ಊಟದ ಬಟ್ಟಲಿಗೆ ತಟ್ಟಲಿರುವ ಅನ್ನದ ಬರದ ಬಿಸಿ!
Team Udayavani, May 3, 2018, 6:00 AM IST
ಭತ್ತದ ಗದ್ದೆಗಳು ಕರಾವಳಿ ಏಕೆ, ಕನ್ನಡ ನಾಡಿನಾದ್ಯಂತ ಮಾಯವಾಗುತ್ತಿವೆ, ಮಾಯವಾಗಿವೆ. ಬ್ರೆಡ್ ತುಂಡಿನಂತೆ ತುಂಡರಿಸಲ್ಪಟ್ಟು ಸೈಟ್‌ಗಳಾಗಿವೆ. ದೊಡ್ಡ ದೊಡ್ಡ ಕಟ್ಟಡಗಳ ಫೌಂಡೇಶನ್‌ಗಳಾಗಿವೆ. ರೈತರ ಕೈಯಿಂದ ಚಿಕ್ಕಾಸಿಗೆ ಗದ್ದೆಗಳನ್ನು ಖರೀದಿಸಿ, ನಾಲ್ಕೈದು ಪಟ್ಟು ಅಧಿಕ ಲಾಭ ಮಾಡಿಕೊಂಡವರ ಸಂಖ್ಯೆ ಅಗಣಿತ.
ಪುತ್ತೂರಿನ ಮುಳಿಯ ಜ್ಯುವೆಲ್ಲರಿ ಸಂಸ್ಥೆಯು ಸಂಘಟಿಸಿದ ಕೃಷಿಕೋತ್ಸವದಲ್ಲಿ ತಳಿತಪಸ್ವಿ ಅಮೈ ದೇವರಾಯರ ಮನದ ಮಾತುಗಳು ಬದುಕಿನ ದಿಕ್ಸೂಚಿ- “ಕೃಷಿಕನಿಗೆ ಸ್ವಯಂ ದುಡಿಮೆಯೇ ಅನ್ನ. ಹಂಗಿನ ಅನ್ನ ಬೇಡ. ನಾವೇ ಬೆಳೆದು ನಾವೇ ಉಣ್ಣುವುದು ಅಭಿಮಾನ ಮತ್ತು ಶ್ರೀಮಂತಿಕೆ. ನಾನು ಐದೆಕ್ರೆ ಗದ್ದೆಯಲ್ಲಿ ಭತ್ತವನ್ನು ಬೆಳೆಯುತ್ತೇನೆ. ಇಲ್ಲಿ ಭತ್ತ ಬೆಳೆಯುತ್ತೇನೆ ಎನ್ನುವುದಕ್ಕಿಂತ ಅಮೃತ ಬೆಳೆಯುತ್ತೇನೆ ಎನ್ನುವುದೇ ಸೂಕ್ತ. ಕೃಷಿ ಅಂದರೆ ಭತ್ತದ ಕೃಷಿ, ಅಡಿಕೆಯಲ್ಲ. ಭತ್ತ ಯಾವಾಗಲೂ ಬತ್ತದು. ನನ್ನ ಅಕ್ಕಿಗೆ ದರ ನಿಗದಿ ಮಾಡುವ ಸ್ವಾತಂತ್ರ್ಯ ನನಗಿದೆ.’
ದೇವರಾಯರ ಅನುಭವ ಮತ್ತು ಅನುಷ್ಠಾನದ ಮಾತು ಕೇಳಿದಾಗ ಥಾಯ್ಲೆಂಡಿನ ಕೃಷಿಸಂತ ಜಾನ್ ಜಾನಾxಯ್ ಬದುಕು ನೆನಪಾಗುತ್ತದೆ, “ಕೃಷಿಯ ಮೂಲ ಉದ್ದೇಶವೇ ಆಹಾರ ಉತ್ಪಾದನೆ. ರೈತನ ಕುಟುಂಬ ಮೊದಲು ತಾನು ಸೇವಿಸುವ ಆಹಾರವನ್ನು ಉತ್ಪಾದಿಸಲು ಆದ್ಯತೆ ಕೊಡಬೇಕು. ಸರಳ ಬದುಕಿನ ಗುರಿ ನಮ್ಮದಾಗಿದ್ದರೆ ಒಂದು ಎಕರೆ ಜಮೀನು ಸಾಕು. ಅದರಲ್ಲಿ ಮಾಡುವ ಸಮಗ್ರ ಕೃಷಿಯು ಆರು ಜನರ ಕುಟುಂಬದ ಆಹಾರ ಭದ್ರತೆಯನ್ನು ಈಡೇರಿಸಬಲ್ಲುದು.’
ಹಾಸನ, ಮಡಿಕೇರಿ, ಶಿವಮೊಗ್ಗ, ಚಿಕ್ಕಮಗಳೂರು, ಕರಾವಳಿ ಜಿಲ್ಲೆಗಳಲ್ಲಿ ಭತ್ತದ ಕೃಷಿಯು ಸಂಸ್ಕೃತಿಯಾಗಿತ್ತು. ಸಂಸ್ಕೃತಿ ಅಂದಾಕ್ಷಣ ಯಾವುದೇ ವರ್ಗ, ಜಾತಿಯನ್ನು ಸಮೀಕರಿಸ ಬೇಕಾಗಿಲ್ಲ. ಬದುಕಿಗಂಟಿದ ಕೃಷಿ ನಂಟು ಎಂದಷ್ಟೇ ತಿಳಿದರೆ ಸಾಕಾದೀತು. ಭತ್ತದ ಸಂಸ್ಕೃತಿ ಎನ್ನುವುದು ಜೀವನದ ಅಡಿಗಟ್ಟು. ಮೊದಲು ಹೊಟ್ಟೆಯನ್ನು ತಂಪಾಗಿಸುವ ಕೆಲಸ, ಮತ್ತಷ್ಟೇ ಬ್ಯಾಂಕಿನ ಪಾಸ್‌ಬುಕ್ ತುಂಬಿದರೆ ಸಾಕೆನ್ನುವ ಮನಸ್ಥಿತಿಯ ಕಾಲಘಟ್ಟದಲ್ಲಿ ಹೊಟ್ಟೆತುಂಬಾ ಉಣ್ಣಲು ತೊಂದರೆಯಿರಲಿಲ್ಲ.
ಈಗಲೂ ತೊಂದರೆಯಿಲ್ಲ ಬಿಡಿ. ಹಲವರನ್ನು ಹತ್ತಿರದಿಂದ ಗಮನಿಸಿದ್ದೇನೆ, “ದುಡ್ಡು ಬಿಸಾಕಿದರೆ ಆಯಿತು. ಉಣ್ಣುವ ಅಕ್ಕಿ ಬೇಕಾಬಿಟ್ಟಿ ಸಿಗುತ್ತದೆ,’ ಎನ್ನುವವರಿಗೆ ದಾಷ್ಟ ಎನ್ನಲೋ, ಅಹಂ ಎನ್ನಲೋ? ಒಂದು ರೂಪಾಯಿಗೆ ಅಕ್ಕಿ ಸಿಗುವ ವರ್ತಮಾನದಲ್ಲಿ ರೂಪಾಯಿಯೂ ತನ್ನ ಬೆಲೆಯನ್ನು ತಾನೇ ಇಳಿಸಿಕೊಂಡಿದೆ.
ಭತ್ತದ ಸಂಸ್ಕೃತಿ ಎನ್ನುವುದು ಮಾತಿಗೆ ವಿಷಯವಾಗಿದೆ, ಅನುಷ್ಠಾನದಲ್ಲಿಲ್ಲ. ಸಮಸ್ಯೆಗಳ ಮೂಟೆಯ ಅದರ ಮೇಲಿರಿಸಿ ವೈಭವೀಕರಿಸುತ್ತಿದ್ದೇವೆ. ದೇವರಾಯರು ಹೇಳುತ್ತಾರೆ, “ಭತ್ತದ ಕೃಷಿಯು ಕ್ಯಾಲಿಕ್ಯುಲೇಟರ್‌ನಲ್ಲಿ ಲೆಕ್ಕ ಮಾಡಿ ಮಾಡುವಂತಹುದಲ್ಲ. ಅದು ಹೊಟ್ಟೆಯ ಪ್ರಶ್ನೆ. ಇಲ್ಲಿ ಲಾಭ-ನಷ್ಟದ ಲೆಕ್ಕಾಚಾರವಿಲ್ಲ. ಯಾವಾಗ ನಮ್ಮ ಕೈಗೆ ಕ್ಯಾಲಿಕ್ಯುಲೇಟರ್ ಬಂತೋ, ಅಲ್ಲಿಂದ ಭತ್ತದ ಕೃಷಿಗೆ ಇಳಿಲೆಕ್ಕ.’ ದುಡ್ಡು ಬಿಸಾಕುವ ಮನಃಸ್ಥಿತಿಯ ಮಂದಿಗೆ ದೇವರಾಯರ ಮಾತು ಢಾಳಾಗಬಹುದು. ಪೈಸೆ ಪೈಸೆ ಲೆಕ್ಕಚಾರಗಳ ಹಿಂದಿರುವ ಮನಸ್ಸುಗಳಿಗೆ ಅಪಥ್ಯವಾಗಬಹುದು. ಆದರದು ವಾಸ್ತವ ಸತ್ಯ.
ಕೃಷಿಕೋತ್ಸವದಲ್ಲಿ ರೈತಬಂಧು ಅಕ್ಕಿ ಗಿರಣಿಯ ಶಿವಶಂಕರ ನಾಯಕ್ ಭತ್ತದ ಕೃಷಿಯ ವಾಸ್ತವ ಚಿತ್ರವನ್ನು ತೆರೆದಿಡುತ್ತಾ, “ಅನ್ನದ ಬಟ್ಟಲು ಖಾಲಿಯಾಗುತ್ತಿದೆ. ಮುಂದಿನ ತಲೆಮಾರಿಗೆ ನಾವು ಕೊಡುವ ಬಳುವಳಿಯಿದು. ಕರಾವಳಿ ಪ್ರದೇಶದಲ್ಲಿ ಬೆಳೆಯುವ ಭತ್ತವು ನಮ್ಮ ಮಿಲ್ಲಿನ ಯಂತ್ರಗಳಿಗೆ ಒಂಭತ್ತು ತಿಂಗಳು ಆಹಾರವಾಗುತ್ತಿತ್ತು. ಈಗ ಅಬ್ಬಬ್ಟಾ ಅಂದರೆ ಒಂದು ತಿಂಗಳಿಗೆ ಬರುತ್ತದಷ್ಟೇ. ತಿನ್ನುವ ಕೈಗಳು ಜಾಸ್ತಿಯಾಗಿವೆ. ಬೆಳೆಯುವ ಕೈಗಳು ಕಡಿಮೆಯಾಗುತ್ತಿದೆ.’ ಇದು ಒಂದು ಮಿಲ್ಲಿನ ಚಿತ್ರವಾದರೆ, ಭತ್ತ ಬೆಳೆಯುವ ಪ್ರದೇಶದ ನೂರಾರು ಮಿಲ್ಲುಗಳ ಚಿತ್ರಗಳನ್ನು ಪ್ರತ್ಯೇಕವಾಗಿ ತೆರೆದಿಡಬೇಕಾಗಿಲ್ಲ.
ಎರಡೂವರೆ ದಶಕಕ್ಕೂ ಮಿಕ್ಕಿದ ಅಕ್ಕಿ ಗಿರಣಿ ಉದ್ಯಮವನ್ನು ನಡೆಸುತ್ತಿರುವ ಅನುಭವಿ ಶಿವಶಂಕರ ನಾಯಕರ ಮಾತಿಗೆ ಕಿವಿಯಾಗುತ್ತಿದ್ದಂತೆ ಮಾತು ಮೌನವಾಗುತ್ತದೆ. ಹಣದ ಸದ್ದಿನ ದಿನಮಾನದಲ್ಲಿ ಅನ್ನದ ಬಟ್ಟಲು ಬರಿದಾಗುವುದನ್ನು ನೋಡುತ್ತಾ ನಿರ್ಲಿಪ್ತರಾಗಿದ್ದೇವೆ. ವಾಣಿಜ್ಯ ಬೆಳೆಗಳ ಭರಾಟೆಯಲ್ಲಿ ಭತ್ತದ ಬೆಳೆಯು ಇಳಿ ಲೆಕ್ಕವಾಗುತ್ತಿದೆಯಲ್ಲಾ ಎಂದು ಅವರ ಗಮನವನ್ನು ಸೆಳೆದಾಗ, “ಸರಕಾರವು ಭತ್ತಕ್ಕೆ ಉತ್ತಮ ಧಾರಣೆ ನೀಡಲಿ. ಆಗ ಕೃಷಿಕರಿಗೂ ಉತ್ಸಾಹ ಬರುತ್ತದೆ. ಲಾಭ ಸಿಗುತ್ತದೆ ಎಂದಾದರೆ ಭತ್ತದ ಕೃಷಿಯು ಪುನಶ್ಚೇತನ ಗೊಳ್ಳಬಹುದು.’ ಎನ್ನುತ್ತಾರೆ.
ಒಂದು ಕ್ವಿಂಟಾಲ್ ಭತ್ತದ ಮಾರುಕಟ್ಟೆ ದರವನ್ನು ವಿಶ್ಲೇಷಿಸಿದಾಗ, ಉತ್ಪಾದನಾ ವೆಚ್ಚಕ್ಕಿಂತ ತೀರಾ ತೀರಾ ಕಡಿಮೆ. ಕೇರಳದಲ್ಲಿದ್ದಂತೆ ಸರಕಾರ ಉತ್ತೇಜನ ನೀಡುವಂತಾಗಬೇಕು. ಭತ್ತಕ್ಕೆ ಉತ್ತೇಜನ ನೀಡಿ ಕೃಷಿಕರ ಬೆನ್ನು ತಟ್ಟುವ ಕಾಯಕವನ್ನು ಮಧ್ಯಪ್ರದೇಶದಲ್ಲಿ ಅಲ್ಲಿನ ಸರಕಾರ ಮಾಡುತ್ತಿದೆ. ಕೃಷಿಗೆ ರೈತರಿಗೆ ಪ್ರೋತ್ಸಾಹ ನೀಡಿ, ಬೆಳೆಸಿದ ಪೂರ್ತಿ ಭತ್ತವನ್ನು ಉತ್ತಮ ಧಾರಣೆಯೊಂದಿಗೆ ತಾವೇ ಖರೀದಿ ಮಾಡುತ್ತಾರೆ. ಸರಕಾರವೇ ಮಿಲ್ ಮಾಡಿ ಅಕ್ಕಿ ಒದಗಿಸುತ್ತಿದೆ. ತಂತಮ್ಮ ಯೋಜನೆಗಳ ಮೂಲಕ ಕೃಷಿಗೆ ಮತ್ತು ಇತರ ಕ್ಷೇತ್ರಗಳಿಗೆ ನೀಡುತ್ತಿದೆ. ಇಂತಹ ಪ್ರಕ್ರಿಯೆ ಕರ್ನಾಟಕದಲ್ಲಿ ಯಾಕೆ ಸಾಧ್ಯವಿಲ್ಲ? ಎಂದು ನಾಯಕ್ ಪ್ರಶ್ನೆ ಮುಂದಿಟ್ಟಾಗ ನಮ್ಮ ಕನ್ನಾಡಿನ ಭಾಗ್ಯದ ಬಾಗಿಲುಗಳು ಒಂದು ಕ್ಷಣ ಕಣ್ಣುರೆಪ್ಪೆ ಮುಚ್ಚಿ ತೆರೆದುವು. “ಗಿರಣಿಯ ಆರಂಭದ ದಿವಸಗಳಲ್ಲಿ ಉದ್ದಿಮೆಗೆ ಬೇಕಾದ ಭತ್ತವು ಭರಪೂರ ಸಿಗುತ್ತಾ ಇದ್ದುವು. ಕೆಲವು ಸಂದರ್ಭಗಳಲ್ಲಿ ನಾವೇ ಬೇಡ ಎಂದುದೂ ಇದೆ. ಈಗ ಫೋನ್ ಮಾಡಿ ವಿಚಾರಿಸಿದರೂ ಸಿಗುತ್ತಾ ಇಲ್ಲ.
ಕಳೆದ ಮೂರ್ನಾಲ್ಕು ವರುಷಗಳಿಂದ ಭತ್ತದ ಬರವು ಕಾಡುತ್ತಿದೆ. ದುಡ್ಡು ಕೊಟ್ರೆ ಅಕ್ಕಿ ಸಿಗುತ್ತದೆ ಎನ್ನುವವರಿದ್ದಾರೆ. ಭತ್ತದ ಬರದ ಬಿಸಿಯು ಈಗ ಮಿಲ್ ತನಕ ಬಂತು. ಇದು ಊಟದ ಬಟ್ಟಲಿಗೆ ತಲುಪಲು ಹೆಚ್ಚು ಕಾಲ ಬೇಕಾಗಿಲ್ಲ. ಭತ್ತಕ್ಕೆ ಹೊರ ರಾಜ್ಯಗಳನ್ನು ಅವಲಂಬಿಸಬೇಕಾಗಿದೆ. ಕನ್ನಾಡಿನ ಎಲ್ಲಾ ಭತ್ತದ ಗಿರಣಿಗಳ ಕಥೆ, ವ್ಯಥೆಯಿದು’ ಎನ್ನುತ್ತಾರೆ.
ಭತ್ತದ ಗದ್ದೆಗಳು ಕರಾವಳಿ ಏಕೆ, ಕನ್ನಾಡಿನಾದ್ಯಂತ ಮಾಯ ವಾಗುತ್ತಿವೆ, ಮಾಯವಾಗಿವೆ. ಬ್ರೆಡ್ ತುಂಡಿನಂತೆ ತುಂಡರಿ
ಸಲ್ಪಟ್ಟು ಸೈಟ್‌ಗಳಾಗಿವೆ. ದೊಡ್ಡ ದೊಡ್ಡ ಕಟ್ಟಡಗಳ ಫೌಂಡೇಶನ್‌ಗಳಾಗಿವೆ. ರೈತರ ಕೈಯಿಂದ ಚಿಕ್ಕಾಸಿಗೆ ಗದ್ದೆಗಳನ್ನು ಖರೀದಿಸಿ, ನಾಲ್ಕೈದು ಪಟ್ಟು ಅಧಿಕ ಲಾಭ ಮಾಡಿಕೊಂಡವರ ಸಂಖ್ಯೆ ಅಗಣಿತ. ಒಂದು ಕಾಲಘಟ್ಟದಲ್ಲಿ ಅಡಿಕೆ ದರವು ಮುಖದಲ್ಲಿ ಚೆಲ್ನಗುವನ್ನು ಬರಿಸಿದ ಸಂದರ್ಭಗಳಲ್ಲಂತೂ ಗದ್ದೆಗಳು ತೋಟಗಳಾದುದು ಇತಿಹಾಸ ಏನಲ್ಲ. ಈಗ ಸ್ವಲ್ಪವಾದರೂ ಭತ್ತದ ಬೇಸಾಯ ಮಾಡೋಣ ಎಂದಾದರೆ ಗದ್ದೆಗಳು ಎಲ್ಲಿವೆ? ಶಿವಶಂಕರ ನಾಯ ಕರು ಕುತೂಹಲ ಅಂಶದತ್ತ ಗಮನ ಸೆಳೆದರು, “ಕರಾವಳಿ ಭಾಗದಲ್ಲಿ ಕುಚ್ಚಲಕ್ಕಿಯ ಬಳಕೆ ವ್ಯಾಪಕವಾಗಿತ್ತು. ಕುಚ್ಚಲಕ್ಕಿಯ ಅನ್ನವನ್ನು ವಿವಿಧ ಖಾದ್ಯ ಗಳೊಂದಿಗೆ ಉಣ್ಣುವುದು ಸ್ವಾದ ಮತ್ತು ಹೆಮ್ಮೆಯ ವಿಚಾರ. ಈಚೆಗಿನ ದಿವಸಗಳಲ್ಲಿ ಕುಚ್ಚಲಕ್ಕಿಯ ಬೇಡಿಕೆ ಕಡಿಮೆ ಯಾಗುತ್ತದೆ. ಬದಲಾದ ಆಹಾರ ವಿಧಾನದಿಂದಾಗಿ ಪಾಲಿಶ್ ಮಾಡಿದ ಬಿಳಿ ಅಕ್ಕಿಯತ್ತ ಶಿಫ್ಟ್ ಆಗುತ್ತಿದ್ದಾರೆ.’ ಮಿಲ್ಲಿನಲ್ಲಿ ಐದಾರು ಬಾರಿ ಪಾಲಿಶ್ ಮಾಡಿಕೊಂಡು ಸಣ್ತೀ ಕಳೆದುಕೊಂಡ ಬಿಳಿಯಕ್ಕಿ ಯಲ್ಲಿ ಎಷ್ಟು ಪೌಷ್ಟಿಕಾಂಶವಿರಬಹುದು? ಇಷ್ಟೆಲ್ಲಾ ಹೇಳುತ್ತಿದ್ದಾಗ ಒಂದಂತೂ ಸ್ಪಷ್ಟ. ಭತ್ತದ ಬೇಸಾಯ ಇಳಿಮುಖವಾಗುತ್ತಿದೆ. ಇಷ್ಟರ ತನಕ ಮಾತುಕತೆಗಳಲ್ಲಿ ಹಾದು ಹೋಗುತ್ತಿರುವ ವಿಚಾರಗಳ ಬಿಸಿಯು ಬದುಕಿಗೆ ತಾಗುವ ಸಂಧಿಕಾಲದಲ್ಲಿದ್ದೇವೆ. ಲಾಭ-ನಷ್ಟದ ಕೂಡಿಸು-ಗುಣಿಸನ್ನು ಬದಿಗಿಟ್ಟು ನಮ್ಮ ಗದ್ದೆ, ನಮ್ಮ ಅನ್ನ ಎನ್ನುವ ಸಂಕಲ್ಪಕ್ಕೆ ಬಾರದೆ ಬದುಕು ಇಲ್ಲ.
ಕೆಲವು ರಾಜ್ಯಗಳಲ್ಲಿ ಇದ್ದಂತೆ ಭತ್ತಕ್ಕೂ ಉತ್ತಮ ಧಾರಣೆ ಸಿಗುವಂತೆ ಮೊದಲಾದ್ಯತೆಯಲ್ಲಿ ಆಗಬೇಕಾದ ಹಕ್ಕೊತ್ತಾಯ. “ಭತ್ತವು ಮಿಲ್ಲಿಗೆ ಬಾರದಿದ್ದರೆ ಅಕ್ಕಿಯ ಬೇಡಿಕೆಗೆ ಒತ್ತಡ ಆಗುವುದಂತೂ ಖಂಡಿತ. ಆಗ ಬೇಕಾದಂತೆ ಅಂಗಡಿಗಳಿಗೆ ಪೂರೈಸುವುದು ಕಷ್ಟಸಾಧ್ಯವಾಗಬಹುದು. ಸಹಜವಾಗಿ ದರ ಏರುತ್ತದೆ. ಇದರಿಂದ ಸಾಮಾನ್ಯರ ಬದುಕು ಕಷ್ಟವಾಗುತ್ತದೆ. ಸರಕಾರದ ಒಂದು ರೂಪಾಯಿಗೆ ಅಕ್ಕಿ ಎಂದಾದರೂ ಭತ್ತ ಬೆಳೆಯದೆ ಅಕ್ಕಿ ಆಗುವುದಿಲ್ಲವಲ್ಲಾ,’ ಎನ್ನುತ್ತಾ ನಾಯಕರು ನಿಕಟ ಭವಿಷ್ಯದ ಅನ್ನದ ಕೊರತೆಯ ದಿನಮಾನಗಳತ್ತ ಬೆಟ್ಟು ತೋರಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಭತ್ತದ ಬೇಸಾಯದಲ್ಲಿ ಶ್ರೀ ಪದ್ಧತಿಯನ್ನು ಅಳವಡಿಸಿ ಯಶವಾಗುತ್ತಿದೆ. ಕೃಷಿಕರಿಗೆ ಇದನ್ನು ಪರಿಚಯಿಸಿ ವಿಸ್ತರಿಸುತ್ತಿದೆ. ಕೆಲವೆಡೆ ಭತ್ತ ದರಿವಿನ ಜಾಗೃತ ಮನಸ್ಸುಗಳು ಹಡಿಲು ಗದ್ದೆಗಳಿಗೆ ಪುನಶ್ಚೇತನ ನೀಡಿವೆ. ಹೊಸದಾಗಿ ಗದ್ದೆಯನ್ನು ನಿರ್ಮಿಸುವ ಮನಸ್ಥಿತಿ ರೂಪುಗೊಳ್ಳುತ್ತಿವೆ. ಮಳೆಗಾಲದಲ್ಲಿ ಅಂಗಳಗಳು ಗದ್ದೆಗಳಾಗುತ್ತಿವೆ. ಇವೆಲ್ಲಾ ಭತ್ತದ ಕೊರತೆಯನ್ನು ನೀಗಿಸಲು ಸಹಾಯವಾಗುವುದಿಲ್ಲ. ಆದರೆ ಕೃಷಿ ವಲಯದಲ್ಲಿ ಅನ್ನದ ಬೆಳೆಯ ಸಂಚಲನ ಮೂಡಿದೆ. ನಾವು ಬೆಳೆದ ಅಕ್ಕಿಯನ್ನು ಉಣ್ಣುವುದು ಅಭಿಮಾನ ಎನ್ನುವ ದೇವ ರಾಯರ ಮಾತು ಇದೆಯಲ್ಲಾ- ಆ ಮಾತು ನಮ್ಮದಾಗಬೇಕು. ಹೊಟ್ಟೆ ತುಂಬುವ ಅನ್ನದ ಅನಾದರವು ಬದುಕಿಗೆ ಮಾರಕ. ಮೂಲಿಕಾ ತಜ್ಞ ಕೀರ್ತಿ ಶೇಷ ವೆಂಕಟರಾಮ ದೈತೋಟರು ಆಗಾಗ್ಗೆ ಎಚ್ಚರಿಸುತ್ತಿದ್ದರು. “ಆಹಾರವೇ ಔಷಧವಾಗಬೇಕು. ಔಷಧವೇ ಆಹಾರವಲ್ಲ.’ ಭತ್ತದ ಕೃಷಿಯ ಹಿನ್ನೆಲೆಯಲ್ಲಿ ದೈತೋಟರ ಮಾತು ಮಹತ್ತಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.