ಪದಕ ಗೆಲ್ಲೋದಲ್ಲ, ಪ್ರಾಣ ಉಳಿಸೋದೇ ಮುಖ್ಯ!
Team Udayavani, Dec 19, 2018, 12:30 AM IST
ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಬೇಕು. ಪದಕ ಗೆಲ್ಲಬೇಕು. ಆ ಮೂಲಕ ಇತಿಹಾಸ ನಿರ್ಮಿಸಬೇಕು. ಒಂದು ವೇಳೆ ಚಿನ್ನದ ಪದಕವನ್ನೇ ಗೆದ್ದುಬಿಟ್ಟರೆ-ಫಿನಿಶ್! ಅದಾದ ಮೇಲೆ ಸಾಧಿಸಲು ಬೇರೇನೂ ಇರುವುದಿಲ್ಲ. ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ಮೇಲೆ, ಜಗತ್ತಿನ ಅಷ್ಟೂ ಸೌಭಾಗ್ಯ ನನ್ನದಾಯ್ತು ಎಂದೇ ಅರ್ಥ. ಸಾಧನೆಯ ದಿನಗಳನ್ನು ಮೆಲುಕು ಹಾಕುತ್ತಲೇ ಆಯುಷ್ಯದ ಉಳಿದ ದಿನಗಳನ್ನು ಕಳೆಯಬಹುದು…
ಕ್ರೀಡಾಪಟು ಅನ್ನಿಸಿಕೊಂಡ ಪ್ರತಿಯೊಬ್ಬನೂ ಹೀಗೆ ಯೋಚಿಸುತ್ತಾನೆ. ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪದಕ ಗೆಲ್ಲಬೇಕು ಎಂಬುದು, ಎಲ್ಲ ಕ್ರೀಡಾಪಟುಗಳ ಮಹದಾಸೆ ಆಗಿರುತ್ತದೆ. ಆದರೆ, ನೀವೀಗ ಓದುತ್ತೀರಲ್ಲ; ಆ ಕಥೆ ಡಿಫರೆಂಟು. ನಮ್ಮ ಕಥಾನಾಯಕನೂ ಕ್ರೀಡಾಪಟು. ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಬೇಕು ಎಂದೇ ಅವನೂ ಕನಸು ಕಂಡಿದ್ದ. ಕನಸನ್ನು ನನಸು ಮಾಡಿಕೊಳ್ಳಲು ದಶಕಗಳ ಕಾಲ ಶ್ರಮಿಸಿದ್ದ. ಅಂದಹಾಗೆ, ಈತ ಪಾಲ್ಗೊಂಡಿದ್ದು ಹಾಯಿದೋಣಿ ಸ್ಪರ್ಧೆಯಲ್ಲಿ. ಇಂಗ್ಲಿಷಿನಲ್ಲಿ ಅದಕ್ಕೆ ಸೈಲಿಂಗ್(sಚಜಿlಜಿnಜ) ಅನ್ನುತ್ತಾರೆ. ನಮ್ಮ ಕಥಾನಾಯಕ, ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ, ಉಳಿದೆಲ್ಲರನ್ನೂ ಹಿಂದಿಕ್ಕಿ, ಅಬ್ಟಾ, ಕಡೆಗೂ ಗೆಲುವಿನ ಸಮೀಪ ಬಂದಾಯ್ತು ಅಂದುಕೊಳ್ಳುತ್ತಾ, ನಿರಾಳ ಭಾವದಿಂದ ಒಮ್ಮೆ ಹಿಂತಿರುಗಿ ನೋಡಿದರೆ- ಸ್ವಲ್ಪ ದೂರದಲ್ಲಿ, ಮತ್ತೂಂದು ಹಾಯಿದೋಣಿ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಇಬ್ಬರು ಸ್ಪರ್ಧಿಗಳು ದೋಣಿಯಿಂದ ಮಗುಚಿಬಿದ್ದು ಮುಳುಗಿಹೋಗುತ್ತಿರುವ ದೃಶ್ಯ ಕಾಣಿಸಿದೆ. ಅಷ್ಟೆ: ಪದಕ ಗಳಿಸುವುದಕ್ಕಿಂತ ಪ್ರಾಣ ಉಳಿಸುವುದೇ ಮುಖ್ಯ ಅಂದುಕೊಂಡ ಈತ ಛಕ್ಕನೆ ರೂಟ್ ಬದಲಿಸಿಕೊಂಡು ಹೋಗಿಬಿಡುತ್ತಾನೆ! ಆ ಅಪರಿಚಿತರ ಜೀವ ಉಳಿಸುತ್ತಾನೆ. ಆ ಮೂಲಕ ಕ್ರೀಡಾಮನೋಭಾವ ಪ್ರದರ್ಶಿಸಿದ ಅಪರೂಪದ, ಅನನ್ಯ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರನಾಗುತ್ತಾನೆ.
ಈತನ ಹೆಸರು-ಲಾರೆನ್ಸ್ ಲೆಮಿಯಕ್ಸ್. ಕೆನಡಾದವನಾದ ಲಾರೆನ್ಸ್‌ಗೆ, ಸೈಲಿಂಗ್ ಸ್ಪರ್ಧೆಯಲ್ಲಿ ದೇಶವನ್ನು ಪ್ರತಿನಿಧಿಸಬೇಕು. ಚಿನ್ನವನ್ನೇ ಗೆಲ್ಲಬೇಕು ಎಂಬ ಹೆಬ್ಬಯಕೆ, ಬಾಲ್ಯದಿಂದಲೂ ಇತ್ತು. ಪುಟ್ಟ ದೋಣಿಯಲ್ಲಿ ಬಾವುಟದಂತೆ ಕಾಣುವ ಹಾಯಿಯನ್ನು ಕಟ್ಟಲಾಗಿರುತ್ತದೆ. ಅದನ್ನು ಚಾಕಚಕ್ಯತೆಯಿಂದ ನಿಯಂತ್ರಿಸುತ್ತಾ ಅಲೆಗಳೊಂದಿಗೆ ಸಾಗಿಹೋಗಬೇಕು. ಸ್ಪರ್ಧೆಯಲ್ಲಿ ಬಳಸುವ ಹಾಯಿದೋಣಿ 110 ಕೆ.ಜಿ.ಯಷ್ಟು ಭಾರ ಇರುತ್ತದೆ. ಗಾಳಿಯ ವೇಗಕ್ಕೆ ಹಾಯಿ ದೋಣಿಯನ್ನು ಹೊಂದಿಸದೇ ಹೋದರೆ, ದೋಣಿ ಮಗುಚಿ ಬೀಳುತ್ತದೆ. ಸ್ಪರ್ಧಿಯೊಬ್ಬನ ಜೀವಕ್ಕೆ ಅಪಾಯವಿದೆ ಅನ್ನಿಸಿದಾಗ ಮಾತ್ರ ರಕ್ಷಣಾ ಪಡೆಯ ದೋಣಿ ನೆರವಿಗೆ ಬರುತ್ತದೆ. ಸ್ಪರ್ಧೆಯನ್ನು ನೋಡಲು ಪ್ರೇಕ್ಷಕರೂ ಸೇರಿರುತ್ತಾರೆ- ಇದಿಷ್ಟೂ ಸೈಲಿಂಗ್ ಸ್ಪರ್ಧೆ ಕುರಿತ ಪಕ್ಷಿ ನೋಟ ಮತ್ತು ವಿವರಣೆ.
1988ರ ಸಿಯೋಲ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪಾಲ್ಗೊಂಡಾಗ ಲಾರೆನ್ಸ್‌ಗೆ 32 ವರ್ಷ. ಕ್ರೀಡಾಪಟುಗಳಿಗೆ ಇದು ನಿವೃತ್ತಿಯ ವಯಸ್ಸು. ಅದಕ್ಕೂ ಮೊದಲು ನಡೆದ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಹುಮ್ಮಸ್ಸು ಲಾರೆನ್ಸ್‌ಗೆ ಇತ್ತು. ಆದರೆ ಅವನಿಗಿಂತ ಸೀನಿಯರ್‌ಗಳು ತಂಡದಲ್ಲಿ ಇದ್ದುದರಿಂದ ಅವನಿಗೆ ಅವಕಾಶವೇ ಸಿಕ್ಕಿರಲಿಲ್ಲ. ಬಹುಶಃ ಇದೇ ನನ್ನ ಮೊದಲ ಮತ್ತು ಕಡೆಯ ಒಲಿಂಪಿಕ್ಸ್ ಕ್ರೀಡಾಕೂಟ ಆಗಬಹುದು. ಹಾಗಾಗಿ ಚಿನ್ನದೊಂದಿಗೇ ತಾಯ್ನಾಡಿಗೆ ಮರಳಬೇಕು ಎಂಬ ನಿರ್ಧಾರದೊಂದಿಗೇ ಲಾರೆನ್ಸ್ ಬಂದಿದ್ದ.
(ಸೈಲಿಂಗ್ ಸ್ಪರ್ಧೆಯಲ್ಲಿ ಒಂದು ತಂಡದಲ್ಲಿ ಇಬ್ಬರು ಸ್ಪರ್ಧಿಗಳಿರುವ ಗುಂಪು ಸ್ಪರ್ಧೆ ಇರುತ್ತದೆ. ಏಕ ವ್ಯಕ್ತಿ ಪ್ರದರ್ಶನದ ಫಿನ್ ವಿಭಾಗವೂ ಇರುತ್ತದೆ. ಲಾರೆನ್ಸ್ ಸ್ಪರ್ಧಿಸಿದ್ದು ಫಿನ್ ವಿಭಾಗದಲ್ಲಿ. ಹಾಯಿದೋಣಿ ಸ್ಪರ್ಧೆಯಲ್ಲಿ ಆರು ಅಥವಾ ಏಳು ಸುತ್ತಿನ ಸ್ಪರ್ಧೆ ಇರುತ್ತದೆ. ಅದರಲ್ಲಿ ಕ್ವಾರ್ಟರ್ ಫೈನಲ್, ಸೆಮಿಫೈನಲ್ ಎಂದೆಲ್ಲ ವಿಂಗಡಿಸಿ, ಪ್ರತಿ ಸುತ್ತಿನಲ್ಲೂ ಪಡೆದ ಅಂಕಗಳನ್ನು ಲೆಕ್ಕ ಹಾಕಿ ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ)
ಕ್ರೀಡಾಕೂಟದಲ್ಲಿ ಏನಾಯಿತು ಎಂಬುದನ್ನು ಲಾರೆನ್ಸ್ ಹೀಗೆ ಬರೆದುಕೊಂಡಿದ್ದಾರೆ: “ಅವತ್ತು ಸೆಪ್ಟೆಂಬರ್ 24ರ ಶನಿವಾರ. ಈ ವೇಳೆಗಾಗಲೇ ನಾಲ್ಕು ಸುತ್ತಿನ ಸ್ಪರ್ಧೆಗಳು ಮುಗಿದಿದ್ದವು. ಎಲ್ಲದರಲ್ಲೂ ನನಗೆ ಉತ್ತಮ ಅಂಕಗಳೇ ಸಿಕ್ಕಿದ್ದವು. ಉಳಿದ ರೌಂಡ್‌ಗಳಲ್ಲಿ ಪ್ರತಿಬಾರಿಯೂ ಮೊದಲಿಗನಾಗಿ ಗುರಿ ತಲುಪಿದರೆ ಚಿನ್ನದ ಪದಕ ಗೆಲ್ಲುವ ಸಾಧ್ಯತೆಗಳಿದ್ದವು. ಐದನೇ ರೌಂಡಿನ ಸ್ಪರ್ಧೆ ಶುರುವಾದ ದಿನ, ದೋಣಿ ಸಾಗಿದ ದಾರಿಯಲ್ಲಿ ಐದು ಅಡಿಗೂ ದೊಡ್ಡದಿದ್ದ ಭಾರೀ ಅಲೆಗಳು ಎದುರಾದವು. ಅಲೆಗಳ ಹೊಡೆತದಿಂದ ಎಷ್ಟೋ ದೋಣಿಗಳು ಮಗುಚಿಬಿದ್ದವು. ಆದರೆ, ಎಲ್ಲ ಅಡೆತಡೆೆಗಳನ್ನೂ ಮೀರಿ ಗೆಲುವಿನ ಹಾದಿ ಹಿಡಿಯುವಲ್ಲಿ ನಾನು ಯಶಸ್ವಿಯಾಗಿದ್ದೆ. ಇದೇ ವೇಗದಲ್ಲಿ ಸಾಗಿದರೆ, ನಾಲ್ಕು ನಿಮಿಷದಲ್ಲಿ ವಿನ್ನಿಂಗ್ ಸ್ಪಾಟ್ ತಲುಪುತ್ತೇನೆ ಎಂದುಕೊಂಡು ಒಮ್ಮೆ ಹಿಂತಿರುಗಿ ನೋಡಿದರೆ-
ಎರಡು ಫರ್ಲಾಂಗಿನಷ್ಟು ದೂರದಲ್ಲಿ, ಇಬ್ಬರು ನಾವಿಕರಿಂದ ಕೂಡಿದ್ದ ಹಾಯಿದೋಣಿಯೊಂದು ಮಗುಚಿಕೊಂಡಿರುವುದು ಕಾಣಿಸಿತು. ದೋಣಿಯನ್ನು ಹಿಡಿದುಕೊಳ್ಳಲು, ಅದನ್ನು ತೇಲುವಂತೆ ಮಾಡಲು ಒಬ್ಬ ಪ್ರಯತ್ನಿಸುತ್ತಿದ್ದ. ಮತ್ತೂಬ್ಬ ಎಲ್ಲಿದ್ದಾನೆ ಎಂದೇ ಕಾಣುತ್ತಿರಲಿಲ್ಲ. ಅವರಿಬ್ಬರೂ ಅಪಾಯಕ್ಕೆ ಸಿಕ್ಕಿಕೊಂಡಿದ್ದಾರೆ ಎಂದು ನನ್ನ ಒಳಮನಸ್ಸು ಚೀರಿ ಹೇಳಿತು. ದೋಣಿಯ ಮೇಲೆ ಹಾರುತ್ತಿದ್ದ ಧ್ವಜದ ಗುರುತಿನಿಂದ ಅವರು ಸಿಂಗಪುರದ ಸ್ಪರ್ಧಿಗಳು ಎಂದು ತಿಳಿಯಿತು. ಅವರ ಹೆಸರಾಗಲಿ, ಪರಿಚಯವಾಗಲಿ ನನಗಿರಲಿಲ್ಲ. ಅದಕ್ಕಿಂತ ಹೆಚ್ಚಾಗಿ, ಅವರ ದೋಣಿ ನಿಜಕ್ಕೂ ಮುಳುಗಿದೆಯಾ, ಅವರು ನಿಜಕ್ಕೂ ತೊಂದರೆಯಲ್ಲಿ ಸಿಕ್ಕಿಕೊಂಡಿದ್ದಾರಾ ಎಂಬುದೂ ಗೊತ್ತಿರಲಿಲ್ಲ. “ನಿಮಗೇನಾದರೂ ತೊಂದರೆಯಾಗಿದೆಯಾ?’ ಎಂದು ಜೋರಾಗಿ ಕೂಗಿ ಕೇಳಿದೆ. ಆ ಬಿರುಗಾಳಿ, ಅಲೆಗಳ ಅಬ್ಬರದ ಮಧ್ಯೆ ನನ್ನ ಧ್ವನಿ ನನಗೇ ಕೇಳಿಸಲಿಲ್ಲ.
ಈ ಸಂದರ್ಭದಲ್ಲೇ “ಅವರು ಅಪಾಯದಲ್ಲಿದ್ದಾರೆ. ತಕ್ಷಣ ಅಲ್ಲಿಗೆ ಹೋಗು…’ ಎಂದು ನನ್ನ ಒಳಮನಸ್ಸು ಎಚ್ಚರಿಸುತ್ತಲೇ ಇತ್ತು. ಈಗ ನನ್ನೆದುರು ಎರಡು ಆಯ್ಕೆಗಳಿದ್ದವು. ಒಂದು ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆಲ್ಲೋದು. ಎರಡು: ಅಪರಿಚಿತರ ಪ್ರಾಣ ಉಳಿಸಲು ಧಾವಿಸುವುದು…ಆ ಕ್ಷಣಕ್ಕೆ ಮತ್ತೂಮ್ಮೆ ಮನಸ್ಸು ಪಿಸುಗುಟ್ಟಿತು: “ಪದಕವನ್ನು ಮತ್ತೂಮ್ಮೆ ಗೆಲ್ಲಬಹುದು. ಆದರೆ ಅಪರಿಚಿತರ ಪ್ರಾಣ ಉಳಿಸುವ ಸದಾವಕಾಶ ಮತ್ತೆ ಮತ್ತೆ ಸಿಗೋದಿಲ್ಲ…’
ಆನಂತರದಲ್ಲಿ ನಾನು ಎರಡನೇ ಯೋಚನೆ ಮಾಡಲಿಲ್ಲ. ಕೆಲವೇ ಕ್ಷಣಗಳಲ್ಲಿ ದೋಣಿಯ ದಿಕ್ಕು ಬದಲಿಸಿಕೊಂಡು, ಮುಳುಗುತ್ತಿದ್ದ ಹಾಯಿದೋಣಿಯತ್ತ ಧಾವಿಸಿದೆ. ಹೌದು: ನನ್ನ ಅನುಮಾನ ನಿಜವಾಗಿತ್ತು. ಗುಂಪು ತಂಡವಾಗಿ ಸೈಲಿಂಗ್ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಇಬ್ಬರೂ ಅಪಾಯಕ್ಕೆ ಸಿಲುಕಿದ್ದರು. ಒಬ್ಬ ಮುಳುಗಿಹೋಗಿದ್ದ. ಇನ್ನೊಬ್ಬ, ದೋಣಿಯನ್ನೇ ಹಿಡಿದುಕೊಂಡು ಏದುಸಿರುಬಿಡುತ್ತಿದ್ದ. ಮೊದಲು ಅವನನ್ನು ಎಳೆದು ದೋಣಿಗೆ ಹಾಕಿಕೊಂಡೆ. ನಂತರ, ಮುಳುಗುತ್ತಿದ್ದವನನ್ನು ಹುಡುಕಿ ಅವನನ್ನೂ ನನ್ನ ದೋಣಿಗೆ ಹತ್ತಿಸಿಕೊಂಡೆ. ಈ ವೇಳೆಗೆ 15 ನಿಮಿಷಗಳು ಕಳೆದುಹೋಗಿದ್ದವು. ನನ್ನೊಂದಿಗೆ ಸ್ಪಧೆೆìಗೆ ಬಂದಿದ್ದವರೆಲ್ಲಾ ಗುರಿ ತಲುಪಿದ್ದರು. “ಇವನಿಗೇನಾಯ್ತು ಎಂಬ ಆತಂಕದೊಂದಿಗೆ, ನೌಕಾದಳದ ರಕ್ಷಣಾ ತಂಡದವರನ್ನೂ ಜೊತೆ ಮಾಡಿಕೊಂಡು ನನ್ನ ಕೋಚ್ ಹುಡುಕಿಕೊಂಡು ಬಂದಿದ್ದರು. ಈ ವೇಳೆಗೆ ಅಪಾಯಕ್ಕೆ ಸಿಲುಕಿದ್ದ ನಾವಿಕರ ಹೆಸರು ಜೋಸೆಫ್ ಜಾನ್ ಮತ್ತು ಶಾಹರ್ ಸ್ಸೂ ಎಂದೂ, ಅವರಿಬ್ಬರೂ ಸಿಂಗಪುರದವರೆಂದೂ ಗೊತ್ತಾಗಿತ್ತು. ನೀವು ಬರದೇ ಹೋಗಿದ್ರೆ ನಾವು ಜೀವಂತ ಉಳೀತಿರಲಿಲ್ಲ ಎಂದು ಅವರು ಕೃತಜ್ಞತೆಯ ಭಾವದಲ್ಲಿ ಹೇಳಿದರು. ಅವರನ್ನು ರಕ್ಷಣಾ ತಂಡದವರಿಗೆ ಒಪ್ಪಿಸಿ, ಇಬ್ಬರ ಜೀವ ಉಳಿಸಿದ ಸಾರ್ಥಕ ಭಾವದೊಂದಿಗೆ ಹಿಂತಿರುಗಿದೆ. ಈ ಬಾರಿ 23ನೆಯವನಾಗಿ ನಾನು ಗುರಿ ತಲುಪಿದ್ದೆ. ಇದೇ ಕಾರಣದಿಂದ, ಪಾಯಿಂಟ್ ಗಳಿಕೆಯಲ್ಲಿ ಹಿಂದುಳಿದು ಒಲಿಂಪಿಕ್ಸ್ ಪದಕದಿಂದ ವಂಚಿತನಾದೆ. ಆದರೆ, ಅತ್ಯುತ್ತಮ ಕ್ರೀಡಾ ಮನೋಭಾವ ಪ್ರದರ್ಶಿಸಿದ ಆಟಗಾರ ಎಂದು ಕರೆದ ಒಲಿಂಪಿಕ್ಸ್ ಸಮಿತಿ, ನನ್ನನ್ನು ವಿಶೇಷವಾಗಿ ಗೌರವಿಸಿತು…’
ಇದಿಷ್ಟೂ ವಿವರವನ್ನೂ ತಿಳಿದುಕೊಂಡಾಗ, ಲಾರೆನ್ಸ್ ಕುರಿತಂತೆ ಹೆಮ್ಮೆ, ಕನಿಕರ ಮತ್ತು ಕುತೂಹಲ ಉಂಟಾಯಿತು. “ಈ ಮನುಷ್ಯ ಈಗ ಹೇಗಿರಬಹುದು? ಇದ್ದಾನೋ ಇಲ್ಲವೋ? ಇದ್ದರೆ, ಏನು ಮಾಡುತ್ತಿರಬಹುದು? ಸಿಂಗಪುರದ ಆ ನಾವಿಕರೊಂದಿಗೆ ಈಗಲೂ ಸಂಪರ್ಕದಲ್ಲಿದ್ದಾನಾ? ಅಪರಿಚಿತರ ಜೀವ ಉಳಿಸಲು ಹೋಗಿ ಪದಕದಿಂದ ವಂಚಿತನಾದೆ ಎಂಬ ಕೊರಗಿನೊಂದಿಗೇ ಬದುಕುತ್ತಿದ್ದಾನೋ ಹೇಗೆ?’-ಇಂಥವೇ ಹಲವು ಪ್ರಶ್ನೆಗಳು ಪದೇ ಪದೆ ಕೈಜಗ್ಗತೊಡಗಿದವು. ಸುಮ್ಮನೇ ಒಮ್ಮೆ ಚೆಕ್ ಮಾಡೋಣ ಎಂದುಕೊಂಡೇ ಫೇಸ್‌ಬುಕ್‌ಗೆ ಹೋಗಿ Lawrence lemieux ಎಂದು ಹುಡುಕಿದರೆ, 20ಕ್ಕೂ ಹೆಚ್ಚು ಹೆಸರುಗಳು ಕಾಣಿಸಿದವು. ಎಲ್ಲ ಪ್ರಶ್ನೆಗಳನ್ನೂ ಒಟ್ಟು ಮಾಡಿ ಆ ಎಲ್ಲಾ ಹೆಸರುಗಳಿಗೂ ಸಂದೇಶ ಕಳುಹಿಸಿ, ಇವತ್ತಲ್ಲ ನಾಳೆ ಈ ಸಂದೇಶ ತಲುಪಬೇಕಾದವರನ್ನು ತಲುಪುತ್ತದೆ. ಆತ ಖಂಡಿತ ಉತ್ತರಕೊಡುತ್ತಾರೆ ಎಂಬ ನಿರೀಕ್ಷೆಯೊಂದಿಗೇ ಕುಳಿತೆ. 18 ದಿನಗಳ ನಂತರ ಕಡೆಗೂ ಉತ್ತರ ಬಂದೇಬಿಟ್ಟಿತು: ಅದರಲ್ಲಿ ಲಾರೆನ್ಸ್ ಬರೆದಿದ್ದರು: “ನಾನೀಗ ಕೆನಡಾದ ಸೆಬಾ ಬೀಚ್(Seba Beach) ಎಂಬ ಹಳ್ಳಿಯಲ್ಲಿದ್ದೀನಿ. ಅದು ಲಾಸ್ ಏಂಜಲೀಸ್‌ನಿಂದ 3000 ಕಿ.ಮೀ. ದೂರದಲ್ಲಿದೆ. ಸೈಲಿಂಗ್ ನ್ಪೋರ್ಟ್ಸ್ಗೆ ಕೋಚ್ ಆಗಿದ್ದೀನಿ. ಸಿಂಗಪುರದ ನಾವಿಕರೊಂದಿಗೆ ಟಚ್ ಇಲ್ಲ (ಬಹುಶಃ ಆ ಘಟನೆಯನ್ನು ಅವರು ಮರೆಯಲು ಬಯಸುತ್ತಿರಬಹುದು). ಆದರೆ, 30 ವರ್ಷಗಳ ಹಿಂದೆ, ಇಬ್ಬರು ಅಪರಿಚಿತರ ಜೀವ ಉಳಿಸಿದೆ ಎಂಬ ಸಾರ್ಥಕ ಭಾವ ಈಗಲೂ ನನ್ನ ಜೊತೆಗಿದೆ. ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಲಿಲ್ಲ ಎಂಬ ಫೀಲ್ ಯಾವತ್ತೂ ಕಾಡಿಲ್ಲ. ಒಬ್ಬ ವ್ಯಕ್ತಿಯನ್ನು ನಂಬಿಕೊಂಡು ಒಂದಿಡೀ ಕುಟುಂಬ ಬದುಕಿರುತ್ತೆ. ಹಾಗಾಗಿ, ನಾನವತ್ತು ಕೇವಲ ಎರಡು ಜೀವವನ್ನಷ್ಟೇ ಉಳಿಸಲಿಲ್ಲ. ಎರಡು ಕುಟುಂಬಗಳ ಸಂಭ್ರಮವನ್ನು ಹೆಚ್ಚಿಸಿದೆ. ಅಕಸ್ಮಾತ್ ನಾನವತ್ತು ಅಪರಿಚಿತರ ಪ್ರಾಣಕ್ಕಿಂತ ಕಣ್ಮುಂದಿನ ಪದಕವೇ ಮುಖ್ಯ ಎಂದು ಯೋಚಿಸಿದ್ದರೆ, ಈಗ ಪ್ರತಿಕ್ಷಣವೂ ಆತ್ಮಸಾಕ್ಷಿ ನನ್ನನ್ನು ಚುಚಾ¤ ಇರ್ತಿತ್ತು. ಮತ್ತೂಮ್ಮೆ ಅಂಥದೇ ಸಂದರ್ಭ ಬಂದರೂ ಈಗಲೂ ನಾನು ಪದಕಕ್ಕಿಂತ ಪ್ರಾಣಕ್ಕೇ ಮಹತ್ವ ಕೊಟ್ಟು ಜೀವ ಉಳಿಸಲು ಮುಂದಾಗುತ್ತೇನೆ. ನಾನು ಇಬ್ಬರ ಜೀವ ಉಳಿಸುವ ನೆಪದಲ್ಲಿ-ಪ್ರಕೃತಿಯ ವಿರುದ್ಧವೂ ಗೆದ್ದೆ. ಅದೇ ವೇಳೆಗೆ, ಲಕ್ಷಾಂತರ ಮಂದಿಯ ಹೃದಯವನ್ನೂ ಗೆದ್ದೆ! ಈ ಸೌಭಾಗ್ಯದ ಮುಂದೆ ಒಲಿಂಪಿಕ್ಸ್‌ನ ಚಿನ್ನದ ಪದಕ ತೀರಾ ಸಾಮಾನ್ಯದ್ದು ಅನ್ನಿಸಿಬಿಡಲ್ವಾ?
ನನ್ನ ಕಥೆ ಇತರೆ ಕ್ರೀಡಾಪಟುಗಳಿಗೂ ಪ್ರೇರಣೆಯಾಗಲಿ. “ಎಂಥ ಸಂದರ್ಭದಲ್ಲೂ ಗೆಲ್ಲುವುದೇ ಮುಖ್ಯ’ ಎಂಬ ಮನೋಭಾವ ಬೇಡ. ಮಾನವೀಯತೆಯನ್ನು ಎತ್ತಿಹಿಡಿಯುವುದೇ ಎಲ್ಲರ ಧ್ಯೇಯ ಆಗಲಿ’ -ಹೀಗೆ ಮುಗಿಯುತ್ತದೆ ಲಾರೆನ್ಸ್ ಮಾತು…
ಒಲಿಂಪಿಕ್ಸ್ ಇತಿಹಾಸದಲ್ಲಿ ಈವರೆಗೂ ಸಾವಿರಾರು ಮಂದಿ ಪದಕಗಳನ್ನು ಗೆದ್ದಿರಬಹುದು. ಆದರೆ, ಕ್ರೀಡಾ ಮನೋಭಾವ ಪ್ರದರ್ಶಿಸಿದ ಅಪ್ರತಿಮ ಆಟಗಾರ ಎಂಬ ಪ್ರಶಸ್ತಿಯನ್ನು 122 ವರ್ಷಗಳ ಒಲಿಂಪಿಕ್ಸ್ ಇತಿಹಾಸದಲ್ಲಿ ಕೇವಲ 12 ಜನ ಮಾತ್ರ ಪಡೆದಿದ್ದಾರೆ. ಆ 12 ಜನರಲ್ಲಿ ಲಾರೆನ್ಸ್ ಕೂಡ ಒಬ್ಬ. ಇಂಥ ಸೌಭಾಗ್ಯ ಅದೆಷ್ಟು ಜನಕ್ಕೆ ಸಿಗುತ್ತೆ ಹೇಳಿ…
ಎ.ಆರ್. ಮಣಿಕಾಂತ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ
Waqf Property: ಸಚಿವ ಜಮೀರ್ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್
ಐತಿಹಾಸಿಕ ಮುಡಗೇರಿ ಗ್ರಾಮ ನಿರ್ಲಕ್ಷ್ಯ; ಸೋದೆ ಅರಸರ ಕೋಟೆ ಪಳೆಯುಳಿಕೆ
BGT Series: ಚೇತೇಶ್ವರ ಪೂಜಾರ ಅಂದು ತಿಂದ ಪೆಟ್ಟಿನ ನೋವು ಭಾರತೀಯರು ಮರೆಯುವುದುಂಟೇ?
Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.