ಕೈ ಕಾಲು ಇಲ್ಲದಿದ್ರೂ ಕಡಲ್ಗಾಲುವೆ ಈಜಿದ!
Team Udayavani, Jan 17, 2021, 7:00 AM IST
ಒಂದು ರಾಜ್ಯ. ಅಲ್ಲಿನ ರಾಜನಿಗೆ ತನ್ನ ಪ್ರಜೆಗಳನ್ನು ಪರೀಕ್ಷಿಸುವ ಮನಸ್ಸಾಯಿತು. ಒಂದು ಮುಂಜಾನೆ, ಪರಿಚಾರಕರನ್ನೆಲ್ಲ ಬಿಟ್ಟು ಒಬ್ಬನೇ ಮುಖ್ಯರಸ್ತೆಗೆ ಬಂದ. ಹಾಗೆ ಬಂದವನು, ರಸ್ತೆಯ ಮಧ್ಯಕ್ಕೆ ಒಂದು ಭಾರೀ ಬಂಡೆಯನ್ನು ಉರುಳಿಸಿಬಿಟ್ಟ. ಮುಂದೇ ನಾಗುವುದೋ ನೋಡೋಣವೆಂದು ಸಮೀಪದ ಪೊದೆಯಲ್ಲಿ ಅಡಗಿ ಕೂತ. ಹೇಳಿ ಕೇಳಿ ಅದು ಮುಖ್ಯರಸ್ತೆ. ವ್ಯಾಪಾರ, ವಹಿವಾಟಿನ ಕಾರಣಕ್ಕೆ ಆ ರಸ್ತೆಯಲ್ಲಿ ದಿನಕ್ಕೆ ನೂರಾರು ಜನ ಓಡಾಡುತ್ತಿದ್ದರು. ರಸ್ತೆಯ ಮಧ್ಯೆಯೇ ಬಂಡೆ ಬಿದ್ದಿತ್ತಲ್ಲ; ಆ ಕಾರಣದಿಂದ ಎಲ್ಲರಿಗೂ ತೊಂದರೆಯಾಯಿತು. ಅವರೆಲ್ಲ ಈ ಅವ್ಯವಸ್ಥೆಗಾಗಿ ಅಧಿಕಾರಿಗಳನ್ನು ನಿಂದಿಸಿದರು. ರಾಜನನ್ನು ಬೈದರು. ಆದರೆ ಯಾರೊಬ್ಬರೂ ಆ ಬಂಡೆಯನ್ನು ಬೇರೊಂದು ಕಡೆಗೆ ಸರಿಸುವ ಪ್ರಯತ್ನ ಮಾಡಲಿಲ್ಲ.
ಹೀಗಿದ್ದಾಗಲೇ, ತರಕಾರಿಯ ಬುಟ್ಟಿ ಹೊತ್ತಿದ್ದ ರೈತನೊಬ್ಬ ಅದೇ ದಾರಿಯಲ್ಲಿ ಬಂದ. ನಡುರಸ್ತೆಯಲ್ಲಿ ಬಿದ್ದಿದ್ದ ಬಂಡೆಗಲ್ಲನ್ನು ಒಮ್ಮೆ ದಿಟ್ಟಿಸಿದ. ಇದರಿಂದ ಹಾದೀಲಿ ಹೋಗುವವರಿಗೆಲ್ಲ ತೊಂದರೆ ಎಂದು ತನ್ನೊಳಗೇ ಗೊಣಗಿಕೊಂಡ. ಅನಂತರ ರಸ್ತೆಯ ಒಂದು ಬದಿಯಲ್ಲಿ ಬುಟ್ಟಿ ಇಟ್ಟು ಬಂದವನು- ಸತತ ನಾಲ್ಕು ಗಂಟೆಗಳ ಕಾಲ ಏನೇನೋ ಹರಸಾಹಸ ಮಾಡಿ ಕಡೆಗೂ ಆ ಬಂಡೆಯನ್ನು ರಸ್ತೆಯಿಂದಾಚೆಗೆ ನೂಕಿಯೇ ಬಿಟ್ಟ. ಅನಂತರ- ಉಫ್ ಎಂದು ನಿಟ್ಟುಸಿರು ಬಿಟ್ಟು ತರಕಾರಿಗಳ ಬುಟ್ಟಿ ಎತ್ತಿಕೊಳ್ಳಲು ಹೋದವನಿಗೆ, ಆ ಬಂಡೆಯಿದ್ದ ಜಾಗದಲ್ಲಿ ಒಂದು ಪುಟ್ಟ ಗಂಟು ಕಾಣಿಸಿತು. ಕುತೂಹಲದಿಂದಲೇ ಕೈಗೆತ್ತಿಕೊಂಡ. ಆ ಗಂಟಿನಲ್ಲಿ ಚಿನ್ನಾಭರಣಗಳಿದ್ದವು. ಹಣವೂ ಇತ್ತು. ಜತೆಗೇ ರಾಜನ ಅಂಕಿತ ವಿದ್ದ ಒಂದು ಪತ್ರವಿತ್ತು. ಅದರಲ್ಲಿ ರಾಜ ಬರೆದಿದ್ದ: “ಈ ರಸ್ತೆಯಲ್ಲಿ ರುವ ಹೆಬ್ಬಂಡೆಯನ್ನು ಬೇರೆಡೆಗೆ ನೂಕಿದ ಶ್ರಮಜೀವಿಗೆ ಈ ಹಣ, ಆಭರಣಗಳೆಲ್ಲ ಅರ್ಪಿತ…’
* * *
ಆಗಷ್ಟೇ ಸಂಜೆಯಾಗುತ್ತಿತ್ತು. ಮನೆಯ ಕಸ ಗುಡಿಸಿ ವರಾಂಡಕ್ಕೆ ಬಂದು ಕೂತ ಅಮ್ಮನ ಮುಂದೆ ನಿಂತ ಆ ಮಗು ಹೇಳಿತು: “ಅಮ್ಮ, ಅಮ್ಮ, ಏನ್ ಗೊತ್ತಾ? ನೀನಿವತ್ತು ತುಂಬಾ ಚಂದ ಕಾಣಾ¤ ಇದೀಯ.’ ಮಗುವಿನ ಮಾತು ಕೇಳಿ ಅಮ್ಮನಿಗೆ ಗಲಿಬಿಲಿ, ಕುತೂಹಲ. ಅವಳು ಬೆರಗಿನಿಂದಲೇ ಪ್ರಶ್ನಿಸಿದಳು: “ಹೌದಾ? ಥ್ಯಾಂಕ್ಸ್. ಅದ್ಸರಿ, ನಾನು ಯಾಕಪ್ಪಾ ಚಂದ ಕಾಣಿಸ್ತೆ ನಿಂಗೆ?’
ಮಗು ಅಮ್ಮನನ್ನೇ ಖುಷಿಯಿಂದ ನೋಡುತ್ತ ಹೇಳಿತು: “ಯಾಕೆ ಗೊತ್ತಾ? ನೀನು ಬೆಳಗ್ಗಿಂದ ನನಗೆ ಹೊಡೆದಿಲ್ಲ, ಬೈದಿಲ್ಲ, ರೇಗಾಡಿಲ್ಲ, ಅದಕ್ಕೆ!’
ಈ ಮಾತು ಕೇಳಿ, ಶಿಸ್ತಿನ ನೆಪದಲ್ಲಿ ಮಗುವನ್ನು ದಿನವೂ ಥಳಿಸುತ್ತಿದ್ದ ಆ ತಾಯಿ ಆ ಕಡೆ ತಿರುಗಿ ಕಣ್ಣೊರೆಸಿಕೊಂಡಳು.
* * *
ಇದು 1994ರ ನಡೆದ ಘಟನೆ. ಫ್ರಾನ್ಸ್‌ನ ಫಿಲಿಪ್ ಕ್ರೊಯಿಝಾನ್ ಎಂಬಾತ ಟಿ.ವಿ. ಆಂಟೆನಾ ಸರಿಪಡಿಸಲೆಂದು ಮಹಡಿ ಹತ್ತಿದ. ಆ ಸಂದರ್ಭದಲ್ಲಿ ಹೈವೋಲ್ಟೇಜ್‌ನ ವೈರ್ ತಗುಲಿ ಭಾರೀ ಶಾಕ್ ಹೊಡೆಯಿತು. ಪರಿಣಾಮ, ಕೈ ಕಾಲಿನ ನರಗಳೆಲ್ಲ ಸ್ವಾಧೀನ ಕಳೆದುಕೊಂಡವು. ಚಿಕಿತ್ಸೆಗೆಂದು ಆಸ್ಪತ್ರೆಗೆ ಹೋದರೆ, ಬದುಕಲೇಬೇಕೆಂಬ ಆಸೆ ಇದ್ರೆ- ಕೈ ಕಾಲು ಕತ್ತರಿಸಬೇಕಾಗುತ್ತದೆ ಎಂದು ವೈದ್ಯರು ಹೇಳಿದರು. ಫಿಲಿಪ್ ಬೆಚ್ಚಲಿಲ್ಲ. “ಹಾಗೇ ಮಾಡಿ’ ಅಂದ. ಮುಂದೆ ಮರದ ಕಾಲು ಹಾಕಿಸಿಕೊಂಡ. ಕೃತಕ ಕೈಗೆ ತನ್ನನ್ನು ಒಗ್ಗಿಸಿಕೊಂಡ. ಆಮೇಲೆ ಅವನು ಸುಮ್ಮನಾಗಲಿಲ್ಲ. ಈಜು ಕಲಿತ. ಈಜು ಚಾಂಪಿಯನ್‌ಶಿಪ್‌ಗ್ಳಲ್ಲಿ ಭಾಗವಹಿಸಿದ. ಸೋತ, ಗೆದ್ದ. ಗೆದ್ದ, ಸೋತ. ಅನಂತರ, 20 ಮೈಲಿ ದೂರದ ಇಂಗ್ಲಿಷ್ ಕಡಲ್ಗಾಲುವೆಯನ್ನು 24 ಗಂಟೆಗಳಲ್ಲಿ ಈಜುವ ಹೊಸದೊಂದು ಸಾಹಸಕ್ಕೆ ಕೈಹಾಕಿದ. ಮುಂದೆ, ಆ ಪ್ರಯತ್ನದಲ್ಲಿ ಗೆದ್ದೂ ಬಿಟ್ಟ. ಕೃತಕ ಕೈಕಾಲುಗಳನ್ನು ಹೊಂದಿಯೂ ಈತ ಇಂಥದೊಂದು ಮಹತ್ಸಾಧನೆ ಮಾಡಿದ್ದು ಕಂಡು ಎಲ್ಲರಿಗೂ ಅಚ್ಚರಿ. ಈ ಸಾಧನೆಯ ಹಿಂದಿನ ಗುಟ್ಟೇನು ಎಂಬ ಪ್ರಶ್ನೆಗೆ ಫಿಲಿಪ್ ಹೀಗೆಂದಿದ್ದ: “ಕೃತಕ ಕೈ-ಕಾಲುಗಳು ಜತೆ ಯಾದ ಅನಂತರ ನನ್ನ ಮುಂದೆ ಎರಡು ಆಯ್ಕೆಗಳಿದ್ದವು. ಮೊದಲಿ ನದು- ಹೇಡಿಯಂತೆ ಆತ್ಮಹತ್ಯೆ ಮಾಡಿಕೊಳ್ಳುವುದು. ಎರಡನೆ ಯದು- ಬದುಕಿನಲ್ಲಿ ಕ್ಷಣಕ್ಷಣವೂ ಸೆಣಸುತ್ತಾ ಧೀರನಂತೆ ಬದುಕು ವುದು… ನಾನು 2ನೆಯದನ್ನು ಆಯ್ಕೆ ಮಾಡಿಕೊಂಡೆ. ಗೆಲ್ಲಬೇಕು ಎಂದು ನಿರ್ಧರಿಸಿದ್ದೇ ನನ್ನ ಸಾಧನೆಯ ಗುಟ್ಟು…’
* * *
ಅದೊಂದು ಪುಟ್ಟ ಕುಟುಂಬ. ಎಲ್ಲ ಮನೆಗಳಂತೆ ಇಲ್ಲೂ ಸಹ ಸರಸ, ವಿರಸ, ಜಗಳ, ರಾಜಿ… ಎಲ್ಲವೂ ಇತ್ತು. ಗಂಡ ಸ್ವಲ್ಪ ಸೂಕ್ಷ್ಮ ಮನಸ್ಸಿನವನು. ಸ್ವಲ್ಪ ಜಬರ್ದಸ್ತಿನವನೂ ಹೌದು. ಪ್ರತೀ ಸಂದರ್ಭದಲ್ಲಿ ಅವನ ಮಾತೇ ನಡೆಯಬೇಕಿತ್ತು. ಅದೊಮ್ಮೆ ಯಾವುದೋ ವಿಷಯಕ್ಕೆ ಗಂಡ-ಹೆಂಡತಿಗೆ ಜಗಳವಾಯಿತು. ಅರ್ಧಗಂಟೆಯ ಬಿಸಿಬಿಸಿ ಮಾತುಗಳ ಅನಂತರ ಯಥಾಪ್ರಕಾರ ಗಂಡನೇ ಗೆದ್ದ. ಆಗ ಹೆಂಡತಿ, ತಮಾಷೆಗೆಂಬಂತೆ ಹೇಳಿದಳು: “ಸತ್ತ ಅನಂತರ ನನಗಂತೂ ಖಂಡಿತವಾಗ್ಲೂ ಸ್ವರ್ಗಾನೇ ಸಿಗೋದು. ಯಾಕೆಂದರೆ, ನರಕದಲ್ಲಿನ ಎಲ್ಲ ಯಾತನೆಯನ್ನೂ ನಾನಿಲ್ಲಿ ದಿನವೂ ಅನುಭವಿಸ್ತಾ ಇದೀನಲ್ಲ…’
ಮೊದಲೇ ಸೂಕ್ಷ್ಮ ಮನಸ್ಸಿನವನಾಗಿದ್ದ ಆ ಗಂಡ ಮಹಾರಾಯ ಈ ಮಾತನ್ನು ತುಂಬಾ ಸೀರಿಯಸ್ಸಾಗಿ ತಗೊಂಡ. ಪರಿಣಾಮ, ಅವತ್ತಿನಿಂದಲೇ ಆ ಸಂಸಾರದ ಸಾಮರಸ್ಯ ಹಾಳಾಗಿ ಹೋಯಿತು!
* * *
ಅದು ಕೊಳೆಗೇರಿಯಲ್ಲಿದ್ದ ಒಂದು ಕುಟುಂಬ. ಗಂಡ, ಹೆಂಡತಿ ಮತ್ತು ಆರು ಮಕ್ಕಳು! ಅದೊಂದು ದಿನ ಮಹಾನಗರ ಪಾಲಿಕೆಯ ಅಧಿಕಾರಿಗಳು ನಗರಾಭಿವೃದ್ಧಿ ಮತ್ತು ಒತ್ತುವರಿ ತೆರವು ಎಂಬ ಕಾರಣಗಳನ್ನು ನೀಡಿ ಈ ಕುಟುಂಬದವರಿದ್ದ ಪ್ರದೇಶದ ಮೇಲೆ ಬುಲ್ಡೋಜರ್ ಬಿಟ್ಟರು. ತತ್ಕಲವಾಗಿ, ಇಡೀ ಕೊಳೆಗೇರಿಯ ಜನ ಬೀದಿಪಾಲಾದರು. ಒಂದಿಡೀ ವಾರ, ಇವರಿಗೆ ಎಲ್ಲೂ ಕೆಲಸ ಸಿಗಲಿಲ್ಲ. ಪರಿಣಾಮ, ಒಂದೆರಡಲ್ಲ, ನಾಲ್ಕು ದಿನ ಉಪವಾಸ ಬದುಕಿದರು. ಇನ್ನು ತಡೆಯಲು ಸಾಧ್ಯವೇ ಇಲ್ಲ ಅನ್ನಿಸಿದಾಗ ಆ ಕುಟುಂಬದ ತಾಯಿ ಒಂದು ಬಂಗಲೆಯ ಮುಂದೆ ನಿಂತು ದೀನಳಾಗಿ ಕೂಗಿಕೊಂಡಳು: “ಅಮ್ಮಾ, ಅನ್ನ ಹಾಕಿ, ನಾಲ್ಕು ದಿನದಿಂದ ಊಟ ಮಾಡಿಲ್ಲ. ಮಕ್ಕಳೆಲ್ಲ ಹಸಿದಿವೆ ತಾಯೀ…’
ಆ ಬಂಗಲೆಯಲ್ಲಿ ಇದ್ದಾಕೆ ಹೃದಯವಂತ ಹೆಣ್ಣು. ಆಕೆ ಮನೆಯಿಂದ ಹೊರಬಂದು ಎದುರಿಗಿದ್ದವರನ್ನು ನೋಡಿದಳು. ಅವರ ಸಂಕಟದ ಕಥೆ ಕೇಳಿ ಮರುಗಿದಳು. ಅನಂತರ ಒಳಗೆ ಹೋಗಿ ಅನ್ನ-ಸಾರು ತಂದಿಟ್ಟಳು. ಅನ್ನ ಕಂಡಾಕ್ಷಣ, ಆ ಮಕ್ಕಳ ಕಣ್ಣಲ್ಲಿ ಸಾವಿರ ಮಿಂಚು. ದೊಡ್ಡ ಖುಷಿ. ಅವು ಪಾತ್ರೆಗೆ ಕೈಹಾಕುವ ಮುನ್ನವೇ ಎಲ್ಲರನ್ನೂ ತಡೆದ ಅಮ್ಮ, ಅಲ್ಲಿದ್ದ ಊಟವನ್ನು ಎರಡು ಭಾಗವಾಗಿ ವಿಂಗಡಿಸಿದಳು. ಒಂದು ಭಾಗವನ್ನು ತನ್ನ ಮಾಸಲು ಸೆರಗಿನೊಳಗೆ ತುಂಬಿಕೊಂಡು ಸರಸರನೆ ಎದ್ದು ಹೋದಳು. ಇತ್ತ ಮಕ್ಕಳೆಲ್ಲ ಊಟಕ್ಕೆ ಶುರು ಮಾಡಿದವು. ಐದು ನಿಮಿಷಗಳ ಅನಂತರ ಹಿಂದಿರುಗಿದ ಆ ತಾಯಿಯನ್ನು ಕಂಡು ಬಂಗಲೆಯ ಒಡತಿಗೆ ಅನುಮಾನ. ಆಕೆ ಕೇಳಿದಳು: “ಎಲ್ಲಿ ಹೋಗಿದ್ದೆ? ಅನ್ನ ತಗೊಂಡು ಹೋಗಿದ್ದು ಯಾರಿಗೆ? ಗಂಡನಿಗಾ ಅಥವಾ…’
ಈ ಪ್ರಶ್ನೆಗೆ ಕೊಳೆಗೇರಿಯ ಆ ಹೆಂಗಸು ಹೇಳಿದಳು: “ನಮ್ಮ ಜತೆಗಿದ್ದ ಇನ್ನೊಂದು ಕುಟುಂಬ ಪಕ್ಕದ ರಸ್ತೇಲಿದೆ. ಅವರಿಗೂ ಆರು ಮಕ್ಕಳು! ಅವರಿಗೂ ಊಟ ಇರಲಿಲ್ಲ. ಅವರಿಗೂ ಸ್ವಲ್ಪ ಕೊಟ್ಟು ಬಂದೆ ತಾಯಿ…’
ಬಂಗಲೆಯ ಒಡತಿ ತತ್‌ಕ್ಷಣ ಉದ್ಗರಿಸಿದಳು: ಬಡವರು ಹೃದಯ ಶ್ರೀಮಂತರು….
* * *
ಒಬ್ಬ ದೊಡ್ಡ ಬ್ಯುಸಿನೆಸ್‌ಮಾನ್. ಅವನಿಗಿದ್ದ ಅನುಕೂಲಗಳಿಗೆ ಮಿತಿಯೇ ಇರಲಿಲ್ಲ. ಆತನಿಗೆ ದೇಶ ಸುತ್ತುವ ಹಂಬಲ. ಹೀಗೆ ಸುತ್ತಲು ತನ್ನದೇ ಆದ ಒಂದು ಹಡಗು ಇದ್ದರೆ ಚೆಂದ ಅನ್ನಿಸಿತು. ಆತ ಮತ್ತಷ್ಟು ಶ್ರದ್ಧೆಯಿಂದ ದುಡಿದು ಒಂದು ಹಡಗು ಖರೀದಿಸಿಯೇಬಿಟ್ಟ. ಈ ಹಡಗಿನ ಮೂಲಕ ದೇಶ- ವಿದೇಶಗ ಳಿಂದ ಬಗೆಬಗೆಯ ವಸ್ತುಗಳನ್ನು ತಂದು ಮಾರಾಟ ಮಾಡುತ್ತಿದ್ದ. ಅವನ ಸಿರಿತನದ ಗ್ರಾಫ್ ದಿನೇದಿನೇ ಮೇಲೇರಿತು. ಹೀಗಿದ್ದಾಗ ಒಮ್ಮೆ ಏನಾಯಿತೆಂದರೆ, ಬಿರುಗಾಳಿಗೆ ಸಿಕ್ಕಿ ಹಡಗು ಅಪಾರ ಹಾನಿಗೆ ಒಳಗಾಯಿತು. ಪರಿಣಾಮ, ಈ ಶ್ರೀಮಂತ ಬೀದಿಗೆ ಬಿದ್ದ. ತುತ್ತು ಅನ್ನಕ್ಕೂ ತತ್ವಾರ ಅನ್ನುವಂತಾಯಿತು. ಆದರೆ ಆಗಲೂ ಅವನು ಆತ್ಮವಿಶ್ವಾಸ ಕಳೆದುಕೊಳ್ಳಲಿಲ್ಲ. ಬದುಕಿಗೆ ತೀರಾ ಅಗತ್ಯ ಅನ್ನಿಸಿದಾಗ ಕೂಲಿಯಾಳಿನಂತೆ ದುಡಿದ. ಪರಿಚಿತರ ಅಪಹಾಸ್ಯಕ್ಕೆ ಗುರಿಯಾದ. ಈತ ಭಿಕಾರಿಯಂತಾದ ಎಂಬ ಸುದ್ದಿ ತಿಳಿದ ತತ್‌ಕ್ಷಣ, ಬಂಧುಗಳೆಲ್ಲ ತಾವಾಗಿಯೇ ದೂರವಾದರು. ಈ ಯಾವ ಬೆಳವಣಿಗೆಯಿಂದಲೂ ಆತ ಹೆದರಲಿಲ್ಲ. ಬೆದರಲೂ ಇಲ್ಲ. ಶ್ರದ್ಧೆಯಿಂದ ದುಡಿದು ಕಡೆಗೊಂದು ದಿನ ಮತ್ತೆ ಹೊಸ ಹಡಗು ಖರೀದಿಸಿ, ಬ್ಯುಸಿನೆಸ್ ಆರಂಭಿಸಲು ಹೊರಟೇಬಿಟ್ಟ! ಆಗ, ಅದೇ ಪರಿಚಿತರು ಬೆರಗಾಗಿ ಕೇಳಿದರು. ಇಂಥ ಮನಃಸ್ಥಿತಿ ನಿನಗೆ ಬಂದಿದ್ದಾದರೂ ಹೇಗೆ?
ಈ ಶ್ರೀಮಂತ ವ್ಯಾಪಾರಿ ನಸುನಕ್ಕು ಹೇಳಿದ: “ಜೀವನದ ಹೋರಾಟದಲ್ಲಿ ಸೋತಿದ್ದೇನೆ ಎಂಬ ಸಂಗತಿಯನ್ನು ನನ್ನ ಒಳಮನಸ್ಸಿಗೆ ನಾನು ಅಪ್ಪಿತಪ್ಪಿ ಕೂಡ ಹೇಳಲಿಲ್ಲ. ಇವತ್ತಿನ ನನ್ನ ಗೆಲುವಿಗೆ ಇದೇ ಮುಖ್ಯ ಕಾರಣ…’
– ಎ.ಆರ್.ಮಣಿಕಾಂತ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು
Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ
Banahatti: ತಾಂತ್ರಿಕ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಬದ್ಧಳಾಗಿದ್ದೇನೆ: ಉಮಾಶ್ರೀ
Road Mishap; ದ್ವಿಚಕ್ರ ವಾಹನ-ಲಾರಿ ನಡುವೆ ಅಪಘಾತ: ದಂಪತಿ ಸಾವು
ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.