ಕಡಿಮೆ ಬೆಲೆ ಸೀರೆ, ದೇಹಾನ ತಂಪಾಗಿಡುತ್ತೆ…
Team Udayavani, Nov 6, 2018, 12:30 AM IST
“ಸರ ಮಾಡಿಸ್ಕೋಬೇಕು, ಓಲೆ ತಗೋಬೇಕು, ರೇಷ್ಮೆ ಸೀರೆ ಉಟ್ಕೊಬೇಕು, ಹರಳಿನದ್ದು ಒಂದು, ನಮ್ಮ ಹೆಸರಿನ ಮೊದಲ ಅಕ್ಷರ ಇರೋದು ಒಂದು ಉಂಗುರ ಹಾಕ್ಕೋಬೇಕು… ಹೀಗೆಲ್ಲ ನನಗೂ ಆಸೆಗಳಿದ್ರು. ಪ್ರತಿ ಹಬ್ಬದ ಸಂದರ್ಭದಲ್ಲೂ, ಈ ಸರ್ತಿ ಒಡವೆ ಕೊಡಿಸಿ, ಇಲ್ಲದಿದ್ರೆ ರೇಷ್ಮೆ ಸೀರೆ ಕೊಡ್ಸಿ, ಅದೂ ಆಗದಿದ್ರೆ ಉಂಗುರವನ್ನಾದ್ರೂ ತಗೊಂಡºನ್ನಿ.. ಅಂತ ಕೇಳಿಬಿಡಲು ತಯಾರಾಗಿ ನಿಂತಿರಿದ್ದೆ. ಆದ್ರೆ ಏನ್ಮಾಡೋದಪ್ಪ? ನಿಮ್ಮ ತಂದೆಗೆ ಹೆಚ್ಚಿನ ಸಂಪಾದನೆಯೇ ಇರ್ತಿರಲಿಲ್ಲ. ಆದ್ರೂ, ನಿಮ್ಮಪ್ಪ ಯಾರಿಗೂ ಏನೂ ಕಡಿಮೆ ಮಾಡಲಿಲ್ಲ. ಇದ್ದಷ್ಟು ದಿನ ನನ್ನನ್ನು ರಾಣಿ ಥರಾನೇ ನೋಡಿಕೊಂಡ್ರು. ಒಡವೆ ಕೊಡಿಸ್ಲಿಲ್ಲ ನಿಜ. ಆದರೆ, ಹೊಟ್ಟೆಬಟ್ಟೆಗೆ ಕೊರತೆ ಮಾಡಲಿಲ್ಲ. ಪ್ರತಿ ಹಬ್ಬಕ್ಕೂ ಹೊಸ ಬಟ್ಟೆ ತಂದುಕೊಟ್ರಾ. ನಿಮ್ಮೊಂದಿಗೆ ತುಂಬಾ ಕಟ್ಟುನಿಟ್ಟಾಗಿ ವರ್ತಿಸಿದ್ರು ನಿಜ. ಆದ್ರೆ ಅಂತರಂಗದಲ್ಲಿ ಮಕ್ಕಳ ಬಗ್ಗೆ ಅವರಿಗೆ ತುಂಬಾ ಪ್ರೀತಿ ಇತ್ತು. “ಮಕ್ಕಳಿಗೆ ಯಾವುದಕ್ಕೂ ಕಡಿಮೆಯಾಗದಂತೆ ನೋಡ್ಕೊ’ ಅಂತಿದ್ರು. ಅಂಥಾ ಮನುಷ್ಯ, ಪ್ರತಿ ಹಬ್ಬದಲ್ಲೂ ಒಂದೋ, ಎರಡೋ ಬನಿಯನ್ ಮಾತ್ರ ತಗೋತಿದ್ರು. ಅದನ್ನು ನೋಡ್ತಿ ದ್ದಂಗೇ, ಚಿನ್ನ ಕೊಡ್ಸಿ, ಉಂಗ್ರ ಕೊಡ್ಸಿ ಅಂತೆಲ್ಲ ಕೇಳ್ಳೋಕೆ ಬಾಯಿ ಬರಿ¤ರಲಿಲ್ಲ. ನಿಮ್ಮಪ್ಪ ಇನ್ನಷ್ಟು ವರ್ಷ ಇರ್ಬೇಕಿತ್ತು ಕಣೋ ಬಸ್ರಾಜಾ…. ಏನ್ಮಾಡೋದು? ದೇವರು ಕರುಣೆ ತೋರಲಿಲ್ಲ…’ ಹೀಗೆನ್ನುತ್ತಾ ನಿಟ್ಟುಸಿರುಬಿಟ್ಟಳು ಪಾರ್ವತಮ್ಮ.
ನಂಜನಗೂಡಿಂದ 5 ಕಿ.ಮೀ. ದೂರದಲ್ಲಿರುವ ಗೊಳೂರಿನವಳು ಪಾರ್ವತಮ್ಮ. ಆಕೆಯ ಯಜಮಾನರ ಹೆಸರು ಮಹದೇವಪ್ಪ. ನಂಜನಗೂಡಿನಲ್ಲಿ ಬಿ.ವಿ.ಪಂಡಿತರ ಹಲ್ಲುಪುಡಿ ತಯಾರಿಕಾ ಫ್ಯಾಕ್ಟರಿಯಿತ್ತಲ್ಲ, ಅಲ್ಲಿ ಮಹದೇವಪ್ಪನವರು ಕ್ಲರ್ಕ್ ಕಂ ಸೂಪರ್‌ವೈಸರ್ ಆಗಿದ್ದರು. ಇದ್ದಿಲಿಗೆ ಕೆಲವು ಬೇರುಗಳು ಮತ್ತು ಪುದೀನವನ್ನು ಮಿಕ್ಸ್ ಮಾಡಿ ಕಪ್ಪು ಹಲ್ಲುಪುಡಿಯನ್ನೂ, ಭತ್ತದ ಹೊಟ್ಟನ್ನು ಬೂದಿ ಮಾಡಿ, ಅದಕ್ಕೆ ಕೆಲವು ಬೇರುಗಳು ಮತ್ತು ಪುದೀನಾದ ಎಲೆಗಳ ಮಿಶ್ರಣ ಸೇರಿಸಿ ತಿಳಿಗೆಂಪು ಬಣ್ಣದ ಹಲ್ಲುಪುಡಿಯನ್ನೂ ಆ ಫ್ಯಾಕ್ಟರಿಯಲ್ಲಿ ತಯಾರಿಸಲಾಗುತ್ತಿತ್ತು. ಪ್ರತಿದಿನ ಬಳಕೆಯಾದ ಭತ್ತದ ಹೊಟ್ಟು ಮತ್ತು ಇದ್ದಿಲಿನ ಪ್ರಮಾಣ, ತಯಾರಾದ ಹಲ್ಲುಪುಡಿಯ ವಿವರವನ್ನೆಲ್ಲ ಮಹದೇವಪ್ಪ ಬರೆದಿಡಬೇಕಿತ್ತು. ಕೆಲಸ ಮತ್ತು ಜವಾಬ್ದಾರಿ ದೊಡ್ಡದೇ ಇತ್ತು. ಆದರೆ ಸಿಗುತ್ತಿದ್ದ ಸಂಬಳ, ಆನೆಯ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಿತ್ತು.
ಮಹದೇವಪ್ಪ-ಪಾರ್ವತಮ್ಮ ದಂಪತಿಗೆ ಮೂವರು ಮಕ್ಕಳು. ಜೊತೆಗೆ ಮನೆಗೆ ಬಂದು ಹೋಗುವವರ ಲೆಕ್ಕವೂ ದೊಡ್ಡದೇ ಇತ್ತು. ಹೀಗಾಗಿ, ಅದೇನೇ ಕೈಬಿಗಿಹಿಡಿದು ಖರ್ಚು ಮಾಡಿದರೂ ತಿಂಗಳ ಕೊನೆಗೆ ನಯಾಪೈಸೆಯೂ ಉಳಿಯುತ್ತಿರಲಿಲ್ಲ. ಅದೊಂದು ಭಾನುವಾರ, ಊರಿಗೆ ಬಂದಿದ್ದ ಹಿರೀಮಗ ಬಸವರಾಜನ ಮುಂದೆ ಇದೆಲ್ಲವನ್ನೂ ಹೇಳಿಕೊಂಡು ಬಿಕ್ಕಳಿಸಿದ್ದಳು ಪಾರ್ವತಮ್ಮ. ಮನೆಯ ಪರಿಸ್ಥಿತಿಯನ್ನು, ಅಮ್ಮನಿಗೆ ಒದಗಿಬಂದ ಕಷ್ಟಗಳನ್ನೂ ಉಳಿದವರಿಗಿಂತ ಚೆನ್ನಾಗಿ ಗಮನಿಸಿದ್ದ ಬಸವರಾಜ. ಅದೇ ಕಾರಣಕ್ಕೆ, ಅಮ್ಮನ ಮೇಲೆ ಅವನಿಗೆ ಹೆಚ್ಚಿನ ಕಾಳಜಿ ಇತ್ತು. ಡಿಗ್ರಿಯಲ್ಲಿ ಪರ್ಸೆಂಟೇಜ್ ಇಲ್ಲ ಎಂಬ ಕಾರಣಕ್ಕೆ ಅವನಿಗೆ ಸರ್ಕಾರಿ ಕೆಲಸ ಸಿಕ್ಕಿರಲಿಲ್ಲ. ಅವನು, ಪ್ರೈವೇಟ್ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದ. “ಬೆಂಗಳೂರಿಗೆ ಬಂದುಬಿಡಮ್ಮ, ನನ್ನ ಜೊತೇನೇ ಇದಿºಡು’ ಎಂದು ಅವನೇನೋ ಮತ್ತೆ ಮತ್ತೆ ಕರೆದಿದ್ದ. ಆದರೆ, “ನಾನು ಯಾರಿಗೂ ಹೊರೆಯಾಗಿ ಬದುಕಲಾರೆ ಮಗನೇ. ಎರಡು ಎಮ್ಮೆ ಸಾಕಿಕೊಂಡಿದ್ದೀನಿ. ಅದರ ಹಾಲು ಮಾರಿದ್ರೆ ಮೂರು ಹೊತ್ತಿನ ಅನ್ನಕ್ಕೆ ದಾರಿಯಾಗುತ್ತೆ!’ ಎಂದಿದ್ದಳು ಪಾರ್ವತಮ್ಮ. ಉಳಿದಿಬ್ಬರು ಮಕ್ಕಳಿದ್ದರಲ್ಲ: ಅವರು ಹೆಂಡತಿಯರಿಗೆ ಹೆದರುತ್ತಿದ್ದರು. ಹೆಂಗಸರು ಗುರ್ರ ಅನ್ನಬಹುದು ಎಂಬ ಅಂಜಿಕೆಯಿಂದ ಅವರು ಪಾರ್ವತಮ್ಮನನ್ನು ಕರೆಯುತ್ತಲೇ ಇರಲಿಲ್ಲ.
ಅಮ್ಮನಿಗೆ ಲೋ ಬಿ.ಪಿ. ಇದೆ. ಶುಗರ್ ಕೂಡ ಇದೆ. ದಿನವೂ ತಪ್ಪದೇ ಮಾತ್ರೆ ನುಂಗಿಯೇ ಬದುಕಬೇಕಾದ ಪರಿಸ್ಥಿತಿಯಲ್ಲಿ ಅವಳಿದ್ದಾಳೆ. ಚಿನ್ನದ ಸರ ಹಾಕ್ಕೋಬೇಕು ಎಂಬುದು ಅವಳಿಗಿದ್ದ ಆಸೆ, ಕನಸು. ಅದನ್ನು ಅಪ್ಪ ಈಡೇರಿಸದಿದ್ರೆ ಏನಂತೆ? ಮಗನಾಗಿ ನಾನೇ ಆ ಕೆಲಸ ಮಾಡಿದರಾಯ್ತು ಎಂದು ಬಸವರಾಜ ಯೋಚಿಸಿದ್ದ. ಹೆಂಡತಿಯೊಂದಿಗೂ ಅದನ್ನೇ ಹೇಳಿಕೊಂಡ. “ನೋಡ್ರಿ, ಹೆಂಗಸರಿಗೆ ಚಿನ್ನದ ಮೇಲೆ ವಿಪರೀತ ಆಸೆ ಇರುತ್ತೆ. ನೀವು ಎಷ್ಟೇ ದೊಡ್ಡ ಸರ ತಗೊಂಡ್ರೂ ಇನ್ನೂ ಸ್ಪಲ್ಪ ದೊಡ್ಡದು ಸಿಕ್ಕಿದ್ರೆ ಚೆನ್ನಾಗಿರಿ¤ತ್ತು. ಅಂತಾನೇ ಎಲ್ರೂ ಯೋಚಿಸ್ತಾರೆ. ನಿಮ್ಮ ತಾಯಿಗೆ ತಾನೇ ಮಾಡಿಸ್ತಿರೋದು? ಸ್ವಲ್ಪ ದೊಡ್ಡದನ್ನೇ ಮಾಡ್ಸಿ. ದಪ್ಪ ಚೈನಿನ ಎರಡೆಳೆ ಸರ ಮಾಡ್ಸಿಬಿಡಿ’ ಎಂದಾಕೆ ಸಲಹೆ ನೀಡಿದಳು. ಅವತ್ತೇ ಸಂಜೆ, ಸಮೀಪದ ಜ್ಯುವೆಲ್ಲರಿ ಮಳಿಗೆಗೂ ಭೇಟಿ ನೀಡಿ, ಎರಡೆಳೆಯ ಚಿನ್ನದ ಸರಕ್ಕೆ ರೇಟ್ ಎಷ್ಟಿದೆ ಎಂದು ವಿಚಾರಿಸಿದಳು. “ಒಳ್ಳೇ ಕ್ವಾಲಿಟೀದೇ ಬೇಕು ಅನ್ನೋದಾದ್ರೆ 3 ರಿಂದ 4 ಲಕ್ಷ ಆಗುತ್ತೆ’.. ಎಂಬ ಮಾರ್ವಾಡಿಯ ಮಾತು ಕೇಳಿ ಬಸವರಾಜ ಬೆಚ್ಚಿಬಿದ್ದ. ಪ್ರೈವೇಟ್ ಕಂಪನಿಯ ಕೆಲಸಗಾರ ಆಗಿರುವ ತನಗೆ 4 ಲಕ್ಷ ರುಪಾಯಿ ಹೊಂದಿಸಲು ಸಾಧ್ಯವೇ ಇಲ್ಲ ಎಂದು ಅವನಿಗೆ ಚೆನ್ನಾಗಿ ಗೊತ್ತಿತ್ತು. ಒಂದೂ ಮಾತಾಡದೆ ಎದ್ದು ಬಂದವನು, “ಸರ ಮಾಡಿಸುವಷ್ಟು ಶ್ರೀಮಂತಿಕೆ ನನಗಿಲ್ಲ. ಅಮ್ಮನಿಗೆ ಒಂದೆರಡು ರೇಷ್ಮೆ ಸೀರೆ ಆದ್ರೂ ಕೊಡಿಸಿಬಿಡೋಣ’ ಅಂದ. “ರೀ, ಕೆಲವು ವಿಷಯದಲ್ಲಿ ಗಂಡಸರು ಬಹಳ ಪೆದ್ದರು ಅನ್ನೋದು ಇದಕ್ಕೇ ಕಣ್ರಿ. ನಿಮ್ಮ ತಾಯಿಗೆ ಈಗಾಗ್ಲೆ 60 ವರ್ಷ ಆಗಿದೆ. ಈ ವಯಸ್ಸಲ್ಲಿ ಅವರು ರೇಷ್ಮೆ ಸೀರೆ ಉಟ್ಕೊಂಡು ಓಡಾಡೋಕೆ ಆಗುತ್ತಾ? ರೇಷ್ಮೆ ಸೀರೆ ತೂಕ ಇರುತ್ತೆ. ಅದನ್ನು ಉಟ್ಕೊಂಡು ಸರಭರನೆ ಹೋಗಲು ಆಗೋದಿಲ್ಲ, ಸ್ಪೀಡಾಗಿ ನಡೆಯೋಕೆ ಹೋದ್ರೆ, ಮುಗ್ಗರಿಸಿ ಬಿದ್ದುಬಿಡ್ತಾರೆ. ಮೊದಲೇ ವಯಸ್ಸಾದ ಜೀವ. ಅಂಥವರಿಗೆ ಈ ಥರ ಏನಾದ್ರೂ ಆಗಿಬಿಟ್ರೆ ಗತಿಯೇನು? ರೇಷ್ಮೆ ಸೀರೆ ಕೊಡಿಸಬೇಕು ಅನ್ನುವ ಯೋಚನೇನ ಮೊದಲು ತಲೆಯಿಂದ ತೆಗೆದುಹಾಕಿ’ ಎಂದಳು ಬಸವರಾಜನ ಹೆಂಡತಿ. ಹತ್ತು ನಿಮಿಷ ಬಿಟ್ಟು ಅವಳೇ ಹೇಳಿದಳು: ಸರವೂ ಬೇಡ, ಸೀರೆಯೂ ಬೇಡ. ಎರಡು ಉಂಗುರ ಮಾಡಿಸಿಬಿಡೋಣ. 50 ಸಾವಿರಕ್ಕೆ ಚೆನ್ನಾಗಿರೋ ಎರಡು ಉಂಗುರ ಬರ್ತವೆ. ನಿಮ್ಗೆ ಜವಾಬ್ದಾರಿ ಕಳ್ಕೊಂಡಂಗೂ ಆಗುತ್ತೆ. ಆ ಕಡೇಲಿ ಅಮ್ಮನ ಆಸೆಯೂ ಈಡೇರುತ್ತೆ…’ ಅಂದಳು. ಮರುದಿನ ಬೆಳಗ್ಗೆಯೇ ತನ್ನ ವಾರಗಿತ್ತಿಯರಿಗೂ ಫೋನ್ ಮಾಡಿ ಎಲ್ಲ ವಿಷಯವನ್ನೂ ಹೇಳಿಯೂಬಿಟ್ಟಳು.
ನಾಲ್ಕು ತಿಂಗಳು ಕಳೆಯಿತು. ಅದೊಮ್ಮೆ, ಹಬ್ಬದ ನೆಪದಲ್ಲಿ ಅಣ್ಣ ತಮ್ಮಂದಿರೆಲ್ಲ ಗೊಳೂರಿಗೆ ಹೋದರು. ರಾತ್ರಿ ಊಟದ ನಂತರ, ಅತ್ತೆಯೊಂದಿಗೆ ಸೊಸೆಯಂದಿರೆಲ್ಲ ಹರಟೆಗೆ ಕೂತರು. ಏನೇನೋ ಮಾತಾಡಿದ ನಂತರ, ಕಿರಿಯ ಸೊಸೆ, ತಾನೇ ಮುಂದಾಗಿ ಉಂಗುರದ ವಿಷಯ ಪ್ರಸ್ತಾಪಿಸಿದಳು. “ಈಗಲೇ ಹೇಳಿದೀನಿ ಅತ್ತೇ, ಈಗ ಹೊಸದಾಗಿ ಮಾಡಿಸಿಕೊಡ್ತಾರಲ್ಲ ಉಂಗುರ? ಅವು ನಿನ್ನ ನಂತರ ನನ್ನ ಮಕ್ಕಳಿಗೇ ಸೇರಬೇಕು’ ಅಂದುಬಿಟ್ಟಳು.
ಕಿರಿಯವಳ ಮಾತು, ಉಳಿದಿಬ್ಬರು ಸೊಸೆಯಂದಿರಿಗೆ ಇಷ್ಟವಾಗಲಿಲ್ಲ. “ಇನ್ನೂ ಅವರು ಉಂಗುರ ಹಾಕ್ಕೊಂಡಿಲ್ಲ. ಆಗಲೇ ಪಾಲು ಕೇಳಲು ಶುರುಮಾಡಿದೀಯಲ್ಲವ್ವ? ನೀನು ಕೇಳಿದಂಗೆ ಕೊಟ್ಟುಬಿಡೋಕ್ಕಾಗುತ್ತಾ?’ ಎಂದು ಅವರು ರೇಗಿದರು. “ಕಿರಿ ಮಕ್ಕಳಿಗೆ ತಾಯಿಮೇಲೆ ಹಕ್ಕು ಜಾಸ್ತಿ ಅಂತ ಗಾದೇನೇ ಇದೆ. ನಮಗೇನು ಗಂಡನ ಮನೆ ಕಡೆಯಿಂದ ಜಮೀನು, ಸೈಟು, ಮನೆ ಸಿಕ್ಕಿದ್ಯಾ? ಇಲ್ಲವಲ್ಲ, ಸ್ವಲ್ಪ ಒಡವೆಯಾದ್ರೂ ಸಿಕ್ಕಿದ್ರೆ ಸಿಗಲಿ ಅಂತ ಕೇಳಿದೆ. ಅದರಲ್ಲಿ ತಪ್ಪೇನಿದೆ?’ ಎಂದು ಕಿರಿಯ ಸೊಸೆ ಮತ್ತೆ ಪ್ರಶ್ನೆ ಹಾಕಿದಳು. ಹೀಗೆ ಶುರುವಾದ ಸವಾಲ್-ಜವಾಬ್‌ನಂಥ ಮಾತುಕಥೆ, ಕಡೆಗೆ ದುಸುಮುಸುವಿನಲ್ಲಿ ಮುಗಿಯಿತು.
ಅವತ್ತೇ, ಹಬ್ಬದ ಪ್ರಯುಕ್ತ ಹೊಸ ಸಿನಿಮಾ ಎಂಬ ಘೋಷವಾಕ್ಯದೊಂದಿಗೆ, ಟಿ.ವಿ.ಯಲ್ಲಿ ಸಿನಿಮಾವೊಂದನ್ನು ಹಾಕಿದ್ದರು. ಅದರಲ್ಲಿ, ಮೈಮೇಲಿನ ಒಡವೆಯ ಆಸೆಗಾಗಿ, ಹೂತಿದ್ದ ಶವವನ್ನು ಹೊರತೆಗೆದು, ಬೆರಳನ್ನೇ ಕತ್ತರಿಸಿ, ಅದರಲ್ಲಿದ್ದ ಉಂಗುರವನ್ನೂ ಕಿತ್ತುಕೊಳ್ಳುವ ಒಂದು ದೃಶ್ಯವಿತ್ತು. ಹೆಂಗಸರ ಜಗಳ, ಒಡವೆ ಪಡೆಯುವ ವಿಚಾರದಲ್ಲಿ ಅವರಿಗಿದ್ದ ದುರಾಸೆ, ಹಠದ ಬಗ್ಗೆ ಚೆನ್ನಾಗಿ ತಿಳಿದಿದ್ದ ಬಸವರಾಜನಿಗೆ- ಅವಕಾಶ ದೊರೆತರೆ, ಶವದಿಂದ ಉಂಗುರ ಕೀಳ್ಳೋಕೆ ಇವರೂ ಹೇಸುವುದಿಲ್ಲ ಅನ್ನಿಸಿಬಿಟ್ಟಿತು. ಅಷ್ಟೆ: ಆನಂತರದಲ್ಲಿ ಅವನಿಗೆ ಸರಿಯಾಗಿ ನಿದ್ರೆಯೇ ಬರಲಿಲ್ಲ. ಕಣ್ಮುಚ್ಚಿದರೆ ಸಾಕು: ಅಮ್ಮನ ಎರಡೂ ಕೈಗಳಲ್ಲಿದ್ದ ಉಂಗುರವನ್ನು ಕಿತ್ತುಕೊಳ್ಳಲು ಐದಾರು ಜನ ನುಗ್ಗಿಬಂದಂತೆ ಭಾಸವಾಗುತ್ತಿತ್ತು. “ಉಹುಂ, ಹೀಗೆಲ್ಲಾ ನಡೆಯೋಕೆ ಅವಕಾಶ ಕೊಡಬಾರ್ಧು. ಅಮ್ಮನ ಆಸೆ ಈಡೇರಿಸದೇ ಹೋದ್ರೂ ಪರವಾಗಿಲ್ಲ. ಅವಳಿಗೆ ನೋವಾಗುವಂಥ ಯಾವ ಕೆಲಸವನ್ನೂ ಮಾಡಬಾರ್ದು’ ಎಂದು ಬಸವರಾಜ, ತನಗೆ ತಾನೇ ಹೇಳಿಕೊಂಡ.
“ಯಾರ ಮುಂದೇನೂ ಕೈ ಒಡ್ಡಬೇಡ. ಯಾರ ಹತ್ರಾನೂ ಏನನ್ನೂ ಕೇಳಬೇಡ…’ ಎಂಬುದು ಮಹದೇವಪ್ಪ ಹೇಳಿದ್ದ ಮಾತು; ಆ ಮಾತಿನಂತೆಯೇ ಬಾಳಿದಳು ಪಾರ್ವತಮ್ಮ. “ಉಂಗುರ ಮಾಡಿಸ್ತೀನಿ ಅಂದಿದ್ಯಲ್ಲಪ್ಪಾ, ಅದೇನಾಯ್ತು?’ ಎಂದು ಆಕೆ ಯಾವ ಸಂದರ್ಭದಲ್ಲೂ ಮಗನನ್ನು ಕೇಳಲಿಲ್ಲ. “ನಿಮ್ಮನ್ನು ಇನ್ನೂ ಚೆನ್ನಾಗಿ ಸಾಗಬೇಕಾಗಿತ್ತು ಕಣಪ್ಪಾ. ದೇವ್ರು ನಮ್ಗೆ ಅಂಥಾ ಶ್ರೀಮಂತಿಕೆ ಕೊಡಲಿಲ್ಲ…’ ಎಂದಷ್ಟೇ ಹೇಳಿದ್ದಳು. ಅದೊಮ್ಮೆ, ಬಾವಿಕಟ್ಟೆಯ ಬಳಿ ನೀರು ತರಲು ಹೋಗಿದ್ದವಳು, ತಲೆ ಸುತ್ತಿಬಂದು ದೊಪ್ಪನೆ ಕುಸಿದುಬಿದ್ದಳು. ಪರಿಚಯದವರು, ತಕ್ಷಣವೇ ಆಸ್ಪತ್ರೆಗೆ ಸೇರಿಸಿದರೂ ಪ್ರಯೋಜನವಾಗಲಿಲ್ಲ. ಲೋ ಬಿಪಿ, ಹೈಶುಗರ್ ಎಂಬುದೇ ಕಾರಣವಾಗಿ, ನಾಲ್ಕು ದಿನಗಳ ಆಸ್ಪತ್ರೆ ವಾಸದ ನಂತರ…
ಅಮ್ಮ ತೀರಿಕೊಂಡಳಲ್ಲ: ಅದರ ಹಿಂದಿನ ದಿನವಷ್ಟೇ ಬಸವರಾಜ ಆಸ್ಪತ್ರೆಗೆ ಬಂದಿದ್ದ. ಅವತ್ತು ಪಾರ್ವತಮ್ಮ ತುಂಬ ಗೆಲುವಾಗಿದ್ದಳು. ಡ್ನೂಟಿ ಡಾಕ್ಟರು ಬಂದಾಗ- “ಹುಶಾರಾಗಿದೀನಲ್ಲ ಸ್ವಾಮಿ, ನಮ್ಮೂರಿಗೆ ಕಳಿಸಿಕೊಡಿ’ ಎಂದು ಕೇಳಿದ್ದಳು. ನಾಳೆಯೂ ಇಷ್ಟೇ ಒಳ್ಳೇ ಕಂಡೀಷನ್‌ಲಿ ಇದ್ರೆ ಖಂಡಿತ ಡಿಸ್‌ಚಾರ್ಜ್ ಮಾಡ್ತೇವೆ ಎಂದು ವೈದ್ಯರೂ ಹೇಳಿದ್ದರು. ಇದೆಲ್ಲವನ್ನೂ ಕಂಡಮೇಲೆ- “ಸದ್ಯ, ಅಮ್ಮ ಹುಷಾರಾದ್ಲು’ ಎಂದುಕೊಂಡು ಬಸವರಾಜು ಬೆಂಗಳೂರಿನ ಬಸ್ ಹತ್ತಿದ್ದ. ಆನಂತರದ ಕೆಲವೇ ಗಂಟೆಗಳಲ್ಲಿ ಪರಿಸ್ಥಿತಿ ಕೈ ಮೀರಿ ಹೋಗಿತ್ತು. ಊರಿಗೆ ಮರಳಬೇಕಿದ್ದ ಪಾರ್ವತಮ್ಮ, ಎಂದೂ ಬಾರದ ಊರಿಗೆ ಹೋಗಿ ಬಿಟ್ಟಿದ್ದಳು.
“ಸಾರ್, ಒಂದು ಸೀರೆ ಕೊಡಿ. ದುಡ್ಡು ಎಷ್ಟಾದ್ರೂ ಆಗ್ಲಿ. ಗ್ರ್ಯಾಂಡ್ ಆಗಿರೋದೇ ಕೊಡಿ. ಇದೇ ಕೊನೇ ಛಾನ್ಸು . ಇನ್ನೊಂದ್ಸಲ ಸೀರೆ ಕೊಡಿಸೋ ಅವಕಾಶ ಸಿಗಲ್ಲ ನನ್ಗೆ’ ಸೀರೆಯಂಗಡಿಯಲ್ಲಿ ನಿಂತು ಗದ್ಗದನಾಗಿ ಹೇಳಿದ ಬಸವರಾಜ.
ಅಂಗಡಿಯಾತ ಕುತೂಹಲದಿಂದ- “ಸಾರ್, ಯಾರಿಗೆ ಸೀರೆ? ಏನ್ ವಿಶೇಷ?’ ಅಂದ. ಬಸವರಾಜನಿಗೆ, ಆ ಕ್ಷಣಕ್ಕೆ ತನ್ನ ಮನಸ್ಸಿನ ನೋವನ್ನು ಯಾರೊಂದಿಗಾದರೂ ಹೇಳಿಕೊಂಡು ಹಗುರಾ ಗಬೇಕಿತ್ತು. ಚುಟುಕಾಗಿ, ತನ್ನ ಬದುಕಿನ ಕಥೆ ಹೇಳಿಕೊಂಡ. “ಅಮ್ಮ ಹೋಗಿಬಿಟ್ಳು, ಈಗ ಕೊಡ್ತೀನಲ್ಲ: ಆ ಸೀರೆಯೇ ಅವಳಿಗೆ ಕೊಡುವ ಲಾಸ್ಟ್ ಗಿಫ್ಟ್’ ಅಂದು ಮೌನವಾದ.
ಐದು ನಿಮಿಷ, ಆ ಕಡೆಯಿಂದಲೂ ಮಾತಿಲ್ಲ. ಆಮೇಲೆ, ನಿಟ್ಟುಸಿರಿಡುತ್ತಾ ಅಂಗಡಿಯವ ಹೇಳಿದ: “ಸಾರ್, ಗ್ರ್ಯಾಂಡ್ಸೀರೆ ಉಡಿಸಿದ್ರೆ ಬೆಂಕಿಯಿಟ್ಟಾಗ ಅದು ಶವಕ್ಕೆ ಅಂಟ್ಕೊಂಡ್‌ಬಿಡುತ್ತೆ, ಆಗ ಚರ್ಮ ಪೂರಾ ಬೆಂದುಹೋಗುತ್ತೆ. ಬೆಂಕಿ ಸೋಕಿದ ತಕ್ಷಣ ಕೆಲವೊಮ್ಮೆ ಬಟ್ಟೆ ಅಂಟಿಕೊಂಡಾಗ ಚರ್ಮವೇ ಕಿತ್ತು ಬರೋದೂ ಉಂಟು. ಹಾಗಾಗಿ ಗ್ರ್ಯಾಂಡ್ ಸೀರೆ ಬೇಡ. ಕಡಿಮೆ ಬೆಲೆಯ ಹತ್ತಿ ಸೀರೆ ತಗೊಂಡು ಹೋಗಿ. ಹತ್ತಿ ಸೀರೆ ಚರ್ಮಕ್ಕೆ ಅಂಟಿಕೊಳ್ಳಲ್ಲ. ಅದು ಶವವನ್ನೂ ತಂಪಾಗಿ ಇಡುತ್ತೆ…’ ಹೀಗೆಂದವನು, ಬಿಳೀ ಬಣ್ಣದ ಹತ್ತಿ ಸೀರೆಯೊಂದನ್ನು ತೆಗೆದುಕೊಟ್ಟ. ಕಡೆಗೂ ನಾನು ಋಣದಲ್ಲಿ ಉಳ್ಕೊಬಿಟ್ಟೆನಲ್ಲಮ್ಮಾ ಎಂದು ಬಿಕ್ಕಳಿಸುತ್ತಲೇ ಬಸವರಾಜ ಆ ಸೀರೆಯನ್ನು ಎತ್ತಿಕೊಂಡ.
ಎ.ಆರ್. ಮಣಿಕಾಂತ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Puttur ನಗರಕ್ಕೂ ಬೇಕು ಟ್ರಾಫಿಕ್ ಸಿಗ್ನಲ್
INDvAUS; ಮೆಲ್ಬೋರ್ನ್ ನಲ್ಲಿ ಆಸೀಸ್ ಬಿಗಿ ಹಿಡಿತ; ಭಾರೀ ಹಿನ್ನಡೆಯಲ್ಲಿ ಟೀಂ ಇಂಡಿಯಾ
Puttur: ಪೆನ್ ಪಾಯಿಂಟ್ ಕ್ರಿಕೆಟ್: ಸತತ 2ನೇ ಬಾರಿ ಬ್ಲೂ ಹಂಟರ್ಸ್ ಚಾಂಪಿಯನ್ಸ್
Gold Scam; ಪವಿತ್ರಾ ಸ್ನೇಹಿತೆ ಜತೆಗೆ ಕಾಣಿಸಿಕೊಂಡ ಚಿನ್ನ ವಂಚನೆ ಕೇಸ್ ಆರೋಪಿ ಶ್ವೇತಾ
Video: ತನ್ನ ಮನೆಯ ಮುಂದೆಯೇ ತನ್ನನ್ನು ಚಾಟಿಯಿಂದ ಹೊಡೆದುಕೊಂಡ ಅಣ್ಣಾಮಲೈ…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.