ಹಣ್ಣಿನ ರುಚಿ ತಿಳಿಯದ ತೋಟದ ಮಾಲಿ ಮತ್ತು ದೆವ್ವದ ಪರಮಾಸ್ತ್ರ
Team Udayavani, Oct 25, 2018, 1:56 PM IST
ಒಮ್ಮೆ ನಮ್ಮ ಕೆಲಸದಲ್ಲಿ ಪ್ರಾವೀಣ್ಯ ಸಾಧಿಸಿದ ಮೇಲೆ ಅದಕ್ಕೆ ಸಂಬಂಧಿಸಿದ ಸುತ್ತಮುತ್ತಲಿನ ಸಂಗತಿಗಳನ್ನೂ ತಿಳಿದುಕೊಳ್ಳಬೇಕು. ಚೌಕಟ್ಟಿನಾಚೆಗಿನದನ್ನೆಲ್ಲ ಕಣ್ಣರಳಿಸಿ ನೋಡಬೇಕು. ಹೊಸತೇನನ್ನಾದರೂ ಮಾಡದಿದ್ದರೆ ಮನುಷ್ಯ ಸತ್ತಂತೆ. ನನ್ನ ಕೆಲಸ ಇಷ್ಟೇ ಎಂಬ ಗೆರೆ ಎಳೆದುಕೊಂಡು ಅದರಾಚಿ ಏನಿದೆಯೆಂಬುದನ್ನೂ ನೋಡದಿದ್ದರೆ ಎಂಥ ಅದ್ಭುತ ಪ್ರತಿಭಾವಂತನೂ ಸಾಧಕನಾಗುವುದಿಲ್ಲ.
ಒಂದು ಸೂಫಿ ಕತೆ: ಇಡೀ ದಿನವನ್ನು ರಾಜಕಾರ್ಯಗಳಲ್ಲಿ ಕಳೆದ ಮಹಾರಾಜನ ತಲೆ ಸಿಡಿಯುತ್ತಿತ್ತು. ಅಹವಾಲು ಹೇಳಿಕೊಳ್ಳಲು ಬಂದವರಲ್ಲಿ ಒಬ್ಬೊಬ್ಬರದೂ ಒಂದೊಂದು ಸಮಸ್ಯೆ. ಅದನ್ನೆಲ್ಲ ಕೇಳಿ ಕೇಳಿ ಸಾಕಾಗಿತ್ತು. ಸ್ವಲ್ಪ ಹೊತ್ತು ಏಕಾಂತದಲ್ಲಿರೋಣ ಎಂದು ಅರಮನೆಯ ಉದ್ಯಾನದಲ್ಲಿ ವಿಹಾರಕ್ಕೆ ಹೊರಟ. ನಡೆಯುತ್ತ ನಡೆಯುತ್ತ ಹಣ್ಣಿನ ತೋಟಕ್ಕೆ ಬಂದ. ನೂರೆಂಟು ವಿಧದ ಹಣ್ಣಿನ ಮರಗಳು ಫಲಭರಿತವಾಗಿ ನಿಂತಿದ್ದವು. ನೋಡಿ ಮನಸ್ಸಿಗೆ ಹಾಯೆನಿಸಿತು. ಮಾಲಿಯನ್ನು ಕರೆದ.
“ತಿನ್ನುವುದಕ್ಕೆ ಮಾವಿನ ಹಣ್ಣು ತೆಗೆದುಕೊಂಡು ಬಾ.’
ಮಾಲಿ ಹೋಗಿ ಐದು ಮಾವಿನಹಣ್ಣು ಕಿತ್ತುಕೊಂಡು ಬಂದ. ಒಂದಕ್ಕಿಂತ ಒಂದು ಹುಳಿಯಾಗಿದ್ದವು. ರಾಜನಿಗೆ ಸಿಟ್ಟುಬಂತು.
“ಎಷ್ಟು ವರ್ಷ ನಿನಗೆ?’
“ನಲವತ್ತೈದು ವರ್ಷ ಮಹಾಪ್ರಭು.’
“ಇಲ್ಲಿ ಎಷ್ಟು ವರ್ಷದಿಂದ ಕೆಲಸ ಮಾಡುತ್ತಿದ್ದೀಯಾ?’
“ಇಪ್ಪತ್ತು ವರ್ಷದಿಂದ’
“ಇಪ್ಪತ್ತು ವರ್ಷದಿಂದ ಕೆಲಸ ಮಾಡುತ್ತಿದ್ದರೂ ಯಾವ ಹಣ್ಣು ಹುಳಿ, ಯಾವುದು ಸಿಹಿ ಅಂತ ನಿನಗೆ ಗೊತ್ತಿಲ್ಲ. ಮಾಲಿಯಾಗಲು ಅಯೋಗ್ಯ ನೀನು.”ಮಹಾರಾಜರು ಕ್ಷಮಿಸಬೇಕು, ನನ್ನನ್ನು ನೀವು ನೇಮಿಸಿಕೊಂಡಿದ್ದು ತೋಟದ ಉಸ್ತುವಾಗಿ ನೊಡಿಕೊಳ್ಳುವುದಕ್ಕೆ. ಗಿಡ ನೆಡುವುದು, ಬೆಳೆಸುವುದು, ಕಾಪಾಡುವುದು ನನ್ನ ಕೆಲಸ. ಅವುಗಳಲ್ಲಿ ಹೂವು ಹಣ್ಣು ಬಿಡುವಂತೆ ನೋಡಿಕೊಳ್ಳುವುದೂ ನನ್ನ ಜವಾಬ್ದಾರಿ. ಅವುಗಳನ್ನು ಅನುಭವಿಸುವುದು ಅಥವಾ ಹಣ್ಣಿನ ರುಚಿ ನೋಡುವುದಲ್ಲ.’
ಏಕಕಾಲಕ್ಕೆ ಬದುಕಿನ ವಿರೋಧಾಭಾಸಗಳನ್ನು ಸೊಗಸಾಗಿ ಹೇಳುವ ಕತೆಯಿದು. ನಮ್ಮ ಜವಾಬ್ದಾರಿಯೇನು, ಮಿತಿಯೇನು, ಎಲ್ಲಿಯವರೆಗೆ ಹೋಗಬೇಕು, ಎಲ್ಲಿಯವರೆಗೆ ಹೋಗಬಾರದು ಮುಂತಾದ ಗೊಂದಲಗಳು ಪ್ರತಿಯೊಬ್ಬರಿಗೂ ಆಗಾಗ ಹುಟ್ಟಿಕೊಳ್ಳುತ್ತವೆ. ಯೋಚನೆ ಮಾಡುವವರು ಮನಸ್ಸಿನಲ್ಲೇ ಇವುಗಳ ಬಗ್ಗೆ ನಿಷ್ಕರ್ಷೆ ಮಾಡುತ್ತಾರೆ. ಇನ್ನುಳಿದವರು ಮೈಕೊಡವಿ ಮುಂದೆ ಹೋಗಿ ಎಂದಿನ ಜೀವನ ವ್ಯಾಪಾರದಲ್ಲಿ ಮುಳುಗಿಕೊಳ್ಳುತ್ತಾರೆ.
ತೋಟದ ಮಾಲಿ ತನ್ನ ಕೆಲಸದಲ್ಲಿ ಫೋಕಸ್ ಆಗಿ, ತುಂಬಾ ನಿಷ್ಠನಾಗಿದ್ದ. ಅಷ್ಟೇ ಪ್ರಾಮಾಣಿಕ ಕೂಡ. ಆ ಕಾರಣಕ್ಕೆ ರಾಜ ಅವನನ್ನು ಮೆಚ್ಚಿಕೊಳ್ಳಲೇಬೇಕು. ಯಾವ ಮರದ ಹಣ್ಣು ಸಿಹಿ, ಯಾವುದರದು ಹುಳಿ ಎಂಬುದನ್ನು ತಿಳಿದುಕೊಳ್ಳಲೂ ಅವುಗಳ ರುಚಿ ನೋಡದಷ್ಟು ನಿಸ್ಪೃಹ ಅವನು. ತನ್ನ ಜವಾಬ್ದಾರಿಯೇನೋ ಅಷ್ಟೇ ಅವನಿಗೆ ಮುಖ್ಯ, ಇನ್ನುಳಿದಿದ್ದು ಗೌಣ.
ಹಾಗಾದರೆ ಅವನ ಕ್ರಿಯಾಶೀಲತೆ ಎಲ್ಲಿ ಸತ್ತುಹೋಯಿತು? ಇಪತ್ತು ವರ್ಷಗಳಿಂದ ಒಂದು ಕೆಲಸ ಮಾಡುತ್ತಿರುವವನು.ಆ ಕೆಲಸದ ಎಲ್ಲ ಒಳ ಹೊರಗುಗಳನ್ನೂ, ಅದಕ್ಕೆ ಸಂಬಂಧಿಸಿದ ಎಲ್ಲ ಸಂಗತಿಗಳನ್ನೂ ತಿಳಿದುಕೊಂಡಿರಬೇಕಲ್ಲವೇ? ತೋಟ ನೋಡಿಕೊಳ್ಳಲು ಅವನನ್ನು ನೇಮಿಸಿಕೊಂಡಿರುವ ರಾಜ, ಹಣ್ಣು ತಿನ್ನಬೇಕೆಂಬ ಬಯಕೆಯಾದರೆ ಇನ್ನೊಬ್ಬ ರುಚಿ ತಜ್ಞನನ್ನು ಜೊತೆಗೆ ಕರೆದುಕೊಂಡು ಬರಬೇಕೇ?
ಸೂಫಿ ಹಾಗೂ ಜೆನ್ ಕತೆಗಳ ಮಜಕೂರು ಇದು. ಅವು ಬಹಳ ಸರಳವಾಗಿ, ಅಷ್ಟೇ ನಿಗೂಢವಾಗಿ ಬಿಚ್ಚಿ ಬಚ್ಚಿಟ್ಟುಕೊಳ್ಳುತ್ತವೆ.
ಬದುಕಿನಲ್ಲಿ ನಮಗೆ ಒಂದು ಹಂತದವರೆಗೆ ತೋಟದ ಮಾಲಿಯ ನಿಸ್ಪೃಹ ಶ್ರದ್ಧೆ ಬೇಕು. ಮಾಡಬೇಕಾದ ಕೆಲಸದಲ್ಲಿ ಸಂಪೂರ್ಣ ಮುಳುಗಿ, ಬೇರೆ ಯಾವುದರ ಬಗ್ಗೆಯೂ ತಲೆ ಕೆಡಿಸಿಕೊಳ್ಳದೆ, ನಮ್ಮ ಕ್ಷೇತ್ರದಲ್ಲಿ ಅಧಿಕಾರಯುತ ಜ್ಞಾನ ಸಂಪಾದಿಸಿಕೊಳ್ಳಬೇಕು. ಆಧಾರ ಗಟ್ಟಿಯಾಗಿಲ್ಲದಿದ್ದರೆ ಅದರ ಮೇಲೆ ಕಟ್ಟುವ ಎಲ್ಲವೂ ಶಿಥಿಲವಾಗುತ್ತವೆ.
ಆದರೆ, ಒಮ್ಮೆ ನಮ್ಮ ಕೆಲಸದಲ್ಲಿ ಪ್ರಾವೀಣ್ಯ ಸಾಧಿಸಿದ ಮೇಲೆ ಅದಕ್ಕೆ ಸಂಬಂಧಿಸಿದ ಸುತ್ತಮುತ್ತಲಿನ ಸಂಗತಿಗಳನ್ನೂ ತಿಳಿದುಕೊಳ್ಳುವುದು. ಚೌಕಟ್ಟಿನಾಚೆಗಿನದನ್ನು ಕಣ್ಣರಳಿಸಿ ನೋಡುವುದು, ಹೊಸ ಸಾಧ್ಯತೆಗಳನ್ನು ಹುಡುಕುವುದು ನಮ್ಮ ಕ್ರಿಯೇಟಿವಿಟಿ ಅಥವಾ ಸೃಜನಶೀಲತೆಗೆ ನಾವು ಎರೆಯುವ ಆಹಾರ. ಹೊಸತೇನನ್ನಾದರೂ ಮಾಡದಿದ್ದರೆ ಮನುಷ್ಯ ಸತ್ತಂತೆ. ನನ್ನ ಕೆಲಸ ಇಷ್ಟೇ ಎಂಬ ಗೆರೆ ಎಳೆದುಕೊಂಡು ಅದರಾಚಿ ಏನಿದೆಯೆಂಬುದನ್ನೂ ನೋಡದಿದ್ದರೆ ಎಂಥ ಅದ್ಭುತ ಪ್ರತಿಭಾವಂತನೂ ಸಾಧಕನಾಗುವುದಿಲ್ಲ.
ಗ್ಯಾರೇಜಿಗೆ ಹೋಗುತ್ತೇವೆ. ಬೈಕನ್ನೋ, ಕಾರನ್ನೋ ಮೆಕ್ಯಾನಿಕ್ ಬಳಿ ಬಿಡುತ್ತೇವೆ. ಕೆಲ ಮೆಕ್ಯಾನಿಕ್‌ಗಳಿಗೆ ಅದನ್ನು ಸ್ಟಾರ್ಟ್ ಮಾಡಿ ನೋಡಿದಾಕ್ಷಣ ಇಂಥಾದ್ದೇ ಸಮಸ್ಯೆಯೆಂದು ತಿಳಿಯುತ್ತದೆ. ಇನ್ನು ಕೆಲವರಿಗೆ ಓಡಿಸಿ ನೋಡಿ, ಬಿಡಿಭಾಗ ಬಿಚ್ಚಿದರೂ ತಿಳಿಯುವುದಿಲ್ಲ. ಯಾವುದೋ ಭಾಗವನ್ನು ಬದಲಿಸಿ ಹೊಸತು ಹಾಕಿ ಕಳಿಸುತ್ತಾರೆ. ಸಮಸ್ಯೆ ಹಾಗೇ ಉಳಿದಿರುತ್ತದೆ. ನಮ್ಮ ನಿರೀಕ್ಷೆ ಹದಿನೈದು ವರ್ಷದಿಂದ ಅದೇ ಕೆಲಸ ಮಾಡುತ್ತಿರುವವನಿಗೆ ಅದರ ಬಗೆಗಿನ ಸೂûಾ¾ತಿಸೂಕ್ಷ್ಮ ಸಂಗತಿಯೂ ತಿಳಿದಿರಬೇಕು ಎಂದಿರುತ್ತದೆ. ನಾವೇ ಆ ಕೆಲಸ ಕಲಿತಿದ್ದರೆ ಅವನಿಗಿಂತ ಎಷ್ಟೋ ಚೆನ್ನಾಗಿ ಮಾಡುತ್ತಿದ್ದೆವು ಎಂದೂ ನಮಗನ್ನಿಸುತ್ತದೆ. ಆದರೆ ಅವನ ಸಾಮರ್ಥ್ಯ ಅಷ್ಟೆ ಇದು ಇಪ್ಪತ್ತು ವರ್ಷಗಳಿಂದ ಹಣ್ಣಿನ ಒಡನಾಟದಲ್ಲಿದ್ದರೂ ಯಾವುದು ಸಿಹಿ, ಯಾವುದು ಹುಳಿ ಎಂಬುದು ತಿಳಿಯದ ಮುಗ್ಧ ಅಜ್ಞಾನದಷ್ಟೇ ಅಪಾಯಕಾರಿ ಮತ್ತು ಅದು ಇವತ್ತಿನ ಸ್ಪರ್ಧಾತ್ಮಕ ಬದುಕಿನಲ್ಲಿ ಅಕ್ಷಮ್ಯ. ಏಕಾಗ್ರತೆ ಬೇಕು. ಆದರೆ ಬೆಟ್ಟದ ತುದಿಯಲ್ಲಿರುವ ಚಿನ್ನವನ್ನು ಪಡೆದೇ ತೀರುವ, ಅದರ ಅಕ್ಕಪಕ್ಕ ಹರಡಿಕೊಂಡು ಬಿದ್ದಿರುವ ವಜ್ರದ ಹರಗಳುಗಳನ್ನು ಕಣ್ಣೆತ್ತಿಯೂ ನೋಡದೆ ಚಿನ್ನವನ್ನು ಮಾತ್ರ ಎತ್ತಿಕೊಂಡು ಬರುವ ಏಕಾಗ್ರತೆ ಬೇಡ. ಶ್ರದ್ಧೆಗೆ ಒಂದಷ್ಟು ಉತ್ಸಾಹವನ್ನೂ ಇನ್ನಷ್ಟು ಹೊಸತನವನ್ನೂ ಸೇರಿಸಿಕೊಂಡರೆ ಬದುಕೆಷ್ಟು ಸುಂದರ. ಹೀಗೆ ಮಾಡು ಎಂದು ಹೇಳಿದ್ದನ್ನು ಮಾಡಲು ಯಾವ ಮಹಾನ್ ಬುದ್ಧಿವಂತಿಕೆಯೂ ಬೇಡ. ಅಷ್ಟೇ ಮಾಡಿಕೊಂಡಿರುವವರು ನಿವೃತ್ತಿಯವರೆಗೂ ಅಲ್ಲೇ ಇರುತ್ತಾರೆ. ಮೂವತ್ತೈದು ವರ್ಷಗಳ ಅವಿರತ ಸೇವೆಗಾಗಿ ಅವರಿಗೆ ಕೊನೆಯ ದಿನ ಮಾಲೆ ಹಾಕಿ, ಕೈಗೊಂದು ವಾಚು ಕೊಟ್ಟು ಮನೆಗೆ ಕಳುಹಿಸಲಾಗುತ್ತದೆ!
ಇನ್ನೊಂದು ಕತೆ: ದೆವ್ವವೊಂದು ತಾನು ಬಳಸುವ ಎಲ್ಲಾ ಅಸ್ತ್ರಗಳನ್ನೂ ಮಾರಾಟ ಮಾಡುತ್ತೇನೆಂದು ಜಾಹೀರಾತು ಕೊಟ್ಟಿತು. ಮಾರಾಟದ ದಿನ ಅದು ಬಳಸುವ ಎಲ್ಲಾ ವಸ್ತುಗಳನ್ನು ಸಾರ್ವಜನಿಕ ಸ್ಥಳದಲ್ಲಿ ಇಡಲಾಗಿತ್ತು. ಒಂದೊಂದರ ಮೇಲೂ ಅದರ ಬೆಲೆಯನ್ನು ಚೀಟಿಯಲ್ಲಿ ಬರೆದು ಅಚಿಟಿಸಲಾಗಿತ್ತು.
ಅವು ಒಂದಕ್ಕಿಂತ ಒಂದು ಕೆಟ್ಟ ಅಸ್ತ್ರಗಳು. ದ್ವೇಷ, ಅಸೂಯೆ, ಮೋಸ, ಸುಳ್ಳು, ಅಹಂಕಾರ… ಹೀಗೆ ಹತ್ತು ಹಲವು ಅವುಗಳಿಂದ ಸ್ವಲ್ಪ ದೂರದಲ್ಲಿ ಒಂದು ನಿರಪಾಯಕಾರಿಯಾಗಿ ಕಾಣುವ ಅಸ್ತ್ರ ಇಡಲಾಗಿತ್ತು. ಅದು ವಿಪರೀತ ಬಳಕೆಯಾಗಿ ಸವೆದುಹೋಗಿತ್ತು. ಆದರೆ ಅದರ ಬೆಲೆ ಮಾತ್ರ ಬೇರೆಲ್ಲ ಅಸ್ತ್ರಗಳಿಗಿಂತ ದುಬಾರಿಯಾಗಿತ್ತು.
“ಈ ಅಸ್ತ್ರದ ಹೆಸರೇನು?’ ಒಬ್ಬ ಗಿರಾಕಿ ಕೇಳಿದ.
“ನಿರುತ್ಸಾಹ’ ದೆವ್ವ ಉತ್ತರಿಸಿತು.
“ಅದಕ್ಕೇಕೆ ಇಷ್ಟು ದುಬಾರಿ ಬಲೆ?’
“ಏಕೆಂದರೆ, ಬೇರೆಲ್ಲ ಅಸ್ತ್ರಗಳಿಂತ ಇದು ನನಗೆ ಅತ್ಯಂತ ಪ್ರಿಯವಾದದ್ದು. ನಾನು ಎಲ್ಲಕ್ಕಿಂತ ಹೆಚ್ಚು ಬಳಸುವ ಅಸ್ತ್ರವೂ ಇದೇ. ಬೇರಾವುದೇ ಅಸ್ತ್ರದಿಂದ ನಾನು ಜನರನ್ನು ಸಮೀಪಿಸಲು ಸಾಧ್ಯವಾಗದಿದ್ದಾಗ ಇದನ್ನು ಬಳಸಿ ಸುಲಭವಾಗಿ ಅವರೊಳಗೆ ಪ್ರವೇಶಿಸುತ್ತೇನೆ. ಒಮ್ಮೆ ಇದರೊಂದಿಗೆ ಅವರೊಳಗೆ ಹೋದೆ ಎಂದಾದರೆ ನನಗೇನು ಮಾಡಬೇಕು ಅನ್ನಿಸುತ್ತದೆಯೋ ಅದನ್ನು ಮಾಡುತ್ತೇನೆ. ಇದು ಇಷ್ಟು ಸವಕಲಾಗಿರುವುದು ಏಕೆಂದರೆ ನಾನು ಬಹುತೇಕ ಎಲ್ಲರ ಮೇಲೂ ಇದನ್ನು ಬಳಸಿದ್ದೇನೆ. ಆದರೆ ಇದು ನನ್ನ ಅಸ್ತ್ರವೆಂದು ಬಹಳ ಕಡಿಮೆ ಜನರಿಗೆ ಗೊತ್ತಿದೆ.’
ರೂಪಾ ಅಯ್ಯರ್
[email protected]
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.