ಪುಟ್ಟ ಹುಡುಗನಿಗೆ ಅಷ್ಟು ಶಕ್ತಿ ಹೇಗೆ ಬಂತು?
ಬ್ಯಾಟ್ಸಮನ್ ಎಂಬ 'ನಾವು', ಬದುಕು ಎಂಬ 'ಬೌಲರ್'
Team Udayavani, Aug 21, 2019, 5:32 AM IST
ಒಂದು ಪುಟ್ಟ ಗ್ರಾಮದಲ್ಲಿ ವಾಸಿಸುತ್ತಿದ್ದ ಇಬ್ಬರು ಹುಡುಗರ ಕಥೆಯಿದು. ಅದರಲ್ಲಿ ಒಬ್ಬ ಹುಡುಗ ಆರು ವರ್ಷದವ. ಇನ್ನೊಬ್ಬ 10 ವರ್ಷದ ಹುಡುಗ. ಇಬ್ಬರೂ ಅತ್ಯಂತ ಖಾಸಾ ದೋಸ್ತ್ಗಳಾಗಿದ್ದರು, ಶೋಲೆ ಸಿನೆಮಾದ ಜೈ ಮತ್ತು ವೀರೂವಿನಂತೆ! ಯಾವಾಗಲೂ ಜತೆಯಲ್ಲೇ ಆಟವಾಡುತ್ತಿದ್ದರು, ಊಟಮಾಡುತ್ತಿದ್ದರು…
ಒಂದು ದಿನ ಇವರಿಬ್ಬರೂ ಗಾಳಿಪಟವೊಂದನ್ನು ಹಾರಿಸುತ್ತಿರುವಾಗ, ದಾರ ತುಂಡಾಗಿ ಗಾಳಿಪಟವು ದೂರ ಹಾರುತ್ತಾ ಹೊರಟುಬಿಟ್ಟಿತು. ಈ ಮಕ್ಕಳು ಅದರ ಹಿಂದೆ ಓಡಿದರು. ಮೇಲೆ ನೋಡುತ್ತಾ ಮುಂದೆ ಓಡುತ್ತಿದ್ದ ದೊಡ್ಡ ಹುಡುಗ ಏಕಾಏಕಿ ಬಾವಿಯೊಂದರಲ್ಲಿ ಬಿದ್ದುಬಿಟ್ಟ! ಸಹಾಯಕ್ಕಾಗಿ ಕೂಗಲಾರಂಭಿಸಿದ. ತನ್ನ ಗೆಳೆಯನಿಗೆ ಎದುರಾದ ದುರ್ದೆಸೆ ಕಂಡು ಚಿಕ್ಕ ಹುಡುಗನಿಗೆ ಗಾಬರಿಯಾಯಿತು. ಸಹಾಯ ಮಾಡುವವರು ಯಾರಾದರೂ ಇರಬಹುದಾ ಎಂದು ಸುತ್ತಲೂ ನೋಡಿದ. ಆಗ ಈ ಹುಡುಗನಿಗೆ ತಾವು ಹಳ್ಳಿಯಿಂದ ದೂರ ಬಂದುಬಿಟ್ಟಿದ್ದೇವೆ ಎಂಬ ಅರಿವಾಯಿತು. ಅಲ್ಲಿ ಇವರನ್ನು ಬಿಟ್ಟರೆ ಮತ್ತೂಂದು ನರಪಿಳ್ಳೆ ಇರಲಿಲ್ಲ. ಅಷ್ಟರಲ್ಲೇ ಈ ಚಿಕ್ಕ ಹುಡುಗನ ದೃಷ್ಟಿ ಬಾವಿಯ ಪಕ್ಕದಲ್ಲೇ ಇದ್ದ ಬಕೆಟ್ನತ್ತ ಹೊರಳಿತು. ಆ ಬಕೆಟ್‌ಗೆ ಹಗ್ಗವನ್ನೂ ಕಟ್ಟಲಾಗಿತ್ತು!
ಪುಟ್ಟ ಹುಡುಗ ಒಂದು ಸೆಕೆಂಡ್ ಕೂಡ ಹಾಳುಮಾಡದೇ ಬಕೆಟ್ ನೀರೊಳಕ್ಕೆ ಎಸೆದು, ‘ಇದನ್ನ ಗಟ್ಟಿಯಾಗಿ ಹಿಡ್ಕೋ’ ಎಂದು ಮುಳುಗುತ್ತಿದ್ದ ತನ್ನ ಗೆಳೆಯನಿಗೆ ಹೇಳಿದ. ಇನ್ನೇನು ಮುಳುಗೇ ಹೋಗಲಿದ್ದ ದೊಡ್ಡ ಹುಡುಗ ಗಟ್ಟಿಯಾಗಿ ಬಕೆಟ್ ಹಿಡಿದುಕೊಂಡ. ಕೂಡಲೇ ಪುಟ್ಟ ಪೋರ ತನ್ನೆಲ್ಲ ಶಕ್ತಿಯನ್ನು ಒಗ್ಗೂಡಿಸಿ ಅವನನ್ನು ಮೇಲೆ ಎಳೆಯಲಾರಂಭಿಸಿದ. ಅವನಿಗೆ ಕಷ್ಟವಾಗಲಾರಂಭಿಸಿತು. ಕೈ ಜಾರತೊಡಗಿತ್ತು. ಹಗ್ಗ ಕೈಯನ್ನು ತರಚುತ್ತಿತ್ತು. ಆದರೂ ಹುಚ್ಚು ಹಿಡಿದವನಂತೆ ಈ ಹುಡುಗ ಹಗ್ಗವನ್ನು ಎಳೆದೇ ಎಳೆದ….ಕೊನೆಗೂ ತನ್ನ ಗೆಳೆಯನನ್ನು ಮೇಲೆ ತರುವವರೆಗೂ ಅವನು ಹಗ್ಗವನ್ನು ಬಿಡಲಿಲ್ಲ. ಹಿರಿಯ ಹುಡುಗ ಮೇಲೆದ್ದು ಬಂದ! ಇದನ್ನು ನೋಡಿದ್ದೇ ಪುಟ್ಟ ಹುಡುಗ ಕುಣಿಯುತ್ತಾ ಹೋಗಿ ಅವನನ್ನು ತಬ್ಬಿಕೊಂಡ. ತುಸು ಸಾವರಿಸಿಕೊಂಡ ನಂತರ ಹಿರಿಯ ಹುಡುಗನೂ ಖುಷಿಯಿಂದ ಕುಣಿದಾಡಿಬಿಟ್ಟ. ಆದರೆ ಈ ಸಂತೋಷದ ನಡುವೆಯೇ ಅವರಿಗೆ ಭಯವೂ ಇತ್ತು. ತಮ್ಮ ಈ ಹುಡುಗಾಟಿಕೆಯ ಬಗ್ಗೆ ಊರವರಿಗೆ ತಿಳಿದುಬಿಟ್ಟರೆ, ಎಲ್ಲರೂ ಚೆನ್ನಾಗಿ ಬೈಯ್ಯುತ್ತಾರೆ, ಮನೆಯವರಿಂದ ನಾಲ್ಕೈದು ಏಟೂ ಬೀಳಬಹುದು ಎಂದು ನಡುಗಿದರು. ಸ್ವಲ್ಪ ಇಲ್ಲೇ ಕುಳಿತು ಆಮೇಲೆ ಹೋಗೋಣವೆಂದರೆ ಅದಾಗಲೇ ಸಂಜೆ ಕಳೆದು ಕತ್ತಲಾಗುವುದರಲ್ಲಿತ್ತು. ಹೀಗಾಗಿ, ಆದದ್ದಾಗಲಿ ಎಂದು ಧೈರ್ಯ ತಂದುಕೊಂಡು ಊರಿನತ್ತ ಹೊರಟರು. ಇವರು ಊರಿಗೆ ಪ್ರವೇಶಿಸಿದ್ದೇ ಅಲ್ಲಿ ಕಟ್ಟೆಯೊಂದರ ಮೇಲೆ ಕುಳಿತಿದ್ದ ಹಿರಿಯರಿಗೆ ದೊಡ್ಡ ಹುಡುಗನ ಒದ್ದೆ ಬಟ್ಟೆ, ಚಿಕ್ಕ ಹುಡುಗನ ಕೈಗೆ ಆದ ಗಾಯ ಕಣ್ಣಿಗೆ ಬಿತ್ತು.
‘ಏನು ಮಾಡ್ಕೊಂಡ್ರೋ’ ಎಂದು ಒಬ್ಬನು ಗದರುವ ಧ್ವನಿಯಲ್ಲಿ ಕೇಳಿದ. ಕೂಡಲೇ ದೊಡ್ಡ ಹುಡುಗ- ‘ಅವನದ್ದೇನೂ ತಪ್ಪಿಲ್ಲ. ನಾನೇ ಆಟವಾಡ್ತಾ ಬಾವಿಯಲ್ಲಿ ಬಿದ್ದು ಬಿಟ್ಟೆ. ಅವನು ಹಗ್ಗದಿಂದ ನನ್ನ ಮೇಲಕ್ಕೆ ಎತ್ತುವಾಗ ಅವನ ಕೈಗೆ ಗಾಯವಾಯ್ತು’ ಎಂದ. ಕಟ್ಟೆಯ ಮೇಲೆ ಕುಳಿತಿದ್ದವರೆಲ್ಲ ಪರಸ್ಪರ ಮುಖ ನೋಡಿಕೊಂಡರು. ಅವರು ಬೈಯ್ಯುತ್ತಾರೆ ಎಂದು ಹುಡುಗರು ಭಯಗೊಂಡರು. ಆದರೆ ಅಚ್ಚರಿಯೆಂಬಂತೆ, ಹಿರಿಯರೆಲ್ಲ ಖೊಳ್ಳೆಂದು ನಗಲಾರಂಭಿಸಿದರು!
‘ಲೇ ಯಾಕೆ ಸುಳ್ಳು ಹೇಳ್ತೀಯೋ? ನೀನು ನೋಡಿದ್ರೆ ಇಷ್ಟು ಎತ್ತರ, ದಪ್ಪ ಇದ್ದೀಯ. ಅವನು ನೋಡಿದ್ರೆ ಒಳ್ಳೇ ಇಲಿಮರಿ ಥರಾ ಇದ್ದಾನೆ…ಅವನಿಗೆ ಒಂದು ಬಕೆಟ್ ನೀರು ಕೂಡ ಮೇಲೆತ್ತೋಕ್ಕೆ ಆಗಲ್ಲ….ಅಂಥದ್ರಲ್ಲಿ ನಿನ್ನನ್ನು ಮೇಲೆತ್ತಿದನಂತೆ…’ ಎಂದು ಮತ್ತೂಮ್ಮೆ ನಕ್ಕರು.
ಹೆದರಿದ್ದ ಹುಡುಗರಿಗೆ ಗೊಂದಲ-ಸಂತೋಷ ಒಟ್ಟೊಟ್ಟಿಗೇ ಆಯಿತು. ಮಜವೇನೆಂದರೆ, ಈ ಹಿರಿಯರಷ್ಟೇ ಅಲ್ಲ…ಮನೆಯವರೂ ಕೂಡ ಮಕ್ಕಳ ಮಾತನ್ನು ನಂಬಲೇ ಇಲ್ಲ.
ಆದರೆ ಆ ಹಳ್ಳಿಯಲ್ಲಿದ್ದ ಒಬ್ಬ ಮುದುಕ ಮಾತ್ರ ಈ ಮಕ್ಕಳನ್ನು ನಂಬಿದ. ಆ ಮುದುಕ ಊರಲ್ಲೇ ಅತ್ಯಂತ ಬುದ್ಧಿವಂತ ವ್ಯಕ್ತಿಯೆಂದು ಗುರುತಿಸಿಕೊಂಡಿದ್ದ. ಹೀಗಾಗಿ, ಆತ ಈ ಹುಡುಗರ ಬೆನ್ನುತಟ್ಟುವುದನ್ನು ನೋಡಿ ಊರವರಿಗೆ ಗೊಂದಲವಾಯಿತು. ‘ಅಲ್ಲ ಅಜ್ಜಾ, ನೀನೂ ಇದನ್ನು ನಂಬ್ತೀಯಾ? ಈ ಪುಟ್ಟ ಹುಡುಗ ದೊಡ್ಡ ಹುಡುಗನನ್ನು ಹೇಗೆ ಬಚಾವು ಮಾಡಲು ಸಾಧ್ಯ? ‘ ಎಂದು ಪ್ರಶ್ನಿಸಿದರು. ಆಗ ಅಜ್ಜ ನಗುತ್ತಾ ಹೇಳಿದ. ‘ಹುಡುಗರೇ ಹೇಳ್ತಿದ್ದಾರಲ್ಲ. ಚಿಕ್ಕ ಹುಡುಗ ಬಾವಿಗೆ ಹಗ್ಗ ಕಟ್ಟಿದ್ದ ಬಕೆಟ್ ಎಸೆದನಂತೆ, ಆಮೇಲೆ ದೊಡ್ಡ ಹುಡುಗನನ್ನು ಮೇಲಕ್ಕೆ ಎಳೆದುಕೊಂಡನಂತೆ.’
‘ಆದರೆ ಅಜ್ಜಾ, ಅದ್ಹೇಗೆ ಸಾಧ್ಯ?’ ಎಂದು ಪ್ರಶ್ನಿಸಿದ ಹಳ್ಳಿಗನೊಬ್ಬ.
ಮುದುಕ ಅಂದ, ‘ನಿನ್ನ ಪ್ರಶ್ನೆಯೇ ತಪ್ಪು. ಹೇಗೆ ಸಾಧ್ಯವಾಯಿತು ಅಂತ ನೀನು ಪ್ರಶ್ನಿಸಬಾರದು, ಏಕೆ ಸಾಧ್ಯವಾಯಿತು, ಆ ಪುಟ್ಟ ಹುಡುಗನಲ್ಲಿ ಅಷ್ಟೊಂದು ಶಕ್ತಿ ಎಲ್ಲಿಂದ ಬಂತು ಅಂತ ಪ್ರಶ್ನಿಸಬೇಕು! ಇದಕ್ಕೆ ಒಂದೇ ಉತ್ತರವಿದೆ- ಯಾವ ಸಮಯದಲ್ಲಿ ಆ ಪುಟ್ಟ ಹುಡುಗ ಇಂಥ ಪರಾಕ್ರಮ ಮೆರೆದನೋ…ಆ ಸಮಯದಲ್ಲಿ ಅಲ್ಲಿ ಯಾರೂ ಇರಲಿಲ್ಲ. ಅಂದರೆ, ‘ಏ ಹುಡುಗಾ ನಿನ್ನ ಕೈಯಿಂದ ಈ ಕೆಲಸ ಸಾಧ್ಯವಿಲ್ಲ’ ಎಂದು ಅವನಿಗೆ ಹೇಳುವವರು, ಅವನಿಗೆ ಅಪನಂಬಿಕೆ ಮೂಡಿಸುವವರು ಇರಲಿಲ್ಲ. ಅದಕ್ಕೇ ಅವನು ದೊಡ್ಡ ಹುಡುಗನನ್ನು ಮೇಲೆತ್ತಲು ಸಫಲನಾದ!’
ಬದುಕು ಎಂಬ ಬೌಲರ್
ಇತ್ತೀಚೆಗೆ ಒಂದು ಸುದ್ದಿ ಓದಿದೆ. 12ನೇ ತರಗತಿಯ ಪ್ರತಿಭಾನ್ವಿತ ವಿದ್ಯಾರ್ಥಿಯೊಬ್ಬ ಪರೀಕ್ಷೆಯಲ್ಲಿ 98 ಪ್ರತಿಶತ ಮಾರ್ಕ್ಸ್ ಪಡೆಯಬೇಕು ಎಂದು ಗುರಿ ಹಾಕಿಕೊಂಡಿದ್ದನಂತೆ. ಆ ಗುರಿಯ ಆಧಾರದ ಮೇಲೆಯೇ ಮುಂದೆ ಯಾವ ಕಾಲೇಜಲ್ಲಿ ಓದಬೇಕು, ಎಲ್ಲಿ ನೌಕರಿ ಸಿಗಬಹುದು ಎಂದೆಲ್ಲ ಯೋಚಿಸಿದ್ದನಂತೆ. ಪರೀಕ್ಷೆಗಳು ಮುಗಿದವು, ಫಲಿತಾಂಶ ಬಂದಿತು. ಹುಡುಗನಿಗೆ ಬಂದದ್ದು 96 ಪ್ರತಿಶತ ಅಂಕಗಳು. 98 ಪ್ರತಿಶತ ಬರಲಿಲ್ಲ ಎಂದು ಹುಡುಗ ನೇಣುಹಾಕಿಕೊಂಡ!
ಇಂಥ ಸಾವಿರಾರು ಉದಾಹರಣೆಗಳು ಭಾರತದಲ್ಲಿ ಪ್ರತಿ ವರ್ಷವೂ ಸಿಗುತ್ತವಲ್ಲವೇ? ಅನೇಕ ವಿದ್ಯಾರ್ಥಿಗಳು ಕಡಿಮೆ ಅಂಕ ಪಡೆದ ಕಾರಣಕ್ಕಾಗಿ ಖನ್ನತೆಗೆ ಒಳಗಾಗಿಬಿಡುತ್ತಾರೆ, ತಮ್ಮ ಬದುಕೇ ಮುಗಿದುಹೋಯಿತು ಎಂದು ಕಂಗಾಲಾಗುತ್ತಾರೆ. ವಿದ್ಯಾರ್ಥಿಗಳಷ್ಟೇ ಅಲ್ಲ, ಹಿರಿಯರೂ ಕೂಡ ಜೀವನ ಎದುರೊಡ್ಡುವ ಸವಾಲುಗಳೆದರು ಸೋತು ಕೈ ಚೆಲ್ಲುತ್ತಾರೆ. ಅಂದರೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಅರ್ಥವಲ್ಲ…ಪ್ರಯತ್ನವನ್ನು ನಿಲ್ಲಿಸಿ ಬದುಕಿನುದ್ದಕ್ಕೂ ತಮ್ಮ ನಸೀಬನ್ನು ಹಳಿಯುತ್ತಾ, ಅಸಂತೋಷದಿಂದಲೇ ದಿನ ಸಾಗಿಸುತ್ತಾ ಇದ್ದುಬಿಡುತ್ತಾರೆ.
ಬದುಕನ್ನು ನಾನು ಯಾವಾಗಲೂ ಕ್ರಿಕೆಟ್ ಮ್ಯಾಚ್ ಎಂದು ಭಾವಿಸುತ್ತೇನೆ. ಆದರೆ, ಈ ಕ್ರಿಕೆಟ್ ಮ್ಯಾಚಿನಲ್ಲಿ ಫೀಲ್ಡರ್‌ಗಳು ಇರುವುದಿಲ್ಲ, ವಿಕೆಟ್ಗಳು ಇರುವುದಿಲ್ಲ. ಕೇವಲ ಬ್ಯಾಟ್ಸ್‌ಮನ್, ಅಂದರೆ, ‘ನಾವು’. ಮತ್ತು ಬೌಲರ್, ಅಂದರೆ ‘ಬದುಕು’ ಇರುತ್ತದೆ. ಬದುಕು ಎಂಬ ಬೌಲರ್ ಒಂದರ ನಂತರ ಒಂದರಂತೆ ಚೆಂಡುಗಳನ್ನು ನಿಮ್ಮತ್ತ ಎಸೆಯುತ್ತಾ ಹೋಗುತ್ತದೆ. ಒಂದು ಚೆಂಡು ವೇಗವಾಗಿ ಬರುತ್ತದೆ ಎಂದುಕೊಳ್ಳಿ. ನೀವು ನಿಮ್ಮ ಸರ್ವಶಕ್ತಿಯನ್ನೂ ಒಗ್ಗೂಡಿಸಿ ಬ್ಯಾಟ್ ಬೀಸುತ್ತೀರಿ. ಆದರೆ ಚೆಂಡು ಮಿಸ್ ಆಗಿಬಿಡುತ್ತದೆ! ಈಗೇನು ಮಾಡುತ್ತೀರಿ? ಆತ್ಮಹತ್ಯೆ ಮಾಡಿಕೊಳ್ಳುತ್ತೀರಾ? ನನ್ನ ಕಥೆ ಮುಗಿಯಿತು, ನನ್ನಿಂದ ಯಾವ ಪ್ರಯೋಜನವೂ ಇಲ್ಲ, ನಾನು ಸೋತುಬಿಟ್ಟೆ ಎಂದು ಬ್ಯಾಟನ್ನು ಎಸೆದು ಮೈದಾನದಿಂದ ಹೊರಟುಹೋಗುತ್ತೀರಾ?
ನಾನು ಹೇಳುವುದು ಅರ್ಥವಾಗುತ್ತಿದೆ ತಾನೇ? ಜೀವನವನ್ನು ಅರ್ಥಮಾಡಿಕೊಳ್ಳಿ ಸ್ವಾಮಿ. ನೀವು ಹೊಡೆಯಲು ವಿಫಲವಾದ ಚೆಂಡು ಯಾವುದು? ನಿಸ್ಸಂಶಯವಾಗಿಯೂ ಅದೊಂದು ‘ಅವಕಾಶ’. ನಂಬರ್‌ಗಳ ರೂಪದಲ್ಲೋ, ಎಕ್ಸಾಮ್‌ನ ರೂಪದಲ್ಲೋ ಬಂದ ಅವಕಾಶವದು. ಆ ಅವಕಾಶವನ್ನು ಸದುಪಯೋಗಪಡಿಸಿಕೊಂಡಿದ್ದರೆ ಒಳ್ಳೆಯದಾಗುತ್ತಿತ್ತು ಎನ್ನುವುನ್ನು ಒಪ್ಪಿಕೊಳ್ಳೋಣ. ಆದರೆ ಚೆಂಡು ಮಿಸ್ ಆಯಿತಲ್ಲವೇ? ಈಗ ಬದುಕು ಮತ್ತೂಂದು ಚೆಂಡನ್ನು ಎಸೆಯಲು ಓಡಿಬರುತ್ತಿದೆ. ಅದನ್ನು ಎದುರಿಸಬೇಕೋ, ಅಥವಾ ಮಿಸ್ ಆದ ಚೆಂಡಿನ ಬಗ್ಗೆ ಯೋಚಿಸುತ್ತಾ ಕೂಡಬೇಕೋ? ಹಾಗೆಂದು ಎರಡನೇ ಚೆಂಡನ್ನೂ ನೀವು ಬೌಂಡರಿಗೆ ಅಟ್ಟುತ್ತೀರಿ ಎಂದೇನೂ ಅರ್ಥವಲ್ಲ. ಅದನ್ನೂ ಮಿಸ್ ಮಾಡಿಕೊಳ್ಳಬಹುದು. ಮುಂದೆ ಬರುವ ಎರಡನೇ, ಮೂರನೇ, ನಾಲ್ಕನೇ ಚೆಂಡುಗಳೂ ಮಿಸ್ ಆಗಬಹುದು. ಎಲ್ಲಾ ಚೆಂಡುಗಳೂ ಉತ್ತಮ ಅವಕಾಶಗಳಾಗಿಬರುವುದಿಲ್ಲ. ಕೆಲವೊಂದು ಚೆಂಡುಗಳು ಬೌನ್ಸರ್‌ನ ರೂಪದಲ್ಲಿ ಬರುತ್ತವೆ, ಅವುಗಳಿಂದ ತಪ್ಪಿಸಿಕೊಳ್ಳುವುದೇ ಒಳ್ಳೆಯದು. ಆದರೆ ಬೌನ್ಸರ್ ಬಡಿಯಿತೆಂದು ಬ್ಯಾಟನ್ನು ಎಸೆದುಹೋಗಬೇಕೇ? ಬೇಡ, ಖಂಡಿತ ಬೇಡ. ಆಗಲೇ ಹೇಳಿದಂತೆ ಬದುಕೆಂಬ ಕ್ರಿಕೆಟ್ನಲ್ಲಿ ವಿಕೆಟ್ಗಳಿಲ್ಲ, ಫೀಲ್ಡರ್‌ಗಳಿಲ್ಲ. ಎಲ್ಲಿಯವರೆಗೂ ನೀವು ಕೈಚೆಲ್ಲಿ ಮೈದಾನದಿಂದ ನಿರ್ಗಮಿಸುವುದಿಲ್ಲವೋ ಅಲ್ಲಿಯವರೆಗೂ ಬದುಕು ಅವಕಾಶಗಳೆಂಬ ಚೆಂಡನ್ನು ನಿಮ್ಮತ್ತ ಎಸೆಯುತ್ತಲೇ ಇರುತ್ತದೆ. ಗೆದ್ದೇ ಗೆಲ್ಲುತ್ತೇನೆ ಎಂದು ದೃಢ ನಿಶ್ಚಯ ಮಾಡಿಕೊಂಡು ನಿಂತಿರುವ ವ್ಯಕ್ತಿ ಕೊನೆಗೆ ಒಂದು ಸಿಕ್ಸರನ್ನೋ, ಬೌಂಡರಿಯನ್ನೋ ಹೊಡೆದೇ ತೀರುತ್ತಾನೆ.
ಮೈದಾನದಿಂದ ಓಡಿ ಹೋಗಬೇಡಿ. ಬದುಕನ್ನು ಎದುರಿಸಿ. ಹಾಗೆಂದು ಯಾವತ್ತೋ ಹತ್ತು ವರ್ಷದ ಹಿಂದೆ ಒಂದು ಸಿಕ್ಸರ್ ಹೊಡೆದೆ ಎಂದು ಆ ಖುಷಿಯಲ್ಲೇ ಇದ್ದುಬಿಡಬೇಡಿ. ನೆನಪಿರಲಿ, ಬದುಕು ಒಂದು ಆಟವಷ್ಟೇ…ಬದುಕು ಎಸೆಯುವ ಚೆಂಡುಗಳನ್ನು ನಗುನಗುತ್ತಾ ಬೌಂಡರಿಗಟ್ಟಲು ಪ್ರಯತ್ನಿಸುತ್ತಲೇ ಇರಿ.
ಲೇಖಕರ ಪರಿಚಯ
ಸಂದೀಪ್ ಮಾಹೇಶ್ವರಿ ಭಾರತದ ಜನಪ್ರಿಯ ಪ್ರೇರಣಾದಾಯಕ ಭಾಷಣಕಾರರಲ್ಲಿ ಒಬ್ಬರು. ಅತಿ ಚಿಕ್ಕ ವಯಸ್ಸಿನಲ್ಲಿಯೇ ಉದ್ಯಮಿಯಾಗಿಯೂ ಯಶಸ್ಸು ಸಾಧಿಸಿರುವ ಸಂದೀಪ್, ದೇಶದ ಅತಿದೊಡ್ಡ ಸ್ಟಾಕ್‌ಫೋಟೋ ವೆಬ್‌ಸೈಟ್ ‘ಇಮೇಜ್‌ಬಾಜಾರ್’ನ ಸ್ಥಾಪಕರು ಮತ್ತು ಸಿಇಒ. ಯೂಟ್ಯೂಬ್‌ವೊಂದರಲ್ಲೇ ಅವರಿಗೆ 1 ಕೋಟಿ 10 ಲಕ್ಷ ಹಿಂಬಾಲಕರು ಇದ್ದಾರೆ. ಭಾರತೀಯ ಆಧ್ಯಾತ್ಮ ಮತ್ತು ಮನಶಾಸ್ತ್ರದ ಮುಖೇನ ಜನರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ ಸಂದೀಪ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Rishabh Pant: ಅಪಘಾತದ ವೇಳೆ ನೆರವಾದವರಿಗೆ ಗಿಫ್ಟ್ ನೀಡಿದ ರಿಷಭ್ ಪಂತ್
Prabhutva movie review: ಪ್ರಗತಿ ಪಥದಲ್ಲಿ ಕ್ರಾಂತಿಯ ಕಿಡಿ
BBK11: ಇವತ್ತು ಬಿಗ್‌ಬಾಸ್ ಮನೆಯಿಂದ ಆಚೆ ಬರುವುದು ಇವರೇ ನೋಡಿ
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.