ಸಲಿಂಗ ಕಾಮಿಗಳು ತಮ್ಮ ಪ್ರೀತಿಗಾಗಿ ಹೋರಾಡುತ್ತಿದ್ದಾರೆ!
Team Udayavani, Apr 25, 2017, 12:33 PM IST
ಮನುಷ್ಯನ ಮನಸ್ಸು ಬಹಳ ವಿಚಿತ್ರ. ಅದನ್ನು ಕಾಯ್ದೆ ಕಾನೂನುಗಳಿಂದ ಬದಲಿಸಲು ಅಥವಾ ನಿಯಂತ್ರಿಸಲು ಸಾಧ್ಯವಿಲ್ಲ. ಎಲ್ಲಿಯವರೆಗೆ ಒಂದು ಅಭ್ಯಾಸ, ನಡವಳಿಕೆಯಿಂದ ಸಮಾಜಕ್ಕೆ ಅಥವಾ ಬೇರೆಯವರಿಗೆ ಹಾನಿಯಿಲ್ಲವೋ ಅಲ್ಲಿಯವರೆಗೆ ಆ ಅಭ್ಯಾಸವನ್ನು ಕಾನೂನಿನ ಮೂಲಕ ನಿಯಂತ್ರಿಸಲು ಹೋಗಬಾರದು.
ದೇವರು ವಿಶ್ವವನ್ನು ಸೃಷ್ಟಿಸಿದಾಗ, ಪ್ರೀತಿಯ ಪ್ರತಿರೂಪವಾಗಿ ಪ್ರಕೃತಿ ಮತ್ತು ಪುರುಷನನ್ನು ಸೃಷ್ಟಿಸಿದ. ಪ್ರಕೃತಿಯನ್ನು ಹೆಣ್ಣೆಂದೂ ಪುರುಷನನ್ನು ಗಂಡೆಂದೂ ಹೆಸರಿಸಿ, ಅವರ ಮೂಲಕ ವಿಶ್ವದೆಲ್ಲೆಡೆ ಮಾನವ ಸಂಕುಲ ಸಮೃದ್ಧಿಯಾಗಿ ಬೆಳೆಯಲೆಂದು ಹರಸಿದ. ಇದು ಮನುಷ್ಯ ಜಾತಿಗೆ ಮಾತ್ರವಲ್ಲ; ಪ್ರಾಣಿ, ಪಕ್ಷಿ, ಕ್ರಿಮಿ, ಕೀಟಗಳಿಗೂ ಗಂಡು-ಹೆಣ್ಣಿನ ಆಕರ್ಷಣೆ, ಆ ಮೂಲಕ ಸಂತಾನ ಅಭಿವೃದ್ಧಿ ಸಹಜವಾಗಿಯೇ ಬೆಳೆದು ಬಂದಿದೆ.
ಹಾಗಾದರೆ ಸಲಿಂಗಕಾಮಿಗಳ ಪ್ರೀತಿ, ಆಕರ್ಷಣೆ ಸಹಜವಲ್ಲ ಅನ್ನಿಸುತ್ತದೆಯೇ!? ಜಗತ್ತಿನಲ್ಲಿ ಗಂಡು- ಹೆಣ್ಣು ಮಾತ್ರ ಯಾಕೆ ಪರಸ್ಪರ ಪ್ರೀತಿಸಬೇಕು? ಒಂದೇ ಲಿಂಗವಾದರೇನಂತೆ, ಪ್ರೀತಿಗೆ ಯಾಕೆ ಬೇಲಿ ಕಟ್ಟುತ್ತೀರಿ? ಪ್ರೀತಿಗೆ ಜಾತಿ ಬೇಧ ಇಲ್ಲ ಅಂದಮೇಲೆ – ಲಿಂಗಬೇಧವೂ ಇರಬಾರದು ಅಲ್ಲವೇ ಅನ್ನುವುದು ಅವರ ವಾದ.
ಅವರು ಹೇಳುವುದು ಖಂಡಿತ ಸರಿ. ಪ್ರೀತಿಗೆ ಬೇರೆ ಯಾರ ಅನುಮತಿಯನ್ನೂ ಪಡೆಯಬೇಕಾದ ಆವಶ್ಯಕತೆ ಇಲ್ಲ, ಯಾರು ಯಾರನ್ನು ಬೇಕಾದರೂ ಧಾರಾಳವಾಗಿ ಪ್ರೀತಿಸಬಹುದು. ಕೆಲವರು ಸ್ನೇಹಿತರೆನಿಸಿಕೊಳ್ಳುತ್ತಾರೆ, ಕೆಲವರು ಪ್ರೇಮಿಗಳೆನಿಸಿಕೊಳ್ಳುತ್ತಾರೆ, ಇನ್ನು ಕೆಲವರು ಗಂಡ -ಹೆಂಡತಿಯಾಗುತ್ತಾರೆ. ಇದನ್ನು ಮೀರಿದ ಇನ್ನೊಂದು ಸಂಬಂಧ ಕೆಲವರ ನಡುವೆ ಬೆಳೆಯುವುದಿದೆ. ನಾವಿಬ್ಬರೇ ಯಾಕೆ ಜೀವನಪೂರ್ತಿ ಜತೆಯಾಗಿರಬಾರದು ಎಂದು ಭಾವಿಸುತ್ತಾರೆ.
“ನಮ್ಮಿಬ್ಬರಲ್ಲಿ, ಕೇರಿಂಗ್, ಲವ್, ಅಟ್ರಾಕ್ಷನ್ ಎಲ್ಲವೂ ನಮ್ಮಿಬ್ಬರಲ್ಲಿ ಇದ್ದಮೇಲೆ ನಾವ್ಯಾಕೆ ಜತೆಗೆ ಸಂಸಾರ ನಡೆಸಬಾರದು’ ಅಂತ ಅವರಿಗವರೇ ಸಮಜಾಯಿಸಿಕೊಂಡು ಪತಿ-ಪತ್ನಿಯರಂತೆ ಬದುಕಲಾರಂಭಿಸುತ್ತಾರೆ. ಗಂಡನೂ ಗಂಡಸೇ, ಹೆಂಡತಿಯೂ ಗಂಡಸೇ; ಅಥವಾ ಇಬ್ಬರೂ ಹೆಂಗಸರೇ.
ಹುಡುಗ-ಹುಡುಗಿ ನಡುವೆ ಮಾತ್ರ ಸಂಬಂಧವೇರ್ಪಡಲು ಸಾಧ್ಯ ಎಂಬ ಸಾಂಪ್ರದಾಯಿಕ ನಂಬಿಕೆ ಇರುವವರಿಗೆ ಇದನ್ನು ನೋಡಿದರೆ ನಗು ಬರಬಹುದು. ಇದು ಪ್ರಕೃತಿಗೆ ವಿರುದ್ಧ ಅಂತಲೂ ಅನ್ನಿಸಬಹುದು. ಆದರೆ, ಪ್ರಕೃತಿಗೆ ಅನುಗುಣವಾಗಿ ನಡೆದುಕೊಳ್ಳಬೇಕು ಎಂಬ ಮಿತಿಯನ್ನು ಹಾಕಿಕೊಳ್ಳುವುದು ಕೂಡ ಒಂದು ಸಾಂಪ್ರದಾಯಿಕ ನಂಬಿಕೆಯೇ. ಎಷ್ಟೋ ವಿಷಯಗಳಲ್ಲಿ ನಾವು ಪ್ರಕೃತಿಗೆ ವಿರುದ್ಧವಾಗಿ ಹೋಗುವುದಿಲ್ಲವೇ? ಇಷ್ಟಕ್ಕೂ ಸಲಿಂಗಕಾಮ ಎಂಬುದು ಪ್ರಕೃತಿಗೆ ವಿರುದ್ಧ ಎಂದು ಭಾವಿಸುವುದು ಕೂಡ ಅವರವರ ವೈಯಕ್ತಿಕ ನಿರ್ಧಾರವೇ. ಪ್ರೀತಿಯೊಂದು ನಡುವೆ ಇದ್ದರೆ ಪ್ರೀತಿಯ ಪ್ರಕೃತಿಗೆ ಯಾವುದೂ ವಿರುದ್ಧವಲ್ಲ.
ಪ್ರೀತಿಗೇಕೆ ಕಾನೂನಿನ ಅಂಕುಶ?
ಸಲಿಂಗಕಾಮ ನಮ್ಮ ದೇಶದಲ್ಲಿ ಕಾನೂನಿಗೆ ವಿರುದ್ಧವಾಗಿದ್ದರೂ ಅನಾದಿ ಕಾಲದಿಂದಲೂ ಇಂತಹ ಸಂಬಂಧ ಇದ್ದೇ ಇದೆ. ಇಷ್ಟು ದಿನ ಅದನ್ನು ರಹಸ್ಯವಾಗಿ ಕಾಪಾಡಿಕೊಳ್ಳಲಾಗುತ್ತಿತ್ತು. ಈಗ ಜನರಿಗೆ ತಮಗಿರುವ ಸ್ವಾತಂತ್ರ್ಯದ ಬಗ್ಗೆ ಅರಿವು ಬಂದಿರುವುದರಿಂದ ಹೆಚ್ಚಿನ ಸಲಿಂಗಿಗಳು ತಮ್ಮ ಸ್ಟೇಟಸ್ಸನ್ನು ಧೈರ್ಯವಾಗಿ ಹೇಳಿಕೊಳ್ಳುತ್ತಾರೆ. ಆದರೆ, ಅವರನ್ನು ಸಮಾಜ ನಡೆಸಿಕೊಳ್ಳುವ ರೀತಿ ಮಾತ್ರ ಬಹಳ ಹೀನಾಯವಾಗಿದೆ. ಕಾಮವೆಂದರೆ ದೈಹಿಕ ಸಂಪರ್ಕ ಎಂದಷ್ಟೇ ಅರ್ಥೈಸಬೇಕಿಲ್ಲ. ಬಯಸುವುದೆಲ್ಲವೂ ಕಾಮ. ದೈಹಿಕ ಸಂಪರ್ಕ ಮುಂದಿನ ಹಂತವಷ್ಟೆ.
ಹತ್ತಿಕ್ಕಿದರೆ ಅಪಾಯ ನಿಶ್ಚಿತ
ಜಗತ್ತಿನ ಬಹಳ ದೇಶಗಳಲ್ಲಿ ಸಲಿಂಗಕಾಮಿಗಳ ವಿವಾಹಕ್ಕೆ ನ್ಯಾಯಾಲಯ ಅನುಮತಿ ನೀಡಿದೆ. ನಮ್ಮಲ್ಲಿ ನಮ್ಮ ಸಂಸ್ಕೃತಿಯ ಹೆಸರಿನಲ್ಲಿ ಅದಕ್ಕೆ ಅನುಮತಿ ನೀಡಲು ಸರಕಾರ ಹಾಗೂ ಅದರ ಮೇಲೆ ಒತ್ತಡ ಹೇರುವ ಶಕ್ತಿಯಿರುವವರು ಬಿಡುತ್ತಿಲ್ಲ. ಸಲಿಂಗಕಾಮ ಅಪರಾಧ ಎಂದು ಕಾಯಿದೆಯೇ ಇರುವುದರಿಂದ ಕೋರ್ಟ್ ಕೂಡ ಅದಕ್ಕೆ ತಕ್ಕಂತೆ ನಡೆದುಕೊಳ್ಳಬೇಕಾಗುತ್ತದೆ. ಇದನ್ನು ಮರುಪರಿಶೀಲನೆ ಮಾಡಿ ಎಂದು ಸರಕಾರಕ್ಕೆ ಹೇಳುವುದಕ್ಕಷ್ಟೇ ಅದರ ಪಾತ್ರ ಸೀಮಿತ. ಈಗಾಗಲೇ ಸಲಿಂಗಕಾಮವನ್ನು ಸಕ್ರಮ ಎಂದು ಘೋಷಿಸುವ ಬಗ್ಗೆ ಪರಿಶೀಲಿಸಿ ಎಂದು ಸರಕಾರಕ್ಕೆ ಕೋರ್ಟ್ ಸೂಚಿಸಿದ್ದಾಗಿದೆ. ಇನ್ನು ಮುಂದಿನ ಕೆಲಸ ಸರಕಾರದ್ದು.
ಎಷ್ಟೋ ಮಂದಿ ತಾವು ಸಲಿಂಗಿಗಳು ಎಂದು ಹೇಳಿಕೊಳ್ಳಲು ಮುಜುಗರಗೊಂಡು ಸುಮ್ಮನಿರುತ್ತಾರೆ. ಅನಂತರ ಮನೆಯವರ ಒತ್ತಾಯಕ್ಕೆ ಮದುವೆಯಾಗುತ್ತಾರೆ. ಆದರೆ ಅದರ ಪರಿಣಾಮ ಮಾತ್ರ ವಿಪರೀತ. ಕೊನೆಗೆ ಇಬ್ಬರದೂ ಬಾಳು ಹಾಳಾಗುವುದರಲ್ಲಿ ಅಂತ್ಯ ಕಾಣುತ್ತದೆ. ಇಂತಹ ಸಾವಿರಾರು ಉದಾಹರಣೆಗಳು ಮಾಧ್ಯಮಗಳ ಮೂಲಕ ನಮಗೆ ಸಿಗುತ್ತವೆ.
ಇತ್ತೀಚೆಗೆ ನನಗೆ ತಿಳಿದವರ ಮನೆಯಲ್ಲಿ ಹುಡುಗ ಮದುವೆ ಮಾಡಿಕೊಂಡು ಚೆನ್ನಾಗಿಯೇ ಇದ್ದ. ಕೆಲವು ವರ್ಷಗಳ ಅನಂತರ ಅವನಿಗೆ ಹೆಂಡತಿಯ ಮೇಲೆ ಆಕರ್ಷಣೆ ಕಡಿಮೆ ಆಗುತ್ತಾ ಬಂತು. ಹೆಂಡತಿಗೆ ಅನುಮಾನ ಬಂದು ಮನೆಯಲ್ಲಿ ರಹಸ್ಯ ಕೆಮರಾ ಫಿಕ್ಸ್ ಮಾಡಿ ತನ್ನ ತಾಯಿಯ ಮನೆಗೆ ಹೋದಳು. ಆ ಬಳಿಕ ತನ್ನ ಪತಿ ಸಲಿಂಗಕಾಮಿ ಎಂಬುದು ಆಕೆಗೆ ಕೆಮರಾದಲ್ಲಿ ದಾಖಲಾದ ದೃಶ್ಯಗಳ ಮೂಲಕ ಮನವರಿಕೆಯಾಯಿತು. ಸಲಿಂಗ ಕಾಮಿಗಳಾಗಿರುವುದು ತಪ್ಪೇನಿಲ್ಲ. ಪ್ರೀತಿಯನ್ನು, ಸಲಿಂಗ ಆಕರ್ಷಣೆಯನ್ನು ಹೆಮ್ಮೆಯಿಂದ ಹೇಳಿಕೊಳ್ಳಿ. ಮುಚ್ಚಿಟ್ಟುಕೊಂಡು ಬೇರೆಯವರ ಬದುಕು ಹಾಳು ಮಾಡಬೇಡಿ. ಅದು ನಮಗಿರುವ ವೈಯಕ್ತಿಕ ಸ್ವಾತಂತ್ರ್ಯ.
ಇಂದು ನಿನ್ನೆಯದಲ್ಲ
ಸಲಿಂಗಕಾಮಿಗಳು ಪುರಾತನ ಕಾಲದಿಂದಲೂ ಇದ್ದರು. ಹಿಂದೆ ರಾಜ-ಮಹಾರಾಜರು ಯುದ್ಧ ಮಾಡಲು ಸೈನಿಕರನ್ನು ತಿಂಗಳಾನುಗಟ್ಟಲೆ ಕರೆದುಕೊಂಡು ಹೋಗುತ್ತಿದ್ದರು. ಅನೇಕ ಸೈನಿಕರು ಪರಿಸ್ಥಿತಿಯ ಒತ್ತಡದಿಂದಾಗಿ ತಮ್ಮ ತಮ್ಮಲ್ಲೇ ಪ್ರೇಮಿಗಳನ್ನು ಹುಡುಕಿಕೊಂಡು ಸಲಿಂಗಕಾಮಿಗಳಾಗುತ್ತಿದ್ದರು.
ನಾನು ಅನೇಕ ಸಲಿಂಗಿಗಳನ್ನು ನಮ್ಮ ದೇಶದಲ್ಲಿ ಹಾಗೂ ಬೇರೆ ದೇಶಗಳಲ್ಲಿ ಭೇಟಿ ಮಾಡಿ ಮಾತನಾಡಿಸಿದ್ದೇನೆ. ಕೆಲವರ ಪ್ರೀತಿಯ ಅಗಾಧತೆಯನ್ನು ಕಂಡು ದಂಗಾಗಿದ್ದೇನೆ.
ಪ್ರಕೃತಿ ಸಹಜ ಬದುಕು ನಡೆಸುತ್ತಿರುವ ನಾವು ಕೂಡ ಅಷ್ಟು ತೀವ್ರವಾಗಿ ಪ್ರೀತಿಸಲು ಸಾಧ್ಯವಿಲ್ಲ ಅನ್ನಿಸಿದ್ದಿದೆ. ಕೆಲವು ದೇಶಗಳಲ್ಲಿ ಅನೇಕ ಗಣ್ಯ ವ್ಯಕ್ತಿಗಳು ಹಣ ಕೊಟ್ಟು ದುಬಾರಿ ಶಸ್ತ್ರಕ್ರಿಯೆಗೆ ಒಳಗಾಗಿ ತಮ್ಮ ಲಿಂಗ ಬದಲಾಯಿಸಿಕೊಂಡಿದ್ದಾರೆ. ಮದುವೆಯಾಗಿ ಎರಡು ಮಕ್ಕಳಾದ ಅನಂತರ ತಾನು ಹೆಣ್ಣಾಗಿದ್ದರೆ ಚೆನ್ನಾಗಿರುತ್ತದೆ ಅಂತ ಅನ್ನಿಸಿ ಲಿಂಗ ಬದಲಾವಣೆ ಮಾಡಿಸಿಕೊಂಡವರೂ ಇದ್ದಾರೆ.
ಮನುಷ್ಯನ ಮನಸ್ಸು ಬಹಳ ವಿಚಿತ್ರ. ಅದನ್ನು ಕಾಯ್ದೆ ಕಾನೂನುಗಳಿಂದ ಬದಲಿಸಲು ಅಥವಾ ನಿಯಂತ್ರಿಸಲು ಸಾಧ್ಯವಿಲ್ಲ. ಎಲ್ಲಿಯವರೆಗೆ ಒಂದು ಅಭ್ಯಾಸ, ನಡವಳಿಕೆಯಿಂದ ಸಮಾಜಕ್ಕೆ ಅಥವಾ ಬೇರೆಯವರಿಗೆ ಹಾನಿಯಿಲ್ಲವೋ ಅಲ್ಲಿಯವರೆಗೆ ಆ ಅಭ್ಯಾಸವನ್ನು ಕಾನೂನಿನ ಮೂಲಕ ನಿಯಂತ್ರಿಸಲು ಹೋಗಬಾರದು ಅನ್ನುವುದು ನನ್ನ ವಾದ. ಹಠ ಕಟ್ಟಿ ನಿಯಂತ್ರಿಸಲು ಹೋಗುವುದಕ್ಕಿಂತ ಅದಕ್ಕೆ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಿ ಸರಿಯಾದ ಮಾರ್ಗವೊಂದನ್ನು ರೂಪಿಸಿಕೊಡುವುದು ಮೇಲು.
ಸಲಿಂಗಿಗಳನ್ನು ಅವರ ಪಾಡಿಗೆ ಅವರನ್ನು ಸಂತೋಷವಾಗಿರಲು ಬಿಟ್ಟರೆ ಅದರಿಂದ ಯಾರಿಗೂ ಹಾನಿಯಿಲ್ಲ. ಬದಲಿಗೆ, ಸಲಿಂಗಕಾಮವನ್ನು ಹತ್ತಿಕ್ಕಲು ಹೋಗುವುದರಿಂದಲೇ ಅಪಾಯವಿದೆ. ನಿಜವಾಗಿ ನೋಡಿದರೆ ಅವರನ್ನು ಬಲವಂತವಾಗಿ ಹತ್ತಿಕ್ಕುವುದೇ ಪ್ರಕೃತಿಗೆ ವಿರುದ್ಧ.
– ರೂಪಾ ಅಯ್ಯರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Puttur: ಮಾದಕ ಪದಾರ್ಥ ಸಹಿತ ಆರೋಪಿ ಸೆರೆ
Udupi; ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾಗಿ ರಮೇಶ್ ಕಾಂಚನ್ ಆಯ್ಕೆ
Road Mishap: ಬೀದರ್ ನಲ್ಲಿ ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಮೃತ್ಯು, ಮಹಿಳೆ ಗಂಭೀರ
Belgavi;ಸುವರ್ಣ ವಿಧಾನ ಸೌಧದ ಸುತ್ತ ನಿಷೇಧಾಜ್ಞೆ
Maharashtra ಮತದಾನ ಮುಗಿದ ನಂತರ 7% ಹೆಚ್ಚಳ : ECI ಸ್ಪಷ್ಟಪಡಿಸಬೇಕು ಎಂದ ಕಾಂಗ್ರೆಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.