ಹಠಕ್ಕೆ ಬಿದ್ದು ದಾನಕೊಟ್ಟವಳು…
Team Udayavani, Dec 7, 2018, 12:30 AM IST
ಅವಳ ಸ್ಥಳದಲ್ಲಿ ಬೇರೆಯವರಾಗಿದ್ದರೆ ಹೇಗೂ ತನ್ನ ಮೂತ್ರಪಿಂಡದ ರಕ್ತನಾಳಗಳ ಗಾತ್ರ ಹೊಂದಾಣಿಕೆಯಾಗಿಲ್ಲ ಎಂಬ ನೆಪದೊಡನೆ ಸಣ್ಣಗೆ ನೇಪಥ್ಯಕ್ಕೆ ಸರಿಯುತ್ತಿದ್ದರೇನೋ? ಆದರೆ ಅವಳು ಅನೇಕರಿಗೆ ಮಾದರಿಯಾದಳು. ಮುಂದಿನದೆಲ್ಲ ಸುಖಾಂತ್ಯ. ಅವನೀಗ ಸಂಪೂರ್ಣ ಆರೋಗ್ಯವಂತ.
ಅದೊಂದು ಪುಟ್ಟ ಸಂಸಾರ. ತಂದೆ, ತಾಯಿ, ಮಗಳು, ಮಗ. ನಾಲ್ಕೇ ಜನ. ಬಡವರಲ್ಲ. ಶ್ರೀಮಂತರೂ ಅಲ್ಲ. ವಿಜಯಪುರ ಜಿಲ್ಲೆಯ ಬಹುತೇಕ ಜನರಂತೆ ಇವರದೂ ಕೆಳ ಮಧ್ಯಮ ವರ್ಗ. ಹೆಸರಿಗೆ ಒಂದಿಷ್ಟು ಭೂಮಿ, ನಮ್ಮೂರಿನವರು. ವಿಜಯಪುರ ಜಿಲ್ಲೆಯಲ್ಲಿ ಬೀಳುವ ಒಂದಷ್ಟು ಸೆಂ.ಮೀ. ಮಳೆಯಿಂದಾಗಿ ಬೆಳೆಯುವುದು ಅತೀ ಸ್ವಲ್ಪ. ಒಣ ಜಮೀನಿನಲ್ಲಿ ಬರುವ ಉತ್ಪನ್ನವೂ ಅಷ್ಟಕ್ಕಷ್ಟೇ. ಬಂದ ವರಮಾನ ಸಾಲದಾದಾಗ ತಂದೆ ತಾಯಿ ಇಬ್ಬರೂ ಬೇರೆಯವರ ಹೊಲಗಳಿಗೆ ಕೆಲಸಕ್ಕೆ ಹೋಗಿ, ಹೇಗೋ ಬದುಕು ಸಾಗಿಸಿದ ತೃಪ್ತ ಕುಟುಂಬ. ಮಗಳು ದೊಡ್ಡವಳು. ಇಬ್ಬರಿಗೂ ಒಂದಿಷ್ಟು ಶಿಕ್ಷಣ ಕೊಡಿಸಿದರು. ಅಕ್ಕ ಒಂದು ಖಾಸಗಿ ಶಾಲೆಯಲ್ಲಿ ಶಿಕ್ಷಕಿ. ಮನೆಯ ಜವಾಬ್ದಾರಿಯ ಜೊತೆಗೆ ಒಂದಿಷ್ಟು ವರಮಾನಕ್ಕಾಗಿ ಆ ಕೆಲಸ. ಮಗ ಬೆಂಗಳೂರಲ್ಲಿ ಕೆಲಸ ಹುಡುಕಿದ. ಬಯಸಿ ಬಂದವರಿಗೆಲ್ಲ ಬದುಕುವ ದಾರಿ ತೋರಿಸುವ ಬೆಂಗಳೂರು, ಹುಡುಗನನ್ನು ಕೈಬಿಡಲಿಲ್ಲ. ಅಂತಹ ದೊಡ್ಡ ಮೊತ್ತದ ಆದಾಯ ತರುವ ಕೆಲಸವಲ್ಲವಾದರೂ ತಕ್ಕಮಟ್ಟಿಗೆ ಖುಷಿ ಕೊಡುವಂಥ ಕೆಲಸ. ಇವನೊಂದಿಗೆ ಕೆಲಸ ಮಾಡುವ ಗೆಳೆಯನೊಬ್ಬನ ರೂಮಲ್ಲಿ ವಾಸ. ತನ್ನ ಖರ್ಚಿಗಷ್ಟು, ಮನೆಗೆ ಕಳಿಸಲು ಒಂದಿಷ್ಟು. ಬದುಕು ಸುಂದರವಲ್ಲದಿದ್ದರೂ ತೃಪ್ತಿದಾಯಕ.
ಆದರೆ ಅದೊಂದು ದಿನ ರಾತ್ರಿ ಈತನಿಗೆ ಒಮ್ಮಿಂದೊಮ್ಮೆಲೆ ತಲೆನೋವು, ವಾಂತಿ ಪ್ರಾರಂಭವಾಯಿತು. ವಾಂತಿಯಲ್ಲಿ ರಕ್ತ. ಇವನ ಜೊತೆಗೆ ಇದ್ದ ಗೆಳೆಯನಿಗೆ ಗಾಬರಿ. ಅವನೇ ಇವನನ್ನು ಅಲ್ಲೇ ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋದ. ವೈದ್ಯರು ಇವನನ್ನು ಪರೀಕ್ಷಿಸಿ ರಕ್ತದೊತ್ತಡ ತುಂಬಾ ಹೆಚ್ಚಿದೆಯೆಂದೂ ಇಂಥ ರೋಗಿಗಳಿಗೆ ನಮ್ಮಲ್ಲಿ ಆರೈಕೆ ಸಾಧ್ಯವಿಲ್ಲವೆಂದೂ ಹೇಳಿ “ದೊಡ್ಡಾಸ್ಪತ್ರೆ’ಗೆ ಹೋಗಲು ತಿಳಿಸಿದರು. ಅಂಥ ಪರಿಸ್ಥಿತಿಯಲ್ಲೇ ಅವನ ಗೆಳೆಯ ಅವನನ್ನು ದೊಡ್ಡಾಸ್ಪತ್ರೆಗೆ ಕರೆದುಕೊಂಡು ಹೋದ. ಅಲ್ಲಿ ಹೊಸ ಸಮಸ್ಯೆ. “ಆರೋಗ್ಯ ಸ್ಥಿತಿ ತುಂಬಾ ಕ್ರಿಟಿಕಲ್ ಇದೆ, ಅವನನ್ನು ಐ.ಸಿ.ಯು.ದಲ್ಲಿ ಇಡಬೇಕಾಗುತ್ತದೆ. ಇಪ್ಪತ್ತು ಸಾವಿರ ಕಟ್ಟಿದರೆ ಮಾತ್ರ ಅಡ್ಮಿಟ್ ಮಾಡುತ್ತೇವೆ, ಇಲ್ಲವಾದರೆ ಇಲ್ಲ’ ಎಂಬ ಉತ್ತರ. ಅಡ್ಮಿಟ್ ಮಾಡಿಸಬೇಕಾದ ಮನುಷ್ಯನ ಕೈಯಲ್ಲಿ ಏನೂ ಇಲ್ಲ. ಆಸ್ಪತ್ರೆಯವನು ನಿಷ್ಕರುಣಿ ಎಂದು ಹೇಳಲೂ ಸಾಧ್ಯವಿಲ್ಲ. ಅವನ ಮಾಲೀಕ ಹೇಳಿದ ಹಾಗೆ ಕೇಳುವವ. ಇಲ್ಲವಾದರೆ ಇವನ ಸಂಬಳ ಇಲ್ಲ. ಹೀಗಾಗಿ ಕಷ್ಟಪಡುವವರು ರೋಗಿಗಳು. ಇವರಲ್ಲಿ ಅಷ್ಟು ದುಡ್ಡು ಇಲ್ಲ, ಅವರು ಅಷ್ಟಿಲ್ಲದೆ ಅಡ್ಮಿಟ್ ಮಾಡುವುದಿಲ್ಲ. ಅಡಕೊತ್ತಿನ ಅಡಿಕೆ. ಮತ್ತೆ ಪಯಣ.
ಅಂತಹ ರಾತ್ರಿಯಲ್ಲಿ, ಸಿಕ್ಕ ಆಟೋದವನನ್ನೇ ವಿನಂತಿಸಿ ಜಯದೇವ ಆಸ್ಪತ್ರೆಗೆ ಹೊರಟರು. ಈತನಿಗೋ ಅಸಾಧ್ಯ ಸಂಕಟ, ತಲೆ ಸಿಡಿಯುವಂಥ ನೋವು. ಅಲ್ಲಿನ ವೈದ್ಯರು ರಕ್ತ ತಪಾಸಣೆ, ಇತ್ಯಾದಿ ಮಾಡಿ ಈತನ ಎರಡೂ ಕಿಡ್ನಿಗಳು ಕೆಲಸ ಮಾಡುತ್ತಿಲ್ಲವೆಂದೂ ಪರಿಸ್ಥಿತಿ ಗಂಭೀರವಾಗಿದೆಯೆಂದೂ ತಿಳಿಸಿದರು. ಪುಣ್ಯಕ್ಕೆ ಅಡ್ಮಿಟ್ ಮಾಡಿ ಉಪಚಾರ ಪ್ರಾರಂಭಿಸಿದರು. ಮುಂದೆ ಇವನ ಗೋಳು ಹೇಳತೀರದು. ಕಿಡ್ನಿಗಳು ಕೆಲಸ ನಿಲ್ಲಿಸಿದ್ದು ಇವನ ಗಮನಕ್ಕೆ ಬಂದಿರಲೇ ಇಲ್ಲ. ಯಾವಾಗಾದರೊಮ್ಮೆ ಬರುವ ತಲೆನೋವು, ಸಂಕಟಗಳನ್ನು ಈತ ಅಲಕ್ಷ ಮಾಡಿದ್ದ, ತನ್ನ ಕೆಲಸದ ಭರದಲ್ಲಿ. ಅವನ ಅಕ್ಕ ಊರಿಂದ ಓಡಿ ಬಂದಳು. ಇವನ ಸ್ಥಿತಿ ನೋಡಿ ಮಮ್ಮಲ ಮರುಗಿದಳು. ಅವಳಿಗೆ ದಿಕ್ಕೇ ತೋಚದಾಯ್ತು.
ಅಲ್ಲಿಂದ ಪ್ರಾರಂಭವಾದವು ಕಷ್ಟಗಳ ಸರಣಿ. ವಿಕ್ಟೋರಿಯಾದಲ್ಲಿ ಅದೇ ತಾನೇ ಪ್ರಾರಂಭಿಸಿದ ನೆಫೊಯುರಾಲಜಿ ವಿಭಾಗಕ್ಕೆ ಹೋದರೆ ಇನ್ನೂ ಪೂರ್ಣ ಪ್ರಮಾಣದ ಉಪಚಾರಗಳು ಲಭ್ಯವಿಲ್ಲವೆಂಬ ಉತ್ತರ ಕೇಳಿ, ಇದ್ದ ನೌಕರಿ ಬಿಟ್ಟು ತಮ್ಮೂರೆಡೆಗೆ ವಾಪಸಾದ. ಮುಂದೆ ಮೂರ್ನಾಲ್ಕು ವರ್ಷ ಹೀಗೆಯೇ ಕಳೆದು ಹೋದವು. ಆ ದಿನಗಳಲ್ಲಿ ಭೆಟ್ಟಿಯಾದ ವೈದ್ಯರುಗಳೆಷ್ಟೋ, ಸುತ್ತಿದ ಆಸ್ಪತ್ರೆಗಳೆಷ್ಟೋ. ಗಿಡ ಮೂಲಿಕೆ, ಆಯುರ್ವೇದ, ಹೋಮಿಯೋಪತಿ ಎಲ್ಲ ಮುಗಿದರೂ ಇವನ ಕಷ್ಟ ಮುಗಿಯಲಿಲ್ಲ.
ಈ ಘಟ್ಟದಲ್ಲಿ, ಅಂದರೆ ಈಗ ಸುಮಾರು ಒಂಬತ್ತು ವರ್ಷಗಳ ಹಿಂದೆ, ನಮ್ಮೂರಿನವನೇ ಆದ, ನಮ್ಮ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಹುಡುಗನೊಬ್ಬ ಈತನ ಕಥೆಯನ್ನು ನನ್ನೆದುರಿಗೆ ಹೇಳಿದ. ನಾನು ತಕ್ಷಣದಿಂದ ಅವನಿಗೆ ಯಾವ ಕೆಲಸ ಮಾಡಲು ಬರುತ್ತದೋ ಅದನ್ನು, ಎಷ್ಟು ಸಾಧ್ಯವಾಗುತ್ತದೋ ಅಷ್ಟನ್ನು ನಮ್ಮಲ್ಲಿ ಮಾಡಲಿ ಎಂದು ತಿಳಿಸಿ, ಅವನನ್ನು ನಮ್ಮ ಆಸ್ಪತ್ರೆಗೆ ಬರಹೇಳಿದೆ. ಯಾಕೆಂದರೆ ಆ ಮನೆಯವರು ಮೂರ್ನಾಲ್ಕು ವರ್ಷದ ಔಷಧೋಪಚಾರಕ್ಕಾಗಿ ಇದ್ದದ್ದನ್ನೆಲ್ಲ ಅದಾಗಲೇ ಕಳೆದು ಕೊಂಡಿದ್ದರು. ಅವನ ಮಾನಸಿಕ, ಆರ್ಥಿಕ ಸ್ಥಿತಿ ಸುಧಾರಣೆ ಕಾಣಲಿ ಎಂದು ನಮ್ಮ ರಿಸೆಪ್ಷನ್‌ನಲ್ಲಿ ಒಂದು ಕೆಲಸ ಕೊಟ್ಟೆ. ಆಗವನು ನಿಯಮಿತವಾದ ಡಯಾಲಿಸಿಸ್‌ನಲ್ಲಿದ್ದ. ಜೀವ ಮತ್ತು ಜೀವನ ಎರಡೂ ಕುಂಟುತ್ತಾ ಸಾಗಿದ್ದವು. ಇವನದು ಜಾಮೀನಿನ ಮೇಲೆ ಬಿಟ್ಟ ಕೈದಿಯ ಸ್ಥಿತಿ. ಯಾವಾಗ ಮತ್ತೆ ಪರಿಸ್ಥಿತಿ ಹದಗೆಟ್ಟು ಏನಾಗುತ್ತದೋ ಎಂಬ ಭಯ. ಆಗ ನಮ್ಮಲ್ಲಿಯ ಹಿರಿಯ ನರ್ಸ್ ಒಬ್ಬಳು ನೆನಪಿಸಿದ್ದೇ ಮೂತ್ರಪಿಂಡ ಕಸಿ!
ಈ ವಿಷಯವನ್ನು ಅವನ ಅಕ್ಕನಿಗೆ ತಿಳಿಸಿದರೆ ಆಕೆಯ ಸಂತೋಷ ಹೇಳತೀರದು. ಆದರೆ ಅದಕ್ಕೆ ಎರಡು ಅಡೆತಡೆಗಳಿದ್ದವು. ಅವಶ್ಯವಿರುವ ದುಡ್ಡು ಕೂಡಿಸುವುದು ಒಂದಾದರೆ, ಮೂತ್ರಪಿಂಡ ಕೊಡುವವರು ಯಾರು ಎನ್ನುವುದು ಮತ್ತೂಂದು. ಎರಡನೆಯದು ಕಷ್ಟದ್ದು ಮತ್ತು ಮಹತ್ವದ್ದು. ದುಡ್ಡು ಕೂಡಿಸುವುದನ್ನು ಯಾರು ಬೇಕಾದರೂ ಮಾಡಿಯಾರು. ಅದಕ್ಕೂ ಅದೇ ಹಿರಿಯ ನರ್ಸ್ ಇವನನ್ನು ಆಗಿನ ಆರೋಗ್ಯ ಮಂತ್ರಿಗಳಲ್ಲಿಗೆ ಸೀದಾ ಕರೆದುಕೊಂಡು ಹೋಗಿ ನಿಲ್ಲಿಸಿಬಿಟ್ಟಿದ್ದಳು. ಆದರೆ ಮೂತ್ರಪಿಂಡ ನೀಡುವುದು ಯಾರು? ಏನಾದರಾಗಲಿ, ಮೊದಲು ಪರೀಕ್ಷೆ ಮಾಡಿಸಿದರಾಯ್ತು ಎಂದು ಕೈಯಲ್ಲೊಂದಿಷ್ಟು ಹಣ ಕೊಟ್ಟು ವಿಕ್ಟೋರಿಯಾದ ನೆಫೊಯುರಾಲಜಿ ವಿಭಾಗಕ್ಕೆ ಕಳಿಸಿದೆವು. ಅಲ್ಲಿ ಪರೀಕ್ಷೆ ಮಾಡಿ ನೋಡಿದರೆ ಅಕ್ಕ ಮತ್ತು ಅವನ ಅವ್ವ ಇಬ್ಬರ ರಕ್ತದ ಗುಂಪೂ ಇವನದಕ್ಕೆ ಹೊಂದುತ್ತಿದ್ದವು, ಒಂದಿಷ್ಟು ನಿರಾಳ. ಮನೆಯವರದೇ ಹೊಂದಾಣಿಕೆಯಾದರೆ ಕಾನೂನಿನ ಕಷ್ಟವಂತೂ ತಪ್ಪಿತು.
ಆದರೆ, ಅಲ್ಲಿ ಶುರುವಾದದ್ದೇ ಭಾವನಾತ್ಮಕ ತಾಕಲಾಟ. ಅಕ್ಕನದು ಒಂದೇ ಹಠ ತಾನೇ ಕೊಡುವುದೆಂದು. ಅಲ್ಲಿಯ ವೈದ್ಯರು, ನಾನು ಹಾಗೂ ಅವಳ ತಮ್ಮ ಎಲ್ಲರೂ ತಿಳಿಹೇಳಿದ್ದು, “ನಿಮ್ಮ ತಾಯಿಗೆ ಹೇಗೂ ವಯಸ್ಸಾಗಿದೆ, ಜೀವನವನ್ನು ಕಂಡು ಉಂಡವಳು, ಅಲ್ಲದೆ ಅವಳು ಇನ್ನು ಮುಂದೆ ಏನೂ ಕೆಲಸ ಮಾಡಬೇಕಾಗಿಲ್ಲ. ನಿನ್ನದಾದರೋ ಸಣ್ಣ ವಯಸ್ಸು, ಬಾಳಿ ಬದುಕಬೇಕಾದವಳು, ಕೆಲಸ ಮಾಡಿ ಆದಾಯ ತರಬಲ್ಲವಳು. ಅದಕ್ಕೆ ಅವಳದೇ ಇರಲಿ’ ಎಂದು. ಆದರೆ ಇವಳು ಒಪ್ಪಲು ತಯಾರಿಲ್ಲ. ಏನಾದರಾಗಲಿ ಎಂದು ವಿಚಾರಿಸಿ ಇಬ್ಬರ ಇನ್ನಷ್ಟು ಹೆಚ್ಚಿನ ಪರೀಕ್ಷೆಗಳನ್ನು ಮಾಡಿದರೆ ತಾಯಿಯ ಮೂತ್ರಪಿಂಡದ ರಕ್ತನಾಳಗಳ ಗಾತ್ರಕ್ಕೂ ಮಗನದಕ್ಕೂ ಸಂಪೂರ್ಣ ಹೊಂದಾಣಿಕೆ. ಅಕ್ಕಳದನ್ನು ಪಡೆದರೆ ಜೋಡಿಸುವುದು ಕಷ್ಟದ ಕೆಲಸ. ಅದೇ ವಿಷಯವನ್ನಿಟ್ಟುಕೊಂಡು ಮತ್ತೂಂದು ಸುತ್ತು ಅವಳೊಡನೆ ಸಮಜಾಯಿಷಿಯ ಮಾತು. ಆದರೂ ಅವಳದ್ದು ಒಂದೇ ಹಠ. ತನಗೆ ಕಷ್ಟವಾದರೂ ಸರಿ, ತನ್ನ ತಾಯಿ, ತನ್ನ ತಮ್ಮ ಸುಖದಿಂದಿರಲಿ, ತಾಯಿ ಕಿಡ್ನಿ ದಾನ ಮಾಡಲು ಆಪರೇಶನ್ ಮಾಡಿಸಿಕೊಂಡು ನರಳುವುದನ್ನು ತಾನು ನೋಡಲು ಸಾಧ್ಯವಿಲ್ಲವೆಂಬ ಮಾತು. ನಮಗೆ ಗೊತ್ತಿಲ್ಲದಂತೆ ಮತ್ತೆ ಅವಳೇ ಖುದ್ದಾಗಿ ಮೂತ್ರಪಿಂಡ ಕಸಿ ಮಾಡುವ ವೈದ್ಯರನ್ನು ಕಂಡು, ಆಪರೇಶನ್ ಮಾಡುವುದು ಒಂದಿಷ್ಟು ಕಷ್ಟವಾದರೂ ಸರಿ, ತನ್ನದನ್ನೇ ಪಡೆಯುವಂತೆ ವಿನಂತಿ ಮಾಡಿ ಬಂದಳು.
ಅವಳ ದೃಢ ನಿರ್ಧಾರದೆದುರು ನಾವೆಲ್ಲಾ ಸೋತು ಹೋದೆವು. ಅವಳ ಇಚ್ಛೆಯಂತೆಯೆ ಅವಳ ಒಂದು ಕಿಡ್ನಿ ಅವಳ ತಮ್ಮನ ಉದರ ಸೇರಿಕೊಂಡಿತು. ತಮ್ಮನ ಜೀವಕ್ಕೆ ಅಕ್ಕನಾಸರೆ. ಆದರೆ ಗಾತ್ರದಲ್ಲಿ ಹೊಂದಾಣಿಕೆಯಾಗದ ರಕ್ತನಾಳಗಳನ್ನು ಜೋಡಿಸಲು ವೈದ್ಯರು ಹರಸಾಹಸ ಪಡಬೇಕಾಯಿತು. ಆಪರೇಶನ್ ಆದ ನಂತರ ತನಗೆ ಎಚ್ಚರ ಬಂದೊಡನೆ ಅವಳು ಮೊದಲು ವಿಚಾರಿಸಿದ್ದು ತನ್ನ ಆರೋಗ್ಯ ಹಾಗೂ ತನ್ನ ಗಾಯದ ಬಗೆಗಲ್ಲ, ತನ್ನ ತಮ್ಮನ ಶರೀರದಲ್ಲಿ ತಾನು ನೀಡಿದ ಅಂಗ ಸರಿಯಾಗಿ ಹೊಂದಿದ್ದರ ಬಗ್ಗೆ! ಮರುದಿನ ತಮ್ಮನ ಮೂತ್ರದ ಪ್ರಮಾಣ ಕಡಿಮೆ ಇದ್ದದ್ದನ್ನು, ಮೂತ್ರದಲ್ಲಿ ಒಂದಿಷ್ಟು ರಕ್ತ ಬರುತ್ತಿದ್ದುದನ್ನು ಕಂಡವಳೇ ಹಾಸಿಗೆಯಿಂದೆದ್ದು ನನಗೆ ಫೋನ್ ಮಾಡಿದ್ದಳು. ಅಲ್ಲಿಯೇ ಇದ್ದ ನನ್ನ ವೈದ್ಯ ಮಿತ್ರನೊಬ್ಬನನ್ನು ಅವಳ ಸಾಂತ್ವನಕ್ಕೆ ಕಳಿಸಿದರೆ, ಅವಳು ಅದನ್ನು ಒಪ್ಪದೇ ತನ್ನ ಹಾಸಿಗೆಯಿಂದ ಎದ್ದವಳೇ ಸೀದಾ ನೆಫೊಯುರಾಲಜಿ ವಿಭಾಗದ ಮುಖ್ಯಸ್ಥರ ಬಾಗಿಲು ತಟ್ಟಿದ್ದಳು. ಅವರೇ ಸ್ವತಃ ಬಂದು ಪರೀಕ್ಷಿಸಿ ಧೈರ್ಯ ತುಂಬುವವರೆಗೆ ನೀರು ಸೇವಿಸಲಿಲ್ಲ. ಮುಂದಿನ ಹದಿನೈದು ದಿನಗಳು ಅವಳ ಜೀವನದ ಅತ್ಯಂತ ಮಹತ್ವದ ಮತ್ತು ತಪಸ್ಸಿನ ದಿನಗಳಂತೆ ಕಳೆದವು. ಹಗಲು ರಾತ್ರಿಯೆನ್ನದೆ ಅವನ ಆರೈಕೆ. ತನಗಾದ ಶಸ್ತ್ರಚಿಕಿತ್ಸೆಯ ಗಾಯವನ್ನೂ ಲೆಕ್ಕಿಸದೆ ತಮ್ಮನನ್ನು ಉಪಚರಿಸಿ ಅವನನ್ನು ಡಿಸಾcರ್ಜ್ ಮಾಡಿಸಿಕೊಂಡು, ನಮ್ಮ ಆಸ್ಪತ್ರೆಯವರೆಗೆ ತಂದುಬಿಟ್ಟಾಗಲೇ ಅವಳು ಸಮಾಧಾನಿಸಿದ್ದು.
ಹೌದು, ಅವಳು ಯುದ್ಧ ಗೆದ್ದುಬಿಟ್ಟಿದ್ದಳು. ಅಲ್ಲದೆ ತನ್ನ ಹಠವನ್ನೂ ಕೂಡ. ಅವಳ ಸ್ಥಳದಲ್ಲಿ ಬೇರೆಯವರಾಗಿದ್ದರೆ ಹೇಗೂ ತನ್ನ ಮೂತ್ರಪಿಂಡದ ರಕ್ತನಾಳಗಳ ಗಾತ್ರ ಹೊಂದಾಣಿಕೆಯಾಗಿಲ್ಲ, ಎಂಬ ನೆಪದೊಡನೆ ಸಣ್ಣಗೆ ನೇಪಥ್ಯಕ್ಕೆ ಸರಿಯುತ್ತಿದ್ದರೇನೋ? ಆದರೆ ಅವಳು ಅನೇಕರಿಗೆ ಮಾದರಿಯಾದಳು. ಮುಂದಿನದೆಲ್ಲ ಸುಖಾಂತ್ಯ. ಅವನೀಗ ಸಂಪೂರ್ಣ ಆರೋಗ್ಯವಂತ. ಈಗ ಅವಳು ತಾನೇ ನಿಂತು ತಮ್ಮನಿಗೆ ಮದುವೆ ಮಾಡಿಸಿದ್ದಾಳೆ. ಅವನು ನಮ್ಮ ಆಸ್ಪತ್ರೆಯಲ್ಲಿ ಕೋಆರ್ಡಿನೇಟರ್. ತಾನೂ ಖಾಸಗಿ ಶಾಲೆಯೊಂದರಲ್ಲಿ ದುಡಿದು, ಬಟ್ಟೆಗಳ ಹೊಲಿದು ತನ್ನ ಹೊಟ್ಟೆ ಬಟ್ಟೆಗೆ ನೋಡಿಕೊಳ್ಳುವುದರ ಜೊತೆಗೆ ತಮ್ಮನ ನಿರಂತರ ವೈದ್ಯಕೀಯ ಖರ್ಚಿನಲ್ಲಿ ಭಾಗಿಯಾಗುತ್ತಾಳೆ. ಈಗ ತಮ್ಮನ ಹೆಂಡತಿಗೆ ಎರಡು ಮಕ್ಕಳು. ಅವನ ಮಕ್ಕಳನ್ನು ಆಡಿಸುತ್ತ, ಅವನ ಆರೋಗ್ಯ, ಅಭ್ಯುದಯವನ್ನು ಗಮನಿಸುತ್ತ ತೃಪ್ತಿಯಿಂದ ಸುಖವಾಗಿದ್ದಾಳೆ.
ಅವಳಿಗಾದ ಆನಂದ, ಆತ್ಮ ತೃಪ್ತಿಯೆದುರು, ಅವಳ ಹೊಟ್ಟೆಯ ಮೇಲಿನ ಗಾಯ ಮಸಕಾಗುತ್ತಿದೆ. ಒಂದೇ ಶರೀರದಲ್ಲಿದ್ದ ಎರಡು ಕಿಡ್ನಿಗಳೀಗ ಎರಡು ದೇಹಗಳ ಆರೋಗ್ಯ ನೋಡಿಕೊಳ್ಳುತ್ತಿವೆ..!
ಡಾ. ಶಿವಾನಂದ ಕುಬಸದ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Stock Market: ಷೇರುಪೇಟೆ ಸಂವೇದಿ ಸೂಚ್ಯಂಕ 1,000 ಅಂಕ ಕುಸಿತ; ಲಾಭಗಳಿಸಿದ ಷೇರು ಯಾವುದು?
Pandavapura: ಮೂರು ಕರುಗಳಿಗೆ ಜನ್ಮ ನೀಡಿದ ಸೀಮೆ ಹಸು
Lok Sabha:ರೈಲಿನಲ್ಲಿ ಪ್ರಯಾಣಿಕರಿಗೆ ನೀಡುವ ಹೊದಿಕೆ ಎಷ್ಟು ದಿನಗಳಿಗೊಮ್ಮೆ ತೊಳೆಯಲಾಗುತ್ತದೆ
VIDEO: ಡಿವೋರ್ಸ್ ಸುದ್ದಿ ನಡುವೆ ʼಬಚ್ಚನ್ʼ ಸರ್‌ನೇಮ್ ಇಲ್ಲದೆ ಕಾಣಿಸಿಕೊಂಡ ಐಶ್ವರ್ಯಾ
Subrahmanya: ಕುಕ್ಕೆ ಜಾತ್ರೆ ನೋಡಲು ಬರುತ್ತವೆ ದೇವರ ಮೀನುಗಳು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.