ಹಳ್ಳಿಯಲ್ಲಿ ಬೀಸಿದ ತಂಪು ಬೇರಿನ ತಂಗಾಳಿ
Team Udayavani, Apr 19, 2018, 7:00 AM IST
ಯುವ ಸಂಘಟನೆ ಅಂದಾಗ ಯುವಜನ ಮೇಳ, ವಾರ್ಷಿಕೋತ್ಸವ, ಕ್ರೀಡೆ… ಈ ವ್ಯಾಪ್ತಿಯಲ್ಲೇ ಸುತ್ತುತ್ತಿರುತ್ತವೆ. ಅದರಾಚೆ ನೋಡುವ ಮನಸ್ಥಿತಿಯಿಲ್ಲ. ಊರಿನ ಮಧ್ಯೆಯೇ ಇದ್ದು ತಮಗೂ-ಸಮಾಜಕ್ಕೂ ಏನೇನೂ ಸಂಬಂಧವಿಲ್ಲದಂತೆ ಇದ್ದು ಬಿಡುವ ಜಾಯಮಾನ ಅರ್ಥವಾಗುತ್ತಿಲ್ಲ. ಸ್ಥಾಪಿತ ಕಲಾಪವನ್ನಿಟ್ಟುಕೊಂಡೇ ಅಭಿವೃದ್ಧಿಯ ನೋಟವನ್ನು ಯಾಕೆ ರೂಢಿಸಿಕೊಳ್ಳಬಾರದು?
ಯುವಕ ಮಂಡಲಗಳು ಸಮಾಜದ ಕಣ್ಣುಗಳು. ಸಮಾಜವನ್ನು ಬೌದ್ಧಿಕವಾಗಿ ಬದಲಾಯಿಸಬಲ್ಲ, ಮನಸ್ಸುಗಳನ್ನು ಧನಾತ್ಮಕವಾಗಿ ಬೆಸೆಯಬಲ್ಲ ಸಾಮರ್ಥ್ಯ ಹೊಂದಿವೆ. ಯುವ ಮನಸ್ಸುಗಳಿಗೆ ವೈಚಾರಿಕವಾಗಿ, ಸಾಂಸ್ಕೃತಿಕವಾಗಿ ದೇಶದ ಚಿತ್ರವನ್ನೇ ನಂ.1 ಮಾಡಬಲ್ಲ ಸಶಕ್ತತೆ ಇದೆ. ಸಂಸ್ಕೃತಿಯ ಮೂಲಾಧಾರ ನೆಲ, ಜಲದ ಸಂರಕ್ಷಣೆಯ ಹೊಣೆಗಾರಿಕೆಯನ್ನು ಹೊರುವ ಸುಪುಷ್ಟಿತನವಿದೆ. ಆದರೆ ಹಾಗಾಗುತ್ತಿಲ್ಲವಲ್ಲಾ. ಯುವ ಸಂಘಟನೆ ಅಂದಾಗ ಯುವಜನ ಮೇಳ, ವಾರ್ಷಿಕೋತ್ಸವ, ಕ್ರೀಡೆ… ಈ ವ್ಯಾಪ್ತಿಯಲ್ಲೇ ಸುತ್ತುತ್ತಿರುತ್ತವೆ. ಅದರಾಚೆ ನೋಡುವ ಮನಸ್ಥಿತಿಯಿಲ್ಲ. ಊರಿನ ಮಧ್ಯೆಯೇ ಇದ್ದು ತಮಗೂ-ಸಮಾಜಕ್ಕೂ ಏನೇನೂ ಸಂಬಂಧವಿಲ್ಲದಂತೆ ಇದ್ದು ಬಿಡುವ ಜಾಯಮಾನ ಅರ್ಥವಾಗುತ್ತಿಲ್ಲ. ಸ್ಥಾಪಿತ ಕಲಾಪ ವನ್ನಿಟ್ಟುಕೊಂಡೇ ಹಳ್ಳಿಯ ಅಭಿವೃದ್ಧಿಯ ವಿಚಾರಗಳತ್ತ ನೋಟ ಬೀರುವ ಹವ್ಯಾಸಗಳನ್ನು ಯಾಕೆ ರೂಢಿಸಿಕೊಳ್ಳಬಾರದು?
ಸುಳ್ಯ (ದ.ಕ.) ತಾಲೂಕಿನ ಕನಕಮಜಲು ಯುವಕ ಮಂಡಲವು ತನ್ನನ್ನು ಕ್ರೀಡೆಗೆ, ಯುವಜನ ಮೇಳಗಳಿಗೆ ಸೀಮಿತಗೊಳಿಸಿಲ್ಲ. ಊರು, ಮಂದಿ ಮತ್ತು ಯುವಕ ಮಂಡಲ – ಇಲ್ಲಿ ಬೇರೆ ಬೇರೆಯಲ್ಲ, ಸಮಾನ ರೇಖೆಗಳು. ಊರಿನ ಸುಖ-ಕಷ್ಟಗಳಿಗೆ ತನ್ನ ಮಿತಿಯಲ್ಲಿ ಸ್ಪಂದಿಸುತ್ತಾ; ನೆಲ, ಜಲ, ಸಾಮಾಜಿಕ ವಿಚಾರಗಳತ್ತ ಅರಿವನ್ನು ಮೂಡಿಸುವ ಕೆಲಸಗಳನ್ನು ಒಂದೂವರೆ ದಶಕಕ್ಕೂ ಮಿಕ್ಕಿ ಕಾಲದಿಂದ ಗೌಜಿ-ಗಮ್ಮತ್ತುಗಳಿಗೆ ಎಡೆಯಿಲ್ಲದಂತೆ ಮಾಡುತ್ತಿದೆ.
ಯುವಕ ಮಂಡಲದ ಪೂರ್ವಾಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ ಆ ದಿವಸವನ್ನು ಜ್ಞಾಪಿಸುತ್ತಾರೆ, “2000ನೇ ಇಸವಿ, ನಮ್ಮ ಮನೆಯಲ್ಲಿ ಶುಭಕಾರ್ಯ. ನೀರಿನ ತತ್ವಾರದಿಂದಾಗಿ ದೂರದಿಂದ ನೀರನ್ನು ತರುವ ಸಂದರ್ಭ ಒದಗಿತು. ಈಗಲೇ ಹೀಗಾದರೆ 2020ರ ಹೊತ್ತಿಗೆ ನೀರಿನ ಪರಿಸ್ಥಿತಿ ಹೇಗಿರಬಹುದು? ಮನಸ್ಸಿನಲ್ಲೇ ನೆಲ-ಜಲ ಸಂರಕ್ಷಣೆಯ ಕಾಯಕಕ್ಕೆ ಸಂಕಲ್ಪ. ಈ ಯೋಚನೆಯು ಯುವಕ ಮಂಡಲದ ಮನಸ್ಸುಗಳ ಮೂಲಕ ಹಂತಹಂತವಾಗಿ ಸಾಕಾರವಾಗುತ್ತಾ ಬಂತು.’
ಮೊದಲಿಗೆ ಜಲಸಂರಕ್ಷಣೆಯ ಆಂದೋಲವನ್ನು ಕನ್ನಾಡಿಗೆ ಹಬ್ಬಿಸಿದವರಲ್ಲೋರ್ವರಾದ ಶ್ರೀಪಡ್ರೆಯವರಿಂದ ನೆಲ-ಜಲ ಉಳಿಸುವ ಯಶೋಗಾಥೆಗಳ ಪ್ರಸ್ತುತಿಯು ಕಿವಿಯರಳಿಸಿತು. ಹೊಸ ಹೊಸ ಮಾದರಿಗಳತ್ತ ಉತ್ಸುಕರಾದರು. ಹಳ್ಳಿಯಲ್ಲಿ ಈ ಅರಿವನ್ನು ಬಿತ್ತುವಾಗ ಎದುರಾದ ಪ್ರಶ್ನೆ – ಸಮೃದ್ಧ ನೀರಿನ ಸಂಪನ್ಮೂಲವಿರುವ, ಯಥೇಷ್ಟ ಕಾಡು ಆವರಿಸಿರುವ ನಮ್ಮೂರಿಗೆ ಅವಶ್ಯ ಇದೆಯಾ? “ಆದರೆ ಮಾರ್ಚ್-ಎಪ್ರಿಲ್ ತಿಂಗಳಲ್ಲಿ ಜಲಮೂಲಗಳು ಒಣ ಗಿದಾಗ ನಮ್ಮ ಮಾತಿಗೆ ಬೆಲೆ ಬಂತು,’ ಎನ್ನುತ್ತಾರೆ ಲಕ್ಷ್ಮೀ ನಾರಾ ಯಣ. ಹಿಂದಿನಿಂದಲೂ ಚಿಕ್ಕ ಹಳ್ಳಗಳಿಗೆ ಕಟ್ಟವನ್ನು ಕಟ್ಟಿ ನೀರನ್ನು ಏರಿ ನಿಲ್ಲಿಸಿ ನೀರಾವರಿಗೆ ಬಳಸುವುದು ರೂಢಿ. ಕೆಲವೊಮ್ಮೆ ನೀರಿನ ಸಂಪನ್ಮೂಲವಿದ್ದರೂ ಅಂತರ್ಜಲ ವೃದ್ಧಿಗಾಗಿ ಕಟ್ಟ ಕಟ್ಟುವುದು ಅನಿವಾರ್ಯ. ಇಂತಹ ಪರಿಸ್ಥಿತಿಯಲ್ಲಿ ಕಟ್ಟಗಳ ಸಾಂಪ್ರದಾಯಿತ ರಚನೆಗಳಿಗೆ ಇಳಿಲೆಕ್ಕ ಆರಂಭವಾಗಿ ದಶಕಗಳೇ ಮೀರಿತು. ಯುವಕ ಮಂಡಲದ ಸದಸ್ಯರ ಒತ್ತಾಸೆ ಮತ್ತು ಶ್ರಮದಾನ ಗಳಿಂದ ಸುಮಾರು ಇಪ್ಪತ್ತಕ್ಕೂ ಮಿಕ್ಕಿ ಚಿಕ್ಕಚಿಕ್ಕ ಕಟ್ಟಗಳು ರಚನೆ ಯಾಗಿವೆ. ತೋಟದೊಳಗೆ ಹರಿವ ಚಿಕ್ಕ ತೋಡುಗಳಿಗೆ ಅಲ್ಲಲ್ಲಿನ ಒಳಸುರಿಗಳನ್ನು ಬಳಸಿ ಕಟ್ಟ ಕಟ್ಟಲಾಗುತ್ತದೆ. ಅಡಿಕೆ ಮರದ ಕಂಬಗಳು, ಸಲಕೆಗಳು ಮತ್ತು ಮಣ್ಣನ್ನು ಬಳಸಿ ಮಾಡಿದ ಕಟ್ಟದಲ್ಲಿ ಏನಿಲ್ಲವೆಂದರೂ ಒಂದೂವರೆ ತಿಂಗಳು ನೀರು ಏರಿ ನಿಲ್ಲುತ್ತದೆ.
“ಒಂದೆರಡು ತಿಂಗಳಿಗೆ ಬೇಕಾಗಿ ಯಾಕೆ ಶ್ರಮ ಪಡಬೇಕು,’ ಎನ್ನುವ ಮನಃಸ್ಥಿತಿಯನ್ನು ಬದಲಾಯಿಸುವುದು ಶ್ರಮದ ಕೆಲಸ. ಇಲ್ಲಿ ತಿಂಗಳ ಪ್ರಶ್ನೆಯಲ್ಲ. ಭೂ ಒಡಲಿಗೆ ಎಷ್ಟು ಉಣಿಸಿದ್ದೇವೆ ಎನ್ನುವುದು ಮುಖ್ಯ. ಇಂತಹ ಚಿಕ್ಕ ಪುಟ್ಟ ಯತ್ನಗಳು ಅಂತರ್ಜಲ ವೃದ್ಧಿಗೆ ಸಹಕಾರಿ. ಗ್ರಾಮದ ಕಾರಿಂಜೆ ಸಿಆರ್‌ಸಿ ಕಾಲನಿಯ ಗುಡ್ಡಭಾಗದಲ್ಲಿ ಸುರಂಗವಿದೆ. ವರುಷಪೂರ್ತಿ ನೀರಿನ ಒರತೆ. ಐದಾರು ಕುಟುಂಬ ಗಳ ಕೃಷಿ ತೋಟಕ್ಕೆ ಸುರಂಗದ ನೀರನ್ನು ಬಳಸಿದ್ದಿದೆ. ಈಗ ಪ್ರತಿ ಕುಟುಂಬವು ಪ್ರತ್ಯೇಕವಾಗಿ ನೀರಿನ ವ್ಯವಸ್ಥೆಗಳನ್ನು ಹೊಂದಿವೆ. ಸುರಂಗದ ನೀರಿನ ಬಳಕೆ ಅಷ್ಟಕ್ಕಷ್ಟೇ.
ನೀರು ಹರಿದು ಹೋಗುವುದನ್ನು ತಡೆದು ಇಂಗಿಸುವ ನಿರ್ಧಾರ. ಹಿಂದೆ ಬಳಸುತ್ತಿದ್ದ ಮನೆಯವರೂ ಕೈಜೋಡಿಸಿದರು. ಕೆಳಭಾಗದಲ್ಲಿರುವ ತೋಟದೊಳಗಿರುವ ಹಳೆಯ ಹೊಂಡವನ್ನು ಹೂಳು ತೆಗೆದು ದುರಸ್ತಿ ಮಾಡಿದರು. ಸುರಂಗದಿಂದ ಇನ್ನೂರು ಮೀಟರ್ ದೂರದಲ್ಲಿರುವ ಹೊಂಡಕ್ಕೆ ಪೈಪ್ ಅಳವಡಿಸಿ, ಸುರಂಗದ ನೀರನ್ನು ಹೊಂಡದಲ್ಲಿ ತುಂಬಿದರು. ಸರಾಗವಾಗಿ ನೀರಿಂಗಲು ಅನುವಾಯಿತು.
ಗ್ರಾಮದಲ್ಲಿ ಇಪ್ಪತ್ತಕ್ಕೂ ಮಿಕ್ಕಿ ಒಡ್ಡುಗಳಿವೆ. ಕೆಲವದಕ್ಕೆ ಸರಕಾರದ ಅನುದಾನವೂ ಬಳಕೆಯಾಗಿದೆ. “ನೀರಿನ ತತ್ವಾರ ಅಂದಾಗ ಕೊಳವೆ ಬಾವಿ ಕೊರೆಯುವುದು ಪರಿಹಾರವಲ್ಲ. ಹರಿದು ಹೋಗುವ ನೀರನ್ನು ಮತ್ತೆ ಭೂಒಡಲಿಗೆ ಇಳಿಸುವ ನಿಟ್ಟಿನಲ್ಲಿ ಜನರಲ್ಲಿ ಅರಿವು ಮೂಡಿಸುವ ಕೆಲಸ ಸಾಗಿದೆ. ಇದೆಲ್ಲಾ ದೀರ್ಘಕಾಲೀನ ಕೆಲಸ,’ ಎನ್ನುತ್ತಾರೆ ಯುವಕ ಮಂಡಲದ ಅಧ್ಯಕ್ಷ ಸಂತೋಷ ಕುಮಾರ್ ನೆಡೀಲು.
“ಪ್ರತೀ ಮನೆಯಲ್ಲಿಯೂ ಒಂದಾದರೂ ಜಲಸಂರಕ್ಷಣೆಯ ಕಾರ್ಯ ಆಗಬೇಕು’ ಎಂಬುದು ಯುವಕ ಮಂಡಲದ ಸದಸ್ಯರ ಕನಸು. “ನಮ್ಮ ಹಿರಿಯರು ಭೂಮಿಯನ್ನು ನಮಗೆ ಬಿಟ್ಟು ಹೋಗಿ ದ್ದಾರೆ. ಅದನ್ನು ಸಂರಕ್ಷಿಸಿ ಮುಂದಿನ ತಲೆಮಾರಿಗೆ ದಾಟಿಸುವ ಮಹತ್ತರ ಹೊಣೆ ನಮ್ಮೆಲ್ಲರ ಮೇಲಿದೆ. ಈ ದಿಸೆಯಲ್ಲಿ ನೆಲ- ಜಲ ಸಂರಕ್ಷಣೆಯು ಯುವಕ ಮಂಡಲದ ಕಾರ್ಯಸೂಚಿಯಲ್ಲಿ ಮೊದಲನೆಯದು,’ ಎನ್ನುತ್ತಾರೆ ಲಕ್ಷ್ಮೀನಾರಾಯಣ.
ತೋಟಗಾರಿಕಾ ಇಲಾಖೆಯ ಸಹಯೋಗದೊಂದಿಗೆ ಕಾಳು ಮೆಣಸು ಗಿಡಗಳ ವಿತರಣೆ, ಮಾಹಿತಿ ಶಿಬಿರ, ಸಂಪನ್ಮೂಲ ವ್ಯಕ್ತಿಗಳಿಂದ ಕೃಷಿ ಮಾರ್ಗದರ್ಶನ. ಯುವಕ ಮಂಡಲದ ಕಾರ್ಯಗಳು ಜನರೊಂದಿಗೆ ವಿಶ್ವಾಸವೃದ್ಧಿಗೆ ಸಹಕಾರಿಯಾಯಿತು. ಯುವಕ ಮಂಡಲವೂ ನಮ್ಮ ಜತೆ ಇದೆ ಎನ್ನುವುದು ಕೃಷಿಕರಿಗೂ ಖುಷಿಯ ಸಂಗತಿ. ಈ ಪರಸ್ಪರ ಭಾವ-ಬಂಧವು ವಿಚಾರಗಳ ವಿನಿಮಯಕ್ಕೆ, ಅನುಷ್ಠಾನಕ್ಕೆ ಸಹಕಾರಿಯಾಗಿದೆ. ಅಲ್ಲದೆ ಜೇನುಪಟ್ಟಿಗೆಗಳನ್ನು ಕೃಷಿಕರಿಗೆ ವಿತರಿಸಿದೆ. ಜೇನು ತರಬೇತಿ ಏರ್ಪಡಿಸಿದೆ.
ಕೃಷಿ ಮತ್ತು ದೈನಂದಿನ ಆಗುಹೋಗುಗಳ ಮಧ್ಯೆ ಜರುಗಿದ ಚಿತ್ರಕಲಾ ಶಿಬಿರವು ಹಳ್ಳಿ ಮನಸ್ಸುಗಳಿಗೆ ಕಲಾಸ್ಪರ್ಶವನ್ನು ನೀಡು ವಲ್ಲಿ ಸಫಲವಾಗಿದೆ. ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಸಹಯೋಗ. ಚಿತ್ರ ಕಲಾವಿದರು ಹಳ್ಳಿ ಮನೆಗಳಲ್ಲಿ ಒಂದು ವಾರ ವಾಸ್ತವ್ಯ ಮಾಡಿದ್ದರು. ಹಳ್ಳಿ ಬದುಕನ್ನು ಅನು ಭವಿಸಿದರು. ಕೃಷಿಕರ ಸುಖ, ಕಷ್ಟಗಳಿಗೆ ಕಿವಿಯಾದರು.
ಶಿಬಿರದಿಂದ ತಕ್ಷಣಕ್ಕೆ ಬದಲಾವಣೆ ಆಗುವುದಿಲ್ಲ. ಹೊರ ಪ್ರದೇಶದ ಕಲಾವಿದನೋರ್ವ ಮನೆಯಲ್ಲಿ ವಾಸ್ತವ್ಯ ಹೂಡಿದಾಗ ಸಹಜವಾಗಿ ಮನೆಯ ಮಾತುಕತೆಗಳು ಎಂದಿನ ಜಂಜಾಟ ಗಳಿಂದ ಕಳಚಿಕೊಳ್ಳುತ್ತವೆ. ಕಲೆ, ಕಲಾವಿದನ ಸುತ್ತ ಮಾತುಕತೆ ನಡೆಯುತ್ತದೆ. ಕಲೆಯ ಸಾಧ್ಯತೆಗಳ ಕುರಿತು ಚಿಂತನೆ ನಡೆಯುತ್ತದೆ. “ರಬ್ಬರ್, ಅಡಿಕೆ ಬೆಲೆ, ರೋಗ… ಮೊದಲಾದ ವಿಚಾರಗಳನ್ನೇ ಮಾತನಾಡುತ್ತಿದ್ದ ಊರಿಗೆ ಒಂದು ವಾರ ಚರ್ಚಿಸಲು ಹೊಸ ಅವಕಾಶ ದೊರೆಯಿತು,’ ಎನ್ನುತ್ತಾರೆ ಲಕ್ಷ್ಮೀನಾರಾಯಣ.
ಚಲನಚಿತ್ರ ನೋಡುವುದು ಹೇಗೆ? ಓದುವುದು ಹೇಗೆ? ಶಿಬಿರವನ್ನು ಯುವಕ ಮಂಡಲ ಆಯೋಜಿಸಿತ್ತು. ಇದೆಲ್ಲಾ ನಮಗೆ ಬೇಡ ಎನ್ನುವ ಮನಸ್ಥಿತಿಯ ಮಧ್ಯೆ ಕನಿಷ್ಠ ನೂರು ಮಂದಿ ಪ್ರೇಕ್ಷ ಕರು ಸಿದ್ಧರಾದರೆ ಹಳ್ಳಿಯ ಸಾಂಸ್ಕೃತಿಕ ನೋಟವನ್ನೇ ಬದಲಾಯಿಸ ಬಹುದು. ಬೌದ್ಧಿಕ ಮತ್ತು ಸಾಂಸ್ಕೃತಿಕ ಚಿಂತನೆಯ ಗಟ್ಟಿತನಕ್ಕೆ ಇಂತಹ ಶಿಬಿರಗಳು ಅಗತ್ಯ ಕೂಡಾ. ಅಕಾಡೆಮಿಕ್ ಚಿಂತನೆಯನ್ನು ಹಳ್ಳಿ ಭಾಷೆಯಲ್ಲಿ ಪ್ರಸ್ತುತಪಡಿಸುವುದೂ ಸವಾಲಿನ ಕೆಲಸ.
ಇಷ್ಟೆಲ್ಲಾ ಕಾರ್ಯಗಳನ್ನು ಮಾಡುತ್ತಾ ಬಂದಿರುವ ಯುವಕ ಮಂಡಲದ ಕಲಾಪಗಳು ನಿರೀಕ್ಷಿತ ಫಲಿತಾಂಶ ನೀಡಿದೆಯೇ? ಬದಲಾವಣೆಯನ್ನು ಗಮನಿಸಿದ್ದೀರಾ? ಲಕ್ಷ್ಮೀನಾರಾಯಣ ಹೇಳು ತ್ತಾರೆ, “ನೇರವಾಗಿ ಫಲಿತಾಂಶವನ್ನು ಗುರುತಿಸುವುದು ತ್ರಾಸ. ಹಳ್ಳಿಯಲ್ಲಿ ಬದಲಾವಣೆಯ ತಂಗಾಳಿ ಬೀಸಲಾರಂಭಿಸಿದೆ. ಋಣಾತ್ಮಕ ಅಭಿಪ್ರಾಯಗಳು ಕಡಿಮೆಯಾಗಿವೆ. ಧನಾತ್ಮಕವಾಗಿ ಮಾತನಾಡುವ ಮಂದಿ ಸಿಗುತ್ತಾರೆ. ಇಲ್ಲಿನ ಸಾಧನೆಗಳನ್ನು ಬೇರೆ ಊರಿನ ಮಂದಿ ಹೇಳಿದಾಗ ಯುವಕ ಮಂಡಲದತ್ತ ಹೆಮ್ಮೆಯ ನೋಟ ಬೀರುತ್ತಾರೆ.’
ಒಂದು ಊರಿನಲ್ಲಿ ಪಂಚಾಯತ್ ಮಾಡಬಹುದಾದಷ್ಟೇ ಕೆಲಸಗಳನ್ನು ಯುವ ಸಂಘಟನೆಗಳು ಮಾಡಬಹುದು. ಸರಕಾರ ಪ್ರಣೀತ ವ್ಯವಸ್ಥೆಯಲ್ಲಿ ಪಂಚಾಯತ್ ಕಾರ್ಯವೆಸಗುತ್ತಿವೆ. ಆದರೆ ಯುವಕ ಮಂಡಲದಂತಹ ಸಂಘಟನೆಗಳಿಗೆ ಯಾರದ್ದೇ ಹಂಗಿಲ್ಲ. ಒಂದೊಂದು ಯುವಕ, ಯುವತಿ ಮಂಡಲಗಳಲ್ಲಿ ಏನಿಲ್ಲವೆಂದರೂ ಮೂವತ್ತೋ ನಲವತ್ತೋ ಸದಸ್ಯರಿರುತ್ತಾರೆ. ತಂತಮ್ಮ ಹಳ್ಳಿಯ ಚಿಕ್ಕ ಪುಟ್ಟ ವ್ಯವಸ್ಥೆಗಳನ್ನು ಬದಲಾಯಿಸಬಲ್ಲ ಸಾಮರ್ಥ್ಯ ಇವರಿಗಿದೆ. ಇದಕ್ಕೆ ಬೇಕಾದ ಸಮರ್ಥ ಮಾರ್ಗ ದರ್ಶಕರು ಬೇಕಾಗಿದ್ದಾರೆ ಅಷ್ಟೇ.
ಯುವ ಸಂಘಟನೆಗಳು ಕ್ರೀಡೆ, ಯುವಜನ ಮೇಳ, ವಾರ್ಷಿಕೋತ್ಸವವೂ ಸೇರಿದಂತೆ ನೆಲ-ಜಲ ಸಂರಕ್ಷಣೆಯತ್ತ ಅರಿವನ್ನು ಬಿತ್ತುವ, ಅನುಷ್ಠಾನದತ್ತ ಹೆಜ್ಜೆಯೂರುವ ಕಲಾಪಗಳನ್ನೂ ಅಳವಡಿಸಿಕೊಳ್ಳಬೇಕಾದುದು ಕಾಲದ ಅವಶ್ಯಕತೆ. ನೆಲದ ತಂಪು ಬೇರನ್ನು ನೋಡುವ ಕಾರ್ಯಸೂಚಿಯ ಅಳವಡಿಕೆ ಅನಿವಾರ್ಯ. ಬೇರು ಗಟ್ಟಿಯಾದರೆ ಅಡಿಗಟ್ಟು ಅಲ್ಲಾಡದು. ಇಂತಹ ಕಾರ್ಯಗಳಿಗೆ ಅರಿವಾಗದೆ ಅಂಟಬಹುದಾದ ರಾಜಕೀಯದಿಂದ ಅಂತರ ಕಾಪಾಡಿಕೊಂಡರೆ ಸಲೀಸು. ಈ ದಿಸೆಯಲ್ಲಿ ಸಣ್ಣ ಹೆಜ್ಜೆಯೂರಿದ ಕನಕಮಜಲು ಯುವಕ ಮಂಡಲದ ಕಾರ್ಯಹೂರಣ ದೃಷ್ಟಾಂತವಾಗಿ ಮುಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.