ಅನ್ನ ಬೆಳೆವ ಮಣ್ಣಲ್ಲಿ ಯಂತ್ರಗಳ ಸದ್ದು
Team Udayavani, Dec 28, 2017, 11:13 AM IST
ಅಂಕಿಅಂಶಗಳ ಸಾಚಾತನಗಳ ಮಾತು ಬೇರೆ. ಆದರೆ ವರುಷ ವರುಷ ಕೃಷಿಯಲ್ಲಿ ಇಳಿಲೆಕ್ಕ ಕಾಣುವುದಂತೂ ಸತ್ಯ. ಈ ವಿಷಾದಗಳ ಮಧ್ಯೆ ಅಲ್ಲಿಲ್ಲಿ ತಂತಮ್ಮ ಅವಶ್ಯಕತೆಗಳಿಗೆ ಅನುಸಾರವಾಗಿ ಭತ್ತದ ಕೃಷಿಯಲ್ಲಿ ಸಣ್ಣ ವಿಸ್ತರಣೆಯನ್ನು ಕಾಣುತ್ತಿದೆ.
“”ಅನ್ನ ಬೆಳೆದು ಉಣ್ಣುವುದು ಸ್ವಾಭಿಮಾನ. ಭತ್ತದ ವಿಚಾರದಲ್ಲಿ ಸ್ವಾವಲಂಬಿ. ಅನ್ಯಾನ್ಯ ಕಾರಣಗಳಿಂದ ಎರಡು ವರುಷದಿಂದ ಭತ್ತದ ಕೃಷಿಯನ್ನು ಕೈಬಿಟ್ಟಿದ್ದರೂ ಈಗ ಯಾಂತ್ರೀಕರಣವು ಧೈರ್ಯ ನೀಡಿದೆ” ಪುತ್ತೂರಿನ ಕೃಷಿಕ ಮಹಾದೇವ ಶಾಸ್ತ್ರಿಯವರ ನಿರ್ಧಾರ.
“”ನನ್ನಷ್ಟು ಶ್ರೀಮಂತರು ಯಾರೂ ಇಲ್ಲ. ವರ್ಷವಿಡೀ ಉಣ್ಣಲು ಅಕ್ಕಿಯಿದೆ. ನಾನು ಬೆಳೆದಿದ್ದೇನೆ, ಮನೆಮಂದಿಯೊಂದಿಗೆ ಉಣ್ಣುತ್ತೇನೆ.” ಹೀಗೆ ಧೈರ್ಯದಿಂದ ಸಂದರ್ಭ ಸಿಕ್ಕಾಗಲೆಲ್ಲಾ ಗಟ್ಟಿ ಸ್ವರದಲ್ಲಿ ಹೇಳುವವರು ತಳಿ ತಪಸ್ವಿ ಬಿ.ಕೆ.ದೇವರಾವ್. ನೂರ ಐವತ್ತಕ್ಕೂ ಮಿಕ್ಕಿದ ಭತ್ತದ ತಳಿ ಸಂರಕ್ಷಕರಿವರು.
“”ಹೊರಗಿನಿಂದ ಅಕ್ಕಿಯನ್ನು ಕ್ರಯಕ್ಕೆ ತರುವ ಪದ್ಧತಿಯಿಲ್ಲ. ಮನೆಯಂಗಳದಲ್ಲಿ ಭತ್ತದ ಎರಡು ಕೃಷಿಯನ್ನು ಮಾಡುತ್ತೇವೆ. ನಾವು ಬಳಸಿ ಮಿಕ್ಕಿದ್ದರೆ ಆಪೆ¤àಷ್ಟರಿಗೆ ನೀಡುತ್ತೇವೆ. ಭತ್ತದ ಕೃಷಿ ಅಂದಾಗ ಗುಣಾಕಾರ, ಭಾಗಾಕಾರ ಮಾಡಿ ಮಾಡುವಂತಹುದಲ್ಲ. ಅದು ಹೊಟ್ಟೆಪಾಡಿನ ಪ್ರಶ್ನೆ” ಎನ್ನುವ ಅನುಭವ ಬಂಟ್ವಾಳ ತಾಲೂಕಿನ ಕೇಪುವಿನ ಕೃಷಿ ಉಬರು ರಾಜಗೋಪಾಲ ಭಟ್ಟರದು.
ಮೂವರ ಭತ್ತದ ಕೃಷಿಯ ಅನುಭವವು ಅವರನ್ನು ಸ್ವಾವಲಂಬಿ ಯಾಗಿಸಿದೆ. ಕೃಷಿ ಸಹಾಯಕರ ಅಲಭ್ಯದಿಂದ, ಏರುತ್ತಿರುವ ಒಳಸುರಿಗಳ ದರಗಳು ಇತರ ಕೃಷಿಗಳಂತೆ ಭತ್ತಕ್ಕೂ ಇಳಿಲೆಕ್ಕದ ಹಾದಿ ತೋರಿಸಿ ದಶಕ ಮೀರಿತು. ಗದ್ದೆಗಳೆಲ್ಲಾ ಕಟ್ಟಡಗಳ ಅಡಿಪಾಯ ವಾದಾಗ ಅಡುಗೆ ಮನೆಗಳು ಕಣ್ಣೀರು ಹಾಕಿದವು! ಈ ವಿಚಾರ ಬರೆಯುತ್ತಿದ್ದಂತೆ “”ನಾನು ಬೆಳೆದ ಅಕ್ಕಿಯ ಗಂಜಿಯನ್ನು ಹೊಟ್ಟೆತುಂಬಾ ಉಂಡಾಗ ನನ್ನಷ್ಟು ಸುಖೀ ಈ ಪ್ರಪಂಚದಲ್ಲಿ ಯಾರೂ ಇಲ್ಲ” ಎನ್ನುವ ದೇವರಾಯರ ಮಾತುಗಳು ಕಾಡಿದವು.
“”ಕೃಷಿಕರಲ್ಲಿ ಕೃಷಿ ಸಾಲ ಪಡೆಯುವ ಪ್ರಮಾಣ ಕಡಿಮೆಯಾಗಿದೆ. ಯಂತ್ರಗಳನ್ನು ಖರೀದಿಸುವ ಬದಲು ಬಾಡಿಗೆ ನೆಲೆಯಲ್ಲಿ ಪಡೆಯುತ್ತಿರುವುದೂ ಒಂದು ಕಾರಣ” ಎಂದು ಬ್ಯಾಂಕ್ ವರಿಷ್ಠ ರೊಬ್ಬರ ಅಭಿಪ್ರಾಯ ಓದಿ ಮರೆಯುವಂತಹುದಲ್ಲ. ಈ ಹೇಳಿಕೆ ಯನ್ನು ಪೋಸ್ಟ್‌ಮಾರ್ಟಂ ಮಾಡಿದಾಗ ಇಂದು ಜಾಬ್‌ವರ್ಕ್ ವ್ಯವಸ್ಥೆಗಳು ಕೃಷಿಕರ ಮನೆಯಂಗಳದಲ್ಲಿ ಆವಶ್ಯಕತೆಗಳನ್ನು ಪೂರೈಸಿ ಒತ್ತಡವನ್ನು ಹಗುರ ಮಾಡುತ್ತಿರುವುದು ಕಾಣಬಹುದು. ಒಂದು ಮಿಸ್‌ಕಾಲ್ ಮಾಡಿದರೆ ಸಾಕು, ಶ್ರಮ ಮತ್ತು ಮನವನ್ನು ಹಗುರ ಮಾಡುವ ಜಾಬ್‌ವರ್ಕ್ ತಂಡಗಳ ವಾಹನಗಳು ನಂನಮ್ಮ ಮನೆಯತ್ತ ಮುಖ ಮಾಡುವುದನ್ನು ಗಮನಿಸಬಹುದು.
ಜಾಬ್‌ವರ್ಕ್ ವ್ಯವಸ್ಥೆಗಳು ಕೃಷಿ ಮತ್ತು ಕೃಷಿಕರ ತಕ್ಷಣದ ಅವಶ್ಯಕತೆಗಳನ್ನು ಪೂರೈಸುತ್ತಿವೆ. ಕಾಲ ಕಾಲದ ಕೃಷಿ ಕೆಲಸಗಳನ್ನು ಪೂರೈಸಲು ನಿತ್ಯ ಅನುಕೂಲಿ. ನಿರ್ವಹಣಾ ವೆಚ್ಚಗಳ ಅಸಮತೋಲನ ಮತ್ತು ಏರುವಿಕೆಯಿಂದಾಗಿ ಭತ್ತದ ಕೃಷಿಯನ್ನು ಸ್ವಲ್ಪಕಾಲ ಮರೆತ ಮಹಾದೇವ ಶಾಸ್ತ್ರಿಗಳ ಅನುಭವವು ಯಂತ್ರಾವಲಂಬಿಯಾಗಿ ಕೃಷಿ ಮಾಡುವ ಬಹುತೇಕ ಕೃಷಿಕರ ಅನುಭವ ಕೂಡಾ:
“”ಮೊದಲು ಮಾನವ ಶ್ರಮದಿಂದ ಭತ್ತದ ಕೃಷಿಯನ್ನು ಮಾಡುತ್ತಿದ್ದೆ. ಗದ್ದೆಯನ್ನು ಸಿದ್ಧ ಮಾಡಲು, ಹೂಟೆ ಮಾಡಲು ಸಹಾಯಕರ ಅವಲಂಬನೆ ಅನಿವಾರ್ಯವಾಗಿತ್ತು. ವರ್ತಮಾನ ದಲ್ಲಿ ಸಾಂಪ್ರದಾಯಿಕ ನೇಗಿಲು ಹೂಟೆಯೂ ಕಷ್ಟ. ನೇಜಿ ನೆಡಲು ಮೂರು ದಿವಸ ಬೇಕಾಗುತ್ತಿತ್ತು. ದಿನಕ್ಕೆ ಆರು ಜನರಂತೆ ಹದಿನೆಂಟು ಕೆಲಸ. ಆರೇಳು ಸಾವಿರ ರೂಪಾಯಿ ಸಂಬಳ ಬೇಕಾಗಿತ್ತು. ಈಗ ನಾಟಿ ಯಂತ್ರವು ಒಂದೂವರೆ ಗಂಟೆಯಲ್ಲಿ ಈ ಕೆಲಸ ಪೂರೈಸುತ್ತಿದೆ. ಒಂದು ಸಾವಿರ ರೂಪಾಯಿ ಬಾಡಿಗೆ!”
“”ಟಿಲ್ಲರ್ ಮೂಲಕ ಹೂಟೆಗೆ ಆರು ಸಾವಿರ ರೂಪಾಯಿ ಬಾಡಿಗೆ. ಯಂತ್ರವು ಕೊಯಿಲನ್ನು ಕಟಾವ್-ಕೂಡಾ ಇಷ್ಟೇ ಅವಧಿ ಯಲ್ಲಿ ಮುಗಿಸಿಕೊಡುತ್ತದೆ. ಭತ್ತದ ಕಾಳುಗಳು ಮತ್ತು ಹುಲ್ಲು ಪ್ರತ್ಯೇಕವಾಗಿ ಬೇರ್ಪಡುತ್ತದೆ. ಜತೆಗೆ ಭತ್ತಕ್ಕೆ ಸೇರಿಕೊಂಡಿದ್ದ ಕಸಗಳನ್ನು ಗಾಳಿಸಿಕೊಡುತ್ತದೆ. ಹೀಗೆ ಯಾಂತ್ರೀಕರಣದಿಂದ ಶ್ರಮ, ಹಣ ಎರಡೂ ಉಳಿತಾಯ. ಒಂದೆರಡು ಎಕ್ರೆ ಜಾಗವಿದ್ದ ಶ್ರಮಿಕ ದಂಪತಿಗಳು ಧಾರಾಳವಾಗಿ ಯಾಂತ್ರೀಕರಣ ವ್ಯವಸ್ಥೆಯ ಮೂಲಕ ಭತ್ತದ ಬೇಸಾಯವನ್ನು ಮಾಡಬಹುದು.”
ಮನೆಗೆ ಬೇಕಾದಷ್ಟು ಅಕ್ಕಿ ಬೆಳೆಯುವ ಆಸಕ್ತಿಗಳು ಹಬ್ಬುತ್ತಿವೆ. ಒಬ್ಬರ ಯಶವು ಇನ್ನೊಬ್ಬರಿಗೆ ಪಥದರ್ಶನ ನೀಡುತ್ತದೆ. ಬೇಸಾಯ ಕಷ್ಟವಾಗಿ ಭತ್ತದ ಕೃಷಿ ನಿಂತರೂ ಆ ಗದ್ದೆಗಳೆಲ್ಲಾ ಹಡಿಲಾಗಿವೆ ಯಷ್ಟೇ ಹೊರತು ಅನ್ಯ ಉದ್ದೇಶಕ್ಕೆ ಬದಲಾಗದೇ ಇರುವುದನ್ನು ಕಾಣುತ್ತೇವೆ. ಹಡಿಲು ಬಿದ್ದರೂ ತೊಂದರೆಯಿಲ್ಲ, ಗದ್ದೆಯು ಗದ್ದೆ ಯಾಗಿಯೇ ಇರಲಿ ಎನ್ನುವ ಮನಸ್ಥಿತಿ. ಮುಂದೆ ಈ ಗದ್ದೆಯಲ್ಲಿ ಕೃಷಿ ಮಾಡುವ ದಿವಸಗಳು ಬಂದಾವು ಎನ್ನುವುದು ದೂರದ ಆಶೆ. ಕೆಲವೆಡೆ ನನ್ನ ಗದ್ದೆಯಲ್ಲಿ ನಾನೇ ಬೇಸಾಯ ಮಾಡಿದೆ ಎಂಬ ತೃಪ್ತಿ. ಕೆಲವು ಸ್ವಯಂಸೇವಾ ಮನಸ್ಸುಗಳು ಹಡಿಲು ಬಿದ್ದ ಗದ್ದೆಯಲ್ಲಿ ಮತ್ತೆ ಕೃಷಿಯನ್ನು ಮಾಡುವ, ಶಾಲೆ-ಕಾಲೇಜುಗಳ ವಿದ್ಯಾರ್ಥಿಗಳನ್ನು ಈ ಕೆಲಸಕ್ಕೆ ಹಚ್ಚುವ ಸಂದರ್ಭಗಳು ವರ್ಷ ವರ್ಷವೂ ಹೆಚ್ಚಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳಿಗೆ ಭತ್ತದ ಸಂಸ್ಕೃತಿಯ ಕನಿಷ್ಠ ಜ್ಞಾನವು ಪ್ರಾಕ್ಟಿಕಲ್ ರೂಪದಲ್ಲಿ ಸಿಗುತ್ತಿವೆ. ಜಾಬ್‌ವರ್ಕ್ ವ್ಯವಸ್ಥೆಗಳು ಭತ್ತದ ಕೃಷಿಯ ವಿಷಾದಗಳಿಗೆ ಸ್ಫೂರ್ತಿಯ ಚೇತನ ನೀಡಿದೆ. ಪುತ್ತೂರು ತಾಲೂಕಿನಲ್ಲಿ ಭತ್ತದ ಇಳಿಲೆಕ್ಕವನ್ನು ಗಮನಿಸಿ. 2014ರಲ್ಲಿ 2950 ಹೆಕ್ಟೇರ್ ಇದ್ದ ಭತ್ತದ ಬೇಸಾಯವು 2017ಕ್ಕೆ ಆಗುವಾಗ 2250 ಹೆಕೇrರಿಗೆ ಇಳಿದ ಲೆಕ್ಕವನ್ನು ಇಲಾಖೆ ಕೊಡುತ್ತದೆ. ಇಂತಹುದೇ ಅಂಕಿಅಂಶಗಳು ಕನ್ನಾಡಿನ ಎಲ್ಲಾ ತಾಲೂಕುಗಳ ಇಲಾಖೆಗಳಲ್ಲಿ ಪ್ರತೀವರುಷ ನವೀಕರಣವಾಗುತ್ತಲೇ ಇರುತ್ತವೆ. ಈ ಅಂಕಿಅಂಶಗಳ ಸಾಚಾ ತನಗಳ ಮಾತು ಬೇರೆ. ಆದರೆ ವರುಷ ವರುಷ ಕೃಷಿಯಲ್ಲಿ ಇಳಿಲೆಕ್ಕ ಕಾಣುವುದಂತೂ ಸತ್ಯ. ಈ ವಿಷಾದಗಳ ಮಧ್ಯೆ ಅಲ್ಲಿಲ್ಲಿ ತಂತಮ್ಮ ಅವಶ್ಯಕತೆಗಳಿಗೆ ಅನುಸಾರವಾಗಿ ಭತ್ತದ ಕೃಷಿಯಲ್ಲಿ ಸಣ್ಣ ವಿಸ್ತರಣೆಯನ್ನು ಕಾಣುತ್ತಿದೆ. ಇವೆಲ್ಲಾ ಸಣ್ಣ ಸಣ್ಣ ಹೆಜ್ಜೆಗಳಾಗಿದ್ದು ಇಲಾಖೆಗಳ ಲೆಕ್ಕದ ಪುಸ್ತಕಕ್ಕೆ ಬಾರವು. ಇಂತಹ ಚಿಕ್ಕ ಹೆಜ್ಜೆಗಳ ಕೃಷಿಯ ಹಿಂದೆ ಲಾಭ-ನಷ್ಟದ ಲೆಕ್ಕಾಚಾರಗಳಿಲ್ಲ. ಹೊಟ್ಟೆ ತುಂಬುವ, ತುಂಬಿಸುವ ಯಾವುದೇ ಕೃಷಿಯಲ್ಲಿ ಇಂತಹ ಮನೋಭಾವ ಮೊದಲಿನಿಂದಲೇ ಇದ್ದಂತಿಲ್ಲ. ಭತ್ತ, ಅಡಿಕೆ, ಹೈನುಗಾರಿಕೆ ಪರಸ್ಪರ ಮಿಳಿತವಾದ ಪದಗಳು. ಅವುಗಳ ಪಲ್ಲಟಗಳನ್ನು ಕೃಷಿಕ ಮುಳಿಯ ವೆಂಕಟಕೃಷ್ಣರು ಹೇಳುತ್ತಾರೆ, “”ಅಡಿಕೆ, ಭತ್ತದ ಕೃಷಿಗಳಿಗೆ ಹೈನುಗಾರಿಕೆಯಿಂದಲೇ ಗೊಬ್ಬರದ ಸಂಪನ್ಮೂಲ ಸೃಷ್ಟಿಯಾಗುತ್ತಿತ್ತು. ಯಾವಾಗ ಕೋಳಿ, ಕುರಿಗೊಬ್ಬರ ಗಳು ಮನೆಗಳ ಸರಹದ್ದಿನಲ್ಲೇ ಆರಂಭವಾಯಿತೋ, ಅಂದಿನಿಂದ ಕೃಷಿಗೆ ಹೈನುಗಾರಿಕೆಯ ಬಂಧದ ಕೊಂಡಿ ಸಡಿಲವಾಗುವುದಕ್ಕೆ ಆರಂಭವಾದವು.”
ನಾಲೆಯ ನೀರನ್ನು ಅವಲಂಬಿಸಿ ಹರಿಹರಪುರದಲ್ಲಿ ಭತ್ತದ ಬೇಸಾಯ ನಡೆಯುತ್ತಿದೆ. ಈ ಬಾರಿ ನೀರು ತಡವಾದುದರಿಂದ ಸ್ವಲ್ಪಪ್ರಮಾಣ ಭತ್ತದ ಕೃಷಿಗೆ ಹಿನ್ನೆಡೆಯಾಗಿದೆ. ಈ ಅವಧಿಯಲ್ಲಿ ಒಂದಷ್ಟು ಮಂದಿ ರೈತರು ಸಿರಿಧಾನ್ಯಗಳನ್ನು ಬೆಳೆದಿದ್ದಾರೆ. ಅಕ್ಕಿಯ ಪರ್ಯಾಯವಾಗಿ ಸಿರಿಧಾನ್ಯಗಳನ್ನು ಬೆಳೆಯಬಹುದು ಎನ್ನು ವುದು ರೈತರಿಗೆ ಮನದಟ್ಟಾಗಿದೆ. ಹೀಗಿದ್ದೂ ಒಣಬೇಸಾಯದಲ್ಲೂ ಕೃಷಿ ನಡೆದಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ತನ್ನ “ಯಂತ್ರಧಾರಾ’ ವ್ಯವಸ್ಥೆಯಡಿ ಎಲ್ಲಾ ನಮೂನೆಯ ಕೃಷಿಗಳಿಗೆ ಅನುಕೂಲವಾಗುವ ಯಂತ್ರಗಳನ್ನು ಬಾಡಿಗೆ ನೆಲೆಯಲ್ಲಿ ಪೂರೈಸುತ್ತಿದೆ. ಇದು ರಾಜ್ಯ ಸರಕಾರದ ಯೋಚನೆಯ ಒಂದು ಭಾಗ. ನಾಲ್ಕು ವರುಷಗಳಿಂದ ಗ್ರಾಮಾಭಿವೃದ್ಧಿ ಯೋಜನೆಗೆ ಅನುಷ್ಠಾನದ ಹೊಣೆ. ಯಂತ್ರಗಳ ಅವಲಂಬನೆಯಿಂದಾಗಿಯೇ ಧಾರವಾಡ, ಹುಬ್ಬಳ್ಳಿ ಮೊದಲಾದೆಡೆ ಈಗಲೂ ಭತ್ತದ ಕೃಷಿಯು ಉಸಿರನ್ನು ಹಿಡಿದುಕೊಂಡಿದೆ. ಹೂಟೆಯಿಂದ ಶುರುವಾಗಿ ಪೈರಿನಿಂದ ಕಾಳು ಬೇರ್ಪಡಿಸಿ, ಬೈಹುಲ್ಲನ್ನು ಸುರುಳಿಯಾಗಿಸುವ ತನಕದ ಯಂತ್ರಗಳ ಸಾಮ ರ್ಥ್ಯವು ಭತ್ತದ ಬೇಸಾಯಕ್ಕೆ ಹೊಸ ಸ್ಫೂರ್ತಿಯನ್ನು ನೀಡಿದೆ. ಕೃಷಿ ಇಲಾಖೆಯ ಯೋಜನೆಯನ್ನು ಸಮರ್ಥವಾಗಿ ಗ್ರಾಮಾಭಿವೃದ್ಧಿ ಯೋಜನೆಯು ರೈತರ ಬಳಿ ಒಯ್ಯುತ್ತಿದೆ. “ಯಂತ್ರಧಾರಾ’ ವ್ಯವಸ್ಥೆಯು ಬಂದ ಮೇಲೆ ಸ್ಥಳೀಯವಾಗಿ ಯಂತ್ರಗಳನ್ನು ಬಾಡಿಗೆ ನೆಲೆಯಲ್ಲಿ ಪೂರೈಸುತ್ತಿದ್ದವರು ಕೂಡಾ ಬಾಡಿಗೆಯನ್ನು ಕಡಿಮೆ ಗೊಳಿಸಿರುವುದು ಕಂಡು ಬರುತ್ತದೆ. ಮೊದಲೆಲ್ಲಾ ಯಂತ್ರಗಳ ಅವಲಂಬನೆಯು ಉಳ್ಳವರಿಗೆ ಮಾತ್ರ ಎಂದಿದ್ದ ಮನಸ್ಥಿತಿಯು ಯಂತ್ರಧಾರಾದಿಂದ ಹುಸಿಯಾಗಿದೆ. ಹೀಗಾಗಿ ಸಣ್ಣ ರೈತರ ಅಂಗಳದಲ್ಲೂ ಯಂತ್ರಗಳು ಸದ್ದು ಮಾಡುತ್ತಿವೆ.
ಕನ್ನಾಡಿನಾದ್ಯಂತ ಕೃಷಿಯ ಹಿನ್ನಡೆಗೆ ಯಂತ್ರಗಳು ಬೆನ್ನು ಕೊಡುತ್ತಿರುವುದು ಬೆಳ್ಳಿರೇಖೆ. ಭತ್ತದ ಕೃಷಿಯು ನಿಧಾನಕ್ಕೆ ಪುನಶ್ಚೇತನಗೊಳ್ಳುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.
ನಾ. ಕಾರಂತ ಪೆರಾಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Constitution ಅಳಿಸಲೆಂದೇ ಜಾತಿಗಣತಿಗೆ ಮೋದಿ ವಿರೋಧ: ಜೈರಾಮ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.