ಮೂಕ ಪ್ರಾಣಿಯ ನೋಟದಲಿತ್ತು ಅಮ್ಮನ ಮಮತೆ


Team Udayavani, Feb 13, 2019, 12:30 AM IST

b-10.jpg

ಬಾಗಿಲ ಮರೆಯಿಂದಲೇ ಇವರನ್ನು ನೋಡಿದ ಮುದುಕಿ- “ಯಾರ್‌ ನೀವು? ಯಾರ್‌ ಬೇಕಿತ್ತು? ನೀವ್ಯಾರೋ ಗೊತ್ತಿಲ್ಲ’ ಎಂದವಳೇ ಛಕ್ಕನೆ ಬಾಗಿಲು ಹಾಕಿಕೊಂಡೇಬಿಟ್ಟಳು. ಎರಡೇ  ನಿಮಿಷದಲ್ಲಿ ನಡೆದುಹೋದ ಈ ಘಟನೆಯಿಂದ ಎದುರು ಮನೆಯವರೂ ವಿಚಲಿತರಾದರು. 

ರಾಯಚೂರು ಸೀಮೆಯ ಹುಡುಗ ಬಸವ ಬಿರಾದಾರ್‌, ಬೆಂಗಳೂರಿನ ಎಂಎನ್‌ಸಿಯೊಂದರಲ್ಲಿ ಮೆನೇಜರ್‌ ಆಗಿದ್ದ. ಅದೇ ಕಂಪನಿಗೆ ಟ್ರೈನಿಂಗ್‌ಗೆಂದು ಬಂದಾಕೆ ತಮಿಳ್ನಾಡು ಕಡೆಯ ಸುನೀತಾ. ಈ ಪರಿಚಯವೇ ಕ್ರಮೇಣ ಸ್ನೇಹವಾಗಿ, ಪ್ರೇಮವಾಗಿ, ಮದುವೆಯಲ್ಲಿ ಕೊನೆಗೊಂಡಿತು. ಮದುವೆಯ ನಂತರ, ಅದೇ ಮೊದಲ ಬಾರಿಗೆ ಗಂಡನ ಮನೆಗೆ ಹೋದಾಗ, ರಾಯಚೂರಿನ ಸುಡುಸುಡು ಬಿಸಿಲು, ದೂರ ಪ್ರಯಾಣದ ಆಯಾಸ, ಹೊಂದಾಣಿಕೆ ಯಾಗದ ಹಳ್ಳಿಯ ಪರಿಸರವನ್ನು ಕಂಡು- “ಸಾರಿ ಕಣ್ರೀ, ನನ್ನ ದೇಹ ಪ್ರಕೃತಿಗೆ ದೂರ ಪ್ರಯಾಣ ಒಗ್ಗೊದಿಲ್ಲ. ಒಂದು ಕೆಲ್ಸ ಮಾಡುವಾ. ವರ್ಷಕ್ಕೆ ಎರಡು ಬಾರಿ ನಾನೂ ಬರ್ತೇನೆ. ಪ್ರತೀ ಎರಡು-ಮೂರು ತಿಂಗಳಿಗೊಮ್ಮೆ ನೀವೂ ಹೋಗಿ ಊರಲ್ಲಿರೋ ನಿಮ್ಮ ತಾಯೀನ ನೋಡ್ಕೊಂಡು ಬನ್ನಿ. ಜಾಸ್ತಿ ಹೊತ್ತು ಟ್ರಾವೆಲ್‌ ಮಾಡಿದ್ರೆ ನಾನು ಪೇಷೆಂಟ್‌ ಆಗಿಬಿಡ್ತೀನಿ. ಹಾಗಾಗಿ ತಪ್ಪು ತಿಳ್ಕೊàಬೇಡಿ ಪ್ಲೀಸ್‌’ ಎಂದಿದ್ದಳು ಸುನೀತಾ. ಮೋಹದ ಹೆಂಡತಿಯ ಮಾತಿಗೆ “ನೋ’ ಅನ್ನುವ ಗಂಡಸು ಯಾವನಿದ್ದಾನೆ? ಬಸವ ಬಿರಾದಾರ್‌ ಕೂಡ, ಹೆಂಡತಿಯ ಮಾತಿಗೆ ತಕ್ಷಣವೇ ಗೋಣು ಒಗೆದಿದ್ದ!

ಆದರೆ, ಊರಲ್ಲಿರುವ ಅಮ್ಮನಿಗೆ, ನೆರೆಹೊರೆಯಲ್ಲೇ ಇರುವ ಬಂಧುಗಳಿಗೆ ಹೀಗೆಲ್ಲ ಹೇಳಲಾದೀತೆ? ಅದಕ್ಕೇ- ಸುನೀತಾ ಕೆಲಸಕ್ಕೆ ಸೇರಿರುವ ಕಂಪನಿ ಹೊಸದು. ಅವಳಿಗೆ ಜಾಸ್ತಿ ರಜೆ ಸಿಗಲ್ಲ. ಹಾಗಾಗಿ ನಾವಿಬ್ರೂ ಪದೇಪದೆ ಊರಿಗೆ ಬರಲು ಆಗುವುದಿಲ್ಲ’ ಎಂದು ಬಿರಾದಾರ್‌ ಸುಳ್ಳು ಹೇಳಿದ್ದ. ಬಿರಾದಾರ್‌-ಸುನೀತಾ ದಂಪತಿಗೆ ಅತೀ ಅನ್ನುವಷ್ಟು ಮಹತ್ವಾ ಕಾಂಕ್ಷೆಯಿತ್ತು. ನಲವತ್ತು ವರ್ಷದ ನಂತರ ಇರಿ¤àವೋ ಇಲ್ಲವೋ ಯಾರಿಗೆ ಗೊತ್ತು? ಹಾಗಾಗಿ ಏನೇನು ಎಂಜಾಯ್‌ ಮಾಡಬೇಕು ಅನಿಸುತ್ತೋ ಅದನ್ನೆಲ್ಲ ಚಿಕ್ಕ ವಯಸ್ಸಲ್ಲೇ ಮಾಡಿ ಬಿಡಬೇಕು ಎಂದು ಇಬ್ಬರೂ ನಿರ್ಧರಿಸಿದ್ದರು. ಮದುವೆ ವಾರ್ಷಿ ಕೋತ್ಸವದ ನೆಪದಲ್ಲಿ ಫಾರಿನ್‌ಗೆ ಹೋಗಿ ಬಂದರು. ಅದಾಗಿ ಆರು ತಿಂಗಳು ಕಳೆಯುವಷ್ಟರಲ್ಲಿ ಕಾರ್‌ ಖರೀದಿಸಿದರು. ಹೇಗಿದ್ದರೂ ಇಬ್ಬರೂ ದುಡೀತಿದೀವಿ. ಒಬ್ಬರ ಸಂಬಳದಿಂದ ಸಾಲದ ಕಂತು ಕಟ್ಟಿ, ಮನೆಯ ಖರ್ಚು ನಿಭಾಯಿಸುವುದು, ಇನ್ನೊಬ್ಬರ ಸಂಬಳದಲ್ಲಿ  ಒಂದಿಷ್ಟನ್ನು ಪೋಷಕರಿಗೆ ಕೊಟ್ಟು, ಉಳಿದಿದ್ದರಲ್ಲಿ ಸೇವಿಂಗ್ಸ್‌, ಪಾರ್ಟಿ ಇತ್ಯಾದಿ ಖರ್ಚು ನಿಭಾಯಿಸುವುದೆಂದು ಮಾತಾಡಿ ಕೊಂಡರು.  

ಮೊದಲ ಒಂದು ವರ್ಷ ಎಲ್ಲವೂ ಲೆಕ್ಕಾಚಾರದಂತೆಯೇ ನಡೆಯಿತು. ಆದರೆ, ಎರಡನೇ ವರ್ಷದಲ್ಲಿ ಅದೇನೋ ಆರ್ಥಿಕ ಸಮಸ್ಯೆಯ ಕಾರಣದಿಂದ ಸುನೀತಾ ಕೆಲಸ ಮಾಡುತ್ತಿದ್ದ ಕಂಪನಿಯೇ ಮುಚ್ಚಿ ಹೋಯಿತು. ಮೂರು ತಿಂಗಳ ನಂತರ ಇನ್ನೊಂದು ಕಂಪನಿಯಲ್ಲಿ ಕೆಲಸವೇನೋ ಸಿಕ್ಕಿತು. ಆದರೆ, ಕಂಪನಿ ಹೊಸದೆಂಬ ಕಾರಣಕ್ಕೆ ಕಡಿಮೆ ಸಂಬಳ. ಸಾಲದ್ದಕ್ಕೆ ರಾತ್ರಿ ಪಾಳಿಯಲ್ಲಿ ಕೆಲಸ. ಟಿ.ವಿ., ಫ್ರಿಡ್ಜ್, ಕಾರು ಖರೀದಿಯ ಸಾಲದ ಕಂತುಗಳನ್ನು ತೀರಿಸಲೇಬೇಕಿತ್ತಲ್ಲ; ಹಾಗಾಗಿ ಸುನೀತಾ ಮರುಮಾತಿಲ್ಲದೆ ಹೊಸ ಕೆಲಸಕ್ಕೆ ಸೇರಿಕೊಂಡಳು. ಬಿರಾದಾರ್‌, ಬೆಳಗ್ಗೆ ಎಂಟು ಗಂಟೆಗೆ ಮನೆ ಬಿಟ್ಟರೆ ರಾತ್ರಿ ಎಂಟೂವರೆಗೆ ವಾಪಸಾಗುತ್ತಿದ್ದ. ಸುನೀತಾ, ರಾತ್ರಿ 8ರಿಂದ ಬೆಳಗ್ಗೆ ಆರರವರೆಗೂ ಕೆಲಸ ಮಾಡಿ ಸುಸ್ತಾಗುತ್ತಿದ್ದಳು. ಶಿಫ್ಟ್ ಕೆಲಸದ ಕಾರಣ ಒಂದೇ ಮನೆಯೊಳಗಿದ್ದೂ ಅಪರಿಚಿತರಂತೆ ಬಾಳಬೇಕಾದ ಅನಿವಾರ್ಯತೆ ಈ ದಂಪತಿಗೆ ಒದಗಿಬಂತು.

ಕಷ್ಟಗಳು ಬಂದರೆ, ಒಂದರ ಹಿಂದೊಂದು ಬಂದುಬಿಡ್ತವೆ ಎಂಬ ಮಾತಿದೆ. ಬಿರಾದಾರ್‌ ದಂಪತಿಯ ವಿಷಯದಲ್ಲೂ ಹೀಗೇ ಆಯಿತು. ಊರಿಂದ ಅದೊಮ್ಮೆ ನೆರೆಮನೆಯವರು ಕಾಲ್‌ ಮಾಡಿ, “ಬಸಣ್ಣಾ, ನಿಮ್‌ ಅವ್ವಗ ಅರಾಮಿಲ್ಲ. ಹ್ಯಂಗ್ಯಂಗೋ ಮಾಡಕತ್ತಾಳ, ಜಲ್ದೀ ಬಂದು ಆಸ್ಪತ್ರಿಗೆ ಒಯ್ಯಪಾ..’ ಅಂದರು. ಬಿರಾದಾರ್‌ ಲಗುಬಗೆಯಿಂದ ಊರಿಗೆ ಹೋಗಿ ಅಮ್ಮನನ್ನು ಕರೆತಂದ. ಆಕೆಯನ್ನು ಐದಾರು ರೀತಿಯಲ್ಲಿ ಚೆಕ್‌ ಮಾಡಿದ ವೈದ್ಯರು- “ನಿಮ್ಮ ತಾಯಿಗೆ ಅಲ್‌ಜೆçಮರ್‌ ಕಾಣಿಸಿಕೊಂಡಿದೆ. ವೃದ್ಧಾಪ್ಯದಲ್ಲಿ ಕೆಲವರಿಗೆ ಈ ಕಾಯಿಲೆ ಕಾಣಿಸಿಕೊಳ್ಳುತ್ತೆ. ಈ ಕಾಯಿಲೆ ಇದ್ದವರಿಗೆ ಆಗಿಂದಾಗ್ಗೆ ಮರೆವು ಕಾಡುತ್ತೆ. ಎಲ್ಲಿಗೆ ಹೋಗ್ತಾ ಇದೀನಿ, ಏನು ಮಾಡ್ತಾ ಇದೀನಿ, ಎದುರಿಗೆ ಇರೋದು ಯಾರು ಎಂಬಂಥ ವಿಷಯಗಳೇ ಮರೆತು ಹೋಗುತ್ತವೆ. ಕೆಲವೊಮ್ಮೆ, ಗೊತ್ತು ಗುರಿ ಇಲ್ಲದೆ ಎಲ್ಲಿಗಾದ್ರೂ ಹೋಗಿಬಿಡ್ತಾರೆ. ಯಾರದೋ ಮನೆಗೆ ಹೋಗಿ ಮತ್ತೇನೋ ಮಾತಾಡಿಬಿಡ್ತಾರೆ. ಅವರನ್ನು ಒಂಟಿಯಾಗಿ ಬಿಡೋದು ತಪ್ಪು. ನಿಮ್ಮ ಜೊತೇಲೇ ಉಳಿಸಿಕೊಳ್ಳಿ. ಹುಷಾರಾಗಿ ನೋಡಿಕೊಳ್ಳಿ…’ ಎಂದರು.

ಬಿರಾದಾರ್‌-ಸುನೀತಾ ದಂಪತಿಯ ಸಂಸಾರದಲ್ಲಿ ಸಮಸ್ಯೆಗಳು ಶುರುವಾಗಿದ್ದೇ ಆನಂತರದಲ್ಲಿ. ಅಮ್ಮನಿಗೆ ವಯಸ್ಸಾಗಿದೆ. ಕೆಲಸ ಮಾಡುವಷ್ಟು ಶಕ್ತಿ ಅವಳಿಗಿಲ್ಲ. ಮಿಗಿಲಾಗಿ, ಮರೆವಿನ ಕಾಯಿಲೆಯ ತೊಂದರೆ. ಇಂಥ ಸಂದರ್ಭದಲ್ಲಿ ಅವಳನ್ನು ಬಹಳ ಮುತುವರ್ಜಿ ಯಿಂದ ನೋಡಿಕೊಳ್ಳಬೇಕು ಎಂದು ಬಸವ ಬಿರಾದಾರ್‌ ಆಸೆ ಪಡು ತ್ತಿದ್ದ. ಆದರೆ, ಇಂಥ ಸೆಂಟಿಮೆಂಟ್‌ ಸುನೀತಾಗೆ ಇರಲಿಲ್ಲ. ಎರಡು- ತಿಂಗಳ ಹಿಂದಷ್ಟೇ ಅವರು ಅಪಾರ್ಟ್‌ಮೆಂಟ್‌ ಖರೀದಿಗೂ ಸಾಲ ಮಾಡಿದ್ದರು. ಪ್ರತಿ ನಾಲ್ಕು ತಿಂಗಳಿಗೆ ಇಂತಿಷ್ಟು ಎಂಬಂತೆ ಪ್ರತಿ ಐದು ವರ್ಷ ಹಣ ಪಾವತಿಸುವುದಾಗಿ ಒಪ್ಪಂದ ಮಾಡಿಕೊಂಡಿದ್ದರು. ಹೀಗಿರುವಾಗಲೇ ಹೊಸ ಖರ್ಚಿನ ರೂಪದಲ್ಲಿ ಬಿರಾದಾರ್‌ನ ತಾಯಿ ಬಂದುಬಿಟ್ಟಿದ್ದಳು.

ಅದಕ್ಕೂ ಮೊದಲೇ, ಶಿಫ್ಟ್ ಕೆಲಸದ ಮಧ್ಯೆ ಮನೆಯೊಳಗೆ ಏಕಾಂಗಿತನ ಕಾಡುತ್ತಿದೆ ಅನ್ನಿಸಿದಾಗ, ಒಂದು ನಾಯಿ ಸಾಕಲು ಸುನೀತಾ ಯೋಚಿಸಿ ಮುದ್ದಾದ ನಾಯಿಮರಿಯೊಂದನ್ನು ತಂದೂಬಿಟ್ಟಿದ್ದಳು. ಅದು, ಬಲುಬೇಗನೆ ಬಿರಾದಾರ್‌, ಸುನೀತಾಗೆ ಮಾತ್ರವಲ್ಲ; ಹೆಚ್ಚಿನ ವೇಳೆ ತನ್ನಷ್ಟಕ್ಕೆ ತಾನೇ ಮಾತಾಡುತ್ತಾ ಕೂತಿರುತ್ತಿದ್ದ ಬಿರಾದಾರ್‌ನ ತಾಯಿಯೊಂದಿಗೂ ಫ್ರೆಂಡ್‌ಶಿಪ್‌ ಬೆಳೆಸಿಕೊಂಡಿತ್ತು.

ಅದೊಂದು ದಿನ, ಯಾವುದೋ ಹೊಸ ಪ್ರಾಜೆಕ್ಟ್‌ನ ಕಾರಣಕ್ಕೆ, ಬೆಳಗ್ಗೆ ಬೆಳಗ್ಗೆಯೇ ಹೊರಟ ಬಿರಾದಾರ್‌- “ಸುನೀತಾ ಮನೆಗೆ ಬರಲಿಕ್ಕೆ ಒಂಬತ್ತು ಗಂಟೆ ಆಗುತ್ತೆ. ಅಷ್ಟರೊಳಗೆ ಕಾಫಿ ಮಾಡಿಕೊಂಡು ಕುಡಿಯಮ್ಮ’ ಎಂದು ಹೇಳಿಯೇ ಹೋಗಿದ್ದ. ಆಮೇಲೆ ಏನಾಯಿ ತೆಂದರೆ, ಈ ಮುದುಕಿಗೆ ಹಾಲನ್ನು ಕಾಯಿಸಲು ಇಟ್ಟಿರುವ ಸಂಗ ತಿಯೇ ಮರೆತು ಹೋಗಿದೆ. ಹಾಲು ಉಕ್ಕಿ, ಸ್ಟವ್‌ ಆರಿಹೋಗಿ, ಗ್ಯಾಸ್‌ನ ವಾಸನೆ ಎದುರು ಮನೆಗೂ ಬಡಿದಾಗ, ಅವರು ಓಡೋಡಿ ಬಂದು ಗ್ಯಾಸ್‌ ಆಫ್ ಮಾಡಿದ್ದರು. ಮರುಕ್ಷಣವೇ ಬಿರಾದಾರ್‌-ಸುನೀತಾಗೆ ಫೋನ್‌ ಮಾಡಿ, ಹೀಗ್‌ಹೀಗೆ ಆಗಿದೆ. ಏನಾದರೂ ಹೆಚ್ಚು ಕಡಿಮೆ ಆಗಿದ್ದರೆ ಗತಿ ಏನು? ಎಂದು ಆತಂಕದಿಂದ ಕೇಳಿದ್ದರು. 

ಕೆಲದಿನಗಳ ನಂತರ, ಹಾಲು ತರುವುದಾಗಿ ಸಮೀಪದ ಅಂಗಡಿಗೆ ಹೋದ ಅಜ್ಜಿ, ಮುಕ್ಕಾಲು ಗಂಟೆಯಾದರೂ ವಾಪಸ್‌ ಬರಲಿಲ್ಲ. ಅಮ್ಮ ಎಲ್ಲಿಗೆ ಹೋದಳು ಎಂದು ಬಸವ ಬಿರಾದಾರ್‌ ಹುಡುಕಿ ಹುಡುಕಿ ಸುಸ್ತಾದ. ಬೆಂಗಳೂರಲ್ಲಿದ್ದ ಬಂಧುಗಳಿಗೂ, ಪೊಲೀಸರಿಗೂ ವಿಷಯ ತಿಳಿಸೋಣ ಎಂದು ಲೆಕ್ಕ ಹಾಕುತ್ತಲೇ ಕಾರು ಹತ್ತುವ ವೇಳೆಗೆ, ಸೆಕ್ಯೂರಿಟಿಯವನು ಓಡೋಡಿ ಬಂದ. ಅವನ ಹಿಂದೆ ಅಮ್ಮನಿದ್ದಳು. “ಸಾರ್‌, ಅಮ್ಮನವರು ರೈಲು ನಿಲ್ದಾಣ ದಾಟಿ ಸ್ಪೀಡಾಗಿ ಹೋಗ್ತಾನೇ ಇದ್ರು. ಆ ಏರಿಯಾದಲ್ಲೇ ನಮ್ಮ ಮನೆ ಇರೋದು. ಇವರನ್ನೇ ಅರ್ಧಗಂಟೆ ಗಮನಿಸಿದೆ. ಏನೇನೋ ಬಡಬಡಿಸ್ತಿದ್ರು. ಏನಾದ್ರೂ ಎಡವಟ್ಟು ಮಾಡಿ ಕೊಂಡ್ರೆ ಗತಿಯೇನು ಅನ್ನಿಸಿ, ಹುಷಾರಾಗಿ ಕರೆದುಕೊಂಡು ಬಂದಿದೀನಿ…’ ಅಂದ. ವಿಷಯ ತಿಳಿದ ಬಂಧುಗಳೆಲ್ಲ ಮೈಮೇಲೆ ಏನಾದ್ರೂ ಒಡವೆ ಇದ್ದು, ಯಾರಾದ್ರೂ ಕಳ್ಳರು ನೋಡಿದ್ದಿದ್ರೆ ಗತಿ ಏನಾಗ್ತಿತ್ತು? ಲೈಫ‌ು ಬಹಳ ಕಷ್ಟ…ಎಂದರು.

ಮೂರನೇ ಸಲವಂತೂ, ಅಮ್ಮ ಮಾಡಿದ ಎಡವಟ್ಟಿನಿಂದ ಬಿರಾದಾರ್‌-ಸುನೀತಾ ದಂಪತಿಯೇ ಮನೆಯಿಂದ ಆಚೆ ಉಳಿಯುವಂತಾಯಿತು. ಏನಾಯಿತೆಂದರೆ, ಅದೊಂದು ಭಾನುವಾರ ಎದುರು ಮನೆಯವರೂ, ಬಿರಾದಾರ್‌ ದಂಪತಿಯೂ ಪಾರ್ಟಿಗೆ ಹೋಗಿದ್ದರು. ವಾಪಸ್‌ ಬಂದಾಗ ನಡುರಾತ್ರಿ 1 ಗಂಟೆಯಾಗಿತ್ತು. ಬೆಲ್‌ ಮಾಡಿದರೆ, ಬಾಗಿಲ ಮರೆಯಿಂದಲೇ ಇವರನ್ನು ನೋಡಿದ ಮುದುಕಿ- “ಯಾರ್‌ ನೀವು? ಯಾರ್‌ ಬೇಕಿತ್ತು? ನೀವ್ಯಾರೋ ಗೊತ್ತಿಲ್ಲ’ ಎಂದವಳೇ ಛಕ್ಕನೆ ಬಾಗಿಲು ಹಾಕಿಕೊಂಡೇಬಿಟ್ಟಳು. ಎರಡೇ ನಿಮಿಷದಲ್ಲಿ ನಡೆದುಹೋದ ಈ ಘಟನೆಯಿಂದ ಎದುರು ಮನೆಯವರೂ ವಿಚಲಿತರಾದರು. ಮರು ಕ್ಷಣವೇ ಸಾವರಿಸಿಕೊಂಡು, “ಪಾಪ, ಅಲ್‌ಜೆçಮರ್‌ ಹೇಗೆಲ್ಲಾ ತೊಂದರೆ ಕೊಡ್ತಿದೆ ನೋಡಿ. 

ಈ ನಡುರಾತ್ರಿ ಮತ್ತೆ ಬೆಲ್‌ ಮಾಡಿ ಅವರಿಗೆ ಡಿಸ್ಟರ್ಬ್ ಮಾಡೋದು ಬೇಡ. ಇವತ್ತು ನಮ್ಮಲ್ಲೇ ಉಳಿದು, ಬೆಳಗ್ಗೆ ಎದ್ದು ಹೋಗಿ…’ ಅಂದರು. ಅತ್ತೆಯಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಅವತ್ತು ಸುನೀತಾ ಅಸಮಧಾನದಿಂದಲೇ ಹೇಳಿಕೊಂಡಳು. ಕಡೆಗೊಮ್ಮೆ ಎದುರು ಮನೆಯವರು ಹೇಳಿದರು: “ಒಂದು ಕೆಲ್ಸ ಮಾಡಿ. ಅಮ್ಮನನ್ನು ಹತ್ತಿರದಲ್ಲಿರುವ ಯಾವುದಾದ್ರೂ ಆಶ್ರಮಕ್ಕೆ ಸೇರಿಸಿಬಿಡಿ. ಅಲ್ಲಿ ನರ್ಸ್‌ಗಳಿರ್ತಾರೆ. ಅವರು ಚೆನ್ನಾಗಿ ನೋಡಿಕೊಳ್ತಾರೆ. ಸ್ವಲ್ಪ ದಿನ ಅಲ್ಲಿರಲಿ. ಅಷ್ಟರೊಳಗೆ ಏನಾದ್ರೂ ಶಾಶ್ವತ ಪರಿಹಾರ ಹುಡುಕಿದ್ರಾಯ್ತು…’ ಈ ಮಾತುಕತೆ ಮುಗಿದ ನಾಲ್ಕೇ ದಿನಕ್ಕೆ, ಅಪಾರ್ಟ್‌ಮೆಂಟ್‌ಗೆ ಸಮೀಪವಿದ್ದ ಒಂದು ವೃದ್ಧಾಶ್ರಮಕ್ಕೆ ತಾಯಿಯನ್ನು ಬಿಟ್ಟು ಬಂದರು ಬಿರಾದಾರ್‌ ದಂಪತಿ.

“ರೀ, ನಾಯಿಮರಿ ಎಲ್ಲೋ ತಪ್ಪಿಸಿಕೊಂಡಿದೆ. ಬೆಳಗ್ಗೆ ಮನೆಯಿಂದ ಹೊರಗೆ ಹೋಯ್ತು. ಈಗ ನೋಡಿದ್ರೆ ಸಂಜೆ 6 ಗಂಟೆ ಆಗಿದೆ. ಇನ್ನೂ ಬಂದಿಲ್ಲ. ಎಲ್ಲಿ ಹೋಯೊ¤à ಏನೋ. ಯಾವುದಾದ್ರೂ ವೆಹಿಕಲ್‌ಗೆ ಸಿಕ್ಕೊಂಡಿºಡ್ತಾ? ಯಾರಾದ್ರೂ ಹಿಡ್ಕೊಂಡು ಹೋಗಿಬಿಟ್ರಾ? ಒಂದೂ ಗೊತ್ತಾಗ್ತಿಲ್ಲ. ಫೇಸ್‌ಬುಕ್‌ಲಿ ಒಂದು ಸ್ಟೇಟ್‌ಮೆಂಟ್‌ ಹಾಕಿ, ಫ್ರೆಂಡ್ಸ್‌ಗೂ ವಿಷಯ ತಿಳಿಸಿ. ಪೊಲೀಸರಿಗೂ ದೂರು ಕೊಡಿ ಪ್ಲೀಸ್‌. ಅದರ ಜೊತೆ ತುಂಬಾ ಅಟ್ಯಾಚ್‌ಮೆಂಟ್‌ ಇತ್ತು ನಂಗೆ. ಎಷ್ಟು ಖರ್ಚಾದ್ರೂ ಪರ್ವಾಗಿಲ್ಲ. ಅದನ್ನು ಹುಡುಕಿಸಿಕೊಡಿ ಪ್ಲೀಸ್‌…’ ಅದೊಂದು ಸಂಜೆ, ಸುನೀತಾ ಜೋರಾಗಿ ಅಳುತ್ತಲೇ ಹೀಗೆಲ್ಲಾ ಹೇಳಿ ಕೊಂಡಳು.

ನಾಯಿಮರಿಯೊಂದಿಗೆ ಸುನೀತಾ ಮಾತ್ರವಲ್ಲ, ಬಿರಾದಾರ್‌ ಕೂಡ ಅಟ್ಯಾಚ್‌ಮೆಂಟ್‌ ಬೆಳೆಸಿಕೊಂಡಿದ್ದ. ವಿಶೇಷ ತಳಿಯ, ದುಬಾರಿ ಬೆಲೆಯ ನಾಯಿಮರಿ ಅದು. ಅದಕ್ಕಿಂತ ಮಿಗಿಲಾಗಿ, ಮಕ್ಕಳಿಲ್ಲದ ಆ ಮನೆಯಲ್ಲಿ ಅದೊಂದು ಮಗುವಿನಂತೆಯೇ ಆಗಿಹೋಗಿತ್ತು. ಎರಡು ದಿನವಾದರೂ ನಾಯಿಮರಿ ಸಿಗದೇ ಹೋದಾಗ, ಅದು  ತಮ್ಮ ಬದುಕಿಗೆ ಎಷ್ಟೊಂದು ಮುಖ್ಯ ವಾಗಿತ್ತು, ಅದರೊಂದಿಗಿನ ಒಡನಾಟ ತಮ್ಮ ಬದುಕನ್ನು ಹೇಗೆಲ್ಲಾ ಬದಲಿಸಿತು ಎಂದೆಲ್ಲಾ ವಿವರಿಸಿ ಬಿರಾದಾರ್‌-ಸುನೀತಾ ದಂಪತಿ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಹಾಕಿದರು. ಪತ್ರಿಕೆಯಲ್ಲಿ ಜಾಹೀರಾತು ನೀಡಿದರು. ನಾಯಿಯನ್ನು ಹುಡುಕಿಕೊಟ್ಟವರಿಗೆ ಸೂಕ್ತ ಬಹುಮಾನವಿದೆ ಎಂಬ ಸಾಲಿನ ಜೊತೆಗೆ ತಮ್ಮ ಫೋನ್‌ ನಂಬರ್‌ ನೀಡಿದ್ದರು.

ಮರುದಿನ ಬೆಳಗ್ಗೆಯೇ ಬಿರಾದಾರ್‌ನ ಫೋನ್‌ ಮೊಳಗಿತು. ನೋಡಿದರೆ, ಅದು ವೃದ್ಧಾಶ್ರಮದಿಂದ ಬಂದ ಕಾಲ್‌. ಅಮ್ಮ ಏನಾದ್ರೂ ಎಡವಟ್ಟು ಮಾಡಿಕೊಂಡಾÛ ಎಂದು ಗಾಬರಿಯಲ್ಲೇ ಇವನು “ಹಲೋ’ ಅಂದ. ಆ ಕಡೆಯವರು- “ಸಾರ್‌, ಪೇಪರ್‌ ನೋಡಿದ್ವಿ. ಫೇಸ್‌ಬುಕ್‌ನೂ ಗಮನಿಸಿದ್ವಿ. ಮೂರು ದಿನದಿಂದ ನಾಯಿಮರಿ ಆಶ್ರಮದಲ್ಲಿ ನಿಮ್ಮ ತಾಯಿಯವರ ಜೊತೆಗೇ ಇದೆ. ಅದರ ಬಗ್ಗೆ ಯೋಚನೆ ಮಾಡಬೇಡಿ. ಅದು ಆರಾಮಾಗಿದೆ. ನಿಧಾನಕ್ಕೆ ಬನ್ನಿ ಪರ್ವಾಗಿಲ್ಲ…’ ಅಂದರು.

ತಾಯಿಯನ್ನು ವೃದ್ಧಾಶ್ರಮಕ್ಕೆ ಸೇರಿಸುವ ಸಂದರ್ಭದಲ್ಲಿ ನಾಯಿಯನ್ನು ಕಾರಿನಲ್ಲಿ ಕರೆದೊಯ್ದಿದ್ದ ಬಿರಾದಾರ್‌. ಅದೊಂದೇ ಭೇಟಿಯನ್ನು ನೆನಪಿಟ್ಟುಕೊಂಡು ಒಂಟಿಯಾಗಿ ಆಶ್ರಮ ತಲುಪಿದ ಆ ನಾಯಿಮರಿಯ ಜಾಣತನವನ್ನು ಬಿರಾದಾರ್‌ ದಂಪತಿ ಹೊಗಳಿದ್ದೇ ಹೊಗಳಿದ್ದು. ಮನೆಯಲ್ಲಿದ್ದ ಸಂದರ್ಭದಲ್ಲಿ ನಾಯಿಮರಿಗೆ ಹಾಲು ಹಾಕುವ, ರಾತ್ರಿ ವೇಳೆ ಅದಕ್ಕೆ ಬೆಡ್‌ಶೀಟ್‌ ಹೊದೆಸುವ ಕೆಲಸವನ್ನು ಬಿರಾದಾರ್‌ನ ತಾಯಿ ಮಾಡುತ್ತಿದ್ದಳು. ಅದನ್ನೇ ನೆನಪಿಸಿಕೊಂಡು ಹೋಗಿ ಬಿಟ್ಟಿದೆಯಲ್ಲ; ಎಂಥಾ ಚಾಲಾಕಿ ಅಲ್ವಾ ಅದು ಎಂದೆಲ್ಲ ಹೇಳುತ್ತಲೇ ಹೆಂಡತಿಯೊಂದಿಗೆ ಆಶ್ರಮಕ್ಕೆ ಬಂದ ಬಸವ ಬಿರಾದಾರ್‌. 

ಆಶ್ರಮದ ಸಿಬ್ಬಂದಿ ಮತ್ತು ಅಮ್ಮನೊಂದಿಗೆ ಮಾತಾಡುವುದು, ನಾಯಿಮರಿಯ ಜಾಣತನದ ಬಗ್ಗೆ ಮತ್ತೂಂದು ರೌಂಡ್‌ ಹೊಗಳುವುದು- ಇದೆಲ್ಲಾ ಹತ್ತಿಪ್ಪತ್ತು ನಿಮಿಷದಲ್ಲೇ ಮುಗಿದುಹೋಯಿತು. ಹುಂ, ಹೊರಡೋಣ್ವ ಎಂದು ಹೆಂಡತಿಗೂ ಎಚ್ಚರಿಸಿ, ಅಮ್ಮನಿಗೂ, ಆಶ್ರಮದ ಸಿಬ್ಬಂದಿಗೂ ಬೈ ಬೈ ಹೇಳಿ, ನಾಯಿಮರಿಯನ್ನು ಎತ್ತಿಕೊಂಡು ಕಾರ್‌ನ ಬಳಿ ಬಂದು, ಅದನ್ನು ಹಿಂದಿನ ಸೀಟ್‌ನಲ್ಲಿ ಕೂರಿಸಿ, ಡ್ರೈವರ್‌ ಸೀಟಿನಲ್ಲಿ ಕೂತ ಬಿರಾದಾರ್‌.

ಕಾರ್‌ ಚಲಿಸುವ ಮೊದಲೇ, ಕಿಟಕಿಯಿಂದ ಜಿಗಿದ ನಾಯಿಮರಿ, ರೊಯ್ಯನೆ ಓಡುತ್ತಾ ಬಂದು ಆಶ್ರಮದ ಒಳಗಿದ್ದ ಮುದುಕಿಯ ಬಳಿ ಕೂತುಬಿಟ್ಟಿತು. ಅಯ್ಯಯ್ಯೋ, ಇದೇನಾಗಿ ಹೋಯ್ತು ಅಂದುಕೊಂಡೇ ಬಿರಾದಾರ್‌ ದಂಪತಿ ಗಡಿಬಿಡಿಯಿಂದ ಕಾರ್‌ ಇಳಿದು ಆಶ್ರಮದ ಕಡೆ ಹೆಜ್ಜೆ ಹಾಕುತ್ತಿ ದ್ದಾಗಲೇ ಅಲ್ಲಿದ್ದವರೊಬ್ಬರು ಹೇಳಿದರು: “ನಾಯಿಮರಿಗೆ ಇರುವಷ್ಟು ಪ್ರೀತಿ, ಈ ಮುದುಕಿಯ ಮಕ್ಕಳಿಗೆ ಇರಬಾರದಿತ್ತೆ…’

ಎ.ಆರ್‌. ಮಣಿಕಾಂತ್‌

ಟಾಪ್ ನ್ಯೂಸ್

Rural-india-utsat

ಜಾತಿ ಹೆಸರಲ್ಲಿ ಕೆಲವರು ಸಮಾಜದಲ್ಲಿ ವಿಷ ಹಂಚುತ್ತಿದ್ದಾರೆ: ಪ್ರಧಾನಿ ಮೋದಿ

CKB-Sudhakar

Congress Govt: ಆರು ತಿಂಗಳಲ್ಲಿ ಡಿ.ಕೆ.ಶಿವಕುಮಾರ್‌ ಸಿಎಂ ಆಗ್ತಾರೆ: ಸಂಸದ ಡಾ.ಕೆ.ಸುಧಾಕರ್‌

BYv-SMG

ಕಾಂಗ್ರೆಸ್‌ನಲ್ಲಿ ಸಿದ್ದು ವರ್ಸಸ್‌ ಯುದ್ಧ: ಬಿ.ವೈ.ವಿಜಯೇಂದ್ರ ಟೀಕೆ

CHN-Social

Chamarajnagar: ಸಾಮಾಜಿಕ ಬಹಿಷ್ಕಾರ: ಗ್ರಾಮಸ್ಥರ ಸಭೆ ನಡೆಸಿದ ಅಧಿಕಾರಿಗಳು

Priyank-Kharghe

ನಾವು ಬೀದಿಗಿಳಿದರೆ ಬಿಜೆಪಿಯವರು ಮನೆ ಖಾಲಿ ಮಾಡಬೇಕು: ಸಚಿವ ಪ್ರಿಯಾಂಕ್‌

SMG-Meggan

Shivamogga: ಮೆಗ್ಗಾನ್‌ ಆಸ್ಪತ್ರೆಯಲ್ಲಿ ಬಾಣಂತಿ ಸಾವು

letter-Gove

Bill Pending: ದಯಾಮರಣ ಕೋರಿ ಗುತ್ತಿಗೆದಾರನಿಂದ ರಾಜ್ಯಪಾಲರು, ಸಿಎಂಗೆ ಪತ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಂಚೆ ಅಣ್ಣನಿಗೆ ಒಂದು ಅಕ್ಕರೆಯ ಪತ್ರ

Postman ಅಂಚೆ ಅಣ್ಣನಿಗೆ ಒಂದು ಅಕ್ಕರೆಯ ಪತ್ರ

ಅಪ್ಪಾ ಹೆದರಬೇಡ, ನಿನ್ನ ಕಾಲಾಗಿ ನಾನಿರ್ತೇನೆ

ಅಪ್ಪಾ ಹೆದರಬೇಡ, ನಿನ್ನ ಕಾಲಾಗಿ ನಾನಿರ್ತೇನೆ

MUNNA

ಕೆಮರಾ ಕಣ್ಣು ಮಿಟುಕಿಸುತ್ತಾ “ಕಮಾಲ್‌”ಮಾಡಿದ!

ಕಷ್ಟ ಕೊಡುವ ದೇವರು ಖುಷಿಯನ್ನೂ ಕೊಡುತ್ತಾನೆ

ಕಷ್ಟ ಕೊಡುವ ದೇವರು ಖುಷಿಯನ್ನೂ ಕೊಡುತ್ತಾನೆ

ನಮ್ಮ ತಪ್ಪುಗಳಿಗೆ ಬದುಕಿದ್ದಾಗಲೇ ಶಿಕ್ಷೆ ಆಗಿಬಿಡುತ್ತದೆ

ನಮ್ಮ ತಪ್ಪುಗಳಿಗೆ ಬದುಕಿದ್ದಾಗಲೇ ಶಿಕ್ಷೆ ಆಗಿಬಿಡುತ್ತದೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Kejiriwal

Delhi Election: ಆಪ್‌ ಸೋಲಿಸಲು ಬಿಜೆಪಿ ಜತೆ ಕಾಂಗ್ರೆಸ್‌ ಮೈತ್ರಿ: ಕೇಜ್ರಿವಾಲ್‌

Rural-india-utsat

ಜಾತಿ ಹೆಸರಲ್ಲಿ ಕೆಲವರು ಸಮಾಜದಲ್ಲಿ ವಿಷ ಹಂಚುತ್ತಿದ್ದಾರೆ: ಪ್ರಧಾನಿ ಮೋದಿ

CKB-Sudhakar

Congress Govt: ಆರು ತಿಂಗಳಲ್ಲಿ ಡಿ.ಕೆ.ಶಿವಕುಮಾರ್‌ ಸಿಎಂ ಆಗ್ತಾರೆ: ಸಂಸದ ಡಾ.ಕೆ.ಸುಧಾಕರ್‌

BYv-SMG

ಕಾಂಗ್ರೆಸ್‌ನಲ್ಲಿ ಸಿದ್ದು ವರ್ಸಸ್‌ ಯುದ್ಧ: ಬಿ.ವೈ.ವಿಜಯೇಂದ್ರ ಟೀಕೆ

CHN-Social

Chamarajnagar: ಸಾಮಾಜಿಕ ಬಹಿಷ್ಕಾರ: ಗ್ರಾಮಸ್ಥರ ಸಭೆ ನಡೆಸಿದ ಅಧಿಕಾರಿಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.