ಬದಲಾವಣೆಯ ತಂಗಾಳಿ: ತೆಂಗಿನಕಾಯಲ್ಲಿ ಫಲದಾಯಕನ ಕಾಯ
Team Udayavani, Aug 17, 2017, 8:21 AM IST
ಗಣೇಶನ ಹಬ್ಬದ ಸಂಭ್ರಮದ ಕ್ಷಣಕ್ಕೆ ಕನ್ನಾಡು ತೆರೆದು ಕೊಳ್ಳುತ್ತಿದೆ. ಗಣೇಶನ ವಿಗ್ರಹಗಳಿಗೆ ಕಲಾಗಾರರು ಅಂತಿಮ ಟಚ್ ಕೊಡುತ್ತಿದ್ದಾರೆ. ಇನ್ನೊಂದೇ ವಾರ. ಎಲ್ಲರ ಮನದೊಳಗೆ ಗಣೇಶ ಇಳಿದುಬಿಡುತ್ತಾನೆ. ಪುಳಕದ ಅನುಭವ, ಅನುಭಾವ.
ಗಣೇಶ ಕಲ್ಪವೃಕ್ಷ ಫಲಪ್ರಿಯ. ಗಣಹವನಕ್ಕೆ ತೆಂಗಿನಕಾಯಿಯ ಎಲ್ಲ ಭಾಗಗಳು ಅವಶ್ಯ. ಹೋಮಿಸಲು ಕೂಡ. ಮಂಟಪಕ್ಕೆ ತೆಂಗಿನ ಗರಿಯಿಂದ ತಯಾರಿಸಿದ ಹೆಣಿಕೆಯು ಪಾರಂಪರಿಕ. ಹೀಗೆ ಸರ್ವತ್ರ ತೆಂಗಿನ ಬಳಕೆಯು ಗಣೇಶನ ಹಬ್ಬದಲ್ಲಿ ಸ್ಥಾನ ಪಡೆದಿದೆ. ಹಬ್ಟಾಚರಣೆಯಲ್ಲಿ ತೆಂಗು ಇಷ್ಟೊಂದು ಪ್ರಭಾವಿಯಾಗಿ ಆವರಿಸಿರಬೇಕಾದರೆ ಗಣೇಶನ ಮೂರ್ತಿಯೂ ತೆಂಗಿನಕಾಯಿಯದ್ದೇ ಆಗಿಬಿಟ್ಟರೆ ಇನ್ನೂ ಶ್ರೇಷ್ಠವಲ್ವಾ!
ಸರಕಾರದ ಆದೇಶವೊಂದು ಈ ಯೋಚನೆಗೆ ಬೀಜಾಂಕುರ ಮಾಡಿತು. “”ನೈಸರ್ಗಿಕವಲ್ಲದ ವಸ್ತುಗಳಿಂದ ತಯಾರಿಸುವ ಗಣಪನ ಮೂರ್ತಿಯನ್ನು ಸಾರ್ವಜನಿಕವಾಗಿ ಪ್ರತಿಷ್ಠಾಪಿಸಬಾರದು” ಎನ್ನುವುದು ಜಿಲ್ಲಾಧಿಕಾರಿಗಳ ಕಟ್ಟುನಿಟ್ಟಿನ ಆದೇಶ. ಇದಕ್ಕೆ ಕಾರಣ ಇಲ್ಲದಿಲ್ಲ. ಪ್ಲಾಸ್ಟರ್ ಆಫ್ ಪ್ಯಾರಿಸ್ ಮತ್ತು ರಾಸಾಯನಿಕ ಬಣ್ಣ ಬಳಸಿ ಮೂರ್ತಿಗಳನ್ನು ರಚಿಸುವುದು ವಾಡಿಕೆ. ಗಣೇಶನ ವಿಸರ್ಜನೆ ಬಳಿಕ ಮೂರ್ತಿಯು ನೀರಿನಲ್ಲಿ ಕರಗುವುದಿಲ್ಲ. ಮೂರ್ತಿಯ ಅಂದಕ್ಕಾಗಿ ಲೇಪಿಸಿದ ಕೃತಕ ಬಣ್ಣಗಳು ನೀರಿನೊಂದಿಗೆ ಮಿಶ್ರಗೊಂಡು ಕಲುಷಿತವಾಗುತ್ತದೆ. ಇದರಿಂದ ನಾನಾ ತರಹದ ಕಾಯಿಲೆಗಳು ಬರುವುದಲ್ಲದೆ ಜೀವವೈವಿಧ್ಯಕ್ಕೂ ಹಾನಿಯಾಗುತ್ತದೆ.
ಮಣ್ಣಿನಿಂದಲೇ ಮೂರ್ತಿ ಮಾಡಿದರೆ ಓಕೆ. ಈಗಾಗಲೇ ಈ ಯತ್ನದಲ್ಲಿ ಯಶ ಸಾಧಿಸಿದವರಿದ್ದಾರೆ. ಮಣ್ಣಿನ ಬದಲಿಗೆ ಗಣಪನಿಗೆ ಪ್ರಿಯವಾದ ತೆಂಗಿನಕಾಯಿಯಿಂದಲೇ ಮೂರ್ತಿ ಸಿದ್ಧವಾದರೆ ಪರಿಸರ ನೈರ್ಮಲ್ಯಕ್ಕೆ ಆತಂಕವಿಲ್ಲ. ಜಿಲ್ಲಾಧಿಕಾರಿಗಳ ಈ ಆದೇಶವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಗಂಭೀರವಾಗಿ ಪರಿಗಣಿಸಿತು.
ಧಾರವಾಡ ಎಂಜಿನಿಯರಿಂಗ್ ಕಾಲೇಜಿನ ನಿರ್ವಹಣಾ ಮೇಲ್ವಿಚಾರಕ ಬಾವಿಕಟ್ಟಿಯ ಜಗದೀಶ ಗೌಡ ಮತ್ತು ಅವರ ಸಹೋದರ ವೀರನಗೌಡರು ತೆಂಗಿನಿಂದ ವಿವಿಧ ವಿನ್ಯಾಸಗಳನ್ನು ಸ್ವ-ಆಸಕ್ತಿಗಾಗಿ ಮಾಡುತ್ತಿದ್ದರು. ಆಸಕ್ತರಿಗೆ ಹಂಚುತ್ತಿದ್ದರು. ಮೇಳಗಳಲ್ಲಿ ಪ್ರದರ್ಶನಕ್ಕಿಡುತ್ತಿದ್ದರು. ಅದರಲ್ಲಿ ತೆಂಗಿನಕಾಯಿ ಗಣಪನ ಮೂರ್ತಿಯೂ ಒಂದು. ಗ್ರಾಮಾಭಿವೃದ್ಧಿ ಯೋಜನೆಯ ಯೋಚನೆಗೆ ಜಿಲ್ಲಾಧಿಕಾರಿಗಳ ಆದೇಶವೂ ಬಲ ನೀಡಿತು. ಜಗದೀಶರ ಕಲೆಯನ್ನು ಜನರ ಮುಂದಿಡಲು ಮುಂದಾಯಿತು.
ಯೋಜನೆಯ ಕೌಶಲ ಅಭಿವೃದ್ಧಿ ತರಬೇತಿಯಡಿ ಸ್ವ-ಸಹಾಯ ಸಂಘದ ಐವತ್ತು ಮಹಿಳೆಯರಿಗೆ ಜಗದೀಶರು ತರಬೇತಿ ನೀಡಿದರು. 25 ಮಂದಿಯ ಎರಡು ತಂಡಕ್ಕೆ ಏಳೇಳು ದಿವಸಗಳ ತರಬೇತಿ. ತೆಂಗಿನಕಾಯಿಯ ಆಯ್ಕೆಯಲ್ಲಿಂದ ಅಂತಿಮ ಸ್ಪರ್ಶದ ತನಕದ ಸಿಲೆಬಸ್. ಪರೀಕ್ಷೆಯಲ್ಲಿ ಎಲ್ಲರೂ ಉತ್ತೀರ್ಣ. ಫಲವಾಗಿ ಐನೂರಕ್ಕೂ ಮಿಕ್ಕಿ ತೆಂಗಿನಕಾಯಿಯಲ್ಲಿ ಮೂಡಿದ ಗಣೇಶ ಪೂಜೆಗೆ ಸಿದ್ಧನಾಗಿದ್ದಾನೆ. ಇನ್ನೂ ಐನೂರಕ್ಕೆ ನಕ್ಷೆ ತಯಾರಾಗಿದೆ. “”ಈ ವರುಷ ಒಂದು ಸಾವಿರ ಮನೆಗಳಲ್ಲಿ ತೆಂಗಿನಕಾಯಿಂದ ರಚಿತವಾದ ಗಣಪನ ವಿಗ್ರಹಕ್ಕೆ ಪೂಜೆ ಸಲ್ಲಲ್ಪಡುತ್ತದೆ. ಮನೆಮನೆ ಭೇಟಿ ಮೂಲಕ ಅರಿವು ಮೂಡಿಸುವ ಯತ್ನಗಳಾಗುತ್ತಿವೆ. ಗಣೇಶ ಮೂರ್ತಿ ಅಂದಾಗ ನೀರಿನಲ್ಲಿ ವಿಸರ್ಜನೆ ಮಾಡಬೇಕೆನ್ನುವ ಮೈಂಡ್‌ಸೆಟ್ ಬಹುತೇಕರಲ್ಲಿದೆ. ತೆಂಗಿನ ಗಣಪನನ್ನು ನೀರಿನಲ್ಲಿ ವಿಸರ್ಜನೆ ಮಾಡಿ ಅನಂತರ ಮಣ್ಣಿಗೆ ಸೇರಿಸಿ. ಅದು ಮೊಳಕೆ ಬಂದು ಸಸಿಯಾಗುತ್ತದೆ, ಕಲ್ಪವೃಕ್ಷವಾಗುತ್ತದೆ. ಅದೊಂದು ಪವಿತ್ರ ಮರವಾಗುತ್ತದೆ. ಇಲ್ಲವೇ ಅಂದಕ್ಕಾಗಿ ಶೋಕೇಸಿನಲ್ಲಿಡಿ. ನಮ್ಮ ವಿಚಾರಗಳಿಗೆ ಮಹಿಳೆಯರು ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ” ಎನ್ನುವ ಮಾಹಿತಿ ನೀಡಿದರು ಪ್ರಿಯಾ. ಈ ಉದ್ದೇಶಕ್ಕಾಗಿಯೇ ಧಾರವಾಡದ ಕೆಲ್ಕೇರಿಯಲ್ಲಿ ರೂಪುಗೊಂಡ ತೆಂಗಿನಕಾಯಿ ಗಣೇಶನ ಮೂರ್ತಿ ಕೆತ್ತನೆಗಾರರ ಸಮಿತಿಯ ಮುಖ್ಯಸ್ಥರಿವರು.
ಐವತ್ತು ಮಂದಿ ತರಬೇತಿಯೇನೋ ಪಡೆದರು. ಪ್ರಾಕ್ಟಿಕಲ್ ವಿಚಾರಕ್ಕೆ ಬಂದಾಗ ಸಹಜವಾಗಿ ಎಡವಿದರು. ಆಕಾರಗಳು ಮೊದಲಿಗೆ ವಿಕಾರವಾದುವು. ಅನುಭವದ ಗಾಢತೆ ವಿಸ್ತಾರವಾಗುತ್ತಾ ಬಂದಂತೆ ಕಲೆ ಕೈವಶವಾಯಿತು. ಒಬ್ಬರು ದಿವಸಕ್ಕೆ ನಾಲ್ಕು ಮೂರ್ತಿಗಳನ್ನು ರಚಿಸುವಷ್ಟು ನಿಷ್ಣಾತರಾದರು. ತೆಂಗಿನಕಾಯಿಯ ಆಯ್ಕೆಗೆ ಮೊದಲಾದ್ಯತೆ. ಉರುಟಾಗಿರುವ ಸುಲಿಯದ ಕಾಯಿಯಾಗಿರಬೇಕು. ಹೆಚ್ಚು ಎಳೆಯದಾಗಿರಬಾರದು, ಕೊಬ್ಬರಿಯ ಹಂತಕ್ಕೂ ತಲುಪಿರಬಾರದು -ಇಂತಹ ಕಾಯಿಗಳು ಮೂರ್ತಿಯ ರಚನೆಗೆ ಆಯ್ಕೆ. ಯಲ್ಲಾಪುರದಿಂದ ಕುಸುರಿಗೆ ಬೇಕಾದ ಆಕಾರದ ಕಾಯಿಗಳ ಖರೀದಿ. ಅದರ ಮೇಲೆ ಸ್ಕೆಚ್ ಹಾಕುವುದು ಮೊದಲ ಕೆಲಸ. ಮತ್ತೆಲ್ಲ ಚಾಕುವಿನ ಚಮತ್ಕೃತಿ. ಮನದೊಳಗಿನ ಕಲೆಯು ಚಕಚಕನೆ ತೆಂಗಿಗೆ ಆಕಾರ ಕೊಡುತ್ತದೆ. ಗಣಪನನ್ನು ಕೂರಿಸುವುದಕ್ಕೆ ಚಿಕ್ಕ ಪೀಠ. ಒಂದು ಮೂರ್ತಿಗೆ ನಾಲ್ಕುನೂರ ಒಂದು ರೂಪಾಯಿ. ಹೀಗೆ ಸಿದ್ಧವಾದ ಮೂರ್ತಿಗೆ ಕಿರೀಟ, ಕಿವಿ ಆಭರಣ, ಕಣ್ಣುಗಳನ್ನು ಪ್ರತ್ಯೇಕವಾಗಿ ಫಿಕ್ಸ್ ಮಾಡುತ್ತಾರೆ. ಬಹುಕಾಲ ಕೆಡದಿರುವಂತೆ ಟಚ್‌ವುಡ್ಡಿನ ಲೇಪ. “”ಹೀಗೆ ಮಾಡಿದ್ದರಿಂದ ಮೂರ್ತಿಗೆ ತಾಳಿಕೆ ಹೆಚ್ಚು. ಅಲಂಕಾರಕ್ಕಾಗಿ ಕಾಪಿಡಬಹುದು. ಪರಿಸರಕ್ಕೆ ಹಾನಿಯಿಲ್ಲ. ತೆಂಗು ನೈಸರ್ಗಿಕ ಉತ್ಪನ್ನ. ಬದಲಾದ ಕಾಲಘಟ್ಟದಲ್ಲಿ ಇಂತಹ ಬದಲಾವಣೆಯ ಮನಃಸ್ಥಿತಿಯನ್ನೂ ರೂಢಿಸುವುದು ಅನಿವಾರ್ಯವಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಸ್ಥಾಪಿತ ಮಾರಾಟಗಾರರು ಇದನ್ನು ಪಕ್ಕನೆ ಒಪ್ಪಲಾರರು ಎಂದೂ ಗೊತ್ತಿದೆ. ಆದರೆ ಜನರು ಒಪ್ಪುತ್ತಿದ್ದಾರೆ” ಎನ್ನುವ ಮಾಹಿತಿ ನೀಡುತ್ತಾರೆ, ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ಧಾರವಾಡದ ದಿನೇಶ್ ಎಂ.
ಹುಬ್ಬಳ್ಳಿ, ಧಾರವಾಡ ಪೇಟೆಯುದ್ದಕ್ಕೂ ಓಡಾಡಿದರೆ ಸಾಕು, ಗಣೇಶನ ಸಾಲು ಸಾಲು ವಿಗ್ರಹಗಳು. ಕೆಲವೆಡೆ ಇಲ್ಲಿ ಗಣಪತಿ ಮೂರ್ತಿ ಸಿಗುತ್ತದೆ ಎನ್ನುವ ಫಲಕವೂ ಗೋಚರವಾಗುತ್ತದೆ. ವ್ಯಾಪಾರವನ್ನು ನೆಚ್ಚಿಕೊಂಡ ಬಹು ಮಂದಿ ಮೂರ್ನಾಲ್ಕು ತಿಂಗಳ ಹಿಂದೆಯೇ ಗಣೇಶನ ಮೂರ್ತಿಯ ರಚನೆಯಲ್ಲಿ ಬ್ಯುಸಿಯಾಗಿದ್ದರು. ಬಹುಶಃ ಪಿಓಪಿಯಿಂದ ಬಳಸಿ ಮಾಡಿದ ವಿಗ್ರಹಗಳೂ ಸಾಕಷ್ಟು ಇದ್ದಿರಬೇಕು. ಜಿಲ್ಲಾಧಿಕಾರಿಗಳ ಆದೇಶವು ಇವರೆಲ್ಲರ ಮುಖದಲ್ಲಿ ವಿಷಾದದ ಗೆರೆಯನ್ನು ಮೂಡಿಸಿದೆ. ಕೊನೆ ಕ್ಷಣದಲ್ಲಿ ಅದೇಶವೂ ರದ್ದಾದರೆ ಆಶ್ಚರ್ಯವಿಲ್ಲ. ಯಾಕೆಂದು ಪ್ರತ್ಯೇಕ ಹೇಳಬೇಕಾಗಿಲ್ಲವಲ್ಲ. ಗಣೇಶ ಹಬ್ಬದಂತೆ ಇತರ ಹಬ್ಬಗಳೂ ಇವೆಯಲ್ಲ. ಉದಾಹರಣೆಗೆ, ದೀಪಾವಳಿ, ನವರಾತ್ರಿ. ಇಂತಹ ಸಂದರ್ಭಗಳಲ್ಲಿ ಯಾವ ರೀತಿಯ ಮಾದರಿಯನ್ನು ಕೊಡುತ್ತೀರಿ? ಪ್ರಿಯಾ ಹೇಳುತ್ತಾರೆ, “”ಈಗಾಗಲೇ ಸಾವಿರದಷ್ಟು ಗಣೇಶನ ಮೂರ್ತಿಗಳು ಸಿದ್ಧವಾಗಿವೆ. ಮೂರ್ತಿಗೆ ಅಂದವನ್ನು ಕೊಡುವಲ್ಲಿ ಸುಧಾರಣೆಯಾಗುತ್ತಿವೆ. ಯಾವುದೇ ದೇವರ ಮೂರ್ತಿಗಳನ್ನು ತೆಂಗಿನಲ್ಲಿ ಮೂಡಿಸಬಹುದೆಂಬ ಧೈರ್ಯ ಬಂದಿದೆ. ಕರಕುಶಲ ಮೇಳಗಳಲ್ಲಿ ಇಂತಹ ವಿನ್ಯಾಸಗಳನ್ನು ಪರಿಚಯಿಸಬಹುದು. ದೇವಸ್ಥಾನಗಳ ಪಕ್ಕದ ಮಳಿಗೆಗಳಲ್ಲಿಟ್ಟು ಜನರ ಚಿತ್ತವನ್ನು ಸೆಳೆಯಬಹುದು. ಗುಣಮಟ್ಟವನ್ನು ವೃದ್ಧಿಸಿ ಈ ದಿಸೆಯಲ್ಲಿ ನಮ್ಮ ಸಮಿತಿಯು ಹೆಜ್ಜೆಯೂರಲಿದೆ.”
ಆರಂಭದಲ್ಲಿ ತರಬೇತಿಗೆ ಸದಸ್ಯರನ್ನು ನಿಯುಕ್ತಿ ಮಾಡುವಾಗ ನಿಜಾಸಕ್ತರನ್ನೇ ಆಯ್ಕೆ ಮಾಡಿದ್ದು ದೊಡ್ಡ ಬಲ. ಪ್ರಿಯಾ ಸ್ವತಃ ಕಲಾವಿದೆ. ಚಾಕು ಹಿಡಿದು ತೆಂಗಿನಕಾಯಿಯ ಮೇಲೆ ಸುಲಭದಲ್ಲಿ ಮತ್ತು ಕ್ಷಿಪ್ರವಾಗಿ ಕುಸುರಿ ಮಾಡಬಲ್ಲರು. ಎಲ್ಲ ಸದಸ್ಯರ ಆಸಕ್ತಿ, ಹುಮ್ಮಸ್ಸಿನಲ್ಲಿ ಪೈಪೋಟಿ ಇರುವುದರಿಂದ ಅಲ್ಪಕಾಲದಲ್ಲಿ ಐನೂರು ಮೂರ್ತಿಗಳನ್ನು ಮಾಡಲು ಸಾಧ್ಯವಾಯಿತು. ಸಮಿತಿ ರೂಪೀಕರಣದ ಬಳಿಕ ಆಸಕ್ತರ ಒಲವು ಹೆಚ್ಚಾಗಿ ಸದಸ್ಯರ ಸಂಖ್ಯೆಯಲ್ಲೂ ಏರಿಕೆಯಾಗುತ್ತಿದೆ. ಈ ಸಮಿತಿಯು ಸ್ವತಂತ್ರವಾಗಿ ಕಾರ್ಯನಿರ್ವಹಿಸಬೇಕೆನ್ನುವುದು ದೂರದೃಷ್ಟಿ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ತೆಂಗಿನ ಗಣೇಶನ ಪರಿಕಲ್ಪನೆಯನ್ನು ಮೆಚ್ಚಿಕೊಂಡಿದ್ದಾರೆ. ತಮ್ಮ ಮನೆಯಲ್ಲೂ ಅನುಷ್ಠಾನಿಸಲು ನಿರ್ಧಾರ ಮಾಡಿದ್ದಾರಂತೆ. ಜಿಲ್ಲಾಧಿಕಾರಿಗಳು ಮತ್ತು ಇತರ ಅಧಿಕಾರಿ ವರ್ಗದವರನ್ನು ಗ್ರಾಮಾಭಿವೃದ್ಧಿ ಯೊಜನೆಯ ವರಿಷ್ಠರು ಭೇಟಿ ಮಾಡಿ ಬೆಂಬಲಿಸಲು ಕೋರಲಿದ್ದಾರೆ. ಪರಿಸರದ ಕಾಳಜಿ ಹೊಂದಿರುವ ಒಂದಿಬ್ಬರು ಮಠಾಧೀಶರು ಕೂಡ ಈಗಾಗಲೇ ಒಲವು ವ್ಯಕ್ತಪಡಿಸಿದ್ದಾರೆ. ಧಾರವಾಡದ ಕೆಲಕೇರಿಯ ಮಂಜುನಾಥ ಹಿರೇಮಠ ಮತ್ತು ಅವರ ತಂಡವು ಬಹುಕಾಲದಿಂದ ಇಂತಹ ನೈಸರ್ಗಿಕ ವಿಚಾರಗಳನ್ನು ಜನರ ಮುಂದಿಡುತ್ತ ಬಂದಿದೆ. ಅನುಷ್ಠಾನವನ್ನೂ ಮಾಡಿದೆ. ಬೆಳಗಾವಿ ಜಿಲ್ಲೆಯ ಖಾನಾಪುರದ ಇಡ್ಲಹುಂಡ್ ಹಳ್ಳಿಯ ಮಲ್ಲಪ್ಪ ಶಂಕರಪ್ಪ ಕುಂಬಾರ್ ಕುಟುಂಬ ಸಾವಿರಗಟ್ಟಲೆ ಮಣ್ಣಿನ ಮೂರ್ತಿಗಳನ್ನು ಪಾರಂಪರಿಕವಾಗಿ ರಚಿಸುತ್ತಿದ್ದಾರೆ. ಕುಲಕಸುಬನ್ನು ಉಳಿಸುತ್ತಿದ್ದಾರೆ.
ಒಂದು ವ್ಯವಸ್ಥೆಗೆ ಒಪ್ಪಿಕೊಂಡ ಮನಸ್ಸು ತತ್‌ಕ್ಷಣ ಬದಲಾವಣೆಯನ್ನು ಸ್ವೀಕರಿಸುವುದಿಲ್ಲ. ಮನೆಯ ಪದ್ಧತಿ, ನಂಬುಗೆಗಳು ಗಾಢವಾಗಿ ಬದುಕಿನಲ್ಲಿ ಬೇರುಗಳನ್ನು ಇಳಿಸಿರುತ್ತವೆ. ಮಾದರಿಗಳು ಮುಂದಿದ್ದರೆ ಅನುಸರಿಸಲು ಹಾದಿ ಸುಲಭ. ಈ ಹಿನ್ನೆಲೆಯಲ್ಲಿ ತೆಂಗಿನಕಾಯಿಯಿಂದ ರೂಪುಗೊಂಡ ಗಣಪತಿಯ ಮೂರ್ತಿಯು ಪಾರಿಸರಿಕವಾಗಿಯೂ ನೈಸರ್ಗಿಕವಾಗಿಯೂ ಜನ ಸ್ವೀಕೃತಿ ಪಡೆಯುತ್ತಿದೆ. ಅವಳಿ ನಗರದಲ್ಲಿ ಬದಲಾವಣೆಯ ತಂಗಾಳಿ ಬೀಸುತ್ತಿದೆ.
ನಾ. ಕಾರಂತ ಪೆರಾಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bengaluru: ಸೆಂಟ್ರಿಂಗ್ ಮರ ಬಿದ್ದು ಬಾಲಕಿ ಸಾವು: ಎಂಜಿನಿಯರ್ ವಶಕ್ಕೆ
ಲೋಕೋಪಯೋಗಿ To ಸಾಹಿತ್ಯಕ್ಷೇತ್ರ: ಚಲನಚಿತ್ರದ ಮೂಲಕ ಖ್ಯಾತಿಗಳಿಸಿದ ನಾ.ಡಿಸೋಜ ಕಾದಂಬರಿಗಳು…
Actor Darshan: ಮೈಸೂರಿಗೆ ತೆರಳಲು ದರ್ಶನ್‌ಗೆ ನೀಡಿದ್ದ 2 ವಾರಗಳ ಗಡುವು ಅಂತ್ಯ
HMPV Virus: ಭಾರತದ ಮೊದಲ ಎಚ್‌ಎಂಪಿವಿ ಸೋಂಕು ಪ್ರಕರಣ ಬೆಂಗಳೂರಿನಲ್ಲಿ ಪತ್ತೆ
Toxic: ಯಶ್ ಬರ್ತ್ ಡೇಗೆ ʼಟಾಕ್ಸಿಕ್ʼನಿಂದ ಸಿಗಲಿದೆ ಬಿಗ್ ಅಪ್ಡೇಟ್; ಫ್ಯಾನ್ಸ್ ಥ್ರಿಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.