ಮನದೊಳಗೆ ಇಳಿದ ನೀರು ಕೆರೆಯಲ್ಲಿ ಜಿನುಗಿತು!
Team Udayavani, Sep 28, 2017, 11:30 AM IST
ರಾಣೆಬೆನ್ನೂರು ಹುಲಿಹಳ್ಳಿಯ ಸರಕಾರಿ ಶಾಲೆಯಲ್ಲಿ ಜನವರಿಯ ಬಳಿಕ ಬಿಸಿಯೂಟಕ್ಕೆ ನೀರಿನ ಬಿಸಿ! ಕೊಳವೆ ಬಾವಿ ಆರಿದಾಗ ಮುಖ್ಯೋಪಾಧ್ಯಾಯರಿಗೆ ತಲೆನೋವು. ಬಿಸಿಯೂಟ ಮಾತ್ರವಲ್ಲ; ಕುಡಿಯಲು ಮತ್ತು ಶೌಚಕ್ಕೂ ತತ್ವಾರ. ನೀರಿಗಾಗಿ ದೂರದ ನೀರಾಶ್ರಯವನ್ನು ಅವಲಂಬಿಸುವುದು ಅನಿವಾರ್ಯ. ಮಕ್ಕಳು ಪಾಠವನ್ನು ಹಿಂದಿಕ್ಕಿ ನೀರಿನ ಹಿಂದೆ ಓಡಿದರು. ಕೊಡಗಳಲ್ಲಿ ಹೊತ್ತು ತಂದರು. ಬಿಸಿಯೂಟ ಬಡಿಸಿ ಸಹಪಾಠಿಗಳ ಹೊಟ್ಟೆ ತಂಪು ಮಾಡಿದರು. ಅಧ್ಯಾಪಕರು ಪಾಠವನ್ನು ಹೇಗೋ ಹೊಂದಾಣಿಸಿದರು!
ಮಳೆ ಮರೀಚಿಕೆಯಾಗಿ ವರುಷಾರಂಭಕ್ಕೇ ನೀರಿನ ಮೂಲ ಗಳು ಉಸಿರೆಳೆಯುವ ಸ್ಥಿತಿಯು ಕನ್ನಾಡಿನ ಕ್ಷಾಮದೇವನ ಕೃಪೆ! ಬಿಸಿಯೂಟದ ಹೆಗ್ಗಳಿಕೆಯು ಅಂಕಿಅಂಶಗಳಲ್ಲಿ ವೈಭವ ಗೊಳ್ಳುತ್ತದೆ. ವಾಸ್ತವದ ವಿಷಾದದ ಕತೆಗಳು ನೂರಾರಿವೆ. ಸಂಪನ್ಮೂಲಗಳ ಕ್ರೋಢೀಕರಣ ಮತ್ತು ನಿರ್ವಹಣೆಗಳನ್ನು ಬೇಡುವ ಶ್ರಮದ ಲೆಕ್ಕಾಚಾರವು ಲೇಖನಿಗೆ ಸಿಗದು. ಪ್ರತ್ಯಕ್ಷ ದರ್ಶನದಿಂದ ಸಾಧ್ಯವಷ್ಟೇ. ಹುಲಿಹಳ್ಳಿಯಂತಹ ಶಾಲೆ ಕನ್ನಾಡಿನ ಗ್ರಾಮ ಭಾರತದಲ್ಲಿ ಬೇಕಾದಷ್ಟಿವೆ. ಹಾಗಾಗಿ ನೋಡಿ, ಶಾಲೆಗಳನ್ನು ಮುಚ್ಚುವ ಯಶೋಗಾಥೆಗಳು ದೊರೆಗಳ ಮುಖದಲ್ಲಿ ಮಂದಹಾಸ ಮೂಡಿಸುತ್ತದೆ!
ಹುಲಿಹಳ್ಳಿ ಶಾಲೆಯಲ್ಲಿ ಈಗ ನೀರಿನ ಆತಂಕವಿಲ್ಲ. ಮಕ್ಕಳು ನೀರಿಗಾಗಿ ಊರು ಸುತ್ತುವುದಿಲ್ಲ. ಪಾಠಗಳಲ್ಲಿ ತಲ್ಲೀನ. ಬಿಸಿ ಯೂಟಕ್ಕೆ ನೀರಿನ ಬಿಸಿ ಇಲ್ಲ. ಇದು ಹೇಗೆ ಸಾಧ್ಯವಾಯಿತು? ಸನಿಹದಲ್ಲಿ ದ್ಯಾಮವ್ವ ದೇವಿ ಕೆರೆಯಿತ್ತು. ಅಲ್ಲೊಂದು ಕೆರೆಯಿದೆ ಎನ್ನುವ ಕಲ್ಪನೆಯೇ ಬಾರದಷ್ಟು ಗಿಡಗಂಟಿಗಳು ತುಂಬಿದ್ದುವು. ಸಾರ್ವಜನಿಕ ಶೌಚಾಲಯದಂತಿತ್ತು! ಚಿಕ್ಕ ಮಡುವಿನ ಸ್ವರೂಪ ತಾಳಿತ್ತು. ಈ ಕೆರೆಯು ಪುನಶ್ಚೇತನಗೊಂಡು ತಲೆಎತ್ತಿದಾಗ ನಿರ್ಜೀವ ಕೊಳವೆಬಾವಿಗಳು ಜೀವ ಪಡೆದುವು. ಜುಲೈ ತಿಂಗಳಿ ನಿಂದ ಶಾಲೆಗೆ ಯಥೇಷ್ಟ ನೀರಿನ ಸಂಪನ್ಮೂಲ.
ಕನ್ನಾಡಿನಾದ್ಯಂತ ಮಳೆ ಸುರಿದಿದೆ, ಸುರಿಯುತ್ತಿದೆ. ಉತ್ತರ ಕರ್ನಾಟಕವನ್ನೂ ತಂಪು ಮಾಡಿದೆ. ಅದು ಪ್ರಕೃತಿಯ ಕೊಡುಗೆ, ಜತೆಗೆ ಅದೃಷ್ಟ. ಅಪರೂಪಕ್ಕೆ ಒದಗುವ ಅದೃಷ್ಟದ ಆಯುಷ್ಯವು ಯಾವಾಗಲೂ ಕ್ಷಣಿಕ. ಹುಲಿಹಳ್ಳಿಯ ಹೊಸ ಕೆರೆಯು ಜುಲೈಯಲ್ಲಿ ಸುರಿದ ಒಂದು ಮಳೆಯ ನೀರನ್ನು ಹಿಡಿದಿಟ್ಟು ಕೊಳವೆ ಬಾವಿಗಳಿಗೆ ಜೀವ ತುಂಬಿದೆ. ಈಗಂತೂ ನೀರು ಏರಿ ನಿಂತಿದೆ. ಸುತ್ತಲಿನ ನೀರಿನ ಮೂಲಗಳು ಮತ್ತೆ ಚೇತನಗೊಂಡಿವೆ. ಬದುಕಿನ ನೋವಿನ ನೆರಿಗೆಗಳು ಸಡಿಲವಾಗಿ ನಗು ಮೂಡಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಹುಲಿಹಳ್ಳಿ ಕೆರೆಯ ಪುನಶ್ಚೇತನದ ಹಿಂದಿನ ಶಕ್ತಿ. ನಾಡಿನಾದ್ಯಂತ ನೂರು ಕೆರೆಗಳ ಅಭಿವೃದ್ಧಿಯು ಯೋಜನೆಯ ಶೆಡ್ನೂಲ್. ಸ್ಥಳೀಯ ಜನರ ಪಾಲ್ಗೊಳ್ಳುವಿಕೆಯು ಅಪೇಕ್ಷಣೀಯ. ಕೆಲಸ ಕಾರ್ಯಗಳನ್ನು ಹೊಂದಿಕೊಂಡು ಅನುದಾನ ಹಂಚಿಕೆ. ಇಲ್ಲಿ ಅನುದಾನಕ್ಕಿಂತಲೂ ಸ್ಥಳೀಯ ನೀರಿನ ಮನಸ್ಸುಗಳು ಒಂದಾಗು ವುದು ಮುಖ್ಯ. ಕೆರೆ ಪೂರ್ತಿಗೊಂಡಾಗ ನಮ್ಮೂರು – ನಮ್ಮ ಕೆರೆ ಎನ್ನುವ ಭಾವ ಮನದಲ್ಲಿ ಗೂಡುಕಟ್ಟಬೇಕೆನ್ನುವುದು ಆಶಯ.
ಅಸುಂಡಿ ಪಂಚಾಯತಿನ ಹುಲಿಹಳ್ಳಿಯು ಚಿಕ್ಕ ಹಳ್ಳಿ. ವಾರಕ್ಕೊಮ್ಮೆಯೋ ಹತ್ತು ದಿನಕ್ಕೊಂದಾವರ್ತಿಯೋ ನಾಲೆಯ ಕೃಪೆಯಿಂದ ಹರಿದು ಬರುವ ನೀರನ್ನು ಸಂಗ್ರಹಿಸಿಟ್ಟುಕೊಂಡು ಬಳಸಿಕೊಳ್ಳಬೇಕು. ಜನವರಿಯಿಂದ ಜೂನ್‌ವರೆಗಿನ ನೀರಿನ ಸಂಕಟ ಅಲ್ಲಿದ್ದು ಅನುಭವಿಸಬೇಕು. ವಾಹಿನಿಗಳಲ್ಲಿ, ಪತ್ರಿಕೆಗಳಲ್ಲಿ ಸುದ್ದಿಗಳನ್ನು ಓದಿ ಮರುಗಿದರೆ ವಾಸ್ತವದ ಅನುಭವ ಆಗುವುದಿಲ್ಲ. ಕೊಳವೆ ಬಾವಿಯಲ್ಲಿ ನೀರಿನ ಸದ್ದು ಕಡಿಮೆಯಾದರೆ ಕೃಷಿಯೂ ಅಳುತ್ತದೆ. ನಾಲೆಯ ನೀರನ್ನು ನಂಬಿ ಕೃಷಿ ಮಾಡಬೇಕಷ್ಟೇ.
ವಸ್ತುಸ್ಥಿತಿ ಹೀಗಿರುತ್ತಾ ಗ್ರಾಮಾಭಿವೃದ್ಧಿ ಯೋಜನೆಯ ಕೆರೆ ಜೀರ್ಣೋದ್ಧಾರ ಕಾಯಕದಲ್ಲಿ ಹುಲಿಹಳ್ಳಿಯ ನೀರಿನ ಮನಸ್ಸುಗಳು ಒಂದಾದವು. ಪಂಚಾಯತ್ ವರಿಷ್ಠರು ಕೈಜೋ ಡಿಸಿದರು. ಒಂದು ಹಂತದ ಬಳಿಕ ಊರಿನವರೇ ಮುಂದಾಳ್ತನ ವಹಿಸಿದರು. ಕೆರೆ ಕಾಯಕದಲ್ಲಿ ಹೂಳು ಸಾಗಿಸುವುದು ಶ್ರಮ ಬೇಡುವ ಕೆಲಸ. ಹೂಳು ಮಣ್ಣಿನಲ್ಲಿ ಉತ್ತಮ ಫಲವತ್ತತೆಯಿರುವುದರಿಂದ ಹೊಲಕ್ಕೆ ಹಾಕಿಸುತ್ತಾರೆ. ಕೆರೆಯ ವಿನ್ಯಾಸದ ತಾಂತ್ರಿಕ ಅಡಿಗಟ್ಟನ್ನು ಯೋಜನೆಯು ಮಾಡಿದರೆ ಮಿಕ್ಕುಳಿದ ಕೆಲಸಗಳೆಲ್ಲ ಊರವರ ಶ್ರಮದ ಬಲದಿಂದ ಸಂಪನ್ನಗೊಂಡಿದೆ.
ಕೆರೆಯ ಪುನಶ್ಚೇತನ ಅಂದರೆ ಒಂದು ಕಟ್ಟಡ ಕಟ್ಟಿದಂತೆ! ಭದ್ರವಾದ ಕಬ್ಬಿಣದ, ಕಾಂಕ್ರಿಟ್ ಅಡಿಗಟ್ಟು. ಸುತ್ತಲೂ ಬೇಲಿ. ಬೇಲಿಯ ಹೊರಮೈ ಉದ್ಯಾನದ ವಿನ್ಯಾಸ. ಶುಚಿತ್ವಕ್ಕೆ ಆದ್ಯ ಗಮನ. ಕೆರೆ ಅಭಿವೃದ್ಧಿ ಸಮಿತಿಯಿಂದ ಸಂರಕ್ಷಣೆ. ಊರಿನವರು ಮತ್ತು ಸಮಿತಿಯ ಸದಸ್ಯರ ಉಪಸ್ಥಿತಿಯಲ್ಲಿ ಕಾಮಗಾರಿ ನಡೆದಾಗ ಪಾರದರ್ಶಕ ವ್ಯವಹಾರ. ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಂದಾಗ ಜನರಿಗೂ ಶ್ರದ್ಧೆ, ಗೌರವ, ಭಕ್ತಿ. ನಾಗಬನಗಳು ರೂಪುಗೊಂಡಿರುವುದು ಈ ರೀತಿಯ ನೋಟಗಳಿಂದ ತಾನೇ. ನಾಗಬನಗಳಿಂದ ನಾಗಸಂತತಿ ಉಳಿ ದಿದೆ. ಈಚೆಗಂತೂ ಬನಗಳೇ ಮಾಯವಾಗುತ್ತಿವೆ!
“ಪಂಚಾಯತಿಯವರು ಕೆರೆ ಮಾಡಿದರೆ ಅದು ಸರಕಾರದ್ದಲ್ವಾ, ಹಾಗಾಗಿ ಸರಕಾರಿ ಕಣ್ಣಲ್ಲೇ ನೋಡ್ತಾರೆ. ಯೋಜನೆಯ ವರು ಮಾಡಿದ ಕಾರಣ ಕೆರೆಯ ಕೆಲಸಗಳು ಸಕಾಲಕ್ಕೆ ಮುಗಿದಿವೆ. ಸುಂದರ ಕೆರೆ ನಿರ್ಮಾಣವಾಗಿದೆ. ಇಪ್ಪತ್ತು ಅಡಿ ಎತ್ತರದ ಕೆರೆಯು ನೀರಿನಿಂದ ತುಂಬಿದರೆ ನಮ್ಮೂರಿಗೆ ನೀರಿನ ಬರ ಬಾರದು. ಜನ, ಜಾನುವಾರು, ಕೃಷಿಗೆ ಜೀವಜಲವಾದ ಕೆರೆಯು ದೇವಾಲಯದಷ್ಟೇ ಪವಿತ್ರ” ಎನ್ನುತ್ತಾರೆ, ಕೆರೆ ಅಭಿವೃದ್ಧಿ ಸಮಿತಿಯ ಅಧ್ಯಕ್ಷ, ಹನುಮಂತಪ್ಪ ಬೆಳವಗಿ. ಮಹಿಳೆಯರು ನೀರಿನ ಬವಣೆಗೆ ಬಲಿಯಾಗುತ್ತಿದ್ದು ಅದನ್ನು ನೀಗಿಸುವ ಸಂಕಲ್ಪವು ಕೆರೆ ಅಭಿವೃದ್ಧಿಯಿಂದ ಈಡೇರುತ್ತಿದೆ. ಇದರ ಹಿಂದಿದೆ, ಹೇಮಾವತಿ ಹೆಗ್ಗಡೆಯವರ ಕ್ರಿಯಾಶಕ್ತಿ.
ಕನ್ನಾಡಿನಾದ್ಯಂತ ಗ್ರಾಮಾಭಿವೃದ್ಧಿ ಯೋಜನೆಯು ಹಮ್ಮಿ ಕೊಂಡ ಶತಕ ಕೆರೆಗಳ ಜೀರ್ಣೋದ್ಧಾರದ ಸಂಕಲ್ಪದಲ್ಲಿ ಶೇ.95 ರಷ್ಟು ಮುಗಿದಿದೆ. ಒಂದೊಂದು ಕೆರೆಗಳಿಗೆ ಐದು ಲಕ್ಷದಿಂದ ಹತ್ತು ಲಕ್ಷದ ತನಕ ಅನುದಾನವನ್ನು ನೀಡಿದೆ. ಸ್ವತಃ ನಿಂತು ಕೆಲಸ ಮಾಡಿಸಿದೆ. ಊರವನ್ನು ಸಂಘಟಿಸಿದೆ. ನಿಜಾರ್ಥದಲ್ಲಿ ನಮ್ಮೂರು ನಮ್ಮ ಕೆರೆ ಎನ್ನುವ ಮಾಲಿಕೆಗೆ ಗೌರವ ಬಂದಿದೆ. ಹಣದೊಂದಿಗೆ ಕೆಲಸ ಮಾಡಿಸುವುದು ಒಂದು, ಜನರನ್ನು ಒಗ್ಗೂಡಿಸಿ ಅವರ ಮನಗೆಲ್ಲುವುದು ಮತ್ತೂಂದು. ಯೋಜ ನೆಯು ಈ ಎರಡನ್ನೂ ಸರಿದೂಗಿಸುತ್ತಾ ಕ್ಷಾಮದೇವನನ್ನು ದೂರಮಾಡಿದೆ.
“”ಹುಲಿಹಳ್ಳಿಯ ಕೆರೆಗೆ ಐದು ಲಕ್ಷ ಅನುದಾನವಿದ್ದರೂ 3.87 ಲಕ್ಷ ರೂಪಾಯಿಯಲ್ಲಿ ಕೆಲಸ ಮುಗಿದಿದೆ, ಮಿಕ್ಕುಳಿದ ಅಷ್ಟೇ ಮೊತ್ತವು ಶ್ರಮದ ಮೂಲಕ ಸಾರ್ವಜನಿಕ ಸಹಭಾಗಿತ್ವದಲ್ಲಿ ನಡೆದಿದೆ” ಅಂಕಿ ಅಂಶ ಮುಂದಿಡುತ್ತಾರೆ, ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಈಶ್ವರ್. ಸರಕಾರಿ ವ್ಯವಸ್ಥೆಯಲ್ಲಾಗುತ್ತಿದ್ದರೆ ಹತ್ತು ಲಕ್ಷ ರೂಪಾಯಿಗೂ ಮಿಕ್ಕಿ ವೆಚ್ಚವಾಗುತ್ತಿತ್ತು. ಆದರೆ ಕಾಮಗಾರಿ ಮುಗಿದಾಗ ಕೆರೆ ಯೇನೋ ಸಿದ್ಧವಾದೀತು, ಆದರೆ ಅದು ಜನರ ಮನದೊಳಗೆ ಭಾವವಾಗಿ ಇಳಿಯುತ್ತಿರಲಿಲ್ಲ!
ಕೆರೆಗಳು ತುಂಬಿದರೆ ಮಾತ್ರ ಅಂತರ್ಜಲ ವೃದ್ಧಿ. ಯೋಜ ನೆಯ ದೂರದೃಷ್ಟಿ ಕೆರೆ ಅಭಿವೃದ್ಧಿ ಆದರೂ, ಕೆರೆಗೆ ನೀರು ಹರಿದು ಬರುವ ನಾಲೆ, ತೋಡು, ಹಳ್ಳಗಳನ್ನು ಸರಿಪಡಿಸುವುದೂ ಸೇರಿದೆ. ಎಷ್ಟೋ ಬಾರಿ ಹರಿದು ಬರುವ ಮಳೆ ನೀರು ಹೊಲಕ್ಕೆ ನುಗ್ಗಿ ನಾಶ-ನಷ್ಟ ಮಾಡಿರುವುದನ್ನು ನೋಡುತ್ತೇವೆ. ಕೆರೆಯ ಜತೆಗೆ ಕಾಲುವೆ ರಕ್ಷಣೆಯನ್ನೂ ಗ್ರಾಮಾಭಿವೃದ್ಧಿ ಯೋಜನೆಯು ಹಮ್ಮಿಕೊಂಡಿದೆ. ಎಂಬತ್ತೈದಕ್ಕೂ ಮಿಕ್ಕಿ ಕೆರೆಗಳಿಗೆ ಜೀವ ನೀಡಿದೆ. ಮಳೆ ನೀರು ತುಂಬಿಕೊಂಡಿದೆ. ಕನ್ನಾಡಿನಲ್ಲಿ ತಂಪಾಗಿ ಬೀಸುವ ಈ ತಂಗಾಳಿಯಲ್ಲಿ ಕೆರೆಗಳನ್ನು ಮುಚ್ಚುವ ಹವಣಿಕೆಯ ಸರಕಾರಿ ಮನಸ್ಸುಗಳಿಗೆ ಸುಖ ಕಾಣದು!
ಇತ್ತ ಕೆರೆಗಳ ಸುದ್ದಿ ಮಾತನಾಡುತ್ತಿದ್ದಂತೆ, ಅತ್ತ ದೇವರನಾಡಿನ ಬತ್ತಿದ ವರಾಟ್ಟಾರ್ ನದಿ ಹರಿಯುವ ಸುದ್ದಿಯನ್ನು ಹಿರಿಯ ಪತ್ರಕರ್ತ ಶ್ರೀ ಪಡ್ರೆಯವರು ತಂದರು. ಕಬ್ಬಿನ ಊರು ವರಾಟ್ಟಾರಿನ ನದಿಯು ಪಂಪಾ ನದಿಯ ಶಾಖೆ. ನದಿ ಪಾತ್ರದ ಅವನತಿಗಳಿಂದ ವರಾಟ್ಟಾರ್ ಜೀವ ಕಳೆದುಕೊಂಡು ದಶಕ ಮೀರಿದೆ. ಸುಮಾರು ಹತ್ತು ಕಿಲೋಮೀಟರ್ ಉದ್ದದ ನದಿಯ ಇಕ್ಕೆಲದಲ್ಲಿನ ಬಾವಿಗಳು ಬತ್ತಿದ್ದುವು. ಪರಿಣಾಮ ಕ್ಷಾಮದೇವನ ಅಗಮನ. ಪಂಪಾ ಸಂರಕ್ಷಣಾ ಸಮಿತಿಯು ನದಿಯ ಶಾಪಮೋಕ್ಷಕ್ಕೆ ಟೊಂಕಕಟ್ಟಿತು.
ಜನಸಹಭಾಗಿತ್ವದಿಂದ ವರಾಟ್ಟರ್ ಪುನಃ ಹರಿಯುತ್ತಿದ್ದಾಳೆ. ವಿವಿಧ ಸಂಘಟನೆಗಳು, ಪಂಚಾಯತ್, ಊರಿನ ಸಹೃದಯಿಗಳು, ಪರವೂರಿನ ಬಂಧುಗಳು, ನಟರು… ಹೀಗೆ ನೀರಿನ ಪ್ರೀತಿಯ ವ್ಯಕ್ತಿಗಳ ಸಹಯೋಗವೇ ಆಂದೋಳನದ ಯಶದ ಗುಟ್ಟು. ಸಮಸ್ಯೆಯನ್ನು ಸಮಸ್ಯೆಯ ಕಣ್ಣಿನಿಂದಲೇ ನೋಡಿದರೆ ಸಮಸ್ಯೆಗೆ ಪರಿಹಾರವಿಲ್ಲ! ಹಕ್ಕುಗಳ ಬಗ್ಗೆ ಮಾತನಾಡಲು ನಮಗೆ ಸಮಯ ಬೇಕಾದಷ್ಟಿದೆ. ಜವಾಬ್ದಾರಿಯ ನಿಭಾವಣೆಗೆ ನುಣುಚಿಕೊಳ್ಳುತ್ತೇವೆ. ನೆಲ-ಜಲವನ್ನು ಉಳಿಸುವುದು ಜವಾಬ್ದಾರಿ.
ಉಳಿಸಿದಾಗ ಅದು ಉಳಿಯುತ್ತದೆ. ನಾವು ಉಳಿಯುತ್ತೇವೆ. ನಿಜಾರ್ಥದಲ್ಲಿ ನಾವು ಉಳಿಯಲು ಸರಕಾರ ಬೇಕಾಗಿಲ್ಲ.ಸಮಸ್ಯೆಯನ್ನು ಸಮಸ್ಯೆಯ ಕಣ್ಣಿನಿಂದಲೇ ನೋಡಿದರೆ ಸಮಸ್ಯೆಗೆ ಪರಿಹಾರವಿಲ್ಲ! ಹಕ್ಕುಗಳ ಬಗ್ಗೆ ಮಾತನಾಡಲು ನಮಗೆ ಸಮಯ ಬೇಕಾದಷ್ಟಿದೆ. ಜವಾಬ್ದಾರಿಯ ನಿಭಾವಣೆಗೆ ನುಣುಚಿಕೊಳ್ಳುತ್ತೇವೆ. ನೆಲ-ಜಲವನ್ನು ಉಳಿಸುವುದು ಜವಾಬ್ದಾರಿ. ಉಳಿಸಿದಾಗ ಅದು ಉಳಿಯುತ್ತದೆ. ನಾವು ಉಳಿಯುತ್ತೇವೆ. ನಿಜಾರ್ಥದಲ್ಲಿ ನಾವು ಉಳಿಯಲು ಸರಕಾರ ಬೇಕಾಗಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಗುಜ್ಜರಕೆರೆ ನೀರು ಬಳಕೆ ಯೋಗ್ಯವಲ್ಲ; ಪ್ರಯೋಗಾಲಯ ವರದಿಯಿಂದ ಮತ್ತೆ ಸಾಬೀತು
Mahalingpur: ಹೊಸ ಬಸ್ ನಿಲ್ದಾಣದಲ್ಲಿ ಹಳೆ ಸಮಸ್ಯೆಗಳು
Bantwal: ಕಲ್ಲಡ್ಕ ಫ್ಲೈಓವರ್; ಪೂರ್ಣತೆಯತ್ತ; ಕಾಂಕ್ರೀಟ್ ಕಾಮಗಾರಿ ಪ್ರಗತಿ
Odisha: ‘ಪ್ರವಾಸಿ ಭಾರತೀಯ ದಿವಸ್’ ಉದ್ಘಾಟಿಸಿದ ಪ್ರಧಾನಿ ಮೋದಿ; ವಿಶೇಷ ರೈಲಿಗೂ ಚಾಲನೆ
AUSvSL: ಲಂಕಾ ಸರಣಿಗೆ ಆಸೀಸ್ ತಂಡ ಪ್ರಕಟ: ಸ್ಟೀವ್ ಸ್ಮಿತ್ ಗೆ ನಾಯಕತ್ವ ಪಟ್ಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.