ಜಡೆ ಇಲ್ಲದವಳು ಸೌಂದರ್ಯ ಜಗವ ಗೆದ್ದಳು!
Team Udayavani, Apr 17, 2022, 6:55 AM IST
ಈ ಅಪರೂಪದ, ವಿಚಿತ್ರ ಕಾಯಿಲೆಯ ಹೆಸರು ಅಲೋಪೇಸಿಯಾ. ಇದ್ದಕ್ಕಿದ್ದಂತೆಯೇ ಜತೆಯಾಗುವ ಈ ಸಮಸ್ಯೆಯಿಂದ ತಲೆಗೂದಲು ಉದುರಿ ಹೋಗುತ್ತದೆ. ಯಾವ ಔಷಧ, ಆಪರೇಶನ್, ತೈಲ, ಮಾತ್ರೆ-ಸಿರಪ್‌ನ ಮೊರೆ ಹೋದರೂ ತಲೆಗೂದಲು ಬರುವುದಿಲ್ಲ. ಕಾರಣ, ಈ ಸಮಸ್ಯೆಗೆ ಶಾಶ್ವತ ಚಿಕಿತ್ಸೆಯೇ ಇಲ್ಲ. ಹಾಗಾಗಿಯೇ, ಅಲೋಪೇಸಿಯಾ ಎಂದು ತಿಳಿದಾಕ್ಷಣ ತಲೆ ನೋವು ಜತೆಯಾಗುತ್ತದೆ. ಕೂದಲು ಉದುರಿದಾಗ, ತಲೆ ಹೋದಾಗ ಆಗುವಷ್ಟೇ ಸಂಕಟವಾಗುತ್ತದೆ. ಈ ಸಮಸ್ಯೆಗೆ ಸಿಕ್ಕ ಹೆಣ್ಣುಮಕ್ಕಳು ದಿಕ್ಕು ತೋಚದೆ ಕಂಗಾಲಾಗುತ್ತಾರೆ. ಡಿಪ್ರಶನ್‌ಗೆ ತುತ್ತಾಗಿ, ಆತ್ಮಹತ್ಯೆಯ ಬಗ್ಗೆ ಯೋಚಿಸುತ್ತಾರೆ. ವಾಸ್ತವ ಹೀಗಿರುವಾಗ, ಅಲೋಪೇಸಿಯಾವನ್ನು ಸಮರ್ಥವಾಗಿ ಎದುರಿಸಿದ, ಬಾಲ್ಡಿ ಆಗಿದ್ದುಕೊಂಡೇ ಮಿಸೆಸ್ ಇಂಡಿಯಾ, ಮಿಸೆಸ್ ಪುಣೆ, ಮಿಸೆಸ್ ಯೂನಿವರ್ಸ್ ಕಿರೀಟವನ್ನು ಗೆದ್ದು, ಬಾಲ್ಡಿ ಈಸ್ ಬ್ಯೂಟಿಫುಲ್ ಎಂದು ಸಾರಿದ ಕೇತಕಿ ಜಾನಿ ಎಂಬ ದಿಟ್ಟೆ, ತನ್ನ ಬಾಳಕಥೆಯನ್ನು ಹೇಳಿಕೊಂಡಿದ್ದಾರೆ.
“ನಮ್ಮದು ಗುಜರಾತ್. ಎಂ.ಎ. ಬಿ.ಎಡ್ ಪದವೀಧರೆಯಾದ ನಾನು, ಉದ್ಯೋಗದ ಕಾರಣದಿಂದ ಮುಂಬಯಿಗೆ, ಅಲ್ಲಿಂದ ಪುಣೆಗೆ ಬಂದವಳು ಇಲ್ಲೇ ನೆಲೆನಿಂತೆ. 1993ರಲ್ಲಿ ಮದುವೆಯಾಯಿತು. ಬದುಕಿಗೆ ಇಬ್ಬರು ಮಕ್ಕಳೂ ಬಂದರು. ಸರಕಾರಿ ನೌಕರಿ, ಮುದ್ದಾದ ಮಕ್ಕಳು, ಪ್ರೀತಿಸುವ ಗಂಡ, ಶುಭ ಹಾರೈಸುವ ಪೋಷಕರು, ಬಂಧುಗಳು- ವಾಹ್, ಲೈಫ್ ಈಸ್ ಬ್ಯೂಟಿ ಫುಲ್ ಎಂದೆಲ್ಲ ಸಂಭ್ರಮಿಸುತ್ತಲೇ 2010ರಲ್ಲಿ 40ನೇ ಹುಟ್ಟುಹಬ್ಬವನ್ನೂ ಆಚರಿಸಿಕೊಂಡೆ. ಹೀಗಿದ್ದಾಗಲೇ ಅದೊಮ್ಮೆ ತಲೆ ಬಾಚುವಾಗ ಹೆಚ್ಚು ಕೂದಲು ಉದುರಿದಂತೆ ಕಾಣಿಸಿತು. ಅವತ್ತು ಏನೂ ಅನ್ನಿಸಲಿಲ್ಲ. ಮರು ದಿನವೂ ಕೂದಲುದುರಿದಾಗ ಗಾಬರಿಯಾಯಿತು.
ಕನ್ನಡಿಯನ್ನು ಎದುರಿಗಿಟ್ಟು ನೋಡಿದರೆ ತಲೆಯ ಒಂದು ಭಾಗದಲ್ಲಿ ನೀಟ್ ಆಗಿ ಶೇವ್ ಮಾಡಿದಂತೆ ಕಾಣಿಸಿತು. ತತ್‌ಕ್ಷಣ ಪರ ಮಾ ಪ್ತರು ಎಂದುಕೊಂಡಿದ್ದ ಕೆಲವರಿಗೆ ವಿಷಯ ತಿಳಿಸಿದೆ. ಅವರು ಕೊಟ್ಟ ಸಲಹೆ ಗಳನ್ನೆಲ್ಲ ಪಾಲಿಸಿದೆ. ಪ್ರಯೋಜನವಾಗಲಿಲ್ಲ. ಗಾಬರಿಯಿಂದಲೇ ವೈದ್ಯರ ಬಳಿಗೆ ಧಾವಿಸಿದೆ. “ಊಟದಲ್ಲಿ ವ್ಯತ್ಯಾಸ, ಗಡಸು ನೀರಿನ ಬಳಕೆಯಂಥ ಕಾರಣಕ್ಕೆ ಹೀಗಾಗಿದೆ. 15 ದಿನ ಮಾತ್ರೆ ತಗೊಳ್ಳಿ, ಸರಿ ಹೋಗ್ತದೆ’ ಎಂದು ಅವರು ಸಲಹೆ ಮಾಡಿದರು.
ಬ್ಯಾಡ್ ಲಕ್. ವೈದ್ಯರ ಮಾತು ನಿಜವಾಗಲಿಲ್ಲ. ಮೂರು ತಿಂಗಳು ಕಳೆಯು ವುದರೊಳಗೆ ತಲೆಕೂದಲೆಲ್ಲಾ ಉದುರಿ ಬಾಲ್ಡಿ ಆಗಿಬಿಟ್ಟೆ. ಕನ್ನಡಿಯಲ್ಲಿ ಮುಖ ನೋಡಿಕೊಂಡರೆ, ವಿಕಾರಿಯೊಬ್ಬಳನ್ನು ಕಂಡಂತೆ ಆಯಿತು. ಮತ್ತೆ ವೈದ್ಯರ ಬಳಿಗೆ ಧಾವಿಸಿದೆ. ಹಲವು ಸುತ್ತಿನ ಪರೀಕ್ಷೆಗಳ ಅನಂತರ ಇದು ಅಲೋ ಪೇಸಿಯಾ. ಈ ಸಮಸ್ಯೆ ಬರುವುದಕ್ಕೆ ನಿರ್ದಿಷ್ಟ ಕಾರಣ ಗಳಿಲ್ಲ ಎಂದು ಗೊತ್ತಾಯಿತು. ಹೇಗಾದರೂ ಸರಿ, ಮತ್ತೆ ಪೊದೆ ಗೂದಲಿನ ಒಡತಿಯಾಗಬೇಕು ಎಂಬ ಆಸೆಯಿಂದ ಆಸ್ಪತ್ರೆಗಳ ಮೆಟ್ಟಿಲು ಹತ್ತಿ ಇಳಿದೆ. ಆಲೋಪತಿ, ಯುನಾನಿ, ಆಯುರ್ವೇದ, ಹೋಮಿಯೋಪತಿ, ನಾಟಿ ವೈದ್ಯ- ಹೀಗೆ ಎಲ್ಲ ಬಗೆಯ ಚಿಕಿತ್ಸೆಗೂ ತಲೆ ಕೊಟ್ಟೆ. ಇದರಿಂದ ಆಸ್ಪತ್ರೆ ಗಳ ಖಜಾನೆ ಭರ್ತಿಯಾಯಿತೇ ವಿನಃ ನನಗೆ ತಲೆಗೂದಲು ಬರಲಿಲ್ಲ. ಈ ಸಂದರ್ಭದಲ್ಲಿಯೇ- ಅಲೋಫೇಸಿಯಾಗೆ ಶಾಶ್ವತ ಚಿಕಿತ್ಸೆ ಇಲ್ಲ ಎಂಬ ಇನ್ನೊಂದು ಸತ್ಯವೂ ಗೊತ್ತಾಯಿತು.
ಈ ಸತ್ಯ ಡಾಕ್ಟರ್‌ಗಳಿಗೆ ಮೊದಲೇ ಗೊತ್ತಿರುತ್ತದೆ. ಅಂಥ ಸಂದರ್ಭ ದಲ್ಲಿ ರೋಗಿಗೆ ವಾಸ್ತವವನ್ನು ತಿಳಿಸಬೇಕು. ಬಾಲ್ಡಿ ಆಗಿದ್ದೂ ಖುಷಿಯಿಂದ ಬದುಕಬಹುದಲ್ಲ ಎಂದು ಧೈರ್ಯ ಹೇಳಬೇಕು. ಆದರೆ, ಹೆಚ್ಚಿನ ವೈದ್ಯರು ಆ ಕೆಲಸ ಮಾಡಲಿಲ್ಲ. ಬದಲಾಗಿ “ಅಯ್ಯೋ, ಇನ್ನೂ 40 ವರ್ಷ ಅಂತೀರಾ. ಇಷ್ಟು ಚಿಕ್ಕ ವಯಸ್ಸಿಗೇ ಬಾಲ್ಡಿ ಆಗಿಬಿಟ್ರಿ. ಹೆಂಗಸರು ಬಾಲ್ಡಿ ಆಗಿದ್ದು ಕೊಂಡು ಬದುಕೋಕಾಗುತ್ತಾ? ಜಡೆ ಇಲ್ಲದೇ ಜೀವಿಸಲು ಸಾಧ್ಯವಾ? ತತ್‌ಕ್ಷಣ ಚಿಕಿತ್ಸೆ ತಗೊಳ್ಳಿ. ಆಲ್ಟರ್‌ನೆàಟಿವ್ ಆಗಿ ಒಂದು ವಿಗ್ ತಗೊಳ್ಳಿ’ ಎನ್ನುತ್ತಿದ್ದರು. ಅನಂತರ ಗೊತ್ತಾದದ್ದು ಏನೆಂದರೆ, ಹೀಗೆ ಸಲಹೆ ಮಾಡುತ್ತಿದ್ದ ವೈದ್ಯರು, ಮೆಡಿಕಲ್ ಮಾಫಿಯಾ ಜತೆ, ವಿಗ್ ತಯಾರಿಕಾ ಕಂಪೆನಿಗಳ ಜತೆ ಶಾಮೀಲಾಗಿದ್ದರು!
ನನಗೆ ದೊರಕುತ್ತಿದ್ದ ವೈದ್ಯಕೀಯ ಚಿಕಿತ್ಸೆಯ ಬಗ್ಗೆಯೂ ನಾಲ್ಕು ಮಾತು ಹೇಳಬೇಕು. ಕೂದಲನ್ನು ಮರಳಿ ಪಡೆಯಬೇಕು ಎಂಬ ಹಂಬಲದಿಂದ ಮಾತ್ರೆ ನುಂಗಿದೆ. ಸಿರಪ್ ಕುಡಿದೆ. ಆಯಿಲ್ ಹಚ್ಚಿಕೊಂಡೆ. ಸ್ಟಿರಾಯ್ಡ್ ಮಾತ್ರೆ ಗಳನ್ನು ನುಂಗಿದೆ. ಕಣ್ಣ ಹುಬ್ಬಿನ ಬಳಿ ಇಂಜೆಕ್ಷನ್ ತಗೊಂಡರೆ ತಲೆಗೂದಲು ಬರ್ತದೆ ಎಂಬ ಮಾತು ನಂಬಿ 100ಕ್ಕೂ ಹೆಚ್ಚು ಇಂಜೆಕ್ಷನ್ ತಗೊಂಡೆ. ಪ್ರಯೋ ಜನವಾಗಲಿಲ್ಲ. ಆ ಸಂದರ್ಭದಲ್ಲಿ ವೈದ್ಯರ ಎದುರಿಗೇ ಅಳುತ್ತಿದ್ದೆ . ನನಗೆ ಕೆಟ್ಟ ವೈದ್ಯರು ಸಿಕ್ಕಂತೆಯೇ ಒಳ್ಳೆಯ ವೈದ್ಯರೂ ಸಿಕ್ಕಿದ್ದರು. “ಜಾಸ್ತಿ ಮಾತ್ರೆ ತೆಗೆದುಕೊಂಡರೆ ಕಿಡ್ನಿಗೆ ತೊಂದರೆ ಆಗುತ್ತೆ. ಅಲೋಫೇಸಿಯಾಗೆ ಶಾಶ್ವತ ಚಿಕಿತ್ಸೆ ಇಲ್ಲ. ಬಾಲ್ಡಿ ಯಾಗಿ ಬದುಕೋದ್ರಲ್ಲಿ ತಪ್ಪೇನಿದೆ?’ ಎಂದು ಕೆಲವರು ಬುದ್ಧಿ ಹೇಳಿದರು.
ಸಮಾಜ, ಸುತ್ತಲಿನ ಜನ ನನ್ನನ್ನು ನೋಡಿದ ರೀತಿಯಿತ್ತಲ್ಲ; ಅದು ಮತ್ತೂ ಘೋರ. ನಾನು ಬಾಲ್ಡಿ ಎಂದು ಗೊತ್ತಾದಾಗ ಹಲವರು ಮಾತು ಬಿಟ್ಟರು. ಕೆಲವರು- ತಿರುಪತಿಗೆ ಹೋಗಿ ಬಂದ್ಯಾ? ಅನ್ನುತ್ತಿದ್ದರು. ಮತ್ತೆ ಕೆಲವರು- “ಇದ್ದಕ್ಕಿದ್ದಂತೆ ಬಾಲ್ಡಿ ಆಗಿದ್ದೀಯಾ. ಕ್ಯಾನ್ಸರ್ ಇರಬೇಕು, ಬೇಗ ಚೆಕ್ ಮಾಡು ಎನ್ನುತ್ತಿದ್ದರು. ಈ ಹಿಂದೆ ದೇವರಿಗೆ ಹರಕೆ ಕಟ್ಕೊಂಡು ತೀರಿಸಿಲ್ಲ ಅನಿಸ್ತದೆ, ಅದಕ್ಕೇ ಈಗ ಶಿಕ್ಷೆ ಆಗಿದೆ, ಅನ್ನುತ್ತಿದ್ದರು. ಮತ್ತೆ ಕೆಲವರು ದನಿ ತಗ್ಗಿಸಿ- “ಬಾಲ್ಡಿ ಮಾಡಿಸಿಕೊಂಡಿದ್ದಾಳಲ್ಲ; ಅವಳ ಗಂಡ ಸತ್ತುಹೋದೊರೇ ಹೇಗೆ?’ ಅನ್ನುತ್ತಿದ್ದರು. ಇನ್ನೊಂದಷ್ಟು ಜನ ನನ್ನನ್ನು ಕಂಡಾಕ್ಷಣ ಬೋಳಿ ಬರ್ತಾ ಇದ್ದಾಳೆ ಎಂದು ಪಿಸುಗುಟ್ಟಿ ಬದಿಗೆ ಸರಿದು ನಿಲ್ಲುತ್ತಿದ್ದರು. ಬಾಲ್ಡಿ ಎಂಬ ಒಂದೇ ಕಾರಣಕ್ಕೆ ಮದುವೆ, ನಾಮಕರಣ, ಗೃಹಪ್ರವೇಶದಂಥ ಶುಭ ಕಾರ್ಯಗಳಿಂದ ನನ್ನನ್ನು ದೂರವಿಟ್ಟರು. ಅಷ್ಟೇ ಅಲ್ಲ, ನನ್ನ ಮಕ್ಕಳನ್ನು ಕರೆದು-“ನಿಮ್ಮ ಅಮ್ಮನಿಗೆ ಅಂಟುರೋಗ ಇರಬಹುದು. ಆಕೆಯಿಂದ ದೂರವೇ ಇದ್ದುಬಿಡಿ, ಇಲ್ಲವಾದರೆ ನಿಮಗೂ ಆ ಕಾಯಿಲೆ ಬರಬಹುದು’ ಎಂದು ಕಿವಿ ಚುಚ್ಚಿದರು. ಜನರ ಗೇಲಿ, ಚುಚ್ಚುಮಾತುಗಳಿಂದ ತಪ್ಪಿಸಿಕೊಳ್ಳಲೆಂದೇ ಬೆಳಗ್ಗೆ 8 ಗಂಟೆಗೇ ಆಫೀಸ್‌ಗೆ ಹೋಗಿ, ರಾತ್ರಿ 8ಗಂಟೆಗೆ ಅಲ್ಲಿಂದ ಹೊರ ಬೀಳುತ್ತಿದ್ದೆ. ಬೋಳುತಲೆಯನ್ನು ಮರೆಮಾಚಲು ವಿಗ್ ಖರೀದಿಸಿದ್ದೆನಾದರೂ, ಅದನ್ನು ಧರಿಸಲು ಮನಸ್ಸಾಗಲಿಲ್ಲ. ಸಮಾಧಾನದ ಸಂಗತಿಯೆಂದರೆ, ನಮ್ಮ ಆಫೀಸಿನ ಜನ ನನ್ನನ್ನು ಲಘುವಾಗಿ ನೋಡಲಿಲ್ಲ.
ನೆರೆಹೊರೆಯವರ ಚುಚ್ಚು ಮಾತು, ವಾಸಿಯಾಗದ ಕಾಯಿಲೆ, ಸಮಾಜದ ವಕ್ರನೋಟ ನನ್ನನ್ನು ಹಣ್ಣುಮಾಡಿದವು. ಹೀಗೆ ಬದುಕಿರುವುದಕ್ಕಿಂದ ಸಾಯುವುದೇ ಮೇಲು ಅನ್ನಿಸಿಬಿಟ್ಟಿತು. ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿಬಿಟ್ಟೆ. ಅದೊಂದು ರಾತ್ರಿ ವೇಲ್(ದುಪಟ್ಟಾ)ತೆಗೆದೆ. ಕುರ್ಚಿ ಎಳೆದೆ. ಫ್ಯಾನ್‌ಗೆ ನೇತು ಹಾಕಿ ಕೊಂಡು ಸತ್ತು ಹೋಗಬೇಕು ಅಂದು ಕೊಂಡವಳು, ಕಡೆಯದಾಗಿ ಎಂಬಂತೆ ನಿದ್ರೆಗೆ ಜಾರಿದ್ದ ಮಕ್ಕಳ ಕಡೆಗೆ ನೋಡಿದೆ. ಆಗಲೇ ಹೀಗೊಂದು ಯೋಚನೆ ಬಂತು. ಬೆಳಗ್ಗೆ ಎಚ್ಚರಾದಾಗ ಮಕ್ಕಳು, ಫ್ಯಾನ್‌ನಲ್ಲಿ ನೇತಾಡುತ್ತಿರುವ ಅಮ್ಮನನ್ನು ನೋಡುತ್ತಾರೆ. ತಮ್ಮ ಮೃದು ಕೈಗಳಿಂದ ತಣ್ಣಗಾಗಿರುವ ನನ್ನ ಕಾಲುಗಳನ್ನು ಮುಟ್ಟುತ್ತಾರೆ. ಅನಂತರದಲ್ಲಿ ನೆರೆಹೊರೆಯವರು, ಪೊಲೀಸರು ಬರುತ್ತಾರೆ. ಅವರಿಗೆಲ್ಲ ಈ ಮಕ್ಕಳು ಏನು ಉತ್ತರ ಕೊಡಬಲ್ಲರು? ಅಮ್ಮ ಫ್ಯಾನ್‌ಗೆ ನೇತುಬಿದ್ದಿದ್ದ ದೃಶ್ಯವನ್ನು ಅವರು ಎಂದಾದರೂ ಮರೆಯಲು ಸಾಧ್ಯವಾ? ಮುಂದೆ ನನ್ನ ಮಕ್ಕಳಿಗೆ ಯಾರು ಗತಿ? ಎಲ್ಲ ಸಮಸ್ಯೆಗೂ ಆತ್ಮ ಹತ್ಯೆ ಯೇ ಪರಿಹಾರವೇ?-ಆ ಕ್ಷಣದಲ್ಲಿಯೇ ನಿರ್ಧರಿಸಿದೆ: ನಾನು ಸಾಯು ವುದಿಲ್ಲ. ನಿಂದನೆಗೆ ಅಂಜುವುದಿಲ್ಲ. ಏನಾದರೂ ಸಾಧಿಸಿ ತೋರಿಸುತ್ತೇನೆ…
ಹೀಗೆಲ್ಲ ಸಮಾಧಾನ ಹೇಳಿಕೊಂಡರೂ ಮನಸ್ಸಿನ ಮೂಲೆಯಲ್ಲಿ ನೋವು ಉಳಿದೇ ಇತ್ತು. ಕನ್ನಡಿಯ ಮುಂದೆ ನಿಂತಾಗ ಹಳೆಯ ದಿನಗಳು ನೆನಪಾಗಿ ಬಿಡುತ್ತಿದ್ದವು. ಮರುಕ್ಷಣವೇ, ನನಗ್ಯಾಕೆ ಈ ಶಿಕ್ಷೆ ಅನ್ನುತ್ತಾ ಬಿಕ್ಕಿಬಿಕ್ಕಿ ಅಳುತ್ತಿದ್ದೆ . ತಲೆಗೂದಲು ಬರುವಂತೆ ಮಾಡು ದೇವರೇ ಎಂದು ಪ್ರಾರ್ಥಿಸುತ್ತಿದ್ದೆ . ಇದನ್ನೆಲ್ಲ ಗಮನಿಸಿದ ಮಗಳು ಅದೊಮ್ಮೆ ಎದುರು ನಿಂತು ಹೇಳಿದಳು: “ಅಮ್ಮಾ, ಬಾಲ್ಡಿ ಆಗಿರೋದು ನೀನೊಬ್ಬಳೇ ಅಂತ ಕೊರಗಬೇಡ. ನಾಳೆ ನಾನೂ ಬಾಲ್ಡಿ ಮಾಡಿಸಿಕೊಂಡು ನಿನಗೆ ಕಂಪೆನಿ ಕೊಡ್ತೇನೆ. ಇಬ್ಬರು ಜತೆಯಾಗಿ ಓಡಾಡೋಣ, ಓಕೆ? ಈ ಮಾತು ಕೇಳುತ್ತಿದ್ದಂತೆಯೇ ಕಣ್ಣೀರು ಕೆನ್ನೆ ಗಿಳಿ ಯಿತು. ಆಗ ಮಗಳು ಇನ್ನೊಂದು ಮಾತು ಹೇಳಿದಳು: “ಮಾ, ಬಾಲ್ಡಿ ಆಗಿದ್ರೂ ನೀನು ಬ್ಯೂಟಿಫುಲ್ ಆಗಿ ಕಾಣಿಸ್ತೀಯ. ಹೀಗಿರುವಾಗ ಅಳುವುದೇಕೆ?’
ಆಫೀಸ್, ಮನೆ, ಮಕ್ಕಳ ಜತೆ ಮಾತು, ಹಗಲುಗನಸುಗಳ ಜತೆಗೇ ಬದುಕು ಸಾಗುತ್ತಿತ್ತು. 2017ರಲ್ಲಿ ಫೇಸ್‌ಬುಕ್‌ನಲ್ಲಿ- ಮಿಸೆಸ್ ಇಂಡಿಯಾ ಸ್ಪರ್ಧೆಗೆ ಸ್ಪರ್ಧಿಸಲು ಇದ್ದ ನೋಟಿಫಿಕೇಶನ್ ಕಾಣಿಸಿತು. ಸ್ವಲ್ಪ ಮಜಾ ತಗೊಳ್ಳೋಣ ಅಂದುಕೊಂಡು ಅರ್ಜಿ ತುಂಬಿಸಲು ಕುಳಿತೆ. ಅದರಲ್ಲಿ “ನಿಮ್ಮ ತಲೆಕೂದಲಿನ ಬಣ್ಣ ಯಾವುದು?’ ಎಂಬ ಪ್ರಶ್ನೆಗೆ, ನನಗೆ ಕೂದಲಿಲ್ಲ. ನಾನು ಬಾಲ್ಡಿ ಎಂದೇ ಉತ್ತರಿಸಿ, ಅರ್ಜಿ ಕಳಿಸಿದೆ. ಬೋಳುತಲೆಯ ಹೆಂಗಸನ್ನು ಯಾರು ತಾನೆ ಸೌಂದರ್ಯ ಸ್ಪರ್ಧೆಗೆ ಆಹ್ವಾನಿಸುತ್ತಾರೆ? ನನ್ನ ಅರ್ಜಿ ರಿಜೆಕ್ಟ್ ಆಗುತ್ತದೆ ಎಂದೇ ಭಾವಿಸಿದ್ದೆ . ಹಾಗಾಗಲಿಲ್ಲ. “ನಿಮ್ಮನ್ನು ಸ್ಪರ್ಧೆಗೆ ಪರಿಗಣಿಸಿದ್ದೇವೆ. ದಯವಿಟ್ಟು ಬನ್ನಿ’ ಎಂಬ ಉತ್ತರ ಬಂತು!
ಅನಂತರ ನಡೆದದ್ದನ್ನು ಹೇಳಲು ನನಗೆ ಹೆಮ್ಮೆ. ಮಿಸೆಸ್ ಇಂಡಿಯಾ ಸ್ಪರ್ಧೆಗೆ ಒಟ್ಟು 3000 ಮಂದಿ ಸ್ಪರ್ಧಿಸಿದ್ದರು. ಅವರಲ್ಲಿ ಫೈನಲ್‌ಗೆ ಅರ್ಹತೆ ಪಡೆದವರು-15 ಜನ. ಅವರಲ್ಲಿ ನಾನೂ ಒಬ್ಬಳಾಗಿದ್ದೆ . ತೀರ್ಪುಗಾರರಲ್ಲಿ ಒಬ್ಬರಾಗಿದ್ದ ಖ್ಯಾತ ನಟಿ ರವೀನಾ ಟಂಡನ್, ನನ್ನ ಬಾಳಕಥೆ ಕೇಳಿ ಕಣ್ಣೀರಾದರು. ತೀರ್ಪು ಘೋಷಿಸುವಾಗ-“ಮಿಸೆಸ್ ಇಂಡಿಯಾ ಕಿರೀಟ ಉಳಿದೆಲ್ಲರಿಗಿಂತ ಕೇತಕಿಯ ಮುಡಿಗೇ ಚೆನ್ನಾಗಿ ಹೊಂದುತ್ತೆ’ ಅಂದರು. ಅಷ್ಟೇ ಅಲ್ಲ, ಮಿಸೆಸ್ ಇನ್ಸ್ ಪಿರೇಷನ್ ಎಂಬ ಪ್ರಶಸ್ತಿ ನೀಡಿ ಗೌರವಿಸುವ ಮೂಲಕ ನನ್ನನ್ನು ದೇಶದ ಜನತೆಗೆ ಪರಿಚಯಿಸಿದರು. ಅನಂತರದಲ್ಲಿ ಎಲ್ಲವೂ ಪವಾಡದಂತೆ ನಡೆದುಹೋಗಿದೆ. ಮಿಸೆಸ್ ಪುಣೆ, ಮಿಸೆಸ್ ಪುಣೆ ಇಂಟರ್ ನ್ಯಾಶನಲ್ , ಜ್ಯುವೆಲ್ ಆಫ್ ಇಂಡಿಯಾ, ಪ್ರೈಡ್ ಆಫ್ ಪುಣೆ ಪ್ರಶಸ್ತಿ ಮಾತ್ರವಲ್ಲ, ಪಿಲಿಪ್ಪೀನ್ಸ್ ನಲ್ಲಿ ನಡೆದ ಮಿಸೆಸ್ ಯೂನಿವರ್ಸ್ ಕಿರೀಟವೂ ಸೇರಿದಂತೆ ಹಲವು ಪ್ರಶಸ್ತಿಗಳು ಒಲಿದುಬಂದಿವೆ. ಕೆಲವೇ ವರ್ಷಗಳ ಹಿಂದೆ ಮನೆಯಿಂದ ಆಚೆ ಬರಲು ಹಿಂಜರಿಯುತ್ತಿದ್ದ ನಾನು ಈಗ ಸೌಂದರ್ಯ ಸ್ಪರ್ಧೆಗಳಿಗೆಂದು ಮಹಾನಗರಗಳಿಗೇ ಹೋಗಬೇಕಾಗಿ ಬಂದಿದೆ. ಇಷ್ಟು ದಿನ ನನ್ನನ್ನು ಆಡಿಕೊಳ್ಳುತ್ತಿದ್ದ ಜನರೇ ಈಗ ಹಾಡಿ ಹೊಗಳುತ್ತಿದ್ದಾರೆ. ಅಲೋಪೇಸಿಯಾ ಜತೆಗಿನ ನನ್ನ ಹೋರಾಟದ ಕಥೆ, ಮರಾಠಿಯಲ್ಲಿ ಅಗ್ನಿಜಾ (ಬೆಂಕಿಯ ಮಗಳು) ಹೆಸರಿನ ಕೃತಿಯಾಗಿ ಪ್ರಕಟವಾಗಿದೆ! ಅಲೋಫೇಸಿಯ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಯೂ ನನ್ನದಾಗಿದೆ.
ತಲೆಗೂದಲು ಉದುರುತ್ತಿದೆ ಎಂದಾಕ್ಷಣ ಖಿನ್ನತೆಗೆ ತುತ್ತಾಗುವ, ಬಗೆಬಗೆಯ ಚಿಕಿತ್ಸೆ-ಮಾತ್ರೆಗೆಂದು ಲಕ್ಷಾಂತರ ಖರ್ಚು ಮಾಡುವ, ಡಿಪ್ರಶನ್‌ನಿಂದ ಆತ್ಮಹತ್ಯೆಗೂ ಮುಂದಾಗುವ ಹೆಣ್ಣುಮಕ್ಕಳಿಗೆ ನಾನು ಹೇಳುವುದಿಷ್ಟೇ: “ಅಲೋಪೇಸಿಯಾಗೆ ಶಾಶ್ವತ ಚಿಕಿತ್ಸೆ ಇಲ್ಲ. ಬಾಲ್ಡಿ ಆಗಿದ್ದುಕೊಂಡು ಬದುಕುವುದೇ ಪರಿಹಾರ. ಬಾಲ್ಡಿ ಆಗಿ ಹೊರಗೆ ಬರಲಾರೆ ಅನ್ನುವವರಿಗೆ ವಿಗ್ ಎಂಬ ಪರ್ಯಾಯ ಇದ್ದೇ ಇದೆ. ಹೋಗಿರುವುದು ಜುಟ್ಟಷ್ಟೇ, ಜೀವವಲ್ಲ ಅಂದುಕೊಂಡು ಬದುಕುವುದೇ ಜಾಣತನ’ ಎನ್ನುತ್ತಾರೆ ಕೇತಕಿ.
ಮಹಾರಾಷ್ಟ್ರ ರಾಜ್ಯ ಪಠ್ಯಪುಸ್ತಕ ರಚನಾ ಸಮಿತಿ ಕಚೇರಿಯಲ್ಲಿ ಅಧಿಕಾರಿಯಾಗಿ ಪುಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಕೇತಕಿ. ಅಲೋಪೇಸಿಯಾ ಕುರಿತು ಜಾಗೃತಿ ಮೂಡಿಸುವುದೇ ನನ್ನ ಗುರಿ, ಆ ಉದ್ದೇಶದಿಂದಲೇ ನನ್ನ ಬೋಳುತಲೆಯ ಮೇಲೇ ಟ್ಯಾಟೂ ಹಾಕಿಸಿಕೊಂಡಿದ್ದೇನೆ ಎನ್ನುವ ಈ ದಿಟ್ಟೆಗೆ ಅಭಿನಂದನೆ ಹೇಳಲು- [email protected]
– ಎ.ಆರ್.ಮಣಿಕಾಂತ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.