ಗಿಮಿಕ್ ಮಾಡಿ ಪಡೆದ ಪ್ರಸಿದ್ಧಿ ಬಹಳ ದಿನ ನಿಲ್ಲುವುದಿಲ್ಲ
Team Udayavani, Feb 28, 2017, 3:50 AM IST
ಪ್ರತಿಭೆ ಎಂಬುದು ಪರಿಮಳವಿದ್ದ ಹಾಗೆ. ಮುಚ್ಚಿಟ್ಟರೂ ಅದು ತನ್ನ ಇರವನ್ನು ತೋರಿಸುತ್ತದೆ. ಹಾಗೆಯೇ ಅಲ್ಪಜ್ಞಾನಿಯಾಗಿದ್ದು, ಪರಿಶ್ರಮ, ಸಾಧನೆಯಿಲ್ಲದೆ ಅಗ್ಗದ ತಂತ್ರಗಳ ಮೂಲಕ ಪಡೆದುಕೊಂಡ ಪ್ರಸಿದ್ಧಿ ಬಹಳ ಬೇಗ ಮಾಯವಾಗುತ್ತದೆ. ಸಾಧನೆಗೆ ಶಾರ್ಟ್‌ಕಟ್ ಎಂಬುದಿಲ್ಲ.
ಸ್ವಘೋಷಿತ ವ್ಯಕ್ತಿಗಳು ಕೆಲವರಿರುತ್ತಾರೆ. ತಮ್ಮನ್ನು ತಾವೇ ಚಿಂತಕರು, ವಿಮರ್ಶಕರು, ಬುದ್ಧಿಜೀವಿಗಳು, ಸಾಮಾಜಿಕ ಹೋರಾಟಗಾರರು ಅಂತ ಕರೆದುಕೊಳ್ಳುತ್ತಾರೆ. ಯಾವುದೇ ರಂಗದಲ್ಲಿ ಹೆಸರು ಪಡೆಯಬೇಕಾದರೂ ಮನುಷ್ಯ ಆ ರಂಗದಲ್ಲಿ ಆಳವಾದ ಜ್ಞಾನವನ್ನು ಹೊಂದಿರಬೇಕು. ಬಹಳ ಆಳವಾಗಿ ಅಧ್ಯಯನ ಮಾಡಿ, ಅಲ್ಲಿನ ಆಗು ಹೋಗುಗಳನ್ನು ವಿಮರ್ಶಿಸುವ ಹಾಗೂ ಅವುಗಳ ಮೇಲೆ ಪ್ರಭಾವ ಬೀರುವ ಸಾಮರ್ಥ್ಯ ಹೊಂದಿರಬೇಕು. ಯಾವುದನ್ನಾದರೂ ಅರ್ಧ ತಿಳಿದುಕೊಂಡು ಅದು ಪೂರ್ಣ ಜ್ಞಾನ ಎಂದುಕೊಳ್ಳಲು ಹೇಗೆ ಸಾಧ್ಯ? ಯಾವುದರ ಬಗ್ಗೆಯೇ ಆಗಲಿ, ಮನುಷ್ಯ ಪೂರ್ಣ ಜ್ಞಾನ ಪಡೆಯಲು ಒಂದು ಜನ್ಮ ಸಾಕಾಗುವುದಿಲ್ಲ. ನಮಗೆ ಬುದ್ಧಿ ಬೆಳೆಯಲು ಪ್ರಾರಂಭವಾದಾಗಿನಿಂದ ಯಾವುದಾದರೊಂದನ್ನು ಗಮನಿಸಿ, ಅರ್ಥ ಮಾಡಿಕೊಂಡು ವಾದ ಮಾಡುವುದೆಲ್ಲ ನಮ್ಮ ನಮ್ಮ ತಿಳಿವಳಿಕೆಯ ಮಟ್ಟಕ್ಕಷ್ಟೇ. ಅದನ್ನೇ ಬಹುತೇಕ ಬಾರಿ ನಾವು ಪೂರ್ಣ ಸತ್ಯ ಎಂದುಕೊಳ್ಳುತ್ತೇವೆ. ನಿಜವಾಗಲೂ ತಿಳಿದುಕೊಳ್ಳಬೇಕು ಅಂತ ಆಸೆ ಇರುವವನು ಅಥವಾ ನಿಜಕ್ಕೂ ಒಂದು ವಿಷಯದ ಬಗ್ಗೆ ಆಳವಾಗಿ ತಿಳಿದುಕೊಂಡಿರುವವನು ಯಾವತ್ತೂ ಪ್ರಚಾರದ ಹಿಂದೆ ಬೀಳುವುದಿಲ್ಲ. ಯಾಕೆಂದರೆ ಅವನು ವಿಷಯವನ್ನು ಇನ್ನಷ್ಟು ಚೆನ್ನಾಗಿ ತಿಳಿದುಕೊಳ್ಳುವಲ್ಲಿ ನಿರತನಾಗಿರುತ್ತಾನೆ. ತಾನು ತಿಳಿದುಕೊಂಡದ್ದು ಕಡಿಮೆ ಎಂಬ ಎಚ್ಚರ ಅವನಿಗಿರುತ್ತದೆ. ಅಂಥವರ ಬಗ್ಗೆ ಸುದ್ದಿಯಾಗುವುದಿದ್ದರೆ, ಸುದ್ದಿಗಾರರೇ ಅವನಿದ್ದಲ್ಲಿಗೆ ಹೋಗಿ ಕಾಯುತ್ತಾರೆ.
ಏನೂ ಗೊತ್ತಿಲ್ಲದೆ ತನಗೆಲ್ಲ ಗೊತ್ತು ಎಂಬಂತೆ ಪೋಸು ಕೊಡುವವರು, ಬಿಟ್ಟಿ ಪ್ರಚಾರ ಸಿಗುತ್ತದೆಂದು ಮಾಧ್ಯಮಗಳಲ್ಲಿ ವಿತಂಡವಾದ ಮಾಡುವವರು ಅನೇಕರಿದ್ದಾರೆ. ಅಂಥವರಲ್ಲಿ ಕೆಲವರು ತಾವು ಸಾಮಾಜಿಕ ಹೋರಾಟಗಾರರು,
ಸಮಾಜ ಸೇವೆ ಮಾಡುವವರು ಅಂತ ವಿಸಿಟಿಂಗ್ ಕಾರ್ಡ್ ಬೇರೆ ಕೊಡುತ್ತಾರೆ. “ಏನು ಸಮಾಜ ಸೇವೆ ಮಾಡ್ತೀರಾ ಸಾರ್’ ಅಂದ್ರೆ, “ಶಾಲೆ ಮಕ್ಕಳಿಗೆ ಬುಕ್ಕು, ಪೆನ್ಸಿಲ್ ಕೊಡ್ತೀವಿ’ ಅನ್ನುತ್ತಾರೆ. ಕೊನೆಗೆ, “ಯಾವುದಾದ್ರೂ ಸ್ಟ್ರೈಕ್ ಇದ್ರೆ ಹೇಳಿ ಮೇಡಂ ಜನ ಸೇರೊÕàಣ, ಒಬ್ಬೊಬ್ಬರಿಗೆ 300 ರೂಪಾಯಿ ಕೊಟ್ರೆ ಸಾಕು’ ಅನ್ನುತ್ತಾರೆ! ಇದು ಸಮಾಜ ಸೇವೆಯೇ? ಐವತ್ತು ಮಕ್ಕಳಿಗೆ ಬುಕ್ಕು, ಪೆನ್ಸಿಲ್ ಕೊಡಲು ಎಷ್ಟು ಮಹಾ ಹಣ ಬೇಕು? ಇವರು ಸಾವಿರ ರೂಪಾಯಿ ಖರ್ಚು ಮಾಡಿ ಪುಸ್ತಕ, ಪೆನ್ಸಿಲ್ಲು ಕೊಟ್ಟು ಹತ್ತು ಪತ್ರಿಕೆಗಳಲ್ಲಿ ಅದರ ಪೋಟೋ ಹಾಕಿಸಿಕೊಂಡು ಲಕ್ಷಾಂತರ ರೂಪಾಯಿಯ ಬಿಟ್ಟಿ ಪ್ರಚಾರ ಪಡೆಯುತ್ತಾರೆ.
ಕೆಟ್ಟ ಪ್ರಚಾರವೂ ಇವರಿಗೆ ಒಳ್ಳೆಯದು!
ಇನ್ನು ಕೆಲವು ಸೋಗಲಾಡಿ ವಿಚಾರವಾದಿಗಳು ಯಾವುದಾದರೂ ವಿಚಾರದ ಬಗ್ಗೆ ಆಳವಾಗಿ ತಿಳಿದುಕೊಂಡು ಮಾತನಾಡುವುದನ್ನು ಬಿಟ್ಟು ತಮಗೆ ಏನೇನು ಗೊತ್ತೋ ಅದನ್ನೇ ಹೇಳುತ್ತಿರುತ್ತಾರೆ. ಹೇಗೇ ಆಗಲಿ, ಒಟ್ಟಿನಲ್ಲಿ ತಾನು ಫೇಮಸ್ ಆಗಬೇಕು ಅಷ್ಟೆ- ಇದಷ್ಟೇ ಅವರ ಉದ್ದೇಶ. ತಮಗೆ ಗೊತ್ತಿರುವ ಅಲ್ಪಜ್ಞಾನವನ್ನೇ ಜೋರಾಗಿ ಪ್ರದರ್ಶಿಸಿ ಬೇರೆಯವರ ಬಾಯಿ ಮುಚ್ಚಿಸುತ್ತಾರೆ. ಅವರ ವಾದಕ್ಕೆ ಆಳ-ಅಗಲ, ತಲೆ-ಬುಡ ಒಂದೂ ಇರುವುದಿಲ್ಲ. ಕೇಳುವ ಜನರು ಬಾಯಿಗೆ ಬಂದಂತೆ ಬೈದುಕೊಂಡರೂ ಪರವಾಗಿಲ್ಲ, ಇವರ ಮುಖ ಸುದ್ದಿ ಪತ್ರಿಕೆಯಲ್ಲೋ ಟಿವಿಯಲ್ಲೋ ಬಂದು ಫೇಮಸ್ ಆದರೆ ಸಾಕು. ಮತ್ತೆ ಕೆಲವರು ಹಿರಿಯ ಕವಿಗಳು ಹಾಗೂ ಮಹಾನ್ ಬರಹಗಾರರ ಹೆಸರುಗಳನ್ನು ತಮ್ಮ ಮಾತಿನ ಮಧ್ಯೆ ಹರಿಯಬಿಟ್ಟು ತಾವು ಮಹಾನ್ ತತ್ವಜ್ಞಾನಿ ಎಂಬಂತೆಯೂ, ತಾವು ಬಹಳ ಓದಿಕೊಂಡಿರುವಂತೆಯೂ ಫೋಸು ಕೊಡುತ್ತಾರೆ. ವಿವೇಕಾನಂದರ ಹೆಸರು, ಪರಮಹಂಸರ ಹೆಸರು, ಸರ್ವಜ್ಞನ ಹೆಸರು- ಹೀಗೆ ಅನೇಕ ಜ್ಞಾನಿಗಳ ಹೆಸರು ಹೇಳಿ, “ಅವರು ಹೀಗೆ ಹೇಳಿದ್ದಾರೆ… ನಾವು ಹೀಗೆ ಇರಬೇಕು’ ಅನ್ನುತ್ತಾರೆ. ಆದರೆ ಆ ಜ್ಞಾನಿಗಳು ಹೇಳಿರುವುದನ್ನು ಇವರು ಪೂರ್ಣವಾಗಿ ತಿಳಿದುಕೊಂಡಿರುವುದಿಲ್ಲ.
ಯಾವ ಗುರುವೂ ಜ್ಞಾನಿಯೂ ಕಿತ್ತಾಡಿ, ಜಗಳ ಅಡಿ, ಜಾತಿಗಾಗಿ ಹೊಡೆದಾಡಿಲ್ಲ, ಇನ್ನೊಂದು ಜಾತಿಯವರನ್ನು ತುಳಿಯಿರಿ ಅಂದಿಲ್ಲ. ಒಬ್ಬರಿಂದ ಕಿತ್ತು ಇನ್ನೊಬ್ಬರಿಗೆ ಕೊಡುವುದು ಸಮಾಜ ಸೇವೆ ಅಂತಲೂ ಹೇಳಿಲ್ಲ. ಆಳವಾದ ಜ್ಞಾನವಿಲ್ಲದೆ ವಾದ ಮಾಡು ಅಂದಿಲ್ಲ. ಬಿಟ್ಟಿ ಪ್ರಚಾರ ಪಡೆದುಕೊಂಡು ಬೇಗ ಪ್ರಖ್ಯಾತ ಅಥವಾ ಕುಖ್ಯಾತ ಆಗು ಅಂದಿಲ್ಲ. ನಿಜವಾದ-ಜ್ಞಾನಿಯನ್ನು ಅವಮಾನ ಪಡಿಸು ಅಂದಿಲ್ಲ. ಈ ಯಾವ ಕೆಟ್ಟ ಬುಗಳನ್ನೂ ನಮ್ಮ ಹಿರಿಯರಾಗಲೀ, ಗುರುಗಳಾಗಲೀ, ಕವಿಗಳಾಗಲೀ, ಜ್ಞಾನಿಗಳಾಗಲೀ, ದೇವರಾಗಲೀ ನಮ್ಮ ತಲೆಗೆ ತುಂಬಿಲ್ಲ. ಆದರೆ ಇವತ್ತು ಬುದ್ಧಿಜೀವಿಗಳು ಅಥವಾ ಪ್ರಗತಿಪರರು ಎಂದು ಹೇಳುವವರೆಲ್ಲ ಮಾತೆತ್ತಿದರೆ ಜಾತಿ ಜಾತಿ ಅನ್ನುತ್ತಾರೆ. ಇತರ ಜಾತಿಗಳನ್ನು ಬೈಯುವುದು ಹಾಗೂ ತಮ್ಮ ಜಾತಿಯನ್ನು ಹೊಗಳಿಕೊಳ್ಳದೆ ಹೋದರೆ ಇವರ ಮಾತು ಪೂರ್ಣವಾಗುವುದಿಲ್ಲ.
“ಹೇ ಗುರುಗಳು ಹೇಳಿದ್ದಾರಪ್ಪ, ಕಳಬೇಡ, ಕೊಲಬೇಡ…’ ಅಂತ ಅಷ್ಟಕ್ಕೇ ನಿಲ್ಲಿಸಿದರೆ ಸಾಕೇ? ಅದೇ ಗುರುಗಳು “ಹುಸಿಯ ನುಡಿಯಲು ಬೇಡ, ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ, ಇದಿರ ಹಳಿಯಬೇಡ’ ಅಂತಲೂ ಹೇಳಿದ್ದಾರೆ. ಇವೆಲ್ಲ ಯಾಕೆ ಇವರಿಗೆ ಅರ್ಥವಾಗುವುದಿಲ್ಲ?
ಅವರ ಹೆಸರು, ಇವರ ಉಸಿರು
ಅನೇಕರು ತಾವು ಹೇಗೆ ಬದುಕುತ್ತಿದ್ದೇವೆಯೋ ಅದಕ್ಕೆ ಹೊಂದಿಕೆಯಾಗುವ ಒಂದಷ್ಟು ಸಾಲುಗಳನ್ನು ಎಲ್ಲೆಲ್ಲಿಂದಲೋ ಸಂಗ್ರಹಿಸಿ ಬತ್ತಳಿಕೆಯೊಳಗೆ ಇಟ್ಟುಕೊಂಡಿರುತ್ತಾರೆ. ಸಂದರ್ಭ ಸಿಕ್ಕಿದಾಗಲೆಲ್ಲ ಅವುಗಳನ್ನೇ ಒಂದೊಂದಾಗಿ ಪ್ರಯೋಗಿಸುತ್ತಾರೆ. ಗುರು ಹಿರಿಯರು ಅಲ್ಪಜ್ಞಾನಿ ಮಹಾಗರ್ವಿ ಅಂದದ್ದು ಪ್ರಾಯಃ ಇಂಥವರನ್ನು ಕಂಡೇ ಆಗಿರಬೇಕು. ಕೆಲವು ಸಲ ತಮ್ಮ ತಪ್ಪು ತಮಗೆ ಗೊತ್ತಾದರೂ ಒಪ್ಪಿಕೊಳ್ಳುವುದಿಲ್ಲ. ಜನರ ಮುಂದೆ ಮರ್ಯಾದೆ ಕಳೆದುಕೊಳ್ಳಬಾರದು ಎಂಬುದಕ್ಕಾಗಿ ತಮ್ಮ ತಪ್ಪನ್ನೇ ಸರಿಯೆಂದು ವಾದಿಸಿ ಹಿರಿಯ ಕವಿಗಳ, ಗುರುಗಳ ಹೆಸರು ಹೇಳಿ ತಮ್ಮ ಜತೆಗೆ ಅವರೆಲ್ಲರನ್ನೂ ಅವಮಾನಿಸುತ್ತಾರೆ. ಚಿತ್ರರಂಗದಲ್ಲಿ ಕೂಡ ಕೆಲವರು ಫೇಮಸ್ ಆಗಲು ಏನೇನೋ ಗಿಮಿಕ್ ಮಾಡುತ್ತಾರೆ. ಜನರಿಗೆ ಅಗತ್ಯವೇ ಇರದ ತಮ್ಮ ವೈಯಕ್ತಿಕ ವಿಚಾರಗಳನ್ನು ಟಿವಿ ಚಾನಲ್‌ಗಳ ಮುಂದೆ ತಂದು ಸುದ್ದಿಯಾಗುತ್ತಾರೆ, ಹೇಗಾದರೂ ಪ್ರಚಾರ ಗಿಟ್ಟಿಸಬೇಕು ಎಂದು ಹಪಹಪಿಸುತ್ತಾರೆ. ಇಂಥವರಿಗೆ ಕೆಟ್ಟ ಪಬ್ಲಿಸಿಟಿಯೂ ಒಳ್ಳೆಯದೇ. ಏನಕೇನ ಪ್ರಕಾರೇಣ ಪ್ರಸಿದ್ಧ ಪುರುಷೋಭವ ಎಂಬ ವ್ಯಂಗ್ಯೋಕ್ತಿಯೇ ಇವರಿಗೆ ಪರಮ ಪಾವನ ವಾಕ್ಯ.
ಆದರೆ ಜನರು ಬುದ್ಧಿವಂತರು. ಅವರಿಗೆ ಎಲ್ಲವೂ ಅರ್ಥವಾಗುತ್ತದೆ. ಇಂತಹ ಗಿಮಿಕ್‌ಗಳೆಲ್ಲ ಈಗ ನಡೆಯುವುದಿಲ್ಲ. ಯಾವುದೇ ರಂಗದಲ್ಲಿ ಇಂದು ಕಷ್ಟಪಟ್ಟರಷ್ಟೇ ಪ್ರತಿಫಲ ಸಿಗುತ್ತದೆ. ಗುರುತಿಸಬೇಕಾದ ಪ್ರತಿಭೆಯನ್ನು ಜನರು ತಾವಾಗಿಯೇ ಗುರುತಿಸುತ್ತಾರೆ. ಗಿಮಿಕ್ ಮಾಡುವವರನ್ನು ಟಿವಿಯಲ್ಲಿ ನೋಡಿ ಎಂಜಾಯ್ ಮಾಡಿ ಅಷ್ಟೇ ವೇಗವಾಗಿ ಮರೆತುಬಿಡುತ್ತಾರೆ.
ಪ್ರಚಾರಕ್ಕೆಂದು ಏನೇನೋ ಎಡವಟ್ಟು ಮಾಡಿಕೊಂಡು ವಾರಗಟ್ಟಲೆ ಟಿವಿ ಸ್ಟುಡಿಯೋಗಳಲ್ಲಿ ಕುಳಿತ ಎಷ್ಟೋ ಅರೆಬರೆ ನಟಿಯರು ಚಿತ್ರರಂಗದಲ್ಲಿ ಮೇಲೆ ಬಂದ ಉದಾಹರಣೆಯಿದೆ? ಹುಡುಕಿದರೆ ಒಂದೂ ಸಿಗುವುದಿಲ್ಲ.
ಕೆಲವರು ಬೇಗ ಫೇಮಸ್ ಆಗಲು ಹೋಗಿ ಕೆಟ್ಟ ಹೆಸರು ತೆಗೆದುಕೊಳ್ಳುತ್ತಾರೆ. ಕೆಟ್ಟವರಾದರೂ ಪರವಾಗಿಲ್ಲ, ಜನತೆಗೆ ತನ್ನ ಮುಖ ಪರಿಚಯವಾಗಬೇಕು ಅಷ್ಟೇ ಅಂತ ಅನೇಕರು ಆಸೆ ಪಡುತ್ತಾರೆ. ಚಿತ್ರರಂಗ ಹಾಗೂ ರಾಜಕೀಯದಲ್ಲಿ ಇಂತಹ ಪ್ರಯತ್ನಗಳು ಬಹಳಷ್ಟು ನಡೆಯುತ್ತಿರುತ್ತವೆ. ಆದರೆ ಸೂಕ್ಷ್ಮವಾಗಿ ಗಮನಿಸಿ ನೋಡಿ, ಇವರೆಡೂ ಕ್ಷೇತ್ರಗಳಲ್ಲಿ ಇಂದು ಉನ್ನತ ಸ್ಥಾನ ಗಳಿಸಿರುವವರೆಲ್ಲ ಇಂತಹ ಯಾವುದೇ ಅಗ್ಗದ ಪ್ರಚಾರದ ಗಿಮಿಕ್ ಮಾಡಿ ಮೇಲೆ ಬಂದವರಲ್ಲ. ನಿಜವಾಗಿ ಕಷ್ಟಪಟ್ಟವರು ಮಾತ್ರ ಮೇಲೆ ಬಂದಿದ್ದಾರೆ.
ಗಿಮಿಕ್, ಗಾಳಿಸುದ್ದಿ, ತೋರಿಕೆಯ ಹೆಗ್ಗಳಿಕೆಗಳ ವ್ಯಾಲಿಡಿಟಿ ತುಂಬಾ ಕಡಿಮೆ. ಸಾಧನೆಗೆ ಶಾರ್ಟ್ ಕಟ್ ಎಂಬುದಿಲ್ಲ. ಇದೆ ಅಂತ ಯಾರಾದರೂ ಅಂದುಕೊಂಡಿದ್ದರೆ ಅದು ಮೂರ್ಖತನವಷ್ಟೆ. ಪ್ರತಿಭೆಯೆಂಬುದು ಪರಿಮಳದ ಹಾಗೆ, ಅದು ಎಲ್ಲಿ ಬಚ್ಚಿಟ್ಟರೂ ಹೊರಗೆ ಬರುತ್ತದೆ. ಗಿಮಿಕ್ ಹಾಗೂ ಅಗ್ಗದ ಪ್ರಚಾರಗಳು ಕೊಳೆತ ಹೂವಿನ ವಾಸನೆಯಿದ್ದ ಹಾಗೆ. ಒಂದೆರಡು ದಿನಗಳಲ್ಲಿ ಅದೂ ಇಲ್ಲದಂತೆ ಒಣಗಿಹೋಗುತ್ತವೆ. ಸಾಧನೆಗೆ ಪರಿಶ್ರಮ ಹಾಗೂ ಪ್ರತಿಭೆಗಳು ಮಾತ್ರ ಮಾನದಂಡ ಎಂಬುದು ಅನಾದಿ ಕಾಲದ ಸತ್ಯ. ಕ್ಲೀಷೆಯಾದರೂ ಅದನ್ನೇ ಪುನಃ ಪುನಃ ನಾವು ಮನಸ್ಸಿಗೆ ತಂದುಕೊಂಡು ಮುನ್ನಡೆಯಬೇಕು.
ರೂಪಾ ಅಯ್ಯರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
All-party meet: ನಾಳೆಯಿಂದ ಚಳಿಗಾಲದ ಅಧಿವೇಶ: ಸುಗಮಗೊಳಿಸಲು ಬಯಸಿದ ಸರಕಾರ
Uttar Pradesh: ಝಾನ್ಸಿ ಆಸ್ಪತ್ರೆ ಬೆಂಕಿ ಅವಘಡ: ಮತ್ತೆ 2 ಹಸುಗೂಸು ಸಾ*ವು
IPL Auction 2025: ಸೇಲ್ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..
Jharkhand: ಮತ್ತೆ ಮುಖ್ಯಮಂತ್ರಿಯಾಗಿ ಜೆಎಂಎಂ ನಾಯಕ ಹೇಮಂತ್ ಸೊರೇನ್ ನ.28ಕ್ಕೆ ಪದಗ್ರಹಣ
Tourist place: ಲೇಪಾಕ್ಷಿ ಪುರಾಣದ ಕಥೆಯ ಕೈಗನ್ನಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.