ಬ್ರಾಹ್ಮಣ ಎಂಬುದು ಜಾತಿಯಲ್ಲ; ಬೇರೆ ಜಾತಿಯವರೂ ಬ್ರಾಹ್ಮಣರಾಗಬಹುದು!
Team Udayavani, Sep 26, 2017, 9:30 AM IST
ಬ್ರಹ್ಮಜ್ಞಾನ ಪಡೆಯುವುದು ಒಂದು ಸಾಧನೆ. ಮನುಷ್ಯನಲ್ಲಿ ಕೆಟ್ಟತನ ಕಡಿಮೆ ಮಾಡಿ, ಸಾತ್ವಿಕತೆ ಬೆಳೆಸಲು ಎಲ್ಲಾ ಧರ್ಮಾಚರಣೆಗಳು ನೆರವಾಗಿವೆ. ನಮಗೆ ಮುಕ್ತಿ ಸಿಗುವುದು ಭಕ್ತಿಯಿಂದ ಪರಮಾತ್ಮನ ಪಾದಗಳನ್ನು ಹಿಡಿದಾಗ ಮಾತ್ರ. ಅದಕ್ಕೆ ಯಾವುದೇ ಜಾತಿ, ಭೇದಗಳಿಲ್ಲ. ಅದಕ್ಕಾಗಿ ಶ್ರಮಿಸಬೇಕು.
ಮನುಕುಲ ಪರಂಪರೆಯಲ್ಲಿ ಜನಿಸಿದವರೆಲ್ಲ ಮಾನವ ಜಾತಿಗೆ ಸೇರಿದವರು. ಜನರು ಸತ್ಯ, ಧರ್ಮ, ಸಾತ್ವಿಕತೆ, ಕುಟುಂಬ, ಸಂಬಂಧಗಳು ಇವುಗಳನ್ನು ಅನುಸರಿಸುವ ಹಾದಿಯಲ್ಲಿ ಪಂಗಡಗಳು ಅವಲಂಬಿಸಿಕೊಂಡು ಬಂದಂತಹ ಜಾತಿಗಳನ್ನು ಪಾಲಿಸಿದರು.
ಬ್ರಾಹ್ಮಣ ಎಂಬುದು ಜಾತಿಯಲ್ಲ, ಬ್ರಾಹ್ಮಣನಾಗಲು ಯಾವುದೇ ರೀತಿಯ ಜಾತಿಭೇದಗಳ ಕಟ್ಟುಪಾಡುಗಳಿಲ್ಲ. ಯಾರಿಗೆ ಬ್ರಹ್ಮನನ್ನು ಅರಿಯಲು ಮನಸ್ಸಾಗುತ್ತದೋ ಅವನು ಬ್ರಹ್ಮ ಜ್ಞಾನವನ್ನು ಪಡೆಯಲು ಮುಂದಾಗುತ್ತಾನೆ. ಬ್ರಹ್ಮ ಎಂದರೆ ಸರಸ್ವತಿಯ ಗಂಡ ಚತುರ್ಮುಖ ಬ್ರಹ್ಮನಲ್ಲ. ಬ್ರಹ್ಮನ್ ಹಿರಣ್ಯಗರ್ಭದಿಂದ ವಿಶ್ವವನ್ನೇ ಸೃಷ್ಟಿಮಾಡಿದ ಸೃಷ್ಟಿಮಾಡಿದ ಸೃಷ್ಟಿಕರ್ತ, ಭಗವಾನ್ ವಿಷ್ಣು.
ಜನರು ಬ್ರಾಹ್ಮಣ ಕುಲದಲ್ಲಿ ಹುಟ್ಟಿದ ಮಾತ್ರಕ್ಕೆ ತಮ್ಮನ್ನು ಬ್ರಾಹ್ಮಣರೆಂದು ಕರೆದುಕೊಳ್ಳುತ್ತಾರೆ. ಆದರೆ ಅವರು ನಿಜವಾದ ಬ್ರಹ್ಮಜ್ಞಾನವನ್ನು ಅರಿತ ಅನಂತರ ಮಾತ್ರ ತಮ್ಮನ್ನು ಬ್ರಾಹ್ಮಣರೆಂದು ಕರೆದುಕೊಳ್ಳಲು ಯೋಗ್ಯರು. ಅಲ್ಲಿಯತನಕ ಅವರೂ ಕೂಡ ಸಾಮಾನ್ಯ ಮನುಷ್ಯರಷ್ಟೇ. ಬ್ರಹ್ಮಜ್ಞಾನವನ್ನು ಪಡೆಯುವುದು ಒಂದು ಸಾಧನೆ. ಬ್ರಾಹ್ಮಣ ಕುಲದಲ್ಲಿ ಹುಟ್ಟಿರುವ ಸಾಮಾನ್ಯನಿಗೂ ಅದು ಸುಲಭವಲ್ಲ. ಪದ್ಧತಿಗಳು, ಆಚರಣೆಗಳು, ಸಂಪ್ರದಾಯಗಳು, ಧರ್ಮಗಳು ಇವೆಲ್ಲ ನಮ್ಮನ್ನು ಒಂದು ಉತ್ತಮ ಮಾರ್ಗಕ್ಕೆ ಕೈಹಿಡಿದು ನಡೆಸುತ್ತವೆ. ಸಾಮಾನ್ಯ ಮನುಷ್ಯನಲ್ಲಿ ಕೆಟ್ಟತನವನ್ನು ಕಡಿಮೆ ಮಾಡಿ ಸಾತ್ವಿಕತೆಯನ್ನೂ ಸೌಹಾರ್ದತೆಯನ್ನೂ ಬೆಳೆಸಲು ಎಲ್ಲ ಧರ್ಮಾಚರಣೆಗಳೂ ನೆರವಾಗಿವೆ.
ನಾವು ಏಕೆ ಹುಟ್ಟಿದ್ದೇವೆ?
ಈ ಪ್ರಶ್ನೆಗೆ ಕೆಲವರು “”ಓದಿ, ಮದುವೆ ಆಗಿ, ಮಕ್ಕಳನ್ನು ಚೆನ್ನಾಗಿ ಬೆಳೆಸಿ, ನೆಮ್ಮದಿಯಿಂದ ಜೀವನ ಸಾಗಿಸಲು” ಎನ್ನುತ್ತಾರೆ. ಬೆರಳೆಣಿಕೆಯಷ್ಟು ಜನ ಮಾತ್ರ ಈ ಪ್ರಶ್ನೆಯನ್ನೇ ತಲೆಗೆ ಹಚ್ಚಿಕೊಂಡು ಅದಕ್ಕೆ ಉತ್ತರ ಹುಡುಕಲು ಹೊರಡುತ್ತಾರೆ.
ನಾನು ಯಾರು? ನನ್ನ ಹುಟ್ಟಿನ ಕಾರಣ ಏನು?- ಈ ಪ್ರಶ್ನೆಗಳಿಗೆ ಉತ್ತರ ಹುಡುಕಲು ಹಾತೊರೆಯುವುದೇ ಬ್ರಾಹ್ಮಣನಾಗುವ ಮೊದಲ ಸೂಚನೆ. ತನ್ನ ಜನನ -ಮರಣಗಳ ಕಾರಣಕರ್ತನನ್ನರಿಯದೇ ಯಾರೂ ಬ್ರಾಹ್ಮಣರಾಗಲು ಸಾಧ್ಯವಿಲ್ಲ. ತಾಳೆಗರಿ ಶಾಸ್ತ್ರ ಕೇಳುವುದು, ಕವಡೆ ಶಾಸ್ತ್ರ ಕೇಳುವುದು ಇವುಗಳೆಲ್ಲ ನಮ್ಮ ತಾತ್ಕಾಲಿಕ ಪ್ರಶ್ನೆಗಳಿಗೆ ಸಮಾಧಾನವಷ್ಟೆ; ನಿಜವಾದ ಬ್ರಹ್ಮನನ್ನರಿಯಲು ಗುರು ಬಹಳ ಮುಖ್ಯ. ಆದರೆ ಸರಿಯಾದ ಜ್ಞಾನ ಇರುವ ಗುರುಗಳನ್ನು ಹುಡುಕಿಕೊಳ್ಳುವುದು ನಮ್ಮ ಬುದ್ಧಿವಂತಿಕೆ. ನಾನು ಭೇಟಿ ಮಾಡಿರುವ ಬಹಳಷ್ಟು ಜನ, ಯಾರು ಸರಿಯಾದ ಗುರು ಎಂಬ ಗೊಂದಲದಲ್ಲಿದ್ದಾರೆ. ಮತ್ತಷ್ಟು ಜನ ಸರಿಯಾಗಿ ದಾರಿ ತೋರುವ ಗುರುಗಳು ಸಿಗದೆ ಸ್ವಯಂ ತಾವೇ ಜ್ಞಾನದ ಸಂಶೋಧನೆಯಲ್ಲಿ ಎಷ್ಟೋ ವರ್ಷಗಳ ಕಾಲ ತಮ್ಮನ್ನು ತಾವೇ ತೊಡಗಿಸಿಕೊಂಡಿದ್ದಾರೆ. ಅದರಲ್ಲೂ ತಪ್ಪೇನಿಲ್ಲ. ಜ್ಞಾನ ಹೇಗೆ ಪಡೆದರೂ ಒಂದೇ. ಆದರೆ ಧರ್ಮಬದ್ಧವಾಗಿ ತರ್ಕ ಮಾಡುವ ಜ್ಞಾನವಿರಬೇಕಷ್ಟೆ.
ವಿಜ್ಞಾನಿಗಳು ಕೂಡ “ನಾನು ಯಾರು’ ಎಂಬ ಮೂಲ ಪ್ರಶ್ನೆಗೆ ಉತ್ತರ ಹುಡುಕಲು ತತ್ವಶಾಸ್ತ್ರವನ್ನೇ ಬೆನ್ನೆಲುಬಾಗಿಟ್ಟುಕೊಂಡಿರುವುದು. ಎಲ್ಲರೂ ಬೇರೆ ಬೇರೆ ರೂಪಗಳ ದೇವರನ್ನು ಅಥವಾ ಶಕ್ತಿಯನ್ನು ಆರಾಧಿಸುತ್ತಾರೆ. ಎಲ್ಲರೂ ಹುಡುಕುತ್ತಿರುವುದು ತಮ್ಮೊಳಗಿರುವ ಆತ್ಮಚೈತನ್ಯವನ್ನೇ. ಅದು ಹೇಗೆ ಸೃಷ್ಟಿಯಾಯಿತು? ಯಾರು ಸೃಷ್ಟಿ ಮಾಡಿದರು? ಇದರ ಉದ್ದೇಶ ಏನು? ಈ ಪ್ರಶ್ನೆಗಳೆಲ್ಲ ವಿಜ್ಞಾನಿಗಳನ್ನೂ ಕಾಡುತ್ತಿವೆ. ಅಂದರೆ, ಹುಟ್ಟು-ಸಾವುಗಳನ್ನು ವಿಜ್ಞಾನದಿಂದಾಗಲೀ ಅಥವಾ ವಿಜ್ಞಾನಿಯಿಂದಾಗಲೀ ತಡೆಗಟ್ಟಲು ಸಾಧ್ಯವಿಲ್ಲ.
ಈ ಆತ್ಮ ಚೈತನ್ಯದ ಶಕ್ತಿಯನ್ನು ಅರಿತುಕೊಳ್ಳುವವನೇ ಬ್ರಾಹ್ಮಣ, ಬ್ರಹ್ನಮಣ (ಬ್ರಹ್ಮದಿಂದ) ಬ್ರಾಹ್ಮಣ. “ಬ್ರಹ್ಮ ನನ್ನ ಜೀವಾತ್ಮದಲ್ಲಿ ಚೈತನ್ಯನಾಗಿದ್ದಾನೆ. ನನ್ನ ಆತ್ಮದಲ್ಲಿ ಪರಮಾತ್ಮನಿದ್ದಾನೆ, ದೇಹದಲ್ಲಿಲ್ಲ. ಅಹಂ ಬ್ರಹ್ಮಾಸ್ಮಿ’ ಇದು ಉಪನಿಷತ್ತಿನ ಮಹಾವಾಕ್ಯಗಳಲ್ಲಿ ಒಂದು. ಜನ ತಪ್ಪು ತಿಳಿವಳಿಕೆಯಲ್ಲಿ ನಾನೇ ಬ್ರಹ್ಮ ಎಂದು ಎದೆಯುಬ್ಬಿಸಿ ಗರ್ವದಿಂದ ಹೇಳುತ್ತಾರೆ. ಆದರೆ ದೇಹ ಬ್ರಹ್ಮನಾಗಲು ಸಾಧ್ಯವೇ ಇಲ್ಲ. ಏಕೆಂದರೆ ದೇಹ ತಾತ್ಕಾಲಿಕವಾದದ್ದು. “ಅಹಂ ಬ್ರಹ್ಮಾ ಅಸ್ಮಿ’ಯಲ್ಲಿ “ಅಹಂ’ ಎಂದರೆ ನಾನಲ್ಲ. ಬದಲಿಗೆ ಅದು “ನನ್ನ ಜೀವಾತ್ಮ ಜೀವಾತ್ಮದಲ್ಲಿ ಬ್ರಹ್ಮ ಅಸೀನನಾಗಿದ್ದಾನೆ.’ ಆದರೆ ಅದು ಹೇಗೆ ಸಾಧ್ಯ? ಎಷ್ಟೋ ದೊಡ್ಡ ಪ್ರಪಂಚಗಳ ಸೃಷ್ಟಿಕರ್ತ, ಲಕ್ಷಾಂತರ ಜೀವರಾಶಿಗಳನ್ನು ಸೃಷ್ಟಿಸಿದ ಒಡೆಯ, ನಮ್ಮ ಚಿಕ್ಕ ದೇಹದಲ್ಲಿರುವ ಪುಟ್ಟ ಜೀವಾತ್ಮದಲ್ಲಿ ಹೇಗಿರಲು ಸಾಧ್ಯ? -ಈ ಯೋಚನೆ ಅನೇಕರಿಗೆ ಬರುತ್ತದೆ. ಅದಕ್ಕೆ ನಾವು ನಮ್ಮ ಸುತ್ತಮುತ್ತಲಿನವರೊಡನೆ ಚರ್ಚಿಸಿ ಓಹೋ ಅದು ಹೇಗೆ ಸಾಧ್ಯ? ಹೀಗಂತೆ, ಹಾಗಂತೆ, ಹೀಗಿರಬಹುದು,
ಹಾಗಿರಬಹುದು ಎಂದು ನಮ್ಮ ಜ್ಞಾನಕ್ಕೆ ಅನುಗುಣವಾಗಿ ಊಹಿಸಿಕೊಂಡು ಸುಮ್ಮನಾಗುತ್ತೇವೆ. ಆದರೆ ಇಷ್ಟಕ್ಕೆ ಸುಮ್ಮನಾಗದೆ ಇವೆಲ್ಲದಕ್ಕೂ ಉತ್ತರ ಹುಡುಕಲೇಬೇಕು ಎಂಬ ಹಠದಿಂದ “ನಾನು’ ಎಂಬುದರ ಮೂಲ ಜ್ಞಾನವನ್ನು ಸರಿಯಾದ ದಾರಿಯಲ್ಲಿ ಪಡೆಯುವವನೇ ಬ್ರಾಹ್ಮಣ ಎನಿಸಿಕೊಳ್ಳಲು ಯೋಗ್ಯ. ಇಲ್ಲಿ ಜಾತಿಗಳು ನಮ್ಮ ನಮ್ಮ ಕರ್ತವ್ಯಗಳನ್ನು ನಿರ್ವಹಿಸಲು ನಾವು ಸೃಷ್ಟಿಸಿಕೊಂಡ ಕೂಟಗಳು. ಇವತ್ತಿಗೂ ಜನಸಂಖ್ಯೆ ಜಾಸ್ತಿಯಾದಂತೆ ಆಯಾ ಪಂಗಡಗಳ ಸಂಖ್ಯೆ ದೊಡ್ಡದಾಗುತ್ತಿದೆ. ಪ್ರಪಂಚ ಸೃಷ್ಟಿಯಾದಾಗ ಜಾತಿ ಎಲ್ಲಿತ್ತು? ಋಗ್ವೇದದ ಪುರುಷಸೂಕ್ತದಲ್ಲಿ ಪರಮಾತ್ಮನ ದೇಹದಿಂದ ನಾಲ್ಕು ವರ್ಣಗಳು (ಜಾತಿಗಳು) ಹುಟ್ಟಿದ ಬಗೆಯನ್ನು ವರ್ಣಿಸಲಾಗಿದೆ.
ಬ್ರಾಹ್ಮಣೋ ಅಸ್ಯ ಮುಖಮಾಸೀತ್|
ಬಾಹೂ ರಾಜನ್ಯಃ ಕೃತಃ|
ಊರು ತ್ಸ್ಯಯದ್ವೆçಶ್ಯಃ|
ಪದಾº$Âಂ ಶೂದ್ರೋ ಅಜಾಯತ||
ಅವನ ಮುಖದಿಂದ, ಅರ್ಥಾತ್ ಬಾಯಿಯಿಂದ ಬ್ರಾಹ್ಮಣ ಹುಟ್ಟಿದ. ಭುಜಗಳಿಂದ ಕ್ಷತ್ರಿಯ ಹುಟ್ಟಿದ, ತೊಡೆಯಿಂದ ವೈಶ್ಯ ಹುಟ್ಟಿದ. ಪಾದಗಳಿಂದ ಶೂದ್ರ ಹುಟ್ಟಿದ. ಇಲ್ಲಿ ಅವನು ಅಂದರೆ ಪರಬ್ರಹ್ಮ.
ನಾವು ಎಷ್ಟೇ ಜ್ಞಾನವನ್ನು ಪಡೆದಿದ್ದರೂ ಕೊನೆಗೆ ನಮಗೆ ಮುಕ್ತಿ ಸಿಗುವುದು ಭಕ್ತಿಯಿಂದ ಪರಮಾತ್ಮನ ಪಾದಗಳನ್ನು ಹಿಡಿದಾಗ ಮಾತ್ರ! ಭಕ್ತಿಗೆ, ಜ್ಞಾನಕ್ಕೆ, ಬ್ರಾಹ್ಮಣ್ಯಕ್ಕೆ ಯಾವುದೇ ಜಾತಿ ಭೇದಗಳಿಲ್ಲ. ಆದರೆ ಇವುಗಳನ್ನು ಪಡೆದುಕೊಳ್ಳುವುದು ಸುಲಭವಲ್ಲ! ನಾವು ಹೇಗೆ ಸಾಮಾನ್ಯ ಪದವಿ ಪಡೆಯಲು 20 ವರ್ಷ ಶ್ರಮ ಪಡುತ್ತೇವೋ ಹಾಗೆ ನಿಜವಾದ ಬ್ರಹ್ಮಜ್ಞಾನ ಪಡೆಯಲು ಸಾತ್ವಿಕವಾದ ಆಹಾರ, ಸಾತ್ವಿಕ ಗುಣಗಳನ್ನು ಮೈಗೂಡಿಸಿಕೊಂಡು ಕಟ್ಟುನಿಟ್ಟಾಗಿ ಎಷ್ಟೋ ವರ್ಷ ಶ್ರಮಿಸಬೇಕು.
ಮನುಸ್ಮತಿಯಲ್ಲಿ ಶೂದ್ರ ಕಳ್ಳತನ ಮಾಡಿದರೆ 8 ಛಡಿ ಏಟು, ವೈಶ್ಯ ಮಾಡಿದರೆ 16 ಛಡಿ ಏಟು, ಕ್ಷತ್ರಿಯ ಮಾಡಿದರೆ 32 ಛಡಿ ಏಟು, ಬ್ರಹ್ಮಜ್ಞಾನ ಪಡೆದ ಬ್ರಾಹ್ಮಣ ಮಾಡಿದರೆ 64 ಛಡಿ ಏಟು ಎಂದು ಶಿಕ್ಷೆ ವಿಧಿಸಿದ್ದಾರೆ. ಇವತ್ತಿಗೂ ಜಾತಿಗಳ ಪ್ರಚಾರದಲ್ಲಿರುವುದು ಸರಕಾರವೇ ಹೊರತು ಜನ ಸಾಮಾನ್ಯರಲ್ಲ. ಜನರು ತಮ್ಮ ಪಾಡಿಗೆ ಜೀವನ ನಡೆಸುತ್ತಿದ್ದಾರೆ. ಸರಕಾರವೇ ನೂರೆಂಟು ಜಾತಿಗಳ ಹಣೆಪಟ್ಟಿ ಸೃಷ್ಟಿಸಿ, ಅವುಗಳಿಗೆ ಅಧಿಕೃತ ರೂಪ ನೀಡಿ ಹುಟ್ಟಿನಿಂದ ಸಾವಿನವರೆಗೆ ಒಬ್ಬ ಮನುಷ್ಯನ ಎಲ್ಲ ಸರಕಾರಿ ವ್ಯವಹಾರಗಳಲ್ಲೂ ಅದು ಜತೆಯಲ್ಲಿರುವಂತೆ ಮಾಡಿಬಿಟ್ಟಿದೆ. ದಿನನಿತ್ಯ ನಾವು ಯಾರೂ ನಮ್ಮ ಜಾತಿಗಳ ಹಣೆಪಟ್ಟಿ ಅಂಟಿಸಿಕೊಂಡು ಓಡಾಡುವುದಿಲ್ಲ. ಸರಕಾರದ ಉನ್ನತ ಹುದ್ದೆಗಳಲ್ಲಿರುವವರು ಭಾಷಣಗಳಲ್ಲಿ ಮಾತ್ರ ನಾವೆಲ್ಲ ಒಂದೇ, ಮನುಜಮತ ವಿಶ್ವಪಥ ಎಂದು ಕೂಗಿ ಹೇಳುತ್ತಾರೆ. ಮೊದಲು ಸರಕಾರ ಜಾತಿ ಭೇದಗಳಿಂದ ಮುಕ್ತವಾಗಬೇಕು. ಅದಕ್ಕೆ ನಾವೆಲ್ಲ ಕಾಯುತ್ತಿರಬೇಕು!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.