ಎಲ್ಲರೂ ಹುಳಿ ದ್ರಾಕ್ಷಿಗೇ ಕೈ ಚಾಚುವುದೇಕೆ?
Team Udayavani, Feb 26, 2023, 5:31 AM IST
ಪ್ರಕಾಶ, ಒಂದು ಖಾಸಗಿ ಕಂಪೆನಿಯಲ್ಲಿ ಮ್ಯಾನೇಜರ್. ಆ ಕಂಪೆನಿಯಲ್ಲಿ ಸಂಬಳ ಚೆನ್ನಾಗಿದೆ. ಎಲ್ಲ ಸವಲತ್ತುಗಳೂ ಇವೆ. ಅಲ್ಲಿನ ಸಂಪಾದನೆಯ ಹಣದಿಂದಲೇ ಪ್ರಕಾಶ ಮೈಸೂರಿನಲ್ಲಿ ಒಂದು ಸೈಟ್ ಖರೀದಿಸಿದ್ದಾನೆ. ಅವನದು ಹೊರೆಯೇ ಇಲ್ಲದ ಸಂತೃಪ್ತ ಬದುಕು. ಆದರೂ ಪ್ರಕಾಶನಿಗೆ ನೆಮ್ಮದಿಯಿಲ್ಲ. ಅವನ ಜತೆಗೇ ಓದಿಕೊಂಡ ಒಂದಿಬ್ಬರು ತಹಶೀಲ್ದಾರ್ ಹುದ್ದೆ ಯಲ್ಲಿದ್ದಾರೆ. ಇನ್ನೊಂದಿಬ್ಬರು ಅಮೆರಿಕದಲ್ಲಿದ್ದಾರೆ. ಇದನ್ನೆಲ್ಲ ಸುಮ್ಮನೇ ನೆನಪಿಸಿಕೊಂಡರೂ ಸಾಕು; ಪ್ರಕಾಶ ಖಿನ್ನನಾಗುತ್ತಾನೆ.
ಗೌರಿಯ ಗಂಡ ಬಿಸಿನೆಸ್‌ಮನ್. ಒಂದಿಷ್ಟು ಕೈ ಬಿಗಿಹಿಡಿದು ಖರ್ಚು ಮಾಡುತ್ತಾನೆ. ಈ ಕಾರಣಕ್ಕೇ ಗೌರಿಗೆ ಗಂಡನೆಂದರೆ ಅಸಮಾಧಾನ, ತಾತ್ಸಾರ. “ಪಕ್ಕದ್ಮನೆ ಪಂಕಜಾಳ ಗಂಡನನ್ನ ನೋಡಿ ಕಲಿತುಕೊಳಿ. ಮೊನ್ನೆ ಅವಳು ಹಾಗೇ ಸುಮ್ಮನೆ ಮಾತಾಡುತ್ತಾ, ಸೀರೆ ತಗೋಬೇಕಿತ್ತು’ ಅಂದಳಂತೆ. ಅಷ್ಟಕ್ಕೇ ಅವನು ಮರುಮಾತಾಡದೆ, ಹತ್ತು ಸಾವಿರ ರೂ. ತೆಗೆದು ಟೇಬಲ್ ಮೇಲಿಟ್ಟು ಹೋದನಂತೆ. ನೀವೂ ಇದೀರ ದಂಡಕ್ಕೆ! ಆರು ಸಾವಿರ ಕೇಳಿದ್ರೆ ಎರಡು ಸಾವಿರ ಕೊಟ್ಟು ಹೋಗಿಬಿಡ್ತೀರ’ ಎಂದೆಲ್ಲ ಅವಳು ಅವಾಗಾವಾಗ ಜೋರು ಮಾಡುತ್ತಾಳೆ. ಅವಳಿಗೆ ಗಂಡನಲ್ಲಿ ಏನೋ ಕೊರತೆ ಕಾಣಿಸುತ್ತದೆ. ನನ್ನ ಗಂಡನೂ ಪಕ್ಕದ್ಮನೆಯವಳ ಗಂಡನ ಥರಾನೇ ಇರಬಾರದಿತ್ತೆ ಅನಿಸುತ್ತದೆ!
ರಫೀಕ್, ಎನ್ ಫೀಲ್ಡ್ ಬೈಕ್‌ನ ಒಡೆಯ. ‘ಒಂದೂಕಾಲು ಲಕ್ಷ ಕೊಟ್ಟು ಅದನ್ನು ತಗೊಂಡೆ’ ಅನ್ನುವುದು ಅವನ ಮಾತು. ದಿನವೂ ಬೈಕ್‌ನ ಬಗ್ಗೆ ಕೊಚ್ಚಿಕೊಳ್ಳುತ್ತಿದ್ದವನು ವಾರದಿಂ ದ ಮಂಕಾಗಿದ್ದಾನೆ. ಡಿಪ್ರಶನ್‌ಗೆ ಹೋದವನಂತೆ ವರ್ತಿಸುತ್ತಿದ್ದಾನೆ. ಇದ್ದಕ್ಕಿದ್ದಂತೆ ಇವನಿಗೆ ಏನಾಯಿತು ಎಂದು ವಿಚಾರಿಸಿದರೆ, ಎದುರು ಮನೆಯವನು ಎರಡು ಲಕ್ಷ ಕೊಟ್ಟು ನ್ಪೋರ್ಟ್ಸ್ ಬೈಕ್ ಖರೀದಿಸಿರುವ ಸಂಗತಿ ತಿಳಿಯಿತು. ಈ ಕಾರಣಕ್ಕೆ ಆತ ಖನ್ನನಾಗಿದ್ದ.
ಈವರೆಗೂ ಹೇಳಿದ ಉದಾಹರಣೆ ಗಳೆಲ್ಲ ದಿನನಿತ್ಯದ ಬದುಕಿನಲ್ಲಿ ನಾವೆಲ್ಲರೂ ಕಾಣುತ್ತಲೇ ಇರುವಂಥವು. ಇರುವುದನ್ನು ಬಿಟ್ಟು ಇಲ್ಲದ್ದರ ಕುರಿತೇ ಯೋಚಿಸುವ ಜನರ ಬಗ್ಗೆ ದಿನವಿಡೀ ಉದಾಹರಣೆಗಳನ್ನು ನೀಡಬಹುದು. ಇನ್ನು ಕಾಲೇಜಿಗೆ ಹೋಗುವ ಮಕ್ಕಳು ಪಾಕೆಟ್ ಮನಿ, ಬೈಕ್, ಮೊಬೈಲ್ ಫೋನ್/ ದುಬಾರಿ ಬೆಲೆಯ ಶೂ, ವಾಚ್ ಕೊಡಿಸುವಂತೆ ಹೆತ್ತವರನ್ನು ಕೇಳುವುದು, ಅದಕ್ಕಾಗಿ ಒತ್ತಾಯಿಸುವುದು, ಎಮೋಶನಲ್ ಬ್ಲಾಕ್‌ವೆುàಲ್ ಮಾಡುವುದು, ಕಡೆಗೆ- ಇದೇ ವಿಷಯಕ್ಕೆ ಜಗಳವನ್ನೂ ಮಾಡಿಬಿಡುವುದು ತಮ್ಮ ಬಳಿ ಆ ವಸ್ತುವಿಲ್ಲ ಅನ್ನುವ ಕಾರಣದಿಂದಲ್ಲ, ಬದಲಾಗಿ ಅದು ತಮ್ಮ ಜತೆಗಾರರ ಬಳಿ ಇದೆ ಎಂಬ ಕಾರಣಕ್ಕೆ! ಇಲ್ಲಿಯೂ ಅಷ್ಟೆ; ಸಂತೃಪ್ತಿ, ಸಮಾಧಾನದ ಬದುಕಿಗೆ ಅಗತ್ಯವಿರುವ ಎಲ್ಲವೂ ನಮಗಿದೆ ಎಂದು ಯೋಚಿಸಬೇಕಾದ ಮನಸ್ಸು, ಇರುವುದನ್ನು ಕಂಡು ಸಂಭ್ರಮಿಸುವ ಬದಲು ಇರದುದರ ಕುರಿತೇ ಯೋಚಿಸಿ ಕನಲುತ್ತದೆ, ಕೊರಗುತ್ತದೆ.
****
ಯಾಕೆ ಹೀಗಾಗುತ್ತದೆ? ಇರುವುದೆಲ್ಲ ವನ್ನೂ ಬಿಟ್ಟು ಇಲ್ಲದ್ದಕ್ಕೆ ಈ ಹಾಳು ಮನಸೇಕೆ ಮನಸ್ಸು ಆಸೆಪಡುತ್ತದೆ ಎಂಬ ಪ್ರಶ್ನೆಗೆ “ಇದಮಿತ್ಥಂ’ ಎಂಬಂಥ ಉತ್ತರವಿಲ್ಲ. ಆದರೆ ಅಂಥದೊಂದು ತಹತಹಕ್ಕೆ ಆಸೆಯೇ (ದುರಾಸೆಯೇ) ಕಾರಣ ಎಂಬುದರಲ್ಲಿ ಎರಡು ಮಾತಿಲ್ಲ. ಏಕೆಂದರೆ ಮನುಷ್ಯ ಅನ್ನಿಸಿಕೊಂಡ ಮೇಲೆ ಎಲ್ಲರೂ ಒಂದೇ ರೀತಿ ಇರಲು, ಬದುಕಲು ಸಾಧ್ಯವಿಲ್ಲ. ಈ ಸಂಗತಿ ಎಲ್ಲರಿಗೂ ಗೊತ್ತಿರುತ್ತದೆ. ಹಾಗಿದ್ದರೂ ಕೈಗೆ ಎಟುಕದ ದ್ರಾಕ್ಷಿಗೇ ಎಲ್ಲರೂ ಆಸೆ ಪಡುತ್ತಾರೆ.
ಈ ಭೂಮಿ ಮೇಲೆ ಯಾರೂ ಶಾಶ್ವತವಲ್ಲ ಎಂದು ವೇದಾಂತ ಹೇಳುವವನೂ ಒಮ್ಮೆ ತನ್ನ ಬೋಳು ನೆತ್ತಿಯನ್ನು ಸವರಿಕೊಂಡು ಎದುರಿಗೆ ಕೂತವನ ಹಿಪ್ಪೆ ಕೂದಲಿನ ತಲೆಯನ್ನೇ ಆಸೆಯಿಂದ ನೋಡುತ್ತಾನೆ. ಆ ಕ್ಷಣಕ್ಕೆ ಅವನ ವಿದ್ಯೆ, ಅರಿವು, ಅಗಾಧ ಜ್ಞಾನ ಎಲ್ಲವೂ ಮಾಯವಾಗಿ, ಆತ ಸಾಮಾನ್ಯ ಮನುಷ್ಯನಂತೆ ಯೋಚಿಸಲು ತೊಡಗುತ್ತಾನೆ. ಇಲ್ಲದ್ದರ ಬಗ್ಗೆ ಧ್ಯಾನಿಸುವವರ ವಿವರ ಇಷ್ಟಕ್ಕೇ ನಿಲ್ಲುವುದಿಲ್ಲ. ಮೈತುಂಬ ಒಡವೆ ಹೇರಿಕೊಂಡಿದ್ದರೂ- “ನಿಮ್ಮ ಆಫೀಸಿನಲ್ಲಿ ಯಾರೋ ಅಪರಿಚಿತರಿಗೆ ದಾನ ಮಾಡೋಕೆ ಹಣವಿರುತ್ತೆ. ನಾನು ಒಂದು ಒಡವೆ ಕೇಳಿದ್ರೆ ದುಡ್ಡಿಲ್ಲ ಅಂತೀರಲಿ?’ ಎಂದು ರೇಗುವ ಹೆಂಡತಿ; ಹುಡುಗ ಹಳ್ಳಿಯಲ್ಲಿದ್ದಾನೆ ಎಂಬ ಕಾರಣದಿಂದಲೇ ಮದುವೆಗೆ ಒಪ್ಪದೆ, ಬೆಂಗಳೂರಿನ ಗಂಡೇ ಬೇಕು ಎಂದು ಹಟ ಹಿಡಿಯುವ ಹುಡುಗಿ; ಯಾವುದೋ ಗಾಳಿಮಾತು ಕೇಳಿ, ಅದನ್ನೇ ನಿಜವೆಂದು ಭಾವಿಸಿ- “ಛೆ, ನಾನು ಅಂಥ ಕಡೆ ಕೆಲಸ ಮಾಡಬೇಕಿತ್ತು’ ಎಂದು ಹೇಳಿಕೊಂಡು ನರಳುವ ನಾವು-ನೀವು, ಸದಾ ಇರದುದರ ಕಡೆಗೇ ಯೋಚಿಸುವವರೇ.ಯಾಕೆ ಹೀಗಾಗುತ್ತದೆ ಎಂದರೆ ಒಬ್ಬೊಬ್ಬರು ಒಂದೊಂದು ಕಾರಣ ಹೇಳಬಹುದು. ಆದರೆ ಎಟುಕದ ದ್ರಾಕ್ಷಿಗೆ ಆಸೆಪಟ್ಟವರೆಲ್ಲ ನಿರಾಸೆಯ ಜತೆಗೇ ಬದುಕುವಂತಾಗುತ್ತದೆ ಎಂಬುದಷ್ಟೇ ಸತ್ಯ.
-ಎ.ಆರ್.ಮಣಿಕಾಂತ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Contracter Case: ಸಿಐಡಿ ಮೇಲೆ ವಿಶ್ವಾಸವಿಲ್ಲ, ಸಿಬಿಐಗೆ ಕೊಡಿ: ಸಚಿನ್ ಸಹೋದರಿ ಸುರೇಖಾ
First Test Match: ಜಿಂಬಾಬ್ವೆ-ಅಫ್ಘಾನಿಸ್ಥಾನ ಟೆಸ್ಟ್ ಡ್ರಾ
Misuse; ಐಶ್ವರ್ಯ ಗೌಡ ವಿರುದ್ಧ ಪೊಲೀಸ್ ದೂರು ದಾಖಲಿಸಿದ ಡಿ.ಕೆ.ಸುರೇಶ್
Contracter Case: ಸಚಿನ್ ಪಾಂಚಾಳ್ ಪ್ರಕರಣ ಜ.3ರೊಳಗೆ ಸಿಬಿಐಗೆ ಕೊಡಿ: ವಿಜಯೇಂದ್ರ ಆಗ್ರಹ
Dandeli; ಕುಸಿದು ಬಿದ್ದು ಯುಪಿ ಮೂಲದ ಯುವಕ ಸಾ*ವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.