ಹೆಸರಿನಲ್ಲೇನಿದೆ? ಹೆಸರಿನಲ್ಲೇ ಎಲ್ಲವೂ ಇದೆ!
Team Udayavani, Sep 11, 2018, 6:00 AM IST
ಮನುಷ್ಯನ ಹೆಸರಿನಲ್ಲಿ ಏನೋ ಒಂದು ನಂಬಿಕೆ, ಬಾಂಧವ್ಯ, ಪ್ರೀತಿ ಎಲ್ಲವೂ ಸೇರಿಕೊಂಡಿದೆ. ಹೆಸರಿನ ಜೊತೆ ಇಷ್ಟೆಲ್ಲಾ ಮಿಡಿತಗಳಿದ್ದರೂ ನಾವು ಸತ್ತಾಗ, ನಮ್ಮ ದೇಹವನ್ನು ತೋರಿಸುವಾಗ ಯಾರೂ ಹೆಸರಿನ ಮೂಲಕ ಅದನ್ನು ಗುರುತಿಸುವುದಿಲ್ಲ. ರೂಪನ್ನ ಎಲ್ಲಿ ಮಲಗಿಸಿದ್ದೀರಾ ಅಂತ ಯಾರೂ ಕೇಳುವುದಿಲ್ಲ. ಬಾಡಿ ಎಲ್ಲಿದೆ ಅಂತಲೇ ಕೇಳುತ್ತಾರೆ.
ಮಗು ಹುಟ್ಟಿದ ತಕ್ಷಣ ಅದಕ್ಕೊಂದು ಹೆಸರಿಟ್ಟು ಹಬ್ಬ ಆಚರಿಸುತ್ತಾರೆ. ನಮ್ಮ ಪೂರ್ವಜರ ಕಾಲದಲ್ಲಿ ಮಗು ಹುಟ್ಟಿದ ನಂತರ ಗಂಡೋ-ಹೆಣ್ಣೋ ಖಚಿತವಾದ ಮೇಲೆ ಹೆಸರು ಹುಡುಕುತ್ತಿದ್ದರು. ಈಗ ಮಗು ಹುಟ್ಟುವ ಮೊದಲೇ ಇಂಟರ್‌ನೆಟ್‌ನಲ್ಲಿ ಅನೇಕ ಹೆಸರುಗಳನ್ನು ಹುಡುಕಿ, ಮನೆಯವರಿಗೆ ಆ ಹೆಸರು ಇಷ್ಟ ಆಗಲಿ ಬಿಡಲಿ ಬಲವಂತ ಮಾಡಿಯಾದರೂ ಒಪ್ಪಿಸುತ್ತಾರೆ.
ಹೆಸರು ಎಂಬುದು ಮನುಷ್ಯನಿಗೆ ಎಷ್ಟು ಮುಖ್ಯ ನೋಡಿ, ಹೆಸರಿಲ್ಲದೆ ಒಬ್ಬರನ್ನು ಗುರುತಿಸುವುದಾದರೂ ಹೇಗೆ? ನಾವು ಸತ್ತ ನಂತರವೂ ನಮ್ಮ ಹೆಸರು ಜೀವಂತವಾಗಿರುತ್ತದೆ. ನಮ್ಮ ಜೊತೆ ಯಾರೂ ಶಾಶ್ವತವಾಗಿರದಿದ್ದರೂ ಹೆಸರು ಮಾತ್ರ ನಮ್ಮ ದೇಹಕ್ಕೆ ಮತ್ತು ವ್ಯಕ್ತಿತ್ವಕ್ಕೆ ಅಂಟಿಕೊಂಡೇ ಇರುತ್ತದೆ. ಹೊಸತಾಗಿ ಯಾರಾದರೂ ಪರಿಚಯವಾದಾಗ ಅವರ ಹೆಸರಿಗೂ- ಅವರಿಗೂ ಮ್ಯಾಚ್ ಆಗುತ್ತದೆಯಾ ಅಂತ ಒಂದು ಕ್ಷಣ ಯೋಚಿಸುತ್ತೇವೆ. ಎಲ್ಲೋ ಕೆಲವರಿಗೆ ಮಾತ್ರ ಅವರವರ ಹೆಸರು, ದೇಹ, ವ್ಯಕ್ತಿತ್ವ ಎಲ್ಲವೂ ಸರಿ ಹೊಂದುತ್ತದೆ. ಎಲ್ಲಾ ತಂದೆ ತಾಯಿಗಳೂ ತಮ್ಮ ಮಕ್ಕಳಿಗೆ ಒಳ್ಳೆಯ ಹೆಸರಿಡಬೇಕು ಎಂದೇ ಇಟ್ಟಿರುತ್ತಾರೆ. ಹಿಂದಿನ ಕಾಲದಲ್ಲಿ ಸಾಮಾನ್ಯವಾಗಿ ಎಲ್ಲರೂ ದೇವರ ಹೆಸರು, ಋಷಿಗಳ ಹೆಸರುಗಳನ್ನು ಮಕ್ಕಳಿಗೆ ಇಡುತ್ತಿದ್ದರು. ಅವನ/ಅವಳ ಹೆಸರು ಕರೆಯುವ ಮೂಲಕವಾದರೂ ದೇವರನ್ನು ಪ್ರತಿ ಸಲ ನೆನೆಯೋಣ ಎಂದು ಹಾಗೆ ಮಾಡುತ್ತಿದ್ದರು. ಆದರೆ ಈಗ ಅದೆಲ್ಲ ಬದಲಾಗುತ್ತಿದೆ, ಜನರು ಹೆಚ್ಚಾಗಿ ಆಧುನಿಕ ಹೆಸರುಗಳನ್ನೇ ಇಷ್ಟಪಡುತ್ತಿದ್ದಾರೆ.
ನಮ್ಮ ಹಿರಿಯರು ತಮ್ಮ ಮಕ್ಕಳಿಗೆ ಮಾತ್ರವಲ್ಲ, ಪ್ರಿಯವಾದ ಸಾಕು ಪ್ರಾಣಿಗಳಿಗೂ ದೇವರ ಹೆಸರನ್ನೇ ಇಡುತ್ತಿದ್ದರು. ನಾಯಿಯನ್ನು ನಾರಾಯಣನ ಅವತಾರವೆಂದು ನಂಬಲಾಗುತ್ತದೆ. ಹಸುವಿಗೆ ಲಕ್ಷ್ಮೀ, ರಾಧೆ, ಗಂಗೆ ಮುಂತಾದ ಹೆಸರಿಡುವುದು ಸಾಮಾನ್ಯ. ಗಿಳಿ, ಪಾರಿವಾಳ, ಬೆಕ್ಕು ಹೀಗೆ ಎಲ್ಲಾ ಸಾಕುಪ್ರಾಣಿಗಳನ್ನು ಅವರು ದೇವರ ಹೆಸರುಗಳಿಂದಲೇ ಗುರುತಿಸುತ್ತಿದ್ದರು.
ಈಗ ನಾವೆಲ್ಲ ತುಂಬಾ ಬದಲಾಗಿದ್ದೇವೆ. ನಮ್ಮ ಬಾಯಲ್ಲಿ ಇರುವುದೆಲ್ಲ ಇಂಗ್ಲೀಷ್ ಹೆಸರುಗಳೇ. ನಾನು ಕೆಲವು ವರ್ಷಗಳ ಹಿಂದೆ ಒಂದು ಕೋತಿ ಸಾಕಿದ್ದೆ, ಅದರ ಹೆಸರು ಆಂಜನೇಯ ಆದರೂ ನಾವು ಅದನ್ನು ಆ್ಯಂಜಿ ಅಂತ ಆಧುನಿಕ ಶೈಲಿಯಲ್ಲಿ ಕರೆಯುತ್ತಿದ್ದೆವು. ನೀವು ಗಮನಿಸಿದ್ದೀರಾ, ನಿಮ್ಮ ಹೆಸರನ್ನು ನೀವು ಎಷ್ಟು ಪ್ರೀತಿಸುತ್ತೀರಾ ಅಂತ! ನಮ್ಮ ಹೆಸರು ಮಾತ್ರ ಅಲ್ಲ ನಾವು ಪ್ರೀತಿಯಲ್ಲಿ ಬಿದ್ದಾಗ ನಮ್ಮ ಹುಡುಗ / ಹುಡುಗಿಯ ಹೆಸರು ತುಂಬಾ ಇಷ್ಟವಾಗಲು ಶುರುವಾಗುತ್ತದೆ. ಎಷ್ಟೋ ಜನ ತಮ್ಮ ಪ್ರೇಮಿಗಳ ಹೆಸರನ್ನು ಪುಸ್ತಕದಲ್ಲಿ, ಗೋಡೆ ಮೇಲೆ, ಕೈಮೇಲೆ ಎದೆ ಮೇಲೆ ಬರೆದಿರುತ್ತಾರೆ ಅಥವಾ ಬರೆಸಿಕೊಂಡಿರುತ್ತಾರೆ.
ಜನರ ಗುಂಪಿನಲ್ಲಿ ನಿಮ್ಮ ಪ್ರೇಮಿಯ ಹೆಸರಿರುವ ಮತ್ತೂಬ್ಬ ವ್ಯಕ್ತಿಯನ್ನು ಭೇಟಿಯಾದಾಗ ಅಥವಾ ನಿಮ್ಮ ಪ್ರೇಮಿಯ ಹೆಸರನ್ನು ಯಾರೋ ಕರೆದಾಗ ನಿಮ್ಮ ಕಿವಿ ಚುರುಕಾಗುತ್ತದೆ. ಮನಸ್ಸು ಮುಗುಳ್ನಗುತ್ತದೆ. ಹಾಗೆ ನಿಮ್ಮ ಪ್ರೇಮಿ ನಿಮ್ಮನ್ನು ಚಿನ್ನ, ಮುದ್ದು, ಬಂಗಾರ ಇದೆಲ್ಲ ಬಿಟ್ಟು ಅಪರೂಪಕ್ಕಾದರೂ ಒಂದು ಸಲ ನಿಮ್ಮ ಕಿವಿ ಬಳಿ ಬಂದು ನಿಮ್ಮ ಹೆಸರನ್ನು ಪಿಸುಗುಟ್ಟಿದರೆ, ನಿಮ್ಮ ಮನಸ್ಸಿಗೆ ಆಗುವ ಉನ್ಮಾದ, ಸಿಗುವ ಸುಖ ಯಾರಿಗೂ ವಿವರಿಸಿ ಹೇಳಲಾಗದು ಅಲ್ಲವೇ! ಆಗ, ಇನ್ನೊಂದ್ಸಲ ಹೇಳು, ಇನ್ನೊಂದ್ಸಲ ಹೇಳು ಅಂತ ನೀವೇ ಅವರನ್ನು ಕೇಳುವುದುಂಟು.
ಮದುವೆಯಾದ ಮೇಲೆ ಹಿರಿಯರು ನಡೆಸಿಕೊಂಡು ಬಂದಿರುವ ಸಂಪ್ರದಾಯದ ಪ್ರಕಾರ ಹುಡುಗಿಯ ಹೆಸರಿನ ಜೊತೆ ಹುಡುಗನ ಹೆಸರನ್ನು ಸೇರಿಸುತ್ತಾರೆ ಅಥವಾ ಅವರ ಜನಾಂಗದ ಹೆಸರು, ಗೋತ್ರದ ಹೆಸರು, ಇವತ್ತಿನ ಪೀಳಿಗೆಯ ಹುಡುಗಿಯರು ಈ ವಿಚಾರಕ್ಕೂ ಜಗಳ ಆಡಲು ಪ್ರಾರಂಭಿಸಿದ್ದಾರೆ. ನಾನ್ಯಾಕೆ ನಿನ್ನ ಹೆಸರನ್ನು – ನಿನ್ನ ಫ್ಯಾಮಿಲಿ ಹೆಸರನ್ನು ನನ್ನ ಹೆಸರಿನ ಜೊತೆ ಸೇರಿಸಿಕೊಳ್ಳಬೇಕು ? ನನಗೆ ನನ್ನದೇ ಆದ ಐಡೆಂಟಿಟಿ ಇದೆ ಅಂತ ಮದುವೆಗೆ ಮುಂಚೆಯೇ ಜಗಳ ಶುರು ಮಾಡುತ್ತಾರೆ. ಇವರ ಜಗಳ ಹುಡುಗನ ಜೊತೆ ಮಾತ್ರ. ಅವನ ತಂದೆ ತಾಯಿ ಮುಂದೆ ಅದನ್ನು ಹೇಳುವ ಧೈರ್ಯ ಅವರಿಗಿರಲ್ಲ. ಕೊನೆಗೆ ಗಂಡನ ಮನೆ ಹೆಸರು ಸೇರಿಸಿಕೊಂಡು ಸುಮ್ಮನಾಗುತ್ತಾರೆ. ಆ ಕೆಲಸ ಮೊದಲೇ ಮಾಡಬಹುದಿತ್ತು. ಆದರೂ ಜಗಳ ಮಾಡಲು ಒಂದು ಅವಕಾಶ ಸಿಕ್ಕಿತ್ತಲ್ಲ, ಅದನ್ನು ಬಳಸಿ ಕೊಂಡಿರುತ್ತಾರೆ. ಕೆಲ ಹುಡುಗರು ಅಯ್ಯೋ ಹೆಸರಿನಲ್ಲೇನಿದೆ ನಿನಗಿಷ್ಟ ಬಂದಂತೆ ಮಾಡು ಎನ್ನುತ್ತಾರೆ. ಇನ್ನು ಕೆಲವರು ಹುಡುಗಿಯ ಹೆಸರನ್ನೇ ಬದಲಾಯಿಸುತ್ತಾರೆ.
ಸಂಖ್ಯಾಶಾಸ್ತ್ರಕ್ಕನುಗುಣವಾಗಿ ಹೆಸರಿನ ಅಕ್ಷರಗಳನ್ನು ಬದಲಾಯಿಸಿ ಕೊಳ್ಳುವ ಖಯಾಲಿ ಈಗೀಗ ಹೆಚ್ಚುತ್ತಿದೆ. ಹೀಗೆ ಮಾಡುವುದರಿಂದ ಅದೃಷ್ಟ ಬದಲಾಗುತ್ತದೆ ಎಂಬ ನಂಬಿಕೆ. ನಿಜವಾಗಿಯೂ ಇದರಿಂದ ಎಷ್ಟು ಲಾಭವಿದೆ ಎಂಬುದನ್ನು ಹೆಸರಿನ ಅಕ್ಷರ ಬದಲಿಸಿಕೊಂಡವರೇ ಹೇಳಬೇಕು. ಅಂದಹಾಗೆ, ಹೀಗೆ ಮಾಡುವುದು ಕನ್ನಡದಲ್ಲಿ ಸಾಧ್ಯವಿಲ್ಲ. ಇಂಗ್ಲೀಷ್‌ನಲ್ಲಿ ಮಾತ್ರ ಸಾಧ್ಯ. ಕನ್ನಡದಲ್ಲಿ ಅಕ್ಷರ ಬದಲಾದರೆ ಹೆಸರಿನ ಅರ್ಥವೂ ಬದಲಾಗುತ್ತದೆ. ಆದರೆ ಇಂಗ್ಲೀಷ್‌ನಲ್ಲಿ ಸ್ಪೆಲ್ಲಿಂಗ್ ಬದಲಾದರೂ ಉಚ್ಛಾರ ಹಾಗೂ ಅರ್ಥ ಹಾಗೇ ಇರುತ್ತದೆ. ಏಕೆಂದರೆ ಅದು ಇಂಗ್ಲೀಷ್.
ಹೆಸರಿಗೆಷ್ಟು ಬೆಲೆಯಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಕೆಲ ಪ್ರಸಿದ್ಧ ಉತ್ಪನ್ನಗಳ ಹೆಸರನ್ನು ಗಮನಿಸಿ, ಅದಕ್ಕೆ ಬ್ರಾಂಡ್ ಎನ್ನುತ್ತಾರೆ. ಆ ಬ್ರಾಂಡ್‌ನ ಬೆಲೆಯೇ ನೂರಾರು ಕೋಟಿ ರೂಪಾಯಿ. ಬಹಳ ಪ್ರಸಿದ್ಧವಾದ ಉತ್ಪನ್ನದ ಹೆಸರನ್ನು ನೂರಾರು ಕೋಟಿ ರೂ. ನೀಡಿ ಖರೀದಿಸುವ ವ್ಯವಹಾರ ಕಾರ್ಪೋರೇಟ್ ವಲಯದಲ್ಲಿ ನಡೆಯುತ್ತಿರುತ್ತದೆ. ಇತ್ತೀಚೆಗೆ ಪ್ರಸಿದ್ಧ ವ್ಯಕ್ತಿಗಳ ಹೆಸರು ಕೂಡ ದೊಡ್ಡ ಬ್ರಾಂಡ್ ಆಗುತ್ತದೆ. ಉದಾಹರಣೆಗೆ ನಟ ಶಾರುಖ್‌ಖಾನ್ ಹೆಸರು. ಅದೊಂದು ಜನಪ್ರಿಯ ಬ್ರಾಂಡ್. ಆ ಹೆಸರಿನ ಜೊತೆಗೆ ನಡೆಸುವ ಎಲ್ಲಾ ವ್ಯವಹಾರಗಳೂ ಸಾಕಷ್ಟು ದುಡ್ಡು ಮಾಡುತ್ತವೆ. ತನ್ನ ಹೆಸರನ್ನು ನೀಡಿದ್ದಕ್ಕಾಗಿ ಶಾರುಖ್ ಕೂಡ ದುಡ್ಡು ಬಾಚುತ್ತಾನೆ.
ಎಲ್ಲಾ ವಸ್ತುಗಳಿಗೂ ಹೆಸರಿದೆ, ವ್ಯವಸ್ಥೆಗಳಿಗೂ ಹೆಸರಿದೆ, ಕೆಲಸಗಳಿಗೂ ಹೆಸರಿದೆ. ಜೀವನದ ಪ್ರತಿಯೊಂದು ಹಂತಕ್ಕೂ ಹೆಸರಿದೆ ಆದರೆ ಮನುಷ್ಯನ ಹೆಸರಿನಲ್ಲಿ ಏನೋ ಒಂದು ನಂಬಿಕೆ, ಬಾಂಧವ್ಯ, ಮಮತೆ, ಒಲವು, ಪ್ರೀತಿ ಎಲ್ಲವೂ ಸೇರಿಕೊಂಡಿದೆ. ಹೆಸರಿನ ಜೊತೆ ಇಷ್ಟೆಲ್ಲಾ ಮಿಡಿತಗಳಿದ್ದರೂ
ನಾವು ಸತ್ತಾಗ, ನಮ್ಮ ದೇಹವನ್ನು ತೋರಿಸುವಾಗ ಯಾರೂ ಹೆಸರಿನ ಮೂಲಕ ಅದನ್ನು ಗುರುತಿಸುವುದಿಲ್ಲ. ರೂಪನ್ನ ಎಲ್ಲಿ ಮಲಗಿಸಿದ್ದೀರಾ ಅಂತ ಯಾರೂ ಕೇಳುವುದಿಲ್ಲ. ಬಾಡಿ ಎಲ್ಲಿದೆ ಅಂತಲೇ ಕೇಳುತ್ತಾರೆ. ನಾವು ಸತ್ತ ದಿನ ನಮ್ಮ ಹೆಸರು ನಮ್ಮ ಜೊತೆಗಿಲ್ಲದಿದ್ದರೂ ಜನರ ನೆನಪಿನಲ್ಲಿ, ನೆನಪಿನ ಮಾತುಗಳಲ್ಲಿ ಚಿರವಾಗಿರುತ್ತದೆ. ಹಾಗೆ ನಾವು ಬದುಕಿರುವಷ್ಟು ದಿನ ನಮ್ಮ ಜೊತೆ ಜೊತೆಗೇ ಇದ್ದು, ನಮ್ಮನ್ನು ಬೇರೆಯವರು ಗುರುತಿಸುವಂತೆ ಮಾಡುವುದೇ ನಮ್ಮ ಹೆಸರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ
Katpadi: ಹೆದ್ದಾರಿ ಅಂಚಿನಲ್ಲಿ ಅಪಾಯ!; ರಸ್ತೆ ಬದಿಯಲ್ಲಿ ಉದ್ದಕ್ಕೂ ಹೊಂಡಗುಂಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.