ಉಕ್ಕಿ ಹರಿವ ನದಿಗೆ, ಮೂರು ಬಾರಿ ಜಿಗಿದ!
Team Udayavani, Nov 21, 2018, 12:30 AM IST
ನಂಬುವುದು ಕಷ್ಟ: ಆದರೆ, ನಂಬದೇ ವಿಧಿಯಿಲ್ಲ ಅನ್ನುವಂಥ ಪ್ರಸಂಗ ಇದು. ಏನೆಂದರೆ, ಪ್ರವಾಹದಿಂದ ಉಕ್ಕಿ ಹರಿಯುತ್ತಿದ್ದ ನದಿಗೆ, 11ವರ್ಷದ ಹುಡುಗನೊಬ್ಬ, ಅರ್ಧ ಗಂಟೆಯ ಅವಧಿಯಲ್ಲಿ, ಮೇಲಿಂದ ಮೇಲೆ ಮೂರು ಬಾರಿ ಜಿಗಿದಿದ್ದಾನೆ. ಪ್ರವಾಹದ ವಿರುದ್ಧ ಈಜಿ ಇಬ್ಬರ ಜೀವ ಉಳಿಸಿದ್ದಾನೆ. ಆ ಮೂಲಕ, ಗಂಗಾಮಾತೆಯನ್ನೂ, ಯಮರಾಯನನ್ನೂ ಸೋಲಿಸಿದ್ದಾನೆ. ಕಮಲ್ ಕೃಷ್ಣದಾಸ್ ಎಂಬ ಹೆಸರಿನ ಈ ಸಾಹಸಿ, ಅಸ್ಸಾಂ ರಾಜ್ಯದವನು. ಇವನ ಸಾಹಸದ ಕಥೆಯನ್ನು, ಇಂಗ್ಲಿಷ್-ಹಿಂದಿಯ ಎಲ್ಲ ಚಾನೆಲ್‌ಗಳೂ ಪದೇಪದೆ ಪ್ರಸಾರ ಮಾಡಿವೆ. ರೀಡರ್ಸ್ ಡೈಜೆಸ್ಟ್ ಪತ್ರಿಕೆ- “ಎವೆರಿಡೇ ಹೀರೋಸ್’ ಎಂಬ ಶೀರ್ಷಿಕೆಯಲ್ಲಿ, ತನ್ನ ಎಲ್ಲಾ ಆವೃತ್ತಿಗಳಲ್ಲೂ ಈ ಸಾಹಸದ ಕಥೆಯನ್ನು ಪ್ರಕಟಿಸಿದೆ. ಇಲ್ಲಿ, ಇಡೀ ಪ್ರಸಂಗದ ಭಾವಾನುವಾದವಿದೆ. ಘಟನೆಯ ಪೂರ್ವಾರ್ಧವನ್ನು ಕಮಲ್ ಕೃಷ್ಣದಾಸ್‌ನ ತಾಯಿ ಜಿತು ಮೋನಿ ಅವರೂ, ಉತ್ತರಾರ್ಧದ ವಿವರಣೆಯನ್ನು ಧೀರ ಬಾಲಕ ಕೃಷ್ಣದಾಸ್‌ನೂ ಹೇಳಿಕೊಂಡಿದ್ದಾರೆ. ಓವರ್ ಟು ಜಿತು ಮೋನಿ.
“ನಾವು ವಾಸವಿರುವುದು ಅಸ್ಸಾಂ ರಾಜ್ಯದ ಮುಖ್ಯ ಪಟ್ಟಣವಾದ ಗುವಾಹಟಿಯಲ್ಲಿ. ಅಲ್ಲಿನ ಸೇಂಟ್ ಅಂಥೋನಿ ಶಾಲೆಯಲ್ಲಿ, ನನ್ನ ಮಗ ಕಮಲ್ ಕೃಷ್ಣ ದಾಸ್, 6ನೇ ತರಗತಿಯ ವಿದ್ಯಾರ್ಥಿ. ಸೆಪ್ಟೆಂಬರ್ ಎರಡನೇ ವಾರದಲ್ಲಿ, ನನ್ನ ಸೋದರತ್ತೆ, ಪುಣ್ಯಕ್ಷೇತ್ರಗಳಿಗೆ 10 ದಿನಗಳ ಕಾಲ ಟೂರ್ ಹೋಗುವವರಿದ್ದರು. ಅವರನ್ನು ಭೇಟಿ ಮಾಡಿ. ಕಷ್ಟಸುಖ ಮಾತಾಡಿಕೊಂಡು, ಶುಭಹಾರೈಸಿ ಬರಲೆಂದು, ಗುವಾಹಟಿಯಿಂದ 100 ಕಿ.ಮೀ. ದೂರವಿದ್ದ ಅವರ ಊರಿಗೆ ತಂಗಿ ಮತ್ತು ಮಗನೊಂದಿಗೆ ಹೋದೆ. ಅತ್ತೆಯೊಂದಿಗೆ ಎರಡು ದಿನ ಕಳೆದು, ನಮ್ಮೂರಿಗೆ ಹೊರಟು ನಿಂತೆವಲ್ಲ; ಅವತ್ತು ಸೆಪ್ಟೆಂಬರ್ 5, ಬುಧವಾರ. ಶಿಕ್ಷಕರ ದಿನಾಚರಣೆಯ ನೆಪದಲ್ಲಿ, ಮಗನ ಶಾಲೆಗೆ ರಜೆ ಇತ್ತು. ಹಾಗಾಗಿ, ನಿಧಾನಕ್ಕೆ ಮನೆ ತಲುಪಿದರಾಯ್ತು ಎಂದು ಕೊಂಡೇ ಹೊರಟಿದ್ದೆವು.
ಅತ್ತೆಮನೆಯಿಂದ ನಮ್ಮೂರಿಗೆ ಬರುವಾಗ, ಬ್ರಹ್ಮಪುತ್ರಾ ನದಿಯನ್ನು ದಾಟಿ ಬರಬೇಕಿತ್ತು. ಅಸ್ಸಾಂ ಅಂದಮೇಲೆ, ಅದರಲ್ಲೂ ಬ್ರಹ್ಮಪುತ್ರಾ ನದಿ ಅಂದಮೇಲೆ ವಿವರಿಸಿ ಹೇಳುವುದೇನಿದೆ? ಪ್ರವಾಹ ಎಂಬುದು, ನಮಗೆ ದಿನವೂ ಎದುರಾಗುತ್ತಿದ್ದ ಸವಾಲು. ನೆರೆ ಹಾವಳಿ ಎಂಬುದು, ದಿನವೂ ಕೇಳಲೇಬೇಕಿದ್ದ ಕೆಟ್ಟ ಸುದ್ದಿ.
ನದಿ ದಾಟಲಿಕ್ಕೆ ಭಾರೀ ಗಾತ್ರದ ದೋಣಿಗಳಿದ್ದವು. ಅದರಲ್ಲಿ ಜನರು ಮಾತ್ರವಲ್ಲ, ಜಾನುವಾರುಗಳು, ದಿನಸಿ ಪದಾರ್ಥಗಳು, ಬೈಕ್, ಕಾರುಗಳನ್ನೂ ಒಂದು ತುದಿಯಿಂದ ಮತ್ತೂಂದು ತುದಿಗೆ ಸಾಗಿಸಬಹುದಿತ್ತು. ಬೋಟ್ ಹತ್ತುವ ಸಂದರ್ಭದಲ್ಲಿ, ಪ್ರತಿಯೊಬ್ಬ ಪ್ರಯಾಣಿಕರೂ ದೈನ್ಯದಿಂದ ಪ್ರಾರ್ಥಿಸುತ್ತಿದ್ದರು; “ಅಮ್ಮಾ ಗಂಗಾಮಾತೆ, ನಮ್ಮ ಮೇಲೆ ಕರುಣೆ ತೋರು. ನಾವು ಆ ತುದಿ ತಲುಪುವವರೆಗೆ ನದಿಯಲ್ಲಿ ಪ್ರವಾಹ ಬಾರದಂತೆ, ಭಾರೀ ಅಲೆಗಳು ನುಗ್ಗಿಬಂದು, ದೋಣಿಯನ್ನು ಪಲ್ಟಿ ಹೊಡೆಸದಂತೆ ಕಾಪಾಡು..’
ಸೆಪ್ಟೆಂಬರ್ 5ರಂದೂ ಹೀಗೆ ಪಾರ್ಥಿಸಿದ ನಂತರವೇ ದೋಣಿ ಹತ್ತಿದೆವು. ಅವತ್ತು, ದೋಣಿಯಲ್ಲಿ ಒಟ್ಟು 28 ಜನರಿದ್ದರು. ದೋಣಿಯಲ್ಲೇ ಹೆಚ್ಚಾಗಿ ಪ್ರಯಾಣಿಸುವವರಿಗೆ, ಅದರ ವೇಗದ ಬಗ್ಗೆ ಒಂದು ಅಂದಾಜಿರುತ್ತದೆ. ಅವತ್ತು ನಾವು ಹತ್ತಿದ್ದೆವಲ್ಲ; ಆ ದೋಣಿ, ತುಂಬಾ ನಿಧಾನವಾಗಿ ಸಾಗುತ್ತಿದೆ ಅನ್ನಿಸಿತು. ನಮ್ಮೊಂದಿಗಿದ್ದ ಐದಾರು ಪ್ರಯಾಣಿಕರೂ ಇದೇ ಮಾತು ಹೇಳಿದರು. ಆದರೆ, ದೋಣಿಯ ಚಾಲಕರು ಈ ಮಾತನ್ನು ಒಪ್ಪಲಿಲ್ಲ. “ಸುಮ್ನೆ ಅನುಮಾನ ಪಡಬೇಡಿ. ಎಲ್ಲಾ ಸರಿಯಿದೆ. ಹೋಗ್ತಾ ಹೋಗ್ತಾ ಸ್ಪೀಡ್ ಜಾಸ್ತಿಯಾಗುತ್ತೆ’ ಎಂದು ಅವರು ಸ್ಪಷ್ಟನೆ ನೀಡಿದರು.
ಪ್ರಯಾಣ ಆರಂಭವಾಗಿ 10 ನಿಮಿಷ ಕಳೆದಿತ್ತು. ಆಗಲೇ, ದೋಣಿಯ ಎಂಜಿನ್‌ನಿಂದ ಸಣ್ಣ ಹೊಗೆ ಕಾಣಿಸಿಕೊಂಡಿತು. ಹಿಂದೆಯೇ, ಬಟ್ಟೆ ಸುಟ್ಟು ಹೋದಾಗ ಬರುತ್ತದಲ್ಲ; ಆ ರೀತಿಯ ವಾಸನೆ ಮೂಗಿಗೆ ರಾಚಿತು. ಈಗ, ದೋಣಿಯಲ್ಲಿದ್ದ ಹಲವರು- “ಎಂಜಿನ್‌ನಿಂದ ಹೊಗೆ ಬರಿ¤ದೆ. ಏನೋ ಸುಟ್ಟುಹೋದಂಥ ವಾಸನೆ ಬೇರೆ. ಏನಾಗಿದೆ ಚೆಕ್ ಮಾಡಿ. ಬೇಗ ರಕ್ಷಣಾ ಇಲಾಖೆಗೆ ಫೋನ್ ಮಾಡಿ, ದೋಣಿಯನ್ನು ರಕ್ಷಿಸಲು ಮನವಿ ಮಾಡಿ’ ಎಂದರು. ಆದರೆ ದೋಣಿಯ ಚಾಲಕರು-“ಅಂಥದೇನೂ ಸಮಸ್ಯೆ ಆಗಿಲ್ಲ . ಸುಮ್ನೆ ಹೆದರಿಸಬೇಡಿ. ದಿನಾಲೂ ಈ ನದೀಲಿ ಟ್ರಿಪ್ ಹೊಡೆಯೋದು ನಾವೋ ನೀವೋ? ನಿಮ್ಮನ್ನೆಲ್ಲ ಹುಷಾರಾಗಿ ದಡ ತಲುಪಿಸ್ತೀವಿ. ಸುಮ್ಮನಿರಿ…’ ಅಂದರು. ಅವರ ಮಾತು ಮುಗಿದು ಐದು ನಿಮಿಷ ಕಳೆಯುವಷ್ಟರಲ್ಲಿ ಎಂಜಿನ್ ಸ್ತಬ್ಧವಾಯಿತು. ಮರುಕ್ಷಣವೇ, ನದಿಯ ಮಧ್ಯೆ ದೋಣಿಯೂ ನಿಂತುಹೋಯಿತು. ಈ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ, ನೀರಿನ ಮಟ್ಟ ಹೆಚ್ಚತೊಡಗಿತು. ಅದುವರೆಗೂ ಶಾಂತವಾಗಿದ್ದ ನದಿಯಲ್ಲಿ ಏಕಾಏಕಿ, ಭಾರೀ ಗಾತ್ರದ ಅಲೆಗಳು ಕಾಣಿಸಿಕೊಂಡವು. ಅಷ್ಟೇ; ಜನ ಹಾಹಾಕಾರ ಮಾಡತೊಡಗಿದರು. ಮೊಬೈಲ್ ತೆಗೆದು, ತಮ್ಮ ಪ್ರೀತಿಪಾತ್ರರಿಗೆ ಫೋನ್ ಮಾಡಿ, “ಹೀಗಿØàಗೆ… ಪ್ರವಾಹದಲ್ಲಿ ಸಿಕ್ಕಿಕೊಂಡಿದ್ದೀವಿ. ದೋಣಿ ಕೆಟ್ಟುಹೋಗಿದೆ. ಬದುಕ್ತೀವೋ ಇಲ್ಲವೋ ಗೊತ್ತಿಲ್ಲ. ಏನಾದ್ರೂ ಸಹಾಯ ಮಾಡಲು ಆಗುತ್ತಾ?’ ಎನ್ನತೊಡಗಿದರು. ನನ್ನ ಮಗನೂ, ತಂಗಿಯೂ ಗಾಬರಿಯಿಂದ ನನ್ನನ್ನೇ ನೋಡುತ್ತಿದ್ದರು. ತಕ್ಷಣವೇ ನಾನೂ ಫೋನ್‌ನಲ್ಲಿ ಯಜಮಾನರನ್ನು ಸಂಪರ್ಕಿಸಿದೆ. ಅವರು- “ಹೆದರಿಕೋಬೇಡ. ದೇವರಿದ್ದಾನೆ. ಏನೂ ತೊಂದರೆಯಾಗಲ್ಲ. ಒಂದ್ನಿಮಿಷ ಕೃಷ್ಣ ನಿಗೆ ಫೋನ್ ಕೊಡು’ ಅಂದರು. ತಕ್ಷಣವೇ ಮಗನಿಗೆ ಫೋನ್ ಕೊಟ್ಟೆ…
ಈ ವೇಳೆಗೆ, ದೋಣಿಯೊಳಗೆ ಗದ್ದಲ ಜೋರಾಗಿತ್ತು. ಎಂಜಿನ್ ನಿಂತುಹೋಗಿದ್ದರೂ, ಅಲೆಗಳ ಹೊಡೆತಕ್ಕೆ ದೋಣಿ ದಿಕ್ಕಿಲ್ಲದೆ ಚಲಿಸುತ್ತಿತ್ತು. ತಕ್ಷಣವೇ ನದಿಗೆ ಹಾರಿ ಜೀವ ಉಳಿಸೋಬೇಕು. ಇಲ್ಲದಿದ್ರೆ ಜಲಸಮಾಧಿಯಾಗೋದು ಗ್ಯಾರಂಟಿ ಎಂದು ಒಂದಿಬ್ಬರು ಮಾತಾಡಿಕೊಂಡು, ನನ್ನ ಕಣ್ಣೆದುರೇ ನದಿಗೆ ಜಂಪ್ ಮಾಡಿಯೇಬಿಟ್ಟರು. ನನಗೆ ಏನಾದ್ರೂ ಆಗಲಿ, ಮಗನ ಜೀವಕ್ಕೆ ತೊಂದರೆ ಆಗಬಾರದು ಅನ್ನಿಸ್ತು. ಅವತ್ತು ನನ್ನ ಮಗ, ಸ್ಕೂಲ್‌ಗೆ ಹಾಕ್ಕೊಂಡು ಹೋಗುವ ಶೂಗಳನ್ನೇ ಧರಿಸಿಕೊಂಡು ಬಂದಿದ್ದ. ಈ ವೇಷದಲ್ಲೇ ನದಿಗೆ ಧುಮುಕಿದರೆ, ಶೂ ಕಟ್ಟಿಕೊಂಡಿರುವ ಕಾಲು ಭಾರವಾಗಿ, ಅವನಿಗೆ ಈಜಲು ಕಷ್ಟವಾಗಬಹುದು ಅನ್ನಿಸಿತು. ತಕ್ಷಣವೇ ಮಗನತ್ತ ತಿರುಗಿ, “ಪ್ರವಾಹ ಬಂದಿದೆ. ನದಿ ಉಕ್ಕಿ ಹರೀತಿದೆ. ಈಗಲೋ ಆಗಲೋ ಈ ದೋಣಿ ಮುಳುಗಿ ಹೋಗುತ್ತೆ. ತಕ್ಷಣ ಶೂ ಬಿಚ್ಚಿ ಎಸೆದು, ಈಜಿಕೊಂಡು ಆಚೆ ದಡ ಸೇರು.ಬೇಗ, ದೋಣಿಯಿಂದ ಜಂಪ್ ಮಾಡು’ ಅಂದೆ. ನನ್ನ ಮಗ, ಅಂಥದೊಂದು ಮಾತಿಗೇ ಕಾದಿದ್ದವನಂತೆ, ಕ್ಷಣಾರ್ಧದಲ್ಲಿ ಶೂಗಳನ್ನು ಬಿಚ್ಚಿ ಎಸೆದು ಉಕ್ಕಿ ಹರಿಯುತ್ತಿದ್ದ ನದಿಗೆ ಧುಮುಕಿಯೇ ಬಿಟ್ಟ. ಅದರ ಬೆನ್ನಿಗೇ ದೋಣಿ ಒಂದು ಕಡೆಗೆ ವಾಲಿಕೊಂಡು, ಕಡೆಗೆ ಮಗುಚಿಕೊಂಡಿತು. ನನಗೆ ಚೀರಲೂ ಶಕ್ತಿ ಇರಲಿಲ್ಲ. ಏನು ಮಾಡಲೂ ತೋಚದೆ, ಗಟ್ಟಿಯಾಗಿ ಕಣ್ಮುಚ್ಚಿಕೊಂಡೆ…’
ಕೃಷ್ಣ ದಾಸ್‌ನ ತಾಯಿ ಜಿತು ಮೋನಿಯವರ ವಿವರಣೆ, ಇಲ್ಲಿಗೆ ಮುಗಿಯುತ್ತದೆ. ಆಮೇಲೆ ಏನಾಯಿತು ಎಂಬುದನ್ನು ಕೃಷ್ಣ ದಾಸ್ ವಿವರಿಸುವುದು ಹೀಗೆ….
“”ತಕ್ಷಣವೇ ಜಂಪ್ ಮಾಡು. ವೇಗವಾಗಿ ಈಜಿಕೊಂಡು ದಡ ಸೇರು’ ಎಂದಿದ್ದಳು ಅಮ್ಮ. ಹಿಂದೆಮುಂದೆ ಯೋಚಿಸದೆ ಹಾಗೇ ಮಾಡಿದೆ. ಶರವೇಗದಲ್ಲಿ ದಡ ತಲುಪಿ, ಒಮ್ಮೆ ಹಿಂತಿರುಗಿ ನೋಡಿದಾಗ ನೆನಪಾಯ್ತು: ಆಂಟಿಗೆ ಸುಮಾರಾಗಿ ಈಜಲು ಗೊತ್ತಿದೆ. ಆದರೆ, ಅಮ್ಮನಿಗೆ ಈಜಲು ಬರುವುದೇ ಇಲ್ಲ!.
ನದಿ ಉಕ್ಕಿ ಹರಿಯತೊಡಗಿದೆ. ದೋಣಿ ಮಗುಚಿಕೊಂಡಿದೆ. ಅಮ್ಮನೂ, ಚಿಕ್ಕಮ್ಮನೂ ಪ್ರವಾಹದ ನೀರೊಳಗೆ ಸಿಕ್ಕಿಕೊಂಡಿದ್ದಾರೆ ಎಂದು ಖಚಿತವಾದಾಗ, ಹಿಂದೆಮುಂದೆ ಯೋಚಿಸದೆ ಮತ್ತೆ ನದಿಗೆ ಜಿಗಿದೆ. ವೇಗವಾಗಿ ಈಜಿಕೊಂಡು ದೋಣಿಯಿದ್ದ ಸ್ಥಳಕ್ಕೆ ಹೋದರೆ, ಅಲ್ಲಿ ಹಲವರು ಮುಳುಗೇಳುತ್ತ, ರಕ್ಷಣೆಗಾಗಿ ಕೂಗುತ್ತಿದ್ದರು. ಆ ಪ್ರವಾಹ, ಆ ರಭಸದಲ್ಲಿ ನನ್ನ ಧ್ವನಿ ನನಗೇ ಕೇಳುತ್ತಿರಲಿಲ್ಲ. ಇಲ್ಲಿ ಅಮ್ಮನನ್ನು ಹುಡುಕುವುದು ಹೇಗೆ ಎಂಬ ಗೊಂದಲದಲ್ಲಿದ್ದಾಗಲೇ, ಮುಳುಗುತ್ತಿದ್ದ ಹೆಂಗಸೊಬ್ಬಳು, ಕಡೆಯದಾಗಿ ಕೈ ಎತ್ತಿದ್ದು ಕಾಣಿಸಿತು. ಆಗಲೇ, ಒಂದು ಕೈನಲ್ಲಿದ್ದ, ಸ್ವಲ್ಪ ತುಂಡಾಗಿದ್ದ ಬಳೆ ಕಾಣಿಸಿತು. ಅನುಮಾನವೇ ಇಲ್ಲ; ಇವಳೇ ನನ್ನ ಅಮ್ಮ ಎಂದು ಗ್ಯಾರಂಟಿಯಾಗಿ ಹೋಯಿತು. ಕಾರಣ, ಅಜ್ಜಿ ಊರಿಗೆ ಹೊರಟಾಗ, ತವರು ಮನೆಯಿಂದ ಉಡುಗೊರೆಯಾಗಿ ಬಂದಿದ್ದ ಆ ಬಳೆ ಧರಿಸಿಯೇ ಹೊರಟಿದ್ದಳು ಅಮ್ಮ. ಅಮ್ಮನ ಸೆಂಟಿಮೆಂಟ್, ಇಲ್ಲಿ ಅವಳನ್ನು ಗುರ್ತಿಸಲು ನೆರವಾಗಿತ್ತು. ಪ್ರವಾಹದಿಂದ ಹೆಂಗಸರನ್ನು ರಕ್ಷಿಸುವಾಗ, ಯಾವತ್ತೂ ಅವರ ಸೀರೆಯನ್ನಾಗಲಿ, ಕೈಯನ್ನಾಗಲಿ ಹಿಡಿಯಬಾರದು. ಕೈ ಹಿಡಿದರೆ, ಗಾಬರೀಲಿ ಅವರು ನಮ್ಮನ್ನೂ ಮುಳುಗಿಸಿಬಿಡುತ್ತಾರೆ. ಸೀರೆ, ಅಕಸ್ಮಾತ್ ಕಳಚಿಕೊಂಡರೆ, ದೇಹ ನದಿಯ ಪಾಲಾಗುತ್ತೆ ಎಂದು ಅಪ್ಪ ಹೇಳಿದ್ದ ಕಿವಿ ಮಾತೂ ಆಗಲೇ ನೆನಪಿಗೆ ಬಂತು. ಈ ಕಾರಣದಿಂದಲೇ, ಅಮ್ಮನ ಮುಡಿಗೇ ಕೈ ಹಾಕಿದೆ. ಶರವೇಗದಲ್ಲಿ ಈಜಿಕೊಂಡು ದಡ ತಲುಪಿದೆ ಅಂತೂ, ಅಮ್ಮನ ಜೀವ ಉಳೀತು. ಚಿಕ್ಕಮ್ಮ ಈಜಿಕೊಂಡು ಬಂದಿದ್ದಾಳ್ಳೋ ಹೇಗೆ ಎಂದು ತಿಳಿಯಲು ತಿರುಗಿ ನೋಡಿದರೆ, ಅಲ್ಲೆಲ್ಲೂ ಚಿಕ್ಕಮ್ಮ ಕಾಣಿಸಲಿಲ್ಲ. ಹಿಂದೆ ಮುಂದೆ ಯೋಚಿಸದೆ ಮತ್ತೆ ನೀರಿಗೆ ಜಿಗಿದೆ. ಬಾಣದ ವೇಗದಲ್ಲಿ ಹೋದವನಿಗೆ, ಚಿಕ್ಕಮ್ಮನ ದುಪಟ್ಟಾ ಕಾಣಿಸಿತು. ಪ್ರವಾಹದ ಅಬ್ಬರಕ್ಕೆ ಚಿಕ್ಕಮ್ಮ ಸುಸ್ತಾಗಿದ್ದಳು. ಕೈಕಾಲು ಬಡಿಯುವ ಶಕ್ತಿಯೂ ಅವಳಿಗೆ ಇರಲಿಲ್ಲ. ತಕ್ಷಣವೇ ಅವಳ ಕೈಹಿಡಿದುಕೊಂಡು ಗಟ್ಟಿಯಾಗಿ ಹೇಳಿದೆ: “ಸುಮ್ನೆ ಕೈಕಾಲು ಆಡಿಸ್ತಾ ಇರು. ನಾನು ದಡ ತಲುಪಿಸ್ತೇನೆ…’
ಚಿಕ್ಕಮ್ಮನನ್ನು ದಡ ಮುಟ್ಟಿಸಿ, “ಅಬ್ಟಾ ಇಬ್ಬರನ್ನೂ ಉಳಿಸಿಕೊಂಡೆ’ ಅಂದುಕೊಳ್ಳುತ್ತಾ, ಒಮ್ಮೆ ದೀರ್ಘವಾಗಿ ನಿಟ್ಟುಸಿರುಬಿಟ್ಟು, ದೋಣಿಯತ್ತ ನೋಡಿದರೆ, ಬುರ್ಖಾ ಧರಿಸಿದ್ದ ಹೆಣ್ಣೊಬ್ಬಳು ಅದೇನನ್ನೋ ಹಿಡಿದುಕೊಂಡು ಮುಳುಗೇಳುತ್ತಿದ್ದುದು ಕಾಣಿಸಿತು. ಆಗಲೇ ನೆನಪಾಯ್ತು; ಆ ಹೆಂಗಸು, ನಮ್ಮೊಂದಿಗೇ ದೋಣಿ ಹತ್ತಿದ್ದಳು. ಅವಳೊಂದಿಗೆ ಪುಟ್ಟ ಮಗುವಿತ್ತು. ಆ ತಾಯಿ-ಮಗು, ಜೀವ ಉಳಿಸಿಕೊಳ್ಳಲು ಹೋರಾಡುತ್ತಿದ್ದಾರೆ ಎಂದು ಅರ್ಥವಾದಾಗ, ಆಗಿದ್ದ ಆಯಾಸವನ್ನೆಲ್ಲ ಮರೆತು, ಮತ್ತೆ ನೀರಿಗೆ ಜಿಗಿದೆ. ಕಡೆಗೊಮ್ಮೆ ಆ ಹೆಂಗಸಿದ್ದ ಸ್ಥಳ ತಲುಪಿದೆನಲ್ಲ; ಅದೇ ಕ್ಷಣಕ್ಕೆ, ಆಕೆಯಿಂದ ಮಗು ಕೈತಪ್ಪಿ ಹೋಯಿತು. ಒಂದು ಜೀವವನ್ನಾದರೂ ಉಳಿಸಬೇಕು ಅಂದುಕೊಂಡೇ, ಆಕೆಯ ದುಪ್ಪಟ್ಟಾಕ್ಕೆ ಕೈ ಹಾಕಿದೆ. “ನನ್ನ ಮಗು ಬೇಕು ಕಣಪ್ಪಾ… ನನ್ನನ್ನ ಹಿಡ್ಕೊಬೇಡ, ಬಿಟಿºಡು’ ಎಂದು ಆಕೆ ಚೀರಿದಳು. ಮತ್ತೆ ಅವಳನ್ನು ಮುಟ್ಟಲು ಧೈರ್ಯವಾಗಲಿಲ್ಲ. ಆ ತಾಯಿ-ಮಗು, ನನ್ನ ಕಣ್ಮುಂದೆಯೇ ಕೊಚ್ಚಿಕೊಂಡು ಹೋಗಿಬಿಟ್ಟರು..’ ಹೀಗೆ ಮುಗಿಯುತ್ತದೆ ಕೃಷ್ಣ ದಾಸ್‌ನ ಮಾತು.
ಇಡೀ ಸಂದರ್ಭವನ್ನು ಪ್ರತ್ಯಕ್ಷ ಕಂಡರಲ್ಲ; ಅವರೆಲ್ಲ ಕೃಷ್ಣ ದಾಸ್‌ನ ಸಾಹಸವನ್ನು ಮೆಚ್ಚಿಕೊಂಡರು. ಖುದ್ದಾಗಿ ಚಾನಲ್‌ಗಳಿಗೆ ಹೋಗಿ ಸುದ್ದಿಕೊಟ್ಟರು. ಪತ್ರಿಕೆಗಳು, ನಾಮುಂದು ತಾಮುಂದು ಎಂಬಂತೆ ಸುದ್ದಿ ಪ್ರಕಟಿಸಿದವು. ಕೃಷ್ಣದಾಸ್‌ನ ಸಾಹಸವನ್ನು ಪತ್ರಿಕೆ, ಚಾನೆಲ್‌ಗಳ ಮೂಲಕ ತಿಳಿದ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್, ಈ ಹುಡುಗ ಕಲಿಯುಗದ ಕೃಷ್ಣಪರಮಾತ್ಮ ಎಂದೆಲ್ಲಾ ಕೊಂಡಾಡಿದರು.
“ಉಕ್ಕಿ ಹರಿಯುವ ನದಿಯಲ್ಲಿ ಒಂದೆರಡಲ್ಲ, ಮೂರು ಬಾರಿ ಪ್ರವಾಹದ ವಿರುದ್ಧ ಈಜಿದೆಯಲ್ಲ; ಅಂಥ ಧೈರ್ಯ ಹೇಗೆ ಬಂತು?’ ಎಂದು ಪತ್ರಿಕೆಯವರು ಕೇಳಿದ್ದಕ್ಕೆ- “ಪ್ರವಾಹ ಬಂದಿದೆ ಅಂತ ಹೆದರೊಬೇಡ. ಅಮ್ಮ ಮತ್ತು ಚಿಕ್ಕಮ್ಮನ ಜೀವ ಉಳಿಸು. ವೇಗವಾಗಿ ಈಜಿಕೊಂಡು ಹೋಗಿಬಿಡು. ಸಾಧ್ಯವಾದರೆ, ಬೇರೆ ಪ್ರಯಾಣಿಕರನ್ನೂ ಕಾಪಾಡು…’ ಎಂದಷ್ಟೇ ಫೋನ್ ಮಾಡಿದ್ದಾಗ ಅಪ್ಪ ಹೇಳಿದ್ದರು. ಅದಷ್ಟೇ ನನ್ನ ಮನಸ್ಸಲ್ಲಿತ್ತು. ಇಬ್ಬರ ಜೀವ ಉಳಿಸಿದ್ದಕ್ಕೆ ಹೆಮ್ಮೆ ಅನಿಸುತ್ತೆ. ಆದರೆ ನನ್ನ ಕಣ್ಮುಂದೆಯೇ, ಒಂದೇ ಕ್ಷಣದಲ್ಲಿ ಆ ತಾಯಿ-ಮಗು ಕೊಚ್ಚಿಕೊಂಡು ಹೋಗಿಬಿಟ್ರಲ್ಲ- ಅದನ್ನು ನೆನಪಿಸಿಕೊಂಡಾಗ ಸಂಕಟ ಆಗುತ್ತೆ…’ ಅಂದಿದ್ದಾನೆ ಕೃಷ್ಣದಾಸ್.
ಕಮಲ್ ಕೃಷ್ಣದಾಸ್‌ನಂಥ ಧೀರ ಮಕ್ಕಳ ಸಂತತಿ ಹೆಚ್ಚಲಿ. ನಮ್ಮ ಮಕ್ಕಳೂ ಕೃಷ್ಣದಾಸ್‌ನಂಥ ಸಾಹಸಿಗಳೇ ಆಗಲಿ ಎಂದೆಲ್ಲಾ ಪ್ರಾರ್ಥಿಸಬೇಕು ಅನ್ನಿಸುವುದು ಇಂಥ ಪ್ರಸಂಗಗಳ ಕುರಿತು ಓದಿದಾಗಲೇ. ಅಲ್ಲವೆ?
ಎ.ಆರ್. ಮಣಿಕಾಂತ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.