲ್ಲಿ ರಕ್ತ ಕೊಡುವ ಕೆಲಸ ಮುಗಿದುಹೋಯಿತು. ಇವನು ಹೊರಬರುತ್ತಿದ್ದಂತೆಯೆ,ಪೇಶೆಂಟ್‌ ಕುಟುಂಬದವರ್ಯಾರೋ ಆ್ಯಪಲ್‌ ಜ್ಯೂಸ್‌ ತಂದುಕೊಟ್ರಾ, “ಜ್ಯೂಸ್‌ ಕುಡಿದು ಸ್ವಲ್ಪ ರೆಸ್ಟ್‌ ತಗೊಳ್ಳಿ. ತಲೆಸುತ್ತಿದಂತೆ ಆಗಬಹುದು. ಗಾಬರಿ ಆಗಬೇಡಿ. ಒಂದೆರಡು ಗಂಟೆ ಶ್ರಮ ಅನ್ನಿಸುವ ಯಾವುದೇ ಕೆಲಸ ಮಾಡಬೇಡಿ’ ಎಂದು ಆಸ್ಪತ್ರೆಯ ಸಿಬ್ಬಂದಿಯೇ ಎಚ್ಚರಿಸಿದರು. ಜ್ಯೂಸ್‌ ಕುಡಿದು ಹಾಗೇ ಒರಗಿಕೊಂಡವನಿಗೆ ಮಂಪರು ಕವಿದಂತಾಯಿತು. ..

‘ಬಸ್‌ ಸ್ಟಾಪಿನಲ್ಲಿ ಸುಮ್ನೇ ಕೂತಿರು. ಬಸ್‌ ಹತ್ತಲು ಬರ್ತಾರಲ್ಲ; ಅವರನ್ನು ಹುಷಾರಾಗಿ ಗಮನಿಸು. ಗಡಿಬಿಡೀಲಿ ಇರ್ತಾರಲ್ಲ? ಅಂಥ ಜನ ಪದೇಪದೆ ಜೇಬಿಗೆ ಕೈಹಾಕ್ತಾ ಇರ್ತಾರೆ. ಒಂದ್ಸಲ ಮೊಬೈಲ್ ತೆಗೀತಾರೆ. ಇನ್ನೊಂದ್ಸಲ ಮನೆಯ ಕೀ ಇದೆಯಾ ಅಂತ ಚೆಕ್‌ ಮಾಡ್ತಾರೆ. ಅಷ್ಟು ದೂರದಲ್ಲಿ ಬಸ್‌ ಕಾಣಿಸಿದ ತಕ್ಷಣ, ಒಮ್ಮೆ ಅನುಮಾನದಿಂದಲೇ ಸುತ್ತಲೂ ನೋಡಿ, ಸರ್ರನೆ ಪರ್ಸ್‌ ತಗೊಂಡು ಪ್ಯಾಂಟ್‌ನ ಮುಂದಿನ ಜೇಬಿಗೋ ಅಥವಾ ಬ್ಯಾಗ್‌ಗೋ ಹಾಕಿಕೊಳ್ಳುತ್ತಾರೆ! ಅಂಥವರೇ ನಿನ್ನ ಟಾರ್ಗೆಟ್ ಆಗಬೇಕು. ಈ ಥರಾ ಟೆನ್ಷನ್‌ನಲ್ಲಿ ಇರ್ತಾರಲ್ಲ; ಅವರು ಸಾಮಾನ್ಯವಾಗಿ ರಶ್‌ ಇರುವ ಬಸ್‌ಗೇ ಹತ್ತುತ್ತಾರೆ! ಬಸ್‌ ಹತ್ತಿ ಅವರ ಪಕ್ಕದಲ್ಲೇ ನಿಂತ್ಕೋಬೇಕು. ಬಸ್‌ ಸ್ಪೀಡ್‌ ತಗೋಳ್ತದಲ್ಲ ಆಗ: ಇಲ್ಲಾಂದ್ರೆ, ಗುಂಡಿಗಳು, ಹಂಪ್ಸ್‌ಗಳಿರುವ ಕಡೆ ಜಂಪ್‌ ಹೊಡೆಯುತ್ತದಲ್ಲ ಅವಾಗ- ಮೊಬೈಲ್/ಪರ್ಸ್‌ ಕದಿಯೋ ಕೆಲ್ಸಾನ ಇಂಥ ಟೈಮಲ್ಲೇ ಮಾಡಿ ಬಿಡಬೇಕು. ಮುಂದಿನ ಸ್ಟಾಪ್‌ ಬಂದ ತಕ್ಷಣ, ಗಡಿಬಿಡಿಯಿಂದ ಇಳಿದು, ಸಿಕ್ಕಿದ ಆಟೋ ಹತ್ತಿ ಹೋಗಿಬಿಡಬೇಕು! ಇವತ್ತು ಹಾಗೇ ಮಾಡು. ಮುಂದಿನ ಸ್ಟಾಪ್‌ನಲ್ಲಿ ನಾನು ಕಾದಿರ್ತೇನೆ. ಮೊಬೈಲ್ ಮಾರುವುದು, ಸಿಕ್ಕಿದ್ರಲ್ಲಿ ಅರ್ಧ ದುಡ್ಡು ಕೊಡೋದು ನನ್ನ ಜವಾಬ್ದಾರಿ…’

ಮಂಜುನಾಥ ಪಾಟೀಲನಿಗೆ, ಸೆಲ್ವಂ ಹೀಗಂತ ಹೇಳಿಯೇ ಹೋಗಿದ್ದ ಅವನನ್ನು ‘ಗುರು’ ಎಂದು ಮಾನಸಿಕವಾಗಿ ಒಪ್ಪಿದ್ದರಿಂದ ಈ ಕೆಲಸದಿಂದ ಮಂಜು ಹಿಂದೆ ಸರಿಯುವಂತೆಯೂ ಇರಲಿಲ್ಲ. ಇಷ್ಟಕ್ಕೂ ಏನಾಗಿತ್ತೆಂದರೆ, ರಾಯಚೂರು ಸೀಮೆಯ ಮಂಜುನಾಥ ಪಾಟೀಲ, ಸಿಟಿಯ ಮೋಹಕ್ಕೆ ಸೋತು, ಓದುತ್ತಿದ್ದ ಐಟಿಐ ಕೋರ್ಸನ್ನು ಅರ್ಧಕ್ಕೆ ಬಿಟ್ಟು ಬೆಂಗಳೂರಿಗೆ ಬಂದು ಬಿಟ್ಟಿದ್ದ. ಯಾವುದಾದ್ರೂ ಕೆಲ್ಸ ಮಾಡಿದ್ರಾಯ್ತು, ಹೇಗೋ ಬದುಕಿದ್ರಾಯ್ತು ಎಂದುಕೊಂಡೇ ಅವನಿದ್ದ. ಆದರೆ, ಒಳ್ಳೆಯ ಸಂಬಳದ ನೌಕರಿಯೇ ಅವನಿಗೆ ಸಿಗಲಿಲ್ಲ. ಹದಿನೈದು ದಿನ ಅಲ್ಲಿ ಇಲ್ಲಿ ಅಲೆದಾಡಿ, ಕಡೆಗೂ ಒಂದು ಫ್ಯಾಕ್ಟರಿಯಲ್ಲಿ ಆಫೀಸ್‌ ಬಾಯ್‌ ಆಗಿ ಸೇರಿಕೊಂಡ. ಆದರೆ, ಎರಡೇ ತಿಂಗಳಲ್ಲಿ ಆ ಫ್ಯಾಕ್ಟರಿಯೇ ಮುಚ್ಚಿ ಹೋಯಿತು. ಯಾಕೋ ತನ್ನ ಅದೃಷ್ಟವೇ ಸರಿಯಿಲ್ಲ, ಬೆಂಗಳೂರಲ್ಲಿ ಹೀಗೆ ಕೆಲಸವಿಲ್ಲದೆ ಒದ್ದಾಡುವ ಬದಲು, ಊರಿಗೆ ಹೋಗುವುದೇ ಸರಿ ಎಂದು ಮಂಜು ನಿರ್ಧರಿಸಿದ್ದೇ ಆಗ. ಇವನ ಬಳಿ ವಾಪಸ್‌ ಹೋಗಲಿಕ್ಕೂ ಹಣವಿರಲಿಲ್ಲ. ಅಲ್ಲದೆ, ಬೆಂಗಳೂರಿಗೆ ಬರುವಾಗ, ಪರಿಚಯದವರಿಂದ 2000 ರೂ. ಸಾಲ ಮಾಡಿಬಿಟ್ಟಿದ್ದ. ಸಾಲದ ಹಣ, ಬಸ್‌ ಚಾರ್ಜಿಗೆ ಬೇಕಿರುವ ಹಣವೆಲ್ಲಾ ಖರ್ಚಿಗೆ ಬೇಕಿರುವ ಚಿಲ್ಲರೆ ಹಣ ಇದೆಲ್ಲಾ ಸೇರಿ 5 ಸಾವಿರ ಸಿಕ್ಕಿದರೂ ಸಾಕು! ಆದರೆ, ಅಷ್ಟು ಹಣ ಸಂಪಾದಿಸುವುದು ಹೇಗೆ ಎಂದು ಯೋಚಿಸುತ್ತ ಕೂತಿದ್ದಾಗ ಸೆಲ್ವಂನ ಪರಿಚಯವಾಗಿತ್ತು. ಬೆಂಗಳೂರಿನ ಜನರಿಗೆ ಕರುಣೆಯೇ ಇಲ್ಲವೆಂದೂ, ತನಗೂ ಬಹುಬಗೆಯಲ್ಲಿ ಅನ್ಯಾಯ ಆಗಿದೆಯೆಂದೂ, ಹೊಟ್ಟೆಪಾಡಿಗಾಗಿ ಪಿಕ್‌ ಪಾಕೆಟರ್‌ ಆದೆನೆಂದೂ ಸೆಲ್ವಂ ಹೇಳಿಕೊಂಡಿದ್ದ. ಮೊಬೈಲ್ ಕದ್ದು ತಂದರೆ, ಅದನ್ನು ತಕ್ಷಣವೇ ಮಾರಿ, ಹಣ ಕೊಡುವುದಾಗಿಯೂ ಭರವಸೆ ನೀಡಿದ್ದ.

ಬಸ್‌ ನಿಲ್ದಾಣದಲ್ಲಿ ಕೂತು, ಮಂಜು ಇದೆನ್ನೆಲ್ಲ ನೆನಪು ಮಾಡಿಕೊಂಡಾಗಲೇ ಆ ವ್ಯಕ್ತಿ ಬಂದಿದ್ದು, ಆತ ಅವಸರದಲ್ಲಿದ್ದ. ಬಸ್‌ ತಪ್ಪಿಸಿಕೊಂಡವನಂತೆ ಚಡಪಡಿಸುತ್ತಿದ್ದ. ಟೆನ್ಷನ್‌ ತಾಳಲಾಗದೆ ಆ ಜೇಬಿಗೊಮ್ಮೆ, ಕೈ ಹಾಕುತ್ತಿದ್ದ. ಸ್ವೆಲಂ ಹೇಳಿದ್ದ ಮಾತುಗಳನ್ನು ಮತ್ತೂಮ್ಮೆ ನೆನಪಿಸಿಕೊಂಡು, ಬಸ್‌ ಬಂದಾಗ, ಆ ಪ್ರಯಾಣಿಕನ ಹಿಂದೆಯೇ ಮಂಜು ಪಾಟೀಲನೂ ಬಸ್‌ ಹತ್ತಿದ. ಎರಡೇ ನಿಮಿಷದಲ್ಲಿ ಮಂಜು ಬಯಸಿದ್ದ ಕ್ಷಣ ಬಂದೇ ಬಿಟ್ಟಿತು. ವೇಗವಾಗಿ ಹೋಗುತ್ತಿದ್ದ ಬಸ್‌, ಹಂಪ್‌ ಸಿಕ್ಕ ಸಂದರ್ಭದಲ್ಲಿ ಒಂದು ಜಂಪ್‌ ಹೊಡೆದದ್ದು, ಆ ಕ್ಷಣದಲ್ಲಿಯೇ ಮಂಜು ಪಾಟೀಲ, ಎದುರಿಗಿದ್ದ ಪ್ರಯಾಣಿಕನ ಜೇಬಿಂದ ಮೊಬೈಲ್ ಎಳೆದುಕೊಂಡದ್ದು ಏಕಕಾಲಕ್ಕೆ ನಡೆದುಹೋಯಿತು. ಆನಂತರದಲ್ಲಿ, ಮುಂದಿನ ಸ್ಟಾಪ್‌ ಯಾವಾಗ ಬರುವುದೋ, ಸದ್ಯ ಬಸ್ಸಿನೊಳಗೆ ಏನೂ ಗಲಾಟೆ ಆಗದಿದ್ರೆ ಸಾಕು ಎಂದೆಲ್ಲ ಯೋಚಿಸುತ್ತ, ಕೆಂಡದ ಮೇಲೆ ನಿಂತವನಂತೆ ಚಡಪಡಿಸಿದ ಮಂಜು ಪಾಟೀಲ, ಬಸ್‌ ನಿಂತ ತಕ್ಷಣವೇ ಗಡಿಬಿಡಿಯಿಂದ ಇಳಿದು ಬಿಟ್ಟ.

ಅಲ್ಲಿ ಸೆಲ್ವಂ ಇರಲಿಲ್ಲ. ಬದಲಾಗಿ, ಹತ್ತಿಪ್ಪತ್ತು ಜನರ ಗುಂಪಿತ್ತು. ಎಲ್ಲರೂ ಅವರವರೇ ಮಾತಾಡಿಕೊಳ್ಳುತ್ತಿದ್ದರು. ಕೆಲವರು ಮೊಬೈಲ್ನಲ್ಲಿದ್ದ ಚಿತ್ರ ತೋರಿಸಿ, ‘ಇವನೇ ಆ ಕಳ್ಳ ನನ್ಮಗ ‘ಅನ್ನುತ್ತಿದ್ದರು. ಈ ಮಾತು ಕೇಳಿ ಮಂಜುಗೆ ಗಾಬರಿ, ಭಯ, ಕುತೂಹಲ ಒಟ್ಟೊಟ್ಟಿಗೇ ಆಯಿತು. ಒಂದೆರಡು ನಿಮಿಷ ಅತ್ತಿತ್ತ ಓಡಾಡಿದವನು, ಕಡೆಗೊಮ್ಮೆ ಒಬ್ಬರನ್ನು ಕೇಳಿದೆ ‘ಏನ್ಸಾರ್‌ ಇಲ್ಲಿ ಗಲಾಟೆ?’ ಆ ವ್ಯಕ್ತಿ ತಕ್ಷಣವೇ ‘ಯಾವನೋ ಪಿಕ್‌ಪಾಕೆಟರ್‌, ಮೊಬೈಲ್ ಕದಿಯುವಾಗ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದ. ಬಸ್ಸಲ್ಲಿದ್ದ ಜನ, ಮೂಗು-ಬಾಯಲ್ಲಿ ರಕ್ತ ಬರುವಂತೆ ಹೊಡೆದು ಪೊಲೀಸ್‌ಗೆ ಹಿಡಿದುಕೊಟ್ರಾ…’ ಎಂದಿದ್ದಲ್ಲದೆ, ತನ್ನ ಮೊಬೈಲ್ನಲ್ಲಿದ್ದ ಫೋಟೋವನ್ನೂ ತೋರಿಸಿದ. ಅದನ್ನು ನೋಡುತ್ತಿದ್ದಂತೆ ಮಂಜು ಪಾಟೀಲನ ನಾಲಿಗೆ ಒಣಗಿತು. ಮೈ ಬೆವರಿತು. ಕಾರಣ ಆ ಫೋಟೋದಲ್ಲಿದ್ದವನು, ಸೆಲ್ವಂ. ಆಕಸ್ಮಾತ್‌ ಸಿಕ್ಕಿಬಿದ್ದರೆ, ತನಗೂ ಇಂಥದೇ ಪೂಜೆ ಆಗುತ್ತದೆ ಅನಿಸಿದಾಗ, ಸರಸರನೆ ಅಷ್ಟು ದೂರ ನಡೆದವನು, ಛ‌ಕ್ಕನೆ ಕದ್ದಿದ್ದ ಮೊಬೈಲ್ ತೆಗೆದು ಸ್ವಿಚ್ ಆಫ್ ಮಾಡಿಬಿಟ್ಟ

ಆವತ್ತು ಇಡೀ ದಿನ ಮಂಜು ಪಾಟೀಲ ನಿದ್ರೆ ಮಾಡಲಿಲ್ಲ. ಕಣ್ಮುಚ್ಚಿದರೆ ಸಾಕು; ಪೊಲೀಸರು ಬಂದು ಎಳೆದೊಯ್ದಂತೆ, ಮೂಗು ಬಾಯಲ್ಲೆಲ್ಲ ರಕ್ತ ಬರುವಂತೆ ಹೊಡೆದ ಹಾಗೆ ಕನಸು ಬೀಳುತ್ತಿತ್ತು. ಇಡೀ ದಿನ ಅವನು ಮೊಬೈಲ್ ಮುಟ್ಟಲಿಲ್ಲ. ಬೆಳಗ್ಗೆ, ಎಲ್ಲರೂ ತನ್ನನ್ನೇ ನೋಡುತ್ತಿರಬಹುದೇ? ಎಂಬ ಅನುಮಾನ ಕಾಡಿತು. ಮೊಬೈಲ್ ಕಳೆದುಕೊಂಡವನು ಅಥವಾ ಬಸ್‌ನಲ್ಲಿ ಇದ್ದ ಮತ್ಯಾರಾದರೂ, ಎಲ್ಲಾದರೂ ಪಕ್ಕನೆ ಎದುರಾಗಿ ಗುರುತು ಹಿಡಿದರೆ ಅನ್ನಿಸಿದಾಗ, ಕ್ಷೌರದಂಗಡಿಗೆ ಹೋದವನೇ ಬಾಲ್ಡಿ ಮಾಡಿಸಿಕೊಂಡುಬಿಟ್ಟ.

ಮಧ್ಯಾಹ್ನದವರೆಗೂ ರೂಂನಲ್ಲಿಯೇ ಇದ್ದವನಿಗೆ, ಒಂದೇ ಒಂದ್ಸಲ ಆ ಮೊಬೈಲ್ ಆನ್‌ ಮಾಡಿ ನೋಡುವ ಆಸೆಯಾಯಿತು. ಒಂದು ನಿಮಿಷ ನೋಡಿ ತಕ್ಷಣ ಮತ್ತೆ ಸ್ವಿಚ್ ಆಫ್ ಮಾಡಬೇಕು ಅಂದು ಕೊಂಡವನು, ಕ್ಷಣಕಾಲ ಉಸಿರು ಬಿಗಿಹಿಡಿದು ಕಡೆಗೂ ಓಪನ್‌ ಮಾಡಿದರೆ ಐವತ್ತಕ್ಕೂ ಹೆಚ್ಚು ಮಿಸ್ಡ್ ಕಾಲ್ಗಳಿದ್ದವು. ಆಪೈಕಿ, ಒಂದೇ ನಂಬರಿನಿಂದ 28 ಕರೆಗಳು ಬಂದಿದ್ದವು. ಇವರು ಯಾರಿರಬಹುದು? ಇಷ್ಟೊಂದು ಕಾಲ್ ಯಾಕಿರಬಹುದು ಎಂದು ಯೋಚಿಸುತ್ತಿದ್ದಾಗಲೇ, ಅದೇ ನಂಬರಿನಿಂದ ಒಂದರ ಹಿಂದೆ ಒಂದರಂತೆ ಮೂರು ಮೆಸೇಜ್‌ಗಳು ಬಂದವು. ‘ಬಚ್ಚಲು ಮನೇಲಿ ಜಾರಿ ಬಿದ್ದು ಅಮ್ಮ ಕಾಲ್ ಮುರ್ಕೊಂ ಡಿದಾಳೆ, ರಾಮಯ್ಯ ಆಸ್ಪತ್ರೆಗೆ ಸೇರಿಸಿದೀವಿ, ಐಸಿಯುನಲ್ಲಿ ಇದ್ದಾರೆ. ಎಷ್ಟು ಕಾಲ್ ಮಾಡಿದ್ರೂ ನೀನು ಸಿಕ್ತಾ ಇಲ್ಲ. ಎಲ್ಲಿದ್ರೂ ಬೇಗ ಬಾ…’

ಈ ಮೆಸೇಜ್‌ ನೋಡಿ, ಮಂಜು ಪಾಟೀಲ ಸ್ತಂಭೀಭೂತನಾಗಿ ಕೂತುಬಿಟ್ಟ.

***
‘ಬೆಳಗ್ಗೆಯಿಂದಲೇ ಮನಸ್ಸು ಸರಿ ಇರಲಿಲ್ಲ. ಎಡಗಣ್ಣು ಒಂದೇ ಸಮನೆ ಪಟಪಟ ಹೊಡ್ಕೊಳ್ತಿತ್ತು. ಯಾಕೋ ಭಯ, ಏನೋ ಸಂಕಟ, ಎಂಥದೋ ಚಡಪಡಿಕೆ. ಬೇಗ ಮನೆ ತಲುಪೋಣ ಅಂತ ಬಸ್‌ ಹತ್ತಿದೆ. 15 ನಿಮಿಷದ ನಂತರ, ಮನೆಗೆ ಒಂದ್ಸಲ ಫೋನ್‌ ಮಾಡುವಾ ಅಂತ ಜೇಬಿಗೆ ಕೈಹಾಕಿದ್ರೆ, ಫೋನೇ ಇಲ್ಲ! ತಕ್ಷಣ, ‘ಅಯ್ಯಯ್ಯೋ, ನನ್ನ ಫೋನ್‌ ಕಳುವಾಗಿದೆ. ಬಸ್‌ ನಿಲ್ಸಿ ‘ಅಂದೆ. ಜನ ತಲೆಗೊಂದು ಸಲಹೆ ಕೊಟ್ಟರು. ‘ಕಂಪ್ಲೆಂಟ್ ಕೊಡಿ ಮೊದ್ಲು ‘ ಅಂದರು. ಹತ್ತಿರದ ಸ್ಟೇಷನ್‌ಗೆ ಹೋಗಿ ವಿಷಯ ತಿಳಿಸಿದ್ರೆ- ‘ನೋಡ್ರೀ, ಫೋನ್‌ ಕಳುವಾದ ಜಾಗ ನಮ್ಮ ಲಿಮಿಟ್ಸ್‌ಗೆ ಬರಲ್ಲ. ಬೇರೆ ಸ್ಟೇಷನ್‌ಗೆ ಹೋಗಿ’ ಅಂದರು. ಎರಡು ನಿಮಿಷ ತಡೆದು- ‘ಮೊಬೈಲ್ ಹಾಳಾಯ್ತು ಅಂತ ದಿನಕ್ಕೆ ನೂರು ಕೇಸ್‌ ಬರ್ತವೆ. ಯಾವುದನ್ನು ಹ್ಯಾಂಡಲ್ ಮಾಡೋಕಾಗುತ್ತೆ? ನಮ್ಗೇನು ಅದೇ ಕೆಲಸಾನ? ಕಂಪ್ಲೇಂಟ್ ಕೊಟ್ಟು ಆರೆಂಟು ತಿಂಗಳು ಸುಮ್ನೆ ಅಲೆದಾಡಿ, ಕಡೆಗೆ ಇಲ್ಲ, ಅನಿಸ್ಕೊಳ್ಳೋ ಬದಲು, ಹೊಸಾ ಮೊಬೈಲ್ ತಗೊಂಡು ನೆಮ್ದಿಯಾಗಿರು’ ಅಂದರು. ಮೊಬೈಲ್ ಕಳೆದು ಹೋಯ್ತು ಅನ್ನೊ ಟೆನ್ಶನ್‌ಗೆ ಎಲ್ಲಾ ನಂಬರ್‌ಗಳೂ ಮರೆತುಹೋದ್ವು. ಏನು ಮಾಡಬೇಕು ಅಂತ ತೋಚದೆ ಮನೆಗೆ ಹೋದ್ರೆ ಎಲ್ರೂ ಆಸ್ಪತ್ರೆಗೆ ಬಂದಿರುವ ಸುದ್ದಿ ಗೊತ್ತಾಯ್ತು. ಎದ್ದೆನೋ ಬಿದ್ದೆನೋ ಅಂತ ಓಡಿ ಬಂದೆ…

ಆಸ್ಪತ್ರೆಯ ಇನ್ನೊಂದು ತುದಿಯಲ್ಲಿ ಕೂತಿರುವ ಆ ಇಬ್ಬರ ಮಾತುಗಳನ್ನೂ ಕೇಳಿಸಿಕೊಂಡ ಮಂಜು ಪಾಟೀಲ. ಮೊಬೈಲ್ನಲ್ಲಿ ಮೆಸೇಜ್‌ ನೋಡಿದ ನಂತರ, ಏನಾದರಾಗಲಿ; ಒಮ್ಮೆ ಆಸ್ಪತ್ರೆಗೆ ಹೋಗಿಯೇ ಬಿಡೋಣ. ಅಲ್ಲಿನ ಪರಿಸ್ಥಿತಿ ನೋಡಿಕೊಂಡು ಏನಾದ್ರೂ ನಿರ್ಧಾರ ಮಾಡಿದ್ರಾಯ್ತು ಎಂದುಕೊಂಡೇ ಬಂದಿದ್ದ. ಮೊಬೈಲ್ ಕಳೆದುಕೊಂಡಿದ್ದವನು, ನಿನ್ನೆ ಹಾಕಿದ ಬಟ್ಟೆಯನ್ನೇ ಹಾಕಿದ್ದರಿಂದ ಅವನನ್ನು ಪತ್ತೆ ಹಚ್ಚುವುದೂ ಕಷ್ಟವಾಗಲಿಲ್ಲ.

ಎಲ್ಲವೂ ಅಂದುಕೊಂಡಂತೆಯೇ ಆಗಿದ್ದರೆ, ಈ ವೇಳೆಗೆ ಸೆಲ್ವಂನಿಂದ ಮೊಬೈಲ್ ಮಾರಾಟದ ಪಾಲು ಪಡೆದು ರಾಯಚೂರಿನ ಬಸ್‌ ಹತ್ತಿರುತ್ತಿದ್ದೆ. ಆದರೀಗ ಆಸ್ಪತ್ರೆಯ ಅಂಗಳದಲ್ಲಿ ಅಬ್ಬೇಪಾರಿಯಂತೆ ಕೂರಬೇಕಾಗಿ ಬಂತಲ್ಲ; ಯಾಕೋ ನನ್ನ ಲೈಫ್ ಸಿನಿಮಾದ ಥರಾ ನಡೀತಿದೆ ಅಂದುಕೊಂಡ ಮಂಜು ಪಾಟೀಲ್. ಅದೇ ಸಮಯಕ್ಕೆ – ‘ಈಗ ಹೊರಗೆ ಹೋಗಿ ಸಂಜೆ ಬರ್ತೇನೆ.. ಡಾಕ್ಟರು ಏನೇ ಕೇಳಿದ್ರೂ ಹುಷಾರಾಗಿ ಮ್ಯಾನೇಜ್‌ ಮಾಡಿ. ಆ ಪಾರ್ಟಿ ಇನ್ನೇನು ಬಂದು ಬಿಡ್ತಾರೆ’ ಎನ್ನುತ್ತಲೇ ಮೊಬೈಲ್ ಕಳೆದುಕೊಂಡಿದ್ದವ ಎದ್ದು ಹೋದ.

ಇಂಥದೊಂದು ಕ್ಷಣಕ್ಕೇ ಕಾದಿದ್ದ ಮಂಜು ಪಾಟೀಲ- ‘ಹೇಗಿದಾರೆ ಸಾರ್‌ ನಿಮ್ಮ ಪೇಶೆಂಟ್?’ ಎಂದ. ‘ನಮ್ಮ ಕಸಿನ್‌ ಜನರಲ್ ವಾರ್ಡ್‌ಲಿ ಇದ್ದಾರೆ. ನಾಡಿದ್ದು ಡಿಸ್‌ಚಾರ್ಜ್‌’ ಎಂದೂ ಒಂದು ಸುಳ್ಳು ಹೇಳಿದ. ಈ ಬದಿಯ ವ್ಯಕ್ತಿ- ‘ಏನ್‌ ಹೇಳ್ಳೋದು ಸಾರ್‌? ಪರಿಸ್ಥಿತಿ ಕೆಟ್ಟದಾಗಿದೆ. ಅರ್ಜೆಂಟಾಗಿ ಬ್ಲಿಡ್‌ ಬೇಕು ಅಂದಿದ್ದಾರೆ. ಬ್ಲಿಡ್‌ ಕೊಡಲು ಯಾರೋ ಬರ್ತೀವೆ ಅಂದಿದಾರೆ. ಅವರಿನ್ನೂ ಬಂದಿಲ್ಲ. ಇದು ದೊಡ್ಡ ಆಸ್ಪತ್ರೆ. ವಿಪರೀತ ಖರ್ಚು ಬರುತ್ತೆ. ಇಂಥ ಟೈಮಲ್ಲೇ ಯಾವನೋ ದುರಾತ್ಮ, ನಮ್ಮ ಮೂರ್ತಿಯ ಮೊಬೈಲ್ ಕದ್ದು ಬಿಟ್ಟಿದಾನೆ. ಪಾಪ, ಈ ಹುಡುಗ ಹೊಸ ಮೊಬೈಲ್ ತಗೊಂಡು ಇನ್ನೂ ಎರಡು ತಿಂಗಳಾಗಿಲ್ಲ. ಸಾಲದ ಕಂತು ಮೂರು ವರ್ಷ ಕಟ್ಟಬೇಕಾಗಿದೆ. ಇಂಥ ಟೈಮಲ್ಲೇ ಮೊಬೈಲ್ ಕಳುವಾಗಿದೆ. ಹೋಗಿದ್ದು ಹೋಯ್ತು. ಪೊಲೀಸೂ ಬೇಡ, ಕಂಪ್ಲೆಂಟೂ ಬೇಡ. ಅಮ್ಮನನ್ನೂ ಉಳಿಸ್ಕೊಳ್ಳೋಣ ಅಂದಿದೀನಿ…’ ಅವರ ಮಾತಿಗೆ ಬ್ರೇಕ್‌ ಹಾಕುವಂತೆ ಐಸಿಯುನಿಂದ ಹೊರಬಂದ ನರ್ಸ್‌- ‘ಜಯಮ್ಮನವರ ಕಡೆಯವರು ಯಾರು? ರಕ್ತ ಬೇಕು ಅಂತ ಹೇಳಿದೆವಲ್ಲ, ದಾನಿಗಳು ಯಾರೂ ಬಂದಿಲ್ವ? ಬೇಗ ಅರೇಂಜ್‌ ಮಾಡಿ…’ ಅಂದು ಒಳಗೆ ಹೋಗಿಬಿಟ್ಟಳು.

‘ಯಾರೋ ಬ್ಲಿಡ್‌ ಕೊಡಲು ಬರ್ತೇವೆ ಅಂದಿದ್ರು, ಬರಲೇ ಇಲ್ಲ. ಅವರ ನಂಬರ್‌ ರಿಂಗ್‌ ಆಗ್ತಿದೆ. ಆದ್ರೆ ಫೋನ್‌ ಪಿಕ್‌ ಆಗ್ತಿಲ್ಲ. ಇಲ್ಲಿ ನೋಡಿದ್ರೆ ಅರ್ಜೆಂಟ್ ಅಂತಿದಾರೆ. ಏನ್ಮಾಡೋದು ಈಗ? ದೇವ್ರೆ, ಯಾಕಪ್ಪ ಹೀಗೆ ಕಷ್ಟದ ಮೇಲೆ ಕಷ್ಟ ಕೊಡ್ತೀಯ?’ ಪಕ್ಕದಲ್ಲಿ ಹೊಸ ಪರಿಚಯದ ವ್ಯಕ್ತಿ ಇದ್ದಾನೆ ಎಂಬುದನ್ನೂ ಮರೆತು ಆ ಹಿರಿಯರು ಹೀಗೆ ಉದ್ಗರಿಸಿದರು. ಫೋನ್‌ ರಿಂಗ್‌ ಆಗ್ತಿದೆ, ಆದ್ರೆ ಪಿಕ್‌ ಆಗ್ತಿಲ್ಲ, ಎಂಬ ಮಾತು ಕೇಳಿದಾಕ್ಷಣ ಅದನ್ನು ಯಾರಾದ್ರೂ ಎಗರಿಸಿಬಿಟ್ರಾ ಎಂಬ ಯೋಚನೆಯೊಂದು ಮಂಜು ಪಾಟೀಲನಿಗೆ ಬಂದು ಹೋಯಿತು. ಆ ನಂತರದ ಹತ್ತು ನಿಮಿಷ ಇಬ್ಬರಲ್ಲೂ ಮಾತಿಲ್ಲ. ಕಡೆಗೆ ಏನನ್ನೋ ನಿರ್ಧರಿಸಿದ ಮಂಜು ಪಾಟೀಲ ‘ಸಾರ್‌, ಅವರು ಬರ್ತಾರೆ ಅಂತ ಕಾದು ಕೂರುವುದು ಬೇಡ. ನಾನು ಬ್ಲಿಡ್‌ ಕೊಡಲಿಕ್ಕೆ ರೆಡಿ ಇದೀನಿ, ಬನ್ನಿ’ ಎಂದುಬಿಟ್ಟ.

ಇಪ್ಪತ್ತೇ ನಿಮಿಷದಲ್ಲಿ ರಕ್ತ ಕೊಡುವ ಕೆಲಸ ಮುಗಿದುಹೋಯಿತು. ಇವನು ಹೊರಬರುತ್ತಿದ್ದಂತೆಯೇ ಪೇಶೆಂಟ್ ಕುಟುಂಬದವರ್ಯಾರೋ ಆ್ಯಪಲ್ ಜ್ಯೂಸ್‌ ತಂದುಕೊಟ್ರಾ. ‘ಜ್ಯೂಸ್‌ ಕುಡಿದು ಸ್ವಲ್ಪ ರೆಸ್ಟ್‌ ತಗೊಳ್ಳಿ. ತಲೆಸುತ್ತಿದಂತೆ ಆಗಬಹುದು. ಗಾಬರಿ ಆಗಬೇಡಿ. ಒಂದೆರಡು ಗಂಟೆ ಶ್ರಮ ಅನ್ನಿಸುವ ಯಾವುದೇ ಕೆಲಸ ಮಾಡಬೇಡಿ’ ಎಂದು ಆಸ್ಪತ್ರೆಯ ಸಿಬ್ಬಂದಿಯೇ ಎಚ್ಚರಿಸಿದರು. ಜ್ಯೂಸ್‌ ಕುಡಿದು ಹಾಗೇ ಒರಗಿ ಕೊಂಡವನಿಗೆ ಮಂಪರು ಕವಿದಂತಾಯಿತು. ಹತ್ತು ನಿಮಿಷದ ಬಳಿಕ ಕಣ್ತೆರೆದರೆ, ನಂಬಲಾಗದ ದೃಶ್ಯವೊಂದು ಕಾಣಿಸಿತು. ಮೊಬೈಲ್ ಕಳೆದುಕೊಂಡಿದ್ದನಲ್ಲ; ಅವನ ಕುಟುಂಬದವರೆಲ್ಲ ಕೈ ಜೋಡಿಸಿಕೊಂಡು ನಿಂತಿದ್ದರು. ಆ ಸಾಲಿನಲ್ಲಿ ಮೊಬೈಲ್ ಕಳೆದುಕೊಂಡವನೂ ಇದ್ದ. ಏನು ಉತ್ತರ ಹೇಳುವುದೆಂದು ತಿಳಿಯದೆ ಮಂಜು ಪಾಟೀಲ ಚಡಪಡಿಸುತ್ತಿದ್ದಾಗಲೇ ಆ ಕುಟುಂಬದ ಹಿರಿಯರೊಬ್ಬರು, ‘ನಿಮ್ಮಿಂದ ತುಂಬಾ ಉಪಕಾರ ಆಯ್ತು. ಕಷ್ಟದಲ್ಲಿದ್ದಾಗ ದೇವರು ಬಂದಹಾಗೆ ನಮ್ಮ ಸಹಾಯಕ್ಕೆ ಆದ್ರಿ. ಅಂದಾØಗೆ ನಿಮ್ಮ ಹೆಸರೇನಪ್ಪ?’ ಅಂದರು. ಇವನು ‘ಮಂಜು’ ಅನ್ನುತ್ತಿದ್ದಂತೆಯೇ -‘ನೀವು ಬರೀ ಮಂಜು ಅಲ್ಲ ಬಿಡಿ. ಸಾಕ್ಷಾತ್‌ ಮಂಜುನಾಥನೇ ನಿಮ್ಮನ್ನು ಕಳ್ಸಿದಾನೆ. ನಿಮ್ಮ ಉಪಕಾರವನ್ನು ಯಾವತ್ತೂ ಮರೆಯೋದಿಲ್ಲ ಕಣಪ್ಪ. ನಿಮ್ಗೆ ನಾವು ಏನೂ ಕೊಡಲು ಆಗ್ತಿಲ್ಲ. ಮನೇಗೆ ಸ್ವಲ್ಪ ಸ್ವೀಟ್ ತಗೊಂಡು ಹೋಗಪ್ಪ…’ ಎನ್ನುತ್ತಾ 500 ರೂಪಾಯಿಯ ನೋಟನ್ನು ಕೈಗಿಟ್ಟು, ಮತ್ತೆ ಕೈಮುಗಿದರು. ಮಂಜು ಪಾಟೀಲ ತಕ್ಷಣವೇ ‘ಅಯ್ಯಯ್ಯೋ, ದುಡ್ಡು ಬೇಡ’ ಅಂದ. ಅವರೆಲ್ಲ ಒಟ್ಟಾಗಿ-‘ ಬೇಡ ಅಂದ್ರೆ ನಮ್ಗೆಲ್ಲಾ ಬೇಜಾರಾಗುತ್ತದೆ. ಮನೇಗೆ ಹಣ್ಣು, ಸ್ವೀಟ್ ತಗೊಂಡು ಹೋಗಿ’ ಎಂದರು.

***
ಅವತ್ತು ಮಂಜು ಪಾಟೀಲನಿಗೆ ಕಣ್ತುಂಬ ನಿದ್ರೆ ಬಂತು. ಮಧ್ಯೆ ಮಧ್ಯೆ ‘ಆಪರೇಷನ್‌ ಸಕ್ಸಸ್‌, ಸದ್ಯ, ಅಮ್ಮ ಹುಷಾರಾದ್ಲು. ಅಮ್ಮಂಗೆ ಪ್ರಜ್ಞೆ ಬಂತು…’ ಎಂಬ ಉದ್ಗಾರ ಕೇಳಿಸುವಂಥ ಕನಸು ಬಿದ್ದವು. ಬೆಳಗ್ಗೆ ಎದ್ದವನೇ ಊರಿಗೆ ಹೋಗಿಬಿಡಲು ಆತ ನಿರ್ಧರಿಸಿದ. ಹಸಿವು ಮತ್ತು ಬಡತನದಿಂದ ಪಾರಾಗಲು ಈ ಬೆಂಗಳೂರಲ್ಲಿ ಮನುಷ್ಯ ಕಳ್ಳನಾಗಲೂ ಹೇಸುವುದಿಲ್ಲ. ನನ್ನೊಳಗೂ ಒಬ್ಬ ಕಳ್ಳ ಮತ್ತು ಕೇಡಿ ಇದ್ದನಲ್ಲ. ಅವನು ಸತ್ತು ಹೋಗಿದ್ದಕ್ಕೆ ಸಾಕ್ಷಿಯಾಗಿ ಈ ಮೊಬೈಲ್ ಮತ್ತು 500 ರೂಪಾಯಿ ನನ್ನೊಂದಿಗಿರಲಿ. ಈ ಹಣವನ್ನು ಖರ್ಚು ಮಾಡಬಾರ್ಧು, ಮೊಬೈಲ್ನ ಓಪನ್‌ ಮಾಡಬಾರ್ಧು ಎಂದು ತನಗೆ ತಾನೇ ಹೇಳಿಕೊಂಡು ಮಂಜು ಪಾಟೀಲ ಲಗೇಜ್‌ ಜೋಡಿಸಿಕೊಳ್ಳತೊಡಗಿದ…

-ಎ.ಆರ್‌.ಮಣಿಕಾಂತ್‌

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಂಚೆ ಅಣ್ಣನಿಗೆ ಒಂದು ಅಕ್ಕರೆಯ ಪತ್ರ

Postman ಅಂಚೆ ಅಣ್ಣನಿಗೆ ಒಂದು ಅಕ್ಕರೆಯ ಪತ್ರ

ಅಪ್ಪಾ ಹೆದರಬೇಡ, ನಿನ್ನ ಕಾಲಾಗಿ ನಾನಿರ್ತೇನೆ

ಅಪ್ಪಾ ಹೆದರಬೇಡ, ನಿನ್ನ ಕಾಲಾಗಿ ನಾನಿರ್ತೇನೆ

MUNNA

ಕೆಮರಾ ಕಣ್ಣು ಮಿಟುಕಿಸುತ್ತಾ “ಕಮಾಲ್‌”ಮಾಡಿದ!

ಕಷ್ಟ ಕೊಡುವ ದೇವರು ಖುಷಿಯನ್ನೂ ಕೊಡುತ್ತಾನೆ

ಕಷ್ಟ ಕೊಡುವ ದೇವರು ಖುಷಿಯನ್ನೂ ಕೊಡುತ್ತಾನೆ

ನಮ್ಮ ತಪ್ಪುಗಳಿಗೆ ಬದುಕಿದ್ದಾಗಲೇ ಶಿಕ್ಷೆ ಆಗಿಬಿಡುತ್ತದೆ

ನಮ್ಮ ತಪ್ಪುಗಳಿಗೆ ಬದುಕಿದ್ದಾಗಲೇ ಶಿಕ್ಷೆ ಆಗಿಬಿಡುತ್ತದೆ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.